‘ಕೋವಿಡ್: ಸಿಂಹದ ಬಾಯಿಂದ’ ನೈಜ ಕಥೆ ಮತ್ತು ‘ಕರಾಳ ಕರೋನ’ ಕವಿತೆ

ಕೊರೋನಾ ವೈರಸ್ ಈಗ   ಜಗತ್ತಿನಾದ್ಯಂತ ಒಂದು ಮಿಲಿಯನ್ ಗೂ ಹೆಚ್ಚು ಜನರಿಗೆ ಹರಡಿದ್ದು, ಬಿಲಿಯನ್ ಗಟ್ಟಲೆ ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಅನೇಕ ಕಡೆಗಳಲ್ಲಿ ಇದರ ಪಸರಿಸುವಿಕೆ ಗರಿಷ್ಠ ಮಟ್ಟ ತಲುಪುತ್ತಿರುವಾಗ, ವೈದ್ಯಕೀಯ ಮತ್ತು ಪ್ರಮುಖ ಸೇವಾ ಕ್ಷೇತ್ರಗಳಲ್ಲಿರುವ ನಮ್ಮ ಸ್ನೇಹಿತರು ಹಾಗೂ ಬಂಧುಗಳು ಈ ವೈರಾಣುವಿನ ಸಂಪರ್ಕ ದಲ್ಲಿ ಬರಬಹುದು ಮತ್ತು ಕೋವಿಡ್೧೯ ಖಾಯಲೆಗೆ ಗುರಿಯಾಗಬಹುದು. ಹೀಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡಿಗ ವೈದ್ಯರೊಬ್ಬರು  ವೈರಾಣುವಿನ ಕಪಿಮುಷ್ಠಿಗೆ ಸಿಲುಕಿದ ಹಾಗೂ ಅದರಿಂದ ಪಾರಾಗಿಬಂದ ನೈಜ ಕಥೆಯನ್ನು ಈ ವಾರ ಅನಿವಾಸಿಗಾಗಿ ಡಾ|| ರಾಮಶರಣ ಲಕ್ಷ್ಮೀನಾರಾಯಣ ರವರು  ಬರೆದಿದ್ದಾರೆ. 
ಕರೋನ ವೈರಸ್ ನ ಕರಾಳ ಸ್ವರೂಪವನ್ನು ‘ಕರಾಳ ಕರೋನ‘ ಎಂಬ ಕವಿತೆಯಲ್ಲಿ ಡಾ||  ಜಿ.  ಎಸ್.  ಶಿವಪ್ರಸಾದ್ ರವರುಬಣ್ಣಿಸಿದ್ದಾರೆ.  ಡಾ।। ಲಕ್ಷೀನಾರಾಯಣ ಗುಡೂರ್ ರವರು ಈ ಕವಿತೆಯ ಸಾರವನ್ನು ತಮ್ಮ ರೇಖಾಚಿತ್ರದಲ್ಲಿ ಸೆರೆಹಿಡಿದಿದ್ದಾರೆ.  (ಸಂ)

ಕೋವಿಡ್: ಸಿಂಹದ ಬಾಯಿಂದ

ಯು.ಕೆ. ಕನ್ನಡಿಗ ವೈದ್ಯರೊಬ್ಬರು ಕೊರೋನಾ ಸೋಂಕು ತಗಲಿ, ಬಳಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನೈಜ ಕಥಾನಕ ಇದು. ಇಲ್ಲಿ ಬರುವ ಪಾತ್ರಗಳ ಹೆಸರನ್ನು ಬದಲಾಯಿಸಲಾಗಿದೆ. ಸೋಂಕು ಪೀಡಿತ ವೈದ್ಯರ ರೋಗ ಲಕ್ಷಣಗಳು ಹಾಗೂ ಅವರ ಅನುಭವ ಯಾವುದನ್ನೂ ಕಲ್ಪಿಸಿಕೊಳ್ಳಲಾಗಿಲ್ಲ. ಅವರ ಮನೋಸ್ಥಿತಿಯನ್ನು ಲೇಖಕರು ಕಥೆಗೆ ಬೇಕಂತೆ ಹೊಂದಿಸಿದ್ದಾರೆ.                                                                                        ಲೇಖಕರು: ಡಾ||ರಾಮಶರಣ್ ಲಕ್ಷ್ಮಿನಾರಾಯಣ್

“ನಿನಗೆ ಇಂಗ್ಲೀಷ್ ಅಡುಗೆ ಇಷ್ಟವಾಗಲಿಕ್ಕಿಲ್ಲ ಡಾ. ನಾಗ್ಸ್, ಅದಕ್ಕೇ ಹಲಾಲ್ ವೆಜ್ ಊಟ,” ಎನ್ನುತ್ತಲೇ ಸಿಸ್ಟರ್ ಸೂಸನ್ ಕೋಣೆ ಒಳಗೆ ಬಂದಳು. ನರ್ಸ್ ವಿಶೇಷ ಮುತುವರ್ಜಿಯಿಂದ ತರಿಸಿದ ಅನ್ನ-ದಾಲ್ ಬಾಯಿಗೆ ಹಾಕುವಂತಿರಲಿಲ್ಲ. ಬರೇ  ಕಾಳು ಮೆಣಸಿನ ಖಾರ, ಅರೆ ಬೆಂದ ಅನ್ನ ತಿಂದ ನಾಗೇಂದ್ರ ಅರ್ಧ ಗಂಟೆಯಲ್ಲೇ ಎಲ್ಲವನ್ನು ಕಕ್ಕಿದ.  ಹೊಟ್ಟೆ ಚುರುಗುಟ್ಟುತ್ತಿತ್ತು. ಹಸಿವೆ ಆದರೂ, ನರ್ಸಿಗೆಕರುಣೆ ಇದ್ದರೂ, ಊಟ ತಂದುಕೊಡಲು ಆಸ್ಪತ್ರೆಯೇನು ಹೋಟೆಲ್ಲೇ? ಇಲ್ಲಿ ಸಂಜೆಯ ಊಟದ ಆರ್ಡರ್ ಬೆಳಗ್ಗೆಯೇ ಆಗಿರುತ್ತದೆ. ಇನ್ನು ರಾತ್ರಿಯೆಲ್ಲ ಜ್ಯುಸ್ ಹೀರುತ್ತಲೇ ಕಳೆಯಬೇಕಷ್ಟೆ ಎನ್ನುವ ಸತ್ಯಕ್ಕೆ ಶರಣಾಗಿ ಅಡ್ಡಾದ ನಾಗೇಂದ್ರ. ದಿವಸಗಳಿಂದ ಕಾಡಿದ ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳಿಂದ ಬಸವಳಿದ ನಾಗೇಂದ್ರನಿಗೆ ತಲೆ ತಿರುಗಿದಂತಾಯ್ತು. ಹಾಗೆಯೇ ಕಳೆದ ಎರಡು ವಾರಗಳಿಂದ ನಡೆದ ವಿದ್ಯಮಾನಗಳೆಲ್ಲ ಸಿನಿಮಾ ರೀಲಿನಂತೆ ಬಿಚ್ಚಿಕೊಳ್ಳತೊಡಗಿದವು.

 ಗುರುವಾರ ಬೆಳಗ್ಗೆ ತಡ ಆಯಿತು ಅಂತ ಸಿಡಿ-ಮಿಡಿಗೊಳ್ಳುತ್ತಲೇ ಎದ್ದ ನಾಗೇಂದ್ರ. ರೈಲಿಗೆ ಇನ್ನು ಕೇವಲ 45 ನಿಮಿಷ ಇತ್ತು. ರಾತ್ರೆಯೇ ಟ್ಯಾಕ್ಸಿಗೆ ಬರಲು ಹೇಳಿದ್ದ. ಸಧ್ಯ ಹಿಂದಿನ ದಿನವೇ ಚೀಲ ತುಂಬಿಟ್ಟದ್ದಕ್ಕೆ ತನ್ನ ಬೆನ್ನು ತಾನೇ ತಟ್ಟಿಕೊಂಡ. ಗಡಿಬಿಡಿಯಲ್ಲಿ ಪ್ರಾತಃವಿಧಿಗಳನ್ನು ಮುಗಿಸಿ ತಯ್ಯಾರಾಗುವಷ್ಟಲ್ಲಿ ಹೊರಗಡೆ ಟ್ಯಾಕ್ಸಿ ಬಂತು. ಮಕ್ಕಳಿನ್ನೂ ಸಕ್ಕರೆ ನಿದ್ರೆಯಲ್ಲಿದ್ದರು. ಅರೆ ನಿದ್ದೆಯಲ್ಲೇ ಕರುಣ ಬೈ ಹೇಳಿದ್ದನ್ನೂ ಕೇಳಿಸಿಕೊಳ್ಳದವನಂತೆ ಹೊರಗೆ ಧಾವಿಸಿದ.  ನಾಗೇಂದ್ರ ರಾಯಲ್ ಕಾಲೇಜಿನ ವಾರ್ಷಿಕ ಮೀಟಿಂಗ್ ಎಂದು ಲಂಡನ್ನಿಗೆ ಹೊರಟಿದ್ದ. ಎರಡು ದಿನದ ಕಾರ್ಯಕ್ರಮ, ಕಾಲೇಜಿನವರೇ ಪಕ್ಕದ ಹೋಟೆಲ್ಲಿನಲ್ಲಿ ವಸತಿ ಸೌಕರ್ಯ ಒದಗಿಸಿದ್ದರು ಎಂದಿನಂತೆ. ನಾಗೇಂದ್ರನಿಗೆ ಈ ಹೋಟೆಲ್ ತುಂಬಾ ಇಷ್ಟ. ಸ್ಪ್ಯಾನಿಷ್ ಕಂಪನಿ ನಡೆಸುವ ಹೋಟೆಲ್ ಐಷಾರಾಮವಾಗಿತ್ತು, ಹಾಸಿಗೆ ಮೃದುವಾಗಿ ಆರಾಮದಾಯಕವಾಗಿರುತ್ತಿತ್ತು; ಬೆಳಗಿನ ಉಪಾಹಾರ ರುಚಿಕಟ್ಟಾಗಿ ಆರೋಗ್ಯಕರವಾಗಿರುತ್ತಿತ್ತು. ಒಂದು ರಾತ್ರಿಯ ವಸತಿಗೆ ಇದಕ್ಕಿಂತೇನೂ ಜಾಸ್ತಿ ಬೇಕಲ್ಲವೇ?

ರಾಬ್ ಆಗಲೇ ಬಂದು ತನ್ನ ಲ್ಯಾಪ್ ಟಾಪ್ ತಯ್ಯಾರಿಟ್ಟಿದ್ದ. ಒಬ್ಬೊಬ್ಬರೇ ಸದಸ್ಯರು ಮುಂದಿನ 20 ನಿಮಿಷಗಳಲ್ಲಿ ಬಂದು ಸೇರಿದರು. ಉಭಯಕುಶಲೋಪರಿ ಮುಗಿಸಿದ ಮೇಲೆ ಎಲ್ಲರ ಬಾಯಲ್ಲೂ ಕೋವಿಡ್ ಮಾತೇ, ಇಟಲಿಯಲ್ಲಿ ಹಾಗೆ- ಹೀಗೆ ಅಂತ. ನಮ್ಮ ಸ್ಪೆಷಲ್ಟಿ ತಮ್ಮ ಮಾರ್ಗದರ್ಶನ ಪ್ರಕಟಿಸಬೇಕಲ್ಲವೇ ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಎರಡು ದಿನಗಳ ಕೆಲಸ ಸರಾಗವಾಗಿ ಮುಗಿದು ಅಂದುಕೊಂಡಕ್ಕಿಂತಲೂ ಬೇಗನೆ ಶುಕ್ರವಾರ ನಾಗೇಂದ್ರ ಮನೆಗೆ ಬಂದಿದ್ದಕ್ಕೆ ತನ್ನಲೇ ಬೀಗಿಕೊಂಡ. ದೊಡ್ಡ ಮಗಳಿಗಿನ್ನೂ  ಕೆಮ್ಮು ಇತ್ತು. ಎಂದಿನಂತೇ ಮೃದುಲಾ ಎಲ್ಲರ ಮುಂದೇ ಕೆಮ್ಮುತ್ತ ತಿರುಗಿದ್ದಕ್ಕೆ ಕರುಣಾಳ ಹತ್ತಿರ ಬೈಸಿಕೊಂಡಳು. ಅಕ್ಕ ಬೈಸಿಕೊಂಡಳೆಂದು ಚಿಕ್ಕ ಮಗ ಮೃಣಾಲ್ ಅವಳನ್ನು ಅಣಕಿಸಿ, ಬೆನ್ನ ಮೇಲೆ ಗುದ್ದಿಸಿಕೊಂಡು ಸಣ್ಣ ಕುರುಕ್ಷೇತ್ರವನ್ನೇ ಸೃಷ್ಟಿಸಿದರು ಎಂದಿನಂತೇ.

ಸೋಮವಾರ ಏಳುವಾಗ ನಾಗೇಂದ್ರನಿಗೆ ಸಣ್ಣ ತಲೆನೋವು, ಆಲಸ್ಯ. ಕೆಲಸಕ್ಕೆ ಹೋದಾಗ ನಿರುತ್ಸಾಹ. ವಾರ್ಡ್ನಲ್ಲಿ ನರ್ಸ್ ಹತ್ತಿರ ಪ್ಯಾರಾಸಿಟಮೋಲ್ ತೊಕೊಂಡು ಮಧ್ಯಾಹ್ನ ಕ್ಲಿನಿಕ್ ಹೇಗೋ ಮುಗಿಸಿದ. ಮಂಗಳವಾರ ಮತ್ತೆ ಸ್ವಲ್ಪ ಚಳಿ ಎನ್ನಿಸುತ್ತಿತ್ತು, ಮಧ್ಯಾಹ್ನದ ಹೊತ್ತಿಗೆ ಮೈ-ಕೈ ನೋವು, ತಲೆ ನೋವು ಜಾಸ್ತಿ ಆಗಿದ್ದಕ್ಕೆ ಸೆಕ್ರೆಟರಿಗೆ ಹೇಳಿ ಮನೆಗೆ ಬಂದುಬಿಟ್ಟ. ರಾತ್ರಿ ಚಳಿ ಜಾಸ್ತಿ ಆಯ್ತು, ಜ್ವರ ಶುರು ಆಯ್ತು, ನಿದ್ದೆಯೂ ಬರಲಿಲ್ಲ. ಸಣ್ಣಗೆ ಒಣ ಕೆಮ್ಮು. ಮಾರನೇ ದಿನ ಡಬಲ್ ಕ್ಲಿನಿಕ್ ಬೇರೆ, ಕೆಮ್ಮು ಜ್ವರ ಕೊಟ್ಟುಬಿಟ್ಟಳಲ್ಲ ಎಂದು ಮಗಳಿಗೆ ಹಿಡಿ ಶಾಪ ಹಾಕಿ ಮುದುರಿ ಡುವೆ ಹೊದ್ದು, ಹಾಸಿಗೆ ಪಕ್ಕದ ವಿದ್ಯುತ್ ಹೀಟರ್ ಹಾಕಿ ಮುದುರಿ ಬಿದ್ದುಕೊಂಡ. ಜ್ವರ-ಕೆಮ್ಮು ಬಂದಾಗೆಲ್ಲ ಕರುಣಾ, ಕರುಣೆಯಿಲ್ಲದೇ ಅತಿಥಿ ಕೋಣೆಗೆ ತಳ್ಳಿ ಬಿಡುತ್ತಾಳೆ. ಬೆಳಗ್ಗೆ ಏಳಲಾಗದಷ್ಟು ನೋವು-ಜ್ವರ. ಪ್ಯಾರಾಸಿಟಮೋಲ್ ತೊಕೊಂಡರೂ ಈ ಸಲ ಯಾಕೋ ಜ್ವರ ಇಳಿಯುತ್ತಲೇ ಇಲ್ಲ. ಬ್ರುಫೆನ್ ಮೊರೆ ಹೋದಾಗಲೇ ಜ್ವರ ಕೆಲವು ಗಂಟೆ ತಹಬಂದಿಗೆ ಬಂದಿತ್ತು.

ಸಾಯಂಕಾಲ ಕರುಣಾಳ ಮುಖ ಕುಂದಿತ್ತು. ಎಂದಿಗಿಂತಲೂ ಹೆಚ್ಚಿನ ಕಕ್ಕುಲತೆಯಿಂದ ವಿಚಾರಿಸಿಕೊಂಡಳು. ಅವಳಕಣ್ಣಲ್ಲಿ ತುಂಬಿದ ನೀರು ಕಂಡು ನಾಗೇಂದ್ರನ ಎದೆಯಲ್ಲೇಕೋ ಸಣ್ಣ ನಡುಕ. ಕರುಣಾ ಹಾಗೆಲ್ಲ ಧೈರ್ಯಗೆಡುವವಳಲ್ಲ. ಅವಳಿಗೆ ಯಾರೋ ಸುದ್ದಿ ಕೊಟ್ಟಿದ್ದರು, ನಾಗೇಂದ್ರನ ಸಹೋದ್ಯೋಗಿ ಮೈಕೆಲ್ ಕರೋನ ಸೋಂಕಿನಿಂದ ತೀವ್ರ ಚಿಕಿತ್ಸಾ ಘಟಕದಲ್ಲಿದ್ದಾನೆಂದು. “ನೀನೇನಾದ್ರೂ ಅವನ ಸಂಪರ್ಕಕ್ಕೆ ಬಂದಿದ್ಯ? ನೀನು ಈ ಕೋಣೆಯಿಂದ ಹೊರಗೆಬರಬೇಡ, ನಾನೇ ಎಲ್ಲಇಲ್ಲಿಗೇ ತಂದುಕೊಡ್ತೇನೆ”, ಅಂತ ತಾಕೀತು ಮಾಡಿ ಹೋದಳು. ಯಾವಾಗಲೂ ಬಂದು ಅಪ್ಪಿಕೊಳ್ಳುವ ಮೃಣಾಲ್ ಕೂಡ ಬಾಗಿಲಲ್ಲೇ ಗುಡ್ ನೈಟ್ ಹೇಳಿ ಓಡಿಬಿಟ್ಟ. ರಾತ್ರೆಯಿಡಿ ಜ್ವರ, ಚಳಿ, ಮೈಕೈ ನೋವು, ಜೊತೆಗೆ ವಿಚಿತ್ರಕನಸುಗಳು.

ಹಗಲಿಡೀ ಮನೆಯಲ್ಲಿಒಬ್ಬನೆ; ಮಕ್ಕಳು ಶಾಲೆಯಲ್ಲಿ, ಕರುಣಾ ಸರ್ಜರಿಯಲ್ಲಿ. ಮನದ ತುಂಬೆಲ್ಲ ದುಗುಡ. ಪ್ರತಿಸಲಬರುವ ಫ್ಲ್ಯೂಗಿಂತ ಈ ಸಲದ ಜ್ವರಕ್ಕೆ ಲಕ್ಷಣವೇ ಬೇರೆ ಅನಿಸುತ್ತಿತ್ತು. ಯಾಕೋ ಅಸಮಾಧಾನ, ಚಡಪಡಿಕೆ. ತನಗೂ ಕೊರೋನ ಹೊಡೆದಿಯೇ ಎಂಬ ಸಂಶಯ. ಹಾಳಾದ ಡಯಾಬಿಟಿಸ್ ಎರಡು ವರ್ಷದಿಂದ ತಗಲು ಹಾಕ್ಕೊಂಡಿದೆ. ಜೊತೆಗೆ ಸ್ವಲ್ಪ ರಕ್ತದೊತ್ತಡ ಬೇರೆ. ಇಂಥವರಿಗೆ ಕೊರೋನ ಹತ್ತೋದು, ಉಸಿರಾಟದ ತೊಂದರೆ ಜಾಸ್ತಿಯಾಗೋದು ಅಂತ ಕೇಳಿದ್ದ. ಇದರ ಜೊತೆಗೆ ಇಡೀ ದಿನ ವಾಟ್ಸ್ಯಾಪ್ ನಲ್ಲಿ ಬರೋ ಸಂದೇಶಗಳೆಲ್ಲ ನಾಗೇಂದ್ರನ ಎದೆಯನ್ನು ತುಸುತುಸುವೇ ಹಿಚುಕುತ್ತಿದ್ದವು. ಬಾಯಿರುಚಿಯೇ ಇರಲಿಲ್ಲ, ನೀರು ಕಂಡರೂ ವಾಕರಿಕೆ ಬರುತ್ತಿತ್ತು. ಮೂಗಿನ ಹೊಳ್ಳೆಯ ಸುತ್ತಲೂ ಹಿಮಪಾತದಲ್ಲಿ ನಿಂತ ತಣ್ಣಗಿನ ಕೊರೆತದ ಅನುಭವ. ಪ್ಯಾರಾಸಿಟಮೋಲ್-ಬ್ರುಫೆನ್ ನಾಲಿಗೆಯ ಮೇಲೆ ದಪ್ಪನೆಯ ಪದರವನ್ನೆ ಕಟ್ಟಿದಂತಾಗಿತ್ತು. ಕರುಣಾಳ ಒತ್ತಾಯಕ್ಕೆ ಎರಡು ಚಮಚ ಟೊಮ್ಯಾಟೋ ಸೂಪ್ ಕುಡಿದ. ರಾತ್ರೆ ಗೆಳೆಯ ವಿವೇಕ ಫೋನ್ ಮಾಡಿದ. ನಾಗೇಂದ್ರನ ಚಡ್ಡಿ ದೋಸ್ತು, ಇಬ್ಬರೂ ಜೊತೆಗೇ ಇಂಗ್ಲೆಂಡಿಗೆ ಬಂದಿದ್ದರು 20 ವರ್ಷಗಳ ಹಿಂದೆ.  ನಾಗೇಂದ್ರನ ಸುದ್ದಿಕೇಳಿ ಅವನ ಮುಖವೂ ಕಪ್ಪಿಟ್ಟಿತೆಂದು ನಾಗೇಂದ್ರನಿಗೆ ಅನಿಸಿತು. ಅಷ್ಟರಲ್ಲೇ ಸಹೋದ್ಯೋಗಿ ಪಾರ್ಥ ಗಂಗೂಲಿ, ಮೈಕೆಲ್ ನ ಸ್ಥಿತಿಗಂಭೀರವಾಗಿ, ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫ್ಟ್ ಮಾಡಿದರೆಂದು ಸಂದೇಶ ಕಳಿಸಿದ. ಇದನ್ನುಓದುತ್ತಲೇ ನಾಗೇಂದ್ರನ ಜಂಘಾಬಲವೇ ಉಡುಗಿದಂತಾಯಿತು. ಕರುಣಾಳನ್ನು ಕರೆದು ತೋರಿಸಿದ. ಅವಳೋ, ಗಳಗಳನೆ ಅಳಲು ಶುರು ಮಾಡಿಬಿಟ್ಟಳು. ಅವಳನ್ನು ಸಮಾಧಾನ ಮಾಡುವಲ್ಲಿ ನಾಗೇಂದ್ರನಿಗೆ ಸಾಕೋಬೇಕಾಯಿತು. ಮಕ್ಕಳಿಬ್ಬರೂ ಬಾಗಿಲಲ್ಲೇ ಗರಬಡಿದವರಂತೆ ನಿಂತಿದ್ದರು. ಕರುಣಾ ಓಡಿ, ಕಾರಿನಲ್ಲಿದ್ದ ತನ್ನ ಹತ್ಯಾರು ತಂದು ಪುಪ್ಪುಸದ ಪರೀಕ್ಷೆ, ಆಮ್ಲಜನಕದ ಮಟ್ಟವನ್ನು ನೋಡಿ ಎಲ್ಲ ಸರಿ ಇದೆಯೆಂದು ಖಚಿತಪಡಿಸಿಕೊಂಡು ತನ್ನ ಶಯನಾಗಾರಕ್ಕೆ ತೆರಳಿದಳು.

ರಾತ್ರೆಗಳನ್ನು ನಾಗೇಂದ್ರ ದ್ವೇಷಿಸತೊಡಗಿದ್ದ. ಬಾರದ ನಿದ್ದೆಯಲ್ಲಿ ಬೇಡದ ಯೋಚನೆಗಳೇ ತಲೆ ತಿನ್ನುತ್ತಿದ್ದವು. ಇದರೆಡೆ ಮೈಕೆಲ್ನ ಸುದ್ದಿ ಅವನ ಬುಡವನ್ನೇ ಅಲ್ಲಾಡಿಸಿತ್ತು. ನನಗೂ  ಅದೇ ಸ್ಥಿತಿ ಬಂದರೆ ಎಂಬ ಕರಾಳ ಚಿಂತನೆಯೇ ತಲೆ ತುಂಬ. ತಮ್ಮ ಗುಂಪಿನ ಅನಧಿಕೃತ ಸಲಹೆಗಾರ ಅಲ್ತಾಫ್ ಹೇಳಿದಂತೆ ವಿಲ್ ಮಾಡಿಸಿಬೇಕಿತ್ತು, ಇಂದು-ನಾಳೆ ಅಂತ ಎಂದಿನಂತೆ  ಕಾಲಹರಣ ಮಾಡಿದೆನಲ್ಲ ಎಂದು ಶಪಿಸಿಕೊಂಡ. ಪ್ರಯಾಣಕ್ಕೆ ಹೋಗುವಾಗಲೆಲ್ಲ ಕರುಣಾ ಎಚ್ಚರಿಸುತ್ತಿದ್ದಳು, ಎಲ್ಲ ಬ್ಯಾಂಕ್ ಖಾತೆಗಳ ವಿವರ ಬರೆದಿಡು; ಎಲ್ಲ ಹಣಕಾಸಿನ ಸೈಟ್, ಪಾಸ್ಸ್ವರ್ಡ್ ಎಲ್ಲ ವಿವರಗಳನ್ನು ಬರೆದು ಎಲ್ಲಿದೆ ಅಂತ ಹೇಳಿಡು  ಅಂತ ಹೇಳುತ್ತಿದ್ದಳು. ಅದನ್ನೂ  ನಾಗೇಂದ್ರ ನಿರ್ಲಕ್ಷ್ಯ ಮಾಡಿದ್ದ. ಇನ್ನು ತಡ ಮಾಡಬಾರದು ಅಂತ ಅವನಿಗೆ ಅನ್ನಿಸ ತೊಡಗಿತು. ಬಸವಳಿಸುವ ಜ್ವರದ ಬೇಗೆಯಲ್ಲೇ ಎಲ್ಲ ಬ್ಯಾಂಕಿಂಗ್ ವಿವರಗಳನ್ನು ಕೈಲಾದಷ್ಟು ಬರೆದಿಟ್ಟ. ಇದು ತನ್ನ ಮರಣ ಶಾಸನವೇ ಎಂದು ಅವನಿಗೆ ಅನಿಸತೊಡಗಿತು. ಹಲವಾರು ಬಾರಿ ಆಮ್ಲಜನಕ ಮಟ್ಟ ನೋಡಿಕೊಂಡ.  ಮೆಲ್ಲನೆ ಅದು ೯೬ ರಿಂದ ೯೪ಕ್ಕೆ ಇಳಿದಿತ್ತು.

ಬೆಳಗ್ಗೆ ಎದ್ದ ಕರುಣಾ ಕೂಡಲೇ ತನಗೆ ಪರಿಚಯವಿದ್ದ ಹತ್ತಿರದ ಆಸ್ಪತ್ರೆಯ ವೈದ್ಯನೊಬ್ಬನಿಗೆ ಫೋನಾಯಿಸಿದರೆ, ಆತ ”NHS111ಗೆ ಫೋನ್ಮಾಡು,” ಅಂತ ಕೈತೊಳಕೊಂಡ. ಅವರೋ ಅರ್ಧಗಂಟೆಕಾಯಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ, ನಾಗೇಂದ್ರನ ಸಹನೆಯನ್ನು ಪರೀಕ್ಷಿಸಿ, “ಮನೆಯಲ್ಲೇ ತೆಪ್ಪಗಿರು,” ಎಂಬ  ಮಹಾನ್ ಸಲಹೆಕೊಟ್ಟು ಫೋನ್ ಕುಕ್ಕಿದರು. ಮೆಲ್ಲನೆ ಆಮ್ಲಜನಕದ ಮಟ್ಟ 90 ರೆಡೆ ಪುಟ್ಟ ಪುಟ್ಟ ಹೆಜ್ಜೆ ಹಾಕತೊಡಗಿತ್ತು. ತಡೆಯಲಾಗದೇ ನಾಗೇಂದ್ರ ಪಾರ್ಥನಿಗೆ ಸಂದೇಶ ಕಳಿಸಿದ. ಮರುಕ್ಷಣದಲ್ಲಿ ಪಾರ್ಥ ಫೋನ್ಮಾಡಿ, “ನಾಗ್ಸ್. ನನಗ್ಯಾಕೋ ಈ ಕೊರೋನಾ ಪರಿಸ್ಥಿತಿಯಲ್ಲಿ ನಿನ್ನನ್ನು ಯಾವುದೇ ತಪಾಸಣೆಯಿಲ್ಲದೇ ಮನೆಯಲ್ಲೇಕೊಳೆಯಲು ಬಿಡುವುದು ಸರಿ ಕಾಣೋದಿಲ್ಲ, ಈ ಕ್ಷಣ ನೀನು ನಮ್ಮಆಸ್ಪತ್ರೆಗೆ ಬಾ. ನಾನೇ ಬಾಗಿಲಲ್ಲಿ ಕಾಯುತ್ತಿರುತ್ತೇನೆ,” ಅಂತ ಆಜ್ಞೆ ಕೊಟ್ಟ. ಕೂಡಲೇ ಸುದ್ದಿ ತಿಳಿದ ಕರುಣಾ ಸರ್ಜರಿಯಿಂದ ಬಂದು, ನಾಗೇಂದ್ರನನ್ನು ಧಾವಂತದಿಂದ ಆಸ್ಪತ್ರೆಗೆ ಕರೆದೊಯ್ದಳು. ದೇವರೇ ಬಂದರೂ ಈ ದೇಶದಲ್ಲಿ ರೂಲ್ ಪಾಲಿಸಲೇ ಬೇಕು. ಸ್ವಾಗತಕಕ್ಷೆಯ ಹೆಂಗಸಿಗೆ ತನ್ನ ಗೋತ್ರಪ್ರವರಗಳನ್ನೆಲ್ಲ ಒಪ್ಪಿಸಿದ ಮೇಲೆ, ಪಕ್ಕದ ಬಾಗಿಲಿನಿಂದ ಒಬ್ಬನೇ ಒಳಗೆ ಹೋಗಲು ಆಜ್ಞಾಪಿಸಿದಳು. ಇದರ ಮಧ್ಯೆ ಒಬ್ಬಳು ನರ್ಸಮ್ಮ ಪ್ರತ್ಯಕ್ಷಳಾಗಿ “ಹೀಗೆಲ್ಲ ಆಸ್ಪತ್ರೆಗೆ ಬರಬಾರದು, ಇದು ಸದ್ಯದ ಸರ್ಕಾರದ ಆಜ್ಞೆಗೆ ಮೀರಿದ ನಡವಳಿಕೆ,” ಎಂದೆಲ್ಲ ತಗಾದೆ ತೆಗೆದಾಗ ಪಾರ್ಥನೇ ಅವಳನ್ನು ಸಮಜಾಯಿಸಿ ಸಾಗ ಹಾಕಿದ. ಕೂಡಲೇ ಬಂದ ಇನ್ನೊಬ್ಬ ನರ್ಸ್ ತಡಬಡನೇ ನಾಡಿ, ರಕ್ತದೊತ್ತಡ ಆಮ್ಲಜನಕದಮಟ್ಟ ಎಲ್ಲವನ್ನೂ ತಪಾಸಣೆ ಮಾಡಿ, ಮೂಗು-ಗಂಟಲನ್ನು ಕೆರೆದು, ಕ್ಷ-ಕಿರಣದ ವ್ಯವಸ್ಥೆ ಮಾಡಿ, ನರದೊಳಗೆ ಸೂಜಿ ತುರಿಕಿಸಿ ರಕ್ತ ತಪಾಸಣೆಗೆ ಕಳಿಸಿದಳು. ರಾತ್ರೆಯಿಂದ ಏನೂ ತಿಂದಿಲ್ಲವೆಂದು ಟೋಸ್ಟ್-ಚಹಾದ ವ್ಯವಸ್ಥೆಯನ್ನೂ ಮಾಡಿದಳು. ಪಾರ್ಥ ಯಾವಾಗಲೂ ಹಸನ್ಮುಖಿ. ಏನಾದರೂ ತಮಾಷೆ ಮಾಡಿಕೊಂಡೇ ಇರುವಂಥವನು. ಇವತ್ತು ಅವನ ಮುಖ ಗಂಭೀರವಾಗಿತ್ತು. ನಾಗೇಂದ್ರನಿಗೆ ಇದು ಒಳ್ಳೆ ಶಕುನದಂತೆ ಕಾಣಲಿಲ್ಲ. “ನಾಗ್ಸ್, ಕ್ಪ-ಕಿರಣದಲ್ಲಿ ನ್ಯೂಮೋನಿಯಾ ಥರ ಕೆಲವು ಛಾಯೆಗಳಿವೆ, ನಿನ್ನ ಬಿಳಿ ರಕ್ತಕಣ ಸ್ವಲ್ಪ ಕಡಿಮೆ ಇದೆ. ನಿನಗೆ ರಕ್ತ ನಾಳದಲ್ಲೇ ಆಂಟಿಬಯೋಟಿಕ್ಸ್ ಕೊಡೋಣ. ಆಮ್ಲಜನಕಾನೂ ಬೇಕು. ವಾರ್ಡಿಗೆ ಸೇರಿಸ್ತಿದ್ದೀನಿ. ಸದ್ಯಕ್ಕೇನೂ ಒಂಟಿ ಕೊಠಡಿ ಸಿಗೋ ಸಾಧ್ಯತೆ ಇಲ್ಲ,” ಎಂದು ತನ್ನ ಕೆಲಸಕ್ಕೆ ತೆರಳಿದ. ಕರುಣಾ ಹೊರಗೇ ಕಾಯ್ತಾ ಇದ್ದಳು. ಅವಳಿಗೆ ನಾಗೇಂದ್ರನನ್ನು ನೋಡುವ ಅವಕಾಶನೂ ಇರಲಿಲ್ಲ. ಕೊರೋನಾ ಎಂದು ರೋಗಿಗಳನ್ನು ಬಿಟ್ಟರೆ ಯಾರನ್ನೂ ಆಸ್ಪತ್ರೆ ಒಳಗೆ ಬಿಡುತ್ತಿರಲಿಲ್ಲ. ಅವಳಿಗೆ “ಅತ್ಯವಶ್ಯಕ ಸಾಮಾನುಗಳನ್ನು ವಾರ್ಡಿಗೆ ತಂದು ನರ್ಸಿನ ಕೈಯಲ್ಲಿ ಕೊಡು,” ಎಂದು ಫೋನಾಯಿಸಿ ಹಾಸಿಗೆಯಲ್ಲೊರಗಿದ. ಒಂದೆಡೆ ಆಸ್ಪತ್ರೆಯಲ್ಲಿದೇನೆ ಎಂಬ ಸಮಾಧಾನ, ಇನ್ನೊಂದೆಡೆ ತನ್ನ ತಲೆಯ ಮೇಲೆ ನೇತಾಡುವ ಕತ್ತಿಯಿನ್ನೂ ಮಾಯವಾಗಿಲ್ಲವೆಂಬ ತಲ್ಲಣ. ವಾರ್ಡಿನಲ್ಲಿ ನಾಲ್ಕೈದು ಜನ ಕೆಮ್ಮುತ್ತಿದ್ದರು. ಪಕ್ಕದ ಹಾಸಿಗೆಯ ಕೆವಿನ್ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದಾನಂತೆ, ಅವನಿಗೂ ಜ್ವರ ಬಿಡದೇ ಬರುತ್ತಿತ್ತು. ಬೆಳಿಗ್ಗೆ ತಿಂದದ್ದೆಲ್ಲ ನಾಗೇಂದ್ರ ಕಕ್ಕಿದ. ಇವನೇನೂ ತಿನ್ನುತ್ತಿಲ್ಲಅಂತ ನರ್ಸ್ ಸಲೈನ್ ಹಚ್ಚಿಟ್ಟಳು. ವಾಂತಿ ಆಗಬಾರದೆಂದು ಕೊಟ್ಟ ಔಷದಿಗೆ ಮೈಯೆಲ್ಲಾ ಝುಮ್-ಝುಮ್ಗುಟ್ಟಿ, ಇನ್ನು ಅದನ್ನು ಕೇಳಬಾರದು ಅಂತ ನಿಶ್ಚಯಿಸಿದ. ರಾತ್ರಿ ಬಂದ ನರ್ಸ್ ಇನ್ನೊಮ್ಮೆ ಎಲ್ಲರ ಮೂಗು ಗಂಟಲುಗಳನ್ನೆಲ್ಲ ಕೆರೆದು ಇದನ್ನು ಬೇರೆ ಪ್ರಯಾಗಶಾಲೆಗೆ ಕಳಿಸುತ್ತಿದ್ದೇವೆಂದು ಡಂಗುರ ಬೀರಿದಳು. ಯಾಕೆ, ಎಲ್ಲಿಗೆ ಎಂದು ಕೇಳುವ ಶಕ್ತಿ ಯಾರಲ್ಲೂ ಇರಲಿಲ್ಲ.

ಮುಂದಿನ ಇಪ್ಪತ್ನಾಕು ಗಂಟೆ ನಾಗೇಂದ್ರನಿಗೆ  ಯುಗಗಳಾದವು. ಹಾಸಿಗೆಯಲ್ಲಿ ಸತ್ತ ಹಾಗೆ ಬಿದ್ದವನಿಗೆ ಸುತ್ತ ಅಪ್ಪ-ಅಮ್ಮ, ಬಂಧುಗಳು, ಮಿತ್ರರು ಅಂತಿಮ ಪ್ರದಕ್ಷಿಣೆ ಹಾಕುತ್ತಿದ್ದಾರೆಂದೆನಿಸುತ್ತಿತ್ತು. ನಾಗೇಂದ್ರ ಹತಾಶ ಜೀವಿಯೇನಲ್ಲ. ಕೊರೋನದ ಸುದ್ದಿಗಳೆಲ್ಲ ಕರಾಳವಾಗಿರುವಾಗ, ಉದಾತ್ತ ಯೋಚನೆಗಳು ಬರುವುದು ಕಷ್ಟವೇ. ಅದನ್ನೆಲ್ಲ ದೂರವಿಡಲು ಫೋನಿನ ಅಂತರ್ಜಾಲದ ಸಂಪರ್ಕವನ್ನೇ ಕಡಿದುಹಾಕಿದ್ದ. ಆದರೆ ಪಾರ್ಥ ತಂದ ಮೈಕೆಲ್ನ ಮರಣದ ಸುದ್ದಿ ನಾಗೇಂದ್ರನ ಮನೋಸ್ಥಿತಿಯನ್ನು ಇನ್ನೂ ಹದಗೆಡಿಸಿತ್ತು. ಮೈಕೆಲ್ ಸಾಮಾನ್ಯನೇನಲ್ಲ. ಎವರೆಸ್ಟ್ ಪರ್ವತದ ಬುಡಮುಟ್ಟಿ ಬಂದವನು. ಅಂತಹ ಗಟ್ಟಿ ಮನುಷ್ಯನನ್ನೇ ಈ ಮಾರಿ ಬಲಿ ತೆಗೆದುಕೊಂಡರೆ,  ನನ್ನಂಥ ಹುಲು ಮಾನವನ ಗತಿ ಕೈಲಾಸವೇ ಎಂದು ಹತಾಶನಾಗಿಬಿಟ್ಟ. ರಾತ್ರೆ ನರ್ಸ್ ಬಂದವಳೇ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿ ಎಂದು ಹುಕುಂ ಕೊಟ್ಟಳು. ಇದು, ಯುದ್ಧಕಾಲದಲ್ಲಿ ಕೊಡುವ ಬಾಂಬ್ ಸೈರನ್ ಥರ ಕೇಳಿಸಿತು ನಾಗೇಂದ್ರನಿಗೆ. ಏನೋ ವಿಪತ್ತು ಕಾದಿದೆ ಎಂದು ಖಚಿತವಾದಂತಿತ್ತು. ರಾತ್ರೆ ಪಾಳಿಯ ವೈದ್ಯನೊಬ್ಬ ಮೈ-ಮುಖಗಳನ್ನೆಲ್ಲ ಮುಚ್ಚಿಕೊಂಡು ತನ್ನೆಡೆಗೆ ಬರುವುದನ್ನುಗಮನಿಸಿದ. ಇವನೇನು ದೇವದೂತನೋ ಯಮದೂತನೋ ಎಂದು ಅವನಿಗರಿಯದಾಯಿತು. ಹಾಸಿಗೆಯ ಬುಡದಲ್ಲಿ ನಿಂತು ಮೃದುವಾದ ಸ್ವರದಲ್ಲಿ, “ನಿನ್ನೆ ಕಳಿಸಿದ ಪರೀಕ್ಷೆಯಲ್ಲಿ ನಿನಗೆ ಕೋವಿಡ್ ರೋಗ ಖಚಿತವಾಗಿದೆ. ನಿನ್ನ ಮನೆಯವರೆಲ್ಲ ಇನ್ನು 14 ದಿವಸ ಮನೆಬಿಟ್ಟು ಹೋಗುವಂತಿಲ್ಲ. ಅವರಿಗೆ ಕೂಡಲೇ ತಿಳಿಸಬೇಕು. ನೀನೇ ತಿಳಿಸುತ್ತೀಯೋ ಇಲ್ಲಾ ನಿನಗೆ ಸುಸ್ತಾಗಿದ್ದಾರೆ ನಾನೇ ನಿನ್ನಹೆಂಡತಿಗೆ ತಿಳಿಸುತ್ತೇನೆಂದು,” ಸಹಾಯ ಹಸ್ತ ಚಾಚಿದ. ಈ ಮಧ್ಯರಾತ್ರಿಯಲ್ಲಿ ಕರುಣಾಳನ್ನು ಫೋನ್ ಮಾಡಿ ಎಬ್ಬಿಸುವುದು ಅಸಾಧ್ಯ ಎಂಬುದನ್ನು ನಾಗೇಂದ್ರ ಬಲ್ಲ. ಆ ವೈದ್ಯನಿಗೆ ಧನ್ಯವಾದಗಳನ್ನರುಹಿ, ತಾನೇ ಸುದ್ದಿ ತಿಳಿಸುವುದಾಗಿ ಹೇಳಿದ. ಪರೀಕ್ಷೆಯ ಫಲಿತಾಂಶ ಕೇಳಿ ಒಂದು ಬಗೆ ಮನ ನಿರುಮ್ಮಳವಾದರೂ, ಬಂದೇನೇ ಈ ಮಾರಿಯ ಬಾಯಿಂದ ಸುರಕ್ಷಿತವಾಗಿ ಎಂಬ ದುಗುಡ ಇನ್ನೊಂದೆಡೆ. ಯೋಚಿಸುತ್ತಿರುವಾಗಲೇ, ಇಬ್ಬರು ದಾಯಿಯರು ಬಂದು ನಾಗೇಂದ್ರನನ್ನು ಒಂಟಿಕೋಣೆಗೆ ಸ್ಥಲಾಂತರಿಸಿದರು.

ಪವಾಡವೆಂಬಂತೆ ಮತ್ತೆರಡು ದಿನಗಳಲ್ಲಿ ಮೈ ಹಗುರವಾಗತೊಡಗಿತು. ಜ್ವರ ಇಳಿದು ಹುರುಪು ಹೆಚ್ಚಾಯಿತು. ಮರುದಿನ ಬಂದ ವೈದ್ಯ ಆಮ್ಲಜನಕದ ಅಗತ್ಯ ಕಡಿಮೆಯಿದೆಯೆಂದು ಇನ್ನೂ ಧೈರ್ಯ ತುಂಬಿದ. ಕಣ್ಮುಂದೆ ಯಮರಾಜನ ಬದಲು ಮೃದುಲಾ-ಮೃಣಾಲ್ ರ ನಗುಮುಖ ಕುಣಿಯತೊಡಗಿತು. ಮಾರನೇ ದಿನ ಬಂದ ಪಾರ್ಥ, “ನಾಡಿ, ರಕ್ತದೊತ್ತಡ, ಆಮ್ಲಜನಕದ ಲೆವೆಲ್ ಎಲ್ಲ ಸರಿಯಾಗಿದೆ. ಇವತ್ತು ಸಾಯಂಕಾಲ ಮನೆಗೆ ಹೋಗಬಹುದು,” ಎಂದು ಮುಗುಳ್ನಕ್ಕ. ನಾಗೇಂದ್ರನ ಕಣ್ಣುಗಳಿಂದ ಧಾರಾಕಾರವಾಗಿ ಕಂಬನಿ ಸುರಿದವು. ಪಾರ್ಥ ಹತ್ತಿರ ಬಂದು ಸಂತೈಸಲಾರ, ಬಿಡಲಾರ. ದೂರದಿಂದಲೇ, “ರಿಲ್ಯಾಕ್ಸ್ ಯಾರ್ ನಾಗ್ಸ್. ಥ್ಯಾಂಕ್ ದಿ ಗಾಡ್. ಇಟ್ ಆಲ್ ಎಂಡೆಡ್ ವೆಲ್. ಇನ್ನು ಎರಡು ವಾರ ಆಸ್ಪತ್ರೆ ಕಡೆ ಮುಖ ಹಾಕಬೇಡ,” ಎಂದು ಧೈರ್ಯ ಹೇಳಿ ರಜೆ ಚೀಟಿ ಬರೆದು ಕೊಟ್ಟ.

ಕಿಟಕಿಯ ಹೊರಗೆ ಎಂದಿಗೂ ಕವಿದಿರುವ ಕಾರ್ಮೋಡದ ತೆರೆ ಸರಿದು, ಹೊಂಬಿಸಿಲು ಮೂಡಿತ್ತು. ಅಂತರ್ಜಾಲದ ಸಂಪರ್ಕಕ್ಕೆ ಬಂದ ಫೋನ್ ನೂರಾರು ಸಂದೇಶಗಳನ್ನು ಮುಂದೆ ಸುರುವಿ ಹಾಕಿತ್ತು. ಎಲ್ಲದರ ಮೊದಲಿತ್ತು ಗೆಳೆಯನೊಬ್ಬನ ಸಂದೇಶ, “ಸಿಂಹದ ಬಾಯಿಂದ ಹೊರಬಂದಿದದ್ದಕ್ಕೆ ಅಭಿನಂದನೆಗಳು” 

ವಿ.ಸೂ: ಡಾ. ನಾಗೇಂದ್ರ ಗುಣಮುಖರಾಗಿದ್ದು, ಸಾಧ್ಯವೇ ಕೆಲಸಕ್ಕೆ ಹಿಂದಿರುಗಲಿದ್ದಾರೆ. ಕೊರೋನಾ ಸೋಂಕು ಹೆಚ್ಚಿನವರಲ್ಲಿ ಮರಣಕ್ಕೆ ದಾರಿಯಲ್ಲ ಎಂಬುದಕ್ಕೆ ಈ ಕಥೆಯೇ ಸಾಕ್ಷಿ. ಓದುಗರು ಇದನ್ನು ಓದಿ, ರೋಗ ಲಕ್ಷಣಗಳನ್ನು ತಿಳಿದು ಹೆಚ್ಚಿನ ಜಾಗರೂಕತೆ ತೆಗೆದುಕೊಳ್ಳಲಿ, ಸೋಂಕು ಬಂದರೆ ಧೈರ್ಯವಾಗಿ ಎದುರಿಸುವ ಮನೋಭಾವನೆ ಇರಲಿ ಎಂಬುದೇ ಲೇಖಕರ ಆಷಯ.

ಕರಾಳ ಕರೋನ

ಡಾ. ಜಿ. ಎಸ್. ಶಿವಪ್ರಸಾದ್

ಕರೋನ ಬರುವಿಕೆಯ ಭೀತಿಯಲ್ಲಿ
ಕದವ ಮುಚ್ಚಿ ಕುಳಿತ್ತಿದ್ದೇವೆ
ಇಂದು-ಎಂದು , ಹೇಗೆ, ಕಣ್ ತಪ್ಪಿಸಿ
ಬರುವನೆಂಬ ಶಂಕೆಯಲಿ ನಡುಗಿದ್ದೇವೆ

ಕಟ್ಟಾಜ್ಞೆಯ ಹಿಡಿದ ಯಮದೂತ
ಬಾಗಿಲಬಳಿ ನಿಂದು ಕದವ ತಟ್ಟಿದ್ದಾನೆ
ಬಾಗಿಲು ಮುರಿದು ಮುನ್ನುಗ್ಗಿ
ಸೆರೆ ಹಿಡಿವ ಸಂಚು ಹೂಡಿದ್ದಾನೆ

ಮನೆ ಮನೆಗೆ ಲಗ್ಗೆ ಇಟ್ಟು
ಎಲ್ಲರ ಮೈಮನಗಳ ಆವರಿಸಿದ್ದಾನೆ
ಅಮೂರ್ತ ಭೀಕರ ಭಯೋತ್ಪಾದಕ
ಅಲ್ಲಿ-ಇಲ್ಲಿ, ಎಲ್ಲೆಲ್ಲೂ ಅವತರಿಸಿದ್ದಾನೆ

ಜಾತಿ, ಮತ, ಧರ್ಮ
ದೇಶ ಗಡಿಗಳ ಹಂಗಿಲ್ಲ
ಎಲ್ಲರನ್ನೂ ನುಂಗುವ ತವಕ
ಇವನ ದಾಹಕ್ಕೆ ಕೊನೆಯಿಲ್ಲ

ಕಾಣದ ವೈರಿಯ ಬಳಿ
ಖಡ್ಗ, ಕವಚ, ಕಹಳೆಗಳಿಲ್ಲ
ರಣ ರಂಗದಲಿ ರಕ್ತಪಾತಗಳಿಲ್ಲ,
ಸಮರದಲಿ ಒಪ್ಪಂದಕ್ಕೆ ಆಸ್ಪದವಿಲ್ಲ

ಮೊರೆ ಹೋದ ದೇವ ದೇವತೆಗಳು
ತಮ್ಮ ಗುಡಿಗಳ ಮುಚ್ಚಿದ್ದಾರೆ
ಪವಾಡ ಪುರುಷರು, ಬಾಬಾಗಳು
ಅಂಜಿ ಆಶ್ರಮಗಳಲಿ ಅಡಗಿಕೊಂಡಿದ್ದಾರೆ

ಕೆಮ್ಮು ದಮ್ಮುಗಳ ನಡುವೆ
ನಿಶಬ್ದ, ನಿರ್ಜನ ಬೀದಿಗಳು
ಸೆರೆಮನೆಯಾದ ಮನೆ ಮಠಗಳು
ಭುಗಿಲೆದ್ದು ನರ್ತಿಸುವ ಚಿತೆಯುರಿಗಳು

ಹೋರಾಡಿ ನಿಶಕ್ತರಾದ ಹಲವರಿಗೆ
ಸಮರದಲಿ ಸೋಲು ಅನಿವಾರ್ಯ
ಗೆದ್ದು ಬದುಕುಳಿದವರಿಗೆ ನಾಳೆ
ಹೊಸ ಭರವಸೆಯ ಅರುಣೋದಯ

ಕವಿ: ಡಾ. ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್ , ಯು. ಕೆ .

ರೇಖಾಚಿತ್ರ ಕೃಪೆ : ಲಕ್ಷ್ಮಿನಾರಾಯಣ ಗುಡೂರ್