ಮೂರನೆಯ ಚಾರ್ಲ್ಸ್ – King Charles III

ನನಗನ್ನಿಸುವಂತೆ ಅನಿವಾಸಿಯ ಬಳಗದ ಸದಸ್ಯರೆಲ್ಲರ (ಹೆಚ್ಚು-ಕಮ್ಮಿ ಎಲ್ಲರ ಅನ್ನೋಣವೇ?) ಜೀವನ ಕಾಲದಲ್ಲಿ ಇದು ಮೊದಲನೆಯ ಸಿಂಹಾಸನಾರೋಹಣ, ಈ ಶನಿವಾರ ಅಂದರೆ ನಾಳೆ 2023 ರ ಮೇ 6 ರಂದು ಜರುಗಲಿದೆ.  ಕಳೆದ 70 ವರ್ಷಗಳಿಂದ ರಾಜಕುಮಾರನಾಗಿಯೇ ಉಳಿದಿದ್ದ ಚಾರ್ಲ್ಸ್, 7 ತಿಂಗಳ ಹಿಂದೆ ರಾಣಿ ಎಲಿಜಬೆತ್ ರ ಮರಣಾನಂತರ ರಾಜನಾದರೂ, ಈ ವಾರದ ಕೊನೆಯಲ್ಲಿ ಅಧಿಕೃತ ಸಮಾರಂಭದಲ್ಲಿ ಪತ್ನಿ ಕಮಿಲಾರೊಂದಿಗೆ ಸಿಂಹಾಸನವನ್ನು ಏರಲಿದ್ದಾರೆ.  53 ಕ್ಕೂ ಹೆಚ್ಚು ಅವಧಿಯ ತಮ್ಮ ಅಪ್ರೆಂಟಿಸ್ ಅನುಭವವನ್ನು ವೃತ್ತಿಯಲ್ಲಿ ಯಶಸ್ವಿಯಾಗಿ ಬಳಸುವ ಅವಕಾಶ ಪಡೆಯಲಿದ್ದಾರೆ.  ಈ ಸಂದರ್ಭದಲ್ಲಿ ನಮ್ಮ ಅನಿವಾಸಿ ಬಳಗದ “ಡೇವಿಡ್ ಬೇಯ್ಲಿ” ಹವ್ಯಾಸಿ ಛಾಯಾಗ್ರಾಹಕರೊಬ್ಬರು, ಸುಮಾರು ಅರ್ಧ ಶತಮಾನದ ಹಿಂದೆ ತಾವು ಕಿಂಗ್ ಚಾರ್ಲ್ಸ್ ಅವರ ಜೀವನದ ಒಂದು ಭಾಗದಲ್ಲಿ ಹೇಗೆ ಹಾಯ್ದು ಬಂದರೆಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಓದುಗರಲ್ಲೂ ಹಲವರು ಈರೀತಿಯ ಅನುಭವಗಳ ಪಟ್ಟಿಮಾಡುವವರಿರಬಹುದು – ದಯವಿಟ್ಟು ಪ್ರತಿಕ್ರಿಯೆ ಬರೆದು ನಮ್ಮೊಂದಿಗೆ ಹಂಚಿಕೊಳ್ಳಿ.

ಮೊದಲಿಗೆ ರಾಜ ಚಾರ್ಲ್ಸ್ ರ ಜೀವನಕಾಲದ ಒಂದು ಝಲಕನ್ನು ನೋಡೋಣ.  ಹಲವಾರು ಅಂತರ್ಜಾಲ ತಾಣಗಳು ಈ ಚಿಕ್ಕ ಬರಹದ ಸಾಮಗ್ರಿ ಒದಗಿಸಿದ ಮೂಲಗಳು – royal.uk, britroyals.com, theguardian.com, smithsonianassociates.org ಇತ್ಯಾದಿ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ)

ಮೂರನೆಯ ಚಾರ್ಲ್ಸ್ - ಕಿಂಗ್ ಚಾರ್ಲ್ಸ್ ದ ಥರ್ಡ್

ಜನಪ್ರಿಯ ರಾಣಿ ಎರಡನೆಯ ಎಲಿಜಬೆತ್ ಹಾಗೂ ರಾಜಕುಮಾರ ಫಿಲಿಪ್ (ಡ್ಯೂಕ್ ಆಫ಼ ಎಡಿನ್ಬರಾ) ಇವರ ಮೊದಲ ಮಗ.
ಸ್ಕಾಟ್ಲಂಡಿನಲ್ಲಿ ಮತ್ತು ಕೇಂಬ್ರಿಜ್ ನ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. 
ಜುಲೈ 1, 1969 ರಂದು ಪ್ರಿನ್ಸ್ ಆಫ್ ವೇಲ್ಸ್ ಪದವಿ.  ಅಲ್ಲಿಂದ ಕೇಂಬ್ರಿಜ್ ಹಾಗೂ ರಾಯಲ್ ವಿಮಾನ ದಳದಲ್ಲಿ ಕಲಿಕೆ. 1971 ರಲ್ಲಿ ಅವರ ತಂದೆ ಹಾಗೂ ತಾತನ ಹೆಜ್ಜೆಗಳನ್ನನುಸರಿಸಿ, ನೌಕಾದಳಕ್ಕೆ ಸೇರಿಕೆ.

1981 ರ ಜುಲೈ 29ರಂದು ಡಯಾನಾ ಅವರೊಂದಿಗೆ ಮದುವೆ.  ಅವರ ವೈವಾಹಿಕ ಜೀವನ ಹಲವು ಏರುಪೇರುಗಳಿಂದ ಕೂಡಿದ್ದು, 1993ರಲ್ಲಿ ಅವರಿಬ್ಬರ ಬೇರ್ಪಡುವಿಕೆಯಲ್ಲಿ ಕೊನೆಗೊಂಡಿತು.  2005 ರಲ್ಲಿ ಚಾರ್ಲ್ಸ್ ಮತ್ತೆ ಕಮಿಲಾ ಅವರನ್ನು ಮದುವೆಯಾದರು. 

ರಾಜನಾಗುವ ಮೊದಲಿನಿಂದಲೂ ಚಾರ್ಲ್ಸ್ ಸೈನ್ಯದ, ಸೈನಿಕರ ಜೊತೆಯ ತಮ್ಮ ಬಾಂಧವ್ಯವನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದಾರೆ.  ಹಲವಾರು ಚಾರಿಟಬಲ್ ಸಂಸ್ಥೆಗಳ ಪೋಷಕನಾಗಿ, ಅವುಗಳ ಕೆಲಸವನ್ನು ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ.  ವೇಲ್ಸ್ ಹಾಗೂ ಸ್ಕಾಟ್ಲಂಡ್ ಗಳ ಮೇಲಿನ ಅವರ ಪ್ರೀತಿ ಸುಲಭವಾಗಿ ಕಂಡುಬರುವಂಥದ್ದು. ಇವೆಲ್ಲದರೊಂದಿಗೆ ಚಾರ್ಲ್ಸ್ ರ ನಿಸರ್ಗ ಪ್ರೇಮ, ಅವರನ್ನು ಹಲವಾರು ಜಾಗತಿಕ ಹಾಗೂ ಸ್ಥಳೀಯ ಸವಾಲುಗಳೊಂದಿಗೆ ಸೆಣಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಸಿದೆ.  ಸುಸ್ಥಿರ ಭವಿಷ್ಯ (sustainable future), ಅಭಿವೃದ್ಧಿಗಾಗಿ ಅವರ ಹೋರಾಟ ಮುಂದುವರೆದಿದೆ.

ಮೂರನೆಯ ಚಾರ್ಲ್ಸ್, ಯುನೈಟೆಡ್ ಕಿಂಗ್ಡಮ್ ನ 22ನೆಯ ಸಿಂಹಾಸನಾಧೀಶ / ರಾಜ.  ಮುತ್ತಾತ ಐದನೆಯ ಜಾರ್ಜ್ ರಿಂದ ಸ್ಥಾಪಿತವಾದ ವಿಂಡ್ಸರ್ ಮನೆತನದ 6ನೇ ರಾಜ.  ಆಸ್ಟ್ರೇಲಿಯಾ, ನ್ಯೂಜಿಲಂಡ್, ಕೆನಡಾ ಸೇರಿದಂತೆ 16 ದೇಶಗಳ ರಾಜಪಟ್ಟ (ನೇರ ಆಡಳಿತವಿಲ್ಲದ ಸ್ವತಂತ್ರ ದೇಶಗಳು). 54 ಸ್ವತಂತ್ರ ದೇಶಗಳ ಸದಸ್ಯತ್ವದ ಕಾಮನ್ ವೆಲ್ತ್ ಕೂಟದ ಮುಖ್ಯಸ್ಥ.  
ಅತ್ಯಂತ ಜನಪ್ರಿಯ ರಾಣಿಯಾಗಿ 70 ವರ್ಷಕ್ಕೂ ಹೆಚ್ಚು ಕಾಲ ಇಲ್ಲ-ಸಲ್ಲದ ಕಾಂಟ್ರೋವರ್ಸಿಗಳಿಲ್ಲದೇ ’ರಾಜ್ಯಭಾರ’ ಮಾಡಿದ ಎರಡನೆಯ ಎಲಿಜಬೆತ್ ರಾಣಿಯ ಉತ್ತರಾಧಿಕಾರಿಯಾಗಿ ಸಿಂಹಾಸನವನ್ನೇರುವುದು ಸುಲಭದ ಮಾತಲ್ಲ.  ಹಾಗೆಯೇ ಸುರಳೀತವಾಗಿ ಹೊಸ ರಾಜನ ರಾಜ್ಯಾಡಳಿತವೂ ನಡೆಯಲೆಂದು ಹಾರೈಸೋಣ. 

-ಲಕ್ಷ್ಮೀನಾರಾಯಣ ಗುಡೂರ.

*********************************************************

ನಾನು ರಾಯಲ್ ಫೋಟೋಗ್ರಾಫರ್ (ಅನಧಿಕೃತ) ಆದ ದಿನ! - ಡಾ. ಶ್ರೀವತ್ಸ ದೇಸಾಯಿ
ಇದೇ ವಾರ ಲಂಡನ್ನಿನಲ್ಲಿ ಮೂರನೆಯ ಕಿಂಗ್ ಚಾರ್ಲ್ಸ್ ನ ಪಟ್ಟಾಭಿಷೇಕ ನಡೆಯಲಿದೆ. ರಾಣಿ ಎಲಿಝಬೆತ್ ಪಟ್ಟಕ್ಕೇರಿದ ವರ್ಷ
1952. ಆಗ ನಾಲ್ಕು ವರ್ಷದವನಾಗಿದ್ದ ಆತ ಈ ದಿನಕ್ಕಾಗಿ ಎಪ್ಪತ್ತು ವರ್ಷಗಳೇ ಕಾಯ್ದಿರ ಬಹುದು. ಆತನ ’ಹೆಡ್ ಅಂಡ್
ಶೋಲ್ಡರ್’ ಫೋಟೋ ತೆಗೆದು ನನ್ನನ್ನೊಬ್ಬ ಅನಧಿಕೃತ ಫೋಟೋಗ್ರಾಫರ್ ಅಂತ ನಾನೇ ಅಂದುಕೊಳ್ಳುತ್ತ ನಾನು 45
ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇನೆ ಅಂದರೆ ಬರೀ ಉಡಾಫೆ ಅಂದುಕೊಳ್ಳದೆ ಆ ಕಥೆಯನ್ನು ಕೇಳಿ ಆಮೇಲೆ ಹೇಳಿರಿ!

ರೆಡ್ ಲೆಟ್ಟರ್ ಡೇ, ಜೂಲೈ, 1978.
ಹದಿನೈದನೆಯ ಶತಮಾನದಿಂದಲೂ ಹಬ್ಬದ ದಿನಗಳ ಪ್ರಥಮಾಕ್ಷರವನ್ನು ಕೆಲೆಂಡರಿನಲ್ಲಿ ಕೆಂಪು ಅಕ್ಷರಗಳಿಂದ ಮುದ್ರಿಸುವ ಈ ರೀತಿಯ ಪರಿಪಾಠ ಪ್ರಿಂಟರ್ ವಿಲಿಯಮ್ ಕ್ಯಾಕ್ಸ್ಟನ್ ಶುರುಮಾಡಿದ ಕಾಲದಿಂದ ಬಂದಿದೆ ಅಂತ ಪ್ರತೀತಿ.
ನನ್ನ ಪಾಲಿಗೆ ಆ ದಿನ ಅಂಥದೊಂದು ದಿನ. ಒಂದು ಕೆಂಪು ಹೆಲಿಕಾಪ್ಟರನ್ನು ತಾನೇ ಪೈಲಟ್ ಆಗಿ ನಡೆಸಿಕೊಂಡು ಯು ಕೆ ನ ವೇಲ್ಸ್ ಪ್ರಾಂತದ ಮರ್ಥರ್ ತಿಡ್ಫಿಲ್ ಎನ್ನುವ ಊರಿನ ’ಪ್ರಿನ್ಸ್ ಚಾರ್ಲ್ಸ್ ಆಸ್ಪತ್ರೆ’ಯ ಖಾಲಿ ಕಾರ್ ಪಾರ್ಕಿನಲ್ಲಿ ಬಂದಿಳಿದಾಗ ರೆಡ್ ಲೆಟ್ಟರ್ ಡೇ ಆಯಿತು.  ಅಷ್ಟೇ ಏಕೆ, ಆತನ ಹೆಸರಿನಲ್ಲಿ ನಾಮಕರಣವಾಗಿ ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿಸಿದ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಲ್ಲಿ ನೆರೆದ ನೂರಾರು ಜನರಿಗೂ ಅದು ಮರೆಯಲಾರದ ದಿನ. ಆಗ ಮೋಬೈಲ್ ಕ್ಯಾಮರಾಗಳು ಹುಟ್ಟಿರಲಿಲ್ಲ. ಅದೇ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಜೂನಿಯರ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಾನು ಒಂದು ಹಳೆಯ ಮಾದರಿಯ ಅಶಾಯಿ ಪೆಂಟಾಕ್ಸ್ Asahi Pentax ಕ್ಯಾಮರಾ ಹಿಡಿದು ಆತನ ಒಂದು ಚಿತ್ರವನ್ನಾದರೂ ಸೆರೆ ಹಿಡಿಯಲು ಕಾತುರನಾಗಿದ್ದೆ. ರಾಜ ಕುಮಾರ ಅಂದ ಮೇಲೆ ಸಾಕಷ್ಟು ಸೆಕ್ಯೂರಿಟಿ ಇತ್ತಾದರೂ ಈಗಿನಷ್ಟು ಇರಲಿಲ್ಲ. ಆದರೂ ನಿಯಮಾವಳಿಗಳ (protocol) ಪ್ರಕಾರ ಫ್ಲಾಷ್ ಫೋಟೋಗೆ ಕಡ್ಡಾಯವಾಗಿ ನಿಷೇಧ. ಅದು ನನಗೆ ಸ್ವಲ್ಪ ನಿರಾಶೆಯನ್ನುಂಟು ಮಾಡಿದರೂ ನನ್ನ ಅದೃಷ್ಟವನ್ನು ಪರೀಕ್ಷಿಸಲು
ಸಿದ್ಧನಾದೆ.

ನನಗೂ ಫೋಟೋಗ್ರಾಫಿಗೂ ಅಂಟಿದ ನಂಟು ...
ಎಲಿಝಬೆತ್ ರಾಣಿ ಪಟ್ಟಕ್ಕೆ ಬಂದಾಗ ನಾವು ಊಟಿಯಲ್ಲಿ ವಾಸಿಸುತ್ತಿದ್ದೆವು. ಆಗ ನನಗೆ ಆರುವರ್ಷ, ನನ್ನ ಅಣ್ಣನಿಗೆ ಎಂಟು
ವರ್ಷ ವಯಸ್ಸಿರಬಹುದು. ನಮಗೆ ಮೊದಲಿನಿಂದಲೂ ಫೋಟೋ ತೆಗೆಯ ಬೇಕೆಂದು ತವಕ. ನನ್ನಣ್ಣ ಮತ್ತು ನಾನು ತಂದೆಯವರಿಗೆ
ಕಾಡಿ, ಬೇಡಿ ಒಂದು ಫುಲ್ ವ್ಯೂ ಕ್ಯಾಮರವನ್ನು ಅದೇ ಸಮಯಕ್ಕೆ ಗಿಟ್ಟಿಸಿದ್ದೆವು. ಆಗ ಬ್ಲಾಕ್ ಅಂಡ ವೈಟ್ ಫೋಟೊ ತೆಗೆದು,
ಊರಲ್ಲಿದ್ದ ಒಂದೇ ಸ್ಟೂಡಿಯೋಗೆ ಕೊಟ್ಟು, ’ತೊಳೆಸಿ’ ಪ್ರಿಂಟ್ ಮಾಡಿಸಿದ ನೆನಪು ಇನ್ನೂ ಹಸಿರಾಗಿದೆ. ಆಮೇಲೆ ಕಾಲೇಜಿಗೆ
ಬಂದಾಗ ನನ್ನ ಮಿತ್ರನೊಡನೆ ಸೇರಿ ನಾವೇ ಪ್ರಿಂಟ್ ಮಾಡಿದ್ದೂ ಇದೆ. ನಂತರ ಈಗ ಡಿಜಿಟಲ್ ಯುಗ ಬಂದಾಗಿನಿಂದ ಎಲ್ಲರಂತೆ
ನಾನೂ ಒಬ್ಬ ಡೇವಿಡ್ ಬೇಯ್ಲಿ, ಅಥವಾ ಕ್ರಿಸ್ ಜಾಕ್ಸನ್ ಅನ್ನುವ ಭ್ರಮೆಯಲ್ಲಿದ್ದೇನೆ!

ಲೈಬ್ರರಿಯಲ್ಲಿ ರಾಜನ ಭೇಟಿ
ಇಂಗ್ಲಿಷ್ ನಿಘಂಟು ಬರೆದು ಪ್ರಸಿದ್ಧರಾದ ಡಾ ಸಾಮ್ಯುಎಲ್ ಜಾನ್ಸನ್ ಅವರನ್ನು ಮೂರನೆಯ ಜಾರ್ಜ್ ಅವರು ತಮ್ಮ
ಇಚ್ಛೆಯಂತೆ ರಾಣಿಯ ಲೈಬ್ರರಿಯಲ್ಲಿ 1767 ರಲ್ಲಿ ಭೆಟ್ಟಿಯಾಗಿದ್ದರು ಅಂತ ಓದಿದ ನೆನಪು. ಅದನ್ನೇ ನೆನಪಿಸುವ ಅಂದಿನ
ಘಟನೆ. ಆಗ ನಾನು ಅದೇ ಆಸ್ಪತ್ರೆಯಲ್ಲಿ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಡಾ ಲಾಲಾ ಎನ್ನುವ ಕಣ್ಣಿನ ತಜ್ಞರ ಕೆಳಗೆ ಕೆಲಸ
ಮಾಡುತ್ತಿದ್ದೆ. ಅವರು ಆ ದಿನ ಆಗ ಪ್ರಿನ್ಸ್ ಎಂದೇ ಕರೆಯಲಾಗುತ್ತಿದ್ದ ಚಾರ್ಲ್ಸ್ ಅವರನ್ನು ಭೇಟಿ ಮಾಡಲು ಇಚ್ಛಿಸಿದ್ದರು.
ಅದಕ್ಕೆ ಆಸ್ಪತ್ರೆಯ ಅಧಿಕಾರಿಗಳೂ ಒಪ್ಪಿದ್ದರು. ಅವರ ಜೊತೆಗೆ ನಾನೂ ಸೇರಿಕೊಳ್ಳಲೇ ಎಂದು ಹೊಂಚು ಹಾಕಿದ್ದು ಫಲಿಸಲಿಲ್ಲ.
ಪ್ರೋಟೋಕಾಲ್ ಅಂತ ಅಧಿಕಾರಿಗಳು ಅದೇ ಕೋಣೆಯಲ್ಲಿರಲು ಸಮ್ಮತಿಸಲಿಲ್ಲ.

ಅಂತೂ ಸಿಕ್ಕಿತು ಅವಕಾಶ
ನಂತರ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಚಾರ್ಲ್ಸ್ ’ತಮ್ಮ’ ಹೆಸರಿನ ಆಸ್ಪತ್ರೆಯ ವಿವಿಧ ಭಾಗಗಳಿಗೆ ಭೇಟಿಕೊಡಲು ಸುತ್ತಿತ್ತುರುವಾಗ ಅವರ ಹಿಂದೆ ’ಆಂಟೂರಾಜ್’ ಜೊತೆಗೆ ಸೇರಿಕೊಂಡು ಒಂದು ಕೋಣೆಯಲ್ಲಿ ಕೆಲವು ಡಾಕ್ಟರರು ಮತ್ತು ನರ್ಸ್ಗಳು ಸಾಲಾಗಿ ನಿಂತಿದ್ದನ್ನು ನೋಡಿ, ಅವರ ಹಿಂದಿನ ಸಾಲಿನಲ್ಲಿ ಆಯಕಟ್ಟಿನ ಸ್ಥಳದಲ್ಲಿ ನಿಂತುಕೊಂಡೆ. ನಮ್ಮ ಎದುರಿಗೆ ಮೂರೇ ಅಡಿ ದೂರದಲ್ಲಿ ಒಬ್ಬೊಬ್ಬರನ್ನಾಗಿ ವಿಚಾರಿಸುತ್ತ ಮಾತಾಡಿಸುತ್ತ ಬಂದ ಚಾರ್ಲ್ಸ್ ಅವರನ್ನು ಫೋಕಸ್ ಮಾಡಿ ತಲೆ ಮತ್ತು ಭುಜಗಳು (head and shoulder) ಇಷ್ಟೇ ಕಾಣಿಸುವಂಥ ನಾಲ್ಕೈದು ’ಪೋರ್ಟ್ರೇಟ್’ ಫೋಟೋಗಳನ್ನು ಕ್ಲಿಕ್ಕಿಸಿದೆ. ಆಗ ಡಿಜಿಟಲ್ ಕ್ಯಾಮರಾಗಳ ಆವಿಷ್ಕಾರ ಆಗಿದ್ದಿಲ್ಲ. ನೆಗೆಟಿವ್ ಗಾಗಿ ಫಿಲ್ಮ್ ಗಳನ್ನು ಕಂಪನಿಗೆ ಕಳಿಸಿ ಪೋಸ್ಟಿನಲ್ಲಿ ಪ್ರಿಂಟ್ ಬರುವ ವರೆಗೆ ಪ್ರಸೂತಿ ವೇದನೆ! ಎರಡು ವಾರಗಳ ನಂತರ ಪೋಸ್ಟ್ಮನ್ ಬಂದಾಗ ’ಹೆಣ್ಣೋ ಗಂಡೋ’ ಅಂತ ಕುತೂಹಲದಿಂದ ಮತ್ತು ಅವಸರದಿಂದ ಕವರನ್ನು ಬಿಚ್ಚಿ ನೋಡಿದೆ. ಫ್ಲಾಷ್ ಇಲ್ಲ ಅಂತ  1/15 ಸೆಕೆಂಡುಗಳ ಎಕ್ಸ್ ಪೋಶರ್ ಕೊಟ್ಟಿದ್ದೆ.  ಒಂದೇ ಒಂದು ಫೋಟೋ ಮಾತ್ರ ಅವರದೇ ಅನ್ನುವಷ್ಟಾದರೂ ಸ್ಪಷ್ಟವಾಗಿ ಕಾಣಿಸುವಂತಿತ್ತು. ನನಗೆ ಸ್ವರ್ಗ ಮೂರೇ ಗೇಣು! ಒಂದು ಕಾಲದಲ್ಲಿ ಆತ ಕಿಂಗ್ ಆಗುವ ದಿನವನ್ನೇ ಕಾಯುತ್ತಿದ್ದೇನೆ ಇಂದಿನ ವರೆಗೆ! ಇನ್ನುಳಿದ snaps ಕುದುರೆ ರೇಸಿನಲ್ಲಿ ಹೇಳುವಂತೆ 'also ran' ಅನ್ನುವ ಲೆಕ್ಕಕ್ಕಿಲ್ಲದವು! ಹೋಗಲಿ ಬಿಡಿ. ಆ ‘ಐತಿಹಾಸಿಕ' ಫೋಟೋ ಬಲಗಡೆ ಕೊಟ್ಟಿದೆ, ನಿಮಗಾಗಿ!(Credit: Monochrome editing by Nigel Burkinshaw)
ರೈಟ್ ರಾಯಲ್ ಖುಶಿ!
 ಆ ಫೋಟೋವನ್ನು ಎನ್ಲಾರ್ಜ್ ಮಾಡಿಸಿ, ಪೋಸ್ಟರ್ ಮಾಡಿಸಿ ನನ್ನ ಡಿಪಾರ್ಟ್ಮೆಂಟಿನಲ್ಲಿ ಇಟ್ಟಿದ್ದೆ. 1978 ರಲ್ಲಿ ಆ ಊರು ಬಿಟ್ಟು ಬಂದೆ. ಈಗ ಆ ದೊಡ್ಡ ಫೋಟೋದ ಗತಿ ಏನಾಯಿತು ಗೊತ್ತಿಲ್ಲ. ಆ ನೆಗಟಿವ್ ಮಾತ್ರ ಇನ್ನೂ ನನ್ನ ಹತ್ತಿರ ಇದೆ. ರಾಯಲ್ ಗ್ರಾಂಟ್ ಅಂತ ಒಂದು ’ಪದವಿ’ ಸಿಗುವದು ಅಷ್ಟು ಸುಲಭವಲ್ಲ. ಆ ಫೋಟೋದ ಒಂದು ಪ್ರತಿಯನ್ನು ’ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್’ ಲಂಡನ್ ಅಂತ ಹೆಮ್ಮೆಯಿಂದ ಕಳಿಸಿದ್ದು ಏನಾಯಿತೋ ಗೊತ್ತಿಲ್ಲ. ಆದರೆ ಈ ವರ್ಷದ ವರೆಗೆ ಕಾಯ್ದಿದ್ದ ನನಗೆ ಆ ಫೋಟೋ ಕ್ಲಿಕ್ಕಿಸಿದ ದಿನವನ್ನು ನೆನೆದು ಮೈ ಪುಳಕಿತವಾಗುತ್ತಿದೆ!  ನನ್ನ ಅತ್ಯಂತ ಅದೃಷ್ಟದ ಫೋಟೋ ಅದು ಅಂತ ನೀವೂ ಒಪ್ಪ ಬಹುದೆಂದು ಊಹಿಸುತ್ತೇನೆ! ಅದಕ್ಕೆ ನನ್ನ ಕಾಪಿರೈಟಿದೆ, ಎಚ್ಚರಿಕೆ!

ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯಾರ್ಕ್ ಶೈರ್, ಯು ಕೆ.
  (ಫೋಟೋಗಳೆಲ್ಲ ಲೇಖಕರು ಕ್ಲಿಕ್ಕಿಸಿದ್ದು. Copyright reserved.)
  (ಇದೇ ವಾರದ ಕನ್ನಡ ಪ್ರಭ ಎನ್ ಆರ್ ಐ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಲೇಖನದ  ಪರಿಷ್ಕೃತ ರೂಪ) 

**********************************************************

ನಾವು ಭಾರತೀಯರು

ನಲ್ಮೆಯ ಓದುಗರಿಗೆ ವಂದನೆಗಳು. 
ಆಕಾಶಕ್ಕೆದ್ದು ನಿಂತ ಹಿಮಪರ್ವತ ಮೌನದಲ್ಲಿ
ಕರಾವಳಿಗೆ ಮುತ್ತನಿಡುವ ಬೆಳ್ದೆರೆಗಳ ಗಾನದಲ್ಲಿ
ಬಯಲ ತುಂಬ ಹಸಿರದೀಪ ಹಚ್ಚಿ ಹರಿವ ನದಿಗಳಲ್ಲಿ
ಒಂದೇ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ
ಎಲ್ಲೇ ಇರಲಿ ನಾವು ಒಂದು ನಾವು ಭಾರತೀಯರು

ಕಣ್ಣು ಬೇರೆ ನೋಟ ಒಂದು ನಾವು ಭಾರತೀಯರು
ನಮ್ಮ ಮಲ್ಲಿಗೆಯ ಕವಿಗಳ ಚಂದದ ಸಾಲುಗಳ ಮೂಲಕ ತಮಗೆಲ್ಲ 73 ನೆಯ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಿರುವೆ. ಜನೆವರಿ 26 ಕೆ.ಎಸ್. ನರಸಿಂಹಸ್ವಾಮಿಗಳ ಜನುಮದಿನ. ತಮ್ಮ ಗೀತೆಗಳ ಮೂಲಕ ‘ನಮ್ಮಕಷ್ಟದಲ್ಲೂ ನೆರೆಗೆ ನೆರವನೀವ ಕರುಣೆಯನ್ನೂ, ಒಲವ ಜೀವ ಜಲವನ್ನೂ ನೀಡಿದ, ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನ್ನಿಟ್ಟ ಕವಿಗೆ ಹೃತ್ಪೂರ್ವಕ ನಮನಗಳು.
ಪ್ರಜಾತಂತ್ರ ದಿನಾಚರಣೆಯ ಈ ಸಂದರ್ಭದಲ್ಲಿ ತಮ್ಮ ಕವನದ ಮೂಲಕ ವಿಜಯಲಕ್ಷ್ಮಿ ಶೇಡಬಾಳ ಅವರು ‘ಭಾರತಾಂಬೆಗೆ ನಮನ’ ಸಲ್ಲಿಸುತ್ತಿದ್ದಾರೆ.
ಕಳೆದ ಸಂಚಿಕೆಯಲ್ಲಿ ಎಲ್ಲರ ಕುತೂಹಲ ಕೆರಳಿಸಿದ್ದ ..ಮಿಂಚಿನ ಬಳ್ಳಿಯಂತೆ ಅಚಾನಕ್ ಆಗಿ ಮಿಂಚಿ ಮಾಯವಾಗುತ್ತಿದ್ದ ಅದೇ ಅವಳು ಮತ್ತೆ ಬಂದಿದ್ದಾಳೆ ಶಿವ ಮೇಟಿಯವರ ಯಾರಿವಳು?? ನೀಳ್ಗತೆಯ ಮುಂದುವರೆದ ಭಾಗದಲ್ಲಿ. ಆ ಅವಳು ನಿಮ್ಮ ಕುತೂಹಲ ತಣಿಸುತ್ತಾಳೋ, ಇನ್ನಷ್ಟು ಕೆರಳಿಸುತ್ತಾಳೋ ನೀವೇ ಓದಿ ತಿಳಿಯಿರಿ.
ನುಡಿದು ಬೇಸತ್ತಾಗ ದುಡಿದುಡಿದು ಸತ್ತಾಗ 
ಜನಕ ಹಿಗ್ಗಿನ ಹಾಡು ನೀಡಾಂವ
ನಿನ್ಹಾಂಗ ಆಡಾಕ..ನಿನ್ಹಂಗ ಹಾಡಾಕ
ಪಡೆದು ಬಂದವ ಬೇಕ ಗುರುದೇವ
ಜನೆವರಿ 31.ಕವಿದಿನ;ಬೇಂದ್ರೆ ಜನುಮದಿನ. ತನ್ನಿಮಿತ್ತವಾಗಿ ಅವರ ಗಾಯತ್ರಿ ಸೂಕ್ತ ಅನುಭಾವ ಗೀತೆಯೊಂದನ್ನು ಸುಶ್ರಾವ್ಯವಾಗಿ ಹಾಡಿ ಪ್ರಸ್ತುತಪಡಿಸಿದ್ದಾರೆ ಅಮಿತಾ ರವಿಕಿರಣ್ ಅವರು.
ಓದಿ..ಕೇಳಿ..ಅನಿಸಿಕೆ ಹಂಚಿಕೊಳ್ಳಿ

~ ಸಂಪಾದಕಿ

ಭಾರತಾಂಬೆಗೆ ನಮನ

ಭಾರತಾಂಬೆಯ ಮುದ್ದಿನ ಮಗಳು ನಾನು।
ಭಾರತಾಂಬೆಯ ಪ್ರೀತಿ ವಾತ್ಯಲ್ಯದಲ್ಲಿ  ಬೆಳೆದವಳು ಹಾಗೂ ಮೆರೆದವಳು ನಾನು।।
 
ಭಾರತಾಂಬೆಯ ಇತಿಹಾಸ  ತಿಳಿದವಳು ನಾನು।
ಭಾರತಾಂಬೆಯ ಪುರಾಣ, ಪುಣ್ಯ ಶ್ಲೋಕ ತಿಳಿದು ನಮಿಸುವೆನು ನಾನು।।

ಮರ, ಗಿಡಗಳು ಹಸಿರು ಸೀರೆ ಉಟ್ಟುಕೊಂಡ ಸಂಪದ್ಭರಿತ ಹಸಿರು ದೇಶ ನನ್ನದು।
ಗುಡಿ ಗೋಪುರ, ನದಿಗಳನ್ನು ಆಭರಣಗಳಂತೆ ಧರಿಸಿರುವ ಈ ನನ್ನ ಭಾರತ।।

ಭಾರತಾಂಬೆಯ ಒಂದು ಅಂಗ( ಭಾಗ) ನನ್ನ ‘ಕರುನಾಡು।
ಅಕ್ಕ ಮಹಾದೇವಿ, ರಾಣಿ ಚೆನ್ನಮ್ಮ, ಒನಕೆ ಓಬವ್ವ ಹೋರಾಡಿದ ಪವಿತ್ರನಾಡು ನನ್ನ ಕರುನಾಡು।।

ಭಾರತಾಂಬೆಯನ್ನು ಪೂಜಿಸುವವರಿಗೆ ಗೌರವಿಸುವೆನು ನಾನು।
ಭಾರತಾಂಬೆಯನ್ನು ದ್ವೇಷಿಸುವವರಿಗೆ ‘ಕಾಳ   ಭೈರವಿ’ ಯಾಗುವೆನು ನಾನು।।

ಅರಿತುಕೋ ಭಾರತಾಂಬೆಯ ಮಡಿಲಲ್ಲಿ  ಜನಿಸಿದ ಬೆಲೆಯನ್ನು,
ಆ ಬೆಲೆ ಕಟ್ಟಲು ಸಾಲದು ಈ ‘ಜನುಮ’।।

ಎಲ್ಲೇ ಇರಲಿ, ಹೇಗೆ ಇರಲಿ ನನ್ನ ಭಾರತಾಂಬೆಯ ಹೆಮ್ಮೆಯ ಮಗಳಾಗಿ ನಾನು ಮೆರೆಯುವೆನು।।

ಜೈ ಭಾರತಾಂಬೆ । ಜೈ ಕರ್ನಾಟಕ।। 

~ ವಿಜಯ ಲಕ್ಷ್ಮಿ ಶೇಡ್ಬಾಳ್

ಯಾರಿವಳು??(ವೊ ಕೌನ್ ಥಿ?)..2

ಮನೆಗೆ ಬಂದು ಅಲ್ಮೇರಾದಲ್ಲಿದ್ದ ಹಳೆಯ ಭಾವಚಿತ್ರಗಳ ಆಲ್ಬಮ್ ತೆಗೆದು ಅವಳ ಫೋಟೋ ಹುಡುಕಾಡಿದೆ . ಸುಮಾರು ಐದು ವರ್ಷಗಳ ಹಿಂದಿನ ಚಿತ್ರ,  ಅವಳು ಮಂಜುನೇ ಎಂದು ಖಾತ್ರಿಪಡಿಸಿತು . ಅವಳ ಪೂರ್ತಿ ಹೆಸರು ಮಂಜುಶ್ರೀ ಆದರೆ ನಾವೆಲ್ಲಾ ಅವಳನ್ನು ಪ್ರೀತಿಯಿಂದ ' ಮಂಜು ಎಂದು ಕರೆಯುತ್ತಿದ್ದೆವು. ನಮ್ಮ  ಚಿಕ್ಕ ಹಳ್ಳಿಯಿಂದ ಮೊದಲು ಕಾಲೇಜು ಕಟ್ಟೆ ಏರಿದ ಹೆಣ್ಣು ಮಗು . ರೂಪದ ಜೊತೆಗೆ ದೇವರು ಒಳ್ಳೆಯ ಬುದ್ಧಿಯನ್ನೂ ಕೊಟ್ಟಿದ್ದ. ಪದವಿ   ಪೂರ್ವ  ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರ್ ಪದವಿ ಮುಗಿಸಿದ್ದಳು. ಅವರ ತಂದೆ - ವಾಸುದೇವ್ ಕುಲಕರ್ಣಿಯವರು, ನನ್ನ ಪ್ರಾಥಮಿಕ  ಶಾಲೆಯ ಗುರುಗಳು ಮತ್ತು ನಮ್ಮ ಮನೆಯ  ಆಪ್ತಮಿತ್ರರು . ಅವರನ್ನು ಊರ ಜನರೆಲ್ಲರೂ ಆಚಾರ್ಯರೆಂದು ಕರೆಯುತ್ತಿದ್ದರೆ ನಾನು  ಮಾತ್ರ ಗುರ್ಜಿ ಎನ್ನುತ್ತಿದ್ದೆ.  ( ಬೆಳಗಾವಿ ಜಿಲ್ಲೆಯ ಹಳ್ಳಿಗಳಲ್ಲಿ ಗುರುಗಳಿಗೆ ಕರೆಯುವ ರೀತಿ). ಅವಳ  ಅಣ್ಣ ' ರಘು 'ಅಷ್ಟೇನು ಓದದಿಲ್ಲವಾದರೂ ಬೆಳಗಾವಿಯ ಕಚೇರಿಯೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ವಾಸು ಗುರ್ಜಿ ತುಂಬಾ ಸಂಪ್ರದಾಯಸ್ಥರು. ಬೈಲಹೊಂಗಲದ ಪದವೀಧರನಿಗೆ ಮಂಜುಳನ್ನು  ಕೊಟ್ಟು ಸಾಂಪ್ರದಾಯಕವಾಗಿ ಮದುವೆ ಮಾಡಿಸಿದ್ದರು. ನಾನೂ ಮದುವೆಗೆ ಹೋಗಿದ್ದೆ. ಲಕ್ಷಣವಾಗಿದ್ದ ವಧು ವರರನ್ನು ಕಂಡು ಆಶೀರ್ವದಿಸಿ ' ಜನುಮದ ಜೋಡಿ ' ಎಂದು ಸಂಭ್ರಮಿಸಿದ್ದೆ.
ಆದರೆ;
ಮಂಜುನ ಮದುವೆಯ ಸಂಭ್ರಮ ಬಹಳ ದಿನ ಉಳಿದಿರಲಿಲ್ಲ . ಅತ್ತೆಯ ಮನೆಯವರು ಅನುಕೂಲವಂತರಿದ್ದರೂ , ಧನದ ದಾಹ ಹೆಚ್ಚಾಗಿತ್ತು . ಮನೆಯಲ್ಲಿಯ ಕಿರುಕುಳ ದಿನ ದಿನಕ್ಕೂ ಹೆಚ್ಚಾಗುತ್ತಾ ಹೋಗಿತ್ತು. ಗಂಡನೂ ಸಹ  ಸಂಪೂರ್ಣವಾಗಿ ಅತ್ತೆಯ ಹಿಡಿತದಲ್ಲಿದ್ದನು . ಸಿಹಿ ದಿನಗಳಕ್ಕಿಂತಲೂ ಕಹಿ ಅನುಭವಗಳೇ ಹೆಚ್ಚಾಗಿದ್ದವು . ತವರಿನವರಿಗೆ ತೊಂದರೆ ಕೊಡಬಾರದೆಂದು ಎಲ್ಲವನ್ನೂ ಸಹಿಸಿಕೊಂಡು  ನಡೆದಿದ್ದಳು. ಸಮಯ ಕಳೆದಂತೆ ಪರಿಸ್ಥಿತಿ ಇನ್ನೂ ಹದಗೆಟ್ಟಿತು, ಕೌಟುಂಬಿಕ  ಹಿಂಸೆ (domestic violence) ನುಂಗಲಾರದ ತುತ್ತಾಗಿತ್ತು. ಇನ್ನು ಆ  ಮನೆಯಲ್ಲಿ ಇರಲು ಸಾಧ್ಯವಿಲ್ಲವೆಂದು ಹಳ್ಳಿಗೆ ಮರಳಿ ಬಂದಿದ್ದಳು . ಗಂಡನು ಬಂದು ಸಾಂತ್ವನ ಹೇಳಬಹುದೆಂಬ ನಿರೀಕ್ಷೆ ಸಮಯ ಕಳೆದಂತೆ ಸುಳ್ಳಾಯಿತು. ಹಳ್ಳಿಯಲ್ಲಿ ಕೆಲವು ಜನ ' ಗಂಡ ಬಿಟ್ಟವಳು' ಎಂದರೆ ಇನ್ನೂ ಕೆಲವರು  ಮೊಸಳೆಯ ಮರುಕವನ್ನು ತೋರಿಸಿ ಮನಸ್ಸನ್ನು ನೋಯಿಸತೊಡಗಿದ್ದರು. ಇದನ್ನು  ಸಹಿಸಲಾಗದೆ ಅವಳು ಮನೆಯನ್ನು ಬಿಟ್ಟು ಹೊರಗೆ  ಹೋಗುವದನ್ನು ನಿಲ್ಲಿಸಿಬಿಟ್ಟಿದ್ದಳು . ಗುರ್ಜಿಗೆ ಏನು ಮಾಡಬೇಕೆಂದು  ತೋರದೆ ನಿಸ್ಸಾಯಕರಾಗಿಬಿಟ್ಟಿದ್ದರು . ಬೀಗರ ಜೊತೆಗೆ ಮಾತನಾಡಿದ್ದು ಏನೂ ಪ್ರಯೋಜನವಾಗಿರಲಿಲ್ಲಾ .
ಕಳೆದ ಸಲ ಹಳ್ಳಿಗೆ ಹೋದಾಗ ವಿಷಯವೆಲ್ಲ ಗೊತ್ತಾಗಿ ಗುರ್ಜಿಯ ಮನೆಗೆ ಹೋಗಿದ್ದೆ 
ಅವರೇ  ಮಾತು ಸುರು ಮಾಡಿದ್ದರು . " ಯಾವಾಗ್ ಬಂದೆ ಶಂಕ್ರಪ್ಪಾ ! ಆರಾಮ್ ಅದಿಯಲ್ಲ ? ನೋಡಪ್ಪಾ, ಮಂಜುಗ ಆಕಿ ಗಂಡಾ ಭಾಳ ಮೋಸಾ ಮಾಡಿದ . ಅವಳನ್ನ ಸಾಲಿ  ಓದಿಸಿ , ಅದ್ದೂರಿ ಆಗಿ ಮದುವಿ  ಮಾಡಿಕೊಟ್ಟೆ. ಅದು ಸಾಲದಂತ ವರದಕ್ಷಿಣಿ ತಗೊಂಡು ಬಾ ಅಂತಾ ಒಂದ ಸವನ ಪೀಡಿಸಿ ಮನೆಯಿಂದ ಹೊರಗ ಹಾಕಿದಾರ್. ಅವಳ ಅತ್ತೆ ಮಾವಂದಿರು  ಧನಪಿಶಾಚಿಗಳು. ಈಗ ಅವನು ಯಾರೋ ಇನ್ನೊಬ್ಬಳ ಜೊತೆಗಿ ಓಡಾಡಾಕತ್ತಾನಾಂತ್ , ಇವರಿಗೆ ಏನಾದರೂ ಮನುಷತ್ವಾ ಐತಿ ಏನ ?" ಎಂದು ದುಃಖ ತೋಡಿಕೊಂಡರು. ನನಗೆ ಏನು ಮಾತನಾಡಬೇಕೆಂದು ತೋಚಲಿಲ್ಲ . ಹೊರಗೆ ಹೋಗಿದ್ದ ರಘುನೂ ನಮ್ಮನ್ನು ಸೇರಿಕೊಂಡ,ಆದರೆ ಮಂಜು ಮಾತ್ರ ಕೋಣೆಯಿಂದ ಹೊರಗೆ ಬರಲಿಲ್ಲ . "ಸರಿ , ಕೇಳಿದ ವರದಕ್ಷಿಣೆ ಕೊಟ್ಟು ಬಿಟ್ಟು ಮಂಜುನ  ವಾಪಸ್ ಕಳಿಸಿ ಬಿಡ್ರಿ" ಎಂದೆ . ಗುರ್ಜಿ ಅಂದರು  -“ ಏನಪ್ಪಾ ಅಷ್ಟೊಂದು ರೊಕ್ಕಾ ಎಲ್ಲಿಂದ ತರಲಿ , ಈಗ ಕೊಟ್ಟರೂ ಮತ್ತ ಇನ್ನಷ್ಟು ತಗೊಂಡು  ಬಾ ಅನ್ನು ಮುಂಡೇಮಕ್ಕಳವರು ". ಅಪ್ಪನ ಮಾತಿಗೆ ರಘುನೂ ಕೂಡಾ ದನಿಗೂಡಿಸಿದ. 
"ಹಾಗಾದರೆ ಕೋರ್ಟಿಗೆ ಹೋಗೋನು , ನ್ಯಾಯಾ ಕೇಳೋನು ಇಲ್ಲಾ ಅಂದ್ರ ಕೌಟುಂಬಿಕ  ಹಿಂಸೆ , ವರದಕ್ಷಿಣೆಯ ಕಿರುಕುಳ ಎಂದು ಹೇಳಿ 
ವಿವಾಹ ವಿಚ್ಛೇದನಿಗೆ ಅರ್ಜಿ ಹಾಕೋನು " ಎಂದೆ .
ಗುರ್ಜಿ ನಕ್ಕು ಹೇಳಿದರು  - "ಶಂಕ್ರಪ್ಪ ! 'ಕೋರ್ಟಲ್ಲಿ ಗೆದ್ದಾವಾ ಸೋತ , ಸೋತಾವ ಸತ್ತಾ 'ಅಂತ ಗಾದಿ ಮಾತ ಐತಿ  ಕೇಳಿದಿಲ್ಲೊ. ಕೋರ್ಟಿನ ತೀರ್ಪು ಬರೂದರೊಳಗ  ನಾವೆಲ್ಲಾ ಮ್ಯಾಲ ಹೋಗಿರ್ತಿವಿ" ಎಂದರು. ಅವರ್ಯಾಕೆ ಆ  ಮಾತು ಹೇಳಿದರು ಎಂಬುದರ ಅರಿವು ನನಗಿತ್ತು . 'ಊಳುವವನೇ ಹೊಲದ ಮಾಲಕ 'ಎಂಬ ಕಾಯಿದೆ ಬಂದಾಗ , ಕೋರ್ಟಿನ ಕಟ್ಟೆ ಏರಿ ೨೦ ಎಕರೆ ಜಮೀನಿನಲ್ಲಿ ೧೫ ಎಕರೆ ಜಮೀನನ್ನು ಕಳೆದುಕೊಂಡು ಕೈ ಸುಟ್ಟುಕೊಂಡಿದ್ದರು. ವಕೀಲರ  ವಾದಕ್ಕೆ ವರ್ಷಗಟ್ಟಲೆ ಓಡಾಡಿ ಸುಮಾರು ಹಣವನ್ನು ಖರ್ಚು ಮಾಡಿದರೂ ಪ್ರಯೋಜನವಾಗಿರಲಿಲ್ಲ. 
" ಸರಿ! ಹಾಗಾದರೆ ಅವಳಿಗೆ ಏನು ಮಾಡುವದು " ಎಂದು ಕೇಳಿದೆ . 
"ಅವಳ ಹಣೆಬರದಾಗ  ಇದ್ದಂಗ ಆಗತೈತಿ ಬಿಡು, ದೇವರು  ಏನೋ ದಾರಿ  ತೋರಸ್ತಾನ್ "ಎಂದರು.
"ಬರೀ ದೇವರ ಮೇಲೆ ಭಾರ ಹಾಕಿದರೆ ಹೇಗೆ? , ನಾವೂ  ಸಹ ಪ್ರಯತ್ನ ಮಾಡಬೇಕು ತಾನೆ ? ಆ ನರಕದಲ್ಲಿ ಒದ್ದಾಡೋಕ್ಕಿಂತ ವಿವಾಹ  ವಿಚ್ಛೇದನೆ ಪಡೆದು ಅವಳಿಗೆ ಇನ್ನೊಂದು ಗಂಡು  ನೋಡಿ ಮದುವೆ ಮಾಡಿದರ ಹೇಗೆ” ಅಂತ ಕೇಳಿದಕ್ಕೆ , “ನಮ್ಮ ಸಂಪ್ರದಾಯದಲ್ಲಿ ಅದು ಹ್ಯಾಂಗ್ ಸಾಧ್ಯಪ್ಪ “ಎಂದರು.
ಇವರಿಗೆ ಮಗಳ  ಭವಿಷ್ಯಕ್ಕಿಂತ ಸಂಪ್ರದಾಯವೇ ಹೆಚ್ಚಾಗಿದ್ದಿದ್ದನ್ನು ಕೇಳಿ ಬೇಸರವಾಯಿತು 
ಅಪ್ಪ ಹಚ್ಚಿದ  ಆಲದ ಮರ ಅಂತಾ ನೇಣು ಹಾಕೊಳಲಿಕ್ಕೆ ಆಗುತ್ತೇನು ಅಂತ ಹೇಳಿದ್ದಕ್ಕೆ 
"ನೀನು ಪರದೇಶಕ್ಕ ಹೋಗಿದಿಯಲ್ಲ ಅದಕ್ಕ ಹಿಂಗ ಮಾತಾಡಕತಿ "
ಅಂತ ಸಿಟ್ಟು ಮಾಡಿಕೊಂಡರು.
 ಇನ್ನು ಇವರ  ಜೊತೆಗೆ ಮಾತನಾಡಿ ಪ್ರಯೋಜನವಿಲ್ಲವೆಂದು ಅಂದುಕೊಂಡೆ . ರಘುನನ್ನು  ಹೊರಗೆ ಕರೆದುಕೊಂಡು ಬಂದು ಮಾತನಾಡಿದೆ " ನೋಡು ರಘು ಇರುವವಳು ಒಬ್ಬಳೇ ತಂಗಿ , ಹೇಗೋ ಒಂದಿಷ್ಟು ಜಮೀನು ಇದೆ ಅವಳಿಗೂ ಒಂದಿಷ್ಟು ಪಾಲನ್ನು ಕೊಟ್ಟುಬಿಟ್ಟು ಅವರತ್ತೆಯ ಮನೆಯವರಿಗೆ ಬಿಸಾಕಿ ಅವಳನ್ನು ಗಂಡನ ಮನೆಗೆ ಕಳಿಸಿಬಿಡು " ಎಂದೆ . ನನ್ನ ಮಾತಿನಿಂದ ಅವನಿಗೆ ಸಿಟ್ಟು ಬಂತು . " ಏನು ಶಂಕ್ರಣ್ಣ ಹಿಂಗ ಅಂತೀಯಾ ನಮ್ಮದೇನು ದೊಡ್ಡ ಜಾಮೀನು ? ನನಗ ಇರೋದು ಒಂದು ಸಣ್ಣ ನೌಕರಿ , ಆಸ್ತಿ ಸೇರಬೇಕಾಗಿರೋದು ಗಂಡು ಮಕ್ಕಳಿಗೆ ತಾನೆ ? ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ " ಎಂದು ಹೇಳಿ ಮಾತು ಮುಗಿಸಿದ . ಹೆಣ್ಣು ಮಕ್ಕಳಿಗೂ  ಸಮನಾದ ಪಾಲು ಇದೆ ಎಂದು ಹೇಳಬೇಕೆಂದುಕೊಂಡೆ ಆದರೆ ಮನಸು ಬರಲಿಲ್ಲ . ಮಂಜುಳ ಪರಿಸ್ಥಿತಿಯನ್ನು ಕಂಡು ಬೇಜಾರೆನಿಸಿತು . ಸಂಪ್ರದಾಯದ ಜುಟ್ಟು ಹಿಡಿದಿರುವ  ತಂದೆ ಮತ್ತು ಆಸ್ತಿಯನ್ನು ನುಂಗಲು ನಿಂತಿರುವ ಅಣ್ಣನಿಂದ ಅವಳಿಗೆ ಏನೂ ಸಹಾಯ ಸಿಗುವದಿಲ್ಲವೆಂಬುವದು ಖಚಿತವಾಯಿತು . ಸರಿ ಅವಳ ಜೊತೆಗೊಮ್ಮೆ ಮಾತನಾಡಿಬಿಡೋಣವೆಂದು ಅವಳಿದ್ದ ಕಡೆಗೆ ಹೋದೆ. 
ತುಂಬಾ ಸೊರಗಿ  ಹೋಗಿದ್ದಳು. ಮುಖದಲ್ಲಿ ನಿರಾಸೆಯ ಛಾಯೆ ಇತ್ತು . ' ಮುಂದೇನೆಂಬ ' ಚಿಂತೆಯ ಗೆರೆಗಳು ಎದ್ದು ಕಾಣುತ್ತಿದ್ದವು . ನನ್ನನ್ನು ನೋಡಿಯೂ  ಮಾತನಾಡಲಿಲ್ಲ ಆದರೆ ಕಣ್ಣುಗಳು ತೇವಗೊಂಡಿರುವುದು ಮಾತ್ರ ಸ್ಪಷ್ಟವಾಗಿ ಕಾಣುತ್ತಿತ್ತು.  
ನಾನೇ  ಮಾತು ಆರಂಭಿಸಿದೆ 
" ನಾನು ನಿನ್ನನ್ನು ನೋಡಿ ಅಯ್ಯೋ ಅನ್ನಲು ಬಂದಿಲ್ಲ ಬದಲು   ಒಂದೆರಡು  ಒಳ್ಳೆಯ ಮಾತುಗಳನ್ನು ಹೇಳಲು ಬಂದಿರುವೆ " ಎಂದೆ .
"ಶಂಕ್ರಣ್ಣ ! ಒಳ್ಳೆಯದೇನು ಉಳಿದಿದೆ ನನ್ನ ಜೀವನದಲ್ಲಿ ಎಲ್ಲಾ ಹಾಳಾಗಿ ಹೋಗಿದೆ " ಎಂದಳು . 
"ಜೀವನ ನಾವು ನಿರ್ಧರಿಸಿದಂತೆ ಇರುತ್ತೆ. ಹೊರಗೆ ಬಂದು ದಾರಿ  ಹುಡುಕಿದರೆ ಸಾವಿರ ಬಯಲು ದಾರಿಗಳು ತೆರೆದುಕೊಳ್ಳುತ್ತವೆ , ಹೀಗೆ ನಾಲ್ಕು ಗೋಡೆಗಳ ಮಧ್ಯ ಕುಳಿತರೆ ಕತ್ತಲೆ ಮಾತ್ರ ಕಾಣಿಸುತ್ತೆ. ನೀನು ವಿದ್ಯಾವಂತಳು ಬುದ್ಧಿವಂತಳು ಮನಸು ಮಾಡಿದರೆ ಏನನ್ನಾದರೂ ಸಾಧಿಸುವ ಶಕ್ತಿ ನಿನ್ನಲ್ಲಿದೆ. ಈಗ ತಾನೆ ಅರಳಿರುವ ನಿನ್ನ ಬದುಕಿನ ಹೂವನ್ನು ಕಮರಲು ಬಿಡಬೇಡಾ " ಎಂದೆ .
" ಈ ಸಮಾಜ ನನ್ನನ್ನು ಬಿಟ್ಟರೆ ತಾನೆ ?"
ಅವಳ ಮಾತಿನಲ್ಲಿ ರೋಷವಿತ್ತು, ಅಸಹಾಯಕತೆಯ ಅಳುವಿತ್ತು.
" ನಿನ್ನ ಜೀವನವನ್ನು  ರೂಪಿಸಿಕೊಳ್ಳುವ ಶಕ್ತಿ ನಿನಗೆ ಮಾತ್ರ ಇದೆ . ಈ ಸಮಾಜದಲ್ಲಿರುವ ಕಂದಾಚಾರಣೆ , ಕೌಟುಂಬಿಕ ಹಿಂಸೆ, ಸಂಪ್ರದಾಯಗಳ ಉರುಳಿಗೆ ನೀನು ಬಲಿಯಾಗಬಾರದು . ಆ ಕಟ್ಟಳೆಗಳಿಂದ ನೀನು ಹೊರಗೆ ಬರಬೇಕು . ನಿನ್ನಂತೆಯೇ ಈ ಸಮಾಜದ ಕಪಿಮುಷ್ಟಿಯಲ್ಲಿ ಸಿಕ್ಕಿರುವ ಸಾವಿರಾರು ಅಸಹಾಯಕ ಹೆಣ್ಣು ಮಕ್ಕಳಿಗೆ  ನೀನು ಮಾದರಿಯಾಗಬೇಕು " ಎಂದೆ .
"ಹಾಗಾದರೆ ನನಗೇನು ಮಾಡು ಅಂತೀಯಾ ?" ಎಂದಳು .
" ನೀನು ಈ ಹಳ್ಳಿಯಿಂದ ದೂರ ಹೋಗಬೇಕು , ದೇಶ ಬದಲಾಗುತ್ತಿದೆ ಪಟ್ಟಣಗಳಲ್ಲಿ ನಿನ್ನಂತ ವಿದ್ಯಾವಂತರಿಗೆ ಸಾವಿರಾರು ಅವಕಾಶಗಳಿವೆ . ಬಹುತೇಕ ಪಟ್ಟಣಗಳಲ್ಲಿ ಸಮಾಜ ಬದಲಾಗುತ್ತಿದೆ . ಕೆಲಸಕ್ಕೆ ಅರ್ಜಿ ಹಾಕು. ಬೆಂಗಳೂರಿನಲ್ಲಿ ನನ್ನ ಗೆಳೆಯನೊಬ್ಬ ಅಂತಾರಾಷ್ಟ್ರೀಯ ಐಟಿ ಕಂಪನಿಯಲ್ಲಿ   ಕೆಲಸಕ್ಕೆ ಇದ್ದಾನೆ ಬೇಕಾದರೆ ಸಹಾಯ ಮಾಡಲು ಹೇಳುತ್ತೇನೆ" ಎಂದೆ . ಏನನ್ನು ಮಾತನಾಡಲಿಲ್ಲವಾದರೂ 
ಅವಳ ಕಣ್ಣಂಚಿನ ಮೂಲೆಯೊಂದರಲ್ಲಿ ಆಶಾ ಕಿರಣ ಮೂಡಿದಂತೆ ಇತ್ತು. " ನಿಮಗೆ  ಏನು ಮಾಡಲು ಆಗದಿದ್ದರೂ ಅವಳಿಗೆ ಕೆಲಸಕ್ಕೆ ಹೋಗಲು ಅವಕಾಶ ಕೊಡಿ " ಎಂದು ಗುರ್ಜಿಗೆ ಹೇಳಿ ಬಂದಿದ್ದೆ. ನಾಲ್ಕೈದು ವರ್ಷಗಳು ಉರುಳಿ ಹೋಗಿದ್ದವು.ಅವಳ ಸಂಪರ್ಕವೂ ಕಳೆದು ಹೋಗಿತ್ತು.
ಅಪ್ಪ ಅವ್ವ ಇದ್ದಾಗ ಆಗಾಗ್ಯೆ ಊರಿಗೆ ಹೋಗುತ್ತಿದ್ದೆ,  ಅವರು  ಹೋದ ಮೇಲೆ ಕೆಲವು ವರ್ಷಗಳಿಂದ ಊರಿಗೆ ಹೋಗುವದು ನಿಂತೇ ಹೋಗಿದೆ 
ಸರಿ! ಮಂಜು ಇಷ್ಟು ದಿನವಾದ ಮೇಲೆ ಸಿಕ್ಕಿದ್ದು ಸಂತೋಷವಾಗಿತ್ತು. ಅವಳು ಈ  ದೇಶಕ್ಕೆ ಬಂದಿದ್ದು ದೊಡ್ಡ ಸಾಧನೆಯೇ ಎನಿಸಿತ್ತು. ಆದರೆ  ಅರೆಕ್ಷಣಗಳಲ್ಲಿ ಅವಳು ಮಾಯವಾಗುತ್ತಿದ್ದಿದ್ದು ಮಾತ್ರ ಯಕ್ಷಪ್ರಶ್ನೆಯಾಗಿತ್ತು. ಅವಳ ಹತ್ತಿರ  ಫೋನ್ ನಂಬರ್ ಇಸಿದುಕೊಳ್ಳದಿದ್ದಕ್ಕೆ ಬೇಜಾರು ಎನಿಸಿತು . ಅಡ್ರೆಸ್ಸಂತೂ  ಇದೆಯಲ್ಲ ಭೇಟಿಯಾಗೋಣವೆಂದು ಒಂದು ದಿನ ಅವಳ ಮನೆಗೆ ಹೋದೆ.೨೪೮ , ಮೆರ್ನ್ಸ್  ರೋಡ್ ನಮ್ಮ ಮನೆಯಿಂದ ೧೦ ನಿಮಿಷಗಳ ಡ್ರೈವಿಂಗ್ . ಆ ಮನೆಯನ್ನು ತಲುಪಿದಾಗ , ಭಾನುವಾರದ ಸಂಜೆ ನಾಲ್ಕು ಘಂಟೆ ಆಗಿತ್ತು. ಹೊರಗಿನ ಬೆಲ್ ಒತ್ತಿದೆ , ಯಾರೋ  ಇಳಿ ವಯಸ್ಸಿನ ಬಿಳಿಯ ಹೆಣ್ಣು ಮಗಳು  ಬಾಗಿಲು ತೆರೆದಳು . ನನಗೆ ಒಂದು ಸಲ ಮನಸಿನಲ್ಲಿ ಗೊಂದಲವಾಯಿತು . ಸರಿಯಾದ ವಿಳಾಸಕ್ಕೆ ಬಂದಿರುವೆನೋ ಇಲ್ಲವೋ ಎಂದು  ಇನ್ನೊಮ್ಮೆ  ಮನೆಯ  ನಂಬರನ್ನು ಪರೀಕ್ಷಿಸಿದೆ . ವಿಳಾಸ ಸರಿಯಾಗಿಯೇ ಇತ್ತು. ನಾನು  ಹಾಗೆಯೇ ನಿಂತುಕೊಂಡಿದ್ದನ್ನು ನೋಡಿ ಅವಳೇ ಇಂಗ್ಲಿಷಿನಲ್ಲಿ   ಮಾತನಾಡಿಸದಳು 
" ಯಾರು ನೀವು ? ಯಾರು ಬೇಕಾಗಿತ್ತು?"
" ನಾನು  ಡಾಕ್ಟರ್ ಮೇಟಿಯಂತ , ಮಂಜುನ ಊರಿನವನು ಅವಳನ್ನು ಭೇಟಿಯಾಗಲು  ಬಂದಿದ್ದೆ , ಇಲ್ಲಿಯೇ ಹತ್ತಿರದಲ್ಲಿ ಇದ್ದೀನಿ" ಅಂತ  ಇಂಗ್ಲಿಷಿನಲ್ಲಿ ಹೇಳಿದೆ.
ಒಳಗೆ ಬನ್ನಿ ಎಂದು ಸೋಫಾದಲ್ಲಿ ಕೂರಲು ಹೇಳಿದಳು .
ಲಿವಿಂಗ್ ರೂಮಲ್ಲಿ ಬಿಳಿಯ ಹುಡುಗನ ಜೊತೆಗೆ  ಮಂಜುನ ಭಾವಚಿತ್ರವಿತ್ತು . ಅದನ್ನು ನೋಡಿದ ಮೇಲೆ ವಿಳಾಸ ಸರಿಯಾಗಿದೆ ಎಂಬುದು ಖಚಿತವಾಯಿತು. ಒಳಗೆ  ಹೋದ ಅವಳು ಇನ್ನಾರನ್ನೋ ಕರೆಯುತ್ತಿದ್ದಳು 
ಅಷ್ಟರಲ್ಲಿಯೇ ಇಳಿವಯಸ್ಸಿನ ಬಿಳಿ ಗಂಡಸರೊಬ್ಬರು ಮಹಡಿಯಿಂದ ಕೆಳಗೆ ಬಂದರು . 
"ಹಲೋ" ಎಂದೆ 
ಅವರೂ ತಿರುಗಿ "ಹಲೋ"ಎಂದರು.
ನಾನು ಮಂಜುನನ್ನು ನೋಡಲು ಬಂದಿರುವೆ ಅವಳನ್ನು ಸ್ವಲ್ಪ ಕರೆಯುತ್ತೀರಾ ಎಂದು ಇಂಗ್ಲೀಷಿನಲ್ಲಿ ಕೇಳಿದೆ 
" ಅವಳು ಇಲ್ಲಿ ಇಲ್ಲ " ಎಂದರು.
ನಾನು ಇನ್ನೊಮ್ಮೆ ‘ಅವಳ್ಯಾರು ಎಂಬುವಂತೆ’ 
ಅವಳ ಭಾವಚಿತ್ರದತ್ತ ನೋಡಿದೆ 
"ಅವನು ನನ್ನ ಮಗ ಮತ್ತು ಅವಳು ನನ್ನ ಸೊಸೆ , ಇಬ್ಬರೂ ಈ ಲೋಕದಲ್ಲಿ ಇಲ್ಲ . ಬೋಥ್ ಆರ್ ಡೆಡ್ "ಎಂದರು .
ನನಗೆ ದೊಡ್ಡ ಆಗಾಧವಾಯಿತು . ಅವರು ಹೇಳಿದ್ದನ್ನು ನಂಬಲು  ನನ್ನ ಕಿವಿಗಳು ಒಪ್ಪಲಿಲ್ಲ. ಅವರನ್ನು ಇನ್ನೇನೋ ಕೇಳಬೇಕೆನಿಸಿತು. ಆದರೆ ಅವರ ಭಾವದಿಂದ ಗೊತ್ತಾಯಿತು , ಅವರಿಗೆ ಅದರ ಬಗ್ಗೆ ಮಾತನಾಡಲು ಇಷ್ಟ ಇಲ್ಲವೆಂದು . ಮಾತನಾಡಿದ್ದಕ್ಕೆ ಧನ್ಯವಾದಗಳನ್ನು ಹೇಳಿ ಭಾರವಾದ ಹೃದಯದಿಂದ ಹೊರಗೆ ಬಂದೆ .
ಮನಸು ಕೇಳತೊಡಗಿತು - ' ಮಂಜು ಈ ಲೋಕದಲ್ಲಿ ಇಲ್ಲವೆಂದರೆ ನನಗೆ ಭೇಟಿಯಾಗಿ ಮಾತನಾಡಿದವಳು ಯಾರು ?  ಅವಳ ತದ್ರೂಪದಂತೆ ಇದ್ದಿದ್ದವಳು ಯಾರು ? ಈ ಮನೆಯ ವಿಳಾಸ ಕೊಟ್ಟವರು ಯಾರು ?  ಇವಳು ಯಾರು? ವೊ ಕೌನ್ ಥಿ ?’

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ )


~ ಶಿವ ಮೇಟಿ

ಗಾಯತ್ರಿ ಸೂಕ್ತ

ಗಾಯತ್ರಿ ಸೂಕ್ತ – ದ ರಾ ಬೇಂದ್ರೆ
ಸಂಯೋಜನೆ, ಗಾಯನ : ಅಮಿತಾ ರವಿಕಿರಣ್