ದಂಪತಿಗಳ ಸರಸ ಸಲ್ಲಾಪ

ಅನಿವಾಸಿ ಗುಂಪಿನಲ್ಲಿ ಕಥೆಗಾರರು, ಕವಿಗಳು, ಹರಟೆಮಲ್ಲರು, ಇತಿಹಾಸ ಪ್ರಿಯರು ಪ್ರಬಂಧಕಾರರು ಹೀಗೆ ಹಲವು ಬಗೆಯ ವಿಶೇಷತೆಯ ಸದಸ್ಯರಿದ್ದಾರೆ. ಅವರೆಲ್ಲರ ನಡುವೆ, ಲಘು ಹಾಸ್ಯ ಭರಿತ ಲೇಖನ, ಕವನಗಳನ್ನು ಬರೆದು, ಎಲೆಯ ಮರೆಯ ಕಾಯಿಯಂತಿರುವವರು ವತ್ಸಲಾ. ಕಣ್ಣಲ್ಲೇ ನಸುನಗುವನ್ನು ಸೂಸುವ ಶೈಲಿ ಅವರದ್ದು. ಘನ ವಿಷಯವನ್ನು ಲಘುವಾಗಿ ಮನಮುಟ್ಟುವಂತೆ ಬರೆಯಬಲ್ಲರು ವತ್ಸಲಾ. ಈ ವಾರದ ಸಂಚಿಕೆಯಲ್ಲಿ ಅವರು ಬರಹವನ್ನು ನೀವು ಓದಿ, ಮುಗುಳ್ನಗುವಿರೆಂಬ ಭರವಸೆ ನನಗಿದೆ. ಇದು ಮುದ್ದಣ-ಮನೋರಮೆಯ ಸರಸ ಸಲ್ಲಾಪವೇ? ಅವರು ಕೇಳುವ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿದೆಯೇ?


ಏನುಂದ್ರೆ ನಾನು ಹೇಳಿದ್ದು ಕೇಳಿಸಿತೆ ?
ಹೂಂ ಕಣೆ ಕೇಳಿಸಿತು.
ನಾನು ಹೇಳಿದ್ದು ಏನುೊಂತ ಗೊತ್ತಾಯಿತೆ?
ನೀನು ಹೇಳಿದರೆ ತಾನೆ ಗೊತ್ತಾಗುವುದು.
ಏನುಂದ್ರೆ ನಾನು ಹೇಳೋದೇನಂದರೆ,
ಅಯ್ಯೋ! ರಾಮ! ಹೇಳೆ ಏನುಂತ ಮಹಾತಾಯಿ!
ಅದೇ ಕಣ್ರಿ ಗೊತ್ತಾಯಿತಾ?
ಗಂಡನಿಗೆ ತಲೆ ಬಿಸಿಯಾಗಿ ತಣ್ಣಗೆ ನೀರು ಕುಡಿದ.
ಅಲ್ಲಾಂದ್ರೆ ನಾನು ನೆನಪಿಸುತ್ತಿರುವುದು “ಏನೂಂದ್ರೆ ಹೇಳಿ ನೋಡೋಣ”
ಅಮ್ಮ ಮಹಾಕಾಳಿ, ನಿನ್ನ ಮನಸ್ಸಿನಲ್ಲಿ ಏನಿದೆಯೆಂದು ಒದರುವಂತವಳಾಗು!
ಅದೇರಿ ಅವತ್ತು ಸಾಯಂಕಾಲ ಬೆಂಗಳೂರಿನ ಕೆಟ್ಟಗಾಳಿ ಕುಡಿಯಲು ಹೋಗಿದ್ದೆವೆಲ್ಲಾ ನೆನೆಪಿದೆಯೇನ್ರಿ?
ಇಲ್ಲ ಕಣೆ, ಏನುಂತ ನೀನೇ ಹೇಳಬಾರದೆ
ಅದೇ ಕಣ್ರಿ ಅಲಸೂರು ಕೆರೆ ಹತ್ತಿರ ಹೇಳಿದೆನಲ್ಲಾ ನೆನಪು ಬಂತೇನ್ರಿ?
ಅದೇರಿ, ನಾವಿಬ್ಬರು ಬೆಂಚಿನ ಮೇಲೆ ಕುಳಿತು ಹುರಿದ ಕಡಲೆಬೀಜ ತಿಂತಾಯಿರಲ್ಲಿಲ್ಲವೇ?
ಏನುಂದ್ರೇ ತುಕಡ್ಸಿತ್ತಿದ್ದೀರಾ? ನಾನು ಹೇಳಿದ್ದು ಗೊತ್ತಾಯಿತಾ?
ಹೂಂ ಕಣೆ  ಸುತ್ತಿ ಬಳಸಿ ಮಾತನಾಡಬೇಡ , ಏನು ಹೇಳು: ಗಂಡ ಗದರಿದ.
ಏನುಂದ್ರೇ !
ಏನೂಯಿಲ್ಲ ಬೆಲ್ಲ ಇಲ್ಲ. ಅದೇನು ಹೇಳೇ ಬೇಗ: ಗಂಡ ಗುಡುಗಿದ.
ಅದೇರಿ ಕಳ್ಳೆಕಾಯಿ ತಿನ್ನುತ್ತಾ ಇರಬೇಕಾದರೆ ಒಂದು ಹೊಸ ದಂಪತಿಗಳು ಬಂದ್ರಲ್ಲಾ?
ಗಂಡ ಚುರುಕಾದ. ಹೌದು ಕಣೆ, ಆ ಹುಡುಗಿ ಎಷ್ಟು ಸುಂದರವಾಗಿದ್ದಳು ಅಲ್ಲವೇನೆ?
ಬೆಳ್ಳಗೆ, ತೆಳ್ಳಗೆ, ಹಸಿರು ಸೀರೆ ಉಟ್ಟು ಗಲಗಲಾಂತ ನಗುತ್ತಾ ಗಂಡನ ಕೈ ಹಿಡಿದುಕೋಂಡು ಹೋಗುತ್ತಿದ್ದಳು
ಅವಳ ಜಡೆ ನಾಗರ ಹಾವಿನಂತೆ ಉದ್ದಕ್ಕಿತ್ತು ಅಲ್ಲೇನೆ? ಅವಳು ಬಳಕುತ್ತಾ ನಡೀತಾ ಇದ್ರೆ!
ಹೆಂಡತಿ ಕೆಂಡಕಾರಲು ಸಿದ್ದವಾಗಿದ್ದಳು.
ಆದರೆ ಹಾಗೆ ಮಾಡಲಿಲ್ಲ, ಯಾಕೆ ಗೊತ್ತಾ?
ಮುಂದಿನ ಮಾತು ಕೇಳಿ.
ಅರೇ! ನಿಮಗೆ ಬೇಕು ಅಂದ್ರೆ ನೆನಪು ಎಷ್ಟು ಚೆನ್ನಾಗಿ  ಎಳೆ ಎಳೆಯಾಗಿ ಬರುತ್ತೆ ಅಲ್ಲೇನ್ರಿ?
ಹೂಂ ಕಣೆ ಹುಡುಗಿ ತುಂಬಾ ಚೆನ್ನಾಗಿ ಕಳಕಳಂತ ಇದ್ದಳು ಅಲ್ಲೇನೆ?
ಹೂಂರೀ ! ಅವಳ ಕತ್ತಿನಲ್ಲಿ ಯಾವ ನೆಕ್ಲೇಸ್‌ ಇತ್ತು ಗೊತ್ತಾ?
ಅದೇ ಕಣೆ! ಹಂಸದಂತ ಕತ್ತಿನಲ್ಲಿ ಕೆಂಪು ಮುತ್ತಿನ ನೆಕ್ಲೇಸ್, ವಜ್ರದ ಓಲೆ, ಬಳೆ ಏಲ್ಲಾ ಹಾಕಿಕೊಂಡು
ಮಂಗಳ ಗೌರಿಯಂತೆ ಇದ್ದಳು ಅಲ್ಲೇನೇ?
ಹೆಂಡತಿಗೆ ಕೋಪ ನೆತ್ತಿಗೇರಿತು. ಆದರೂ,
ಹೌದೂರೀ ಆವಾಗ ನಾನು ಏನು ಕೇಳಿದೆ ಹೇಳಿ?
ಅಯ್ಯೊ! ಬಿಡೆ ನೀನು ಏನೇನೋ ಕೇಳ್ತಾ ಇರುತ್ತಿ ನಂಗೆ ನೆನಪು ಇಲ್ಲ ಹೋಗೆ
ಸರಿ ಬಿಡಿ , ನಾನೇಕೆ ನೆನಪಿಸ ಬೇಕು?
ಇಲ್ಲ ಕಣೆ ಹೇಳೆ ರಾಣಿ!
ಹೆಂಡತಿ ವೈಯ್ಯಾರದಿಂದ “ಆ ಹುಡುಗಿ ಹಾಕಿಕೊಂಡಂತ ನೆಕ್ಲೇಸ್ ಇಲ್ಲೇ ಪಕ್ಕದ ಅಂಗಡಿಯಲ್ಲಿದೆಯಂತೆ,
ಆ ಹುಡುಗಿ ಹೇಳಿದಳು. ಸುಮ್ಮನೆ ನೋಡಿಕೊಂಡು ಬರೋಣ ಅಂತ ಹೋಗಿ ನೋಡಲ್ಲಿಲ್ಲವೇ?,
ಬೆಪ್ಪ ಗಂಡ, ಹೌದು ಹೋಗಿ ನೋಡಿದೆವು. ನಂತರ ಮನೆಗೆ ಬಂದು ಊಟಮಾಡಿ ಮಲಗಿಕೊಂಡೆವು ಅಷ್ಟೇ.
ಹೂಂ ಕಣ್ರಿ ! ನಾನು ನೆನ್ನೆ ಆ ಅಂಗಡಿಗೆ ಹೋಗಿ Necklace order ಮಾಡಿದೆ. ನಿಮಗೂ ತುಂಬಾ ಇಷ್ಟ ಆಯ್ತು ಅಲ್ಲವೇನ್ರಿ?
ಏನೊಂದ್ರೆ ನಾನು ಹೇಳಿದ್ದು ಕೇಳಿಸಿಕೊಂಡ್ರ?
ಆಫೀಸಿನಿಂದ ಬರಬೇಕಾದರೆ ದುಡ್ಡು ಮರೀಬೇಡಿ ಗೊತ್ತಾಯಿತಾ?
ಗಂಡ ಪಾಪ! ಬಡ ಕಾರಕೂನ. ಬೆಪ್ಪನಾದ!
ಹೆಂಡತಿ “ಏನುಂದ್ರೆ ಹೇಳಿದ್ದು ಕೇಳಿಸಿತಾ”
ಗಂಡ ಏನು ಹೇಳಿದ ನಂಗೆ ಗೊತ್ತಿಲ್ಲ.
ನಿಮಗೆ ಗೊತ್ತಿದ್ದರೆ ಹೇಳಿ.

ವತ್ಸಲಾ ರಾಮಮೂರ್ತಿ

ಎರಡು ಕವನಗಳು- ವಿಜಯ್ ನರಸಿಂಹ

             ಹೊಸ ಪರಿಚಯ

Vijaya narasimha
ವಿಜಯ್  ನರಸಿಂಹ

ವಿಜಯ್ ನರಸಿಂಹ ಅವರು ಮೂಲತಃ ತುಮಕೂರಿನವರು.B.E Mechanical Engineering ನಲ್ಲಿ ಪದವಿ ಪಡೆದಿರುವ ಇವರು QuEST ಸಂಸ್ಥೆಯಲ್ಲಿ Technical Manager ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಗಳಲ್ಲಿ ಸಾಹಿತ್ಯ ರಚನೆಯೂ ಒಂದು. ಸಾಹಿತ್ಯದಲ್ಲಿ  ಕಾವ್ಯ ಪ್ರಾಕಾರ ತುಂಬಾ ಇಷ್ಟ  ಎನ್ನುವ ಇವರು ಹಲವು ಕವನಗಳನ್ನು ಬರೆದ್ದಿದ್ದಾರೆ.

ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಸಂಘದ ಅನಿವಾಸಿ ವಿಭಾಗದಲ್ಲಿ ಎರಡು ಬಾರಿ  ಇವರ ಆಯ್ದ ಕವನಗಳಿಗೆ ಮನ್ನಣೆ ದೊರೆತಿದೆ.  ರಾಷ್ತ್ರಕವಿ ಕುವೆಂಪು ಮತ್ತು ಮೈಸೂರು ಅನಂತ ಸ್ವಾಮಿ ಪ್ರಶಸ್ತಿಗಳು ದೊರೆತಿವೆ. ಕಾವ್ಯದ ಒರೆಯ ಸೆಲೆತ ಜೋರಾಗಿದ್ದರೆ ಅದನ್ನು ತಡೆಯಲು ಸಮಯಾಭಾವದ ಸೋಗು ಸಾಲದು ಎನ್ನುವ ಇವರು ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. UK Derby ಯಲ್ಲಿ ಸನ್ಮಿತ್ರರೊಡನೆ ಸೇರಿ 2014ರಲ್ಲಿ ಜೈ ಕರ್ನಾಟಕ ಬಳಗದ ಸ್ಥಾಪನೆಯಲ್ಲಿ ಇವರ ಪಾತ್ರ ಹಿರಿದು.

ವಿಜಯ್ ನರಸಿಂಹ ಅವರ  ಕಾವ್ಯ ಪ್ರಕಾರಗಳು ವಿಶಿಷ್ಟವಾದವು . ಈ ಕಾವ್ಯ ಪ್ರಕಾರಗಳು ಇತ್ತೀಚೆಗೆ ವಿರಳವಾಗುತ್ತ ಬರುತ್ತಿವೆ. ನವ್ಯ ಕಾವ್ಯದ ಹೆಸರಲ್ಲಿ ಗದ್ಯ ಪದ್ಯವಾಗುತ್ತಿದೆ. ಕನ್ನಡದ ಹಲವು ಉತ್ತಮ ಪದಗಳು ಬಳಕೆಯಾಗುತ್ತಿಲ್ಲ. ಕನ್ನಡದಲ್ಲಿ ಅಪಾರ ಪಾಂಡಿತ್ಯ ಇರುವ ವಿಜಯ್ ಅವರು ಎರಡು ಭಿನ್ನ ಪ್ರಕಾರಗಳಲ್ಲಿ ಬರಿದಿರುವ ಕೆಳಕಂಡ ಕವನಗಳು ಕನ್ನಡಕ್ಕೆ ಮತ್ತು ಅನಿವಾಸಿಗೆ ಉತ್ತಮ ಕೊಡುಗೆಗಳು. ಅವರು ಕಳಿಸಿದ ನಾಲ್ಕು ಕವನಗಳಲ್ಲಿ ಎರಡನ್ನು ಪ್ರಕಟಿಸುತ್ತಿದ್ದೇನೆ. ಮತ್ತೆರಡನ್ನು  ಮುಂದಿನ ತಿಂಗಳುಗಳಲ್ಲಿ ನಿರೀಕ್ಷಿಸಿ

ಪ್ರಸ್ತುತ ಕಾರ್ಯ ನಿಮಿತ್ತವಾಗಿ  Isle of White ನಲ್ಲಿ ನೆಲೆಸಿರುವ ಇವರನ್ನು ಅನಿವಾಸಿಗೆ ತುಂಬು ಹೃದಯದಿಂದ ಸ್ವಾಗತಿಸೋಣ-ಸಂ

Read More »