ವಚನ, ದಾಸ ಮತ್ತು ಭಕ್ತಿ ಸಾಹಿತ್ಯದ ಪರಂಪರೆ- ಭಾಗ 1, ರಾಮಮೂರ್ತಿ

( ಸಾಹಿತ್ಯ ಎನ್ನುವ  ಮಹಾ ಸಾಗರದ  ಹನಿಗಳು ಜನಸಾಮಾನ್ಯರಿಗೆ ದೊರಕತೊಡಗಿದ್ದು ಆಯಾ ದೇಶಗಳಲ್ಲಿ ಇದು ಆಡುಭಾಷೆಯಲ್ಲಿ ದೊರಕತೊಡಗಿದಾಗ.ಈ ಕಾರ್ಯ ನಡೆಯದೇ ಹೋಗದಿದ್ದಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಇವತ್ತು ಬೆರಳೆಣಿಕೆಯಲ್ಲಿ ಮಾತ್ರ ಇರುತ್ತಿತ್ತೇನೋ? ಸವಿದಷ್ಟೂ ಸಿಹಿ ಸಾಹಿತ್ಯದ್ದು.  ಪಡೆದಂತೆಲ್ಲ ಮತ್ತೆ ಸಂಪಾದನೆಯಾಗಬಲ್ಲಂತದ್ದು. ಸಮಾಜವೊಂದಕ್ಕೆ ಒಳಿತು ಕೆಡುಕುಗಳನ್ನು ಮನದಟ್ಟು ಮಾಡಿಸಿ, ಮಾರ್ಗದರ್ಶನವನ್ನು ನೀಡುವಂತದ್ದು.

ಸಂಸ್ಕೃತವೊಂದೇ ಬಳಕೆಯಲ್ಲಿದ್ದಿದ್ದರೆ ಕನ್ನಡ ಭಾಷೆ ಬೆಳೆಯುತ್ತಿರಲಿಲ್ಲ. ಸಾಹಿತ್ಯದಲ್ಲಿ ಕನ್ನಡ ಭಾಷೆ ಪ್ರವರ್ದಮಾನಕ್ಕೆ ಬಂದಾಗ  ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಸಂಸ್ಕೃತ ಭಾಷೆ ಹಿಂದೆ ಸರಿದದ್ದು ಈಗ ಇತಿಹಾಸ. ಹಾಗೆಯೇ ಸಾಹಿತ್ಯ ಆಡು ಭಾಷೆಯಲ್ಲಿದ್ದಾಗ ಅತಿ ಹೆಚ್ಚು ಜನರಿಗೆ ತಲುಪಿ ಹೆಚ್ಚು ಜನಪ್ರಿಯವಾಗಬಲ್ಲದೆಂಬುದಕ್ಕೆ ನಿದರ್ಶನ.

ಕನ್ನಡದಲ್ಲಿ ವಚನಸಾಹಿತ್ಯ ಮತ್ತು ದಾಸ ಸಾಹಿತ್ಯಕ್ಕಿರುವ ಮಹತ್ವ ಅಷ್ಟಿಷ್ಟಲ್ಲ. ಇವನ್ನು ಬರೆದವರೆಲ್ಲ ಪಂಡಿತರಲ್ಲ ನೂರಾರು ಜನಸಾಮಾನ್ಯರು, ಓದು ಗೊತ್ತಿಲ್ಲದವರು ನುಡಿರೂಪದಲ್ಲಿ  ತಮ್ಮ ಬದುಕನ್ನು, ಆಧ್ಯಾತ್ಮ, ಪಾರಮಾರ್ಥ, ಧ್ಯೇಯ ಮತ್ತು ಭಕ್ತಿಯನ್ನು ಸರಳ ನುಡಿರೂಪದಲ್ಲಿ ಬರೆದ ಕಾರಣವೇ  ವಚನ ಸಾಹಿತ್ಯ ಅಗಾಧ ಮಟ್ಟದಲ್ಲಿ ಬೆಳೆಯಿತು. ಮನೆಯಲ್ಲೂ ದುಡಿದು, ಹೊರಗಿನ ದುಡಿಮೆಗೂ ಕೈ ಹಚ್ಚಿದ ಹೆಂಗೆಳೆಯರ ಸಾಹಿತ್ಯ ಮೊದಲಬಾರಿಗೆ ದಾಖಲಿತ ರೂಪದಲ್ಲಿ  ಲಭ್ಯವಾಗಿರುವುದೇ ವಚನಗಳಲ್ಲಿ. ಹಾಗಾಗಿ ಮಹಿಳಾ ಸಾಹಿತ್ಯ ಶುರುವಾದದ್ದೇ ವಚಗಳ ಮೂಲಕ.

ವಚನ ಮತ್ತು ದಾಸ ಸಾಹಿತ್ಯಗಳು ಆರಿಸಿಕೊಂಡಿದ್ದು  ಮುಖ್ಯವಾಗಿ ಭಕ್ತಿಮಾರ್ಗವನ್ನು. ಆದರೆ ದೇಹ, ಬದುಕು, ಸಮಾಜದ ಒಳಿತು -ಕೆಡುಕುಗಳು,ಆಧ್ಯಾತ್ಮ,ಬುದ್ದಿ ಮಾತು, ಪರವಶತೆ, ಪಾರಮಾರ್ಥಿಕತೆ ಎಲ್ಲವನ್ನೂ ಒಳಗೊಂಡಿವೆ,  ಅಲ್ಲಮ ಪ್ರಭು ಖಗೋಳ ಶಾಸ್ತ್ರದಂತಹ ಕ್ಲಿಷ್ಟ ವೈಜ್ಞಾನಿಕ ವಿಚಾರಗಳ ಬಗ್ಗೆ ಬರೆದರೆ, ಶಿಶುನಾಳ ಶರೀಷರು ತಮ್ಮ ನಿಗೂಢ ನುಡಿಗಟ್ಟುಗಳ  ಮೂಲಕ ಜನರ ಪ್ರಭುದ್ದತೆಯನ್ನು ಕೆಣಕಿದರು.

ಮೊದಲು ಬಂದದ್ದು ವಚನ ಸಾಹಿತ್ಯ. ನಂತರ ಬಂದದ್ದು ದಾಸ ಸಾಹಿತ್ಯ. ಅದೇ ಪ್ರಕಾರದಲ್ಲಿ ಈ ಕುರಿತ ಬರಹವನ್ನು ಎರಡು ಕಂತುಗಳಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ.

ಈ ಲೇಖನಗಳನ್ನು ಬರೆದವರು ಅನಿವಾಸಿಯ ಅದಮ್ಯ ಉತ್ಸಾಹದ ಬರಹಗಾರರಾದ  ರಾಮಮೂರ್ತಿಯವರು. ಇವರ ಬರಹಕ್ಕೆ ಆಧಾರ ಎ.ಕೆ. ರಾಮಾನುಜಂ ಅವರ ಪುಸ್ತಕಗಳು. ರಾಮಮೂರ್ತಿಯವರ ಪುಸ್ತಕ ಪ್ರೇಮ, ನಾವು  ವಚನ ಮತ್ತು ದಾಸಸಾಹಿತ್ಯದ ಉಗಮ, ಬೆಳವಣಿಗೆ ಮತ್ತು ಈ ಸಾಹಿತ್ಯಪ್ರಕಾರಗಳ ಹರಿಕಾರರಾದ ಹಲವರ ಬಗ್ಗೆ  ಮತ್ತೊಮ್ಮೆ ತಿಳಿದುಕೊಳ್ಳಲು ಅವಕಾಶ ನೀಡಿದೆ.- ಸಂ)

———————————————————————————————————————————————————–

ವಚನ, ದಾಸ ಮತ್ತು ಭಕ್ತಿ ಸಾಹಿತ್ಯದ  ಪರಂಪರೆ

ನಮ್ಮ ಕರ್ನಾಟಕದಲ್ಲಿ ಈ ಸಾಹಿತ್ಯ ಒಂದು ಸಾವಿರ ವರ್ಷದ ಹಿಂದೆ ಪ್ರಾರಂಭವಾಯಿತು ಅನ್ನುವ ವಿಚಾರ ಎಲ್ಲಾ ಕನ್ನಡಿಗರ ಹೆಮ್ಮೆಯ ವಿಷಯ. ೯ನೇ ಶತಮಾನದಲ್ಲೇ ಕನ್ನಡದ ಮೊದಲನೆಯ ಸಾಹಿತ್ಯ ನೃಪತುಂಗನ ಕವಿರಾಜ್ಯಮಾರ್ಗ. ಆದರೆ ಇದು ಸಾಮಾನ್ಯ ಜನಗಳಿಗೆ ಬರೆದಿದ್ದಲ್ಲ ಅಂದರೆ ತಪ್ಪಲಾಗರಾದು. ವೇದ ಮತ್ತು ಉಪನಿಷದ್ಗಳು  ಸಂಸ್ಕೃತ ದಲ್ಲಿ ಇದ್ದಿದ್ದರಿಂದ ಅಕ್ಷರಸ್ತ ರಾದ ಬ್ರಾಹ್ಮಣ ಪಂಗಡವರಿಗೆ ಮಾತ್ರ ಇದರ ಅರಿವು ಇತ್ತು. ಇಂಗ್ಲೆಂಡಿನಲ್ಲಿ ಸಹ  ಬೈಬಲ್ ಲ್ಯಾಟಿನ್ ಭಾಷೆ ಯಲ್ಲಿ ಮಾತ್ರ ಇತ್ತು ಆದ್ದರಿಂದ  ಇಂಗ್ಲೆಂಡಿನ ಜನ ಸಾಮಾನ್ಯರಿಗೆ ಅವರ ಧರ್ಮದ ಗ್ರಂಥ ಬಗ್ಗೆ  ಇಂಗ್ಲಿಷ್ ನಲ್ಲಿ ೧೭ ಶತಮಾನದಲ್ಲಿ ಪ್ರಕಟವಾಗುವವರೆಗೂ   ಏನೂ ಗೊತ್ತರಿಲಿಲ್ಲ. . ಆದರೆ ಕರ್ನಾಟಕದಲ್ಲಿ ೧೦೦೦ ವರ್ಷದ ಹಿಂದೆಯೇ ಈ ಸಮಸ್ಯೆ ಪರಿಹಾರವಾಗಿತ್ತು , ವಚನಗಾರರು ಸರಳ ಕನ್ನಡದಲ್ಲಿ ಜೀವನ ಮತ್ತು ಭಕ್ತಿಯ ಮೇಲೆ  ಕೀರ್ತನೆಗಳು ಮತ್ತು ಉಪನ್ಯಾಸ ಗಳಿಂದ ಸಾಮಾನ್ಯ ಜನರಿಗೆ ಅರಿವು ಮಾಡಿಸಿದರು. ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ತಾರತಮ್ಯಗಳನ್ನು ಅಂತ್ಯ ಮಾಡಿಮಾಡುವ ಪ್ರಯತ್ನ ಮೊದಲಬಾರಿಗೆ  ಈ ವಚನಗಳಿಂದ ಪ್ರಾರಂಭವಾಯಿತು. ವಚನಗಳು ಅಂದರೆ ನಮಗೆ ಜ್ಞಾಪಕ ಬರುವುದು ೧೨ನೇ ಶತಮಾನದ ಬಸವಣ್ಣ, ಅಲ್ಲಮ ಪ್ರಭು ಮತ್ತು ಅಕ್ಕಮಹಾದೇವಿ ಇಂಥವರು. ವೀರಶೈವ ಧರ್ಮದ ತ್ರಿಮೂರ್ತಿಗಳೆಂದರೆ ಇವರು ಮೂವರು.

ಆದರೆ ಇವರಿಗೆ ಮುಂಚೆ ೧೨ ನೇ ಶತಮಾನದಲ್ಲಿದ್ದ ಜೇಡರ ಅಥವಾ ದೇವರ ದಾಸಿಮಯ್ಯ ಎಂಬುವ ಶಿವ ಭಕ್ತನಿಂದ ಈ ಸಾಹಿತ್ಯ ಶುರುವಾಯಿತು ಅನ್ನುವ ನಂಬಿಕೆ, ಈತ ಉತ್ತರ ಕರ್ನಾಟಕದ ಯಾಡಿಗಿರಿ ಜಿಲ್ಲೆಯ ಶೋರಾಪುರ ತಾಲೂಕಿನ  ಮುದನೂರ್ ಎಂಬ ಹಳ್ಳಿಯಲ್ಲಿ  ಸುಮಾರು ೧೧೪೦ ನಲ್ಲಿ ಹುಟ್ಟಿದವನು, ಇವನ  ಮನೆತನೆದವರು ನೇಕಾರ  ( weaver ) ಈಗಿನ  ದೇವಾಂಗ ಸಮುದಾಯದವರು .  ಶಿಕ್ಷಣ ಶ್ರೀಶೈಲದ ಹತ್ತಿರದಲ್ಲಿದ್ದ ಒಂದು ಗುರುಕುಲದಲ್ಲಿ. ಮುದನೂರು  ಹಳ್ಳಿ ಯಲ್ಲಿ ರಾಮನಾಥ ದೇವಸ್ಥಾನವಿದೆ. ಪುರಾಣದ ಪ್ರಕಾರ ರಾಮ ಶಿವನ ಪೂಜೆ ಮಾಡುವನು ಆದ್ದರಿಂದ ರಾಮಾನಾಥ ಶಿವ, ದಾಸಿಮಯ್ಯನ ಅಂಕಿತ ನಾಮ ರಾಮನಾಥ ಇವನ ವಚನಗಳು ಆ ಪ್ರದೇಶಗಳಲ್ಲಿ ತುಂಬಾ ಜನಪ್ರಿಯವಾಯಿತು. ಕೆಲವರ ಪ್ರಕಾರ ಪ್ರಾಚೀನ ವೀರಶೈವ ಧರ್ಮ ಈತನಿಂದ ಹರಡಿತು.  ಆಗಿನ ಚಾಲುಕ್ಯ ದೊರೆ ಜಯಸಿಂಹನ ಪತ್ನಿ ಯನ್ನು ದಾಸಿಮಯ್ಯ ಶಿವ ಭಕ್ತನಳಾಗಿ ಪರಿವರ್ತಿಸಿದನಂತೆ.  ಇದುವರಿಗೆ  ಇವನ ೧೭೫ ವಚನಗಳು ಪ್ರಚಾರದಲ್ಲಿದೆ.

ಈ ವಚನಗಳಲ್ಲಿ ಸಾಮಾನ್ಯ ಜನರ ಅನುಭವಗಳನ್ನು ಚರ್ಚಿಸಲಾಗಿದೆ.

“ಇಂದು ನಾಳಿನ ಚಿಂತೆ ಬೇಡ ” 

ಇಂದಿಗೆಂತು ನಾಳೆಗೆಂತೆಂದು ಚಿಂತಸಲೇಕೆ 

ತಂದಿಕ್ಕುವ ಶಿವಂಗೆ ಬಡತನವೇ ರಾಮನಾಥ 

 

       ಬಸವಣ್ಣನವರು 

ಇವರು ಬಾಗಲಕೋಟೆ ಜಿಲ್ಲೆಯ ಬಾಗೇವಾಡಿ ಅನ್ನುವ ಸ್ಥಳದಲ್ಲಿ ೧೧೦೬ ನಲ್ಲಿ ಜನಿಸಿದರು. ( ಕಾರ್ತಿಕ ಶುದ್ಧ ಪೂರ್ಣಿಮಾ ಶಿದ್ದರ್ಥಿಮ ಸಂವತ್ಸರ) ಕೆಲವರ ಅಭಿಪ್ರಾಯ ಇವರು ಇಂಗಳೇಶ್ವರ ದಲ್ಲಿ ಹುಟ್ಟಿದವರು ಅನ್ನುವ ಪ್ರತೀತಿಯೂ ಇದೆ, ಕೆಲವು ಇತಿಹಾಸಕಾರರು ಬಸವಣ್ಣನವರ ತಂದೆ ತಾಯಿ ಚಿಕ್ಕಂದಿನಲ್ಲೇ ತೀರಿದ ಕಾರಣ ಅವರ ಅಜ್ಜಿ ಆಶ್ರದಲ್ಲಿ ಬೆಳೆದು ನಂತರ  ಶ್ರೀ ಮಾದರಸ ಮತ್ತು  ಮಾದಲಾಂಬಿಕೆ ಇವರನ್ನು ಬೆಳಸಿದರು ಅನ್ನುವ ವಿಷಯ ಪ್ರಸಿದ್ಧ ಕವಿ ಮತ್ತು ಸಾಹಿತಿ ಶ್ರೀಯುತ ರಾಮಾನುಜಂ ಅಭಿಪ್ರಾಯ ಪಟ್ಟಿದ್ದಾರೆ ( Speaking of  Shiva by AK Ramanujam ) .   ಅಕ್ಕ ನಾಗಮ್ಮ ಮತ್ತು ಆಕೆಯ ಗಂಡ ಶಿವಸ್ವಾಮಿ ಜೊತೆಯಲ್ಲಿ ಅವರ ಬಾಲ್ಯವನ್ನು ಕಳೆದರು. ಚಿಕ್ಕ ವಯಸಿನ್ನಲ್ಲೋ ಈತನಿಗೆ ವೈದಿಕ ಕರ್ಮಾಚರಣಗಳಲ್ಲಿ ನಂಬಿಕೆ ಇರಲಿಲ್ಲ. ಹುಟ್ಟಿದ ಬ್ರಾಹ್ಮಣ ಸಂಪ್ರದಾಯದಂತೆ ಇವರ ೮ ವರ್ಷದಲ್ಲಿ (೧೧೧೪) ಉಪನಯನದಲ್ಲಿ ಹಾಕಿದ ಜನಿವಾರವನ್ನು ನಾಗಮ್ಮನಿಗೆ ಕೊಡುವಂತೆ ಹೇಳುತ್ತಾರೆ. ಜನಿವಾರ ಪುರುಷರಿಗೆ ಮಾತ್ರ ಎಂದು ಹೇಳಿದಾಗ ಪುರುಷ /ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ಕೂಡಲಸಂಗಮಕ್ಕೆ ಹೊರಡುತ್ತಾರೆ. ಇಲ್ಲಿ ಈಶನ್ಯ ಗುರುಕುಲ ವನ್ನು ಸೇರಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಸಂಸ್ಕೃತ ಮತ್ತು ಕನ್ನಡ ದ  ಪಾಂಡಿತ್ಯ ವನ್ನು ಪಡೆದರು. ಅವರ ಹದಿನೆಂಟನೇ ವರ್ಷದಲ್ಲಿ ಇವರ ತಾಯಿ ತಮ್ಮ ಬಲದೇವನ  ಮಗಳು ಗಂಗಾಂಬಿಕೆ ನ್ನು ಮಾಡುವೆ ಮಾಡಿಕೊಂಡರು. ಬಲದೇವ ಬಿಜ್ಜಳ ದೇಶದ  ಮಂತ್ರಿ. ನಂತರ ಬಿಜ್ಜಳ ರಾಜಧಾನಿ ಕಲ್ಯಾಣ ನಗರದಲ್ಲಿ ಆ ಸರ್ಕಾರದಲ್ಲಿ ಕಾರಕೂನರಾಗಿ ಕೆಲಸಕ್ಕೆ ಸೇರಿ ಅವರ ದಕ್ಷತೆಗೆ ರಾಜ್ಯದ ದೊರೆಗಳು ಮೆಚ್ಚಿ ಬಸವಣ್ಣನವರನ್ನು ಮುಂದೆ ತಂದರು. ಕೆಲವು ವರ್ಷಗಳ ನಂತರ ಬಲದೇವನು ತೀರಿದನಂತರ ಬಸವಣ್ಣನವರನ್ನ  ಮಂತ್ರಿ ಗಳಾಗಿ ನೇಮಿಸಿದರು. ಇವರು ರಾಜ್ಯದ ಭಂಡಾರಿ  (Treasurer ) ಅಲ್ಲದೆ ಭಕ್ತಿ ಭಂಡಾರಿ ಸಹ ಆಗಿ ಜನಸಾಮಾನ್ಯರ ಮನ್ನಣೆ ಪಡೆದರು. ಅನುಭವ ಮಂಟಪ ಎನ್ನುವ ಹೊಸ ಯೋಜನಯಲ್ಲಿ ದೇಶದ ಪ್ರಜೆಗಳು, ಯಾರೇ ಆಗಿರಲಿ ತಮ್ಮ ಅಭಿಪ್ರಾಯವನ್ನು ಭಯ ಇಲ್ಲದೆ ವ್ಯಕ್ತ ಪಡಿಸುವ ಅವಕಾಶ ಇತ್ತು. ಈ ಕಾಲದಲ್ಲಿ ಶಿವ ಭಕ್ತರು, ಅಂದರೆ ವೀರಶೈವರ ಸಂಖ್ಯೆ ಹೆಚ್ಚಾಗಿದ್ದು ಬಸವಣ್ಣನವರು ತೋರಿಸಿದ ಮಾರ್ಗದಿಂದ .   ಆದರೆ ಕೆಲವರಿಗೆ ಈ “ಚಳುವಳಿ” ಅಂದರೆ ಜಾತಿ ಭೇದ ಅಥವಾ ಲಿಂಗ ತಾರತಮ್ಯ ಇಲ್ಲದ ಸಮಾಜ ಇಷ್ಟವಾಗದೇ ರಾಜ್ಯದಲ್ಲಿ ಕ್ರಾಂತಿಯೇ ಶುರುವಾಗಿ   ಇವರು ಬರೆದ ವಚನಗಳನ್ನು ನಾಶ ಮಾಡುವ ಪ್ರಯತ್ನ ನಡೆಯಿತು.  ಬಸವಣ್ಣನವರ  ಪ್ರೇರಣೆಯಿಂದ ಒಂದು ಅಂತರ ಜಾತಿಯ ಮದುವೆ ನಡಯಬೇಕಾಗಿತ್ತು  ಆದರೆ  ಸಾಂಪ್ರದಾಯಿಕ ವಾದಿಗಳು ಇದನ್ನು ವಿರೋಧಿಸಿ ಬಿಜ್ಜಳ ದೊರೆಗಳಿಗೆ  ದೂರು  ನೀಡಿ ಶಿಕ್ಷೆ ಕೊಡುವಂತೆ ಒತ್ತಾಯ ಮಾಡಿದಾಗ ವೀರಶೈವ ಜನಾಂಗದವರು ಸಂಪ್ರದಾಯಿಗಳ ಮೇಲೆ ಹಲ್ಲೆ ನಡೆಸುವ ಪ್ರಯತ್ನ ನಡೆಯಿತು.  ಅಹಿಂಸಾತ್ಮಕ ಬಸವಣ್ಣನರು ಇದನ್ನು ನಿಲ್ಲಿಸುವ ಪ್ರಯತ್ನ ಪಟ್ಟರೂ ಆಗಲಿಲ್ಲ.  ಕೆಲವರು ಬಿಜ್ಜಳ ರಾಜನಿಗೆ ಇವರನ್ನು ಮಂತ್ರಿ ಪದವಿಯಿಂದ  ತೆಗೆಯಿರೆಂದು ಒತ್ತಾಯ  ಮಾಡಿದರು. ಇದನ್ನು ಕೇಳಿ ಬಸವಣ್ಣನವರು ಬೇಸರಿದಿಂದ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಮುಂದೇನು ಮಾಡುವುದು ತೋಚದೆ ಕೂಡಲಸಂಗಮಕ್ಕೆ ಈಶನ್ಯ ಆಶ್ರಮಕ್ಕೆ ಹಿಂತಿರಿಗಿದರು. ಆದರೆ ಈಶಾನ್ಯ ಮುನಿಗಳು ಆಗಲೇ  ತೀರಿದ್ದರು. ಇಷ್ಟರಲ್ಲಿ ಬಿಜ್ಜಳ ರಾಜನ ಕೊಲೆಯೂ ಆಗಿದ್ದು  ಕೇಳಿ ಬಸವಣ್ಣನವರಿಗೆ ಬಹಳ ಬೇಸರವಾಗಿ ” ಸಾಕು ಮಾಡು ತಂದೆ ಲೋಕದಿಂದ” ಎನ್ನುವ ವಚನದಿಂದೆ  ಊಟ ನೀರು  ಬಿಟ್ಟು ಉಪವಾಸ ಮಾಡಿ ತಮ್ಮ ಪ್ರಾಣ ವನ್ನು ತ್ಯಜಿಸಿದರು , ಇದು ೧೧೬೭/೮ ನಲ್ಲಿ .

ಸಾವಿರ ವರ್ಷದ ಹಿಂದೆ ಬಸವಣ್ಣನವರ ತೋರಿಸಿದ ಆದರ್ಶ ಮಾರ್ಗವನ್ನು ಮುಂದುವರೆಸಿದ್ದರೆ ಈಗಿನ ಕರ್ನಾಟಕದಲ್ಲಿ ಮಾತ್ರ ಅಲ್ಲ ಇಡೀ ಭಾರತದಲ್ಲೇ   ಜಾತಿ ಮತಗಳ ಹಾವಳಿ ಇಲ್ಲದ ಸಮಾಜವನ್ನು ನೋಡಬಹುದಾಗಿತ್ತು. ಆದರೆ ದುರದೃಷ್ಟದಿಂದ ಸಾಧ್ಯವಾಗಲಿಲ್ಲ

ಬಸವಣ್ಣನವರ  ಕಾರ್ಯವೇ ಕೈಲಾಸ ಎಂಬುವುದು ಇವತ್ತಿಗೂ ಸತ್ಯ. ಇವರು ಮತ್ತು ಇತರ ೨೪೯ ವಚನಗಾರರು  ರಚಿಸಿದ ವಚನಗಳು  ೨೦೨೪೯ ಅನ್ನುವುದಕ್ಕೆ ದಾಖಲೆ ಇದೆ.

ಹರಿಹರ (೧೧೬೦-೧೨೦೦) ಬಸವಣ್ಣನವರ ಸಮಕಾಲೀನ, ಇವನು ಬರೆದ ಬಸವರಾಜದೇವರ ರಗಳೆ ಇವರ  ಚರಿತ್ರೆ. ಇವನು ಬರೆದ ೨೫ ಸಂಪುಟದಲ್ಲಿ ೧೫ ಮಾತ್ರ ಇದೆ.  ಈತನಿಗೆ ಬಸವಣ್ಣನವರ ಪರಿಚಯ ಇತ್ತೋ ಇಲ್ಲವೋ ಅನ್ನುವುದು ಸಂಶಯವೇ. ಇದಲ್ಲದೆ ೧೩ನೇ ಶತಮಾನದಲ್ಲಿ ತೆಲಗು ಭಾಷೆಯಲ್ಲಿ  ಪಾಲ್ಕುರಿಕಿ ಸೋಮನಾಥ ಬರೆದ ಬಸವ ಪುರಾಣ ದಿಂದ ಬಸವಣ್ಣನವರ ಕೀರ್ತಿ ಇನ್ನೂ ಹರಡಿತು. ೧೩೬೯ ನಲ್ಲಿ ಬಸವ ಪುರಾಣ ವನ್ನು ಕನ್ನಡದಲ್ಲಿ ಭೀಮ ಕವಿ ಭಾಷಾಂತರಿಸಿದ. ಇದು ವೀರಶೈವ ಧರ್ಮದಲ್ಲಿ ಇಂದಿಗೂ ಪವಿತ್ರವಾಗಿದೆ.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ 

ಮುನಿಯ ಬೇಡ, ಅನ್ಯರಿಗೆ ಅಸಹ್ಯ ಬಡಬೇಡ 

ತನ್ನ ಬಣ್ಣಿಸ ಬೇಡ, ಇದ್ದೀರ ಹಳಿಯಲು ಬೇಡ 

ಇದೇ  ಅಂತರಂಗ-ಶುದ್ದಿ, ಇದೇ ಬಹಿರಂಗ ಶುದ್ದಿ 

ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ  

 

       ಅಲ್ಲಮ ಪ್ರಭು

ಅಲ್ಲಮ ಪ್ರಭು ಬಸವಣ್ಣನವರ  ಸಮಕಾಲೀನವರು.  ಹುಟ್ಟಿದ ಸ್ಥಳ ಶಿವಮೊಗ್ಗ  ಜಿಲ್ಲೆಯ ಬನವಾಸಿ ಹತ್ತಿರರದ  ಬಳ್ಳಿಗಾವಿ  ಗ್ರಾಮ , ೧೨ ನೇ ಶತಮಾನದಲ್ಲಿ ಆದರೆ ಸರಿಯಾದ ಮಾಹಿತಿ ಇಲ್ಲ. ತಂದೆ ನಿರಶಂಕರ (ನಿರಂಕಾರ )  ತಾಯಿ ಸುಜನನಿ ( ಸುಜ್ಞಾನ). ೧೫ನೇ ಶತಮಾನದ ಹರಿಹರ  ಬರೆದ ಇವರ ಜೀವನ ಚರಿತ್ರೆಯಲ್ಲಿ ತಂದೆ ಸ್ಥಳೀಯ ಗುಹೇಶ್ವರ ದೇವಸ್ಥಾನದಲ್ಲಿ ಸಂಗೀತ ಮತ್ತು ನೃತ್ಯದಲ್ಲಿ ಶಿಕ್ಷಣ ಕೊಡುವ ವೃತ್ತಿ ಯಲ್ಲಿದ್ದವರು. ಅಲ್ಲಮ ಸಹ ಮದ್ದಳೆ (ಡೋಲು) ಬಾರಿಸುವ ಚಾತುರ್ಯವನ್ನು ಪಡದಿದ್ದ. ಊರಿನ ನರ್ತಕಿ ಕಮಲತೆ ಎಂಬಾಕೆಯನ್ನು ಪ್ರೀತಿಸಿ ಮದುವೆಯಾದ ಆದರೆ ಈಕೆ ಬಹಳ ವರ್ಷ ಬದಕಲಿಲ್ಲ, ಈ ನೋವಿನಿಂದ ಅಲ್ಲಮ ದಿಕ್ಕಿಲ್ಲಿದೆ ಅಲೆದು ಕೊನೆಗೆ ಹತ್ತಿರದ ಒಂದು ಗುಹೆಯಲ್ಲಿ ನೆಲಸಿದ್ದ ಅನಿಮಿಷ ಎಂಬ ಯೋಗಿಯ ಪರಿಚಯವಾಗಿ  ಅವರ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿ ಅವರಿಂದ ಇಷ್ಟ ಲಿಂಗವನ್ನು ಪಡದ ಮೇಲೆ ಅಲ್ಲಮನವರ  ಬದುಕು ಪ್ರಬುದ್ಧವಾಯಿತು. ಇವರ ವಚನಗಳು ಜನಪ್ರಿಯವಾಗಿ   ಕೊನೆಗೆ ಬಸವಣ್ಣನವರಿದ್ದ  ಕಲ್ಯಾಣ ದಲ್ಲಿ ನೆಲಸಿದರು.  ಇತರ ವಚನಗರರು ಇವರನ್ನು ಗುರುಗಳು ಅಥವಾ ಪ್ರಭುಗಳು ಎಂದು  ಭಾವಿಸಿ ಅಲ್ಲಮ ಪ್ರಭು ವಾದರು.  ಕಲ್ಯಾಣದಲ್ಲಿದ್ದ ಅನುಭವ ಮಂಟಪದ ಸ್ಟಾಪಿಕರು ಬಸವಣ್ಣ ಆದರೂ ಅದರ ಅಧ್ಯಕ್ಯ ಅಲ್ಲಮ ಪ್ರಭುಗಳು.  ಕಲ್ಯಾಣದಲ್ಲಿ  ಬಸವಣ್ಣನವರು ರಾಜ್ಯದ ಜವಾಬ್ದಾರಿ ವಹಿಸಿದ್ದರೆ  ಅಲ್ಲಮ ಪ್ರಭುಗಳು ಆದ್ಯಾತ್ಮಿಕ ವಿಚಾರದ ಹೊಣೆ ಇತ್ತು.  ಇವರು  ರಚಿಸಿದ ೧೨೯೪ ವಚನಗಳು ಇಂದಿಗೂ ಪ್ರಸಿದ್ದಿಯಾಗಿದೆ. ಇವರ ಅಂಕಿತ ನಾಮ ಗುಹೇಶ್ವರ, ಇವರ ವಚನಗಳು ಸಹ ಸಮಾಜದಲ್ಲಾಗುವ ಅನ್ಯಾಯ ಮತ್ತು ಅಸಮಾನತೆ ಬಗ್ಗೆ.  ನಂತರ ಬಂದ (೧೪೩೦ ) ಎರಡನೇ ದೇವರಾಯನ ಆಸ್ಥಾನದಲ್ಲಿದ್ದ  ವಿಜಯನಗರದ  ಕವಿ ಚಾಮರಸ  ಪ್ರಭುಲಿಂಗಲೀಲೆ ಅಲ್ಲಮ ಪ್ರಭುಗಳ ಜೀವನ ಮತ್ತು ಅವರು ರಚಿಸಿದ ವಚನಗಳನ್ನು ಬಗ್ಗೆ ಬರೆದಿದ್ದಾನೆ.  ಇದು ಅತ್ಯಂತ ಜನಪ್ರಿಯವಾದ್ದರಿಂದ ದೇವರಾಯ ಈ ಕೃತಿಗಳನ್ನು ತೆಲಗು ಮತ್ತು ತಮಿಳು ಭಾಷೆಗಳಿಗೆ ಭಾಷಾಂತರ ಮಾಡಿಸಿದ .

 A K ರಾಮಾನುಜಂ ನವರ Speaking of Shiva ಕೃತಿಯಲ್ಲಿ ೯೭೨ ವಚನಗಳನ್ನು ಇಂಗ್ಲಿಷ್ ಗೆ ಭಾಷಾಂತರಿಸಿದ್ದಾರೆ.

ಅಲ್ಲಮ ಪ್ರಭುಗಳ  ವಚನಗಳಲ್ಲಿ ಇತರೆ ವಚನಗಾರ  ಮೇಲೆ ಟೀಕೆ  ಮಾಡಿದ್ದಾರೆ. ಬಸವಣ್ಣ ಮತ್ತು ಅಕ್ಕಮಹಾದೇವಿಯರನ್ನು ಸಹ. ಅಕ್ಕನ ನಗ್ನತೆ ಬಗ್ಗೆ  ಒಂದು ವಚನದಲ್ಲಿ ಪ್ರಸಾಪಿಸಿದ್ದಾರೆ.   ವೀರಶೈವ ಧರ್ಮದ ಬೌಧಿಕ (intellectual ) ನಾಯಕರು ಅಲ್ಲಮಪ್ರಭು ಅನ್ನುವುದರಲ್ಲಿ ಏನೂ  ಸಂಶವಿಲ್ಲ.

ಅಲ್ಲಮಪ್ರಭುಗಳ ಕೊನೆ ದಿನಗಳು ಶ್ರೀಶೈಲದ ಹತ್ತಿರ  ಕಡಲಿ ವನದಲ್ಲಿ ಕಳೆದರು. ಆದರೆ ಯಾವ ವರ್ಷ ಅಥವಾ ಮಾಸದ ಬಗ್ಗೆ ಮಾಹಿತಿ ಇಲ್ಲ ೧೨/೧೩ ಶತಮಾನ ದಲ್ಲಿ.

         ಅಕ್ಕ ಮಹಾದೇವಿ 

ವಚನಗಾರರಲ್ಲಿ ಈಕೆಯ ಹೆಸರು ಶಾಶ್ವಿತ ವಾಗಿದೆ, ಬಸವಣ್ಣನವರ ಸಮಕಾಲೀನರಾದರೂ ಇವಳ ಹಿನ್ನಲೆ ಬಗ್ಗೆ ಅಷ್ಟೇನು ಗೊತ್ತಿಲ್ಲ. ಆದರೆ ಮಹದೇವಿಯ ವಚನಗಳ ಬಗ್ಗೆ ಸಾಕಷ್ಟು ತಿಳಿದಿದೆ. ಇವತ್ತಿಗೂ ಈ ವಚನಗಳನ್ನು ಕರ್ನಾಟಕದಲ್ಲಿ ಎಲ್ಲರಿಂದಲೂ ಕೇಳಬಹುದು. ಈಕೆ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ  ಹತ್ತಿರ ಉಡುತಡಿ (ಉಡುಗಣಿ )ಎಂಬ ಸಣ್ಣ ಗ್ರಾಮ. ೧೨ ನೇ ಶತಮಾನದ ಚರಿತ್ರೆಕಾರ ಹರಿಹರನಿಂದ  ಇವಳ ತಂದೆ ನಿರ್ಮಲಶೆಟ್ಟಿ ಮತ್ತು ತಾಯಿ ಸುಮತಿ ಎಂದು ತಿಳಿದು ಬರತ್ತೆ. ಹುಟ್ಟಿದ್ದು ಬಹುಶ ೧೧೩೦. ಮನೆಯವರು ವೀರಶೈವ ಧರ್ಮವನ್ನು ಅನುಸರಿ ಬಂದವರಿಂದ ಮಹಾದೇವಿ ಚಿಕ್ಕ ವಯಸ್ಸಿನಲ್ಲೇ ಹತ್ತಿರದಲ್ಲೇ ಇದ್ದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ  ಶಿವನ ಭಕ್ತನಾದಳು.  ಶಿವನ ಮೇಲಿನ ಪ್ರೀತಿಗೆ ಮಲ್ಲಿಕಾರ್ಜುನ ಚೆನ್ನಮಲ್ಲಿಕಾರ್ಜುನ ಆಗಿ ಈಕೆ ಮುಂದೆ ಬರೆದ ವಚನಗಳಲ್ಲಿ ಇದು ಅವಳ ಅಂಕಿತ ನಾಮವಾಯಿತು

ವಯಸ್ಸಿಗೆ ಬಂದ  ತುಂಬಾ  ಸುಂದರವಾಗಿದ್ದ ಈ ಹುಡುಗಿಗೆ  ಮಾಡುವೆ ಮಾಡುವ ಪ್ರಯತ್ನ ನಡೆಯಿತು ಆದರೆ ಮಹದೇವಿ ತನಗೆ ಮಾದುವೆ ಅಗಿದೆ ಶಿವನೇ ನನ್ನ ಗಂಡ ಎಂದು ವಾದಿಸಿದಳು.  ಆಗಿನ ಕೌಶಿಕ ಜೈನ ದೊರೆ ಈಕೆಯನ್ನು ಬಲವಂತ ಮಾಡಿ ವರಿಸಿದ ಮಾತ್ರ ಅಲ್ಲ ಈಕೆಯ ಶಿವನ ಮೇಲಿನ ಭಕ್ತಿಯನ್ನುಮೆಚ್ಚಲಿಲ್ಲ, ಈ ಭಕ್ತಿಯನ್ನು ತನ್ನ ಮೇಲೆ ತೋರಿಸಬೇಕೆಂದು ಈ ದೊರೆ ಮಹದೇವಿಗೆ ಆಜ್ಞೆ ಮಾಡಿದಾಗ ಈಕೆ ಅರಮನೆ ಬಿಟ್ಟು ಎಲ್ಲವನ್ನು ತ್ಯಾಗಮಾಡಿ ಶ್ರೀಶೈಲಂ ಕಡೆ ನಡೆದಳು, ದಾರಿಯಲ್ಲಿ ಬಸವಣ್ಣನವರಿದ್ದ ಕಲ್ಯಾಣ ದಲ್ಲಿ ಬೇಟಿಯಾಗಿ ಅವರ ಅನುಭವ ಮಂಟಪದಲ್ಲಿ ತನ್ನ ಅನುಭವಗಳನ್ನು ಹಂಚಿಕೊಂಡಳು.  ಆದರೆ ಅಲ್ಲಮಪ್ರಭು ಈಕೆಯನ್ನು ಮೊದಲು ಅಂಗೀಕರಸಿಲಿಲ್ಲ, ಇವಳ ವೇಷ ಅಂದರೆ ನಗ್ನತೆ ಕಾರಣ ಇರಬಹುದು (ತನ್ನ ದೇಹವನ್ನು ತಲೆ ಕೂದಲನಿಂದ ಮಾತ್ರ ಮುಚ್ಚಿಟ್ಟುದ್ದಳು ಬಟ್ಟೆಯಿಂದ ಅಲ್ಲ) ಅವಳ ಶಿವ ಭಕ್ತಿ ಮತ್ತು ವಚನಗಳ  ಪ್ರಬಲದಿಂದ ಅನುಭವ ಮಂಟಪದಲ್ಲಿ ಹಿರಿಯ ಸ್ಥಾನವನ್ನು ಸಂಪಾದಿಸಿದಳು ಮತ್ತು ಅನೇಕರಿಗೆ ಇವಳು “ಅಕ್ಕ” ಆದಳು.

ಇವಳ ಕೊನೆ ದಿನಗಳನ್ನು ಶ್ರೀಶೈಲಂ ಗುಡ್ಡಗಳಲ್ಲಿ  ನೈಸರ್ಗಿಕವಾಗಿ  ಅಸ್ತಿತ್ವದಲ್ಲಿದ್ದ ಶಿವಲಿಂಗವನ್ನು ಪೂಜೆ ಮಾಡಿ ತನ್ನ ಕೊನೆ ದಿನಗಳನ್ನು ಕಳೆದಳು ಇದು ೧೧೬೦ ನಲ್ಲಿ ಅನ್ನುವ ನಂಬಿಕೆ.  ಅಕ್ಕನನ್ನು ಮದುವೆಯಾಗಿದ್ದ ಕೌಶಿಕ ದೊರೆ ಇಲ್ಲಿ ಬಂದು ಇವಳ ಕ್ಷಮೆ ಕೇಳಿದ ಅಂತ ಕೆಲವರ ಊಹೆ. ಇದಕ್ಕೆ ಸಮಂದಿಸಿದ ಒಂದು  ಅಕ್ಕನ ವಚನ ಇದೆಯಂತೆ

(ಅಕ್ಕಮಹಾದೇವಿ ಗುಹೆ ಗಳು ಶ್ರೀಶೈಲಂ ನಿಂದ ಸುಮಾರು ೧೦ ಕಿಲೋಮೀಟರ್ ನಲ್ಲಿ ಕೃಷ್ಣ ನದಿಯ ಹತ್ತಿರ ಇದೆ, ಈಗ ಈ ಪ್ರದೇಶ ತೆಲಂಗಾಣ ಕ್ಕೆ ಸೇರಿದೆ)

ಇವಳ ಸುಮಾರು ೪೩೦ ವಚನಗಳು ಬಹಳ ಜನಪ್ರಿಯವಾಗಿ ಜನರು  ಮಹಾದೇವಿಯನ್ನು ಅಕ್ಕ ಎಂದು ಗೌರಿಸಿದರು.

ಸಾವಿರ ವರ್ಷದಿಂದ ರಚಿಸಿದ ಅಕ್ಕನ ಒಂದು ವಚನ ಇವತ್ತಿಗೂ ಹೇಗೆ ಅನ್ವಯಿಸುತ್ತೆ ನೋಡಿ.

ಪುರುಷನ ಮುಂದೆ ಮಾಯೆ 

ಸ್ತ್ರೀಎಂಬ ಅಭಿಮಾನವಾಗಿ ಕಾಡುವುದು 

ಸ್ತ್ರೀ ಮುಂದೆ ಮಾಯೆ 

ಪುರುಷನೆಂಬ ಅಭಿಮಾನವಾಗಿ ಕಾಡುವುದು 

ಲೋಕವೆಂಬ ಮಾಯೆಗೆ ಶರಣಚಾರಿತ್ಯ ಮರುಳಾಗಿ ತೋರುವುದು 

ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ ಮರಹಿಲ್ಲ ಅಭಿಮಾನವು ಇಲ್ಲ 

AK Ramanujam ನವರ  Speaking of Shiva ಕೃತಿಯಲ್ಲಿ  ವಚನಗಾರರ  ನೂರಾರು ವಚನಗಳನ್ನು ಇಂಗ್ಲಿಷ್ ನಲ್ಲಿ ಭಾಷಾತರಿಸಿದ್ದಾರೆ.

—— ರಾಮಮೂರ್ತಿ, ಬೇಸಿಂಗ್ ಸ್ಟೋಕ್

                (ಚಿತ್ರಗಳು- ಗೂಗಲ್ ಕೃಪೆ)

ಮ್ಯಾಸಿಡೋನಿಯಾದ ಬಂದರು ಪಟ್ಟಣ- ಥೆಸ್ಸಲೋನಿಕಿ (Thessaloniki)

 

ಉಮಾ ಅನಿವಾಸಿಯ ಜೀವನಾಡಿ. ಪ್ರಪಂಚ ಸುತ್ತಿದ ಅನುಭವ ಅವರದು. ಹೊಸ ಜಾಗವನ್ನು ತಾವು ನೊಡಿದ್ದಲ್ಲದೇ, ಅನಿವಾಸಿಯ ಓದುಗರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿ ಉಣಿಸುವ ಜಾಯಮಾನ ಅವರದ್ದು. ಗ್ರೀಸ್ ದೇಶ ಇಂದಿನ ಜನಾಂಗಕ್ಕೆ ಸಮುದ್ರ ತಡಿಯ ಅನುಭವಕ್ಕೆ; ಸುತ್ತ ಹರಡಿರುವ ನೀಲ ಮೆಡಿಟರೇನಿಯನ್ ಸಮುದ್ರದಲ್ಲಿನ ದ್ವೀಪ ಸಮೂಹಗಳಿಗೆ ಪ್ರಸಿದ್ಧಿ. ನಮಗೆಲ್ಲ ಅಲೆಕ್ಸಾಂಡರ್, ಆರ್ಕಿಮಿಡಿಸ್ ಅವರಂಥ ವಿಶ್ವ ವಿಖ್ಯಾತ ವ್ಯಕ್ತಿಗಳಿಂದ ಪರಿಚಯ. ಸೂಕ್ತವಾಗಿ, ಚಕ್ರವರ್ತಿ ಅಲೆಕ್ಸಾಂಡರ್ ನ ಜನ್ಮಸ್ಥಳವನ್ನು ಸಂದರ್ಶಿಸಿ ಗತ ವೈಭವನ್ನು ಮೆಲಕು ಹಾಕುತ್ತ, ಸಧ್ಯದ ಪರಿಸ್ಥಿತಿಯನ್ನು ಈ ಲೇಖನದಲ್ಲಿ ಮನೋಜ್ಞವಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ…

ಅಲೆಕ್ಸಾಂಡರನ ಪ್ರತಿಮೆ
ಅಲೆಕ್ಸಾಂಡರನ ಪ್ರತಿಮೆ

ಅಲೆಕ್ಸಾಂಡರ್ ಚಕ್ರವರ್ತಿ ಅಲ್ಲೆಲ್ಲೋ ಬರುತ್ತಿದ್ದಾನಂತೆ ಎಂದು ಕೇಳಿದಾಕ್ಷಣವೇ, ನಮ್ಮಲ್ಲಿದ್ದ ರಾಜರು ಹೆದರಿ ಶರಣಾಗತರಾಗುತ್ತಿದ್ದರಂತೆ ಎಂದು ನಮ್ಮ ತಾಯಿ ಚಿಕ್ಕಂದಿನಲ್ಲಿ ನಮಗೆ ಹೇಳಿದ್ದ ಮಾತುಗಳು ಕಿವಿಯಲ್ಲೇ ಗುನುಗುತ್ತಿದೆಯೇನೋ ಅನ್ನಿಸುತ್ತದೆ. ಭಾರತದಲ್ಲಿದ್ದ ಎಲ್ಲಾ ರಾಜರೂ ಅವನಿಗೆ ಹೆದರಿ ತಲೆಬಗ್ಗಿಸಿದ್ದಾಗ, ನಮ್ಮಲ್ಲಿದ್ದ ಒಬ್ಬ ರಾಜ ಪೌರಸ್ ತನ್ನ ಆತ್ಮಾಭಿಮಾನದಿಂದಲೇ ಅವನನ್ನು ಗೆದ್ದಿದ್ದ ಪ್ರಸಂಗವನ್ನು ಕುರಿತಾಗಿ, ನಮ್ಮ ಕನ್ನಡ ಪಠ್ಯ ಪುಸ್ತಕದಲ್ಲಿ ನಮಗಿದ್ದ ಒಂದು ನಾಟಕದ ನೆನಪಾಗುತ್ತದೆ. ಪ್ರಪಂಚದ ಅತ್ಯಂತ ಮಹತ್ವಾಕಾಂಕ್ಷಿ ಸಾಮ್ರಾಟರಲ್ಲಿ ಒಬ್ಬನಾದ ಮಹಾನ್ ಗ್ರೀಕ್ ಯೋಧ ಅಲೆಕ್ಸಾಂಡರನ ಹೆಸರನ್ನು ಕೇಳದವರಾರು? ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿಯೇ ತಂದೆಯ ಕೊಲೆಯಾದನಂತರ, ಸಾಮ್ರಾಜ್ಯದ ಹೊಣೆಯನ್ನು ತನ್ನ ಕೈಗೆತ್ತಿಕೊಂಡ ಅವನ ಶೌರ್ಯಪರಾಕ್ರಮಗಳ ಬಗ್ಗೆ, ಅವನು ಭಾರತಕ್ಕೆ ದಂಡೆತ್ತಿ ಬಂದ ರೀತಿ ಎಲ್ಲವೂ ಒಂದು ಅದ್ಭುತವಾದ ಚಾರಿತ್ರಿಕ ಸಂಗತಿ.

 

ಈ ಪರಾಕ್ರಮಿಯ ಜನ್ಮಸ್ಥಾನವಾದ ಥೆಸ್ಸಲೋನಿಕಿ ಪಟ್ಟಣಕ್ಕೆ ಭೇಟಿ ನೀಡುವ ಅವಕಾಶವೊಂದು ಕಳೆದ ವಾರ ನನಗೆ ಲಭ್ಯವಾಯಿತು. Displaying DSC_0050.JPGಸಧ್ಯದಲ್ಲಿ ಜರ್ಮನಿಯ ರಾಜಧಾನಿ ಬರ್ಲಿನ್ನಿನಲ್ಲಿ ವಾಸ್ತವ್ಯ ಹೋಡಿರುವ ನಮಗೆ, ಇದೊಂದು ಅಪರೂಪವಾದ ಅವಕಾಶವೆನ್ನಿಸಿತ್ತು. ಸರಿ, ಬರ್ಲಿನ್ನಿನ ಶೋನೆಫ಼ೆಲ್ಡ್ ವಿಮಾನ ನಿಲ್ದಾಣದಿಂದ ಬಡ್ಜೆಟ್ ವಾಯುಯಾನ ಕಂಪನಿ ಈಸಿ-ಜೆಟ್ ವಿಮಾನದಲ್ಲಿ, ಸುಮಾರು ೨ ಗಂಟೆಗಳ ಸುಲಭವಾದ ಪ್ರಯಾಣದ ನಂತರ, ನಾವು ಥೆಸ್ಸಲೋನಿಕಿಯ ಮಾಕೆಡೋನಾ ವಿಮಾನ ನಿಲ್ದಾಣದಲ್ಲಿ ಇಳಿದೆವು. ಕ್ರಿ.ಪೂ. ೩೧೫ ಅಂದರೆ ಸುಮಾರು ೩,೩೩೦ ವರ್ಷಗಳ ಇತಿಹಾಸವಿರುವ, ಮ್ಯಾಸಿಡೋನಿಯಾ ಪ್ರಾಂತ್ಯದ ಈ ಪಟ್ಟಣವನ್ನು, ಸುಂದರವಾದ ಪರ್ವತ ಮಾಲೆಗಳು ಆಗ್ನೇಯ ದಿಕ್ಕಿನಲ್ಲಿ ಆವರಿಸಿದ್ದರೆ, ಇದರ ಪೂರ್ವಕ್ಕೆ ಏಜಿಯನ್ ಸಮುದ್ರವಿದೆ. ಮೌಂಟ್ ಒಲಿಂಪಸ್ ಪರ್ವತವೇ ಇಲ್ಲಿನ ಅತ್ಯಂತ ಎತ್ತರವಾದ ಶೃಂಗ. ವಿಮಾನ ನಿಲ್ದಾನದಿಂದ ಸುಮಾರು ೨೫ ನಿಮಿಷಗಳ ದೂರದಲ್ಲಿರುವ ಥೆಸ್ಸಲೋನಿಕಿ ಪಟ್ಟಣ, ಹತ್ತಿರವಾದಂತೆ ಅಲ್ಲಿನ ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ಕಠಿಣತೆಯನ್ನು ನಮಗೆ ಪರಿಚಯಿಸಿತು. ರಸ್ತೆಗಳ ಬದಿಯಲ್ಲಿ ಶೇಖರವಾಗಿದ್ದ ಕಸದ ಡಬ್ಬಗಳು, ಗೀರು-ಬರಹಗಳಿಂದ ತುಂಬಿ ಹೋದ ಗೋಡೆಗಳು, ಅವ್ಯವಸ್ಥೆಯ ವಾಹನಸಂದಣಿ, ಅಲ್ಲಲ್ಲೇ ಕಾಣಬರುವ ಬಡ ಭಿಕ್ಷುಕರು ಇದಕ್ಕೆ ಸಾಕ್ಷಿಯಾಗಿದ್ದವು. ಬಿಬಿಸಿ ಕೃಪೆಯಿಂದ ಗ್ರೀಕಿನ ಹಣಕಾಸಿನ ತೊಡಕಿನ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿರುವ ಕಾರಣ, ಈ ದೃಶ್ಯಗಳು ಆಘಾತಕಾರಿಯಾಗಿರಲಿಲ್ಲ.

 

ಥೆಸ್ಸಲೋನಿಕಿಯ ಉತ್ತಮ ಅಪಾರ್ಟಮೆಂಟ್ ಹೋಟೆಲಿನಲ್ಲಿ ತಂಗಿದ್ದ ನಮಗೆ, ಊಟ-ತಿಂಡಿಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಪ್ರಸಂಗ ಬರಲಿಲ್ಲ. ಮೆಡಿಟರೇನಿಯನ್ ರೀತಿಯ ಆಹಾರ ಸೇವನೆಯಿರುವ ಗ್ರೀಸಿನಲ್ಲಿ, ಉತ್ತಮ ಗುಣಮಟ್ಟದ ಸಸ್ಯಾಹಾರ ದೊರೆಯುತ್ತದೆ. ಹಣ್ಣಹಂಪಲು ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುವ ಈ ದೇಶದಲ್ಲಿ, ಸಸ್ಯಾಹಾರಿಗಳು ಯಾವ ತೊಂದರೆಯನ್ನೂ ಎದುರಿಸಬೇಕಿಲ್ಲ. ಎಲ್ಲೆಲ್ಲೂ ಕೆಂಪು ಬಿಳಿ ಕಣಿಗಿಲೆ ಗಿಡಗಳು ಹುಲುಸಾಗಿ ಬೆಳೆದು ನಿಂತ ಇಲ್ಲಿಯ ಉದ್ಯಾನವನಗಳು ಮತ್ತು ರಸ್ತೆಯ ಬದಿಗಳು ಕಣ್ಣನ್ನು ತಂಪುಗೊಳಿಸುತ್ತವೆ. ಪಟ್ಟಣದ ಒಂದು ಬದಿಗೆ ವಿಸ್ತಾರವಾಗಿ ಹರಡಿರುವ, ನಸುಹಸಿರು ಬಣ್ಣದ ಏಜಿಯನ್ ಸಮುದ್ರದ ಮುಂದೆ ನಡೆದಾಡುವ ಅನುಭವ ನಿಜಕ್ಕೂ ಆನಂದಮಯವೆನ್ನಿಸಿತು. ಈ ಸಮುದ್ರತಡಿಯ ಒಂದು ತುದಿಯಲ್ಲಿರುವ ಬಂದರಿನಿಂದ, ಮತ್ತೊಂದು ತುದಿಗೆ ಸುಮಾರು ೫ ಕಿಲೋಮೀಟರುಗಳ ದೂರವಿದೆ. ಥೆಸ್ಸಲೋನಿಕೆಯ ಉತ್ತಮ ಹೋಟೆಲುಗಳ ಸಾಲೇ ಇರುವ ಮತ್ತೊಂದು ಬದಿ, ಜನಗಳಿಂದ ತುಂಬಿ ಗಿಜಿಗುಟ್ಟುತ್ತಿರುತ್ತದೆ. ರಸ್ತೆಯ ಉದ್ದಕ್ಕೂ ತುಂಬಿರುವ ವಿವಿಧ ರೀತಿಯ ಉಪಹಾರಗೃಹಗಳಲ್ಲಿ ಕುಳಿತು ಹರಟೆಹೊಡೆಯುವ ಇಲ್ಲಿನ ಯುವಜನತೆಯ ಕೈಯಲ್ಲಿ, ಹೊಗೆಯಾಡುವ ಸಿಗರೇಟನ್ನು ನೋಡಿ ನನಗೆ ಸ್ವಲ್ಪ ನಿರಾಸೆಯೆನಿಸಿತು. ಗಂಡಸರಷ್ಟೇ ಸಂಖ್ಯೆಯ ಹೆಂಗಸರೂ ಕೂಡಾ ನಿರಾಳವಾಗಿ ಧೂಮಪಾನ ನಡೆಸಿದ್ದರು. ಬಹುಶಃ ಗ್ರೀಸಿನ ಜನತೆ ಮತ್ತು ಸರ್ಕಾರ ಸಾರ್ವಜನಿಕ ಧೂಮಪಾನದ ಹಾನಿಯ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

 

ಸಮುದ್ರದ ದಂಡೆಯ ಉದ್ದಕ್ಕೂ ನಡೆಯುತ್ತಾ ನಡೆದ ನನಗೆ, ಪಾದಚಾರಿಗಳ ಜೊತೆಗೆ ಸೈಕಲ್ ಸವಾರರ ದಂಡೇ ಇದ್ದದ್ದು ಕಂಡುಬಂತು. ಇತ್ತೀಚೆಗೆ ಯುರೋಪಿನ ದೇಶಗಳಲ್ಲಿ (ಅದರಲ್ಲೂ ಹಾಲೆಂಡ್ ಮತ್ತು ಜರ್ಮನಿ), ಸೈಕಲ್ ಸವಾರಿ ಬಹಳ ಜನಪ್ರಿಯವಾಗುತ್ತಿದೆ. ಉತ್ತಮ ದೇಹದಾರ್ಢ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಪರಿಸರವನ್ನೂ ಕಾಪಾಡಬಹುದಾದ ಇಲ್ಲಿನ ಜನಗಳ ಮನೋಭಾವ ನಿಜಕ್ಕೂ ಶ್ಲಾಘನೀಯ. ಈ ಚಾರಿತ್ರಿಕ ನಗರವು ನ್ಯಾಶನಲ್ ಜಿಯಾಗ್ರಫಿ ಮ್ಯಾಗಝೀನ್ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರವಾಸಿಗರ ಆಯ್ಕೆಯ ಅತ್ಯುತ್ತಮ ಪಟ್ಟಣಗಳಲ್ಲಿ ಒಂದು ಎಂದು ತಿಳಿದು ಬರುತ್ತದೆ. ಇದೇನೂ ಆಶ್ಚರ್ಯದ ವಿಷಯವಲ್ಲ. ಸುಮಾರು 2,500 ವರ್ಷಗಳ ಇತಿಹಾಸವಿರುವ ಈ ನಗರದಲ್ಲಿ, ರೋಮನ್, ಬೈಝಂಟೈನ್, ಆಟ್ಟೋಮಾನ್ ಸಾಮ್ರಾಜ್ಯದ ವೈಭವಗಳ ಗುರುತನ್ನು ಧಾರಾಳವಾಗಿ ಕಾಣಬಹುದು. ಈ ಸಾಮ್ರಾಜ್ಯಗಳ ಸಾರ್ವಭೌಮರು ನಿರ್ಮಿಸಿರುವ ಅದ್ಭುತ ಸ್ಮಾರಕಗಳು, ಇಂದಿಗೂ UNESCO ವಿಶ್ವ ಪರಂಪರೆಯ ತಾಣಗಳಾಗಿ ನಿಂತು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸಾರ್ವಭೌಮ ಅಲೆಕ್ಸಾಂಡರನ ಮಲಸಹೋದರಿ ಥೆಸ್ಸಲೋನಿಕೆಯ ಹೆಸರಿನಿಂದ ಕರೆಯಲ್ಪಡುವ ಈ ನಗರದ ಹೆಸರಿಗೆ, “ವಿಜಯ” ಎನ್ನುವ ಅರ್ಥವೂ ಇದೆ. ಭೂಗರ್ಭದ ನ್ಯೂನತೆಯ ರೇಖೆಯಲ್ಲಿರುವ ಈ ಪ್ರದೇಶ, ಭೂಕಂಪಗಳಿಂದ ಪೀಡಿತವಾಗಿದ್ದು, ಅದರ ಪರಿಣಾಮಗಳನ್ನು ಇಲ್ಲಿನ ಕಟ್ಟಡಗಳಲ್ಲಿ ಕಾಣಬಹುದು.

 

Displaying DSC_0034.JPGಸಮುದ್ರದ ದಂಡೆಯಲ್ಲಿ ನಡೆಯುತ್ತಾ ಸಾಗಿದ್ದ ನನಗೆ, ಇಲ್ಲಿನ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾದ White Tower, ಅಥವಾ ಶ್ವೇತ ಗೋಪುರ ಕಾಣಿಸಿತು. ೧೨ಯ ಶತಮಾನದಲ್ಲಿ, ಇಲ್ಲಿಯ ಬಂದರನ್ನು ಭದ್ರಪಡಿಸುವ ಉದ್ದೇಶದಿಂದ, ಆಟ್ಟೋಮಾನ್ ರಾಜರಿಂದ ನಿರ್ಮಿಸಲ್ಪಟ್ಟ ಈ ಗೋಪುರವು, ಮುಂದೆ ಒಂದು ಕುಖ್ಯಾತ ಸೆರೆಮನೆಯಾಯಿತಲ್ಲದೇ, ಆಟ್ಟೋಮಾನ್ ರಾಜರ ಸಮಯದಲ್ಲಿ ಸಾಮೂಹಿಕ ಹತ್ಯೆಗಳ ಸ್ಥಳವಾಗಿತ್ತು. ಸುಣ್ಣದ ಬಿಳಿಯ ಬಣ್ಣದಿಂದ ಬಳಿಯಲ್ಪಟ್ಟಿರುವ ಈ ಗೋಪುರವನ್ನು, ಇಂದು ಈ ಪಟ್ಟಣದ ಲಾಂಛನವನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಪ್ರವಾಸಿಗರಿಂದ ಕಿಕ್ಕಿರಿದಿದ್ದ ಇಲ್ಲಿ, ಹಲವು ಛಾಯಾಚಿತ್ರಗಳನ್ನು ಕ್ಲಿಕ್ಕಿಸಲು ಸ್ವಲ್ಪ ಪರದಾಡಬೇಕಾಯಿತು. ನಗರದ ಇನ್ನೂ ಹಲವಾರು ಸುಂದರ ಮತ್ತು ಭವ್ಯವಾದ ಕಟ್ಟಡಗಳನ್ನು ಇಲ್ಲಿಂದ ಕಾಣಬಹುದಾಗಿದೆ. ಅಲ್ಲಲ್ಲೇ ಇರುವ ಉದ್ಯಾನವನಗಳಲ್ಲಿ ಅರಳಿನಿಂತ ರೋಡೋಡೆಂಡ್ರಾನ್ ಪುಷ್ಪಗಳು, ಕಣ್ಸೂರೆಗೊಳ್ಳುವಂತಿದ್ದವು. ಹಕ್ಕಿಗಳ ಕಲರವ, ಅದರಲ್ಲೂ ಗಿಣಿಗಳ ಧ್ವನಿಕೇಳಿ, ನನ್ನೂರು ಮೈಸೂರಿನ ನೆನಪಾಯಿತು. ಸಮುದ್ರದಲ್ಲಿ ಸದ್ದಿಲ್ಲದೇ ಸಾಗಿದ್ದ ಹಲವಾರು ಹಡಗುಗಳು, ಎಲ್ಲರ ಗಮನವನ್ನೂ ಸೆಳೆದಿದ್ದವು. ಅಲ್ಲಿಂದ ಸ್ವಲ್ಪ ಮುಂದೆ ಸಾಗುತ್ತಾ ನಡೆದಾಗ ಮತ್ತೊಂದು ಪ್ರವಾಸಿಗರ ಆಕರ್ಷಣೆ ನನ್ನ ಕಣ್ಸೆಳೆಯಿತು. ಗ್ರೀಕ್ ಸಾರ್ವಭೌಮ, ಮಹಾನ್ ಯೋಧ ಅಲೆಕ್ಸಾಂಡರ್ ಚಕ್ರವರ್ತಿಯು, ಕುದುರೆಯ ಮೇಲೆ ಕುಳಿತ ಕರಿಶಿಲೆಯ ದೊಡ್ಡ ಪ್ರತಿಮೆಯನ್ನು ನೋಡಿ ನನ್ನ ಮನಸ್ಸು, ಈಗ ಕೆಲವು ವರ್ಷಗಳ ಹಿಂದೆ ನೋಡಿದ್ದ, ಅಲೆಕ್ಸಾಂಡರನ ಜೀವನವನ್ನು ಆಧಾರಿಸಿ ತೆಗೆದ ಹಾಲಿವುಡ್ಡಿನ ಚಲನಚಿತ್ರವನ್ನು ನೆನೆಯಿತು. ಮಹಾನ್ ದಾರ್ಶನಿಕ, ಚಿಂತಕ, ವಿಜ್ಞಾನಿ ಹೀಗೆ ಹಲವು ಹತ್ತು ವಿಷಯಗಳ ಮಹಾವಿದ್ವಾಂಸನಾಗಿದ್ದ ಅರಿಸ್ಟಾಟಲನಂತಹ ಮಹಾಮೇಧಾವಿಯ ಶಿಷ್ಯನಾದ ಈ ಚಕ್ರವರ್ತಿಯ ಜೀವನದ ಸಾಹಸಗಾಥೆ ನಿಜಕ್ಕೂ ಆಸಕ್ತಿಪೂರ್ಣ. ಒಬ್ಬ ಮಹತ್ವಾಕಾಂಕ್ಷಿಯಾಗಿದ್ದ ಈ ಚಕ್ರವರ್ತಿ, ಪ್ರಪಂಚದ ಚರಿತ್ರೆಯಲ್ಲಿ ಇಂತಹ ದೊಡ್ಡ ಸ್ಥಾನವನ್ನು ಗಳಿಸಿ, ಜನಗಳ ಮನದಲ್ಲಿ ಚಿರಂತನವಾಗಿ ನಿಲ್ಲುವಂತೆ ಮಾಡಿದ ಅವನ ಸಾಹಸಮಯ ಜೀವನ ಬಹುಶಃ ನಭೂತೋ ನಭವಿಷ್ಯತಿ ಎನ್ನುವಂತಿದೆ. ಆದರೆ ಇಂದು ಗ್ರೀಸ್ ದೇಶದಲ್ಲಿರುವ ನೂರಾರು ಸಮಸ್ಯೆಗಳು, ಅಲ್ಲಿನ ಯುವಜನತೆ ನಿರುದ್ಯೋಗವನ್ನು ಎದುರಿಸಿ ನಡೆಸುತ್ತಿರುವ ಹೋರಾಟ, ಇತರ ದೇಶಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿಯನ್ನು ನೋಡಿದರೆ, ಅವರಿಗೆ ಅಲೆಕ್ಸಾಂಡರನಂತಹ ಸಾಹಸ ಪುರುಷನ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲ ಎನ್ನಿಸುತ್ತದೆ. ಕೆಲವೊಮ್ಮೆ ಚರಿತ್ರೆಯ ಗತವೈಭವಗಳು, ಪ್ರಸಕ್ತ ಸಮಸ್ಯೆಗಳಿಗೆ ಯಾವ ಪರಿಹಾರವನ್ನೂ ಒದಗಿಸಲು ಅಸಮರ್ಥವಾಗುತ್ತವೆ.

 

Displaying DSC_0210.JPGನಗರದ ಮಧ್ಯಭಾಗವು ಸಾರ್ವಜನಿಕ ಕಚೇರಿಗಳ ಕಟ್ಟಡಗಳು, ಚಾರಿತ್ರಿಕ ಸ್ಥಳಗಳು, ಅಂಗಡಿಗಳು, ಮಾರುಕಟ್ಟೆಗಳು, ಚೌಕಗಳಿಂದ ತುಂಬಿದೆ. ಅರಿಸ್ಟಾಟಲನ ಹೆಸರಿನಿಂದ ಕರೆಯಲ್ಪಡುವ ಭಾರಿ ಚೌಕದ ಸುತ್ತಮುತ್ತಾ, ಭಾರಿ ಜನಸಂದಣಿಯಿದ್ದು, ನಗರದ ಜೀವಾಳವೇ ಇದಾಗಿದೆ. ಸಮುದ್ರದ ದಂಡೆಯಲ್ಲಿ ನಡೆದಿದ್ದಂತೆಯೇ, ಅಲ್ಲೇ ಇದ್ದ ಉಪಹಾರಗೃಹದೊಳಗಿದ್ದ ಚೆಲುವಾದ ಕೊಳದಲ್ಲಿ ಅರಳಿ ನಿಂತ ನೈದಿಲೆ ಪುಷ್ಪಗಳು ನನ್ನ ಕಣ್ಸೆಳೆದವು. ಹತ್ತಿರ ಹೋಗಿ ಅವುಗಳ ಚೆಲುವನ್ನು ಸವಿದು ಅವುಗಳ ಚಿತ್ರವನ್ನು ನನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸುತ್ತಿದ್ದಾಗ, “ನೀರಿಗೆ ನೈದಿಲೆ ಶೃಂಗಾರ” ಎನ್ನುವ ಬಸವಣ್ಣನವರ ವಚನದ ಸಾಲುಗಳಲ್ಲಿ ಎಂತಹ ಸತ್ಯವಿದೆ ಎಂದೆನಿಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲೇ ನಡೆದಾಡಿದ ನನ್ನ ಮನ, ಮರುದಿನ ನಾವು ಭೇಟಿ ನೀಡಲಿದ್ದ ಮತ್ತೊಂದು ಚಾರಿತ್ರಿಕ ಸ್ಥಳದ ಬಗ್ಗೆ ಯೋಚಿಸುತ್ತಿತ್ತು.

 

Sikandar, 1941, Sohrab Modi.jpgಮರುದಿನ ಥೆಸ್ಸಲೋನಿಕಿಯ ಅರಿಸ್ಟಾಟಲ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದವರು, ಅಲೆಕ್ಸಾಂಡರ್ ಚಕ್ರವರ್ತಿಯ ತಂದೆ ಎರಡನೆಯ ಫಿಲಿಪ್, ಮತ್ತು ಅಲೆಕ್ಸಾಂಡರನ ಮಗನ ಸಮಾಧಿಗಳಿರುವ, ಒಂದು ಪ್ರಸಿದ್ಧ ಪುರಾತತ್ವದ ಸ್ಥಳಕ್ಕೆ ಸಣ್ಣ ಪ್ರವಾಸವನ್ನೇರ್ಪಡಿಸಿದ್ದರು. Vergina the Archaeological Site of Aigai, ಎಂಬ ಹೆಸರಿನ ಈ ಜಾಗವು UNESCO ಜಾಗತಿಕ ಪರಂಪರೆಯ ಒಂದು ತಾಣವಾಗಿದ್ದು, ಇದು ಥೆಸ್ಸಲೋನಿಕಿಯಿಂದ ಸುಮಾರು ೯೦ ಕಿಲೋಮಿಟರುಗಳ ದೂರದಲ್ಲಿದೆ. ಕ್ರಿ.ಪೂ. ೧೧ನೆಯ ಶತಮಾನದ ರಾಜಮನೆತನದ ಸಮಾಧಿಗಳನ್ನು ಹೊಂದಿರುವ ಈ ಸ್ಥಳವು, ಯೂರೋಪಿಯನ್ ನಾಗರೀಕತೆಯ ಬೆಳವಣಿಗೆಗೆ ಒಂದು ಅಸಾಧಾರಣ ಪುರಾವೆಯಾಗಿದ್ದು, ಶಾಸ್ತ್ರೀಯ ನಗರಸ್ಥಿತಿಯಿಂದ, ಸಾಮ್ರಾಜ್ಯಶಾಹಿ ರಚನೆಗಳಾದ ರೋಮನ್ ಅವಧಿಗಳಿಗೆ ಪರಿವರ್ತಿತವಾದ ಸಮಯವನ್ನು ಪ್ರತಿನಿಧಿಸುವ ಒಂದು ಮಹೋನ್ನತ ಸಾರ್ವತ್ರಿಕ ಮೌಲ್ಯದ ಸ್ಥಳವಾಗಿದೆ. ವೆರ್ಗೀನಾ ಎಂಬ ಆಧುನಿಕ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು, ೧೯೭೭ರಲ್ಲಿDisplaying DSC_0035.JPG ಸಾರ್ವಭೌಮ ಅಲೆಕ್ಸಾಂಡರನ ತಂದೆ, ಮ್ಯಾಸಿಡೋನಿಯಾದ ಫಿಲಿಪನ ಸಮಾಧಿಯನ್ನು ಅನ್ವೇಷಿಸಿದಾಗ ಪ್ರಸಿದ್ಧಿಯಾಯಿತು. ಈ ಸಮಾಧಿಯಿರುವ ದಿಬ್ಬವು ಹೊರಗಿನಿಂದ ಆಕರ್ಷಕವೆನಿಸದಿದ್ದರೂ, ಒಮ್ಮೆ ಒಳಹೊಕ್ಕು ನೋಡಿದಾಗ, ಮೋಡಿಮಾಡುತ್ತದೆ. ೧೯೩೭ರಲ್ಲಿ ಪ್ರಾರಂಭವಾದ ಇಲ್ಲಿನ ಉತ್ಖನನಗಳು, ೧೯೭೭ರಲ್ಲಿ ಫಿಲಿಪ್ ಮತ್ತು ಅವನ ಮೊಮ್ಮಗನ ಸಮಾಧಿಗಳನ್ನು ಹೊರತೆಗೆದಾಗ ಪ್ರಸಿದ್ಧಿಯಾದವು. ಕ್ರಿ.ಪೂ ೩೩೬ ಅಕ್ಟೋಬರ್ ತಿಂಗಳಲ್ಲಿ, ನಾಟಕಮಂದಿರದಲ್ಲಿ, ತನ್ನ ರಕ್ಷಣಾದಳದ ಸಿಪಾಯಿಯ ಕೈಯಲ್ಲೇ ಹತನಾದ ಫಿಲಿಪ್, ಒಳಗಿನ ಪಿತೂರಿಗೆ ಬಲಿಯಾಗಿದ್ದನೆಂದು ತಿಳಿದುಬರುತ್ತದೆ.ಈ ರಾಜಸಮಾಧಿಗಳ ಕೋಣೆಗಳಲ್ಲಿ ಕಂಡುಬಂದಿರುವ ವಸ್ತುಗಳು, ನೋಡುಗರನ್ನು ಮತ್ತೊಂದು ಲೋಕ ಮತ್ತು ಸಮಯಕ್ಕೆ ಕೊಂಡೊಯ್ಯುತ್ತವೆ. ರಾಜನ ಉಡುಪುಗಳು, ಚಿನ್ನಾಭರಣಗಳು, ಪಾತ್ರೆಪರಟಿಗಳು, ವರ್ಣರಂಜಿತ ಗಿಲಾವುಗಳು (Frescos), ದಂತದ ಸಾಮಾನುಗಳು, ಯುದ್ಧದ ಪರಿಕರಗಳು, ಅಂದಿನ ನಾಗರೀಕತೆಯ ಉತ್ಕೃಷ್ಟತೆಯನ್ನು ಎತ್ತಿಹಿಡಿಯುತ್ತವೆ. ಈ ಸಮಾಧಿಗಳ ಒಳಗೆ ಛಾಯಾಚಿತ್ರಗಳನ್ನು ತೆಗೆಯಲು ಅನುಮತಿಯಿಲ್ಲ. ಆದರೂ ಸಹಾ, ನಮ್ಮ ಕಣ್ಣುಗಳು ಸೆರೆಹಿಡಿದ ಚಿತ್ರಗಳನ್ನು, ನಮ್ಮ ಮನ ಶಾಶ್ವತವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಯಿತು ಎನ್ನುವುದರಲ್ಲಿ ಸಂದೇಹವೇ ಇಲ್ಲ. ನಮ್ಮೊಡನಿದ್ದ ಮಾರ್ಗದರ್ಶಿ ಈ ಸ್ಥಳದ ಬಗ್ಗೆ ಎಲ್ಲಾ ವಿಷಯಗಳನ್ನು ಬಹಳ ವಿವರವಾಗಿ, ನಿರರ್ಗಳವಾಗಿ ಹೇಳುತ್ತಿದ್ದ ರೀತಿ ನಮ್ಮನ್ನೆಲ್ಲಾ ಗ್ರೀಸ್ ಚರಿತ್ರೆಯನ್ನು ಮತ್ತೊಮ್ಮೆ ಓದಿ ನೋಡಲು ಪ್ರೇರೇಪಿಸಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಲೇ ಬೇಕಾಗಿಲ್ಲ. ಕೊನೆಯಲ್ಲಿ ಆಕೆ ಅಲ್ಲಿನ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಂಶೋಧಕಿ ಎಂದು ತಿಳಿದು ಬಂದಾಗ, ಆಕೆಯ ಜ್ಞಾನದ ಬಗ್ಗೆ ನಮ್ಮ ಗೌರವ ಇಮ್ಮಡಿಯಾಯಿತು.

 

ಮಾರನೆಯ ದಿನ ಅಲ್ಲಿನ ಸ್ಥಳಿಯ ರೆಸ್ಟೋರೆಂಟ್ ಒಂದರಲ್ಲಿ ಮದ್ಯಾನ್ಹದ ಭೋಜನ ಮಾಡಿ, ಸ್ಥಳೀಯ ಖಾದ್ಯಗಳ (ಸಸ್ಯಾಹಾರ) ಸವಿಯನ್ನೂ ಸವಿದೆವು. ಆಲೀವ್ ಎಣ್ಣೆಯಲ್ಲಿ ಹುರಿದ ತರಕಾರಿಗಳು, ಬೇಯಿಸಿದ ಕಾಳಿನ ಜೊತೆಗೆ ಸೇರಿಸಿದ ಅನ್ನ, ಸೊಪ್ಪು, ಹೀಗೆ ಹಲವಾರು ವಿಧದ ಸ್ವಾದಿಷ್ಟವಾದ ಭೋಜನ ನಮ್ಮ ಮನಸ್ಸನ್ನು, ಹೊಟ್ಟೆಯನ್ನು ಸಂತೃಪ್ತಿಗೊಳಿಸಿತು. ಹೀಗೆ ಸಂಸ್ಕೃತಿ, ಪರಂಪರೆ, ಇತಿಹಾಸದ ವೈಭವ ಮತ್ತು ಆಧುನಿಕತೆಯ ಪರಿಪೂರ್ಣ ಮೌಲ್ಯಗಳಿಂದ ಕೂಡಿದ ಥೆಸ್ಸಲೋನಿಕಿಯ ಹಿರಿಮೆ, ಗ್ರೀಸಿನ ಮತ್ತೊಂದು ಶ್ರೇಷ್ಠ ನಗರ ಅಥೆನ್ಸಿನ ವೈಭವಕ್ಕೆ ಸರಿಸಾಟಿಯಿಲ್ಲದಿದ್ದರೂ, ಪ್ರಚಂಡ ಇತಿಹಾಸ, ಹಾಗೂ ವಿಶೇಷ ಲಕ್ಷಣಗಳಿಂದ ತನ್ನದೇ ಆದ ಸೌಂಧರ್ಯ ಮತ್ತು ಸೊಬಗನ್ನು ಹೊಂದಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

-ಉಮಾ ವೆಂಕಟೇಶ್