ಬರ್ರಿ ಬರ್ರಿ, ಬೆಳ್ ಬೆಳಿಗ್ಗೆ ಫ಼್ರೆಶ್ ಆದ್ರಿ ಅಲ್ಲ. ಅಡುಗೆಮನೆಗೆ ಹೋಗಿ ನೋಡೊಣಾ, ಇವತ್ತೇನು ತಿಂಡಿಗೆ ಅಂತ? ಬರೇ ಗದ್ಯ ಸಾಕಾಯ್ತು ಅಂತ ಮುರಳಿ ಹತ್ವಾರ್ ಅವರು ಬಿಸಿ ಬಿಸಿ ಹಬೆಯಾಡೋ ಪದ್ಯ ಬಡಿಸಿದರ, ವೀರೇಶ ಪಾಟೀಲರು ತಮ್ಮ ಗೌಡತಿ ಸಲುವಾಗಿ ತಮ್ಮ ಕೈಯಾರೆ ಮಾಡಿದ ಪೇಶಲ್ ಉಂಡಿ ಹಂಚಲಿಕ್ಕೆ ತಂದಾರ! ಬರ್ರಿ, ಇಲ್ಲೇ ಥಣ್ಣಗ ಕೂತು ಸವಿದು, ಒಂದ್ ಹನಿ ಬಿಸಿ ಕಾಫಿ ಗುಟುಕು ಹಾಕ್ಕೊಂಡು ಹೋಗೋಣಂತ. ಆಮ್ಯಾಲೆ ನಿಮ್ಮ ನಿಮ್ಮ ಪೆನ್ನು-ಪೇಪರು ತೊಗೊಂಡು ನಿಮ್ಮ ಮನ್ಯಾಗಿನ ಅಡಿಗಿಮನಿ ವಿಶೇಷಗಳ ಪಟ್ಣ ಕಟ್ಟಿ ನಮಗ ಕಳಸವಂತ್ರ್ಯಂತ! ಸರೇನಾ? ಹುಂ ಅನ್ನರಿ ಮತ್ತ! – ಎಲ್ಲೆನ್ ಗುಡೂರ್ (ಸಂ.)
ತಿನುಗವನಗಳು ಅರ್ಥಾತ್ ದಿ ಡೆಲೆಕ್ಟಬಲ್ ಪೋಯೆಮ್ಸ್ – ಮುರಳಿ ಹತ್ವಾರ್
1. ಇಡ್ಲಿಗೆ ಸೋತ ಮನ........
ಚಟ್ನಿ-ಸಾಂಬಾರು ಮೇಳದಲ್ಲಿ
ಹರಿಯುವ ಬೆಣ್ಣೆಯ ರಾಗದಲ್ಲಿ
ಮರೆತ ನಿನ್ನೆಗಳ ಮತ್ತೆ ಹಾಡಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
ಬೆಳೆದೂರಿನ ಬೀದಿ-ಬೀದಿಗಳಲ್ಲಿ
ಹೋಟೆಲು, ಕ್ಯಾಂಟೀನು, ಗಾಡಿಗಳಲಿ
ನಿತ್ಯ ಉಣಿಸಿದ ಕೈಗಳ ನೆನಪಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
ಹಣ್ಣೆಲೆಗಳ ನೆಲಕೊಪ್ಪಿಸಿದ ಬೋಳು
ಮರಗಳ, ಕೊರೆಕೊರೆವ ಚಳಿಯೂರಿನ
ಮನೆಯೊಳಗೆ ಮನವ ಬೆಚ್ಚಗಾಗಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
ಕೆಲಸಗಳ ಬಿಸಿಯೇರಿ ಬೆವೆತು
ಮೌನದಾಳಕೆ ಇಳಿದ ಮನವನೆತ್ತಿ
ತಣಿ-ತಣಿಸಿ ಮತ್ತೆ ಕುಣಿಕುಣಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
ಬಿಸಿ ತುಪ್ಪದೊಂದಿಗೆ ಬೆರೆತು
ಹಾಲುಹಲ್ಲಿನ ಬಾಯಿ ತುಂಬುತ
ನಗುನಗುವ ನಾಳೆಯ ಇಣುಕಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
******
2. ಹೀಗೊಂದು ಭೋಜನ
ಅನುಭವದ ತಟ್ಟೆಗಳಲಿ
ಅಕ್ಷರಗಳ ಅನ್ನವರಳಿ
ವಿಚಾರಗಳ ಬಿಸಿ ಸಾರು
ನಯದ ತುಪ್ಪದೆ ಬೆರೆಯೆ,
ಮಾತದು ಒಗ್ಗರಣೆಯ ಪಲ್ಯ!
ರಸವ ಕೆರಳಿಸುವ ಹುಳಿಯ
ಹೋಳುಗಳೊಂದು ಕಡೆ
ಮಣಿಸಿ ತಣಿಸುವ ತಂಬುಳಿಯ
ಹರಿವಿನ್ನೊಂದು ಕಡೆ
ಸುರಿಸುರಿಯೆ ಸಾಮರಸ್ಯದ ಸರಸ!
ಮನದಡಿಯ ಕಾಯಿ-ಬೆಲ್ಲ
ತುಟಿ ತಲುಪೆ, ಚಿರೋಟಿ-ಪೇಣಿ!
ಕೇಳುವ ಮನಸುಗಳಿಗೆ
ಸಿಹಿಹಾಲಲದ್ದಿದ ಮಂಡಿಗೆ;
ಉಂಡೆ, ಪಾಯಸ, ಹೋಳಿಗೆ!
ಕಡೆಗುಳಿವುದು ಕಡೆಕಡೆದ
ಮಜ್ಜಿಗೆಯ ಒಳಗಿಳಿದ ಶುಂಠಿ
ಎಳೆ-ಎಳೆದ ಉದರ ವೀಣೆಯ
ಮಾತಿನಾಚೆಯ ಮಧುರ ರಾಗ.
ಏರಿಳಿವ ರಾಗದೊಳೆಲ್ಲ ಸರಾಗ!
******
3. Haiku
ಬಿಸಿ ಕಾಫಿ:
ಗುಟುಕು ಗುಟುಕಲಿ
ತಂಗಾಳಿ!
- ಮುರಳಿ ಹತ್ವಾರ್
**********************************************************************
ತೀರದಿದ್ದರೂ ಮರೆಯದ ಬೈಕೆಯ ಉಂಡಿ – ವೀರೇಶ ಪಾಟೀಲ
ಅವತ್ತು ಮುಂಜಾನೆ ವಾರದ ಕೊನೀ ನೈಟ್ ಶಿಫ್ಟ್ ಮುಗಿಸಿಕೊಂಡು ಮನೆಗೆ ಬಂದಾಗ ಮೂರು ದಿನ ರಜೆ ಇರೋದನ್ನ ನೆನಸಿಕೊಂಡೂ ಏನೋ? ನಿದ್ದಿಗಿ ಅಡ್ಡಾಗದೆ ಏನಾದರು ಅಡುಗೆ ಮಾಡೊ ಯೋಚನೆ ಮಾಡಿದೆ. ಶೇಂಗಾ ಉಂಡಿ ಮಾಡೋನು ಅಂತ ತಯಾರಾದೆ. ಹನ್ನೆರಡು ತಾಸು ಶಿಫ್ಟಿನಿಂದ ದಣಿದ ದೇಹ ಬೆಲ್ಲದ ಆಣ ತೆಗೆದು ವಿಧಿವತ್ತಾಗಿ ಉಂಡಿ ಮಾಡೋ ಗೊಂದಲಕ್ಕೆ ಹೋಗದೆ ಒಂದು ಶಾರ್ಟ್ ಕಟ್ ಯೋಚನೆ ಮಾಡತು .
ಇದು ಫಾಸ್ಟ್ ಫುಡ್ ಶೇಂಗಾ ಉಂಡಿ ಆಕ್ಕತಿ ಅಂತ ನನಗ ನಾನ ಶಭಾಷಗಿರಿ ಹೇಳಕೊಂಡು ಉಂಡಿ ಮಾಡಾಕ ಹತ್ತಿದ್ಯ. ಭಡಾ ಭಡಾ ಬೆಲ್ಲದ ಕಣ್ಣಿ ವಡದು, ಶೇಂಗಾ ಹುಡಿಕಿ, ಎರಡುನೂ ಮಿಕ್ಸರ್ ಜಾರಿಗೆ ಹಾಕಿ, ಒಂದಿಷ್ಟು ತುಪ್ಪ ಸುರಿದು ಬರ್ರನೆ ಮಿಕ್ಸರ್ ತಿರ್ಗಿಸಿದೆ. ಜಾರಿನಿಂದ ಬೆಲ್ಲ ಮತ್ತ ತುಪ್ಪದ ಅಂಟನ ಮೆತ್ತಗೊಂಡ ಸಣ್ಣ ಬ್ಯಾಳ್ಯಾಗಿದ್ದ ಶೇಂಗಾ ಮಿಶ್ರಣ ತಗದು ಎರಡೂ ಅಂಗೈಯ್ಯಾಗ ದುಂಡಗ ಮಾಡಿ ತಾಟನ್ಯಾಗ ಇಟ್ಟೆ, ಒಂದಿಷ್ಟು ದುಂಡಗ ಆದ್ವು, ಆದ್ರ ಬಹುತೇಕ ಸೊಟ್ಟ-ಡೊಂಕ ಆಗಿದ್ವು. ಏನಾದ್ರೇನಂತ ಫಾಸ್ಟ್ ಫುಡ್ ಸ್ಟೈಲ್ನ್ಯಾಗ ಉಂಡಿ ಮಾಡೇನಿ ಅನ್ನೋ ವಣ ಅಹಂಕಾರದಾಗ ಆಕಾರದ ಕೊರತೆ ಏನು ದೊಡ್ಡದ ಅನ್ನಿಸಲಿಲ್ಲ.
ಆ ಹುಸಿ ಧೀಮಾಕಿಗೆ ಕಾರಣ ಏನಂದ್ರ? ನಾನೇನು ಅಡುಗೆ ಪ್ರವೀಣನಲ್ಲ. ಮನೆ ಮತ್ತು ಊರಿಂದ ದೂರದ ಪರದೇಶದಲ್ಲಿ ಕೆಲವು ವರ್ಷಾ ಒಬ್ಬಂಟಿಯಾಗಿದ್ದಿದ್ದರಿಂದ ಬ್ಯಾರೆ ದಾರಿ ಇಲ್ಲದ ಚೂರು-ಪಾರು ಅಡುಗಿ ಕಲ್ತಿದ್ದೆ; ಶಾವಗಿ ಉಪ್ಪಿಟ್ಟು, ಒಗ್ಗರಿಣಿ ಮಂಡಕ್ಕಿ, ಅವಲಕ್ಕಿ, ಅನ್ನಾ, ಸಾರು, ದ್ವಾಸಿ, ಇಡ್ಲಿ, ಚಟ್ನಿ ಮಾಡೋದು ಒಂದ್ಚೂರು ಅಭ್ಯಾಸಾಗಿತ್ತು. ಜೊತಿಗೆ ನನ್ನ ನಾಲಿಗೆ ಚಟಕ್ಕೆ ಬಗ್ಗಿ ಮಿರ್ಚಿ ಮತ್ತ ಹತ್ತಿಕಾಯಿ ಬಜಿ ಮಾಡಾಕ ಅವ್ವನ ಹತ್ರ ಸಣ್ಣವಿದ್ದಾಗ ಕಲ್ತಿದ್ದೆ. ಆದ್ರ ಸಿಹಿ ಅಡಗಿಗೂ ನಮಗೂ ಅಷ್ಟಕ್ಕ ಅಷ್ಟರಿ, ನಾ ಸಿಹಿ ಅಡಿಗೀ ಮಾಡಿದವನ ಅಲ್ರಿ. ಏನೋ ಹಬ್ಬ ಗಿಬ್ಬ ಇದ್ದಾಗ ಅವ್ವ ಫೋನ್ನ್ಯಾಗ ಜೋರ್ ಮಾಡಿ ಹೇಳಿದ್ರ ರೆಡಿಮೇಡ್ ಶಾವಗಿ ಹುಗ್ಗಿ ಮಿಕ್ಸ್ ಹಾಕಿ ಎರಡ ತುತ್ತು ಮಾಡಿದ್ದ ಐತಿ, ಇಲ್ಲಂದ್ರ ಸೀ-ಗೀ ನಮಗ ಆಗೇ ಬರದಿಲ್ರಿ.
ಹಂಗಂದ್ರ ಅವತ್ತ್ಯಾಕ ಉಂಡಿ ಮಾಡಿದ್ಯಾ ಅಂತೀರೇನು? ನನ್ನ ಹೆಂಡತಿ ಹೊಟ್ಟಿಲೆ ಇದ್ಲು, ಎರಡ ದಿನದಹಿಂದ ಶೇಂಗಾ ಉಂಡಿ ತಿನ್ನಂಗಾಗೇತಿ ಅಂತ ಹಂಗ ಮಾತ್ನ್ಯಾಗ ಅಂದಿದ್ಲ. ನನ್ನ ಕಟ್ಟಗೊಂಡು ಹೊರದೇಶಕ್ಕ ಬಂದು ಆಗಿನ್ನೂ ಮೊದಲನೇ ಕೆಲಸ ಶುರು ಮಾಡಿದ್ಲು ಮ್ಯಾಲೆ ಮನೆವರೆಲ್ಲರಿಂದ ದೂರ ಇದ್ದ ಆಕಿ ಹೇಳಿದ ಬೈಕೆನಾ ನಾನs ಹೆಂಗರ ತೀರಿಸಬೇಕಲ್ಲ ಅಂತ ಶೇಂಗಾ ಉಂಡಿ ಮಾಡೋ ಸಾಹಸಕ್ಕ ಕೈ ಹಾಕಿದ್ರೀ.
ನಾ ಮುಂಜಾನೆ ಮನಿಗೆ ಬರೋದ್ರಾಗ ಅಕಿ ಡೇ ಶಿಫ್ಟ್ ಗೆ ಹೋಗಿದ್ಲು. ಇದ ಛೋಲೋ ಅವಕಾಶ, ಅಕಿಗೆ ಸರಪ್ರೈಸ್ ಕೊಡೋಣಾಂತ ಈ ಕಸರತ್ತು ನಡಿದಿತ್ತು. ಸಂಜಿಕ ನನ್ನ ಗೌಡಶಾನಿ ಮನಿಗೆ ಬಂದ್ಲು. ನಾನು ಸುಸ್ತಾಗಿ ಸೋತಿದ್ದ ಮೊಕಾದಾಗ ನಕ್ಕೊಂತ ಕೆಲಸ ಹೆಂಗಿತ್ತು ಅಂತ ವಿಚಾರಸ್ಕೊಂತ ಅಕಿ ಕೈಕಾಲು ಮುಖ ತೊಕ್ಕೊಂಡು ಬಂದಕೂಡಲೇ ತಾಟಿನ್ಯಾಗ ನಾಕ ಉಂಡಿ ಇಟ್ಟು ಕೊಟ್ರೀ. ನನ್ನ ಸೊಟ್ಟಾ- ಡೊಂಕ ಉಂಡಿ ನೋಡಿ ಇನ್ನೇನು ಕೂಸು ಹೊರಗ ಬರಾಕ ದಿನ ಎಣಸತಿದ್ದ ನನ್ನ ಗೌಡಶಾನಿ ಕೆಲಸದ ಸುಸ್ತನ್ನೆಲ್ಲಾ ಮರತು ಸಣ್ಣದೊಂದು ನಗೆ ಬೀರಿ “ಅಯ್ಯೋ ರೀ ನಾ ಸುಮ್ನ ಅಂದಿದ್ದು, ನೀವ್ ಉಂಡಿ ಮಾಡಾಕ ಟ್ರೈ ಮಾಡಿದ್ರೇನು?” ಅಂದ್ಲು. ನಾ ಅಗ್ದಿ ಖುಶಿಲೆ “ತಿಂದರ ತಿನ್ನ ನೀನು” ಅಂದೇ. ಗೌಡಶಾನಿ ಒಂದು ತುತ್ತು ತಿಂದಕಿನ ಏನು ಹೇಳ್ಬಕು ಅಂತ ತಿಳಿದನ ಮುಖದಾಗ ನಗು ಆಶ್ಚರ್ಯ ಎಲ್ಲಾ ಒಮ್ಮಿಗೇ ತುಂಬಕೊಂಡು ಎದ್ದು, ಬಂದಿದ್ದ ಭಾವನೆ ತಡ್ಕೊಂಡು “ಶೇಂಗಾ ಎಲ್ಲಿವು ಹಾಕಿದ್ರಿ?” ಅಂತ ಕೇಳಿದ್ಲು. ನಾ ತಡಾ ಮಾಡದ, ಕೆಂಪು ಮುಚ್ಚಳದ ಬಾಟಲ್ಯನವು ಅಂದ್ಯ. “ರೀ, ಅವು ಉಪ್ಪು ಹಾಕಿ ಹುರಿದಿರೋ ಶೇಂಗಾ ಬ್ಯಾಳಿ!” ಅಂತ ಜೋರಾಗಿ ನಕ್ಕಳು… ಹಂಗ ನಕ್ಕೋತನ ಕೈಯಾಗಿದ್ದ ತನ್ನ ಗೌಡಪ್ಪ ಮಾಡಿದ್ದ ಶೇಂಗಾ ಉಂಡಿನ ತಿಂದು ಮುಗ್ಸಿದ್ಲು. ಇಬ್ರು ನನ್ನ ನಿದ್ದಿ ಗುಂಗನ್ಯಾಗ ಮಾಡಿದ್ದ ಎಡವಟ್ಟು ಉಂಡಿ ಕೆಲ್ಸಕ್ಕ ಬಿದ್ದು ಬಿದ್ದು ನಕ್ವಿ. ಈ ಪ್ರಸಂಗಾನ ಮಾರನೇದಿನ ಭಾರತದಾಗಿದ್ದ ನನ್ನ ಅವ್ವಗ ಫೋನ್ ಮಾಡಿ ವಿವರಿಸಿ ಹೇಳಿದೆ; ಅಕಿನೂ ಪುಸುಕ್ಕನ ನಕ್ಕಿದ್ಲು.
ಏನಿದು ಉಂಡಿ ಮಾಡಿದ್ಮ್ಯಾಲೆ ತಿಂದು ನೋಡಲಿಲ್ಲನು ಅಂತ ಯೋಚನಿ ಮಾಡಿದ್ರೇನು? ನಂಗ ಅಡುಗೆ ಮಾಡುವಾಗ ರುಚಿ ನೋಡೋ ರೂಢಿನ ಇಲ್ರಿ. ಈಗೂ ನಾ ಅಡುಗಿ ಮಾಡಿದ್ರ ಗೌಡಶಾನಿ ಇದ್ರ ರುಚಿ ನೋಡು ಅಂತ ಹೇಳ್ತಿನಿ , ಯಾವಾಗ್ಲೂ ನನ್ನ ಅಡಿಗಿಗೆ ಉಪ್ಪು ಕಡಿಮಿ ಅಂತ ಅಕಿನ ಮತ್ತ ಉಪ್ಪು ಹಾಕ್ತಾಳ ಆದ್ರ ಅವತ್ತ ಉಪ್ಪು ಎಷ್ಟು ಇರಬಾರದ ಉಂಡ್ಯಾಗ ಉಪ್ಪ ಹೆಚ್ಚಾಗಿತ್ರಿ. ಮರದಿನ ನಮ್ಮ ಹತ್ತಿರದ ಬೀಗರೆಲ್ಲ ಫೋನ ಮಾಡಿ ಕೇಳಿ ನಗುವಂಗ ಆತ್ರಿ ಕಥಿ.
ಹಿಂಗ ನನ್ನ ಫಾಸ್ಟ್ ಫುಡ್ ಶೇಂಗಾ ಉಂಡಿ ಸಾಹಸ ಮನ್ಯಾಗ ನಗೆಪಾಟಲಾತು, ಆದ್ರ ಆ ನಗು ಭಾವಪೂರ್ಣವಾಗಿತ್ರಿ. ಅವ್ವನ ನಗುವಿನ ನಡುವೆ ದೂರ ಇರದಕ ಸೋಸಿ ಕೇಳಿದ್ದ ಸಣ್ಣ ಉಂಡಿ ನಮಗ ಮಾಡಕಾಗವಲ್ದು ಅನ್ನೋ ಸಂಕಟ ಮತ್ತ ಮಗ ಸೋಸಿ ನಡವಿನ ಅನ್ಯೂನ್ಯತೆಗೆ ಖುಷಿ ಇತ್ತು. ಗೌಡಶಾನಿ ಮತ್ತು ನನ್ನ ನಗುವಿನಲ್ಲಿ ಪ್ರೀತಿ ತುಂಬಿತ್ತು. ಹಂಗ ಮನೆಯಿಂದ ದೂರ ಅದಿವಿ ಅನ್ನೋ ಸಂಗತಿನು ನೆನಪಾತು. ಅದೇ ನಗುವಿನಲ್ಲೇ ಹೊಟ್ಟೇಲಿದ್ದ ಕೂಸು ಮಿಸುಕಾಡಿದ್ದ ಮುಟ್ಟಿ ಅನುಭವಿಸಿ ಇಬ್ಬರ ಖುಷಿ ಖುಷಿಯ ಹನಿ ಕಣ್ಣಿಂದ ಜಾರಿದ್ವು. ಈಗೂ ಮನ್ಯಾಗ ನನ್ನ ಮಗಳಿಗೆ ಆ ಕಥಿ ಹೇಳಿ ಹೇಳಿ ಗೌಡಶಾನಿ ನಗೋದು ನಡೀತಾನ ಇರತೈತ್ರಿ. ಅಂದು ಬೈಕೆನಾ ತಿರ್ಸತೋ ಇಲ್ವೋ ಆದ್ರೆ ಅದರ ಆ ಫಾಸ್ಟ್-ಫುಡ್ ರುಚಿನಾ ಇವತ್ತಿಗೂ ಇದಕ್ಕೆಲ್ಲ ಕಾರಣ ಆದ ಮಗಳೊಂದಿಗೆ ಇವತ್ತಿಗೂ ಸವಿತಿದ್ದಿವ್ರಿ.
“ನೀ ತಿಂದಿದ್ದಿ ಪೇಡೆ, ಜಿಲೇಬಿ, ಕರ್ಚಿಕಾಯಿ ಇನ್ನು ನಾನಾ ತಿಂಡಿ
ಆದ್ರ ಬೈಕ್ಯಾಗಿ ಕಾಡಿದ್ದು ಊರ ಶೇಂಗಾ ಉಂಡಿ.
ನಾ ಆ ಬೈಕೆನಾ ತೀರ್ಸೋ ಸಾಹಸಕ್ಕಿಳಿದ ಭೂಪ
ಅರ್ಧ ನಿದ್ದ್ಯಾಗ ಮರ್ತಾ ಬಿಟ್ಟ್ಯಾ ಶೇಂಗಾದಾಗಿನ ಉಪ್ಪ
ಎಂತ ನಗೆಪಾಟಲು, ಈ ಉಪ್ಪಿನ ಶೇಂಗಾದುಂಡಿ ಸಾಹಸ
ಉಪ್ಪಿನ ರುಚಿ ಸರಿದ್ಮ್ಯಾಲೆ ಉಳಿದಿದ್ದು ....
ಆ ನಗೆಯ ಮೀರಿ ಮನದ ಭಾವನೆಗಳ ನೆನಪಿಸೋ ಸಣ್ಣ ಮಂದಹಾಸ.
ಅದನ್ನ ಇದಕ್ಕೆಲ್ಲ ಕಾರಣ ಆದ ಮಗಳೊಂದಿಗೆ ಇವತ್ತಿಗೂ ಸವಿತಿದ್ದಿವ್ರಿ….”
– ವೀರೇಶ್ ಕೆ ಪಾಟೀಲ್
***************************************************************************