(ಕರಾಳ) ರಹಸ್ಯಗಳ ಗೂಡು ಬ್ರಾಡ್ಸ್ ವರ್ತ್ -ಭಾಗ 2 ಶ್ರೀವತ್ಸ ದೇಸಾಯಿ

 

ಕಳೆದ ವಾರ ಪ್ರಕಟಿಸಿದ ರಹಸ್ಯಗಳ ಗೂಡು ಭಾಗ ೧ ರ ನಂತರ ಈ ವಾರ ಇದೇ ವಿಷಯದ ಬಗ್ಗೆ ಅದರಲ್ಲೂ ಭವ್ಯವಾದ ಹಿರಿಯ ಮನೆಯ ಮತ್ತು ಮನೆ ಒಡೆಯರ ಕರಾಳ ಇತಿಹಾಸವನ್ನು ಶ್ರೀವತ್ಸ ದೇಸಾಯಿ ಅವರು ಭಾಗ ಎರಡರಲ್ಲಿ ದಾಖಲಿಸಿದ್ದಾರೆ. ಒಂದು ಹಿನ್ನೋಟದಲ್ಲಿ ನೋಡಿದಾಗ ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ, ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಒಂದು ಬಣ್ಣ, ಒಂದು ಜಾತಿ ಮತ್ತು ಒಂದು ಧರ್ಮ ಇನ್ನೊಂದನ್ನು ಶೋಷಿಸುತ್ತ ಬಂದಿದೆ. ಮೇಲು-ಕೀಳು, ಶ್ರೇಷ್ಠ- ಕನಿಷ್ಠ ಎಂಬ ಭಾವನೆಗಳನ್ನು ಹುಟ್ಟುಹಾಕಿದೆ. ಈ ಶೋಷಣೆ, ದ್ವೇಷ, ದಬ್ಬಾಳಿಕೆ, ಅನ್ಯಾಯ ಪ್ರಪಂಚದ ಹಲವಾರು ನೆಲೆಗಳಲ್ಲಿ ನಮ್ಮ-ನಿಮ್ಮ ನಡುವೆ ಇಂದಿಗೂ ನಡೆಯುತ್ತಿದೆ. ಭೇದಗ್ರಹಣ, ಗುಂಪುಗಾರಿಕೆ, ನಮ್ಮವರು-ಅನ್ಯರು ಈ ಭಾವನೆಗಳು ಜೈವಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಗುಂಪಿನ, ಸಮುದಾಯದ ಸಂರಕ್ಷಣೆಗೆ ಪೂರಕವಾದದ್ದು ಎಂದು ಸಮಾಜ ಶಾಸ್ತ್ರ ಪರಿಗಣಿಸಿದ್ದರೂ, ಯಾವ ವಿಶ್ಲೇಷಣೆ ವಿವರಣೆ ಕೊಟ್ಟರೂ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ! ಅದು ಅನೈತಿಕ ನಿಲುವು. ಈ ವಿಭಜನೆಗಳನ್ನು ದಾಟಿ ಮೇಲೇರುವುದು ಸಭ್ಯತೆಯ, ನಾಗರೀಕತೆಯ ಮತ್ತು ವಿಕಾಸದ ಲಕ್ಷಣ. ಇತಿಹಾಸದಲ್ಲಿ ನಡೆದ ಹಳೆ ಆಕ್ರಮಣ, ತಪ್ಪು ಇವುಗಳ ನೆಪದಲ್ಲಿ ಅವುಗಳನ್ನು ಕೆದಕಿ ಈ ಇಪ್ಪತ್ತೊಂದನೇ ಶತಮಾನದಲ್ಲಿ ಇತ್ಯರ್ಥ ಮಾಡುವುದು ಕೂಡ ಅನೈತಿಕ. ವಿಶ್ವಮಾನವ, ವಿಶ್ವ ಭ್ರಾತೃತ್ವ ಇವುಗಳ ಚೌಕಟ್ಟಿನಲ್ಲಿ ಈ ಮೇಲೆ ಪ್ರಸ್ತಾಪಿಸಿದ ವಿಭಜನೆಗಳನ್ನು ಸಜ್ಜನರು,ಉದಾರಿಗಳು, ಪ್ರಗತಿಪರರು ಪ್ರಶ್ನಿಸಬೇಕಾಗಿದೆ ಮತ್ತು ತಿರಸ್ಕರಿಸಬೇಕಾಗಿದೆ. ಇದು ನಾಗರೀಕ ಸಮಾಜದ ಸಾಮಾಜಿಕ ಜವಾಬ್ದಾರಿ. ಮೌನ ಸಮ್ಮತಿಯ ಸೂಚಕ ಎಂಬ ಉಕ್ತಿಯನ್ನು ಕೇಳಿದ್ದೇವೆ. ಡಾ.ದೇಸಾಯಿ ಅವರ ಬರಹ ನಮ್ಮ ಸಂವೇದನೆಗಳನ್ನು ಎಚ್ಚರ ಗೊಳಿಸುವುದಲ್ಲದೆ, ಅರಿವನ್ನು ಹೆಚ್ಚಿಸಿದೆ. ಸೂಕ್ಷ್ಮ ಮತೀಯರು ಈ ವಿಚಾರವನ್ನು ಪ್ರಪಂಚದ ಇತರ ನೆಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಟ್ಟು, ಒರೆ ಹಚ್ಚಿ ನೋಡಿ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
      -ಸಂಪಾದಕ

**********************************************************************************************

’ಸತ್ಯಂ ಬ್ರೂಯಾತ್, ಪ್ರಿಯಮ್ ಬ್ರೂಯಾತ್’. ಒಂದನೆಯ ಭಾಗದಲ್ಲಿ  ಬ್ರಾಡ್ಸ್ ವರ್ತ್ ಮನೆ, ತೋಟದ ಬಗ್ಗೆ ಥಳುಕಿನ ಸತ್ಯಗಾಥೆ ಓದಿದ ನಂತರ ಮೇಲೆ ಉದ್ಧರಿಸಿದ ಮನುಸಮೃತಿಯ ಎರಡನೆಯ ಪಾದಕ್ಕೆ ಬರಬೇಕಲ್ಲವೆ? ’ನ ಬ್ರೂಯಾತ್ ಸತ್ಯಮಪ್ರಿಯಂ!’ ಅಪ್ರಿಯವಾದದ್ದನ್ನೂ ಹೇಳಿದರೇನೇ ಬ್ಯಾಲನ್ಸ್ ಆಗುತ್ತದೆ. ಹೋದಸಲದ ಲೇಖನವನ್ನು ಓದಿದ ಕೆಲವರಿಗೆ ಬಿ ಬಿ ಸಿ ಯಲ್ಲಿ ಬಂದ ’ಆಂಟಿಕ್ ರೋಡ್ ಶೋ’ದಲ್ಲಿ ನೋಡಿದ ವಿವಿಧ grand country homes ಗಳು ನೆನಪಾದವಂತೆ. ನಿಜ, ಹಿಂದೊಮ್ಮೆ ಈ ದೇಶದಲ್ಲಿ 5,000 ಕ್ಕಿಂತ ಹೆಚ್ಚು ಇಂಥ ಭವ್ಯ ಮನೆಗಳಿದ್ದು ಕಾರಣಾಂತರಗಳಿಂದ ಈಗ ಅವುಗಳ ಸಂಖ್ಯೆ 3,000 ಕ್ಕೆ ಇಳಿದು ನಿಂತಿದೆ. ಇವುಗಳನ್ನು ನೋಡಿ ಆನಂದಿಸಿದ ಜನಸಾಮಾನ್ಯರಿಗೆ ಈ

ಬ್ರಾಡ್ಸ್ ವರ್ತ್ ಹಾಲ್

’ಮಾಂಡಲೀಕರು, ಪಾಳೇಗಾರರು (ಅವರಲ್ಲಿ ಕೆಲವರು ನೈಟ್(Kt), ಬಾರೊನೆಟ್(Bt), ಡ್ಯೂಕ್,  ಮಾರ್ಕಿಸ್ಸ್ ಅಂತೆಲ್ಲ ಟೈಟಲ್ ಹೊಂದಿದ ಮಾಲಕರು), ಹೇಗೆ ಸಿರಿವಂತರಾದರು ಅನ್ನುವ ಕುತೂಹಲವಿದ್ದರೂ ಅದನ್ನು ಇತ್ತೀಚೆಗೆ ಕೆದಕುವ ವರೆಗೆ ಗೌಪ್ಯವಾಗಿಯೇ ಇಡಲಾಗುತ್ತಿತ್ತು. ಈಗ ಆ ಕರಾಳ ಇತಿಹಾಸದ ಮೇಲೆ ಬೆಳಕು ಚೆಲ್ಲುವಾ. ಅದಕ್ಕೂ ಮೊದಲು ಅದರ ಹಿನ್ನೆಲೆಯನ್ನು ಅರಿತುಕೊಳ್ಳೋಣ.

 ಒಂದು ಕಾಲಕ್ಕೆ ಸೂರ್ಯಾಸ್ತ ಕಾಣದ ಸಾಮ್ರಾಜ್ಯಶಾಹಿಯಾಗಿದ್ದ ಬ್ರಿಟನ್ ದೇಶದವರು ಬೇರೆ ಕೆಲವು ವಸಹಾತುಶಾಹಿ ಯೂರೋಪಿಯನ್  ದೇಶದ ಪ್ರಜೆಗಳಂತೆ ಹೆಚ್ಚು ಕಡಿಮೆ ಹದಿನಾರನೆಯ ಶತಮಾನದಿಂದಲೂ ಆಫ್ರಿಕನ್ನರನ್ನು ’ಬೇಟೆಯಾಡಿ’ ಗುಲಾಮರನ್ನಾಗಿ ಹಿಡಿದೊಯ್ದು ’ನ್ಯೂ ವರ್ಲ್ಡ್’ ಅಮೇರಿಕೆ, ಮತ್ತು ವೆಸ್ಟ್ ಇಂಡೀಸ್ ದ್ವೀಪಗಳಿಗೆ ಕೊಂಡೊಯ್ದು ಮಾರುವ ವ್ಯಾಪಾರದಲ್ಲಿ ಆಳವಾಗಿ ತೊಡಗಿದ್ದರು. ದಾಖಲೆಗಳ ಪ್ರಕಾರ ಆ ಎರಡೂವರೆ ಶತಮಾನದ ಅವಧಿಯಲ್ಲಿ ಹೆಚ್ಚು ಕಡಿಮೆ 3,000,000 ಗುಲಾಮರನ್ನು ’ಕಪ್ಪು ಖಂಡ’ದಿಂದ ಅಮೇರಿಕೆಗಳಿಗೆ ಸಾಗಿಸಲಾಯಿತು. ಅದರಿಂದ ಉದ್ಭವಿಸಿದ ದುಡ್ಡು-ದೌಲತ್ತು, ವರ್ಚಸ್ಸು ಮತ್ತು ರಾಜಕಾರಣದಲ್ಲಿ  ಯಶಸ್ಸನ್ನು ಗಳಿಸಿದವರು ಅಗಣ್ಯರು. ಈ ದೇಶದ ಉದ್ದಗಲದ ಮಹಾನಗರಗಳಲ್ಲಿ ಅದರ ಕುರುಹುಗಳಿವೆ; ಇಮಾರತಿಗಳಿವೆ, ವಿದ್ಯಾ ಸಂಸ್ಥೆಗಳಿವೆ, ದತ್ತಿ ಪಾರಿತೋಷಕಗಳಿವೆ; ’ಮಹಾ ದಾನಿಗಳ’ ಪುತ್ಥಳಿಗಳಿವೆ. ಅಥವಾ ಇದ್ದವು. ಕೆಲವು ಇತ್ತೀಚಿನ ಕಾಲದಲ್ಲಿ ನೀರುಪಾಲಾದದ್ದು ಸರ್ವ ವಿದಿತ. ದಾಸ್ಯದ ವಿರುದ್ಧ ಪ್ರತಿಭಟನೆಗಳು ಬೆಳೆಯಲಾರಂಭಿಸಿ ತಡವಾಗಿಯಾದರೂ 1833 ರಲ್ಲಿ ಗುಲಾಮಗಿರಿ ನಿಷೇಧಿಸುವ ಕಾನೂನು (Slavery Abolition Act 1833) ಜಾರಿಗೆ ಬಂದಿತು.

ಪೀಟರ್ ಥೆಲ್ಲುಸನ್ ಮತ್ತು ಗುಲಾಮರ ಸಾಗಾಣಿಕೆ

ಗುಲಾಮಗಿರಿ ನಿರ್ಮೂಲನ ಆಂದೋಲನದ ದ್ವಿಶತಮಾನದ ವರ್ಧಂತಿಯ ಕಾಲದಲ್ಲಿ ಈ ವಿಷಯದಲ್ಲಿ ಆಸ್ಥೆ ಬೆಳೆಯಿತು. (ನಂತರದ Black Lives Matter ಆಂದೋಲನ ಇಲ್ಲಿ ಪ್ರಸ್ತುತ ಅಲ್ಲ). ಅದಕ್ಕೂ ಮೊದಲು ಜನರಲ್ಲಿ ಈ ವಿಷಯದಲ್ಲಿ ಹೆಚ್ಚಿನ ತಿಳಿವಳಿಕೆಯನ್ನು ಬಿಂಬಿಸಲು ಈ ನಾಡಿನ ಎರಡು ಪ್ರಮುಖ ದತ್ತಿ ಸಂಸ್ಥೆಗಳದ ಇಂಗ್ಲಿಷ್ ಹೆರಿಟೇಜ್(EH)  ಮತ್ತು ನ್ಯಾಷನಲ್ ಟ್ರಸ್ಟ್(NT)) ತಮ್ಮ ಆಡಳಿತದಲ್ಲಿರುವ ಆದರೆ ಹಿಂದೆ ಖಾಸಗಿ ಸ್ವಾಮಿತ್ವದಲ್ಲಿದ್ದ ಈ ’ಅರಮನೆ’ಗಳ ಹಿಂದಿನ ಇತಿಹಾಸದ ಬಗ್ಗೆ ಆಳವಾದ ಅಭ್ಯಾಸ ಮಾಡಲು ನಿರ್ಧರಿಸಿದವು. ಇತಿಹಾಸಕರರನ್ನು ಸಂಪರ್ಕಿಸಿದರು; ಸಂಶೋಧಕರನ್ನು ಆಹ್ವಾನಿಸಿದರು. ಅದರ ಫಲಶ್ರುತಿ 2009 ರಲ್ಲಿ ನಡೆದ ಮಹತ್ವಪೂರ್ಣ The Slavery and the British Country House’ Conference. (ಆ ವರದಿಯ ಕೊಂಡಿ ಲೇಖನದ ಕೆಳಗೆ ಇದೆ). ಆನಂತರ ಅವೆರಡೂ ಸಂಸ್ಥೆಗಳು ಆ ಸಂಕೀರಣದಲ್ಲಿ ಮಂಡಿಸಿದ ಅಧ್ಯಯನಗಳನ್ನು ಪ್ರಕಟಿಸಿವೆ (ಈ ಲೇಖನದ ಕೊನೆಯಲ್ಲಿಯ ಕೊಂಡಿ ನೋಡಿ). ಆಗ ಬಹಿರಂಗವಾದ ಸತ್ಯ ಜನರಿಗೆ ಅಚ್ಚರಿಯುಂಟು ಮಾಡಿದರೂ ಅವುಗಳು ಅತ್ಯಂತ ಅನಿರೀಕ್ಷಿತವೇನೂ ಆಗಿರಲಿಲ್ಲ. ಆ ವರದಿಯಲ್ಲಿ ಬ್ರಾಡ್ಸ್ ವರ್ತ್ ಮನೆಯ ಹೆಸರು ಕಂಡಿರಬೇಕು ಎಂದು ನೀವು ಈಗಾಗಲೇ ಊಹಿಸಿರಬಹುದು. ನಿಜ. ಇದೊಂದೇ ಅಲ್ಲ ಇಂಗ್ಲಿಷ್ ಹೆರಿಟೇಜ್ ನ ನಿರ್ವಹಣೆಯಲ್ಲಿರುವ 33 ರಲ್ಲಿ 26 ’ಮನೆ’ಗಳಲ್ಲಿ, ಮತ್ತು ನ್ಯಾಷನಲ್ ಟ್ರಸ್ಟ್(NT) ದ ಕೆಳಗಿನ ಮೂರರಲ್ಲೊಂದು ಮನೆಗಳು (93/300) ಈ ’ಕಳಂಕ’ದಿಂದ ಲೇಪಿತವಾಗಿದ್ದವು ಅಥವಾ ಪರೋಕ್ಷ ಸಂಬಂಧ ಹೊಂದಿದ್ದವು! ಈ ಸಂಬಂಧ ಕೆಲವು ಕಡೆಗಷ್ಟೇ ಢಾಲಾಗಿ ಕಂಡರೆ ಇನ್ನು ಕೆಲವು ಮನೆತನಗಳು ತಮ್ಮ ’ಹೇಯ’ ದೌಲತ್ತನ್ನು ಮರೆಮಾಚಿಸಿ ಚಾಣಾಕ್ಷತೆಯಿಂದ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿ, ಅನೇಕ ರೀತಿಯ ಚರಾಚರ ಆಸ್ತಿಗಳನ್ನು ಗಳಿಸಿದ್ದರು. ಆ ವೈಭವವನ್ನೇ ಇಂದೂ ನೋಡ ಬಹುದು.ಕೆಲವರು ರಾಜಕಾಣದಲ್ಲಿ ಧುಮುಕಿ ಮ್ರಧಾನ ಮಂತ್ರಿಗಳಾದರು. (ಉದಾ:ಇಲ್ಲಿಂದ ಅನತಿದೂರದ ಬಾಲ್ಸೋವರ್ ಕಾಸಲ್ಲಿನ (Balsover Castle) ಡ್ಯೂಕ್ ಆಫ್ ಪೋರ್ಟ್ ಲಂಡ್).  ಬ್ರಾಡ್ಸ್ ವರ್ತ್ ಕೊಂಡ ಪೀಟರ್ ಥೆಲ್ಲಿಸನ್ ಬ್ಯಾಂಕ್ ಆಫ್ ಇಂಗ್ಲಂಡಿನ ಡೈರೆಕ್ಟರ್ ಆಗಿದ್ದರೂ ವಲಸಿಗನಾಗಿದ್ದರಿಂದ ಸ್ವತಃ ತನಗೆ ಪಾರ್ಲಿಮೆಂಟಿನಲ್ಲಿ ಕೂಡುವ ಹಕ್ಕಿರದಿದ್ದರೂ ಆತನ ಮಗನಿಗೆ (ಪೀಟರ್ ಐಸಾಕ್ ಥೆಲ್ಲಿಸನ್) ಹಣ ಮತ್ತು ವರ್ಚಸ್ಸಿನಿಂದ ಬ್ಯಾರನ್ ರೆಂಡಲ್ ಶಮ್ ಅನ್ನುವ ಆನುವಂಶಿಕ ಪಿಯರೇಜ್ ದೊರಕಿತು. ಈ ತರದ ಪರಿವರ್ತನೆ (gentrification)     ತಲೆತಲಾಂತರದಿಂದ ನಡೆಯುತ್ತಲೇ ಬಂದಿದೆ. ವಿಪರ್ಯಾಸವೆಂದರೆ ಬ್ರಾಡ್ಸ್ ವರ್ತ್ ಮನೆತನದ ಕೋಟ್ ಆಫ್ ಆರ್ಮ್ಸ್ ಕೆಳಗಿನ ಧ್ಯೇಯ ವಾಕ್ಯ: Lebore et Honore: ಪರಿಶ್ರಮದಿಂದ ಗೌರವ!  

ಮರಗಳು ಸಂಗೀತವ ಹಾಡುತಿವೆ! (Songs of Mahogany)

ಹಿಂದಿನ ಲೇಖನದಲ್ಲಿ ಬ್ರಾಡ್ಸ್ ವರ್ತ್ ಮನೆಯನ್ನು ಅಲಂಕರಿಸಿದ ಮಹೋಗನಿ ಮರದ ಆಕರ್ಷಕ ಬಾಗಿಲು, ಹಿಡಿಕೆ, ಸ್ಟೇರ್ಕೇಸ್, balustrade  ಬಗ್ಗೆ ಬರೆದಿದ್ದನ್ನು ಓದಿರ ಬಹುದು ಮತ್ತು ನೋಡಿರಬಹುದು. ಮಹೋಗನಿ ನಮಗೆಲ್ಲ ಚಿರಪರಿಚಿತವಾದ ತೇಗನ್ನು ಹೋಲುತ್ತದೆ. ಅದು ಗಟ್ಟಿ, ಮರಗೆಲಸಕ್ಕೆ ಅನುಕೂಲ ಮತ್ತು ಬೆಲೆಬಾಳುವಂಥದು. ಪಶ್ಚಿಮ ಆಫ್ರಿಕಾ ಮತ್ತು ಸೆಂಟ್ರಲ್ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ದ  ಜಮೈಕಾಗಳಲ್ಲಿ  ಬೆಳೆಯುವ ಈ ಮರ ಮೇಲಿನ ಎರಡು ಬ್ರಿಟಿಶರ ಆಧಿಪತ್ಯದಲ್ಲಿದ್ದ ಭಾಗಗಳಲ್ಲಿ ವಿಪುಲವಾಗಿ ದೊರಕುತ್ತಿದ್ದರಿಂದ ಮತ್ತು ಅದನ್ನು ಕಡಿದು ಸಾಗಿಸಲು ಗುಲಾಮರ ’ತೋಳುಬಲ’ ಇದ್ದುದರಿಂದ ಅದರ ಆಮದು ಬ್ರಿಟಿಶ್ ವಸಹಾತುಗಳಲ್ಲೆಲ್ಲ ಬೆಳೆದದ್ದರಲ್ಲಿ ಆಶ್ಚರ್ಯವಿಲ್ಲ.

ಇಂದು ನೀವು ಬ್ರಾಡ್ಸ್ ವರ್ತಿಗೆ ಭೇಟಿ ಕೊಟ್ಟರೆ ಅಲ್ಲಲ್ಲಿ ಮಲಿಕಾ ಬುಕರ್ (ಚಿತ್ರ) ಎನ್ನುವ ಗಯಾನಾ-ಗ್ರೆನೇಡಾ ಮೂಲದ ಇಂಗ್ಲಿಷ್ ಕವಯಿತ್ರಿಯ ಕವನಗಳ ಪ್ರದರ್ಶನವನ್ನು ನೋಡಬಹುದು (ಈ ಪ್ರದರ್ಶನ ನವೆಂಬರ್ ವರೆಗೆ ಅಷ್ಟೇ). ಆಕೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕ್ರಿಯೇಟಿವ್ ರೈಟಿಂಗ್ ವಿಭಾಗದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ.  ವಿಶಾಲವಾದ ಡೈನಿಂಗ್ ಟೇಬಲ್ ಹೊದಿಕೆಯ ಮೇಲೆ ಆಕೆಯ ಕವನದ (ಶೀರ್ಷಿಕೆ ಮೇಲೆ ಇದೆ) ಮುದ್ರಿತ ಸಾಲುಗಳು ಇವು:

  ”Speak of Mahogany. Speak

of the original people of the land!

And think of  bodies/ bodies/ blood

black …blessed …bones..back broad   broken branches/

broken bough/  brown/   bleed/ balsam/  balm/  breathless

Here is a space of interruption,
where hands slap wooden surfaces
for luck and palms lick wood for praise.”

ತೆರೆಯದ ಬಾಗಿಲು!

 ಬ್ರಾಡ್ಸ್ ವರ್ತ್ಆಸ್ತಿಯನ್ನು ಕೊಳ್ಳುವ ಮೊದಲು ಬ್ಯಾಂಕರ್ ಪೀಟರ್ ಥೆಲ್ಲುಸನ್ ಮತ್ತು ಅವನ ಸಹಯೋಗಿಗಳು ಗುಲಾಮರು ಮತ್ತು ಅದಕ್ಕೆ ಸಂಬಧ ಪಟ್ಟ ಸರಕುಗಳ ಸಾಗಾಣಿಕೆಯ ವ್ಯಾಪಾರಕ್ಕೆಂದು ಎರಡು ಹಡಗುಗಳನ್ನು ಕೊಂಡಿದ್ದರು. ಒಂದರ ಹೆಸರು ”ಲಾಟರಿ” ಮತ್ತು ಇನ್ನೊಂದು ”ಲಿಬರ್ಟಿ”(ಎಂಥ ವಿಪರ್ಯಾಸ!). ಇತರ ವ್ಯಾಪರಿಗಳು ಇವರಿಂದ ಸಾಲ ತೆಗೆದುಕೊಂಡಿರುತ್ತಿದ್ದರು. ಗ್ರನಾಡಾ ಮತ್ತು ಬೇರೆ ದ್ವೀಪಗಳ ಪ್ಲಾಂಟೇಶನ್ ವ್ಯವಹಾರದಲ್ಲಿ ತೊಂದರೆಯಾಗಿ ಸಾಲ ತೀರಿಸಲು ತಪ್ಪಿದರೆ, ಇನ್ಶೂರನ್ಸ್ ಹಣದಿಂದ ಶ್ರೀಮಂತರಾಗುತ್ತಿದ್ದರು. ಅದಲ್ಲದೆ ಥೆಲುಸ್ಸನ್ ಬೀಡ್ಸ್ (ಆಫ್ರಿಕನ್ ಮಣಿಗಳು), ಗುಲಾಮರು ತಯಾರಿಸಿದ ರಮ್ (ಮದ್ಯ), ತನ್ನದೇ ಸಕ್ಕರೆ ರಿಫೈನರಿ ಮುಂತಾದ ಎಲ್ಲವ್ಯಾಪಾರಗಳು ಅಪಾರ ಸಂಪತ್ತನ್ನು ತಂದದ್ದರಲ್ಲಿ ಆಶ್ಚರ್ಯವಿಲ್ಲ. ಆತ ಸ್ವತಃ ಗ್ರೆನಾಡಾದಲ್ಲಿ ಕಾಲಿಟ್ಟಿರಲಿಕ್ಕಿಲ್ಲ. ಅನೇಕರಂತೆ ಅನುಪಸ್ಥಿತ ಲ್ಯಾಂಡ್ ಲಾರ್ಡ್ಗಳಲ್ಲಿ ಪೀಟರ್ ಸಹ ಒಬ್ಬನು! ಬ್ರಾಡ್ಸ್ ವರ್ತ್ ಮನೆಯ ದಿವಾನಖಾನೆಯಲ್ಲಿ ಅಲಂಕಾರಕ್ಕೆ ಇಟ್ಟಂಥ ಕಂಪು -ಕಂದು ಬಣ್ಣದ ಮಹೋಗನಿಯ ತೆರೆಯದ ಬಾಗಿಲು ಇದ್ದಂತೆ! 1833 ರಲ್ಲಿ ಗುಲಾಮಗಿರಿಗೆ ಅಂತಿಮ ಕಹಳೆ ಊದಿಯಾದ ಮೇಲೆ ಇಂಥ ಭವ್ಯ ಎಸ್ಟೇಟಿನ ಮಾಲಕರ  ಮನೆತನದ ಜೀತದಾಳಾಗಿ ಅನೇಕರು ಅವರನ್ನು ಅವಲಂಬಿಸಿದ್ದುದು ಸತ್ಯ. ಸರಕಾರ ಗುಲಾಮಗಿರಿ ನಿಂತ ಮೇಲೆ ’ನಷ್ಟ ಪರಿಹಾರಕ್ಕೆ’ 20 ಮಿಲಿಯನ್ ಪೌಂಡುಗಳನ್ನು ಬದಿಗಿಟ್ಟಿತು. ಅದು ಈಗಿನ ಲೆಕ್ಕದಲ್ಲಿ 16.5 ಬಿಲಿಯನ್! 100 ಮನೆಮಾಲಕರು ಅರ್ಜಿ ಸಲ್ಲಿಸಿದ 100 ಜನರ ಯಾದಿಯಲ್ಲಿ ಥೆಲುಸನ್ ಹೆಸರು ಮಾತ್ರ ಇಲ್ಲ!

ಇತ್ತೀಚಿನ ವರೆಗೆ ಮೇಲು ನೋಟಕ್ಕೆ ಆತ ಗುಲಾಮಗಿರಿಯಿಂದ ಲಾಭಪಡೆದನೆಂಬ ವಿಷಯ ಎಷ್ಟೋ ತಲೆಮಾರುಗಳ ವರೆಗೆ ರಹಸ್ಯವಾಗಿಯೇ ಉಳಿದಿತ್ತು!  ಮುಖವಾಡದ ಹಿಂದೆ ಏನಿದೆಯೋ!

ಎಲ್ಲಿಂದ ಬಂತು ಮಹೋಗನಿ?

ಮೆಕ್ಸಿಕೋದ ದಕ್ಷಿಣದ ಆಗಿನ ಬ್ರಿಟಿಶ್ ಹೊಂಡುರಾಸ್  (ಈಗಿನ ಬೆಲೀಜ್ ದೇಶದ)”ಮಸ್ಕಿಟೋ ಬೇ’ ಪ್ರದೇಶದಲ್ಲಿ ಬೆಳೆದ ಉತ್ತುಂಗ ಮಹೋಗನಿ ಮರಗಳನ್ನು ಪಶ್ಚಿಮ ಆಫ್ರಿಕದ ಇಬೋ ಮತ್ತು ಯರುಬಾ ಎನ್ನುವ ಬುಡಕಟ್ಟು ಜನಾಂಗದವರು ಕಡಿಯುತ್ತಿದ್ದರು. ತಮ್ಮ ಊರಲ್ಲಿಯೂ ಇದೇ ತರದ ಖಯಾ ಮರಗಳಿಗೆ ’ಮೊಗಾನ್ವೋ’ (‘m’oganwo’) ಅಂತ ಕರೆಯುತ್ತಿದ್ದರಂತೆ. ಅದೇ ಮಹೋಗನಿ ಆಯಿತು ಅಂತ ಒಂದು ವಾದ. ಗುಲಾಮರು ಮರಗಳನ್ನು ಕೊಡಲಿಯನ್ನು ಪಯೋಗಿಸಿ ಕೈಯಿಂದಲೆ ಕಡಿಯುತ್ತಿದ್ದರು. ಮರದ ಬೊಡ್ಡೆಯನ್ನು ತಟ್ಟಿ, ಗುಡ್ ಲಕ್ಕಿಗೆಂದು ಉಗುಳು ಹಚ್ಚಿದ ಅಂಗೈಯಿಂದ ಅದನ್ನು ಸವರಿ, ಮರವನ್ನು ಕಡಿದು ಕೆಡವಿ, ಉರಿಳಿಸುತ್ತ  ನದಿಯಲ್ಲಿ ತೇಲಿಬಿಡುತ್ತಿದ್ದರು. ಆಚೆಯ ತುದಿಯಲ್ಲಿದ್ದ ಸಾ’ ಮಿಲ್ಲಿನಲ್ಲಿ  ಇನ್ನೊಬ್ಬ ಗುಲಾಮ -ಆತನ ಎದೆಯ ಮೇಲೆ ಬರೆಕೊಟ್ಟು ಉಬ್ಬಿದ ದಪ್ಪ ಕಲೆ ಬಿದ್ದ ಒಡೆಯನ ಅಂಕಿತ -ತಲೆಬಗ್ಗಿಸಿ ಪ್ರಾರ್ಥನೆ ಮಾಡಿ ಕ್ಷಮೆ ಕೇಳಿ ಕೊಯ್ಯು ಮರದ ಹಲಗೆಗಳನ್ನು ಮಾಡುತ್ತಾನೆ. ಕೊನೆಯ ಹಂತದಲ್ಲಿ ಕನ್ನಡಿಯಂತೆ ಮಿಂಚಿ ಎಲ್ಲರ ಕಣ್ಣ ಸೂರೆಗೊಳ್ಳುವ ಕೆಂಪು-ಕಪ್ಪು ಪಾಲಿಶ್ ತಿಕ್ಕಿ ಉಜ್ಜಿದರೆ ತನ್ನ ಮುಖವೇ ಕಾಣಬೇಕು. ಅದನ್ನೇ ಚಾರ್ಲ್ ಡಿಕಿನ್ಸ್ ತನ್ನ ಶಬ್ದಗಳಲ್ಲಿ ಹೇಳಿದ್ದು: ”the varnished wood reflected in the depth of its grain, through all its polish, the hue of the wretched slaves.”  

ಅದೇ ಭಾವವನ್ನು ಆ ಕರಿಯ ಕವಯಿತ್ರಿ (ಮಲಿಕಾ ಬುಕರ್) ತನ್ನ ಮನ ಕಲುಕುವ ಕವನದ ಸಾಲುಗಳಲ್ಲಿ ಹೇಳಿದ್ದಾಳೆ:

In Jamaica in the big house, the house girl is on her knees

polishing the wood floor with coconut oil and orange halves.

ಬೆನ್ನ ಮೇಲೆ ಚಾಟೆಯೇಟಿನ ಕಲೆಗಳುಳ್ಳ ಗುಲಾಮ

In England servants kneel with linseed and brick dust,

worshiping this majestic red, genuflecting.

In the kitchen cook prepares the tea tray for Master. It too

is fancy wood. She walks through the house to deliver

to a man hunched over a desk shaping his will. Now think of Brodsworth, …

ಆ ಕುಖ್ಯಾತ ಉಯಿಲು!

ಪೀಟರ್ ಥೆಲ್ಲುಸನ್ ಸ್ವತಃ ಡೋಂಕಾಸ್ಟರಿನ ಈ ಮನೆಯಲ್ಲಿ ವಾಸ ಮಾಡಿರಲಿಲ್ಲ. ಈ ಮನೆಯನ್ನು ಆತನ ಮೊಮ್ಮಗ (ಒಂದನೆಯ ಭಾಗದಲ್ಲಿ ಹೇಳಿದಂತೆ) 1860 ರಲ್ಲಿ ಚಾರ್ಲ್ಸ್ ಸಾಬಿನ್ ಕಟ್ಟಿಸಿದ. ಆತನ ಅಜ್ಜ ಪೀಟರ್ 1797ರಲ್ಲಿ ತೀರಿಕೊಳ್ಳುವ ಮೊದಲು ಮಾಡಿದ ವೈಶಿಷ್ಠ್ಯಪೂರ್ನ ಮೃತ್ಯುಪತ್ರ ಇತಿಹಾಸವನ್ನೇ ಮಾಡಿತು. ಆಗ ಆತನ ವಾರ್ಷಿಕ ರಿಯಲ್ ಎಸ್ಟೇಟ್ ಆಸ್ತಿ £5000 ದಷ್ಟಿತ್ತು. ಅದಲ್ಲದೆ ವೈಯಕ್ತಿಕ ಎಸ್ಟೇಟ್ ಆಗಿನ ಆರು ಲಕ್ಷ ಪೌಂಡುಗಳಿಗೆ ಟ್ರಸ್ಟೀಗಳನ್ನು ನೇಮಿಸಿ ಅವೆಲ್ಲಕ್ಕೂ ಒಂದು ವಿಚಿತ್ರ ’ಅಕ್ಯೂಮ್ಯುಲೇಷನ್ ಕ್ಲಾಸ್’ ಹಾಕಿ ಇಟ್ಟ. ಅದರ ಪ್ರಕಾರ ”ಆತನ ಆಸ್ತಿಯನ್ನು ಎಲ್ಲಿಯವರೆಗೆ ಬೆಳೆಯುವಂತೆ ತೊಡಗಿಸಬೇಕೆಂದರೆ ತನ್ನ ಮರಣದ ಸಮಯದಲ್ಲಿ ಬದುಕಿರುವ ಮೊಮ್ಮಕ್ಕಕಳ ಕೊನೆಯಗಂಡು ಸಂತತಿ ಬದುಕಿರುವವರೆಗೆ! ಆವರೆಗೆ ಅದು ಆಗಿನ ಕಾಲದ ಒಂದೂವರೆ ಕೋಟಿ ಪೌಂಡುಗಳಷ್ಟು ಆಗಿರಬಹುದಾಗಿದ್ದು ಅದನ್ನು ಅವರಿಗೆ ಹಂಚ ಬೇಕು” ಎಂದು. ಹಿಂದೆಂದೂ ಈ ತರದ ಉಯಿಲನ್ನು ಕಂಡಿರಲಿಲ್ಲ. ಅದನ್ನು ಆತನ ಹೆಂಡತಿ ಮಕ್ಕಳು ಪ್ರಶ್ನಿಸಲಾಗಿ ಟ್ರಸ್ಟುಗಳಿಗೆಂದೇ ಮೀಸಲಾಗಿದ್ದ  ಚಾನ್ಸರಿ ಕೋರ್ಟಿಗೆ ಬಗೆ ಹರಿಸಲು ತಲೆಬೇನೆಯಾಗಿ ಹೋಯಿತು. ಕೊನೆಗೆ ಮುಂದೆ ಇಂಥ ಮೃತ್ಯು ಪತ್ರಗಳು ಬರಬಾರದೆಂದು ’Thelluson Act’ ಎನ್ನುವ ಹೊಸ ಕಾನೂನೇ ಪಾಸು ಮಾಡಬೇಕಾಯಿತು! ಎಂದಿನಂತೆ ಇಂಥ ವ್ಯಾಜ್ಯಗಳು ಮುಗಿಯದೆ ವರ್ಷಾನುಗಟ್ಟಲೆ ಕೋರ್ಟ್ ಮೆಟ್ಟಲು ಹತ್ತಿಸಿದ ಬಗೆಹರಿಸಿ ಲಾಯರು, ಕೋರ್ಟಿನ ಖರ್ಚು, ಫೀಸ್ ಗಳನ್ನು ಕಳೆದ ನಂತರ ’ಗೆದ್ದ’ ಫಲಾನುಭವಿಗಳಿಗೆ (beneficiaries) ದೊರಕಿದ್ದು ತಮ್ಮ ಮೊದಲಿನ ವರ್ಷಾಸನಕ್ಕಿಂತ ಏನೂ ಹೆಚ್ಚಾಗಿರಲಿಲ್ಲ! ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ! ಈ ಕೇಸನ್ನು ಆಧರಿಸಿಯೇ ಚಾರ್ಲ್ಸ್ ಡಿಕೆನ್ಸ್ ’ಬ್ಲೀಕ್ ಹೌಸ್’ (Bleak House) ಎನ್ನುವ ಕಥೆ ಬರೆದನೆಂದು ಪ್ರತೀತಿ. ಕೆಲವರು ಇದನ್ನು ಒಪ್ಪ್ದದಿದ್ದರೂ ಕೆಂಟ್ ಪ್ರಾಂತದ ಬ್ರಾಡ್ಸ್ಟೇರ್ಸ್ ಎನ್ನುವ ಊರಲ್ಲಿಯ ಆ ಹೆಸರಿನ ಮನೆಗೂ ಆ ಕಾದಂಬರಿಗೂ ಏನೂ ಸಂಬಂಧವಿಲ್ಲ ಅನ್ನುತ್ತಾರೆ, ಅಲ್ಲಿ ಕುಳಿತು ಆ ಕಥೆಯನ್ನು ಬರೆದ ಎನ್ನುವದನ್ನು ಬಿಟ್ಟರೆ.

ನೋವು-ನಲಿವುಗಳನ್ನು ಹಾಡುವ ಕಿರುಸ್ತಂಭ 

ಥೆಲ್ಲುಸ್ಸನ್ ಮನೆಯ ಹಿಂದಿನ ಗ್ರೋಟೊದಲ್ಲಿ (ಭಾಗ -೧ ನೋಡಿರಿ) ಟಾರ್ಗೆಟ್ ಹೌಸ್ ಎದುರುಗಡೆ ತೋಟದಲ್ಲಿ ಬಟನ್ ಒತ್ತಿದರೆ  ಒಂದು ಮರದ ಕಿರುಸ್ತಂಭದಿಂದ ಎರಡು ಧ್ವನಿಮುದ್ರಿಕೆಗಳನ್ನು ಕೇಳಬಹುದು. ಒಂದರಲ್ಲಿ  ಗ್ರೆನಾಡಾದಾಮೀಪದ ದ್ವೀಪದಲ್ಲಿ ಪ್ರಚಲಿತವಿರುವ ಕರಿಯಾಕೋ ಡ್ರಮ್ ಮತ್ತು ನೃತ್ಯದ ಸಂಗೀತ ಕೇಳಬರುತ್ತದೆ. ಇನ್ನೊಂದರಲ್ಲಿ  ಪೀಟರ್ ಥೆಲ್ಲುಸನ್ ಸಾಲದ ಕಾಗದಪತ್ರದಲ್ಲಿ ನಮೂದಿಸಿದ ಗ್ರೆನೇಡಾದ ಬಕೋಲೆಯ (Bacolet Plantation, 1772) 101 ಅಫ್ರಿಕನ್ ಗುಲಾಮರ ಹೆಸರುಗಳನ್ನು ಇವೆಟ್ ಫಿಲ್ಬರ್ಟ್ ಓದುವದನ್ನು ಕೇಳಬಹುದು. ಸುಂದರ ಉದ್ಯಾನದಲ್ಲಿ ಮೈಮರೆತು ಆನಂದಿಸುವ ಪ್ರೇಕ್ಷಕರಿಗೆ ಅದರಲ್ಲಡಗಿದ ರಹಸ್ಯದ ಅರಿವೇ ಇರಲಾರದು. (ಲೇಖನದ ಕೊನೆಯಲ್ಲಿಯ ವಿಡಿಯೋವನ್ನು ನೋಡಿರಿ).

ಈಶಾವಾಸ್ಯಮಿದಂ ಸರ್ವಂ … ಮಾ ಗೃಧ ಕಸ್ಯಸ್ವಿದ್ಧನಂ

ಕೊನೆಯ ಮಾತು. ಈ ಎರಡು ಲೇಖನಗಳಲ್ಲಿ ಒಂದು ಕುಟುಂಬ ತಲೆತಲಾಂತರಗಳಿಂದ ವಾಸಮಾಡಿದ ಸುಂದರ ಮನೆ, ತೋಟಗಳನ್ನು ನೋಡಿದ್ದಾಯಿತು. ಆ ಸಂಪತ್ತಿನ ಹಿಂದಿನ ರಹಸ್ಯವನ್ನೂ ತಿಳಿದೆವು. ಇಲ್ಲಿ ಈಶಾವಾಸ್ಯ ಉಪನಿಷತ್ತಿನ ಮೊದಲ ಶ್ಲೋಕದ ಉಲ್ಲೇಖದಿಂದ ಇದನ್ನು ಮುಗಿಸುವೆ. ಅದರ ಸಂಕ್ಷಿಪ್ತ ತಾತ್ಪರ್ಯ ಹೀಗಿದೆ: ’ಈ ಜಗತ್ತೆಲ್ಲವೂ ಭಗವಂತನ ವಾಸಕ್ಕಾಗಿಯೇ ಇದೆ. ನಮಗೆ ದೊರಕಿದ್ದನ್ನು ತ್ಯಾಗಬುದ್ಧಿಯಿಂದ ಸ್ವೀಕರಿಸ ಬೇಕು ಮತ್ತು ಅನ್ಯರು ’’ಗಳಿಸಿದ” ಸಂಪತ್ತಿನ ಮೇಲೆ ದುರಾಸೆ ಪಡ ಬೇಡ.

ಶ್ರೀವತ್ಸ ದೇಸಾಯಿ

ಫೋಟೋಗಳು ಮತ್ತು ವಿಡಿಯೋ ಶ್ರೀವತ್ಸ ದೇಸಾಯಿ ಮತ್ತು ಗೂಗಲ್.

*ಆಧಾರ: ಪುಸ್ತಕ/ಲೇಖನಗಳು:

1)https://historicengland.org.uk/images-books/publications/slavery-and-british-country-house/slavery-british-country-house-web/

2)  https://www.nationaltrust.org.uk/features/addressing-the-histories-of-slavery-and-colonialism-at-the-national-trust

3) https://www.english-heritage.org.uk/siteassets/home/learn/research/the-slavery-connections-of-brodsworth-hall.pdf

4) Brodsworth Hall and Gardens: English Heritage Guidebooks; http://www.english-heritage.org.uk ; ISBN 978978-1-84802-014-6