ಬಿ.ಆರ್.ಛಾಯ ಮತ್ತು ಪದ್ಮಪಾಣಿ ‘ಜೋಡಿ’ಯ ಸ್ಪೆಷಲ್

ಕನ್ನಡ ಬಳಗ ಯು.ಕೆ. ಈ ವರ್ಷ ಕೂಡ ಯಶಸ್ವಿಯಾಗಿ ‘ದೀಪಾವಳಿ ೨೦೧೬’  ಕಾರ್ಯಕ್ರಮವನ್ನು ನಡೆಸಿತು. ಅದರ ವಿಶೇಷ ವರದಿ, ವಿವರಗಳು, ಅನಿಸಿಕೆಗಳು ಸದ್ಯದಲ್ಲೇ ನಿಮ್ಮನ್ನು ತಲುಪಲಿವೆ. ಈ ವಾರ ನಿಮ್ಮ ಮುಂದಿರುವುದು ‘ಬಿ.ಆರ್.ಛಾಯ ಮತ್ತು ಪದ್ಮಪಾಣಿ ಜೋಡಿಯ ಸ್ಪೆಷಲ್’. ‘ಅನಿವಾಸಿ’ ಬಳಗದ ಹಲವಾರು ಸದಸ್ಯರುಗಳು ಒಟ್ಟುಗೂಡಿ ಇದನ್ನು ಸಿದ್ಧಪಡಿಸಿದ್ದಾರೆ.  ಏನಿದೆ ಈ ಸ್ಪೆಷಲ್ ನಲ್ಲಿ?? ಓದಿ ನೀವೇ ಹೇಳಿ!!

14657402_1284578304932105_1475829304451788245_n
ಫೇಸ್ ಬುಕ್ ಚಿತ್ರ

ಪದ್ಮಪಾಣಿ ಜೋಡಿದಾರ್ ಮತ್ತು ಬಿ.ಆರ್.ಛಾಯ ದಂಪತಿ

ಕನ್ನಡ ಬಳಗ ಯು.ಕೆ.ಯ 2016 ದೀಪಾವಳಿ ಕಾರ್ಯಕ್ರಮಕ್ಕೆ ಆಗಮಿಸಿದ ಬಿ. ಆರ್. ಛಾಯಾ ಅವರ ಸಂದರ್ಶನ

                                                – ಶ್ರೀವತ್ಸ ದೇಸಾಯಿ

’ಕರ್ನಾಟಕದ ನೈಟಿಂಗೇಲ್’ ಎಂದೇ ಸಂಗೀತಪ್ರಿಯರಿಗೆಲ್ಲ ಚಿರಪರಿಚಿತರಾದ ಬೆಂಗಳೂರು ರಾಮಮೂರ್ತಿ ಛಾಯಾ ಅವರು ಇದೇ ವರ್ಷ ನವೆಂಬರ್ 5 ರಂದು ಯು ಕೆ ಕನ್ನಡಬಳಗಕ್ಕೆ ಬಂದು ತಮ್ಮ ಸಂಗೀತದ ರಸದೂಟದಿಂದ ಕನ್ನಡಿಗರ ಹೃದಯವನ್ನು ಗೆದ್ದರು. ಕಳೆದ ನಾಲ್ಕು ದಶಕಗಳಲ್ಲಿ ತಮ್ಮ ಕನ್ನಡ ಭಾವಗೀತೆ, ಮಕ್ಕಳ ಗೀತೆ, ವಿವಿಧ ಭಾಷೆಗಳ ಚಲನ ಚಿತ್ರಗೀತೆಗಳು, ಹಿನ್ನೆಲೆ ಗಾಯನದಿಂದ ದೇಶ-ವಿದೇಶಗಳಲ್ಲಿ ಮನೆಮಾತಾಗಿದ್ದಾರೆ. ಚಿಕ್ಕಂದಿನಿಂದಲೂ ಸಂಗೀತ-ಹಾಡು ಇವೇ ತಮ್ಮ ಜೀವನವೆಂದುಕೊಂಡು ಈಗಲೂ ಪ್ರತಿ ಹಾಡಿನಲ್ಲಿಯೂ ಹೊಸ ಅನುಭವವನ್ನು ತಾವೂ ಪಡೆದು ಕೇಳುಗರಿಗೂ ಉಣಿಸಿ ತೃಪ್ತಿಪಡಿಸುವ ಅಸಾಧಾರಣ ವ್ಯಕ್ತಿತ್ವ ಅವರದು. ಈ ಬಾರಿ ಅವರು ಇಂಗ್ಲೆಂಡಿನಲ್ಲಿ ಕೊಟ್ಟ ಎರಡು ಸಂಗೀತ ಕಾರ್ಯಕ್ರಮಗಳ ನಂತರ ಮೂರು ವಾರಗಳ ಅಮೇರಿಕೆಯ ಪ್ರವಾಸಕ್ಕೆ ಹೊರಡುವ ಯೋಜನೆಯಿತ್ತು. ಇಂಗ್ಲೆಂಡಿನಿಂದ ಹೊರಡುವ ಮುನ್ನಾದಿನ ನನಗೆ ಅವರ ಸಂದರ್ಶನ ಪಡೆಯುವ ಸದವಕಾಶ ಸಿಕ್ಕಿತು. ಅವರ ಮತ್ತು ಸಂಗೀತದ ಜೋಡಿ ಒಂದು ತರವಾದರೆ, ಛಾಯಾ ಮತ್ತು ಜೋಡಿದಾರರ (ಅವರ ಪತಿ ಪದ್ಮಪಾಣಿ) ಆತ್ಮೀಯ ಜೋಡಿ ಇನ್ನೊಂದು ತರ.

ನೇರವಾಗಿ ನಾನು ಅವರ ಸಂಗೀತ ಯಾತ್ರೆಯ ಆದಿಯಿಂದಲೇ ಸಂದರ್ಶನ ಪ್ರಾರಂಭ ಮಾಡಿದೆ.

ಶ್ರೀವತ್ಸ: ನೀವು ಶಾಲೆಯಲ್ಲಿದ್ದಾಗಿನಿಂದಲೇ ನಿಮಗೆ ಹಾಡುಗಾರಿಕೆ-ಸಂಗೀತದಲ್ಲಿದ್ದ ಪ್ರತಿಭೆಯನ್ನು ಪ್ರತ್ಯಕ್ಷ ಕಂಡದ್ದನ್ನು ನಮ್ಮ ಕನ್ನಡ ಬಳಗದ ವಿಶ್ವನಾಥ್ ಮತ್ತು ವಿನತೆ ನೆನಪಿಸಿಕೊಂಡಿದ್ದಾರೆ. (ಅವರ ಬರಹಗಳು ಈ ಸಂದರ್ಶನದ ನಂತರ ಇವೆ). ಅದು ಹೇಗೆ ಶುರುವಾಯಿತು?

ಛಾಯಾ: ಬಹುಶಃ ನನ್ನ ಅಜ್ಜಿಯಿಂದಿರಬೇಕು. ಅವರ ಹೆಸರು ಭಾಗೀರತಮ್ಮ. ಅವರಲ್ಲಿ ನಿಂತ ನಿಂತಲ್ಲೆ ಹಾಡುಕಟ್ಟಿ ಸುಶ್ರಾವ್ಯವಾಗಿ ಹಾಡುವ ಕಲೆಯಿತ್ತು. ಬಹಳ ಚೆನ್ನಾಗಿ ಹಾಡುತ್ತಿದ್ದರು. ನನ್ನ ತಾತ ಕೃಷ್ಣರಾವ್ ಗುಬ್ಬಿ ಕಂಪನಿಯಲ್ಲಿ ಹಾರ್ಮೋನಿಯಂ ನುಡಿಸುತ್ತಿದ್ದರು. ಅವರಿಬ್ಬರ ಪ್ರಭಾವವಿರಬೇಕು. ಅದಲ್ಲದೆ ನನ್ನ ತಂದೆ ತಾಯಿ ಸಹ ಸಂಗೀತಪ್ರಿಯರಾಗಿದ್ದರು. ತಂದೆಯವರು ನನ್ನನ್ನು ಎಲ್ಲ ಕಡೆ ಸಂಗೀತಕ್ಕೆ ಕರೆದೊಯ್ಯುತ್ತಿದ್ದರು. ಹೀಗೆಯೇ ಹಾಡಿನ ಹುಚ್ಚು ಶುರುವಾದದ್ದು.

thumbnail_chaya-singing
ನವೆಂಬರ್ ೫ರಂದು ಯು.ಕೆ. ಕನ್ನಡ ಬಳಗದಲ್ಲಿ ಹಾಡುತ್ತಿರುವ ಛಾಯಾ; ವಿಶ್ವನಾಥ್ ಮಂದಗೆರೆ ತೆಗೆದ ಚಿತ್ರ

ನಂತರ ಶಾಸ್ತ್ರೀಯ ಸಂಗೀತ ಕಲಿತು (ಅವರ ಗುರುಗಳು ಶ್ರೀಮತಿ ಜಗನ್ಮಾತಾ ಮತ್ತು ವಿಜಯವಾಣಿ) ಹತ್ತು ವರ್ಷಕ್ಕೂ ಮೊದಲೇ ಸೀನಿಯರ್ ಪರೀಕ್ಷೆ ಪಾಸು ಮಾಡಿದ್ದೆ. ಆ ನಂತರ ನಾಲ್ಕು ವರ್ಷ ಅಭ್ಯಾಸ ನಿಂತು ಹೋಗಿತ್ತು. ಮಕ್ಕಳ ಸಂಗೀತ ಸ್ಫರ್ಧೆಗಳಲ್ಲೆಲ್ಲ ನಾನೇ ಫರ್ಸ್ಟ್. ನನ್ನ ಶಾಲೆಗೇ ಬಹುಮಾನ ಬರುತ್ತಿತ್ತು (ವಿಶ್ವನಾಥರ, ವಿನತೆಯ ನೆನಪುಗಳನ್ನು ಓದಿ). ಒಮ್ಮೆ ಚೆನ್ನೈಗೆ ನನ್ನ ತಂದೆಯವರೊಡನೆ ಮ್ಯೂಸಿಕ್ ರೆಕಾರ್ಡಿಂಗ್ ನೋಡಲು ಸ್ಟೂಡಿಯೋಗೆ ಹೋಗಿದ್ದೆ. ಆಗ ತಂದೆಯವರು ಇಳೆಯರಾಜಾ ಅವರ ಎದುರಿಗೆ ’ಇವಳಿಗೂ ಹಾಡುವದರಲ್ಲಿ ಬಹಳ ಆಸ್ಥೆ’ ಅಂದರು. ಅಂದ ಕೂಡಲೇ ಅವರು ನನ್ನಿಂದ ಹಾಡಿಸಿದರು. ಆಗಲೇ ತಮ್ಮ ತಮಿಳು ’ಜೋತಿ’ ಚಿತ್ರಕ್ಕಾಗಿ ನನ್ನ ಮೂರು ಹಾಡುಗಳ ಧ್ವನಿಮುದ್ರಣ ಮಾಡಿಕೊಂಡರು (1982 ರಲ್ಲಿ). ಆನಂತರ ನಾಲ್ಕು ವರ್ಷದ ಗ್ಯಾಪ್. ಹದಿನಾರು ವರ್ಷದವಳಿದ್ದಾಗ ಮತ್ತೆ ಚೆನ್ನೈಗೆ ಒಂದು ಹಾಡುಗಾರಿಕೆಯ ಸ್ಫರ್ಧೆಗೆ ಹೋಗಿದ್ದೆ. ಅದಕ್ಕೆ ನಿರ್ಣಾಯಕರಾಗಿ ಪಿ.ಬಿ. ಶ್ರೀನಿವಾಸ್, ವಿಜಯಭಾಸ್ಕರ ರಾವ್ ಮುಂತಾದವರಿದ್ದರು. ನನಗೇ ಫರ್ಸ್ಟ್ ಪ್ರೈಸ್! ಅವರು ನನಗೆ ಸಿನಿಮಾದಲ್ಲಿ ಹಾಡುವ ಇಚ್ಚೆಯಿದೆಯೇ ಎಂದು ಕೇಳಿದಾಗ ಯಾರು ಒಲ್ಲೆ ಅಂದಾರು? ಪುಟ್ಟಣ್ಣ ಕಣಗಾಲರ ’ಅಮೃತ ಘಳಿಗೆ’ ಚಿತ್ರದಲ್ಲಿ ಮೂರು ಹಾಡುಗಳನ್ನು ನನ್ನಿಂದ ಹಾಡಿಸಿದವರು ಮ್ಯೂಸಿಕ್ ಡೈರೆಕ್ಟರ್ ’’ಸ್ವರ ಸಮ್ರಾಟ್” ವಿಜಯಭಾಸ್ಕರ್ ಅವರು. ನಾನು ಅವರನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ.

           (Please Click on the triangle in the middle to play the video above and the one below)

ಶ್ರೀವತ್ಸ: ”ಹಿಂದುಸ್ಥಾನವು ಎಂದೂ ಮರೆಯದ” ಹಾಡಿನಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದಿರಿ. ಮೊನ್ನೆ ನಮ್ಮ ಕನ್ನಡ ಬಳಗದಲ್ಲೂ ಅದನ್ನೇ ಮೊದಲನೆಯದಾಗಿ ಹಾಡಿ ನಮ್ಮಲ್ಲರ ಮನ ತಣಿಸಿದಿರಿ. ಕನ್ನಡ ಚಿತ್ರರಂಗದಲ್ಲೇನೋ ಸಾವಿರಾರು ಹಾಡುಗಳನ್ನು ಹಾಡಿ ಕನ್ನಡಿರ ಮನ ಸೂರೆಗೊಂಡಿದ್ದೀರಿ. ಹಿಂದಿ, ತುಳು,ತೆಲುಗು, ತಮಿಳು ಕೂಡಿ ಮುನ್ನೂರಕ್ಕು ಮೇಲಿನ ’ಎಂದೂ ಮರೆಯದ’ ಸಿನಿಮಾ ಗೀತಗಳನ್ನು ಹಾಡಿದ್ದೀರಿ. ನಿಮಗೆ ತೃಪ್ತಿ ಕೊಟ್ಟ ಹಾಡುಗಳು ಯಾವವು? ವಿಜಯ ಭಾಸ್ಕರ ರಾವ್ ಅವರು ನಿಮ್ಮನ್ನು ಬೆಳಕಿಗೆ ತಂದವರಲ್ಲವೆ? ಯಾರು ನಿಮ್ಮ ಅಚ್ಚುಮೆಚ್ಚಿನ ಸಂಗೀತದ ಡೈರೆಕ್ಟರ್? ಇವನ್ನು ಕೇಳಲೇ ಬೇಕಲ್ಲವೆ?

ಛಾಯಾ: ತಾಯಿಗೆ ಯಾವ ಮಗು ಹೆಚ್ಚು ಪ್ರೀತಿ ಅಂದ ಹಾಗಾಯಿತಲ್ಲ. (ಈ ಉತ್ತರ ಈ ಮೊದಲೇ ಅನಿರೀಕ್ಷಿಸಿತವಲ್ಲ ಎಂದುಕೊಂಡಿದ್ದೆ!). ನಾನು ಹೆಚ್ಚು ಕಡಿಮೆ ಎಲ್ಲ ಡೈರೆಕ್ಟರರೊಡನೆ, ಎಲ್ಲ ಕಲಾವಿದರ ಜೊತೆಗೆ ಹಾಡಿದ್ದೇನೆ. ಒಬ್ಬರು ಅಂತ ಹೆಸರು ಎತ್ತಿ ಹಿಡಿದು ಹೇಳಲಾರೆ. ನಾನು ಮುನ್ನೂರಕ್ಕೂ ಮೇಲೆ ಸಿನಿಮಾದಲ್ಲಿ, ಕನ್ನಡ ಭಾವಗೀತಗಳು, ಜನಪದ ಗೀತಗಳು, ಮಕ್ಕಳ ಹಾಡುಗಳಲ್ಲದೆ, ಸಿನಿಮಾ ಹಾಡುಗಳ ರೆಕಾರ್ಡಿಂಗ್ ಮಧ್ಯಂತರದಲ್ಲಿ ಕರ್ನಾಟಕದ ಮೂಲೆ ಮೂಲೆಗೆ ಅವರ ಆಮಂತ್ರಣದ ಮೇಲೆ ಹೋಗಿ ಕರ್ನಾಟಕದ ನೂರಾರು ಮಠ, ಮಂದಿರ ಇವುಗಳಿಗಾಗಿ ಪ್ರೈವೇಟ್ ರೆಕಾರ್ಡಿಂಗ್ ಮಾಡಿದ್ದುಂಟು, ಅವುಗಳ ಸಂಖ್ಯೆ 10 – 12,000 ವರೆಗೆ ಹೋಗಿರಬಹುದು. ಅವುಗಳು ಕೆಸೆಟ್ಟುಗಳಲ್ಲಿ, ಇಂಟರ್ನೆಟ್ಟಿನಲ್ಲಿ, ರೇಡಿಯೋದಲ್ಲಿ ಹುಡುಕಿದರೆ ಸಿಗಬಹುದು. ಕೆಲವೊಂದು ನನಗೇ ಲೆಕ್ಕಕ್ಕೆ ಸಿಗವಲ್ಲದಾಗಿವೆ!  (ಈ non-filmy songs  ಹನ್ನೆರಡು ಸಾವಿರದ ವರೆಗೆ ಮುಟ್ಟ ಬಹುದು. ಅದೊಂದು ಗಿನ್ನಿಸ್ ದಾಖಲೆಯಾಗಬಹು ಎಂದು ಅವರ ಪತಿ ಪದ್ಮಪಾಣಿಯವರ ಅಭಿಪ್ರಾಯ). ನನಗೇನೆಂದರೆ ಈ ದೇವರ ನಾಮಗಳು, ಭಗವಂತನ ಮೇಲಿನ ಭಕ್ತಿಯ ಹಾಡುಗಳನ್ನು ಹಾಡಲು ಒದಗಿದ ಸೌಭಾಗ್ಯ ನನಗೆ ಅತ್ಯಂತ ಸಮಾಧಾನ ಮತ್ತು ಸಂತೋಷ ತಂದಿದೆ. ನಾನು ಕೊಂಕಣಿ, ಕೊಡವ, ದಕ್ಖನಿ ಭಾಷೆಗಳಲ್ಲಲ್ಲದೆ ಒಂದು ಸಾವಿರದಷ್ಟು ತುಳು ಹಾಡುಗಳನ್ನು ಹಾಡಿದ್ದೇನೆ. ಆದರೆ ಒಂದು ಮಾತು ಹೇಳುತ್ತೇನೆ. ಯಾವುದೇ ಹಾಡಾದರೂ ನನಗೆನಿಸಿದ ಮಟ್ಟಿಗೆ ಡೈರೆಕ್ಟರರನ್ನು ಶೇಕಡಾ 40 ರಷ್ಟು ಮಾತ್ರ ತೃಪ್ತಿ ಪಡಿಸಲು ಸಾಧ್ಯವಾಗುತ್ತದೆ. ಏಕೆಂದರೆ ಅವರ ಮನಸ್ಸಿನಲ್ಲಿದ್ದುದನ್ನು ತಿಳಿದುಕೊಳ್ಳುವದು ಹಾಡುವವರಿಗೆ ಕಷ್ಟ. ಒಮ್ಮೊಮ್ಮೆ ರೆಕಾರ್ಡಿಂಗ್ ದಿನ ಆರೋಗ್ಯ ಸರಿಯಿರಲಿಕ್ಕಿಲ್ಲ, ಅಥವಾ ಆ ದಿನ ಇನ್ನೇನೋ ಅಡಚಣೆಗಳು ಆಗಬಹುದು. ಚಿತ್ರ ರಿಲೀಸ್ ಆದಮೇಲೆ ನೋಡಿದಾಗ, ಅಯ್ಯೋ ಅಲ್ಲಿ ಇನ್ನೂ ಚೆನ್ನಾಗಿ ಹಾಡಬಹುದಿತ್ತೇನೋ ಎಂದೆನಿಸುವುದು.

                                                                                    (Video ↑)

ಶ್ರೀವತ್ಸ: ಅದು ನಿಮ್ಮ ಪರಿಪೂರ್ಣತಾನ್ವೇಷಕ ಗುಣ! ಇಷ್ಟೆಲ್ಲ ಭಾಷೆಗಳ ಉಚ್ಛಾರದಲ್ಲಿ ತೊಂದರೆಯಿರುವುದಿಲ್ಲವೆ?

ಛಾಯಾ: ಇಲ್ಲ. ಏನೇನೂ ಇಲ್ಲ. ಸಂಗೀತಗಾರರಿಗೆ ಸಾಮಾನ್ಯವಾಗಿ ಆ ತೊಂದರೆ ಇರುವದಿಲ್ಲ. ನಾನು ಮೊನ್ನೆ ನಿಮ್ಮ ಕಾರ್ಯಕ್ರಮದಲ್ಲಿ ”ಟೈಟಾನಿಕ್” ಚಿತ್ರದ ಇಂಗ್ಲಿಷ್ ಹಾಡು ಹಾಡಿದ ನೆನಪು ಆಯಿತಾ? ಹಾಗೆಯೇ.

ಶ್ರೀವತ್ಸ: ನೀವು ಕನ್ನಡ ಹಾಡುಗಳಲ್ಲಿ, ಅದರಲ್ಲೂ ಜಾನಪದ ಗೀತಗಳಲ್ಲಿ ತುಂಬುವ ಆ ಅನೂಹ್ಯ ಭಾವ, ಹಾಡುವಾಗಿನ ಆ ತನ್ಮಯತೆ – ಇದರ ಗುಟ್ಟೇನು?

ಛಾಯಾ: ಓಹೋ, ನಿಮಗೆ ಹಾಗೆ ಅನಿಸಿತಾ? ನೋಡಿ ನನಗೆ ಹಾಡುವದೆಂದರೆ ಒಂದು ತರಹದ ಮೆಡಿಟೇಶನ್ ಅನ್ನಬಹುದು. ನಾನು ಅದರಲ್ಲೇ ಪೂರ್ತಿಯಾಗಿ ಮುಳುಗಿ ಹೋಗಿರುತ್ತೇನೆ. ನನಗೆ ಹಾಡುವಾಗ ಬಹಳಷ್ಟು ಏಕಾಗ್ರತೆ ಬೇಕು. ಯಾರಾದರೂ ಕಾನ್ಸೆಂಟ್ರೇಶನ್ ಗೆ ಭಂಗ ಮಾಡಿದರೆ ಸರಿ ಹೋಗುವದಿಲ್ಲ. ಬೇರೆಯವರು ಹಾಡುವಾಗಲೂ ಅಷ್ಟೇ ಇಷ್ಟ. ಸರಿಯಾಗಿ ಕೂತು ಕೇಳಿ ಸಂತೋಷ ಪಡುವೆ. ನನಗೆ ಮ್ಯೂಸಿಕ್ಕೇ ಜೀವ, ಅದೇ, ಬದುಕು. ಸಣ್ಣವರು, ದೊಡ್ಡವರು, ಯಾರೇ ಚೆನ್ನಾಗಿ ಹಾಡಿದರೂ ಕೇಳಿ ಖುಶಿ ಪಡುವೆ.

ಶ್ರೀವತ್ಸ: ಈಗಿನ ಹೊಸ ಯುಗದ ಕನ್ನಡ ಚಿತ್ರಗಳ ಮ್ಯೂಸಿಕ್, (ಸಂಗೀತ ಅನ್ನಬಹುದೋ) ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅದಕ್ಕೆ ಭವಿಷ್ಯ ಇದೆಯೇ?

ಛಾಯಾ: ನನ್ನ ದೃಷ್ಟಿಯಲ್ಲಿ ಪರಿವರ್ತನೆಯೇ ಜಗದ ನಿಯಮ. ನಾವದನ್ನು ಒಪ್ಪಿಕೊಳ್ಳಲೇಬೇಕು. ಕಾಲ ಬದಲಾದಂತೆ ಶ್ರೋತೃಗಳ ರುಚಿ ಬದಲಾಗುತ್ತಿರುತ್ತದೆ. ಈಗಿನವರಿಗೆ ಅದೇ ಇಷ್ಟ. ಕೆಲವರು, ನಮ್ಮ ಹಿಂದಿನ ತಲೆಮಾರಿನವರು, ಹಳೆಯದೇ ಚಂದ ಎಂದು ಈಗಿನದನ್ನು ಟೀಕಿಸಬಹುದು. ಈಗಿನವರು, ಹಿಂದಿನದು ಅಯ್ಯೋ ಅದು ಎಷ್ಟು ಅಳುಬುರುಕು, ಅಂತ ಅನ್ನುತ್ತಾರೆ. ನನ್ನ ಮತ ಬೇರೆ. ಆದರೆ ಅಶ್ಲೀಲ ಶಬ್ದ, ಅರ್ಥ ಇದ್ದಂಥ ಹಾಡುಗಳನ್ನು ಹಾಡಲು ಮುಜುಗರ. ಆಗ ನಾನು ಒಲ್ಲೇ ಅನ್ನುತ್ತೇನೆ. ಅದಕ್ಕೆ ನನ್ನ ನಕಾರ.

ಶ್ರೀವತ್ಸ: ಅಂದರೆ ನೀವು ಮಡಿವಂತರಲ್ಲ, ಅಂದ ಹಾಗಾಯಿತು. ನಿಮ್ಮ ಪತಿ, ಮತ್ತು ಮಗಳು? ಅವರಿಗೂ ಸಂಗೀತದ ಸಂಪ್ರದಾಯವಿದೆಯೇ? ನಿಮ್ಮದು ಅತ್ಯಂತ ಅಪರೂಪದ ದಾಂಪತ್ಯ ಎಂದು ನಿಮ್ಮ ಹತ್ತಿರದವರಿಂದ ಕೇಳಿದ್ದೆ.

ಮಗಳು ಮೇಘಾಳ ಜೊತೆ ಅಪ್ಪ, ಅಮ್ಮ - ಲಕ್ಷ್ಮಿ ನಾಗರಾಜ್ ತೆಗೆದ ಚಿತ್ರ
ಮಗಳು ಮೇಘಾಳ ಜೊತೆ ಅಪ್ಪ, ಅಮ್ಮ – ಲಕ್ಷ್ಮಿ ನಾಗರಾಜ್ ತೆಗೆದ ಚಿತ್ರ

ಛಾಯಾ: ಅವಳು ಎಂ ಬಿ ಏ ಮಾಡಿ ಮನೆಯಿಂದಲೇ ಕೆಲಸ ಮಾಡುತ್ತಾಳೆ. ನನ್ನ ಮಗಳಿಗೆ ವೆಸ್ಟರ್ನ್ ಮ್ಯೂಸಿಕ್ ಇಷ್ಟ. ನನ್ನ ಅಭ್ಯಂತರವಿಲ್ಲ.

ಅವಳಿಗೆ ನನ್ನ ಜೋಡಿದಾರರಂತೆ ನನ್ನ ಮೇಲೆ ಬಹಳ ಅಕ್ಕರೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ನನ್ನ ಮದುವೆ ನಮ್ಮೊಬ್ಬ ಪರಸ್ಪರ ಪರಿಚಯದ ಮಿತ್ರರ ಮುಖಾಂತರ ಭೆಟ್ಟಿಯಾದ ಮೇಲೆ ಆದದ್ದು. ’ಪಾಣಿ’ಯವರು ಸಂಗೀತಗಾರರಲ್ಲವಾದರೂ ಆ ಲೋಕದಲ್ಲಿಯ ಮಣಗಟ್ಟಲೆ ವಿಷಯಗಳನ್ನು  ಅರಿತವರು. ಅವರು ಯಾವುದೇ ವಿಷಯ ತೆದುಕೊಂಡರೂ ಆಳವಾಗಿ ಅಭ್ಯಸಿಸುತ್ತಾರೆ. ಮದುವೆಯಾದಾಗಿನಿಂದ ನನ್ನನ್ನು ಅಡಿಗೆ ಮನೆಯ ಜವಾಬ್ದಾರಿಯಿಂದ ದೂರವಿಟ್ಟು ನನ್ನ ಸಂಗೀತಕ್ಕೆ, ನನ್ನ ಕರಿಯರ್ ಗೆ ಪ್ರೋತ್ಸಾಹ ಕೊಟ್ಟು ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ಮಗಳು ಮೇಘಾ ಸಹ ನನಗೆ ಯಾವಾಗಲೂ ಸಪೋರ್ಟ್ ಮಾಡುತ್ತಾಳೆ.

ಶ್ರೀವತ್ಸ: ನನಗಾಗಿ (ನಮಗಾಗಿ) ನಿಮ್ಮ ಸಮಯವನ್ನು ಮೀಸಲಿಟ್ಟು ನನ್ನ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದ ನಿಮಗೆ ಕನ್ನಡ ಬಳಗದ ಪರವಾಗಿ ನನ್ನ ಧನ್ಯವಾದಗಳು. ಅನಿವಾಸಿ ಬಳಗದಿಂದ ಪ್ರಕಟಿಸಿದ ಈ ಪುಸ್ತಕವನ್ನು (”ಅನಿವಾಸಿಗಳ ಅಂಗಳದಿಂದ”) ಈ ಭೇಟಿಯ ನೆನಪಿಗಾಗಿ ನಿಮಗೆ ಕೊಡುವೆ.

ಛಾಯಾ: ಧನ್ಯವಾದವೇಕೆ? ನನ್ನಲ್ಲಿ ಏನೋ ಕಲೆಯಿದೆಯೆಂದಲೇ ನನ್ನ ಹತ್ತಿರ ಬರುತ್ತೀರಿ. ರಸಿಕರೇ ನಮ್ಮ ಸಂಪತ್ತು ಅಲ್ಲವೆ?

ಶ್ರೀವತ್ಸ: ನಿಮ್ಮ ಯು ಕೆ ಪ್ರವಾಸದ ಹೈಲೈಟು?

ಛಾಯಾ ಮತ್ತು ಪದ್ಮಪಾಣಿ: ಯು ಕೆ ಕನ್ನಡಿಗರ ಕನ್ನಡತನ! ನಾವು ಕಂಡ ಭೇಟಿಯಾದ ಕನ್ನಡಿಗರೆಲ್ಲ ತೋರಿದ  ಆದರ, ಸೌಹಾರ್ದತೆ, ಪ್ರೀತಿ ನಮ್ಮ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ!

ಶ್ರೀವತ್ಸ: ಅದು ನಿಮ್ಮ ದೊಡ್ಡ ಗುಣ. ವಂದನೆಗಳು.

– ಶ್ರೀವತ್ಸ ದೇಸಾಯಿ

 

ದೀಪಾವಳಿ ಸಮಾರಂಭದ ಮರುದಿನ ಛಾಯಾ ಮತ್ತು ಪದ್ಮಪಾಣಿ ಜೋಡಿ ನೊಟಿಂಗ್ಹ್ಯಾಮ್ ನಲ್ಲಿ ಮತ್ತೊಂದು ಸಂಗೀತ ಸಂಜೆ ‘ಮೇಘ ಮಲ್ಹಾರ್’ ಕೊಟ್ಟು, ಹಿಂದಿ ಭಾಷೆಯ ಹಾಡುಗಳನ್ನು ಹಾಡಿದರು.fb_img_1479383122774

ದೀಪಾವಳಿ ಸಮಾರಂಭದ ಮರುದಿನ ಛಾಯಾ ಮತ್ತು ಪದ್ಮಪಾಣಿ ಜೋಡಿ ನೊಟಿಂಗ್ಹ್ಯಾಮ್ ನಲ್ಲಿ ಮತ್ತೊಂದು ಸಂಗೀತ ಸಂಜೆಯನ್ನು ಕೊಟ್ಟರು. ಸವಿತಾ ಸುರೇಶ ತೆಗೆದ ಚಿತ್ರ ಕಾರ್ಯಕ್ರಮ ಬಹಳಾ ಸುಮಧುರವಾಗಿತ್ತು ಎಂದರು ಕನ್ನಡ ಬಳಗ ಸದಸ್ಯರು. ಎರಡೂ ಚಿತ್ರಗಳನ್ನ ತೆಗೆದವರು ಸವಿತಾ ಸುರೇಶ

Chaya visit ನೆನಪುಗಳು

-ವಿಶ್ವನಾಥ್ ಮಂದಗೆರೆ

B.R. Chaya… It was serendipitous that last year I happened to meet this singer super star. In late 2015, at the time of my visit to Bengaluru, I attended a wedding. As it happens in India, I did not know the bride or the groom or their parents but happened to know the bride’s uncle! He was my medical college friend and I had not seen him for 30 odd years. I thought it would be an opportunity to see him. It was a wise decision indeed! I was star struck at this wedding seeing many artists from the musical world because the father of the bride happened to be none other than Puttur Narasimha Nayak, the famous singer. As I was savouring the Konkani spread at the buffet, my friend pointed to the petite young lady with long black hair: ‘Look that is BR Chaya’.

B.R. Chaya….the famous singer!!! What excited me was not just her fame but the opportunity this rendezvous had brought in. Chaya happened to be my school friend, one year senior, and we had lived in the same neighbourhood for all our childhood in Doorvani Nagar or ITI colony in Bangalore. I had not seen her after I had left school but knew she had become a famous singer star. We spoke for some time that afternoon and I explored the possibility of her coming for a KBUK function in future.

B.R. Chaya… as it happens in southern India, we get identified not just by our names but by our initials as well. Chaya, in our school days was a popular singer winning many prizes for the school. To my knowledge, she was less trained in classical music but had would excel in film and bhavageete. Chaya was also a daring figure- one of the few girls who could ride a scooter! It was a shock to all of us in school on hearing the death of her mother while she was in the 9th standard and close to the exams. I don’t know how she managed to take the exams and pass them.

She had another classmate, Susheela, well trained in classical music, who would fiercely compete with her for the top prize and win it. We had a great drawing master, an arts teacher in other words, Radha Krishna Sir, who nurtured the musical talents of these two girls. Susheela, apparently has become the music professor at Bengaluru University. Chaya, as we all know, went on to become an extremely popular singer singing different genres of music, in languages and in the process breaking many records. She is, I believe, on the way to set a new Guinness Book of Records shortly. In her short stay with us, we talked about our school days and she reminded me the song, ‘ತೊಂಡೆಕಾಯಿ, ಬೆಂಡೆಕಾಯಿ ತೋಟದಲ್ಲಿದೆ, ಉಂಡೆ ಉಂಡೆ ಬೆಲ್ಲ… That song had brought our school a shield in those days. I was thrilled to hear this whole song she sung on stage at the KBUK function.

Padmapani Jodidar, an undiscovered gem of comedy world… I did not know about Padmapani till I met him after landing in Manchester. He is well read, knowledgeable and very unassuming. He is sharp and witty and has the great quality of being able to laugh at himself. As he entered our house he said ‘ಓಹ್, ನನ್ನ ಫೋಟೋ ಹಾಕ್ ಬಿಟ್ಟಿದ್ದೀರಾ.’ Looking at our perplexed face he continued ‘ಇದು ವಜ್ರಪಾಣಿ, ಮತ್ತಿದು ಪದ್ಮಪಾಣಿ’, pointing to paintings from Ajanta caves we had hung in our lounge and then to himself.

thumbnail_chaya-and-padmapani-with-swarna-and-vishwanath
ಸ್ವರ್ಣ, ಛಾಯ, ಪದ್ಮಪಾಣಿ, ವಿಶ್ವನಾಥ್

He tells a joke just to the point where you will understand, the rest unsaid. One of the audiences asked him why he does not tell the full joke. His reply, ‘ನೀವೆಲ್ಲಾ ಬುದ್ಧಿವಂತರು. ಬರೀ ದಡ್ಡರಿಗೆ ಮಾತ್ರ ನಾನು ವಿವರಿಸೋದು’. His ‘kannadisation’ of certain items were so funny. He would say ‘ನಂಗೊಂದು ಶಂಖ ಮತ್ತು ಎರಡು ಹೋಳಿಗೆ ಕೊಟ್ಬಿಡಿ’, meaning a croissant and crêpes with milk for breakfast!

The evening before the Kannada Balaga event, we had invited a few Manchester friends to meet them. He entertained us for a full two hours regaling stories of how people came for what he considered his crap advice but that would still make other people rich and successful.

Chaya and Padmapani- what a loving and talented couple! The conversation between them almost sounds like a dialogue in a play with a wit and sharpness you see in Jeeves and Wooster episodes.  We were talking about someone who had got divorced but remarried. The conversation wents like this –

‘ಛಾಯ ಅವ್ರೆ’

‘ಏನ್ರೀ ಪಾಣಿ?’

‘ಹಾಗಾದ್ರೆ ನಂಗೂ ಚಾನ್ಸ್ ಇದೇ…’,

‘ಹೋಗಪ್ಪ, ನಿನ್ನ ಯಾರು ಕಟ್ಟಿ ಹಾಕಿರೋದು’!

– ವಿಶ್ವನಾಥ್ ಮಂದಗೆರೆ

ಶ್ರೀವತ್ಸ ದೇಸಾಯಿ ತೆಗೆದ ಚಿತ್ರ
ಶ್ರೀವತ್ಸ ದೇಸಾಯಿ ತೆಗೆದ ಚಿತ್ರ

ನಮ್ಮ ವಿದ್ಯಾ ಮಂದಿರ ಶಾಲೆಯ ಹಾಡು ಹುಡುಗಿ ಬಿ.ಆರ್.ಛಾಯ

-ವಿನತೆ ಶರ್ಮ

ಕನ್ನಡ ಬಳಗ ಯು.ಕೆ. ನಡೆಸಲಿದ್ದ ‘ದೀಪಾವಳಿ ೨೦೧೬’ ಕಾರ್ಯಕ್ರಮದಲ್ಲಿ ಬಿ.ಆರ್. ಛಾಯ ಮತ್ತು ಅವರ ಪತಿ ಪದ್ಮಪಾಣಿ ಭಾಗವಹಿಸಲಿದ್ದಾರೆ ಎಂದು ಕೇಳಿದಾಗ ಮನಸ್ಸಿಗೆ ಡಬಲ್ ಖುಷಿ. ಒಂದು, ಛಾಯಾರವರ ಗಾನ, ಪದ್ಮಪಾಣಿಯವರ ಮಾತು, ಹಾಸ್ಯ ಕನ್ನಡ ಬಳಗಕ್ಕೆ ಸಿಕ್ಕತ್ತೆ; ಇನ್ನೊಂದು, ‘ನಮ್ಮ ಛಾಯ’ ಬರುತ್ತಿದ್ದಾರೆ ಎನ್ನುವುದು. ‘ನಮ್ಮ ಛಾಯ’  ಅಂದ್ರೆ ಏನು, ಏನ್ಕತೆ ಅಂತ ಸ್ವಲ್ಪ ಇಲ್ಲಿ ಹೇಳೇ ಹೇಳ್ಬೇಕು. ಯಾಕಂದ್ರೆ ಅವ್ರು ನಮ್ಮ “ಹಾಡು ಹುಡುಗಿ” ಆಲ್ವಾ!

ನಾನು ಬೆಳೆದಿದ್ದು ದೂರವಾಣಿ ನಗರದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನ (ಐ ಟಿ ಐ) ಕ್ವಾರ್ಟರ್ಸ್ ನಲ್ಲಿ; ಓದಿದ್ದು ಅಲ್ಲೇ ಐ ಟಿ ಐ ವಿದ್ಯಾ ಮಂದಿರ ಶಾಲೆಯಲ್ಲಿ. ನನ್ನ ತಾಯಿ ಎಲ್. ಪದ್ಮಾವತಮ್ಮ (ಎಲ್.ಪಿ. ಟೀಚರ್) ಅದೇ ಶಾಲೆಯಲ್ಲಿ ಟೀಚರ್ ಆಗಿದ್ದರು.

ನಾವು ವಾಸವಾಗಿದ್ದ ಐ ಟಿ ಐ ಕ್ವಾರ್ಟರ್ಸ್ ನ ಈಸ್ಟ್ ೫ನೇ ಬೀದಿಯ ಮುಂದಿನ ಬೀದಿಯಲ್ಲಿ ಛಾಯಾರ ಕುಟುಂಬ ವಾಸವಾಗಿತ್ತು! ಅವರ ಮನೆಯಲ್ಲಿ ಸಾಕಿದ್ದ ಹಸುವಿನ ಹಾಲನ್ನು ನಾವು ಕೊಳ್ಳುತ್ತಿದ್ದೆವು. ಹಾಲು ತರಲು ಬೆಳಗ್ಗೆ ಚಿಕ್ಕ ಹುಡುಗಿ ನಾನು ನಿದ್ದೆ ಕಣ್ಣಿನಲ್ಲಿ ಅವರ ಮನೆಗೆ ಹೋಗುತ್ತಿದ್ದೆ. ಆಗಾಗಲೇ ತಂಬೂರಿ ಹಿಡಿದುಕೊಂಡು ಕೂತು ಸಂಗೀತಾಭ್ಯಾಸ ಮಾಡುತ್ತಿದ್ದ ದೊಡ್ಡ ಹುಡುಗಿ ಛಾಯಾರನ್ನು ನೋಡುತ್ತಾ ಶಬ್ದ ಮಾಡದೆ ನಿಂತು ಬಿಡುತ್ತಿದ್ದೆ. ಒಮ್ಮೊಮ್ಮೆ ಅವರು ಕೂಗು ಹಾಕುತ್ತಿದ್ದರು “ಎಲ್.ಪಿ ಟೀಚರ್ ಮಗಳು ಹಾಲ್ಗೋಸ್ಕರ ಕಾಯ್ತಾ ಇದ್ದಾಳೆ…”. “ಅಯ್ಯೋ ಪರವಾಗಿಲ್ಲ ಕಾಯ್ತೀನಿ” ಅಂತ ನಾನಂದರೂ ಯಾರಾದರೂ ಬಂದು ಹಾಲಿನ ಪಾತ್ರೆ ತುಂಬಿಸಿ ಕಳಿಸೇಬಿಡುತ್ತಿದ್ದರು. “ಯಾಕೇ ಲೇಟಾಯ್ತು, ಛಾಯಾ ಸಂಗೀತ ಕೇಳ್ತಾ ನಿಂತ್ ಬಿಟ್ಯಾ” ಅಂತ ಅಕ್ಕಂದಿರು ಗುರಾಯಿಸುತ್ತಿದ್ದರು. ದೊಡ್ಡಕ್ಕ, ಚಿಕ್ಕಕ್ಕನ ನಡುವಿನ ಕ್ಲಾಸ್ನಲ್ಲಿ  ಛಾಯ ಓದುತ್ತಿದ್ದದ್ದು. ನಮ್ಮಮ್ಮ ಅವರಿಗೆ ಹಿಂದಿ ಕ್ಲಾಸ್ ತೊಗೊಳ್ತಿದ್ದರಂತೆ. ಛಾಯಾನ ಅಮ್ಮ ತೀರಿಕೊಂಡಾಗ ನಮ್ಮಮ್ಮ, ನಮ್ಮ ಟೀಚರ್ ಗಳೆಲ್ಲಾ ತುಂಬಾ ಬೇಜಾರು ಮಾಡಿಕೊಂಡಿದ್ದರು.

ಆ ವರ್ಷಗಳಲ್ಲಿ ವಿದ್ಯಾ ಮಂದಿರ ಸ್ಕೂಲಿನ ಹೆಮ್ಮೆಯ “ಹಾಡು ಹುಡುಗಿ”ಯರು ಛಾಯ ಮತ್ತು ಸುಶೀಲ. ಟೀಚರ್ಸ್ ಎಲ್ಲರೂ ಇವರಿಬ್ಬರನ್ನ ತುಂಬಾ ಪ್ರೋತ್ಸಾಹ ಕೊಟ್ಟು ಬೆಳೆಸುತ್ತಿದ್ದರು. ಎಲ್ಲಿ ಹೋದರೂ ಈ ಇಬ್ಬರಿಗೆ ಮೆಡೆಲ್ ಕಟ್ಟಿಟ್ಟದ್ದು ಎಂದು ಅಮ್ಮ ಹೇಳುತ್ತಿದ್ದರು.ಆಗಾಗ ಬಹುಮಾನಗಳು, ಮೆಡೆಲ್ಗಳ ಜೊತೆ ಈ ಇಬ್ಬರನ್ನ ಕೂಡಿಸಿ ಫೋಟೋ ತೆಗೆಸುತ್ತಿದ್ದರು.

11856393_996283287094943_4540644356279741005_o
ಫೇಸ್ ಬುಕ್ ಚಿತ್ರ

ಛಾಯ ಶಾಲಾ ಓದು ಮುಗಿಸಿ, ಐ ಟಿ ಐ ಕ್ವಾರ್ಟರ್ಸ್ ಬಿಟ್ಟು ಹೋದ ನಂತರ ಕೂಡ ನಮ್ಮ ಶಾಲೆಯ ಜೊತೆಗಿನ ನಂಟನ್ನು ಬಿಡಲಿಲ್ಲ. ಆಗಾಗ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಹಾಡುತ್ತಿದ್ದರು. ನಾನು SSLC ಮುಗಿಸಿದ ವರ್ಷ, ಅಂಥಾ ಒಂದು ಶಾಲಾ ಸಮಾರಂಭಕ್ಕೆ ಬಂದು “ಜೋಗದ ಸಿರಿ ಬೆಳಕಿನಲ್ಲಿ…” ಹಾಡಿದ್ದರು. ಮುಂದೆ ಅವರ ಪ್ರಸಿದ್ಧ “ಹಿಂದುಸ್ಥಾನವು ಎಂದೂ ಮರೆಯದ…” ಹಾಡನ್ನು ಕೂಡ ಶಾಲೆಯಲ್ಲಿ ಹಾಡಿದ್ದರು. ವಿಜಯ ಭಾಸ್ಕರ್ ಮತ್ತು ಇಳಯ ರಾಜ ಅವರನ್ನು ಪ್ರೋತ್ಸಾಹಿಸಿ ಚಲನಚಿತ್ರ ರಂಗಕ್ಕೆ ತಂದದ್ದು, ಅವರಿಗೆ ಮದುವೆಯಾದದ್ದು ಎಲ್ಲಾ ನ್ಯೂಸ್ ನಮಗೆ ನಮ್ಮ ವಿದ್ಯಾ ಮಂದಿರದ ಟೀಚರ್ಸ್ ಬಳಗದಿಂದ ತಿಳಿಯುತ್ತಿತ್ತು. ನಮ್ಮ ಶಾಲೆಯ ನನ್ನ ಕೆಲ ಗೆಳತಿಯರು ಅವರೊಂದಿಗೆ ಸ್ನೇಹವನ್ನು ಮುಂದುವರೆಸಿದ್ದರು.

ಅವರ ಮೆಡೆಲ್ ಗಳ ಜೊತೆಗಿನ  ಒಂದು ಫೋಟೋವನ್ನ (ನಮ್ಮ ಶಾಲೆಯಲ್ಲಿ ತೆಗೆದಿದ್ದು) ನಾನು ನನ್ನ ಫೇಸ್ ಬುಕ್ನಲ್ಲಿ ಹೋದ ವರ್ಷ ನೋಡಿದೆ. ಕೂಡಲೇ ನಾನೂ ಅವರ ಫೇಸ್ ಬುಕ್ ಫ್ರೆಂಡ್ ಆದೆ. ಆಗಾಗ ಪದ್ಮಪಾಣಿಯವರ ಪೋಸ್ಟ್ ಗಳನ್ನ ಓದುತ್ತಾ ಅವರ ಹಾಸ್ಯ ಪ್ರಜ್ಞೆ, ಓದಿನ ವಿಸ್ತಾರ, ಅವರ ಸಾಹಿತ್ಯ ಪ್ರೇಮ, ನಾನಾ ವಿಷಯಗಳ ಬಗ್ಗೆ ಇರುವ ಅವರ ಆಳ ಜ್ಞಾನ, ಕಾಮನ್ ಸೆನ್ಸ್ – ಇದೆಲ್ಲದರ ಪರಿಚಯ ಕೂಡ ಸ್ವಲ್ಪ ಆಯ್ತು. ಹೆಂಡತಿ-ಗಂಡ ಇಬ್ಬರ ಪೋಸ್ಟ್ ಗಳಿಗೂ ಲೈಕ್ ಒತ್ತುತ್ತಾ ಹೋದೆ! ಪಾಣಿಯವರನ್ನ ಇದೇ ತಿಂಗಳು ೫ರಂದು ನೋಡಿ ಮಾತನಾಡಿಸಿ, ಇಬ್ಬರ ಜೊತೆಯಲ್ಲೂ ಸ್ವಲ್ಪ ಸಮಯ ಕಳೆಯುವ ಅವಕಾಶ ಸಿಕ್ಕೇ ಬಿಟ್ಟಿತು. ಒಂದು ಸಂದರ್ಭದಲ್ಲಿ ಹಿಂದೆ ನಾನಿದ್ದ ಆಸ್ಟ್ರೇಲಿಯಾ ದೇಶ, ಅದನ್ನು ಆಕ್ರಮಿಸಿಕೊಂಡ ಬ್ರಿಟಿಷರು, colonisation – ಈ ಮಾತು ಬಂತು. ತಕ್ಷಣ ಪಕ್ಕಕ್ಕೆ ತಿರುಗಿ ಛಾಯ ಕೇಳಿದರು “ಅದ್ ಹೇಗೆ ಎಲ್ಲಾ ಕಡೆ ಅವ್ರೆ ರಾಜರಾಗಿಬಿಟ್ಟರು, ಪಾಣಿ?” ‘ಜೋಡಿ’ ದಾರರ ಉತ್ತರ ಮತ್ತು Postcolonialism ಬಗ್ಗೆ ಅವರ ವಿಶ್ಲೇಷಣೆ ಎರಡಕ್ಕೂ ನಾನು ಮೂಗಿನ ಮೇಲೆ ಬೆರಳಿಟ್ಟುಕೊಂಡೆ. ಮತ್ತೊಂದು ಸಂದರ್ಭದಲ್ಲಿ ಹಿಮಾಲಯ ಪರ್ವತಗಳಲ್ಲಿ ಆಗುವ ನೆಲ ಜಾರು (land slide) ವಿಷಯ ಬಂತು. ಛಾಯ ಕೇಳಿದರು, “ಅದ್ ಹೇಗೆ ಆಗತ್ತೆ, ಸ್ವಲ್ಪ ಹೇಳಪ್ಪಾ”; ಮತ್ತೆ ಅವರ ‘ಜೋಡಿ’ಯಿಂದ ಬಂತು ಸಮರ್ಪಕ ಉತ್ತರ! ನಾವೆಲ್ಲಾ ತಲೆತೂಗಿದೆವು.

ದೀಪಾವಳಿ ಸಮಾರಂಭ ಮುಗಿದು, ೬ರಂದು ನಾನು ಫೇಸ್ ಬುಕ್ ನಲ್ಲಿ ನಾನು, ಛಾಯ ಜೊತೆ ಇದ್ದ ಒಂದು ಫೋಟೋವನ್ನ ಹಾಕಿದೆ, ಎಷ್ಟೊಂದು ಲೈಕ್ ಗಳು!! ನಮ್ಮ ಶಾಲೆಯ ಗೆಳೆಯರ ಬಳಗ ಕಮೆಂಟ್ ಗಳನ್ನ ಕಳಿಸಿದ್ದೂ ಕಳಿಸಿದ್ದೇ! ಅದಕ್ಕೂ ಮಿಗಿಲಾಗಿ, ಉಳಿದಿರುವ ನಮ್ಮ ಕೆಲವೇ ಕೆಲವು ಟೀಚರ್ ಗಳ ಪೈಕಿ ಒಬ್ಬರಾದ ಶರ್ಲಿ ಟೀಚರ್ ಆ ಫೋಟೋವನ್ನ ನೋಡಿ “God bless you both, I am very proud of you two,” ಎಂದು ಆಶೀರ್ವಾದ ಕಳಿಸಿದರು!

  • ವಿನತೆ ಶರ್ಮ

 

ನನ್ನೂರು ಬೆಂಗಳೂರು – ಅನ್ನಪೂರ್ಣಾ ಆನಂದ್

ನನ್ನ ಜೀವನದ ಸುಮಾರು 28 ವಸಂತಗಳನ್ನು ಕಳೆದಿರುವ ಈ ಊರು, ನಿಸ್ಸಂದೇಹವಾಗಿ ನನ್ನೂರೆಂದು ಹೇಳಬಹುದು. ಬೇಸಿಗೆ ರಜೆಯಲ್ಲಿ ಒಮ್ಮೊಮ್ಮೆ ಮೈಸೂರಿಗೆ ಹೋಗಿದ್ದನ್ನು ಬಿಟ್ಟರೆ, ಬೆಂಗಳೂರಿಂದ ಒಂದು ಹೆಜ್ಜೆ ಆ ಕಡೆ ಈ ಕಡೆ ಇಡದೆ ಬೆಳೆದವಳು ನಾನು. ಓದು ಮುಗಿಯುವವರೆಗೂ ಮಲ್ಲೇಶ್ವರ, ಮಜೆಸ್ಟಿಕ್, ಎಮ್.ಜಿ.ರೋಡ್ ಮತ್ತು ಕಮೆರ್ಶಿಯಲ್ ಸ್ಟ್ರೀಟ್ ನನ್ನ ಪ್ರಪಂಚವಾಗಿತ್ತು. ಮದುವೆಯಾದ ನಂತರವೇ ನನಗೆ ದಕ್ಷಿಣ ಬೆಂಗಳೂರಿನ ಪರಿಚಯವಾಗಿದ್ದು! ಈಗಲೂ ಬೆಂಗಳೂರು ಅಂದ ತಕ್ಷಣ ಕಣ್ಮುಂದೆ ಬರುವುದು ನಾನು ಬೆಳೆದ ಮಲ್ಲೇಶ್ವರದ 2ನೇ ಅಡ್ಡರಸ್ತೆ, ಗುಲ್ ಮೊಹರ್ ಮರಗಳಿಂದ ತುಂಬಿದ್ದ ಸಂಪಿಗೆ ಮತ್ತು ಮಾರ್ಗೊಸ ರಸ್ತೆಗಳು. (ಈಗ ಬೆಂಗಳೂರಿನಲ್ಲಿ ಗುಲ್ ಮೊಹರ್ ಕಾಣೋದೇ ಕಡಿಮೆ!)

cc-Wiki
ಸ್ಯಾಂಕಿ ಟ್ಯಾಂಕು

ಮಲ್ಲೇಶ್ವರ – ಸಂಪಿಗೆ ರೋಡಿನ ಇಕ್ಕೆಲಗಳಲ್ಲೂ, ಲಿಂಕ್ ರೋಡಿಂದ ಮಾರ್ಗೋಸಾ ರೋಡಿನವರೆಗೂ, ೧ನೇ ಅಡ್ಡರಸ್ತೆಯಿಂದ ೧೮ನೇ ಅಡ್ಡರಸ್ತೆಯವರೆಗೆ ಬೆಳೆದ ಒಂದು ಬಡಾವಣೆ. ವಿಶಾಲ ಮನೆಗಳಿದ್ದ ಈ ಬಡಾವಣೆ ಒಂದು ರೀತಿಯಲ್ಲಿ self-contained ಆಗಿತ್ತು. ೮ನೇ ಮತ್ತು ೧೫ನೆ ಅಡ್ಡರಸ್ತೆಯಲ್ಲಿದ್ದ ತರಕಾರಿ ಮಾರ್ಕೆಟ್ಗಳು, ಗಣಪತಿ, ಕನ್ಯಕಾಪರಮೇಶ್ವರಿ, ಕೃಷ್ಣ ಮತ್ತು ಕಾಡುಮಲ್ಲೇಶ್ವರ ದೇವಾಲಯಗಳು, ರಾಮಮಂದಿರದಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳು, ಉಪನ್ಯಾಸಗಳು, gymkhana (ಪ್ರಕಾಶ್ ಪಡುಕೋಣೆ ಇಲ್ಲಿ ಬ್ಯಾಡ್ಮಿಂಟನ್ ಆಡಲು ಬರುತ್ತಿದ್ದರು), ಸಂಪಿಗೆ, ಸವಿತಾ, ಗೀತಾಂಜಲಿ ಸಿನಿಮಾ ಮಂದಿರಗಳು, ಹಲವಾರು ಮದುವೆ ಮಂಟಪಗಳು, ಉತ್ತಮ ಶಾಲಾ ಕಾಲೇಜುಗಳು, IISc ಯಂಥಾ ಪ್ರತಿಷ್ಟಿತ ಸಂಸ್ಥೆ , NKB , CTR , ಜನತಾ ಹೋಟೆಲ್ ಗಳು, ಆಸ್ಪತ್ರೆಗಳು, ಪಾರ್ಕುಗಳು, Sankey ಟ್ಯಾಂಕ್ ನ ಪ್ರಶಾಂತ ಕೆರೆ… ಇಲ್ಲಿದ್ದವರು ಬೆಂಗಳೂರಿನ  ಬೇರೆ ಕಡೆಗಳಿಗೆ ಏನಕ್ಕೂ ಹೋಗೋ ಪ್ರಮೇಯವೇ ಇರಲಿಲ್ಲ!  ಹಬ್ಬ ಹರಿದಿನಗಳಲ್ಲಂತೂ ಇಲ್ಲಿಯ ಸಂಭ್ರಮ ನೂರ್ಮಡಿಸುತ್ತಿತ್ತು. ೧ನೇ ಅಡ್ಡರಸ್ತೆಯಿಂದ ೧೮ನೇ ಅಡ್ಡರಸ್ತೆಯವರೆಗೆ ಒಂದು ಸಾರಿ ನಡೆದು ಹೋದರೆ ಸಾಕು, ಮಲ್ಲೇಶ್ವರದ ಆ ವೈವಿಧ್ಯಮಯ ಬೆಡಗಿನ ಅನುಭವವಾಗಲು! ಮಲ್ಲೇಶ್ವರ ಈಗ ಬಹಳ ಬದಲಾಯಿಸಿದೆ ಆದರೂ ಅದರ ವೈವಿಧ್ಯತೆಯನ್ನ ಉಳಿಸಿಕೊಂಡಿದೆ. ಈಗಲೂ ಮಲ್ಲೇಶ್ವರ ಅಂದರೆ ಸಾಕು ನನ್ನ ಎದೆ ಹಕ್ಕಿಯಂತೆ ಹಾರಿ ಒಂದು ಸುತ್ತುಹೊಡೆದು ಬರತ್ತೆ.

ಬಾಲ್ಯದಲ್ಲಿ ಕಬ್ಬನ್ ಪಾರ್ಕಿಗೆ ಬಹಳ ಹೋಗುತ್ತಿದ್ದೆವು (ನಾನು, ನನ್ನ ತಮ್ಮ ಮತ್ತು ತಂಗಿ).. ಪುಟಾಣಿ ರೈಲ್ ನಲ್ಲಿ ಒಂದು ಸುತ್ತು ಹಾಕಿ,

cc-Wiki
ಕಬ್ಬನ್ ಪಾರ್ಕ್

ಕಾಟನ್ ಕ್ಯಾಂಡಿ ತಿಂದು ಕೈಬಾಯ್ ಅಂಟು ಮಾಡಿಕೊಂಡು, ಐಸ್ ಕ್ಯಾಂಡಿ ಚೀಪುತ್ತಾ, ವಿಧಾನಸೌಧದ ಬೆಳಕಿನ ಬೆಡಗಿಗೆ ಮಾರುಹೋಗುತ್ತಾ ಆಟೋ ಹತ್ತಿ ಮನೆ ಸೇರುತ್ತಿದ್ದೆವು. ಬಾಲಭವನದಲ್ಲಿ ನನ್ನ ನೃತ್ಯಶಾಲೆಯಿಂದ ಪ್ರದರ್ಶಿಸಿದ ‘ತಿರುಕನ ಕನಸು’ ‘ಕರಿಭಂಟನ ಕಾಳಗ’ ‘ಲವ ಕುಶ’ ಇನ್ನೂ ಜ್ನಾಪಕದಲ್ಲಿದೆ.

ಲಾಲ್ ಬಾಗ್ ನಮ್ಮ ಇನ್ನೊಂದು ನೆಚ್ಚಿನ ತಾಣ! ಪ್ರತಿವರುಷ ಹೂವಿನ ಪ್ರದರ್ಶನಕ್ಕೆ ತಪ್ಪದೆ ಹೋಗುತ್ತಿದ್ದೆವು. ಬಣ್ಣ ಬಣ್ಣ ದ ಗುಲಾಬಿ, ಡೇರ, ಕ್ಯಾನ, ಚೆಂಡುಹೂವು ಹೀಗೆ ಮುಂತಾದ ಹೂವುಗಳ ವಿನ್ಯಾಸದೊಂದಿಗೆ ಭೂತಾಕಾರದ ಕ್ಯಾಕ್ಟಸ್ ಗಿಡಗಳು ಮನ ಸೆಳೆಯುತ್ತಿದ್ದವು. ಜೊತೆಗೆ

cc-Wiki
ಲಾಲ್ ಬಾಗ್

ವಿವಿಧ ತರಕಾರಿ ಗಿಡಗಳು, ತರಹಾವರಿಯ ವಿನ್ಯಾಸಗಳು ವಿಸ್ಮಯಗೊಳಿಸುತ್ತಿದ್ದವು! ಇದರೂಂದಿಗೆ ಅಲ್ಲಿದ್ದ ಜಿಂಕೆ ಹಿಂಡಿಗೆ ಕಡ್ಲೇಕಾಯಿ ತಿನ್ನಿಸುವ ಸಂಭ್ರಮಬೇರೆ! ನನ್ನ ತಾಯಿ ಚಿಕ್ಕವರಿದ್ದಾಗ ಹುಲಿ ಸಿಂಹ ಕೂಡ ಇತ್ತಂತೆ! ನಮ್ಮ ಕಾಲಕ್ಕೆ ಬರೀ ಜಿಂಕೆ ಗಿಣಿಗಳಿದ್ದವು, ಈಗ ಅದೂ ಇಲ್ಲ !

ಕ್ರಿಸ್ ಮಸ್ ಸಮಯದಲ್ಲಿ ನೀಲಗಿರೀಸ್ ಬೇಕರಿಯವರು ನಡೆಸುತ್ತಿದ್ದ ಕೇಕ್ ಶೋ ನಮ್ಮಗೆಲ್ಲಾ ಅಚ್ಚುಮೆಚ್ಚು! ಮೈಸೂರು ಅರಮನೆ, ವಿಧಾನಸೌಧ ಮತ್ತಿತರ ವಿನ್ಯಾಸಗಳನ್ನ ಕೇಕ್ ನಲ್ಲಿ ಬಹಳ ನಾಜೂಕಾಗಿ ಮಾಡುತ್ತಿದ್ದರು. ಪ್ರದರ್ಶನ ನೋಡಿದಮೇಲೆ ಸಿಗುವ ಕೇಕ್ ಮೇಲೆ ನಮ್ಮ ಆಸಕ್ತಿ ಜಾಸ್ತಿ ಅಂತ ಬೇರೆಯಾಗಿ ಹೇಳೋ ಅವಶ್ಯಕತೆ ಇಲ್ಲ.

ಬಾಲ್ಯದ ನಮ್ಮ ಮತ್ತೊಂದು ಆಕರ್ಷಣೆ “ಸರ್ಕಸ್”! animal rights, animal cruelty ಎಲ್ಲ ಗೊತ್ತಾಗದ ಆ ಮುಗ್ಧ ವಯಸ್ಸಿನಲ್ಲಿ ಆನೆ ಚೆಂಡು ಒದೆಯುವುದು, ಸಿಂಹ ಚಂಗನೆಗರಿ ಸ್ಟೂಲ್ ಮೇಲೆ ನಿಲ್ಲುವುದು, ನೀರಾನೆ ಪೌಂಡ್ಗಟ್ಟಲೆ ಬ್ರೆಡ್ ತಿನ್ನೋದನ್ನ ಬಿಟ್ಟ ಬಾಯಿ ಬಿಟ್ಟ ಕಣ್ಣಿನಿಂದ ನೋಡುತಿದ್ದೆವು. ದುರಾದೃಷ್ಟವಶಾತ್ ಒಮ್ಮೆ ಬೆಂಕಿಯ ಅನಾಹುತವಾದಮೇಲೆ ಮತ್ತೆ ಸರ್ಕಸ್ ಬೆಂಗಳೂರಿಗೆ ಬರಲೇಯಿಲ್ಲ!

ಹರೆಯದ ದಿನಗಳಲ್ಲಿ ಬೆಂಗಳೂರು ನನಗೆ ಮತ್ತೊಂದು ಬಾಗಿಲು ತೆಗೆಯಿತು. ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಅವಕಾಶ. ಪ್ರತಿ ವರ್ಷ ರಾಮನವಮಿ ಪ್ರಯುಕ್ತ, ಶೇಷಾದ್ರಿಪುರಂ ಸ್ಕೂಲ್ ನಲ್ಲಿ ಹತ್ತು ದಿನ ಸಂಗೀತ ಕಚೇರಿ ನಡೆಯುತ್ತಿತ್ತು. ತಪ್ಪದೆ ನಾನು ಹೋಗುತ್ತಿದ್ದೆ. ಪಟ್ಟಮ್ಮಾಳ್, ಎಮ್.ಎಲ್.ವಿ, ಬಾಲಮುರಳಿ, ಯೇಸುದಾಸ್, ಕುನ್ನಕ್ಕುಡಿ, ಲಾಲ್ಗುಡಿ, ಚಿಟ್ಟಿಬಾಬು ಹೀಗೆ ಹಲವು ಹತ್ತಾರು ಘಟಾನುಘಟಿ ಸಂಗೀತಗಾರರ ಕಚೇರಿಗಳನ್ನ ನಿರಾಯಾಸವಾಗಿ ಕೇಳುವ ಅವಕಾಶ! ಮನೆಗೆ ಬರುತ್ತಿದ್ದ ಸುಧಾ/ಪ್ರಜಾಮತ ನನ್ನ ಸಾಹಿತ್ಯದ ಒಲವಿಗೆ ಕಾರಣವಾಯಿತು. ಮನೆಯ ಹತ್ತಿರದಲ್ಲೇ ಇದ್ದ Shankar’s ವಾಚನಾಲಯ ಈ ಒಲವನ್ನು ಹೆಮ್ಮರವಾಗಿ ಬೆಳೆಸಿತು. ಕಾಲೇಜ್ ಗೆ ಬಂದಮೇಲಂತೂ, ನಾನು ನನ್ನ ಗೆಳತಿ ರೇಖಾ ಅಲ್ಲಿದ್ದ ಮುಕ್ಕಾಲು ಭಾಗ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನ ಓದಿ ಮುಗಿಸಿದ್ದೆವು!. ಪ್ರತಿದಿನ ಸಾಯಂಕಾಲ 8th ಕ್ರಾಸ್ ವರೆಗೂ ಹರಟೆ ಹೊಡೆದುಕೊಂಡು ಹೋಗಿ ವಾಪಸ್ ಬರ್ತಿದ್ವಿ. “ದೇವರ ಮೇಲೆ ಹೂ ತಪ್ಪಿದರೂ ನೀವಿಬ್ಬರು 8th ಕ್ರಾಸ್ ಗೆ ಹೋಗೋದು ತಪ್ಪಲ್ಲ!” ಅಂತ ನಮ್ಮ ಮನೆಗಳಲ್ಲಿ ತಮಾಷೆ ಮಾಡ್ತಿದ್ದರು.  ದಾರಿಯಲ್ಲಿ ಕಾಲಕಾಲಕ್ಕೆ ಸಿಗುವ ಸೀಬೇಕಾಯಿ, ಹಲಸಿನ ಹಣ್ಣು, ಮಾವಿನಕಾಯಿ, ನಲ್ಲಿಕಾಯಿ, ನೇರಳೆ ನಮ್ಮ ಹೊಟ್ಟೆಸೇರುತ್ತಿತ್ತು.  ಹೀಗೆ ಹೋದಾಗ ಮನೆಗೆ ತರಕಾರಿ ಮತ್ತು ಬೇರೆ ಪದಾರ್ಥಗಳನ್ನು ತರುವ, ಲೈಬ್ರರಿಯಲ್ಲಿ ಪುಸ್ತಕ ಬದಲಾಯಿಸುವ ಕೆಲಸಗಳನ್ನೂ ಪೂರೈಸುತ್ತಿದ್ದೆವು. Exams ಇದ್ದರಂತೂ ಗಣಪತಿಗೆ pressure ಹಾಕಿ ಬರೋದಂತೂ ಗ್ಯಾರಂಟಿ.

ಸಿನಿಮಾ ಮಂದಿರಗಳ ಮಧ್ಯದಲ್ಲಿದ್ದ ನಾವು ಬಹಳಷ್ಟು ಕನ್ನಡ ಸಿನಿಮಾ ನೋಡಿದೀವಿ. “ಅಣ್ಣಾವ್ರ” ಸಿನಿಮಾ ಅಂತೂ ಖಂಡಿತ ತಪ್ಪಿಸುತ್ತಿರಲಿಲ್ಲ.. ವಿಷ್ಣುವರ್ಧನ, ಅನಂತ್ ನಾಗ್, ಶಂಕರ್ ನಾಗರಿಗೂ ಮೋಸ ಮಾಡ್ತಿರಲಿಲ್ಲ. ಬೆಂಗಳೂರಿಗೆ ಟಿ.ವಿ. ಬಂದು, ಹಿಂದಿಯ ಪ್ರಭಾವ ಬೀರಿದಮೇಲೆ, ಹಿಂದಿ ಸಿನಿಮಾಗಳು ನಮ್ಮ ಲಿಸ್ಟ್ ಗೆ ಸೇರಿದವು!

“woody’s” ಬೆಂಗಳೂರಿನ ಮೊಟ್ಟಮೊದಲ fastfood joint. American chopsey ಮೊಟ್ಟಮೊದಲ ದಿನ ತಿಂದಾಗ ಚಂದ್ರನನ್ನು ಮುಟ್ಟಿದ ಖುಷಿ! Chinese ಗೆ Rice Bowl, Ice Cream ಗೆ Lake View, rasmalai ಗೆ Anand sweets, Cake ಗೆ Sweet Chariot … ಬೆಂಗಳೂರಿನ eating joints ಮೇಲೇ, ಒಂದು ಲೇಖನ ಬರೀಬೇಕಾಗತ್ತೆ!   

ಮದುವೆಯ ನಂತರವೇ ನನಗೆ  ಗಿರಿನಗರ, ಗಾಂಧಿಬಜಾರ್, ಜಯನಗರದ ಪರಿಚಯವಾಗಿದ್ದು. ನವೆಂಬರ್, ಡಿಸೆಂಬರಿನ ಚುಮು ಚುಮು ಚಳಿಯಲ್ಲಿ ನಡೆಯುವ ಕಡ್ಲೆಕಾಯಿ ಪರಿಷೆ ಬಲ್ಲು ಚೆನ್ನ. ಹೊಸದಾಗಿ ಬೆಳೆದ ಕಡ್ಲೇಕಾಯಿ ಗುಡ್ಡೆಗಳು ಬುಲ್ ಟೆಂಪಲ್ ರೋಡಿನ ಇಕ್ಕೆಲದಲ್ಲಿ ರಾಶಿ ರಾಶಿ! ಬೆಂಡು, ಬತ್ತಾಸು, ಬಳೆ ಟೇಪು ಜಾತ್ರೆಯ ಒಂದು ವಾತಾವರಣವನ್ನ ಸೃಷ್ಟಿಸುತ್ತದೆ! ಬೆಂಗಳೂರು ಮಹಾನಗರದಲ್ಲಿ ಬೆಳೆದ ನನಗೆ ಇದೊಂದು ಮರೆಯಲಾಗದ ಅನುಭವ

ರಾಮಕೃಷ್ಣ ಆಶ್ರಮ ನನ್ನ ಮತ್ತೊಂದು ಫೇವರಿಟ್ ಜಾಗ!  ಗಾಂಧಿಬಜಾರಿನ ಆ ಜನಜಂಗುಳಿ, ಗಿಜಿ ಗಿಜಿಯಲ್ಲಿ ಇಂಥಾ ಒಂದು  ಪ್ರಶಾಂತ ಸ್ಥಳ ಇದೆಯೆಂದರೆ ನಂಬಲಸಾಧ್ಯ! ಅಲ್ಲಿ ನಡೆಯುವ ಭಜನೆ, discourse ಗಳು ಮನಸ್ಸಿಗೆ ಬಲುಹಿತ!

೧೧ ಘಂಟೆ ರಾತ್ರಿಯಲ್ಲಿ ವಿಶ್ವೇಶ್ವರಪುರಂ ಸರ್ಕಲ್ ನಲ್ಲಿ ಅಕ್ಕಿರೊಟ್ಟಿ ತಿಂದವರಿಗೆ ಗೊತ್ತು ಅದರ ಅನುಭವ! ನಾನು ಆನಂದ್ ನಮ್ಮ ಹೀರೋ ಹೋಂಡಾದಲ್ಲಿ ತಿರುಗದ ಬೀದಿಗಳಿಲ್ಲ, ತಿನ್ನದ ಜಾಗಗಳಿಲ್ಲ! “ತೆಂಗಿನ ಮರದ ಮೇಲೆ ಊಟ ಅಂದ್ರೆ ಕಟ್ಟು ಜನಿವಾರಕ್ಕೆ ಲೋಟ” ಅನ್ನೋಹಾಗೆ ಯಾರು ಎಲ್ಲಿ ಏನು ಚೆನ್ನಾಗಿದೆ ಅಂತಾರೋ next day ನಾವಲ್ಲಿ ಹಾಜರ್ J

ಹೀಗೆ, ಬೆಂಗಳೂರಿನ ಬಗ್ಗೆ ಹೇಳ್ತಾ ಹೋದ್ರೆ ಲಿಸ್ಟ್ ಮುಗಿಯಲ್ಲ! ಕರಗ, ವಿಶ್ವೇಶ್ವರಯ್ಯ museum, ಬುಗಲ್ ರಾಕ್, ISKON ಟೆಂಪಲ್, ಅಶೋಕ ಪಿಲ್ಲರ್, ರಾಗಿ ಗುಡ್ಡ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಜಯನಗರ ಕಾಂಪ್ಲೆಕ್ಸ್, ಡಿ.ವಿ.ಜಿ. ರೋಡ್, ರೆಸಾರ್ಟ್ಗಳು, ಮಾಲ್ ಗಳು, ಪಬ್ ಮತ್ತು ಕ್ಲಬ್ಗಳು, ಹೀಗೆ ಜನರ ಅಭಿರುಚಿಗೆ ತಕ್ಕಂತೆ ಜೀವನ ನಡೆಸುವ ಎಲ್ಲ ಸೌಕರ್ಯ ಇರೋ ವೈವಿಧ್ಯಮಯ ಬೆಡಗಿನ ನಗರ ಬೆಂಗಳೂರು.

cc-wiki
ಯು ಬಿ ಮಾಲ್

ಅಲ್ಲಿದ್ದ ನನ್ನ ಜೀವನದ ಪ್ರತಿ ಘಳಿಗೆಯಲ್ಲೂ ಬೆಂಗಳೂರು ಹಾಸುಹೊಕ್ಕಿದೆ. ನಿಜ, ಈಗ ಬೆಂಗಳೂರು ಬಹಳ  ಬದಲಾಗಿದೆ, ಮೊದಲಿನಂತಿಲ್ಲ… ಆದರೆ ಅದು ನಾ ಬೆಳೆದ ಊರು, ಹೇಗಿದ್ದರೂ ಅದು ನನ್ನೂರು. ಹೆತ್ತ ತಾಯಿಯಂತೆ ಸದಾ ನಾನು ಪ್ರೀತಿಸುವ ಊರು.

“ಅನಿವಾಸಿ” ಯಾಗಿರುವ ನಾನು ಮತ್ತೆ ಅಲ್ಲಿಯ ನಿವಾಸಿಯಾಗುವ ಹಂಬಲ ಸದಾ ನನ್ನ ಮನಸ್ಸಿನಲ್ಲಿದೆ

ನನ್ನ ಊರು ಬೆಂಗಳೂರು, ಆನಂದದ ತವರೂರು …:)