ತಾರುಣ್ಯದ ಹೊಸಿಲಲ್ಲಿ ಜೀವನದ ಮೊಗ್ಗು ಹಗುರಾಗಿ ಒಂದೊಂದೇ ಪದರನ್ನು ಬಿಡಿಸುವ ಕಾಲ ಹರೆಯ. ಬಾಲ್ಯ ಎಂದು ಕಳೆದು ಈ ಹೊಸಿಲನ್ನು ದಾಟುತ್ತೇವೆ ಎಂಬ ಅರಿವು ಬರುವ ಮೊದಲೇ; ಕಣ್ಣು ರೆಪ್ಪೆ ಹೊಡೆಯುವಷ್ಟರಲ್ಲಿ; ಉಸಿರೆಳೆದು ಬಿಡುವಷ್ಟರಲ್ಲಿ ಹರೆಯದ ಮಾಧುರ್ಯ ಆರಿರುತ್ತದೆ. ಹರೆಯದ ಒಗಟನ್ನು ಬಿಡಿಸುತ್ತ ಹೋಗಿದ್ದಾರೆ ಪ್ರೇಮಲತಾ…
ಮನವು ಮೂಕವಾಗಿ, ಮನಸು ಹಗುರಾಗಿ
ಸ್ನೇಹದಲೆಯ ಮಧುರ ಭಾವನೆಯಾಗಿ
ಮನೆಯವರು ಹೇಳುವುದು ತಪ್ಪು-ಬೆಪ್ಪಾಗಿ
ಕಾಣಿಸುವಾಗ ನಿಶ್ಯಬ್ದವಾಗಿ, ಕಾಲಿಟ್ಟಿತೇನು?
ಇದೇ ಮನೆ ಹುಡುಗಿ, ಅದೇ ಪಕ್ಕದ್ಮನೆ ಹುಡುಗ
ಕಣ್ಣುಗಳು ಸಂಧಿಸಿದಾಗ, ಮಿಂಚೊಂದು ಹೊಡೆದು
ಅಕಸ್ಮಾತ್ತಾಗಿ ಕೈತಾಗಿದರೆ ಮೈ ಬಿಸಿಯಾಗಿ ಮನ
ಮುದಗೊಂಡಾಗ, ಕದ್ದು ಪ್ರವೇಶಿಸಿತೇನು?

ಕನ್ನಡಿಯೆದುರು ನಿಂತು ಕಾಲ ಮರೆತಾಗ
ಬಾಗಿಲು ಮುಚ್ಚಿ, ಬದಲಾದ ದೇಹ ನಿರುಕಿಸಿದಾಗ
ಮನಸ್ಸು ಹಿಗ್ಗಿ,ಕಣ್ಣುಗಳು ನಾಚಿ ಬೆದರಿ,
ಬಟ್ಟೆಯಲು ಕಂಡಿತೆಂಬ ಆತಂಕದಲಿ, ಇಣುಕಿಟ್ಟಿತೇನು?
ಜಗವೆಲ್ಲ ಬಲ್ಲ ಹುರುಪು, ಮಾತು ಮಾತಲ್ಲೂ ನಗು,
ಹೊಸಬಟ್ಟೆ, ವೇಷ, ಮೇಕಪ್ಪಿನಲಿ ಹಿಗ್ಗು
ಸಿನಿಮಾ-ಟಿವಿ ಚುಂಬನ ದೃಶ್ಯದಲಿ ರೋಮಾಂಚನ
ಮುಖದಮೊಡಮೆಯಸಿಂಚನದಲಿ,ಕಾಣಿಸಿಕೊಂಡಿತೇನು?
ಅವಳೂ ಸುಂದರ, ಇವನೂ ಸುಂದರ, ಮಿಕ್ಕೆಲ್ಲ ಮುದಿಗೊಡ್ಡು
ಸಣ್ಣವರು ತಮ್ಮ-ತಂಗಿ, ಅವರ ಲೆಕ್ಕವೇನು ಬರೀ ಮೊದ್ದು
ತಾರುಣ್ಯದ ಹೊಸವೇಗವೇ ಸರಿ,ಎಲ್ಲ ಹೀಗೇ ನಿರ್ಧರಿತ
ಸರಸ-ಸಲ್ಲಾಪ,ಧಿಡೀರ್ ಮುನಿಸು, ಅನುಭವಕ್ಕೆ ಬಂತೇನು?
——– ಪ್ರೇಮಲತ.ಬಿ