ಭಾದ್ರಪದದ ಕರಿ ಮೋಡ -ಮುರಳಿ ಹತ್ವಾರರವರ ಕವನ‌

ಪರಿಚಯ‌  –ಮುರಳಿ ಹತ್ವಾರ : ವೃತ್ತಿಯಿ೦ದ ನಿರ್ನಾಳ ಗ್ರಂಥಿ ತಜ್ಞ. ಬೆ೦ಗಳೂರು ಹಾಗು ಬಳ್ಳಾರಿಯಲ್ಲಿ ಕಲಿತದ್ದನ್ನ  ಮಣಿಪಾಲದಲ್ಲಿ ಪಕ್ವಗೊಳಿಸಿ, ಸಧ್ಯ ಲ೦ಡನಿನನಲ್ಲಿ ಕೆಲಸ ಮತ್ತು ವಾಸ. ತಾಯಿ ಭಾಷೆ ಕನ್ನಡ.  ಇ೦ದಿಗೂ ಭಾವದಾಳದ ಲಹರಿ; ಮನದಾಲೋಚನೆಯ ಆಳದಲ್ಲಿ,  ಆಗಾಗ ಅಕ್ಷರಗಳಲ್ಲಿ ಭಾವಗಳಲೆಯ ಹಿಡಿದಿಡುವ ಪ್ರಯತ್ನ. ಅಕ್ಷರಗಳಿಗೆ ನಿಲುಕದ್ದನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿವ ಹವ್ಯಾಸ.

ನಿನ್ನೆಯ ಅನುಭಾವಕ್ಕೆ ಇ೦ದಿನ ಅನುಭವವ ಕೂಡಿಸಿ ಬರುವ ನಾಳೆಗೆ ಕಾಯುತ್ತಿರುವ ನನ್ನ ಭಾವಕ್ಕೆ ಬ೦ದ ವಿಚಾರವನ್ನು ಹೀಗೆ ಹರಡಿದ್ದೇನೆ. ನಿಮ್ಮ ಮನಸಿಗೆ ಮುಟ್ಟಿದಲ್ಲಿ, ನಿಮ್ಮ ಭಾವಲಹರಿಯನ್ನು ನನ್ನತ್ತ ಹರಿಬಿಡಿ. ನನ್ನ ನಾಳಿನ ಪಯಣಕ್ಕಾದರೂ ಅನುಕೂಲವಾದೀತು

ಚಿತ್ರ: ಮುರಳಿ ಹತ್ವಾರ

ಭಾದ್ರಪದದ ಕರಿ ಮೋಡ 

ಹನಿಸುತ ಮಣ್ಣಿನ
ಕರಣವ ತಣಿಸಿ
ಸಂಜೆಯ ಹೊನ್ನಿನ
ಕಿರಣವ ಮಣಿಸಿ
ಕಾಮನ ಬಿಲ್ಲಿನ
ತೋರಣ ಹೆಣಿಸಿ
ಬೀಸುವ ತಂಗಾಳಿಯ ಕೂಡ
ಬೀಗುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಇಂದಿಗೆ ಇರುವಿನ
ನಲಿವನು ತಿಳಿಸಿ
ನಿನ್ನೆಯ ನೆನಪಿನ
ಕಲೆಯನು ಅಳಿಸಿ
ನಾಳೆಗೆ ಒಳಿತಿನ
ಬಲವನು ಉಳಿಸಿ
ಹರಿಯುವ ಹೊನ್ನೀರಿನ ಕೂಡ
ಮೆರೆಯುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಬಣ್ಣದ ಮಳೆಯಲಿ
ನಯನವ ತೊಳೆಸಿ
ರಂಗಿನ ಸೊಬಗಲಿ
ಒಲವನು ಹೊಳೆಸಿ
ಅನುಭವದರಿವಲಿ
ಬದುಕನು ಬೆಳೆಸಿ
ಮೆರೆಸುತ ಅವನಾಟದ ಗೂಡ
ಸರಿಯುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಮುರಳಿ ಹತ್ವಾರ

ಚಿತ್ರ: ಥೆಮ್ಸ್ ನದಿಯ ಮೇಲಿನ ಕಾಮನ ಬಿಲ್ಲು