`ಅನಿವಾಸಿ`ಗೆ ಅಭಿನಂದನೆಗಳು

ಕೆಲ ಸಾಹಿತ್ಯಾಸಕ್ತ ಯು.ಕೆ ಕನ್ನಡಿಗರು ಆರಂಭಿಸಿದ ಈ ಜಗುಲಿಯ ( ಆನ್ ಲೈನ್ ) ಈ ವಾರಪ್ರತ್ರಿಕೆ ೫೦೦ ಕ್ಕೂ ಹೆಚ್ಚಿನ ಸಂಚಿಕೆಗಳನ್ನು ಹೊರತಂದಿರುವುದು ಒಂದು, ಉತ್ಸಾಹದ, ಯಶಸ್ಸಿನ, ಕನ್ನಡದ, ಹೊರನಾಡಿನ ಕನ್ನಡಿಗರ, ಪರಿಶ್ರಮದ ಪ್ರೇಮಕತೆ.

ತಮ್ಮ ದಿನನಿತ್ಯದ ಕೆಲಸ ಕಾರ್ಯಗಳ, ಮಕ್ಕಳ, ಕುಟುಂಬದ, ಜವಾಬ್ದಾರಿಯ ಭಾರವನ್ನು ನಿರ್ವಹಿಸುವ ಹೊಣೆ ಹೊತ್ತಿದ್ದರೂ, ಕನ್ನಡ ಪ್ರೇಮಿ, ಕ್ರಿಯಾಶೀಲ ಅನಿವಾಸಿ ಸ್ನೇಹಿತರ ಅನನ್ಯ ಕೊಡುಗೆಯ ಫಲ ಈ ಸಂಚಿಕೆ. ಇದರಲ್ಲಿ ಪುಟ್ಟ ಲೇಖನ, ಪದ್ಯಗಳನ್ನು ಬರೆಯುವಂತ ನನ್ನಂತಹ ಹವ್ಯಾಸಿ ಲೇಖಕರಿಂದ ಹಿಡಿದು, ಪ್ರಶಸ್ತಿ, ಪುರಸ್ಕಾರಗಳಿಗೆ ಅರ್ಹವಾದ ಪುಸ್ತಕಗಳನ್ನು ಬರೆದು ಪ್ರಕಟಿಸಿದ ಅತ್ಯುತ್ತಮ ಲೇಖಕರು ಸಹ ಇದ್ದಾರೆ. ಎಲ್ಲಾ ರೀತಿಯ ಕ್ರಿಯಾಶೀಲ ಯುಕೆ ಕನ್ನಡಿಗರಿಗೆ ಅನಿವಾಸಿ, ಮನೆಯಾಗಿ, ನೆಲೆಯಾಗಿ ನಿಂತಿದೆ . ಅನಿವಾಸಿಯೊಂದಿನ ನನ್ನ ಅನುಭವವಿದು ,,,

“ಅನಿವಾಸಿ” ನಿನಗೆ ಅಭಿನಂದನೆ,
ಛಲ ಬಿಡದೆ ನಿಂತ ನಿನ್ನ ತಾಳ್ಮೆಗೆ ವಂದನೆ.

ಬರುಡಾಗಿ ಬಾಡಿದೆ, ಮಳೆಯಿಲ್ಲದೆ ಮರುಗಿದೆ,
ಕೆಲಹನಿ ಬಿದ್ದರೂ ಸಾಕೆಂದು ಕೊರಗಿದೆ,
ಕೋವಿಡ್ ಮಾರಿಯ ಕೈಗಳಲ್ಲಿ ನಲುಗಿದೆ.
ಒರತೆಯ ಕೆಲಹನಿಗಳಲ್ಲಿ ಜೀವ ಹಿಡಿದೆ .

ಹಿಗ್ಗಿ, ನುಗ್ಗಿ ಬಂದೆವು ನಾವು ನಿನ್ನಬಳಿ ಕೆಲವೊಮ್ಮೆ
ಹಿಂತಿರುಗಿಯೂ ನೋಡದೆ ಹೋದೆವು ಒಮ್ಮೊಮ್ಮೆ.
ಮರೆತೇ ಬಿಟ್ಟೆವು ನಿನ್ನ, ಮುಚ್ಚಿ ನಮ್ಮ ಕಣ್ಣನ್ನು
ಬಿಡಲಿಲ್ಲ ನೀನು ಮಿಲನದ ಆಶಾವಾದವನ್ನು.

ಅನಿವಾಸಿಯ ಬದುಕು ಸುಲಭದ ಮಾತಲ್ಲ
ಹೊಸ ಚಂಚಲತೆಯ ಮಾಯೆ ನಮ್ಮ ಸುತ್ತೆಲ್ಲ.
ಕಟ್ಟುವರು ಜನ ದಿನಕ್ಕೊಂದು ಹೊಸ ತಾಣ
ಮಾಡುವರು ಈ ಜಗಲಿಯಿಂದ ಆ ಜಗುಲಿಗೆ ಪ್ರಯಾಣ.

ಜನ್ಮ ನಿನ್ನಿಂದ, ಕತೆ, ಕವನ, ಪ್ರವಾಸ ಕಥನ,
ನಮ್ಮ, ನಿಮ್ಮ ಊರಿನ ಭವ್ಯ ದರ್ಶನ.
ಚಲನಚಿತ್ರ, ಪುಸ್ತಕಗಳ ವಿಮರ್ಶನ,
ಛಾಯಾಗ್ರಹಣ ಭಾವಚಿತ್ರಗಳ ಪ್ರದರ್ಶನ

ನಿನ್ನಿಂದ ಪಡೆದೆ ನಾ ಹೊಸ ಸ್ನೇಹ ಸಂಬಂಧ
ವಿಸ್ತರಿಸಿ ನನ್ನ ಕನ್ನಡದ ಜಗತ್ತಿನ ಬಂಧ.
ಕರುನಾಡಿನಿಂದ ಬಂದರು ಕನ್ನಡದ ಕಲಿಗಳು
ಅನಿವಾಸಿ ಅಂಗಳದ ನಲ್ಮೆಯಲಿ ನಲಿಯಲು.

ಭರವಸೆ, ವಿಶ್ವಾಸ, ನಂಬಿಕೆ, ನೆಚ್ಚಿಕೆಯ ಆಶಾವಾದದಲಿ
ಬಯಸುವ ಕನ್ನಡದ ಸಿರಿಯ ಅನಿವಾಸಿ ಅಂಗಳದಲಿ.

ಅನಿವಾಸಿಗೆ ಶುಭ ಕೋರುವ,


ಡಾ . ದಾಕ್ಷಾಯಿಣಿ