ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….!-ಡಾ. ಪ್ರೇಮಲತ ಬಿ.

ಪೀಠಿಕೆ: ನನ್ನವಳ ನಗು ಚೆನ್ನ, ನನ್ನವಳ ಮೊಗ ಚೆನ್ನ, ನನ್ನವಳ ಕಣ್ಣು ಚೆನ್ನ, ನನ್ನವಳ ಮನಸು ಚಿನ್ನ, ಎಂದೆಲ್ಲಾ ಹೊಗಳುವ ಪ್ರಿಯಕರನ ಉತ್ಪ್ರೇಕ್ಷೆಗಳನ್ನು ನೀವು ಓದಿರಬಹುದು, ಕೇಳಿರಬಹುದು, ನೋಡಿಯೂ ಇರಬಹುದು. ಅದು ಒಂದು ಗಂಡಿನ ಸಹಜ ಮನೋಭಾವ.
ಆದರೆ ಒಂದು ಹೆಣ್ಣು ಇನ್ನೊಂದು ಹೆಣ್ಣನ್ನು ಪ್ರೇಮಿಯಾಗಿ ಸ್ವೀಕರಿಸಬಹುದೇ? ಹೌದು ಏಕಾಗಬಾರದು ಎನ್ನುತ್ತಾರೆ
ಡಾ.ಪ್ರೇಮಲತಾ.
‘ಇಲ್ಲೆಲ್ಲಾ ಸಿಕ್ಕಳು’ ಎನ್ನುವ ಪದಗಳೇ ಕುತೂಹಲ ಕೆರಳಿಸುವ ಈ ಕವನ, ಒಳಗಣ್ಣಿನಿಂದ ನೋಡುವ, ನೋಡಿ ಸವಿಯುವ ಪ್ರೀತಿಯ ಮನಸಿಗಲ್ಲದೆ ಹಾಗೆ ಸುಮ್ಮನೆ ಎಲ್ಲರಿಗೂ ಸಿಗುವವಳಲ್ಲ.ಆ ಸಿಗದವಳ ಹೆಸರೇ ಪ್ರಕೃತಿ.
ಗುಲಾಬಿಯ ದಳಗಳಲ್ಲಿ,ಮಯೂರನ ಗರಿಯ ನೂರು ಬಣ್ಣಗಳಲ್ಲಿ,ಪಾರಿಜಾತ,ಸಂಪಿಗೆಗಳಲ್ಲಿನ ಕಾಣದ ಕಂಪು, ಹೀಗೆ ಸೂಕ್ಷ್ಮವಾದ ಪ್ರಕೃತಿಯ ದಿನ ನಿತ್ಯಯದ ಕ್ರಿಯೆಗಳಲ್ಲಿ ಅವಳು ಇದ್ದಾಳೆ, ನೋಡುವ ದಿವ್ಯವಾದ ಕಣ್ಣುಗಳಿರಬೇಕಷ್ಟೆ.

ಕೆ.ಎಸ್.ಎಸ್.ವಿ.ವಿ (ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ)  ಹೊರತಂದಿರುವ ‘ಪ್ರೀತಿ ಎಂಬ ಚುಂಬಕ’ ಧ್ವನಿ ಮುದ್ರಿಕೆಯಲ್ಲಿ ಮಧುರವಾಗಿ ಕೇಳಿಬಂದಿರುವ ಈ ಕವನವನ್ನು ಓದಿ ಆನಂದಿಸಿ.

 

 

ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….

ಇಂದಿರೆಯ ಹಸಿರು ಮುಡಿಯಲ್ಲಿ

ಚೆಂಗುಲಾಬಿ ದಳಗಳಲಿ

ಸವಿಯಾಗಿ ನಕ್ಕ ಸಂತೃಪ್ತಿ ನೀನು !

ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….

ಕಲ್ಪನೆಯ ದಟ್ಟ ಕಾಡಲ್ಲಿ

ಬಣ್ಣದ ನೂರು ಗರಿಕೆದರಿ

ನರ್ತಿಸಿ ನಲಿದ ಮಯೂರಿ ನೀನು!

ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….

ಕಾರ್ಯಮುಖಿ ಈ ಬದುಕಲ್ಲಿ

ಬರೆದು ಚಿತ್ತಾರದ ರಂಗೋಲಿ

ಕನಸ ಬಿತ್ತಿ ನಕ್ಕವಳು ನೀನು

ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….

ಪಾರಿಜಾತ, ಸಂಪಿಗೆಯಲಿ

ಕಾಣದಂತೆಯೆ ಸೇರಿ

ಕಂಪ ಸೂಸಿ ನಲಿದವಳು ನೀನು

ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….

ಲೋಕ ಚೇತನದಿ ಬೆಳಕಾಗಿ

ಹದವಾದ ಬಿಸಿಲಾಗಿ

ಬೆಳ್ಳನೆ ಬದುಕಲ್ಲಿ ಹೊಕ್ಕವಳು ನೀನು

ಇಲ್ಲೆಲ್ಲ ಸಿಕ್ಕಳು, ಇವಳು ನನ್ನವಳು….

———————————- ಡಾ.ಪ್ರೇಮಲತ ಬಿ.