ಚಿತ್ರ ಬರೆಸಿದ ಕವಿತೆ

ಓದುಗರಿಗೆಲ್ಲ ಆತ್ಮೀಯ ನಮಸ್ಕಾರ,

ಕೆಲ ವರ್ಷಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವುದು ಬಹಳಷ್ಟು ಜನರ ಪ್ರಮುಖವಾದ ಹವ್ಯಾಸವಾಗಿ ಬದಲಾಗಿದೆ. ಫೋಟೋ ವಿಡಿಯೋ ಹಾಕುವ ಕಾಯಕವೇ ಹಣಗಳಿಸುವ ಉತ್ತಮ ವೇದಿಕೆಯಾಗಿಯೂ ಮಾರ್ಪಟ್ಟಿದೆ. ಒಂದಿಷ್ಟು ಜನ ತಮ್ಮ ವೈಯಕ್ತಿಕ ಜೀವನವನ್ನು ಚಿತ್ರಗಳ ಮೂಲಕ ಜಗತ್ತಿನ ಮುಂದೆ ಅನಾವರಣ ಗೊಳಿಸಿದರೆ, ಮತ್ತೊಂದಷ್ಟು ಜನ ಹೂವು, ಹಣ್ಣು, ನೀರು, ಆಕಾಶ, ಕೀಟ, ಹಕ್ಕಿ ಅಂತೆಲ್ಲ ನಮ್ಮ ಸುತ್ತಲಿನ ಸುಂದರ ಜಗತ್ತನ್ನು ಇನ್ನೂ ಸುಂದರವಾಗಿ ತಮ್ಮ ಚಿತ್ರಗಳ ಮೂಲಕ ಚಿತ್ರಿಸಿ ನಮ್ಮ ಮುಂದಿಟ್ಟು ರಂಜಿಸುತ್ತಾರೆ. ಈ ಚಿತ್ರಗಳು ಪರಿಚಯವೇ ಇಲ್ಲದ ಜಗತ್ತಿನ ಅದ್ಯಾವುದೋ ಮೂಲೆಯಲ್ಲಿದ್ದುಕೊಂಡು ಮತ್ತೊಬ್ಬ ಸಮಾನಸಕ್ತನ ಅದ್ಯಾವುದೋ ಭಾವಕೋಶದ ಪದರನ್ನು ಮೆತ್ತಗೆ ತಟ್ಟಿ, ಕವಿತೆ ಕವನ ಹುಟ್ಟಿಸುತ್ತವೆ.

ನಾನು ಆಗೀಗ, ನನ್ನ ಕ್ಯಾಮೆರಾ ಮತ್ತು ಫೋನ್ನಲ್ಲಿ ತೆಗೆದ ಚಿತ್ರಗಳನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾ ಇರುತ್ತೇನೆ. ಅಲ್ಲಿರುವ ಕೆಲ ಕವಿ ಹೃದಯಗಳಿಗೆ ನಾನು ಹಂಚಿಕೊಂಡ ಚಿತ್ರಗಳು ಇಷ್ಟವಾಗಿ ಅವರು ಮನಸಿಗೆ ಬಂದ ಭಾವವನ್ನು ಬರೆದು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.
ಇತ್ತೀಚಿಗೆ ಫೋಟೋಗಳನ್ನು ಕ್ಲಿಕ್ ಮಾಡುವಾಗಲೇ, ಕೆಲವರು ನೆನಪಾಗಿ ಬಿಡುತ್ತಾರೆ. ಈ ಚಿತ್ರ ಇವರಿಗೆ ಇಷ್ಟ ಆಗಬಹುದು/ಆಗುತ್ತದೆ ಎಂದು ಮನಸ್ಸು ಹೇಳುತ್ತದೆ.

ನಾನು ಕ್ಲಿಕ್ಕಿಸಿದ ಭಾವಚಿತ್ರವನ್ನು ಸ್ಫೂರ್ತಿಯಾಗಿ ಕವಿತೆಯನ್ನು
ಬರೆದು ಕಳಿಸುವ ಇಬ್ಬರು ಕವಿಗಳನ್ನು ನಿಮ್ಮೆಲ್ಲರಿಗೂ ಪರಿಚಯಿಸಿ, ಅವರ ಕವಿತ
ಚಿತ್ರಗಳೊಂದಿಗೆ, ಅವರ ಕವಿತೆ ಹಂಚಿಕೊಳ್ಳುತ್ತಿರುವೆ. —ಅಮಿತಾ ರವಿಕಿರಣ್ ( ವಾರದ ಸಂಪಾದಕಿ)


ಮೇದಿನಿ ಕೆಸವಿನಮನೆ


ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಕೆಸವಿನಮನೆಯವರಾಗಿದ್ದು ಪ್ರಸ್ತುತ ಆಯನೂರಿನಲ್ಲಿ ವಾಸವಾಗಿದ್ದಾರೆ. ಸಮೀಪದ ಸರ್ಕಾರಿ ಶಾಲೆ ಕಲ್ಕುರ್ಚಿಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಈಗ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮಂಗಳೂರು ವಿವಿಯಲ್ಲಿ ಬಿ.ಎಡ್. ನೆಟ್ ಹಾಗೂ ಸ್ಲೆಟ್ ಪಾಸಾಗಿದ್ದು ಪ್ರಸ್ತುತ ಕುವೆಂಪು ವಿವಿಯಲ್ಲಿ ಪಿ ಎಚ್ಡಿ ಮಾಡುತ್ತಿದ್ದಾರೆ.

ಬರೆವಣಿಗೆ ಇವರ ಹವ್ಯಾಸ. ಶೈಕ್ಷಣಿಕ ಲೇಖನಗಳು, ಲಲಿತ ಪ್ರಬಂಧಗಳು, ಕವಿತೆ, ಕಥೆಗಳು - ಸುಧಾ, ವಿಕ್ರಮ, ತುಷಾರ, ಉತ್ಥಾನ, ಹೊಸದಿಗಂತ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಕ್ರಾಂತಿದೀಪ, ಮಲೆನಾಡು ಮಿತ್ರ, ಸಂಹಿತ, ಶಾಲ್ನುಡಿ ಇತ್ಯಾದಿ ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಷಟ್ಪದಿ, ಕಂದಪದ್ಯ ಇತ್ಯಾದಿ ಛಂದೋಬದ್ಧ ಕವಿತೆಗಳ ರಚನೆಯನ್ನು ಮಾಡುತ್ತಿದ್ದು, ಇವರ "ಅಸ್ತಿತ್ವ" ಕವಿತೆಗೆ ಚೆನ್ನವೀರ ಕಣವಿ ಕಾವ್ಯ ಪುರಸ್ಕಾರ ದೊರೆತಿದೆ. ಪ್ರಜಾವಾಣಿ -ವೀರಲೋಕ ಸಹಯೋಗದ ಸಂಕ್ರಾಂತಿ ಕವನ ಸ್ಪರ್ಧೆಯ ತೀರ್ಪುಗಾರರ ಮೆಚ್ಚಿನ 50 ಕವಿತೆಗಳ ಸಂಕಲನದಲ್ಲಿ ಇವರ "ಸೇತುವೆಯಾ, ಗೋಡೆಯಾ? " ಕವಿತೆಯೂ ಇದೆ. ವೃತ್ತಿ ಬದುಕಿನ ಅನುಭವ ಕಥನವಾದ “ಮಿಸ್ಸಿನ‌ಡೈರಿ” ಇವರ ಮೊದಲ ಕೃತಿಯಾಗಿದ್ದು ಬಿಡುಗಡೆಯಾದ ಹತ್ತು ದಿನಗಳಲ್ಲಿ ಎರಡನೇ ಮುದ್ರಣ ಕಂಡಿದ್ದು ಇದೀಗ ಮೂರು‌ ಮುದ್ರಣವಾಗಿದೆ. “ಮಕ್ಕಳಿಗಾಗಿ ಶ್ರೀ ಶ್ರೀಧರ ಸ್ವಾಮಿಗಳ ಕಥೆಗಳು” ಕೃತಿ - ಐದು ಮುದ್ರಣವಾಗಿದೆ.
ಮಾತು

ಎಲೆಗೂ ಹೂವಿಗೂ ಏನೋ‌ ಮಾತು

ಶಬ್ದವೇ ಇಲ್ಲದ ಗಾಳಿಯ ಮಾತು

ಅಲುಗುವ ಎಲೆಗೂ ಗಂಧದ ಹೂವಿಗೂ

ದಿನವೇ ಕಳೆದರೂ ಮುಗಿಯದ ಮಾತು

ಮೆತ್ತಗೆ ಅರಳುವ ದಳಗಳ ಸ್ಪರ್ಶಕೆ

ಕಾದಿಹ ಗಾಳಿಯ ಬೆಚ್ಚನೆ ಮಾತು

ಹಸಿರನೆ‌ ಉಸುರುವ ಪರ್ಣದ ವರ್ಣವ

ಬಯಸುವ ಹೂವಿನ ಮೆಚ್ಚುಗೆ ಮಾತು

ದಳಕೂ ಪತ್ರೆಗೂ ಮುಗಿಯದ ಮಾತು

ಯುಗವೇ ಮುಗಿದರೂ ತೀರದ ಮಾತು

ಒಲವಿನ‌ ಮಾತು ಗೆಲುವಿನ ಮಾತು

ಸ್ವರವೇ ಇಲ್ಲದ ಮೌನದ ಮಾತು

ಮೇದಿನಿ ಕೆಸುವಿನಮನೆ 

ಈಶ್ವರ ಭಟ್ ಕೆ (ಕಿರಣ)
ಈಶ್ವರ ಭಟ್ ಕೆ (ಕಿರಣ), ಮೂಲತಃ ಕಾಸರಗೋಡು ಕೇರಳದವರು. ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸ ಬರಹ, ತಿರುಗಾಟ.
ಗಡಿನಾಡಿನ ಸೀಮೆಯವರು ಆಗಿದ್ದಕ್ಕೂ ಏನೋ, ಕಿರಣರಿಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳೂ ಮಾತಾಡಲು ಮತ್ತು ಓದಲು ಬರೆಯಲು ಬರುತ್ತದೆ ಅದೇ ಕಾರಣದಿಂದ ಆ ಭಾಷೆಯ ಕಥೆ, ಕವನ, ಭಜನೆಗಳನ್ನು ತುಂಬಾ ಸುಂದರವಾಗಿ ಕನ್ನಡಕ್ಕೆ ಅನುವಾದಿಸುತ್ತಾರೆ.
ಇವರ ಕವಿತೆಗಳು ಸರಳವಾಗಿ ಹಾಡಿಸಿಕೊಂಡು ಹೋಗುತ್ತವೆ. ರಾಗಕ್ಕೆ, ತಾಳಕ್ಕೆ ಹೊಂದುವ ಸಾಹಿತ್ಯ ಬರೆಯುವ ಇವರು, ಹಾಸ್ಯಬರಹ, ಮತ್ತೆ ಅಷ್ಟೇ ಗಂಭೀರ ವಿಷಯಗಳನ್ನೂ ಬರೆಯಬಲ್ಲರು.
ಮಲ್ಲಿಗೆಯವಳು.

ಹೂವಬುಟ್ಟಿಯ ಹೊತ್ತು ಮಲ್ಲಿಗೇ ಮಲ್ಲಿಗೇ
ಎಂದೆನುತ ಬಂದಳೋ ಬಿಂಕದವಳು
ಮೊಳಕೆ ಎಷ್ಟೆಂದರೆ ಕಣ್ಣಲ್ಲೆ ಗದರಿಸುತ
ಹಣದ ಲೆಕ್ಕಾಚಾರ ಯಾಕೆಂಬಳು!

ಮೊಳಕೆ ಮೂವತ್ತಾಯ್ತೆ? ಮೊನ್ನೆ ಇಷ್ಟಿರಲಿಲ್ಲ
ಪಿಸುಮಾತಿಗಳಿಗಿಷ್ಟು ಕೋಪಗೊಂಡು;
ಮಲ್ಲಿಗೆಯ ಗಿಡಕೆಲ್ಲ ರೋಗ ಬಂದಿದೆ ಒಡೆಯ
ಮೊನ್ನೆಯಷ್ಟಿಲ್ಲ ಹೂ ಎಂದೆಂಬಳು.

ಒಂದು ಮೊಳ ಸಾಕೆನಗೆ, ತೆಗೆದುಕೋ ನಲುವತ್ತು
ಎಂದಾಡಿದರೆ ಮತ್ತೆ ಜನ್ಮ ಹೊರಗೆ;
ಮಾಲೆ ಕಟ್ಟುವ ಸಮಯ ಪರಿಮಳವ ಕುಡಿದೆಹೆನು
ನಾ ಹೇಳುವಷ್ಟನೇ ಕೊಡು ಎಂದಳು.

ಮೊಳ ಕತ್ತರಿಸುವಾಗ ಒಂದಿಷ್ಟು ಹೆಚ್ಚಿಸುತ
ಜೊತೆಗಷ್ಟು ಗುಲಾಬಿ ತೆಗೆದಿಡುತಲಿ;
ಹೂವನ್ನು ಹೆಚ್ಚಿಸುವ ಖುಷಿ ತುಂಬುಮೊಗದಲ್ಲಿ
ನಾಳಿನಾ ಭರವಸೆಯ ನಗು ನಕ್ಕಳು.
ಸೂರ್ಯಾಸ್ತ!

ಅಲ್ಲಿ ಕೆರೆಯಂಚಿನಲಿ, ಮುಳುಗುತಿಹ ನೇಸರಗೆ
ಮರದ ಹಸಿರನು ಕಪ್ಪು ಮಾಡುವಾಸೆ
ಇಲ್ಲಿಯೋ ತಂಗಾಳಿ ಬಿಸಿಯೇರೆ ಹಣಕಿಸುತ
ಹತ್ತಿರಕೆ ಕಳಿಸುವುದು, ಒಲವಿನಾಸೆ!

ಎಷ್ಟು ಮಾತುಗಳಾಡಿ, ಜಗಳದಲಿ ಒಂದಾಗಿ
ಮತ್ತೆ ಮಾತಿನ ದೋಣಿ ತೇಲಿಹೋಗಿ
ಸುತ್ತ ಕತ್ತಲೆ ಹಬ್ಬಿ ಮಾತು ಮೌನಕೆ ದಣಿದು
ಅವಳ ಸಾಮೀಪ್ಯವನೆ ಅಲೆವ ರೋಗಿ

ಹಾರುವುದು ಎದೆಗನಸು ನೂರು ಮೈಲಿಗಳಾಚೆ
ಅಲ್ಲಿಯೂ ನೇಸರನು ಮುಳುಗುತಿಹನು
ಅವಳಿಗೂ ಇದೆ ನೆಪವು, ಇಂತಹದೆ ಬೇಸರವು
ಏನನೋ ಕಾಯುವುದು, ಹೆಳವ ನಾನು.

ಒಂದು ದಿನವಾದರೂ ಸಂಜೆಯಾಗದೆ ಇರಲಿ
ದೂರವಿಹ ವಿರಹಿಗಳ ಎದೆಯ ಸುಡದೆ
ಮಂದಮಾರುತ ಹೋಗಿ ಸುಖಿಪವರ ಜೊತೆಗಿರಲಿ
ನನ್ನ ಕಾಡಲುಬೇಡ, ಅವಳು ಸಿಗದೆ

ಚಿತ್ರಗಳು: ಅಮಿತಾ ರವಿಕಿರಣ್

Leave a Reply

Your email address will not be published. Required fields are marked *