ಲೋಹದ ಹಕ್ಕಿ

 

 

ಉತ್ತರ ಪಾಶ್ಚಿಮಾತ್ಯ ದೇಶಗಳಲ್ಲಿ ಜೂನ್ ಜೂಲೈ ತಿಂಗಳೆಂದರೆ ಬೇಸಿಗೆ ! ಪ್ರವಾಸಕ್ಕೆ ಅನುಕೂಲಕರ ಸಮಯ.  ಡಿಸೆಂಬರ್  ತಿಂಗಳಿಂದ ಜನರನ್ನು ಗುತ್ತಿಗೆ ಹಿಡಿಯುವ ಚಳಿ ಗಾಳಿ ಮಳೆಗಳು ಕೊಂಚ ಹಿಂದಕ್ಕೆ ಸರಿದು ಎಲ್ಲರೂ ಪ್ರವಾಸಕ್ಕೆ ಸಿದ್ದರಾಗಿರುವ ಸಮಯ. ಎಲ್ಲ ಅನಿವಾಸಿ ಕನ್ನಡಿಗರಿಗೆ ಯುರೋಪ್, ಅಮೇರಿಕ ಮತ್ತು ಭಾರತ ಹೀಗೆ ಅನೇಕ ದೂರ ದೇಶಗಳಿಗೆ ಲೋಹದ ಹಕ್ಕಿಯನ್ನೇರಿ ಸಂಚರಿಸುವ ತವಕ ಮತ್ತು ಸಂಭ್ರಮ.

ರೆಕ್ಕೆ ಇಲ್ಲದ ಮನುಷ್ಯ ತನ್ನ ನೂರಾರು ವರ್ಷಗಳ ಸಾಧನೆಯಿಂದ ಕಟ್ಟಿದ ಈ ಲೋಹದ ಹಕ್ಕಿ ಅವನ ಕನಸಿನಷ್ಟೇ ಇತಿಮಿತಿಗಳಿಲ್ಲದೆ, ಹಗಲ್ಲೆನ್ನದೆ, ರಾತ್ರಿಯೆನ್ನದೆ,  ನೈಸರ್ಗಿಕ ಕಟ್ಟಳೆಗಳಿಲ್ಲದೆ ಸ್ವಚ್ಛಂದ ವಾಗಿ ಹತ್ತು ದಿಕ್ಕಿಗೂ ಹಾರಬಲ್ಲುದು. ಇಂತಹ ಲೋಹದ ಹಕ್ಕಿಯ ಸುಂದರ ಚಿತ್ರಣವನ್ನು ಸ್ವಾರಸ್ಯಕರವಾಗಿ ಸುದರ್ಶನ್  ತಮ್ಮ ಕವನದಲ್ಲಿ ಸೆರೆ ಹಿಡಿದಿದ್ದಾರೆ . ಈ ಉಲ್ಲಾಸದಾಯಕ ಕವನವನ್ನು ಓದಿ ಆನಂದಿಸಿರಿ.

ಅಂದಹಾಗೆ ಮುಂಬರುವ ರಜಾದಿನಗಳಲ್ಲಿ ಈ ಲೋಹದ ಹಕ್ಕಿಯ ಬೆನ್ನೇರುವುದು ಸಾಕಷ್ಟು ದುಬಾರಿ ಕೆಲಸ!
ಬೇಗ ನಿಮ್ಮ ಏರ್ ಟಿಕೇಟ್ ಕಾಯ್ದಿರಿಸಿ ( ಸಂ )

 

ಲೋಹದ ಹಕ್ಕಿ

ಹಾರುತಿದೆ ನೋಡಲ್ಲಿ ಲೋಹದಾ ಹಕ್ಕಿ
ದೂರದೂರಕೆ ಸರಿದು ತಾನಾಯ್ತು ಚುಕ್ಕಿ

ಹಕ್ಕಿ ಪಕ್ಷಿಗಳಂತೆ ಗರಿಪುಕ್ಕ ಇದಕಿಲ್ಲ
ಕೊಕ್ಕಿನಲಿ ಹುಳು ಕಡ್ಡಿ ಹಿಡಿಯುವುದೆ ಇಲ್ಲ
ಅಕ್ಕಿ-ಕಾಳುಗಳನ್ನು ಹೆಕ್ಕಿ ತಿನ್ನುವುದಿಲ್ಲ
ಸೊಕ್ಕಿನಲಿ ಘರ್ಜಿಸುತ ಹಾರುತಿಹುದಲ್ಲ

ಮುಂಜಾವಿನಲಿ ಮುದದಿ ಕಲರವವ ಮಾಡದಿದು
ಸಂಜೆಯಾಗಲು ಗೂಡು ಸೇರಿಕೊಳದು
ಕುಂಜರವ ಮೀರಿಸುವ ಗಾತ್ರದೊಳು ಮೆರೆದಿಹುದು
ಅಂಜಿಸುತ ಘರ್ಜನೆಯ ಮಾಡುತೇರುವುದು

ಮೊಟ್ಟೆ ಹಾಕುವುದಿಲ್ಲ ಕಾವು ನೀಡುವುದಿಲ್ಲ
ಕಟ್ಟಿ ಗೂಡನು ಅಲ್ಲಿ ವಾಸಿಸುವುದಿಲ್ಲ
ಚಿಟ್ಟೆಯಾ ತೆರದಲ್ಲಿ ಬಣ್ಣ ಬಣ್ಣದ ಚಿತ್ರ
ಒಟ್ಟು ದೇಹದ ತುಂಬ ತುಂಬಿರುವುದಲ್ಲ

ಖಗ ಜೀವಿಗಳ ತೆರದಿ ಹಗೆ ಗಳಾರಿದಕಿಲ್ಲ
ಗಗನ ಸಖಿಯರು ಇದರ ಒಡಲೊಳಿಹರಲ್ಲ
ನಗುಮೊಗದಿ ಪಯಣಿಗರ ಸ್ವಾಗತಿಸಿ ಸತ್ಕರಿಸಿ
ಆಗಾಗ ಕುಶಲವನು ಕೇಳುತಿಹರಲ್ಲ

ಒಡಲಿನಾ ತುಂಬೆಲ್ಲ ಜನಗಳೇ ತುಂಬಿರಲು
ಕಡಲ ಮೇಲಿನ ಹಾದಿ ಹಾರಿ ಶ್ರಮಿಸಿ
ನಡುನಡುವೆ ಇಳಿಯುತಲೋ ಇಲ್ಲದೇ ಹಾರುತಲೊ
ನೋಡಲ್ಲಿ ಹಾರುತಿದೆ ದೇಶಗಳ ಕ್ರಮಿಸಿ

ಹಾರಲಾಗದೆ ಸಹಜ ರೆಕ್ಕೆ ಇಲ್ಲದ ಮನುಜ
ಮಾರು ಹೋಗುತ ಈ ಖಗ ಜಗದ ಸುಖಕೆ
ನೂರಾರು ತಲೆಮಾರುಗಳಂತರದಿ ಕಟ್ಟಿದನು
ಹಾರು ಹಕ್ಕಿಯ ತಣಿಸೆ ತನ್ನ ಬಯಕೆ.

ಡಾ.ಸುದರ್ಶನ ಗುರುರಾಜರಾವ್.