ವೈದ್ಯನ ಕಥೆ-ವ್ಯಥೆ -ಡಾ ರಾಂಶರಣ್ ಬರೆದ ಕವನ

 

ವೈದ್ಯನ ಕಥೆ-ವ್ಯಥೆ

ಮೈ ನೋವು, ಕೈ ನೋವು

ಡಾಕ್ಟ್ರೇ, ಎಲೆಲ್ಲೂ ನೋವು

ತಲೆ ಶೆಳತ, ಕಾಲು ಜಗತ

ದಿನವೆಲ್ಲ ಕೇಳೆನ್ನ  ರಕ್ತ ಕುದಿಯಿತು ಕತ ಕತ

sick note 2

ನನಗೇನು ರೋಗ ಡಾಕ್ಟ್ರೇ? ಸಾಕಾಯಿತು ಜೀವ

ಒಯ್ದುಬಿಡು ಈ ಪ್ರಾಣ; ಓ ದೇವ!

ನಿನಗಿಲ್ಲ ರೋಗ, ಗಟ್ಟಿ-ಶಟ್ಟಿ ನಿನ್ನ ರಟ್ಟೆ;

ಕುಳಿತುಣ್ಣಲು ಬೇಕೋ ರೊಕ್ಕ ಪುಕ್ಸಟ್ಟೆ?

 

 

ಹಾಗೆನಬೇಡ ದಮ್ಮಯ್ಯ, ನಿನಗೆ ದಯವಿಲ್ಲ

ಕೆಲಸ ಮಾಡಲೆನಗೆ ಸಾಧ್ಯವಿಲ್ಲ

ಕಮಾಯಿ ಇಲ್ಲದೇ ಹೊಟ್ಟೆಗೆ ಹೆಂಡವಿಲ್ಲ,

ದಮ್ಮು ಹೊಡೆಯಲು ಕಾಸಿಲ್ಲ.

 

ಬೇಡೆನಗೆ ಪಬ್ಬಿನ ಚಾಕರಿ, ಕ್ಲೀನಿಂಗ್ ನೌಕರಿ

ನನ್ನ ಮಾದರಿ: ಪಕ್ಕದ ಮನೆ ಸೋಂಭೇರಿ, ಮೇರಿ.

ಆಚೆ ಮನೆ ಆಲ್ಬರ್ಟು, ಬಿದ್ದಿರ್ತಾನೆ ಹಗಲೂ ರಾತ್ರಿ ತಿಂದ್ಬಿಟ್ಟು

ನಂಗೂ ಕೊಡು, ಅವನಂತೆ ಲೈಫ್ ಎಂಜಾಯ್ ಮಾಡಲೊಂದು ಸರ್ಟಿಫ಼ಿಕೆಟ್ಟು

 

ಈಕೆ ರೋಗಿಯಂತೆ, ನಾನು ವೈದ್ಯನಂತೆ

ಅವಳ ತಾಳಕ್ಕೆ ಕುಣಿಬೇಕಂತೆ!

ಅವಳಿಗಿಲ್ಲ ರೋಗ, ಬೇಕು ಕೇವಲ ರಜ

ಹೀಗಿದೆ ಯುಗ; ಇಂದು ಕೆಲಸಗಳ್ಳನೇ ರಾಜ

 

3 weeks of absence redone

 

ಗರಗಸ ಸತತ ಇಂಥವರ ವರಾತ

ನನ್ನ ಮೈಯಿಂದ ರಕುತದ ಜಲಪಾತ

ಹಿಚುಕಲೇ ಕುತ್ತಿಗೆ? ಮುಗಿಸಲೇ ನಿನ್ನ ಕಥೆ?

ತೋರಿಸಲಾರೆನ್ನ ವ್ಯಥೆ!

 

– ರಾಮ್

(ಯು ಕೆ ಕನ್ನಡ ಬಳಗದ 2016 ಯುಗಾದಿ ಉತ್ಸವದಲ್ಲಿ ಇದನ್ನು ಪ್ರಸ್ತುತ ಪಡಿಸಲಾಗಿತ್ತು)