ಸಂಬಂಧಗಳ ಆಳವಳೆಯುತ್ತ ಪದರುಗಳನ್ನು ಬೇರ್ಪಡಿಸುತ್ತ ಪ್ರಶ್ನೆಗಳ ತರಂಗಗಳನ್ನೆಬ್ಬಿಸಿದ್ದಾರೆ ಸುದರ್ಶನ್ ತಮ್ಮ ಹೊಸ ಕವನದಲ್ಲಿ. ಓದುತ್ತಿದಂತೆ ನಿಮ್ಮ ವಿಚಾರ ಲಹರಿಯನ್ನು ಹರಿ ಬಿಡುವುದರಲ್ಲಿ ಯಾವ ಸಂದೇಹವೂ ಇಲ್ಲ.
ಜಗ ಎದುರು ಬಿದ್ದಾಗ ಜಗದೆದುರು ಬಿದ್ದಾಗ
ಜಗದ ಜೀವರುಗಳೆಲ್ಲ ನಕ್ಕಾಗ
ಜಗಕೆ ಕಿವಿಗೊಡದಂತೆ ಜಗದ ಪರಿವೆಯ ಚಿಂತೆ
ಇರದಂತೆ ನೀನಂದು ನನಗಾಗಿ ನಿಂತೆ
ಕೈ ಚಾಚಿ ಎಬ್ಬಿಸುತ ಮೈ ಮನವ ಝಾಡಿಸುತ
ಮೈದಡವಿ ಮನದಲ್ಲಿ ಮನದಲ್ಲಿ ಧೈಯ೯ ಮೂಡಿಸಿದೆ
ತನುವ ಧೂಳನು ಒರೆಸಿ ಮನದ ಗಾಯವ ಮರೆಸಿ
ಹಳೆಯ ಪುಟಗಳ ಹರಿದು ಹೊಸದು ತೋರಿಸಿದೆ
ಹೊಸ ಬದುಕ ನಾಳೆಗಳು, ನಾಳೆಗಳ ಹಾಳೆಗಳು
ಹಾಳೆಗಳು ತುಂಬಿರುವ ಪುಸ್ತಕವಿದೆ
ಪುಸ್ತಕದ ಮೊದಲೇನು, ನಡುವೇನು ಕೊನೆಯೇನು
ಪುಸ್ತಕದ ತುಂಬೆಲ್ಲ ನಿನ್ನಿರುವಿದೆ
ಕರುಳ ಕುಡಿ ನಾವಲ್ಲ, ಕರುಳ ರಕ್ತವು ಇಲ್ಲ
ನೆರೆ ನೆರೆದು ನಿಂತ ಸಂಬಂಧಗಳು ಇಲ್ಲ
ಬರಿದೆ ಭಾವದ ಬೇರು ಹೀರಿ ಪ್ರೀತಿಯ ನೀರು
ಬೆಳೆಸಿರುವ ಈ ತರುವಿಗೇನು ಹೆಸರು?
ನಿನಗೇನು ಅಲ್ಲದ ಎನಗಾರು ನೀನು?
ನಮ್ಮ ನಡುವಿನ ಬಂಧಕಿರುವ ಹೆಸರೇನು?
-ಸುದರ್ಶನ ಗುರುರಾಜ ರಾವ್