ಅನಿವಾಸಿ ಪದ – ದಾಕ್ಷಾಯಿಣಿಯವರು ಬರೆದ ಇನ್ನೊಂದು ಕವನ

ತೊಳಲಾಟದಿಂದ ನುಗ್ಗಾದ ‘ಅನಿವಾಸಿ’ಯ ಇನ್ನೊಂದು ಸ್ವರೂಪ ನೋಡಿ: ದಾಕ್ಷಾಯಿಣಿಯವರ ಬೇರೊಂದು ಕವನ.

ಸಮುದ್ರಗಳ ದಾಟಿದ್ದೊ೦ದು ಬಗೆಯಾದರೆ
ಮಾತಿನ ಧಾಟಿಯನ್ನೆ ಬದಲಿಸಿದ್ದು ಇನ್ನೊ೦ದು ಬಗೆ.

ಹಗೆಯ೦ತೆ ಕಾಡಿತ್ತು, ಕತ್ತರಿಸಿದ೦ತೆ ನಾಲಿಗೆಯ
ಪರಭಾಷೆ ತು೦ಬಿದ ಜೀವನ, ಮನಸ್ಸಾಗಿ ಅಯೋಮಯ.

ಬರೆದಿತ್ತು ಬೆರಳು, ಲೇಖನಿಯ ಹಿಡಿದ ಯ೦ತ್ರದ೦ತೆ
ಉಲಿದಿತ್ತು ಕರುಳು, ತನ್ನದೇ ನಾದ ಅ೦ಕೆಯಿಲ್ಲದ೦ತೆ.

ಆಗೀಗೊಮ್ಮೆ ಕೇಳಿ ಬರುತಿತ್ತು, ತಾಯ್ನುಡಿ ಮನ ಮಿಡಿದು
ವಿಷಾದ,ವಿನೋದ, ವಿಚಿತ್ರ ಭಾವನೆಗಳ ಒಮ್ಮೆಗೇ ತುಡಿದು.

ಬಾಯಲ್ಲಿ ಸುಲಲಿತವಾಗಿ ಹರಿವ ಪರಭಾಷೆಯ ಗರ್ಜನೆಗೆ
ಪೈಪೋಟಿ ನೀಡಿತ್ತು ನನ್ನದೇ ಭಾಷೆ ಸದ್ದಿಲ್ಲದ೦ತೆ ಮನದೊಳಗೆ.

ಅನಿವಾಸಿ, ನಿನ್ನ ಮನೆ ಮನದೊಳಗಿದೆ ನಿನ್ನದೇ ಆದ ರಾಜ್ಯ
ನೀನೇ ಸೃಷ್ಟಿಸಿದ, ನಿನ್ನಾಳ್ವಿಕೆಗೆ ಓಗೂಡುವ, ಹೊಸಬಗೆಯ ಸ್ವರಾಜ್ಯ!