ಕೇಶವ ಕುಲ್ಕರ್ಣಿ ಮತ್ತು ಲಾಸ್ಯ ಬಸವರಾಜಪ್ಪ ರವರು ಬರೆದಿರುವ ಎರಡು ಕವಿತೆಗಳು  

ಆರುವರ್ಷದ ಮಗುವೊಂದು ಮೂವತ್ತು ದಿನಗಳ ಈ  ಲಾಕ್ಡೌನ್ ಸಾಕಾಗಿದೆ,   ತಾನು ಮನೆಯಿಂದ ಹೊರನಡೆದು ಆಟವಾಡಬೇಕು ಮತ್ತು ಸ್ನೇಹಿತರೊಂದಿಗೆ ಬೆರೆಯಬೇಕು  ಎಂದು ಅಳಲು ತೋಡಿಕೊಳ್ಳುತ್ತಿರುವ ಹಾಡಿನ ವಿಡಿಯೋ ಒಂದನ್ನು ಬಿಬಿಸಿ ನಲ್ಲಿ ನೋಡಿದಾಗ, ಅದು ಬರಿ ಮಕ್ಕಳ ಅಳಲಲ್ಲ ವಯಸ್ಕರಿಂದ ವಯೋವೃದ್ಧರ ವರೆಗೂ ಎಲ್ಲರ ಅಳಲು ಎಂಬುದು ಭಾಸವಾಗುತ್ತಿತ್ತು. ನಿಜವಲ್ಲವೇ? ವಾಟ್ಸ್ ಆಪ್ ಚಾಲೆಂಜ್ ಗಳು , ಜೂಮ್ ಕರೆಗಳು, ವರ್ಚುಯಲ್ ಪಾನಗಳು, ಟಿಕ್ ಟಾಕ್ ವಿಡಿಯೋ ಗಳು, ಒಂದೇ ಎರಡೇ? ಇಷ್ಟೆಲ್ಲ ಮಾಡಿದರೂ ನಮ್ಮ ಸಮಾಜ ಸಹಜ ಸ್ಥಿತಿಗೆ ಯಾವಾಗ ಮರಳುವುದೋ ಎಂಬ ಕೊರಗು ನೆರಳಂತೆ ಜೊತೆಯಾಗಿದೆ. ನಮ್ಮೆಲ್ಲರ ತುಡಿತವನ್ನು, ನಾಡಿ ಮಿಡಿತವನ್ನು  ‘ಅನಿವಾಸಿ’ಯ ಕವಿ ಕೇಶವ ಕುಲ್ಕರ್ಣಿ ರವರು  ತಮ್ಮ ‘ಆಶಯ’ ಎಂಬ ಕವಿತೆಯಲ್ಲಿ ಕಟ್ಟಿ ಹಾಕಿದ್ದಾರೆ.  ಕರೋನಾದ ರುದ್ರ ನರ್ತನ, ಅದರಿಂದಾಗಿರುವ ಆಕ್ರಂದನ, ಅಸ್ತ ವ್ಯಸ್ತವಾಗಿರುವ ಜನಜೀವನ, ಮಹಾ ನಗರಗಳ ಸ್ಮಶಾನ ಮೌನ, ಇವೆಲ್ಲವನ್ನು ಸಹಿಸಲಾರದೆ ಮಹಾಮಾರಿಗೆ ಛೀಮಾರಿ ಹಾಕುತ್ತಲೇ ನಮ್ಮನ್ನು ತೊರೆದು ಹೊರಟುಬಿಡು ಎಂದು ಅರಿಕೆ ಮಾಡಿಕೊಳ್ಳುತ್ತಿದ್ದಾರೆ ‘ಅನಿವಾಸಿಯ’ ಹೊಸ ಕವಯತ್ರಿ ಲಾಸ್ಯ ಬಸವರಾಜಪ್ಪ ತಮ್ಮ ‘ಕರೋನ – ನಿನ್ನಲ್ಲೊಂದು ಅರಿಕೆ‘ ಎಂಬ ಕವಿತೆಯಲ್ಲಿ. ಈ ಇಬ್ಬರು ಕವಿಗಳ ಆಶಯ ಬಹುಬೇಗ ಸಾಕಾರವಾಗಲಿ, ಅರಿಕೆ ಫಲಪ್ರದವಾಗಲಿ, ಬದುಕಿನ ಸಹಜತೆ ಮರಳಲಿ ಎಂದು ಹಾರೈಸುತ್ತೇನೆ.  ಕವಿತೆಗಳಿಗೆಂದೇ ಮೀಸಲಾಗಿರುವ ಈ ವಾರದ ಅನಿವಾಸಿ ಸಂಚಿಕೆ ನಿಮಗೆ ಇಷ್ಟವಾಗುತ್ತದೆ ಎಂದು ನಂಬಿದ್ದೇನೆ . (ಸಂ)

ಆಶಯ

ಕೇಶವ ಕುಲ್ಕರ್ಣಿ

ಮತ್ತೆ ಮಕ್ಕಳು ಅಜ್ಜ-ಅಜ್ಜಿಯ
ಕೈಯ ಹಿಡಿದು ಆಡಲಿ
ದೂರ ಬದುಕುವ ಮನೆಯ ಮಂದಿ
ಮತ್ತೆ ಭೇಟಿಯ ಮಾಡಲಿ

ಗೆಳೆಯ ಗೆಳತಿಯರೆಲ್ಲ ಕೂಡಿ
ಹಾಡಿ ಕುಣಿದು ನಲಿಯಲಿ
ಬಂಧು ಬಳಗದ ಜಾತ್ರೆಯಲ್ಲಿ
ಮದುವೆ ಸಂಭ್ರಮ ಜರುಗಲಿ

ವಿದ್ಯೆವಿನಯವ ಹೇಳಿಕೊಡುವ
ಶಾಲೆ ಮತ್ತೆ ತೆರೆಯಲಿ
ಗಾನಸಭೆಗಳು ಸಿನಿಮಂದಿರಗಳು
ತುಂಬಿ ತುಂಬಿ ತುಳುಕಲಿ

ಮತ್ತೆ ಮುಖದಲ್ಲಿ ನಗುವು ಮೂಡಲಿ
ಮತ್ತೆ ಮೂಡಣ ಮೊಳಗಲಿ
ಮತ್ತೆ ಮನದಲ್ಲಿ ಶಾಂತಿ ಕಾಣಲಿ
ಮತ್ತೆ ಪಡುವಣ ಪುಟಿಯಲಿ 

ಕೊರೋನ – ನಿನ್ನಲ್ಲೊಂದು ಅರಿಕೆ

ಲಾಸ್ಯ ಬಸವರಾಜಪ್ಪ

ಕವಯಿತ್ರಿ ಲಾಸ್ಯ ಬಸವರಾಜಪ್ಪ ‘ಅನಿವಾಸಿ’ ಗೆ ಹೊಸ ಸೇರ್ಪಡೆ. ಮೂಲತಃ ಮೈಸೂರಿನವರಾದ ಲಾಸ್ಯ , ವೃತ್ತಿಯಿಂದ ಐಟಿ  ಉದ್ಯೋಗಿ, ಪ್ರವೃತ್ತಿ ಯಿಂದ ಕವಿ. ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಲಂಡನ್ ನ ಆರ್ಪಿಂಗ್ಟನ್ ನಲ್ಲಿ ಸುಮಾರು ೫ ವರ್ಷಗಳಿಂದ ನೆಲೆಸಿದ್ದಾರೆ. ಇವರ ಕವನಗಳು ‘ಕರ್ಮವೀರ’, ‘ಆಂದೋಲನ’, ಮುಂತಾದ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ, ಮತ್ತು ತಮ್ಮ ಅನುಭವಗಳನ್ನು ತಮ್ಮ ಬ್ಲಾಗ್ ಮೂಲಕ ಹಂಚಿಕೊಳ್ಳುತ್ತಾರೆ. ‘ಅನಿವಾಸಿ’ ಗುಂಪಿನ ಪರಿಚಯ ಬೆಳೆದಿದ್ದಕ್ಕೆ ಸಂತಸ ವ್ಯಕ್ತಪಡಿಸುವ ಲಾಸ್ಯ, ಗುಂಪಿನ ಸದಸ್ಯರಿಗೆಲ್ಲಾ ಶುಭಹಾರೈಸುತ್ತಾರೆ.

ಹೇ ಕೊರೋನ, ಸಾಕು ನಿಲ್ಲಿಸು ನಿನ್ನ ರುದ್ರ ನರ್ತನ
ಭಯಭೀತರಾಗಿದ್ದಾರೆ ಎಲ್ಲ ದೇಶದ ಜನ
ಮುಗಿಲು ಮುಟ್ಟಿದೆ ವಿಶ್ವದ ಆಕ್ರಂದನ
ಬೇಕಿದೆ ನೊಂದ ಮನಗಳಿಗೀಗ ಕೊಂಚ ಸಾಂತ್ವನ

ಕಣ್ಣಿಗೆ ಕಾಣದ ಹೆಮ್ಮಾರಿ,
ಮಾಗಿದ ಮುಪ್ಪಿನ ಜೀವಗಳೇ ನಿನಗೇಕೆ ಗುರಿ?
ರಕ್ತದಾಹಿಯೇ ನೀನು, ಏಕಿಷ್ಟು ಕ್ರೂರಿ?

ಬದುಕಿನ ಮುಸ್ಸಂಜೆಯಲಿ, ನೆನಪುಗಳ ತಡವುತ್ತಾ
ಕಳೆದು ಹೋದ ದಿನಗಳ ಮೆಲುಕು ಹಾಕುತ್ತಾ
ಮೊಮ್ಮಕ್ಕಳ ಜೊತೆ ಮಕ್ಕಳಾಗಿ ಆಟವಾಡುತ್ತಾ
ಕಾಲ ಹಾಕುತ್ತಿರುವ ಹಣ್ಣೆಲೆಗಳ ಮೇಲೆ ನಿನಗೇಕಿಲ್ಲ ಕರುಣೆ?
ಅರ್ಥವಾಗದೇ ಹೊಸ ಚಿಗುರು-ಹಳೆ ಬೇರುಗಳ ಅಂತರಂಗದ ಬವಣೆ?

ಕಳ್ಳ ಬೆಕ್ಕಿನ ಹೆಜ್ಜೆಯಲಿ ಭೂಮಂಡಲವ ಆವರಿಸಿ
ಆಪೋಷನಕ್ಕೆ  ಅಣಿಯಾಗುತ್ತಿರುವ ಓ ಮಹಾಮಾರಿ ಕೊರೋನ
ನಿನ್ನ ಆರ್ಭಟಕೆ ಹೆದರಿ ಅಸ್ತವ್ಯಸ್ತವಾಗಿದೆ ಜನಜೀವನ 
ತಲ್ಲಣಿಸಿದೆ ಜಗ, ಎಲ್ಲೆಡೆ ಹರಡಿದೆ ಸ್ಮಶಾನ ಮೌನ 

ಕಿಟಕಿ ಬಾಗಿಲ ಮುಚ್ಚಿ, ಗುಮ್ಮಕ್ಕೆ ಹೆದರಿ ನಡುಗುತ್ತಾ,
ಸತ್ತ ಗೆಳೆಯರ ಸಂಸ್ಕಾರಕ್ಕೂ ಹೋಗಲಾರದೆ ಅಸಹಾಯಕತೆಯಲ್ಲಿ ನಲುಗುತ್ತಾ,
ಗೆಳೆಯ-ಗೆಳತಿಯರ ಒಡನಾಟವಿಲ್ಲದೆ ಸೊರಗುತ್ತಾ, ನಿನಗೆ ಹಿಡಿಶಾಪ ಹಾಕುತ್ತಾ,
ಮೂಕ ವೇದನೆಯಲ್ಲಿ ಮುಳುಗಿದೆ ಪ್ರಪಂಚ
ಇರಲಿ ದಯೆ ಅವರ ಮೇಲೆ ಇನ್ನಾದರೂ ಕೊಂಚ

ಅಗಲಿರುವರು ಆಗಲೇ ನಮ್ಮಿಂದ ಲಕ್ಷಾಂತರ
ಹೊರಟು ಬಿಡು ಇನ್ನಾದರೂ ಎಲ್ಲರಿಂದ ದೂರ
ದುಡಿವ ಕೈಗಳು ಹೊರಲಾರವು ಆರ್ಥಿಕ ಕುಸಿತದ ಭಾರ
ಭಯ-ಆತಂಕ ಮನೆ ಮಾಡಿ ಆಗಿದೆ ಹೆಮ್ಮರ
ಹೊಮ್ಮಲಿ ಕಾರ್ಮುಗಿಲ ಅಂಚಿನಿಂದ ಸುಮಧುರ ಸುಸ್ವರ!