ಮೈಸೂರು ಒಡೆಯರ ರಾಜವಂಶ ಮತ್ತು ಅಲುಮೇಲಮ್ಮನ ಶಾಪ

 

ಮೈಸೂರನ್ನು ಆಳಿದ ದೊರೆಗಳ ಬಗ್ಗೆ, ಅವರ ವ೦ಶ ಬೆಳೆದು ಬ೦ದ ಬಗ್ಗೆ ಮತ್ತು ಯಾವ ದೊರೆಗಳ ಕಾಲದಲ್ಲಿ ಈ ಪ್ರಾ೦ತ ಯಾವ ರೀತಿಯ ಬದಲಾವಣೆಗಳನ್ನು ಕ೦ಡಿತು ಎನ್ನುವುದರ ಬಗ್ಗೆ ತಿಳಿದಿರುವುದು ಕಡಿಮೆ ಎ೦ದು ನನ್ನ ಅಭಿಪ್ರಾಯ. ಅನಿವಾಸಿ ತಾಣದ ನುರಿತ ಲೇಖಕ ರಾಮಮೂರ್ತಿಯವರು ಇದನ್ನು ಆಳವಾಗಿ ಅಭ್ಯಾಸ ಮಾಡಿ, ಸ೦ಕ್ಷಿಪ್ತವಾಗಿ ನಮ್ಮ ಮು೦ದಿಟ್ಟಿದ್ದಾರೆ. ಕರ್ನಾಟಕದ ಜನತೆಯೆಲ್ಲರೂ ತಿಳಿದುಕೊಳ್ಳಬೇಕಾಗಿರುವ ವಿಷಯ ಈ ಲೇಖನದಲ್ಲಿದೆ. ಅಲುಮೇಲಮ್ಮನ ಶಾಪದ ಬಗ್ಗೆ ಕೇಳಿರಬಹುದು, ಅದರ ಕಾರಣದ ಕತೆ ಮತ್ತು ಪರಿಣಾಮದ ವಿವರ ಈ ಲೇಖನಕ್ಕೆ ಪೂರಕವಾಗಿದೆ. ಓದಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ – ಸ೦

ಮೈಸೂರು ಒಡೆಯರ ರಾಜ್ಯವಂಶ ಮತ್ತು ಅಲುಮೇಲಮ್ಮನ ಶಾಪ

ಮೈಸೂರಿನ ಒಡೆಯರು ತಾಳಿಕೋಟೆ ಅಥವಾ ರಕ್ಕಸತಂಗಡಿ ಯುದ್ಧವಾದ ( ಜನವರಿ ೧೫೬೫ )ನಂತರ ವಿಜಯನಗರದ ಸಂಪ್ರದಾಯವನ್ನು  ನಡೆಸಿಕೊಂಡು ಬಂದರು. ೧೫ನೇ ಶತಮಾನದಲ್ಲಿ ಇವರ ಪೂರ್ವಜರು ದಕ್ಷಿಣ ಮೈಸೂರಿನಲ್ಲಿ ನೆಲೆಊರಿ   ಸುಮಾರು ೫೦೦ ವರ್ಷ ಆಳಿದರು. ೧೩೯೯ ರಲ್ಲಿ ಯಾದವ ವಂಶದ ಯದುರಾಯ  ಮತ್ತು ಕೃಷ್ಣರಾಯ ಎಂಬ ಸಹೋದರರು ಈ ವಂಶದ  ಮೂಲ ಪುರುಷರು ಅನ್ನುವುದುಕ್ಕೆ ಸಾಕಷ್ಟು ಮಾಹಿತಿ ಇದೆಯಂದು ಅನೇಕ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಸಣ್ಣ ಪಾಳೇಪಟ್ಟಿನಿಂದ ಶುರುವಾದದ್ದನ್ನು ಯದುರಾಯರು ತಮ್ಮ  ೨೪ ವರ್ಷದ ಆಡಳಿತದಲ್ಲಿ ರಾಜ್ಯವನ್ನಾಗಿ ವಿಸ್ತರಿಸಿದರು . ಇವರ ಕಾಲದಲ್ಲಿ  ಬೆಟ್ಟದ ಮೇಲೆ  ಯೋಗ ನರಸಿಂಹನ ದೇವಸ್ಥಾನದಲ್ಲಿ ನಾಲಕ್ಕು ಕೋಟೆಗಳನ್ನು ಕಟ್ಟಿ ಈ ಊರಿಗೆ “ಮೇಲುಕೋಟೆ” ಅಂತ ನಾಮಕರಣವಾಯಿತು. ಹಾಗೆಯೆ ಮೈಸೂರಿನ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೂ ಅನೇಕ  ಸುಧಾರಣೆಗಳನ್ನು ಮಾಡಿದರು.  ಯದುರಾಯರ  ನಂತರ ೧೫ ವರ್ಷದ ಹಿರಿಯಮಗ ಬೆಟ್ಟದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದು ೩೬ ವರ್ಷ  ರಾಜ್ಯಭಾರ ಮಾಡಿದರು . ಈ ಅರಸರು ಹಿಂದೂ ಧರ್ಮದ ವಿವಿಧ ಶಾಖೆಗಳನ್ನು ಬಹಳ ಉದಾರತೆಯಿ೦ದ ಬೆಳಸಿಕೊಂಡು ಬಂದರು.

 

Jayachamaraja Wadiyar

ತಿಮ್ಮರಾಜ ಒಡೆಯರು (೧೪೫೮-೧೪೭೮), ಎರಡನೇ ಚಾಮರಾಜ ಒಡೆಯರು (೧೪೭೮-೧೫೧೩),  ಮತ್ತು ಮೂರನೇ ಚಾಮರಾಜ ಒಡೆಯರು (೧೫೧೩-೧೫೫೩), ನಲವತ್ತು ವರ್ಷಗಳ ಕಾಲ ಈ ರಾಜ್ಯವನ್ನು ಆಳಿ ಅನೇಕ ಸುಧಾರಣೆಗಳನ್ನು ತಂದು ಜನರು ಶಾಂತಿಯಿಂದ ಬಾಳುವಂತೆ ಮಾಡಿದರು. ಚಾಮುಂಡಿ ಬೆಟ್ಟದಮೇಲೆ ಕೆರೆ ನಿರ್ಮಾಣ ಆದದ್ದು ಇವರಿಂದಲೇ. ಇವರ ಮಗ ತಿಮ್ಮರಾಜ ಒಡೆಯರ್ ೧೫೫೩ರಲ್ಲಿ ಪಟ್ಟಕ್ಕೆ ಬಂದು ನೆರೆಯ ಪಾಳೇಗಾರನ್ನು ಗೆದ್ದು “ಬಿರುದುಳ್ಳವರೆಗೆಲ್ಲಾ ಪ್ರಭು ” ಅನ್ನುವ ಬಿರುದನ್ನೂ ಪಡೆದರು. ಇವರ ಕೊನೆಯ ತಮ್ಮ “ಬೋಳ” ಚಾಮರಾಜ ಒಡೆಯರು (೧೫೭೨ -೧೫೭೬), ನಾಲಕ್ಕು ವರ್ಷ ಮಾತ್ರ ಇವರ ಆಡಳಿತ. ಇವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾಗ ಸಿಡಿಲು ಹೊಡೆದು ಇವರ ಕೂದಲ್ಲೆಲ್ಲಾ ಉದುರಿದ್ದರಿಂದ ಈ ಹೆಸರು ಬಂತಂತೆ!! ಇವರ ಮಗ ಬೆಟ್ಟದ ಚಾಮರಾಜ ಒಡೆಯರು ಎರಡು ವರ್ಷ ಮಾತ್ರ ಆಳಿದರು, ಕಾರಣ, ಅಸಾಮರ್ಥ್ಯತನ (sacked for being inefficient !!) ೧೫೭೮ ರಲ್ಲಿ ಇವರ ತಮ್ಮ ರಾಜ ಒಡೆಯರು ಪಟ್ಟಕ್ಕೆ ಬಂದರು.

ಮೈಸೂರಿನಲ್ಲಿ ಯಾದವ ವಂಶವನ್ನು ಸ್ಥಾಪಿಸುವ ಗೌರವ ಯದುರಾಯರದಾದರೆ, ಓ೦ದು ಸಣ್ಣ ಮೈಸೂರು ಪ್ರದೇಶವನ್ನು ದೊಡ್ಡ ರಾಜ್ಯವನ್ನಾಗಿ ಮಾಡಿದವರು ರಾಜ ಒಡೆಯರು. ಇವರು ಸುತ್ತ ಮತ್ತಲ ಪ್ರದೇಶಗಳನ್ನು ಆಕ್ರಮಿಸಿ ಬಲವಾದ ಕೋಟೆಯನ್ನು ಕಟ್ಟಿ ಪ್ರಭಲರಾದರು ಮತ್ತು ೧೬೦೮ ನಲ್ಲಿ ೨೫೦೦೦ ವರಹ ವರಮಾನವುಳ್ಳ ಮೂವತ್ತುಮೂರು ಗ್ರಾಮಗಳಿಗೆ ಅರಸರಾದರು.

ವಿಜಯನಗರದ ಅರಸ ಎರಡನೇ ವೆಂಕಟರಾಯನ  ಆಡಳಿಕೆಯಲ್ಲಿ ಅವನ ಸಬ೦ಧಿಕ  ತಿರುಮಲ ಶ್ರೀರಂಗಪಟ್ಟಣದಲ್ಲಿ ರಾಜಪ್ರತಿನಿಧಿಯಾಗಿದ್ದ. ಆದರೆ ಇವರಿಬ್ಬರಲ್ಲಿ ಸೌಹಾರ್ದತೆಯಿರಲಿಲ್ಲ. ಈ ಪರಿಸ್ಥಿತಿಯನ್ನು ರಾಜ ಒಡೆಯರು  ಉಪಯೋಗಿಸಿಕೊಂಡು ೧೬೧೦ ರಲ್ಲಿ ತಿರುಮಲನನ್ನು  ಹೊರಗೆ ಹಾಕುವ ಪ್ರಯತ್ನದಲ್ಲಿ ಯಶಸ್ವಿಯಾಗಿ,  ವಿಜಯನಗರದ ರಾಜಪ್ರತಿನಿಧಿಯಿಂದ  ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು  ಮೈಸೂರು ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯವನ್ನೆ ಪ್ರಾರಂಭಿಸಿದರು. ಇವರ ಆಡಳಿತದ ಕಾಲ ನಲವತ್ತು ವರ್ಷಗಳು. ಇವರ ಕಾಲದಲ್ಲಿ ಶ್ರೀರಂಗಪಟ್ಟಣ  ರಾಜಧಾನಿಯೂ ಆಯಿತು, ಈ ವರ್ಷದಲ್ಲಿ  ನವರಾತ್ರಿ ಹಬ್ಬದ ಆಚರಣೆ ಇವರಿಂದಲೇ ಶುರುವಾಗಿದ್ದು. 

ರಾಜಒಡೆಯರು ೧೬೧೭ ರಲ್ಲಿ  ತೀರಿದರು, ಇವರ ಗಂಡು ಮಕ್ಕಳು ಆಗಲೇ ತೀರಿದ್ದರಿಂದ ಅವರ ಮೊಮ್ಮಗ ೧೪ ವರ್ಷದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದಿದ್ದರೂ ಆಡಳಿತ  ದಳವಾಯಿ ಬೆಟ್ಟದ ಅರಸರದ್ದು . ಇವರು ಸುತ್ತ ಮುತ್ತಲಾದ ಪಾಳೆಯಪಟ್ಟುಗಳ ಮೇಲೆ ಧಾಳಿ ನಡೆಸಿ ರಾಜ್ಯವನ್ನು ವಿಸ್ತರಿಸಿದರು.  ಇಪ್ಪತ್ತು ವರ್ಷ ಚಾಮರಾಜ ಒಡೆಯರ ಆಳಿಕೆಯಲ್ಲಿ ಅನೇಕ ಸುಧಾರಣೆಗಳು ಬಂದವು. ಮೊದಲನೆಯ ಬಾರಿಗೆ ಸೈನ್ಯದ ಬೆನ್ನೆಲುಬಾಗಿ ಗಜದಳ ಸ್ಥಾಪಿತವಾಯಿತು. ಈಗ  ಮೈಸೂರು ರಾಜ್ಯ ವಿಸ್ತಾರವಾಗಿ ಹರಡಿತ್ತು. ಕಾವೇರಿ ನದಿಗೆ ನಾಲೆ, ಮೇಲುಕೋಟೆಯಲ್ಲಿ ಸ್ನಾನ ಘಟ್ಟ ಮತ್ತು ಕೆರೆಗಳ ನಿರ್ಮಾಣವಾಯಿತು. ಇವರು ಸಾಹಿತ್ಯ ಪ್ರಿಯ, ವಾಲ್ಮೀಕಿ ರಾಮಾಯಣದ ಕನ್ನಡ ರೂಪವಾದ ಚಾಮರಾಜೊಕ್ತಿ ವಿಲಾಸ ವನ್ನು ಸ್ವತಃ ರಚಿಸಿದರು.

Mysore Dasara Celebration

ಇವರು ನಿಧನವಾದ (೧೬೩೭) ನಂತರ ೨೫ ವರ್ಷದ ಎರಡನೇ ರಾಜ ಒಡೆಯರು ಪಟ್ಟಕ್ಕೆ ಬಂದರು. ಆದರೆ ೧೬೩೮ ರಲ್ಲಿ ಇವರು ನಿಧನವಾದರು. ಇವರ ಉತ್ತರಾಧಿಕಾರರು ಸುಪ್ರಸಿದ್ದ ರಣಧೀರ ಕಂಠೀರವ ನರಸರಾಜ ಒಡೆಯರು. ಇವರ ಕತ್ತಿವರಸೆ, ದೈಹಿಕ ಬಲ ಮತ್ತು ಶೌರ್ಯ ಇಂದಿಗೂ ಜನಪ್ರಿಯವಾಗಿದೆ.  ಇವರ ಆಡಳಿತದಲ್ಲಿ ಅನೇಕ ಕಷ್ಟಗಳು ಬಂದರೂ ಮೈಸೂರು ರಾಜ್ಯವನ್ನು, ಈಗಿನ ಕೊಡಗು ಪ್ರದೇಶದವರೆಗೂ ವಿಸ್ತರಿಸಿದರು. ಟಂಕಸಾಲೆಯನ್ನು ಸ್ಥಾಪಿಸಿ ತಮ್ಮ ಹೆಸರಿನ ನಾಣ್ಯಗಳನ್ನು ತಂದರು. ಇವರ ಆಡಳಿತದಲ್ಲಿ ರಚಿತವಾದ ಗ್ರಂಥಗಳು, ಚಕ್ರಬಡ್ಡಿ, ಚದರ ಮತ್ತು ಸರಪಣಿ ಅಳತೆ ಮತ್ತು ಮಾರ್ಕಂಡೇಯ ರಾಮಾಯಣ ಮುಂತಾದವು. ಇವರು ನಲವತೈದನೇ ವರ್ಷದಲ್ಲಿ (೧೬೫೯) ನಿಧನರಾದರು.

ಇವರ ನಂತರ ದೇವರಾಜ ಒಡೆಯರು, ಚಾಮುಂಡಿಬೆಟ್ಟಕ್ಕೆ ಸಾವಿರ ಮೆಟ್ಟಲು ಮತ್ತು ಮಧ್ಯದಲ್ಲಿ ಸುಂದರವಾದ ವೃಷಭದ ಶಿಲಾಮೂರ್ತಿ ನಿರ್ಮಾಣ ಇವರದ್ದೆ. ೧೬೭೧ ರಲ್ಲಿ ಐರೋಪ್ಯ ಮತ್ತು ಮೈಸೂರು ರಾಜ್ಯದ ವಾಣಿಜ್ಯ ಸಂಪರ್ಕ ನಡೆಯಿತೆಂದು ಚರಿತ್ರೆಕಾರ ಆಮ್ಲೆ ಎಂಬಾತ ಹೇಳಿದ್ದಾನೆ. ೧೬೭೩ ರಲ್ಲಿ ಇವರು ನಿಧನರಾದರು. ಇವರ ನಂತರ ೨೮ ವರ್ಷದ ಚಿಕ್ಕದೇವರಾಜ ಒಡೆಯರು ಪಟ್ಟಕ್ಕೆ ಬಂದು ಕೇವಲ ಐದು ದಿನಗಳಲ್ಲೇ ಮಧುರೆಯ ಚೊಕ್ಕನಾಥನ ಧಾಳಿಯನ್ನು ಎದುರಿಸಬೇಕಾಯಿತು , ನಂತರ ಇಕ್ಕೇರಿ ಮತ್ತು ಬಿಜಾಪುರ, ೧೬೭೭ ರಲ್ಲಿ ಮರಾಠದ ಪ್ರಬಲ ಶಿವಾಜಿಯನ್ನು ಎದುರಿಸಿ ವಿಜಯರಾದರು. ಇವರಿಗೆ ಅನೇಕ ಬಿರದುಗಳು ಬಂದು ಮೈಸೂರಿನ ಸಾರ್ವಭೌಮ ಪ್ರಭುಗಳೆಂದು ಪ್ರಸಿದ್ಧವಾದರು. ೧೬೮೭ರಲ್ಲಿ ಮೊಗಲ್ ಚಕ್ರವರ್ತಿಯ ಪ್ರತಿನಿಧಿ ಖಾಸಿಂಖಾನ್ ನಿಂದ ಬೆಂಗಳೂರನ್ನು ಮೂರು ಲಕ್ಷ ರೂಪಾಯಿಗಳಿಗೆ ಕ್ರಯಕ್ಕೆ ಪಡೆದರು. ಇವರ ಮಂತ್ರಿ ಸಂಪುಟ ಅನೇಕ ಸುಧಾರಣೆಗಳನ್ನು ಜಾರಿ ಮಾಡಿ ಕಂದಾಯ ವಸೂಲಿ ಮತ್ತು ಗ್ರಾಮಕಲ್ಯಾಣಕ್ಕಾಗಿ ಹದಿನೆಂಟು ಇಲಾಖೆಗಳನ್ನು ತೆರೆದರು, ಬೆಂಗಳೂರಿನಲ್ಲಿ ೧೨,೦೦೦ ನೇಯಿಗೆಯವರನ್ನು ತಂದು ಅವರು ತಯಾರಿಸಿದ್ದ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದುಇವರ ಕಾಲದಲ್ಲೇ. ಚಿಕ್ಕದೇವರಾಯ ಒಡೆಯರು ಮೂವತ್ತೆರಡು ವರ್ಷದ ಅಡಳಿಕೆಯ ನಂತರ ೧೭೦೪ರಲ್ಲಿ ನಿಧನರಾದರು.

ಮುಂದಿನ ೭೫ ವರ್ಷಗಳು ಒಡೆಯರ ಮನೆತದಲ್ಲಿ ಅನೇಕ ಏರು ಪೇರು ಗಳಾಗಿ ದಳವಾಯಿಗಳು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಈ ರಾಜ್ಯವನ್ನು ಆಳಿದರು. ೧೭೯೯ ರಲ್ಲಿ ಮೈಸೂರು ಮೂರನೇ ಯುದ್ಧದಲ್ಲಿ ಬ್ರಿಟಿಷ್ ಸೈನ್ಯ ಟಿಪ್ಪುಸುಲ್ತಾನ್ ಆಡಳಿತವನ್ನು ಕೊನೆ ಮಾಡಿ ಮೈಸೂರ್ ರಾಜ್ಯವನ್ನು ವಶಪಡಿಸಿಕೊಂಡರು. ನಂತರ ಆಗಿನ ರಾಜಮಾತೆ ಆಗಿದ್ದ ಮಹಾರಾಣಿ ಲಕ್ಷಿ ಅಮ್ಮಣ್ಣಿ ಮತ್ತು ಅರ್ಥರ್ ವೆಲ್ಲೆಸ್ಲಿ (ನಂತರ ಡ್ಯೂಕ್ ಆಫ್ ವೆಲ್ಲಿಂಗ್ಟನ್ ) ಜೊತೆ ಒಪ್ಪಂದ ಆಗಿ ಮೂರು ವರ್ಷದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟಕ್ಕೆ ತಂದರು.

Diwan Poornaiah

ದಿವಾನ್ ಪೂರ್ಣಯ್ಯನವರು ಇವರಿಗೆ ನೆರವಾಗಿ ರಾಜ್ಯದ ಅಡಿಳಿತಕ್ಕೆ ಮಾರ್ಗದರ್ಶಕರಾದರು. ಹತ್ತು ವರ್ಷಗಳ ನಂತರ ಮಹಾರಾಣಿ ಮತ್ತು ಪೂರ್ಣಯ್ಯ ನವರು ತೀರಿಕೊಂಡು ಮೈಸೂರು ಪ್ರದೇಶದಲ್ಲಿ ಅನೇಕ ಗಲಭೆಗಳು ನಡೆದು ಮೈಸೂರು ಸೈನ್ಯ ಬ್ರಿಟಿಷ್ ನೆರವು ಪಡೆದು ಈ ದಂಗೆಗಳನ್ನು ಅಡಗಿಸಿತು. ಗವರ್ನರ್ ಜನರಲ್ ವಿಲಿಯಂ ಬೆಂಟಿಂಗ್ ಮೈಸೂರು ರಾಜ್ಯವನ್ನು ಬ್ರಿಟಿಷ್ ರ ನೇರ ಅಡಳಿತಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕೆಂದು ನಿರ್ಧರಿಸಿ ೧೮೩೧ ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಡಳಿತವನ್ನು ಕೊನೆ ಮಾಡಿದ. ಹೀಗೆ ಬ್ರಿಟಿಷ್ ಅಧಿಕಾರಿಗಳು ೧೮೩೧-೧೮೮೧ ವರಗೆ ಮೈಸೂರು ರಾಜ್ಯವನ್ನು ಆಳಿದರು. ಈ ರಾಜರಿಗೆ ಮಕ್ಕಳಿರಲಿಲ್ಲವಾದ್ದರಿಂದ ಹತ್ತಿರದ ಸಭ೦ಧಿಕ ಚಾಮರಾಜ ಒಡೆಯರ್ ರವರನ್ನು ದತ್ತು ಪುತ್ರನಾಗಿ ಆರಿಸಿಕೊಂಡು, ಬ್ರಿಟಿಷ್ ಒಪ್ಪಂದದ  ನ೦ತರ ಒಡೆಯರ್ ರಾಜ್ಯ ವಂಶದವರು ಪುನಃ ಪಟ್ಟಕ್ಕೆ ಬಂದರು. ಆದರೆ ೧೮೯೪ ನಲ್ಲಿ ಇವರಿಗೆ ಕೇವಲ ೩೨ ವರ್ಷದ ವಯಸ್ಸಿನಲ್ಲಿ ಕಲಕತ್ತೆಗೆ ಭೇಟಿ ಇತ್ತಾಗ ರೋಗಕ್ಕೆ ತುತ್ತಾಗಿ ತೀರಿಕೊಂಡರು. ಇವರ ಮಗ ನಾಲ್ವಡಿಕೃಷ್ಣರಾಜಒಡೆಯರ್೧೯೦೨ ನಲ್ಲಿ ತನ್ನ ೧೮ ವರ್ಷ ತುಂಬಿದಾಗ ಪಟ್ಟಕ್ಕೆ ಬಂದರು. 

Nalvadi Krishnaraja Wadiyar

ಮೈಸೂರ್ ದೇಶ ಆ ಕಾಲದಲ್ಲಿ ಪ್ರಾಮುಖ್ಯತೆ ಪಡೆಯುವುದಕ್ಕೆ ಈ ನಾಲ್ವಡಿ ಮಹಾರಾಜರು ಕಾರಣ. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್, ಮೈಸೂರ್ ಬ್ಯಾಂಕ್, ಸಹಕಾರಿ ಸಂಘಗಳು ಮತ್ತು ಅನೇಕ ಕೈಗಾರಿಕೆಯ ಸಂಸ್ಥೆಗಳು ಇವರ ಪ್ರೇರಣೆಯಿಂದಲೇ ಪ್ರಾರಂಭವಾಗಿದ್ದು. ೧೯೪೦ ಆಗಸ್ಟ್ ನಲ್ಲಿ ಇವರು ನಿಧನರಾದರು. ತಮ್ಮನ ಮಗ ಜಯಚಾಮರಾಜ ಒಡೆಯರ್ ೨೩ ನೇ ವಯಸ್ಸಿನಲ್ಲಿ  ಮೈಸೂರು ರಾಜ್ಯದ ೨೫ನೇ ರಾಜರಾಗಿ ಸಿಂಹಾಸನಕ್ಕೆ  (೩/೮/೧೯೪೦) ಏರಿದರು .  ಭಾರತದ ಸ್ವತಂತ್ರ ಬಂದಮೇಲೆ ೨೬/೧/೧೯೫೦ ರಲ್ಲಿ ರಾಜಪ್ರಮುಖರಾದರು. ಜಯಚಾಮರಾಜ ಒಡೆಯರ್ ಬಹಳ ದೊಡ್ಡ ಮೇಧಾವಿ ಮತ್ತು ಸಂಗೀತ ಪ್ರೇಮಿ. ಲಂಡನ್ Philharmonica Concert Society ಯ ಮೊದಲನೇ ಅಧ್ಯಕ್ಷರು ಮತ್ತು Fellow of Trinity College of Music. ಇವರು ೨೩/೦೯/೧೯೭೪ ನಲ್ಲಿ ನಿಧನರಾದರು.  ಸುಮಾರು ೧೩೯೯ ನಲ್ಲಿ ಶುರುವಾದ ಮೈಸೂರು ರಾಜ್ಯ ಮನೆತನ ಇಲ್ಲಿ ಕೊನೆಯಾಯಿತು

ಮೈಸೂರು ಅರಸರ ಕುಟಂಬಕ್ಕೆ ಅಲುಮೇಲಮ್ಮನ ಶಾಪ

ಇದು ೧೬೧೨ ನಲ್ಲಿ ನಡೆದ ಸ್ವಾರಸ್ಯಕರವಾದ ಒ೦ದು ಪ್ರಸಂಗ, ದೊರೆತ ಮಾಹಿತಿಗಳ ಪ್ರಕಾರ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದ ತಿರುಮಲ ( ಶ್ರೀರಂಗರಾಯ ಅಂತಲೂ ಅವನ ಹೆಸರು ) ಅವರಿಗೆ ಬೆನ್ನುಪಣಿ ಅನ್ನುವ ರೋಗ ಬಂದು ಅದರ ನಿವಾರಣೆಗೆ ಅವನ ಎರಡನೇ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಾನೆ. ಇದನ್ನು ಕೇಳಿ ಮೈಸೂರಿನ ಅರಸ ರಾಜ ಒಡೆಯರ್ ಇದೇ ಸೂಕ್ತ ಸಮಯವೆಂದು ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಹೋಗಿ ವಶಪಡಿಸಿಕೊಳ್ಳುತ್ತಾರೆ. ಇದನ್ನು ಕೇಳಿಯೋ ಅಥವಾ ರೋಗದಿಂದಲೋ ತಿರುಮಲರಾಜ ತಲಕಾಡಿನಲ್ಲಿ ತೀರಿಕೊಂಡ ನ೦ತರ ಅಲುಮೇಲಮ್ಮ ಹತ್ತಿರದಲ್ಲೇ ಇರುವ ಮಾಲಂಗಿ ಗ್ರಾಮದಲ್ಲಿ ನೆಲಸುತ್ತಾಳೆ. ಅಮೂಲ್ಯವಾದ ವಜ್ರದ ಮೂಗುಬಟ್ಟು ಮತ್ತು ಅನೇಕ ಒಡೆವೆಗಳು ಈಕೆಯ ಹತ್ತಿರ ಇರುವ ವಿಚಾರ ರಾಜ ಒಡೆಯರಿಗೆ ತಿಳಿದು ಅವುಗಳನ್ನು ವಶಪಡಿಸಿಕೊಳ್ಳಲು ಕೆಲವು ಸೈನಿಕರನ್ನು ಕಳಿಸುತ್ತಾರೆ. ಅಲುಮೇಲಮ್ಮ ತನ್ನ ಒಡೆವೆಗಳ ಜೊತೆ ಮನೆಯಿಂದ ತಪ್ಪಿಸಿಕೊಂಡು ಕಾವೇರಿ ನದಿಯಲ್ಲಿ ಬೀಳುತ್ತಾಳೆ ಮತ್ತು ಬೀಳುವ ಮುಂಚೆ ಕೋಪದಿಂದ “ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಪಿಸುತ್ತಾಳೆ. ಈ ಮಾತುಗಳನ್ನು ಅಟ್ಟಿಸಿಕೊಂಡು ಬಂದ ಸೈನಿಕರು ಕೇಳಿ ರಾಜ ಒಡೆಯರಿಗೆ ತಿಳಿಸಿದಾಗ ಅವನಿಗೆ ತನ್ನ ದುರಾಸೆಯೇ ಇದಕ್ಕೆ ಕಾರಣ ಎಂದು ಅರಿವಾಗಿ,ಅರಮನೆಯ ಪುರೋಹಿತರ ಸಲಹೆಯ ಮೇಲೆ ಅಲುಮೇಲಮ್ಮನ ವಿಗ್ರಹವನ್ನು ಅರಮನೆಯ ಗುಡಿಯಲ್ಲಿ ಪ್ರತಿಷ್ಠೆ ಮಾಡಿದನು. ಮೈಸೂರು ರಾಜ್ಯವಂಶದವರು ಇಂದಿಗೂ ನವರಾತ್ರಿ ಹಬ್ಬದ ಪ್ರಾರಂಭ ಈ ಪೂಜೆಯಿಂದಲೇ ಪ್ರಾರಂಭಿಸುವುದು.

This image has an empty alt attribute; its file name is talakadu.jpg
Talakadu

ಮೈಸೂರು ಅರಸರ ಇತಿಹಾಸವನ್ನು ನೋಡಿದರೆ ರಾಜರ ದತ್ತು ಪಡೆದ ಮಗನಿಗೆ ಮಕ್ಕಳಾಗಿವೆ ಆದರೆ ಆತನಿಗೆ ಹುಟ್ಟುವ ಮಗನಿಗೆ ಮಕ್ಕಳಾಗದಿರುವುದನ್ನು ಕಾಣಬಹುದು. ಇತ್ತೀಚಿನ ಉದಾಹರಣೆಗೆ ಕೊನೆಯ ಮಹಾರಾಜರು ದತ್ತು ಪುತ್ರ ಜಯಚಾಮರಾಜ ಒಡೆಯರ್ ಗೆ ಶ್ರೀಕಂಠದತ್ತ ಜನಿಸಿದರೂ ಇವರಿಗೆ ಮಕ್ಕಳಿರಲಿಲ್ಲ. ಇವರ ದತ್ತು ಈಗಿನ ಯದುವೀರ್ ಒಡೆಯರ್ ಅವರಿಗೆ ಈಗ ಪುತ್ರ ಸಂತಾನವಾಗಿದೆ. ಕೊನೆಯದಾಗಿ ಈ ರಾಜ್ಯ ವಂಶದ ೫೦೦ ವರ್ಷದ ಚರಿತ್ರೆ ಎಲ್ಲ ಕನ್ನಡಿಗರಿಗೂ ಹೆಮ್ಮೆ ತರುವ ವಿಚಾರ. ಈ ರಾಜ್ಯದ ಅಭಿವೃದ್ಧಿಗೆ ಈ ವಂಶವದವರೇ ಕಾರಣ ಎಂದು ಹೇಳಬಹುದು.

ರಾಮಮೂರ್ತಿ, ಬೇಸಿಂಗ್ ಸ್ಟೋಕ್

 

30 June 1799. Coronation of Mummadi Krishnaraja Wodeyar. Dewan Purnaiah is seen standing on the right of the throne and Lt. Col. Wellesley seated on the left. (This picture was inadvertently left out from the earlier publication of this article. Apologies. Ed)

ಡಾ.ಉಮಾ ವೆಂಕಟೇಶ್ ಬರೆದ ಲೇಖನ, “ಐತಿಹಾಸಿಕ ವೈಭವ ನಗರಗಳು: ವಿಜಯನಗರ ರಾಜಧಾನಿ ಹಂಪೆ ಭಾಗ ೧ – ದರೋಜಿ ಕರಡಿಧಾಮ”

ಹಂಪೆ ಎಂದರೆ ಹಲವರಿಗೆ ಹಲವು ಭಾವ. ಇತಿಹಾಸವೋ, ಕೃಷ್ಣದೇವರಾಯನೋ, ನೆತ್ತಿ ಸುಡುವ ಬಳ್ಳಾರಿಯ ಬಿಸಿಲೋ, ಹಂಪೆ ಕನ್ನಡ ವಿಶ್ವವಿದ್ಯಾನಿಲಯವೋ, ಹೀಗೇ ಏನೆಲ್ಲಾ ಹೊಳೆಯುತ್ತದೆ. ಅಲ್ಲಿನ ಮಂಟಪಗಳು ಹೇಳುವ ಕಥೆಗಳು, ಶಿಲ್ಪ ಕಲೆ ಉಸುರುವ ಪಿಸುಮಾತುಗಳು, ಕಲ್ಲುಗಳು ಹಾಡುವ ಆಲಾಪನೆ, ಕೀರ್ತನೆಗಳು… ಅಲ್ಲಿರುವ ವಾನರಗಳು, ಕರಡಿಗಳು, ಇತರೆ ಮೃಗ ಪಕ್ಷಿಗಳು, ಪ್ರಕೃತಿ ಸೌಂದರ್ಯ ಕೂಡ ಅಷ್ಟೇ ಇಷ್ಟವಾಗುತ್ತವೆ. ಇತ್ತೀಚೆಗೆ ಅವನ್ನೆಲ್ಲಾ ನೋಡಿ, ಆನಂದಿಸಿ ಬಂದ ಡಾ. ಉಮಾ ವೆಂಕಟೇಶ್ ತಮ್ಮ ಅನುಭವ, ಪ್ರವಾಸೀ ಕಥನವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಕಥನದ ಮೊದಲ ಭಾಗ ಇಗೋ ನಿಮ್ಮ ಮುಂದೆ! -ಸಂ.

ಐತಿಹಾಸಿಕ ವೈಭವ ನಗರಗಳು: ವಿಜಯನಗರ ರಾಜಧಾನಿ ಹಂಪೆ

ಭಾಗ ದರೋಜಿ ಕರಡಿಧಾಮ

ಡಾ. ಉಮಾ ವೆಂಕಟೇಶ್

dsc_0180
ಕರಡಿಧಾಮ

“ವಿಜಯನಗರವನ್ನು ಕೃಷ್ಣದೇವರಾಯನು ಆಳುತ್ತಿದ್ದ ಕಾಲದಲ್ಲಿ, ಅಲ್ಲಿಯ ವೈಭವ ಎಷ್ಟಿತ್ತೆಂದರೆ, ಅಲ್ಲಿನ ರಸ್ತೆಯ ಬದಿಯಲ್ಲಿ ಮುತ್ತು, ರತ್ನ, ಹವಳ ಮತ್ತು ವಜ್ರ-ವೈಢೂರ್ಯಗಳನ್ನು ಬಳ್ಳದಲ್ಲಿ ಅಳೆದು ಮಾರುತ್ತಿದ್ದರು” ಎನ್ನುವ ಸಾಲುಗಳನ್ನು ನನ್ನ ಮಾಧ್ಯಮಿಕ ಶಾಲೆಯ ಚರಿತ್ರೆ ಮತ್ತು ಕನ್ನಡ ಪಠ್ಯಪುಸ್ತಕಗಳಲ್ಲಿ ಜೋರಾಗಿ ಓದಿ ಮನದಟ್ಟು ಮಾಡುಕೊಳ್ಳುತ್ತಿದ್ದ ದಿನಗಳು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿದಂತಿದೆ. ೧೯೬೯ನೆಯ ಇಸವಿಯಲ್ಲಿ, ನನ್ನ ತಂದೆ ಬಳ್ಳಾರಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಭೂಗರ್ಭಶಾಸ್ತ್ರಜ್ಞರಾಗಿ ಅಲ್ಲಿನ ಮ್ಯಾಂಗನೀಸ್ ಗಣಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿನಗಳವು. ನನ್ನ ಚಿಕ್ಕಪ್ಪ ಮತ್ತು ಅವರ ಗೆಳೆಯ ನಮ್ಮ ಮನೆಗೆ ಬಳ್ಳಾರಿಗೆ ಬಂದಿದ್ದಾಗ, ನಾವೆಲ್ಲಾ ಹಂಪೆ ಮತ್ತು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟನ್ನು ನೋಡಿ ಬಂದಿದ್ದೆವು. ಆಗ ನಾನಿನ್ನೂ ೭ ವರ್ಷದವಳು. ಅಲ್ಲಿಗೆ ಹೋಗಿದ್ದ ನೆನಪು ಮಸುಕುಮಸುಕಾಗಿದ್ದರೂ, ಹಂಪೆಯ ವಿರೂಪಾಕ್ಷ ದೇವಾಲಯ, ಸಾಸಿವೆ ಮತ್ತು ಕಡಲೆ ಕಾಳು ಗಣಪತಿ, ಉಗ್ರನರಸಿಂಹ, ಕಲ್ಲಿನ ರಥದ ಚಿತ್ರಗಳು ಹಸಿರಾಗಿದ್ದವೆನ್ನಬಹುದು. ಜೊತೆಗೆ ೭೦ರ ದಶಕದಲ್ಲಿ ನೋಡಿದ್ದ ಪ್ರಸಿದ್ಧ ಕನ್ನಡ ಚಲನಚಿತ್ರ “ಕೃಷ್ಣದೇವರಾಯ”ದ ಹಲವಾರು ದೃಶ್ಯಗಳು ಮತ್ತು ಹಾಡುಗಳನ್ನು ಇನ್ನೂ ಮರೆತಿಲ್ಲ. ಹಾಗಾಗಿ ನಮ್ಮ ಮಕ್ಕಳೂ ಕೂಡಾ ಕರ್ನಾಟಕದ ಗತವೈಭವಗಳನ್ನು ಹೊತ್ತ, ನಮ್ಮ ಚರಿತ್ರೆಯನ್ನು ಹೇಳುವ ಹಂಪೆಯನ್ನು ಒಮ್ಮೆ ನೋಡಲೆಂದು ಬಹಳ ಆಸೆ ಇತ್ತು. ಈ ಬಾರಿ ಬೆಂಗಳೂರಿಗೆ ಹೋದಾಗ, ಹೊರಗೆ ಕರೆದುಕೊಂಡು ಹೋಗದಿದ್ದರೆ ನಾವು ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದದ್ದು ಒಳ್ಳೆಯದೇ ಆಯಿತು. ಸರಿ ನಾನು ಕಾರ್ಡಿಫ಼್ ನಗರದಲ್ಲಿ ನಮ್ಮ ಮನೆಯಲ್ಲೇ ಕುಳಿತು, ಗೂಗಲ್ ಕೃಪೆ ಮತ್ತು ನೆರವಿನಿಂದ ಅಲ್ಲಿನ ಎಲ್ಲಾ ವಿಷಯಗಳನ್ನು ಸಂಗ್ರಹಿಸಿ ಹೋಟೆಲ್ ಮತ್ತು ಪ್ರಯಾಣಗಳನ್ನು ೬ ತಿಂಗಳು ಮುಂಚಿತವಾಗಿ ಬುಕ್ ಮಾಡಿಬಿಟ್ಟೆ.

ಜುಲೈ ತಿಂಗಳ ೨೪ರ ರಾತ್ರಿ ೧೦ ಗಂಟೆಗೆ ಬೆಂಗಳೂರಿನ ಕಂಟೋನ್ಮೆಂಟ್ ಅಥವಾ ದಂಡು ನಿಲ್ದಾಣದಿಂದ ಹೊರಟ ಹಂಪೆ ಎಕ್ಸಪ್ರೆಸ್ ರೈಲಿನಲ್ಲಿ ಸಂಸಾರ ಸಮೇತ ಹೊಸಪೇಟೆಯತ್ತ ಪ್ರಯಾಣ ಬೆಳೆಸಿದೆವು. ರಾತ್ರಿ ಕಳೆದು ಬೆಳಗಿನ ೮ ಗಂಟೆಯ ಸಮಯಕ್ಕೆ ಹೊಸಪೇಟೆ ತಲುಪಿದ ನಾವು ಈ ಮೊದಲೆ ನಾನು ಬುಕ್ ಮಾಡಿದ್ದ ಅಲ್ಲಿನ ಉತ್ತಮ ದರ್ಜೆಯ ಹೋಟೆಲ್ ಎನಿಸಿದ “ಮಲ್ಲಿಗೆ”ಯತ್ತ ಆಟೋಗಳಲ್ಲಿ ನಡೆದೆವು. ೬೯ರ ಇಸವಿಯಲ್ಲಿ ಹೊಸಪೇಟೆ ಇದ್ದ ರೀತಿ ಮತ್ತು ಸ್ಥಿತಿ ನನಗೆ ಅಷ್ಟಾಗಿ ನೆನಪಿಲ್ಲ. ಹಾಗಾಗಿ ಈ ಬಾರಿ ನೋಡಿದ್ದೆ ಗೊತ್ತು. ನಗರದ ಪರಿಸ್ಥಿತಿ, ಶುಚಿತ್ವವೇನೂ ಅಷ್ಟು ಸರಿಯಿಲ್ಲ. ಕರ್ನಾಟಕದಲ್ಲಿ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ನನಗೆ, ನನ್ನ ಪತಿಗೆ ಇದೇನೂ ಹೊಸದಲ್ಲ. ನಮ್ಮ ಮಕ್ಕಳಿಗೆ ಸ್ವಲ್ಪ ಗಾಬರಿಯಾಯಿತು. ಆದರೆ ಒಮ್ಮೆ ಮಲ್ಲಿಗೆ ಹೋಟೆಲ್ ಬಳಿ ತಲುಪಿದಾಗ ಸ್ವಲ್ಪ ಆಶ್ಚರ್ಯವೇ ಆಯಿತು. ಹೋಟೆಲ್ ಆಸು-ಪಾಸು ಮತ್ತು ಆವರಣಗಳು ಬಹಳ ಚೆನ್ನಾಗಿದೆ. ಹೋಟೆಲಿನ ಹಲವಾರು ಭಾಗಗಳನ್ನು ಹೊಸದಾಗಿ ಕಟ್ಟಿ ಬಹಳ ಓರಣವಾಗಿ ಇಟ್ಟಿದ್ದಾರೆ. ನೋಡಿ ನಮಗೆಲ್ಲಾ ಸಮಾಧಾನವಾಯಿತು. ನಮ್ಮ ಕೋಣೆಗಳೂ ಕೂಡಾ ಅಚ್ಚುಕಟ್ಟಾಗಿದ್ದು, ಪಾಶ್ಚಿಮಾತ್ಯ ಹೋಟೆಲಿನಲ್ಲಿರುವಂತೆ ಎಲ್ಲಾ ಸೌಲಭ್ಯಗಳೂ ಇವೆ. ಹೋಟೆಲಿನ ರೆಸ್ಟೋರೆಂಟಿನಲ್ಲಿ ಉತ್ತಮ ಗುಣಮಟ್ಟದ ಊಟ-ತಿಂಡಿಗಳೂ ಲಭ್ಯವಿದ್ದು, ನಮ್ಮ ಮಕ್ಕಳು ಬಹಳ ಖುಷಿಯಾಗಿ ಎಲ್ಲವನ್ನೂ ತಿಂದು ತೃಪ್ತಿಪಟ್ಟರು ಎನ್ನಬಹುದು. ರಾತ್ರಿಯ ಪ್ರಯಾಣದ ಆಯಾಸವನ್ನು ಒಂದು ಸಣ್ಣ ನಿದ್ದೆ ತೆಗೆದು ಪರಿಹರಿಸಿಕೊಂಡನಂತರ, ಪುಷ್ಕಳವಾದ ಮದ್ಯಾನ್ಹದ ಭೋಜನವನ್ನು ಪೂರೈಸಿದ ನಾವು, ಹೋಟೆಲಿನ ಸ್ವಾಗತ ಡೆಸ್ಕಿನಲ್ಲಿದ್ದ ಅವರದೇ ಪ್ರವಾಸ ವಿಭಾಗದಲ್ಲಿ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ವ್ಯವಸ್ಥೆಯ ಬಗ್ಗೆ ವಿಚಾರಿಸಿದೆವು.

ಅದೃಷ್ಟವಶಾತ್ ಮಲ್ಲಿಗೆ ಹೋಟೆಲಿನೊಂದಿಗೆ ಸಹಭಾಗಿತ್ವದಲ್ಲಿ ಆ ಏರ್ಪಾಡೂ ಇದೆ ಎಂದು ತಿಳಿದ ನಾವು, ಆ ಮಧ್ಯಾನ್ಹ ಅಲ್ಲಿಯೇ ಹತ್ತಿರದಲ್ಲಿರುವ ದರೋಜಿ ಕರಡಿ ಧಾಮ ಮತ್ತು ತುಂಗಭಧ್ರಾ ಅಣೆಕಟ್ಟುಗಳನ್ನು ನೋಡಲು ನಿರ್ಧರಿಸಿದೆವು. ಉತ್ತಮ ಮಟ್ಟದ ಟೊಯೋಟಾ ಕ್ವಾಲಿಸ್ ಕಾರಿನಲ್ಲಿ ಕುಳಿತು ಹಂಪೆಯ ಪ್ರವಾಸವನ್ನು ಆರಂಭಿಸಿದ ನಮಗೆ, ಹೊಸಪೇಟೆಯಿಂದ ಹೊರಬಿದ್ದ ತಕ್ಷಣವೇ, ಸುತ್ತಲೂ ಹಸಿರಿನ ದರ್ಶನವಾಗಿ ನೆಮ್ಮದಿಯೆನಿಸಿತು.

dsc_0159
ತೆಂಗು, ಸೂರ್ಯಕಾಂತಿ ಬೆಳೆ

ತೆಂಗು, ಕಬ್ಬು, ಬಾಳೆ ಮತ್ತು ಸೂರ್ಯಕಾಂತಿ ಬೆಳೆಗಳಿಂದ ಮೈದುಂಬಿದ ಹೊಲ-ತೋಟಗಳು, ಬಣ್ಣಬಣ್ಣದ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆಯಿಂದ ತುಂಬಿದ ಹಸಿರಿನ ರಾಶಿ, ನೀಲಿ ಆಗಸಗಳು ನಮ್ಮ ಕ್ಯಾಮೆರಾದಲ್ಲಿ ಸೆರೆಯಾಗತೊಡಗಿದವು.

dsc_0138
ಬಾಳೆ ಮೈದುಂಬಿದ ಹೊಲ-ತೋಟಗಳು

ಕಿಂಗ್-ಫ಼ಿಷರ್ (ಮೀಂಚುಳ್ಳಿ), ಬಾನಾಡಿಗಳು, ಬಿಳಿಕೊಕ್ಕರೆ, ನೀಲಿ ಮತ್ತು ಕಂದು ಹೆರಾನ್, ಪಚ್ಚೆವರ್ಣದ ಗಿಳಿಸಂಕುಲ ಹೀಗೆ ಹಲವು ಹತ್ತು ಬಗೆಯ ಪಕ್ಷಿಗಳು ನಮ್ಮ  ಮನವನ್ನು ತಣಿಸಿದೆವು. ತುಂಗಭದ್ರ ನಾಲೆಯ ಅಕ್ಕಪಕ್ಕದಲ್ಲಿ ಹಳ್ಳಿಯ ಜನ ಪಾತ್ರೆ-ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತಿದ್ದನ್ನು ಕಂಡ ನನ್ನ ಮಕ್ಕಳಿಗೆ ತಾವೊಂದು ಬೇರೆಯ ಯುಗದಲ್ಲಿರುವಂತೆ ಭಾಸವಾಯಿತು. ಚಿಕ್ಕಂದಿನಿಂದ ಈ ಚಟುವಟಿಕೆಗಳನ್ನು ನೋಡಿ, ಮಾಡುತ್ತಾ ಬೆಳೆದ ನಮಗೆ ಇದು ಸಾಮಾನ್ಯ ದೃಶ್ಯ! ನಮ್ಮ ಕಾರಿನ ಡ್ರೈವರ್ ನಮ್ಮೊಡನೆ ಕನ್ನಡದಲ್ಲಿ ನಿರಾಳವಾಗಿ ಹರಟುತ್ತಾ ನಮಗೆ ಅಲ್ಲಿನ ಆಗುಹೋಗುಗಳ ಸಂಪೂರ್ಣ ಮಾಹಿತಿಯನ್ನು ಎಡೆಬಿಡದೆ ನೀಡುತ್ತಿದ್ದ. ಸುಮಾರು ೪೦ ನಿಮಿಷಗಳ ಪ್ರಯಾಣದ ನಂತರ, ಒಮ್ಮೆಗೆ ಕಲ್ಲು, ಬೆಟ್ಟಗುಡ್ಡಗಳಿಂದ ಆವೃತವಾದ, ನಿರ್ಜನವಾದ ಕರಡಿಧಾಮದೊಳಕ್ಕೆ ಆಗಮಿಸಿದೆವು. ರಾಜ್ಯ ಅರಣ್ಯ ಇಲಾಖೆಯ ಪ್ರವೇಶದ್ವಾರದಲ್ಲಿ ಸಹಿ ಮಾಡಿ, ಪ್ರವೇಶ-ದರದ ಹಣವನ್ನು ಪಾವತಿ ಮಾಡಿದ ನಂತರ ನಮ್ಮನ್ನು ಒಳಬಿಟ್ಟರು. ಇಲ್ಲಿ ಕಾಲುನಡಿಗೆಯಲ್ಲಿ ಹೋಗಲು ಅನುಮತಿಯಿಲ್ಲ. ಕಾಡುಪ್ರಾಣಿಗಳಿಗೆ ಮಾತ್ರಾ ಮೀಸಲಾದ ಪ್ರದೇಶ. ಹಾಗಾಗಿ ವಾಹನಗಳಲ್ಲಿ ಅಲ್ಲಿಯ ಉನ್ನತ ಪ್ರದೇಶವೊಂದರಲ್ಲಿ ಕಟ್ಟಿದ ವೀಕ್ಷಣ-ಗೋಪುರದವರೆಗೂ ಹೋಗಿ, ಅಲ್ಲಿ ನಿಂತು ಕರಡಿಗಳನ್ನು ದೂರದಿಂದ ನೋಡುವ ವ್ಯವಸ್ಥೆ ಮಾಡಿದ್ದಾರೆ.

ಪ್ರತಿದಿನ ಮದ್ಯಾನ್ಹ ೩-೫ ಗಂಟೆಗಳ ಸಮಯದಲ್ಲಿ, ಇಲ್ಲಿ ಅರಣ್ಯ ಇಲಾಖೆಯವರು ಇಡುವ ಬಾಳೆ, ಬೆಲ್ಲ, ಮೆಕ್ಕೆಜೋಳದ ಊಟವನ್ನು ಸವಿಯಲು ಬರುತ್ತವೆ. ಈ ಪ್ರಾಣಿಗಳು ಅದೃಷ್ಟವಿದ್ದರೆ ಕಾಣಸಿಗುತ್ತವೆ ಎಂದೂ ನಮ್ಮ ಡ್ರೈವರ್ ನಮ್ಮನ್ನು ಎಚ್ಚರಿಸಿದ್ದ. ಸರಿ ವಾಚ್-ಟವರಿನ ಮೇಲ್ಭಾಗದಲ್ಲಿ ನಿಂತು, ನಮ್ಮ ಕ್ಯಾಮೆರಾ ಮತ್ತು ದುರ್ಬೀನನ್ನು ಹಿಡಿದು ಕರಡಿ ದರ್ಶನಕ್ಕೆ ಕಾದು ನಿಂತೆವು. ಈ ಮಧ್ಯದಲ್ಲಿ ನಮ್ಮ ಸುತ್ತಲೂ ನವಿಲಿನ ಕೇಕೆಯ ಶಬ್ದ ನಮ್ಮ ಕಿವಿಗಳನ್ನು ತುಂಬಿಬಿಟ್ಟಿತ್ತು. ಆದರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಮಕ್ಕಳು ನವಿಲುಗಳ ಒಂದೇ ಒಂದು ದರ್ಶನಕ್ಕೆ ತವಕಿಸುತ್ತಿದ್ದರು. ಒಮ್ಮೆಲೆ ಒಂದು ದೊಡ್ಡ ಗುಂಪು ತಮ್ಮ ಗಂಭೀರವಾದ ನಡಿಗೆಯಲ್ಲಿ ಓಲಾಡುತ್ತಾ, ತಮ್ಮ ಬಣ್ಣಬಣ್ಣದ ಗರಿಗಳನ್ನು ಬೀಸುತ್ತಾ ಅಲ್ಲಿದ್ದ ಬಂಡೆಗಳ ಮೇಲೆ ಪ್ರತ್ಯಕ್ಷವಾದಾಗ, ನಮ್ಮ ಮನಸ್ಸೂ ಕೂಡಾ ಆ ಗರಿಗಳಂತೆ ಕೆದರಿ, ಕುಣಿದು, ನಮ್ಮ ಕೈಯಲ್ಲಿದ್ದ ಕ್ಯಾಮೆರಾಗಳು ಸದ್ದಿಲ್ಲದೇ ನಿರಂತರವಾಗಿ ಕ್ಲಿಕ್ಕಿಸಿದವು. ಅಷ್ಟರಲ್ಲೇ ನನ್ನ ಮಗಳು ದುರ್ಬೀನಿಂದ ನಮಗಷ್ಟೇ ಕೇಳುವಂತೆ “ಅಮ್ಮ, ಎದುರಿನ ಬಂಡೆಯ ಕಡೆಗೆ ನೋಡಿ, ಮೂರು ಕರಡಿಗಳಿವೆ” ಎಂದು ಆದೇಶಿಸಿದಳು. ನಮ್ಮ ಉತ್ಸಾಹಕ್ಕೆ ಪಾರವೇ ಇಲ್ಲ. ಕೇವಲ ಮೃಗಾಲಯಗಳಲ್ಲಿ ಕರಡಿಗಳನ್ನು ನೋಡಿದ್ದ ನಮಗೆ ಅವನ್ನು ಈ ಸ್ವಾಭಾವಿಕ ಪರಿಸರದಲ್ಲಿ ಕಂಡಾಗ ಬಹಳ ಸಂತೋಷವೆನಿಸಿತು.

dsc_0190
ಸ್ಲಾತ್ ಕರಡಿ ದರ್ಶನ

ನಮ್ಮ ರಾಜ್ಯದಲ್ಲಿ ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ವಾಸಿಸುವ ಈ ಸ್ಲಾತ್ ಕರಡಿಗಳು ರಾತ್ರಿಯಲ್ಲಿ ಚಟುವಟಿಕೆಯಾಗಿರುವ ಕೀಟಭಕ್ಷಕಗಳಾಗಿವೆ. ರಾಮಾಯಣದಲ್ಲಿ ರಾಮ ಸೀತೆಯನ್ನು ಹುಡುಕುತ್ತಾ ಬಂಡಾಗ, ಇಲ್ಲಿಯೇ ಆನೆಗೊಂದಿಯಲ್ಲಿ ವಾನರ ಸೈನ್ಯದ ಜೊತೆಗೆ, ಕರಡಿವೀರ ಜಾಂಬವಂತನನ್ನೂ ಭೇಟಿಯಾದನೆಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಕರಡಿಗಳನ್ನು ಬಹಳ ಭಯಭಕ್ತಿಗಳಿಂದ ನೋಡುವ ಸಂಪ್ರದಾಯವಿದೆ. ಇಲ್ಲಿಯ ಗಣಿಗಳಲ್ಲಿ ನಡೆಯುವ ಆಕ್ರಮ ಗಣಿಗಾರಿಕೆಯ ಫಲವಾಗಿ, ಕರಡಿಗಳ ಸಂಖ್ಯೆಗೆ ಧಕ್ಕೆಯಾಗಿ ಈ ಕರಡಿಧಾಮವನ್ನು ೧೯೯೪ರಲ್ಲಿ ಪ್ರಾರಂಭಿಸಲಾಗಿದೆ. ಈ ಅರಣ್ಯಧಾಮದಲ್ಲಿ ಕರಡಿಗಳ ಜೊತೆಗೆ ಹುಲಿ, ಚಿರತೆ, ಚುಕ್ಕೆ-ಜಿಂಕೆ, ಮಾನಿಟರ್ ಹಲ್ಲಿ, ನಕ್ಷತ್ರ ಆಮೆ, ಮುಂಗುಸಿಗಳೂ ಕಾಣಸಿಗಬಹುದು. ಅಲ್ಲಲ್ಲೇ ಹಲವಾರು ಬಣ್ಣದ ಹಲ್ಲಿಗಳು, ಚಿಟ್ಟೆಗಳು ನಮ್ಮ ಕಣ್ಣಿಗೆ ಬಿದ್ದವು.

dsc_0197
ಬಣ್ಣಬಣ್ಣದ ಗರಿಗಳ ನವಿಲುಗಳ ಗುಂಪು

dsc_0235
ಬಣ್ಣದ ಹಲ್ಲಿ

ನಮ್ಮ ಮನಸ್ಸಿಗೆ ತೃಪ್ತಿಯಾದಷ್ಟು ನೋಡಿದ ನಂತರ, ಅಲ್ಲೇ ಕುಳಿತಿದ್ದ ಡ್ರೈವರ್ ಸಾರ್ ನೀವು ತುಂಗಭದ್ರ ಅಣೆಕಟ್ಟಿಗೆ ಹೋಗಬೇಕೆಂದರೆ ಈಗಲೇ ಹೊರಡಬೇಕು ಎಂದು ಎಚ್ಚರಿಸಿದಾಗ, ನಾವು ಅರೆಮನಸ್ಸಿನಿಂದಲೇ, ಕರಡಿಗಳ ದಿಕ್ಕಿನಿಂದ ನಮ್ಮ ದೃಷ್ಟಿಯನ್ನು ತೆಗೆದು ಕಾರಿನೆಡೆ ನಡೆದೆವು.

dsc_0177
ಬಣ್ಣದ ಚಿಟ್ಟೆಗಳು

ಮಾಧ್ಯಮಿಕ ಶಾಲೆಯಲ್ಲಿ ಕನ್ನಡದ ವರ-ಕವಿ ದ.ರಾ. ಬೇಂದ್ರೆ ಅವರ “ಕರಡಿ-ಕುಣಿತ” ಎಂಬ ಪದ್ಯವನ್ನು ಬಾಯಿಪಾಠ ಮಾಡಿ ಗುನುಗುತ್ತಿದ್ದ ನನ್ನ ಮನ ಆ ದಿನಗಳತ್ತ ಓಡಿತು.

ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ

ಪ್ರಾಣದ ಈ ಪ್ರಾಣಿ ಹಿಂದಾs

ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ

ಪರಮಾರ್ಥ ಎಂಬಂತೆ ಬಂದಾನ

“ಪ್ರಾಣಿ ಶಕ್ತಿಯನ್ನು, ತನ್ನ ಬುದ್ದಿಶಕ್ತಿಯಿಂದ ಪಳಗಿಸಿ ತನ್ನ ಹೊಟ್ಟೆಪಾಡಿಗೆ ಪರಮಾರ್ಥದ ವೇಶವನ್ನು ತೊಡಿಸಿದ್ದಾನೆ”.

ಕೇವಲ ಮಾನವ ತನ್ನ ಹೊಟ್ಟೆಪಾಡಿಗಾಗಿ ಈ ಪ್ರಾಣಿಯನ್ನು ಹಿಡಿದು ಪಳಗಿಸಿ, ಅದಕ್ಕೆ ಮೂಗುದಾರ ಹಾಕಿ, ಕುಣಿಸಿ ಜೀವನ ಸವೆಸುವ ರೀತಿ ನನಗೆ ಹೀನಾಯವೆನಿಸಿತು. ಸ್ವಚ್ಚಂದವಾಗಿ ಅರಣ್ಯದಲ್ಲಿ ಓಡಾಡಿಕೊಡಿರುವ ಈ ವನ್ಯಮೃಗ, ಸರಳುಗಳ ಹಿಂದೆ ಮೃಗಾಲಯದಲ್ಲಿ ಶತಪಥ ತಿರುಗುವ ರೀತಿಯೂ ಸರಿಯಲ್ಲ. ತಮ್ಮದೇ ಪರಿಸರದಲ್ಲಿ ಜೀವಿಸುವ ಈ ಮೃಗದ ಜನ್ಮಸಿದ್ಧ ಹಕ್ಕನ್ನು ಈ ದರೋಜಿ-ಕರಡಿಧಾಮದಲ್ಲಿ ಕಂಡು ಹಿಗ್ಗಿದ ನನ್ನ ಮನ, ರಾಜ್ಯ ಅರಣ್ಯ ಇಲಾಖೆಗೆ ಭೇಷ್ ಎಂದು ಬೆನ್ನುತಟ್ಟಿತು.

  ಚಿತ್ರಗಳು: ಡಾ. ಉಮಾ ವೆಂಕಟೇಶ್