‘ನಿರ್ದಯಿ’- ಶ್ರೀವತ್ಸ ದೇಸಾಯಿಯವರ ಭಾವಗೀತೆ

ಪೀಠಿಕೆ:
ನವರಸಗಳಲ್ಲಿ ಒಂದು ಶೃಂಗಾರ. ಅದರ ಒಂದು ಪ್ರಕಾರ ವಿರಹ ಎನ್ನುತ್ತಾರೆ ಕೆಲವರು.
ಪ್ರೇಮ-ಪ್ರಣಯ ಇದ್ದಲ್ಲಿ ವಿರಹ ಇರಲೇ ಬೇಕಲ್ಲವೆ?
ಇಂಗ್ಲಿಷಿನಲ್ಲಿ ಒಂದು ಮಾತು ಇದೆ: Absence makes the heart grow fonder.
ಅಗಲುವಿಕೆಯಿಂದ ಎದೆ ಇನ್ನೂ ತುಂಬಿ ಬರುತ್ತದೆ, ಅಂತ.

ಈ ಹಾಡಿನ ಸನ್ನಿವೇಶ ಹೀಗಿದೆ:
ಇಲ್ಲಿ ಪ್ರೇಮಿಗಳು ಅಗಲಿದ್ದಾರೆ. ಆಕೆ ದೂರ ಸರಿದಿದ್ದಾಳೆ; ಬಲು ದೂರ. ಆಕೆ ಯಾವ ಊರಿಗೆ ಹೋಗಿರಬಹುದು?
ಆತ ದೂರುತ್ತ ಪ್ರಶ್ನಿಸುತ್ತಾನೆ: ನೀನಲ್ಲವೇ ನಿರ್ದಯಿ?

(ಕನ್ನಡ ಬಳಗ, ಯು.ಕೆ ದ ಯುಗಾದಿ ಸಂಭ್ರಮದಲ್ಲಿ ಬಿಡುಗಡೆಯಾದ ‘ಪ್ರೀತಿಯೆಂಬ ಚುಂಬಕ’ ಧ್ವನಿಮುದ್ರಿಕೆ (CD) ಯಲ್ಲಿ ಕೆಳಗಿನ ಕವನ ಸೇರ್ಪಡೆಯಾಗಿದೆ)

                               -ಶ್ರೀವತ್ಸ ದೇಸಾಯಿ

nirdayi-1

ನಿರ್ದಯಿ

ನಾನಲ್ಲ, ನೀನಲ್ಲವೆ ನಿರ್ದಯಿ?
ನನ್ನನ್ನೇ ನಿನಗಿತ್ತೆ ನನ್ನವಳೆಂದೆಣಿಸಿ
ನನ್ನಲ್ಲೀಗ ಬರೀ ನೆನಪುಗಳ ರಾಶಿ
ನನ್ನ ತಪ್ಪಿದ್ದರೆ ಮರಳಿ ಬಾ ಕ್ಷಮಿಸಿ

ನಿಮ್ಮೂರಲ್ಲಿ ಹುಟ್ಟು-ಸಾವಿಲ್ಲಂತೆ
ಎಲ್ಲೆಲ್ಲೂ ಹಸಿರಂತೆ, ಅದು ನಂದನವಂತೆ
ಅದಕ್ಕೆ ತಾನೆ ನೀನು ನನ್ನನ್ನು ಮರೆತೆ?
ನನ್ನ ಬಳಿಯಿಲ್ಲ ಸತ್ತ ಕನಸುಗಳಿಗೆ ಕೊರತೆ!

ಕೇಳುತಿದೆ ಇಡದ ಹೆಜ್ಜೆಗಳ ಸದ್ದು
ಕಾಡುತಿವೆ ಸತತ ನೆನಪುಗಳು ಎದ್ದು
ಕಳಿಸಿಲ್ವೆ ಹೋದಾಗ ಕೊಟ್ಟು ಮುತ್ತು
ನನ್ನನ್ನಳಿಸಿದ ನೀನಲ್ಲವೆ ನಿರ್ದಯಿ?

-ಶ್ರೀವತ್ಸ ದೇಸಾಯಿ