’ಇರು ನೀ ಧನಾತ್ಮಕ, ಆಗುವುದು ಜೀವನ ಸಾರ್ಥಕ’ – ಸುಹಾಸ್ ಪುರುಷೋತ್ತಮ ಕರ್ವೆ ಬರೆದ ಲೇಖನ

(ಸುಹಾಸ್ ಪುರುಷೋತ್ತಮ ಕರ್ವೆ ನಮ್ಮ ಯುವ ಬರಹಗಾರರಲ್ಲಿ ಒಬ್ಬರು. ಅವರ ವೃತ್ತಿಯೇನೋ ಐ. ಟಿ ಸಂಬಂಧಿಸಿದ್ದು. ಇನ್ನೂ ಎಳೆಯ ಸಂಸಾರ. ಆದರೆ ಈ ಚಿಕ್ಕ (ಆದರೆ ಪ್ರಭುದ್ದ) ಬರಹದಲ್ಲಿ ಒಂದು ಉದಾಹರಣೆಯೊಂದಿಗೆ ಪ್ರವಚನದ ಛಾಯೆಯಲ್ಲಿ ಮನುಷ್ಯನಲ್ಲಿರಬಹುದಾದ ಎರಡು ತರಹದ ಒಂದಕ್ಕೊಂದು ತದ್ವಿರುದ್ಧವಾಗಿರುವ ಪ್ರವೃತ್ತಿಗಳ ಬಗ್ಗೆ ಹೇಳಿ, ಶ್ರೀಮದ್ ಭಗವದ್ಗೀತೆಯಲ್ಲ್ಲಿ ಹೇಳಿದ ಇಂದ್ರಿಯ, ಮನಸ್ಸು, ಬುದ್ಧಿ ಇವುಗಳ ನಿಯಂತ್ರಣ, ಮತ್ತು ವಿಭಿನ್ನ ವ್ಯಕ್ತಿತ್ವಗಳನ್ನು ಬೆಳಸುವದು ಇವುಗಳನ್ನು ಗಂಭೀರವಾಗಿ ಚರ್ಚಿಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಅವರು ಉದ್ಧರಿಸಿದ ಶ್ಲೋಕದ ಜೊತೆಗೆ ಭಗವದ್ಗೀತೆಯ ಮೊರೆ ಹೋಗಿ ಆ ಅಧ್ಯಾಯದ ೪೦-೪೩ರ ಶ್ಲೋಕಗಳನ್ನು ಅರಿತುಕೊಳ್ಳುವ ಪ್ರಯತ್ನ (ನನ್ನಂತೆ) ಮಾಡಬಹುದಲ್ಲ! ಕಳೆದ ವಾರ ದಾಕ್ಷಾಯಿನಿಯವರ ಲೇಖನದಲ್ಲಿ ತಮ್ಮ ಅನುಭವದ ಆಧಾರದ ಮೇಲಿನ ಒಂದು ಜಟಿಲ ಪ್ರಶ್ನೆ ಕೇಳಿ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದರು. ಅದು ಸಾಕಷ್ಟು ಆರೋಗ್ಯಕರವಾದ ಚರ್ಚೆಗೆ ಎಡೆಕೊಟ್ಟಿತಲ್ಲದೆ, ಸಾಕಷ್ಟು ಓದುಗರ ಪ್ರತಿಕ್ರಿಯೆಗಳಿಗೆ ಅನುವು ಮಾಡಿ ಕೊಟ್ಟಿತ್ತು. ಇಂದಿನ ಲೇಖನವೂ ನಿಮ್ಮಲ್ಲಿ ವಿಚಾರ ಪ್ರಚೋದನೆ ಮಾಡುವದರಲ್ಲಿ ಸಂಶಯವಿಲ್ಲ. ಭಾಗವಹಿಸಿ! ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.   -ಸಂ)

’ಇರು ನೀ ಧನಾತ್ಮಕ, ಆಗುವುದು ಜೀವನ ಸಾರ್ಥಕ’ 

ಪ್ರತಿಯೊಬ್ಬರಲ್ಲೂ ಎರಡು ವ್ಯಕ್ತಿತ್ವಗಳು ಇರುತ್ತವೆ. ಒಂದು ಯಾವಾಗಲೂ ‘ಧನಾತ್ಮಕ’ [Positive Thinking] ಯೋಚನೆ ಮಾಡುವ ವ್ಯಕ್ತಿತ್ವವಾದರೆ, ಇನ್ನೊಂದು ‘ಋಣಾತ್ಮಕ’ [Negative Thinking] ಭಾವನೆಯನ್ನು ತನ್ನ ಬತ್ತಳಿಕೆಯಲ್ಲಿ ಇರಿಸುವಂತಹ ವ್ಯಕ್ತಿತ್ವ.

ಈ ಎರಡು ವ್ಯಕ್ತಿತ್ವಗಳು ಹೇಗಿರಬಹುದು? ನಮ್ಮ ಮೇಲೆ ಅವುಗಳ ಪರಿಣಾಮಗಳು ಹೇಗಿರಬಹುದು? ಎಂಬ ಕುತೂಹಲದಲ್ಲಿ ಬರೆದ ನನ್ನ ಅಭಿಪ್ರಾಯಗಳು ಮತ್ತು ಅನಿಸಿಕೆಗಳು.

ಈ ಪ್ರಪಂಚಕ್ಕೆ ನಾವು ಕಾಲಿಟ್ಟಾಗ ಈ ಎರಡು ವ್ಯಕ್ತಿತ್ವಗಳು ಸಾಮಾನ್ಯವಾಗಿ ಒಂದೇ ಆಗಿರುತ್ತವೆ ಅಥವಾ ಅವುಗಳ ಸ್ವಭಾವಗಳು ಒಂದೇ ಆಗಿರುತ್ತವೆ. ಪ್ರಮುಖವಾಗಿ ಅವು ಎಂದಿಗೂ ‘ಧನಾತ್ಮಕ’ ಆಗಿರುತ್ತವೆ ಎನ್ನುವುದು ವಿಶೇಷ. ಈ ಉದಾಹರಣೆಗಳನ್ನೇ ಗಮನಿಸೋಣ. ಮಗು ತಪ್ಪು ಮಾಡಿದೆ ಎಂದಾಗ ಪೋಷಕರು ಬೈದು ಅದನ್ನು ತಿದ್ದಿ ಹೇಳುವುದು ಸಮಂಜಸ, ಕ್ಷಣಿಕ ಸಿಟ್ಟು ಆ ಮಗುವಿನಲ್ಲಿ ಮೂಡುವುದು ಕೂಡ ಅಷ್ಟೇ ಸಹಜ. ಅದನ್ನೇ ಮತ್ಸರವಾಗಿ ಮನಸ್ಸಿನಲ್ಲಿ ಶೇಖರಿಸದೆ, ಮುಕ್ತವಾಗಿ ಪೋಷಕರನ್ನು ಮತ್ತೆ ಪ್ರೀತಿಸುವುದು ಎಷ್ಟು ಚೆಂದ ಅಲ್ಲವೇ?
ಅಪ್ಪ ಏನೋ ಉಡುಗೊರೆ ತರುತ್ತಾರೆ ಎಂದು ಹೇಳಿ ತರಲು ಮರೆತರೆ ಸ್ವಲ್ಪ ಹೊತ್ತು ಕೋಪದಿಂದ ಸಿಂಡರಿಸಿಕೊಂಡು, ಅಪ್ಪ ಮತ್ತೆ ಉಡುಗೊರೆ ತಂದಾಗ ‘ನಿನ್ನೆ ತಂದಿಲ್ಲವಲ್ಲ ಇವತ್ತು ಬೇಡ’ ಎಂದು ತಿರಸ್ಕರಿಸದೆ, ಅಷ್ಟೇ ಸಲೀಸಾಗಿ ಮತ್ತೆ ಪ್ರೀತಿ, ಉತ್ಸಾಹದಿಂದ ಅದನ್ನು ಸ್ವೀಕರಿಸುವುದು ಎಷ್ಟು ಮುಗ್ಧತೆ ಅಲ್ಲವೇ?
ಸಿಟ್ಟು, ಮತ್ಸರ, ತಿರಸ್ಕಾರ ಇವುಗಳನ್ನೆಲ್ಲ ಶೇಖರಿಸದೆ ಎಷ್ಟು ಧನಾತ್ಮಕವಾಗಿ ಬೆಳೆಯುತ್ತಿರುತ್ತವೆ ಈ ಮುಗ್ಧ ಪುಟಾಣಿಗಳು. ದೊಡ್ಡವರಾಗುತ್ತಿದ್ದಂತೆ ಈ ಎಲ್ಲ ಗುಣಗಳನ್ನು, ವಿಷಯಗಳನ್ನು ಶೇಖರಿಸುತ್ತಾ ‘ಋಣಾತ್ಮಕ’ ವ್ಯಕ್ತಿತ್ವವನ್ನು ಅರಿವಿಲ್ಲದೆ ಬೆಳೆಸುತ್ತಿರುತ್ತೇವೆ.

ಎಲ್ಲಿಯವರೆಗೆ ‘ಧನಾತ್ಮಕ’ ವ್ಯಕ್ತಿತ್ವದ ಛಾಯೆ ‘ಋಣಾತ್ಮಕ’ ವ್ಯಕ್ತಿತ್ವದ ಮೇಲಿರುತ್ತದೆಯೋ ಅಲ್ಲಿಯವರೆಗೆ ಅದರ ದುಷ್ಪರಿಣಾಮಗಳು ಕಾಣಸಿಗುವುದು ಅತಿ ವಿರಳ ಇಲ್ಲವೇ ಶೂನ್ಯಕ್ಕೆ ಸಮ. ‘ಋಣಾತ್ಮಕ’ ವ್ಯಕ್ತಿತ್ವ ಮಿತಿಗಿಂತ ಹೆಚ್ಚು ಬೆಳೆದರೆ ಮಾತ್ರ ನಮ್ಮ ನಿರ್ಧಾರ, ನಮ್ಮ ವಿಚಾರ, ನಮ್ಮ ಮಾತು, ನಮ್ಮ ಸಂಬಂಧಗಳು ಎಲ್ಲವೂ ‘ಋಣಾತ್ಮಕ’ ವ್ಯಕ್ತಿತ್ವದ ಕಡೆಗೆ ವಾಲುವುದು ಶತಸಿದ್ಧ!

ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ |
ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ || ಶ್ಲೋಕ ೪೨ || [ಭಗವದ್ಗೀತೆ ಅಧ್ಯಾಯ ೩]

 

 

ಈ ಶ್ಲೋಕದಲ್ಲಿ ಭಗವಂತ ಶ್ರೀಕೃಷ್ಣ ಹೇಳಿದ ಹಾಗೆ, ಇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠ, ಮನಸ್ಸಿಗಿಂತ ಬುದ್ಧಿಯು ಹಿರಿದಾದ ತಾಣ, ಬುದ್ಧಿಗಿಂತಲೂ ಆ ಭಗವಂತ ದೊಡ್ಡವನು. ಭಗವಂತನನ್ನು ಕಾಣಬೇಕೆಂದರೆ, ಬ್ರಹ್ಮಾನಂದವನ್ನು ಅನುಭವಿಸಬೇಕೆಂದರೆ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದು ಮುಖ್ಯವಾದರೂ ‘ಧನಾತ್ಮಕ’ ವ್ಯಕ್ತಿತ್ವದ ನಿಯಂತ್ರಣ ಇದರಲ್ಲಿ ಮಹತ್ವ. ಇಂದ್ರಿಯಗಳು ಸದಾ ಕ್ರಿಯಾಶೀಲರಾಗಿ, ಮನಸ್ಸು ಪ್ರಫುಲ್ಲಿತವಾಗಿ, ಬುದ್ಧಿಯು ಒಳ್ಳೆಯ ವಿಚಾರಗಳನ್ನೇ ಕೇಂದ್ರೀಕರಿಸಿ ನಮ್ಮಿಂದ ಸಹಜವಾಗಿ ಪರೋಪಕಾರಗಳನ್ನೇ ಮಾಡಿಸುತ್ತದೆ ಈ ‘ಧನಾತ್ಮಕ’ ವ್ಯಕ್ತಿತ್ವ.

ಅದೇ ‘ಋಣಾತ್ಮಕ’ ವ್ಯಕ್ತಿತ್ವವು ಇಂದ್ರಿಯ, ಮನಸ್ಸು ಮತ್ತು ಬುದ್ಧಿಯನ್ನು ತನ್ನ ವಶದಲ್ಲಿಟ್ಟುಕೊಂಡರೆ ಒಮ್ಮೆ ಯೋಚಿಸಿ ಅದರ ಪರಿಣಾಮ ಏನಾದೀತು?

ಇಂದ್ರಿಯಗಳು ಒಳ್ಳೆಯ ಕಾರ್ಯಕ್ಕೆ ಒಗ್ಗದೆ, ಮನಸ್ಸು ಅದಕ್ಕೆ ಪ್ರೇರೇಪಿಸದೆ,ಧೈರ್ಯ ತೋರದೆ, ಬುದ್ಧಿ ಆ ಕಾರ್ಯದಲ್ಲಿ ಸೋತವರನ್ನೇ ಆದರ್ಶವಾಗಿಸಿ ನಮ್ಮಲ್ಲಿ ಆಲಸ್ಯ, ಹಿಂಜರಿಕೆ ಹೆಚ್ಚಾಗಿ ಆತ್ಮವಿಶ್ವಾಸಕ್ಕೆ ಧಕ್ಕೆ ತಂದಂತಾಗುತ್ತದೆ. ಇಂದ್ರಿಯಗಳಿಂದ ‘ಶಾರೀರಿಕ’ ಪಾಪಗಳು ಹೆಚ್ಚಾಗಿ, ಮನಸ್ಸಿನಲ್ಲಿ ‘ಪಾಪ ಭಾವನೆಗಳು’ ಯಥೇಚ್ಛವಾಗಿ, ಬುದ್ಧಿ ಈ ಭಾವನೆಗಳನ್ನು ವ್ಯಕ್ತಪಡಿಸಲು ಹತ್ತಾರು ಮಾರ್ಗಗಳನ್ನು ಹುಡುಕಿ ನಮ್ಮ ನೈಜತೆಯನ್ನೇ ನಾವು ಕಳೆದು ಏಕಾಂಗಿಯಾಗಬಹುದು.

ಏಕಾಂಗಿ ಎಂದರೆ ಒಬ್ಬರೇ ಇರುವುದು ಎಂಬರ್ಥದಲ್ಲಲ್ಲ. ಮತ್ಸರ, ದ್ವೇಷ, ತಿರಸ್ಕಾರದಿಂದ ಹತ್ತಿರದವರು ದೂರಾಗಿ, ಕೇವಲ ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ ಎನ್ನುವ ತರಹ ನಮ್ಮ ಸಂಬಂಧಗಳಾಗದಿದ್ದರೆ ಸಾಕು. ‘ಧನಾತ್ಮಕ’ ವ್ಯಕ್ತಿತ್ವ ನಮ್ಮಲ್ಲಿ ಎಷ್ಟು ಬೆಳೆಸೋಣ ಎಂದರೆ, ನಮ್ಮಲ್ಲಿರುವ ‘ಋಣಾತ್ಮಕ’ ವ್ಯಕ್ತಿತ್ವವನ್ನು ಅದಕ್ಕೆ ಎಷ್ಟು ಕೂಡಿಸಿದರು ಮೊತ್ತ ಎಂದಿಗೂ ಧನಾತ್ಮಕವೇ ಆಗಿರಬೇಕು. (+)+(-xn)=(+)

‘ಇರು ನೀ ಧನಾತ್ಮಕ, ಆಗುವುದು ಜೀವನ ಸಾರ್ಥಕ’

ಲೇಖಕ:     ಸುಹಾಸ್ ಪುರುಷೋತ್ತಮ ಕರ್ವೆ