ಇತ್ತೀಚೆಗಷ್ಟೇ ನಮ್ಮ ಸುತ್ತಲಿನ ಜಗತ್ತು ಆಚರಿಸಿದ ‘ಮಾತೆಯರ ದಿನದ’ ಅಂಗವಾಗಿ, ತಾಯಿ ಹಾಗೂ ಅವಳ ಜೀವನದ ಮಹದೋದ್ದೇಶವಾದ ಮಗುವಿನ ಕುರಿತ ಎರಡು ಕವನಗಳು ಇಲ್ಲಿವೆ. ಒಂದು ನಮ್ಮ ಪರಿಚಿತರೇ ಅದ ಪ್ರೇಮಲತಾ ಅವರದ್ದು (ಮಗು-ನಗು). ಇನ್ನೊಂದು ನಮ್ಮ ಅತಿಥಿ ಕವಿ ನವೀನ್ ಗಂಗೋತ್ರಿಯವರದ್ದು (ಅಮ್ಮ). ಓದಿ, ಅಮ್ಮನೆಂಬ ಭಾವ ನದಿಯಲ್ಲಿ ಮುಳುಗೇಳಿ.

ಅಮ್ಮ

ಅಮ್ಮನಂಗುಲಿಗಳಲಿ
ಜಗದೆಲ್ಲ ಒಳಿತುಗಳು
ತುತ್ತಾಗಿ ಕೂರುವವು ಮುತ್ತಿನಂತೆ
ನಂಬುಗೆಯ ಪರ್ವತವೆ
ಅಂಗೈಯಲಿಳಿಯುವುದು
ನಂದಗೋಪನ ಮನೆಯ ಬೆಣ್ಣೆಯಂತೆ
ತಾಯೆಂಬ ಹಿರಿ ಜೀವ
ಜೀವನವನೂಡಿಪುದು
ಮಗುವ ಕಿರಿ ಜೀವಕ್ಕೆ ಜೀವವಾಗಿ
ಜೀವನೆಂಬುದು ಇಲ್ಲಿ
ಜೀವದಿಂದಾಗುವುದು
ಅಮ್ಮನಿರುವಳು ಜೀವದೊರತೆಯಾಗಿ
ಅಂತರಗಳಿಲ್ಲದಿಹ
ಎಲ್ಲದರ ಅರಿವಿರುವ
ಅದ್ವೈತ ಸಂಬಂಧ ತಾಯ್ಗೆ ಮಗುವು
ತನ್ನೊಳಗೆ ತನುಗೊಳಿಸಿ
ಎದೆಯಿಂದ ಹಾಲಿಳಿಸಿ
ಕೈಯಲೂ ತುತ್ತಿಡುವ ಮಮತೆ ಮಡಿಲು
ಶ್ರೀ . ನವೀನ್ ಗಂಗೊತ್ರಿ
++++++++++++++++++++++++++++++++++++++++++++++++++++++++++++
ಪ್ರೇಮಲತಾರ ಈ ಕವನ ಅಮ್ಮನ ಕಣ್ಣಿನಲ್ಲಿ ಮಗುವಿನ ಕೇಕೆಯನ್ನು ಅರಳಿಸುತ್ತಿದೆ. ಈ ಕವನ ಯುಗಾದಿ ಕಾರ್ಯಕ್ರಮದಲ್ಲಿ ಪ್ರಸ್ತುತವಾಗಿತ್ತು.
ಮಗು-ನಗು
ನನ್ನೊಲವಿನ ಮುದ್ದಿನ ಮಗುವೇ
ಸುಮಧುರ ಗಾನ ಏನಂತ ನಗುವೇ!
ಮನೆಯೆಲ್ಲ ಅನುರುಣಿಸಿ ಸಂತಸ
ಈ ಬಾಳಿಗೆ ತಂದೆ ನೀ ಹೊಸ ವಸಂತ!
ಸವಿಜೊಲ್ಲ ಸುರಿಸಿ,ಬೊಚ್ಚು ಬಾಯಿ
ಕಣ್ಣರಳಿಸಿ ನಕ್ಕರೆ, ಉಂಡಂತೆ ಸಿಹಿ!
ಪ್ರತಿಧ್ವನಿಸಿ ನಿನ್ನ ಕೇಕೆಯಲಿ ಮನೆ
ಹರಿಸಿದೆ ಸಂತಸದ ಹೊಸ ಹೊಳೆ!
ನಿನ್ನ ಕಣ್ಣಲ್ಲಿ ಕೌತುಕ ಅರೆಗಳಿಗೆ
ನಕ್ಕು ಮರೆತುಬಿಡುವೆ ಎಲ್ಲ ಮರುಗಳಿಗೆ!
ಹೇಳುವರು ಜನ ನಿನ್ನ ನಗು ಬಲು ಮುಗ್ಢ
ಆದರೆ ನಾ ಕಂಡಿರುವೆ ಅದರಲ್ಲಿ ನೂರು ಅರ್ಥ!
ಹೀರಬೇಕೆಂದು ನಿನ್ನ ನಗುವಿನ ಸಿಹಿ
ಹಾತೊರೆವುದು ಮನವಾಗಿ ಒಂದು ದುಂಬಿ!
ಕನಸಲ್ಲೂ ಪಕ್ಕನೆ ನೀ ನಕ್ಕು ಬಿಡುವೆ
ಎದೆಯುಬ್ಬಿ ಸಂತಸದ ಹಬ್ಬ ನನಗೆ!
ಡಾ ಪ್ರೇಮಲತ ಬಿ