- ವತ್ಸಲ ರಾಮಮೂರ್ತಿ
ನಾನು ಈ ಸಲ ಬೆಂಗಳೂರಿಗೆ ಹೋದಾಗ ನಮ್ಮ ಫ್ರೆಂಡ್ ಮನೆಗೆ ಹೋಗಿದ್ದೆ. ಇದು ಅವರು ಹೇಳಿದ ಕಥೆ. ಆ ಮಾವಿನ ಕಾಯಿಗೆ ಒಂದಿಷ್ಟು ಉಪ್ಪು ಖಾರ ಹಚ್ಚಿ ಇಟ್ಟಿದ್ದೇನೆ. ಮೆಲ್ಲಿ, ಎಂಜಾಯ್ ಮಾಡಿ, ಚೆನ್ನಾಗಿತ್ತ ಹೇಳಿ.
ಚಳಿಗಾಲದ ದಿನ, ಹೊರಗಡೆ ಬೆಳಿಗ್ಗೆಯಷ್ಟೇ ಬಿದ್ದ ತೆಳ್ಳನೆಯ, ನವಿರಾದ ಹಿಮದ ಪದರದಲ್ಲಾವರಿಸಿದ ಹೊರಾಂಗಣ, ಒಣಗಿ ನಿಂತ ಮರಗಳು ಕಪ್ಪು-ಬಿಳುಪಿನ ಸುಂದರ ಚಿತ್ರದಂತಿತ್ತು. ಹಲವು ಕಾಲ ಮೋಡದ ಹಚ್ಚಡವನ್ನು ಹೊದ್ದು ಬಿದ್ದಿದ್ದ ಸೂರಜ್ ಕುಮಾರ್ ಈ ಮನೋಹರ ದೃಶ್ಯವನ್ನು ವೀಕ್ಷಿಸಲೆಂದೇ ಹಣಕಿ ಹಾಕಿದ್ದ. ಆತ ತಂದ ಹೊಂಬಿಸಿಲನ್ನು ಆಸ್ವಾದಿಸುತ್ತ ನಾನು ಕಿಟಕಿಯ ಪಕ್ಕದ ಆರಾಮಾಸನದಲ್ಲಿ ಒರಗಿ ತೂಕಡಿಸುತ್ತಿದ್ದೆ. ಬಾಗಿಲ ಬಳಿ ಟಪ್ ಎಂದು ಟಪಾಲು ಬಿದ್ದ ಸದ್ದಾಯಿತು. ಕುತೂಹಲ ತಾಳಲಾರದೇ ಹೋಗಿ ನೋಡಿದರೆ, ಇಂಡಿಯಾದಿಂದ ಬಂದ ಪತ್ರ! ಅದರಲ್ಲೂ ನನ್ನ ಪ್ರಿಯ ತಂಗಿಯ ಕೈಬರಹದಲ್ಲಿರುವ ಅಡ್ರೆಸ್!! ತೆಗೆದರೆ, ೬ ಪೇಜುಗಳ ಕಾಗದ. ಏನಪ್ಪಾ! ಅಂಥ ಮಹತ್ವದ್ದು, ಇಷ್ಟೂದ್ದದ್ದು ಎಂದು ಓದ ತೊಡಗಿದೆ.
ಮಾತೃಶ್ರೀ ಸಮನಾಳದ ಅಕ್ಕನಿಗೆ ನಿನ್ನ ತಂಗಿಯಾದ ಗುಂಡಮ್ಮ ಮಾಡುವ ನಮಸ್ಕಾರಗಳು. ಉllಕುllಶಲೋಪರಿ ಸಾಂಪ್ರತ (ಪರವಾಗಿಲ್ವೇ, ಗೌರವಯುತವಾಗಿ ಬರೆದಿದ್ದಾಳೆ). ನಾವೆಲ್ಲ ಇಲ್ಲಿ ತಿಂದು, ಉಂಡು, ಹರಟೆ ಹೊಡೆದು, ಸಿನಿಮಾ ನೋಡಿಕೊಂಡು ಚೆನ್ನಾಗಿದ್ದೇವೆ (ನನಗೆ ಹೊಟ್ಟೆ ಉರಿ, ಈ ಚಳಿ ದೇಶದಲ್ಲಿ ಯಾವ ಕನ್ನಡ ಸಿನಿಮಾ ಬರುತ್ತೆಂತ).
ಮುಖ್ಯ ವಿಷಯವೆಂದರೆ, ನಾನು, ನನ್ನೆಜಮಾನರು ವಿದೇಶ ಪ್ರವಾಸ ಮಾಡೋದಂತ ನಿಶ್ಚಯಿಸಿದ್ದೇವೆ. ನಿನಗೆ ಗೊತ್ತಿರುವ ಹಾಗೆ ನನ್ನ ಗಂಡನಿಗೆ ಪಿಂಚಣಿ ದೊರಕಿದೆ. ನೀನೇ ಎಷ್ಟೋ ಸಲ “ಬಾರೆ, ನಮ್ಮೂರಿಗೆ, ಬೇಕಾದರೆ ಟಿಕೆಟ್ ಕಳಿಸ್ತೇನೆ” ಅಂತ ಕರೀತ್ಲೇ ಇರ್ತೀಯ. ನಾನೇ, “ಬೇಡ ಕಣೇ, ನಾವಿಬ್ಬರೂ ಬಹಳ ಮಡಿ, ಆಚಾರವಂತರು, ಸರಿ ಹೋಗಲ್ಲ” ಅಂತ ದೂಡಿದ್ದೇನೆ. ನೀನು, “ಪರವಾಗಿಲ್ಲ, ನಾನು ನೋಡ್ಕೋತೀನಿ” ಅಂತ ಧೈರ್ಯ ಕೊಟ್ಟಿದೀಯ. ನಮ್ಮ ಮಠದವರು ಮುದ್ರೆ ಒತ್ತಿ, ಪಂಚಗವ್ಯ ಕುಡಿಸಿ, “ದೇವರು ಕ್ಷಮಿಸುತ್ತಾನೆ, ಪರಂಗಿ ದೇಶ ಪ್ರವಾಸ ಮಾಡಿದ್ದಕ್ಕೆ” ಅಂತ ಅಭಯ ನೀಡಿದ್ದಾರೆ. ಈಗ ಹೊರಟಿದ್ದೇವೆ. ಟಿಕೆಟ್ಟಿಗೆ ೨ ಲಕ್ಷ ಆಗುತ್ತೆ. ನೀನೇ ಮಾಡಿಸಿ ಕಳಿಸಿಬಿಡು, ರಾಹು ಕಾಲದಲ್ಲಿ ಮಾತ್ರ ಟಿಕೆಟ್ ತೊಗೋಬೇಡ (ಗ್ರಹಚಾರ, ನನಗೇನು ಗೊತ್ತು, ರಾಹು ಕಾಲ ಯಾವಾಗ ಅಂತ). ನಾನು ಇಳಕಲ್ ಸೀರೆ ಕಚ್ಚೆ ಉಟ್ಟು, ಗುಂಡಗೆ ಕುಂಕುಮ ಹಚ್ಚಿ, ಎಣ್ಣೆ ತೀಡಿ ತಲೆ ಬಾಚಿ, ಹೂವ ಮುಡಿದಿರುತ್ತೇನೆ. ಪ್ರತಿದಿನ ನನಗೆ ಮಲ್ಲಿಗೆ ಹೂವ ಬೇಕು, ತೆಗೆದಿಟ್ಟಿರು. ಬಾವನವರಿಗೆ ಗಂಧ ತೇಯ್ದು ಮುದ್ರೆ ಹಾಕಿಕೊಳ್ಳಲು ರೆಡಿ ಮಾಡಿಟ್ಟಿರು. ನಿಮ್ಮೂರಲ್ಲಿ ವಿಪರೀತ ಚಳಿ, ನಮ್ಮ ರೂಮು ಬಿಸಿಯಾಗಿರಬೇಕು. ನಮಗೆಂತ ೬ ಜೊತೆ ಕಾಲು ಚೀಲ, ಟೋಪಿ ಮತ್ತು ಮಫ್ಲರ್ ಇಟ್ಟಿರು.
ನಮ್ಮ ದಿನಚರಿ ಹೀಗಿರುತ್ತೆ: ಬೆಳಗ್ಗೆ ೫ ಗಂಟೆಗೆ ಸುಪ್ರಭಾತ. ಸ್ನಾನಕ್ಕೆ ಬಿಸಿ ಬಿಸಿ ನೀರು ರೆಡಿ ಇರಲಿ. ಆಮೇಲೆ ಜೋರಾಗಿ ವಿಷ್ಣು ಸಹಸ್ರನಾಮ ಪಠನ (ದೇವರೇ ಗತಿ, ಪಕ್ಕದ ಮನೆ ಪೀಟರ್ ಏನೆಂದಾನು). ೬:೩೦ಕ್ಕೆ ಬೆಳಗಿನ ತಿಂಡಿ. ಉಪ್ಪಿಟ್ಟು, ದೋಸೆ, ಗೊಜ್ಜವಲಕ್ಕಿ, ಅಕ್ಕಿ ರೊಟ್ಟಿ-ಮಾವಿನಕಾಯಿ ಚಟ್ನಿ ಏನಾದರೂ ಮಡಿಯಲ್ಲಿ ಮಾಡಿಟ್ಟಿರು. ಫಿಲ್ಟರ್ ಕಾಫಿ ಮರೀಬೇಡ. ೧೦:೩೦ಕ್ಕೆ ಒಂದು ರವೇ ಉಂಡೆ, ಒಂದು ಗ್ಲಾಸ್ ಬಾದಾಮಿ ಹಾಲು ಸಾಕು. ೧:೩೦ಕ್ಕೆ ಊಟ. ಈರುಳ್ಳಿ-ಗೀರುಳ್ಳಿ, ಕ್ಯಾರೆಟ್, ಬೀಟ್ ರೂಟ್ ಮಡಿಗೆ ಆಗಲ್ಲ. ಹುಳಿಗೆ ಪಡವಲ ಕಾಯಿ, ಗೋರಿಕಾಯಿ, ಸುವರ್ಣ ಗಡ್ಡೆ ಆದೀತು. ಖಾರವಾಗೇ ಇರಲಿ. ಜೊತೆಗೆ ಸಂಡಿಗೆ ಕರಿದು ಬಿಡು. ಚಟ್ನಿಪುಡಿ, ಮಾವಿನಕಾಯಿ ಮಿಡಿ ಉಪ್ಪಿನಕಾಯಿ, ಗೊಜ್ಜು ಎಲ್ಲ ಇಟ್ಟಿರು. ಬೆಣ್ಣೆ ಕಾಸಿದ ತುಪ್ಪ ಅವಶ್ಯ. ಊಟವಾದ ಮೇಲೆ ಮಲಗಲು ಚಾಪೆ, ದಿಂಬು ಸಾಕು. ಎದ್ದ ಮೇಲೆ, ಬಿಸಿ ಕಾಫಿ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಕೊಬ್ರಿ ಮಿಠಾಯಿ ಬಯೋ ಆಡ್ಸೋಕಿದ್ರೆ ಒಳ್ಳೇದು. ರಾತ್ರಿ ಊಟ ಸಿಂಪಲ್ಲಾಗೇ ಇರಬೇಕು. ಅನ್ನ-ಸಾರು, ತೊವ್ವೆ, ಚಪಾತಿ, ಮೊಸರು. ಮಲಗೋಕ್ಮುಂಚೆ ಒಂದ್ಲೋಟ ಹಾಲು. ಇನ್ನೇನೂ ಬೇಡ ಕಣೆ, ನಿನಗೆ ತೊಂದ್ರೆ ಆಗ್ಬಿಡತ್ತೆ. ಆಮೇಲೆ ಊರು ತೋರಿಸ್ಬೇಕು. ರಾಣಿ ಅರಮನೇ, ಒಡವೆ ಎಲ್ಲಾನೂ ಬೆಚ್ಚಗಿನ ಕಾರಲ್ಲಿ ಕರಕೊಂಡು ಹೋಗೇ ಅಕ್ಕಮ್ಮ.
ಇನ್ನ ೩ ಪೇಜ್ ಇದೇರಿ. ಬರೀ ಊಟ ತಿಂಡಿಗೇ ಈ ಪಾಟಿ ಗಲಾಟೆ ಮಾಡಿದ್ದಾಳಲ್ಲ! ನಮ್ದೋ ಸೆಮಿ ಡಿಟ್ಯಾಚ್ಡ್ ಮನೆ; ದೇವರ ಮನೆಯಿಲ್ಲ, ತುಳಸಿ ಗಿಡವಿಲ್ಲ. ಏನಂತಾಳೋ, ಯಾರಿಗ್ಗೊತ್ತು? ಅದಕ್ಕೆ ಒಂದು ಪಿಲಾನು ಮಾಡಿದೆ. ತಕ್ಷಣವೇ, ಉತ್ತರ ಬರೆಯಲು ಕುಳಿತೆ.
ಪ್ರೀತಿಯ ತಂಗಚ್ಚಿಯಾದ ಗುಂಡು ಬಾಯಿಗೆ, ನಿನ್ನ ಅಕ್ಕ ಮಾಡುವ ಅನಂತ ಆಶೀರ್ವಾದಗಳು. ನೀನು ಬರುತ್ತಿ ಅಂತ ತಿಳಿದು, ವಿಪರೀತ ಸಂತೋಷವಾಗಿ ಕುಣಿದುಬಿಟ್ಟೆ. ನಮ್ಮ ಮನೆಗೆ ಖಂಡಿತ ಬಾರೆ. ಭಾವನವರನ್ನು ಕರೆದು ತಾರೆ. ನಮ್ಮ ಕುಟೀರ ನಿಮಗೆ ಇಷ್ಟವಾಗಬಹುದೆಂದು ಆಶಿಸುವೆ. ನಾವಿರುವುದು ಸೆಮಿ ಡಿಟ್ಯಾಚ್ಡ್ ಮನೆ, ಅಂದರೆ ಒಂದಕ್ಕೆ ಒಂದು ಅಂಟಿಕೊಂಡಿರುವ ಎರಡು ಮನೆಗಳಲ್ಲಿ ಒಂದು. ಪಕ್ಕದ ಮನೆಯಲ್ಲಿರುವವರು ಇಂಗ್ಲೀಷ್ ಜನ. ಅವರಿಗೆ ಕನ್ನಡ ಬರಲ್ಲ. ನೀನು ಬೆಳ್ಳಂಬೆಳಗ್ಗೆ ವಿಷ್ಣು ಸಹಸ್ರನಾಮ ಪಠಿಸಿದರೆ, ಪೋಲೀಸಿಗೆ ಕಂಪ್ಲೇಂಟ್ ಕೊಟ್ಟಾರು. ಒಳ್ಳೇ ಚಳಿಗಾಲದಲ್ಲಿ ಬರಬೇಕು ಅಂತೀಯ. ಇಲ್ಲಿ ಈಗ ಕಿಟಕಿ ಮೇಲೆಲ್ಲಾ ಮಂಜು ಮುಸುಕಿದೆ. ಗಡಗಡ ನಡುಗಿಸುವ ಅಸಾಧ್ಯ ಚಳಿ ಕಣೆ. ಹಲ್ಲು ಕಟಕಟಗುಟ್ಟುತ್ತೆ. ನಿನ್ನ ಕಚ್ಚೆ ಸೀರೆ ನಡಿಯಲ್ಲ. Trousers, leggings, sweaters ಅತ್ಯವಶ್ಯ. ಕಾಲಿಗೆ ದೊಡ್ಡ ಬೂಟು ಹಾಕಬೇಕು. ಮನೆ ಹೊರಗೆ ಕಾಲಿಟ್ಟಾಗ, ಮಂಜಿನ ಮೇಲೆ ಕಾಲು ಜಾರಿ ಬಿದ್ದು, ನಿನ್ನ, ಭಾವನವರ ಸೊಂಟ, ಮಂಡಿ ಮೂಳೆ ಮುರಿದ್ರೇನು ಮಾಡೋದು? ಆಸ್ಪತ್ರೇಲಿ ಮ್ಲೇಚ್ಛರ ಮಧ್ಯ ಬಿದ್ಕೊಂಡು ಸೂಪು, ಬ್ರೆಡ್ಡು ತಿನ್ಬೇಕಷ್ಟೇ; ಮೇಲಿಂದ ಚೀಸ್ ಉದುರಿಸಿ ಕೊಟ್ಟೇನು. ಮನೆಯಲ್ಲಿ ಟಿ.ವಿ ಬಿಟ್ಟರೆ ಇನ್ನೇನಿಲ್ಲ. ಅದರಲ್ಲೂ ಕನ್ನಡ ಬರಲ್ಲ; ಹತ್ರದಲ್ಲೆಲ್ಲೂ ಕನ್ನಡ ಸಿನಿಮಾ ಬರಲ್ಲ ಕಣೇ. ಪಕ್ಕದ ಮಾನೆಯವರ್ಯಾರೂ ಹರಟೆ ಕೊಚ್ಕೋಕೆ ಬರಲ್ಲ ಕಣೇ, ಅವಕ್ಕೆ ಕನ್ನಡ ಬಂದ್ರೆ ತಾನೇ? ಆದ್ರೂನೆ, ನೀನು ಅಪರೂಪಕ್ಕೆ ಬರೋದು ಅಪಾರ ಸಂತೋಷ ಕಣೆ. ಖಂಡಿತ ಬಾರೆ. ಎಲ್ಲ ರೆಡಿ ಮಾಡಿಟ್ಟಿರ್ತೇನೆ. ಇತಿ ನಿನ್ನ ಪ್ರೀತಿಯ ಅಕ್ಕ, ವೆಂಕೂಬಾಯಿ
ಈ ಪತ್ರಕ್ಕಿನ್ನೂ ಗುಂಡಮ್ಮನ ಉತ್ತರ ಬಂದಿಲ್ಲ. ಹ್ಹ, ಹ್ಹ, ಹ್ಹ ! ಹೇಗಿದೆ ನನ್ನ ಪಿಲ್ಯಾನು?
