ವಾಂಝಿ ಸುಂದರಿಯ ಕುರೂಪ ಚರಿತೆ

ಎರಡನೇ ಮಹಾಯುದ್ಧದ ಕಾಲದಲ್ಲಿ ನಡೆದ ಯಹೂದಿಗಳ ಸಾಮೂಹಿಕ ಹತ್ಯೆ ಚರಿತ್ರೆಯ ಕರಾಳ ಕಾರ್ಯ. ಈ ಹೀನ ಕಾರ್ಯದ ಪ್ರಭಾವ ಇಂದಿಗೂ ಜಗತ್ತಿನ ಎಲ್ಲೆಡೆಯಲ್ಲಿ ಮಾರ್ದನಿಗೊಳ್ಳುತ್ತಿದೆ. ಅರ್ಧ ಶತಮಾನಕ್ಕೂ ಹಿಂದೆ ನಡೆದ ನರಮೇಧಕ್ಕೆ ಜರ್ಮನಿ ಬೆಲೆತೆರುವುದಕ್ಕೆ  ಕೊನೆಯಿಲ್ಲವೇನೋ! ಜನಾಂಗ ಹತ್ಯೆಯ ಕೇಂಬಿಂದುವಾಗಿದ್ದ ಸ್ಥಳವನ್ನು ಸಂದರ್ಶಿಸಿ, ಆ ಅನುಭವವನ್ನು, ಅಲ್ಲಿ ನೋಡಿದ ದೃಶ್ಯಗಳ ಪರಿಣಾಮವನ್ನು ನಮ್ಮ ಮುಂದೆ ಹರಡಿಟ್ಟಿದ್ದಾರೆ ಉಮಾ ವೆಂಕಟೇಶ್…

DSC_0059

  1914 ರಿಂದ 1918ರವರೆಗೆ ನಡೆದ ಮಹಾಯುದ್ಧದದಲ್ಲಿ ಅನುಭವಿಸಿದ ಸೋಲಿನ ಅವಮಾನದಲ್ಲಿ ಬೇಯುತ್ತಿದ್ದ ಜರ್ಮನಿಯನ್ನು, ಮತ್ತೊಮ್ಮೆ ತನ್ನ ಉತ್ಸಾಹ ಮತ್ತು ಪ್ರೇರಣೆಗಳಿಂದ ಮೇಲೆತ್ತಿ, ಯೂರೋಪನ್ನು ಮತ್ತೊಂದು ಮಹಾಯುದ್ಧಕ್ಕೆ ತಳ್ಳಿ, ಜಗತ್ತನ್ನೇ ತಲ್ಲಣಗೊಳಿಸಿದ ರಾಕ್ಷಸೀ ಪ್ರವೃತ್ತಿಯ ಅಡಾಲ್ಫ ಹಿಟ್ಲರನನ್ನು ಪ್ರಪಂಚ ಮರೆಯಲಾದೀತೇ? 1939ರಿಂದ 1945ರವರೆಗೆ ನಡೆದ ಎರಡನೆಯ ಮಹಾಯುದ್ಧಕ್ಕೆ ಮುನ್ನಾ, ಸುಮಾರು ಹತ್ತು ಮಿಲಿಯನ್ ಸಂಖ್ಯೆಯ ಯೂರೋಪಿನ ಯಹೂದಿಗಳ ನರಹತ್ಯೆಗೈದ ಕರಾಳ ದಿನಗಳು ಈಗಲೂ ಚರಿತ್ರೆಯ ಅತ್ಯಂತ ದುಃಖಕರ ಅಧ್ಯಾಯಗಳೆನ್ನಬಹುದು. ಇದಕ್ಕೆ ಕಾರಣರಾದ ಹಿಟ್ಲರನ ಆಡಳಿತ ಪಕ್ಷದ ಉನ್ನತಾಧಿಕಾರಿಗಳ ಪಡೆ SS ತಮ್ಮ ನರಹತ್ಯೆಯ ಚಟುವಟಿಕೆಗಳ ಪ್ರಗತಿಯನ್ನು ಚರ್ಚಿಸಲು ಆಗಾಗ ಸಭೆ ಸೇರುತ್ತಿದ್ದರಂತೆ. ಅದಕ್ಕಾಗಿ ರಾಜಧಾನಿ ಬರ್ಲಿನ್ನಿನಲ್ಲಿ ಒಂದು ನಿಗದಿತ ಸ್ಥಳದಲ್ಲಿ ಭೇಟಿಯಾಗುತ್ತಿದ್ದರಂತೆ. ಸಧ್ಯದಲ್ಲಿ ಬರ್ಲಿನ್ನಿನಲ್ಲಿ ವಾಸ್ತವ್ಯ ಹೂಡಿರುವ ನಮಗೆ, ಈ ಅಧಿವೇಶನಗಳು ನಡೆಯುತ್ತಿದ್ದ ಭವನವನ್ನು ನೋಡುವ ಸುವರ್ಣಾವಕಾಶ ದೊರೆಯಿತು. ಬರ್ಲಿನ್ ಎರಡನೆಯ ಮಹಾಯುದ್ಧದಲ್ಲಿ ಬಹುತೇಕವಾಗಿ ಬಾಂಬ್ ದಾಳಿಯಲ್ಲಿ ನಷ್ಟಗೊಂಡಿತ್ತು. ಯುದ್ಧಾನಂತರ ಒಕ್ಕೂಟ ಪಡೆಗಳು ಅದರಲ್ಲೂ ಅಮೆರಿಕಾ ಮತ್ತು ರಷ್ಯಾದ ಸೇನಾ ಪಡೆಗಳು ಜರ್ಮನಿಯ ಪೂರ್ವ ಮತ್ತು ಪಶ್ಚಿಮ ಭಾಗವನ್ನು ಸ್ವತಂತ್ರವಾಗಿ ಕಟ್ಟಿ ಬೆಳೆಸಿದ ಸಂಗತಿಯೂ ಸರ್ವಜನವಿದಿತವಾದ ವಿಷಯ. ಸಧ್ಯದಲ್ಲಿ ಬರ್ಲಿನ್ನಿನ ನೈಋತ್ಯ ದಿಕ್ಕಿನಲ್ಲಿರುವ ಪಾಟ್ಸಡಾಮಿನಲ್ಲಿ ನಮ್ಮ ಮನೆಯಿಂದ ಸುಮಾರು ೫ ಮೈಲಿಗಳ ದೂರದಲ್ಲಿರುವ ವಾಂಝಿ ಸರೋವರವನ್ನು ಸಂದರ್ಶಿಸುವುದು ನಮ್ಮ ಉದ್ದೇಶವಾಗಿತ್ತು. ಬರ್ಲಿನ್ ನಗರ ಮತ್ತು ಆಸುಪಾಸಿನಲ್ಲಿ ಮನೋಹರವಾದ ಸರೋವರಗಳಿದ್ದು, ಅವುಗಳ ಸುತ್ತುಮುತ್ತಲಿನ ಹಸಿರು ಕಾಡು ಮತ್ತು ಉದ್ಯಾನವನಗಳು ನಯನಮನೋಹರವಾಗಿವೆ. ವಾಂಝಿಯ ಸರೋವರವೂ ಅಂತಹ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದೆನ್ನಬಹುದು. ಇಲ್ಲ ಸರೋವರದ ಸುತ್ತಾ ನಡೆದಾಡಬಹುದಲ್ಲದೇ, ದೋಣಿವಿಹಾರದ ಸೌಲಭ್ಯವೂ ಇದ್ದು, ಪ್ರವಾಸಿಗರಿಗೆ ಅರ್ಧದಿನವನ್ನು ಕಳೆಯುವ ಎಲ್ಲಾ ಅವಕಾಶಗಳು ಇದೆ. ವಾಂಝಿಯ ಸರೋವರದಲ್ಲಿ ದೋಣಿವಿಹಾರ ಕೈಗೊಳ್ಳುವ ಉದ್ದೇಶದಿಂದ ಅತ್ತ ನಡೆದಿದ್ದ ನಮಗೆ, ನಮ್ಮ ಜೊತೆಯಲ್ಲಿದ್ದ ಸ್ನೇಹಿತರೊಬ್ಬರು ಅಲ್ಲೇ ಇರುವ ಈ ಚಾರಿತ್ರಿಕ ಭವನವನ್ನು ನೆನಪಿಸಿದರು. ಸರಿ ಮೊದಲು ಅಲ್ಲಿಗೆ ಭೇಟಿ ನೀಡಿ, ನಂತರ ಮುಂದೆ ದೋಣಿವಿಹಾರ ಮಾಡಿದರಾಯ್ತೆಂದು, ಆ ಭವನದೆಡೆಗೆ ಹೆಜ್ಜೆ ಹಾಕಿದೆವು. ಜೂನ್ ತಿಂಗಳ ಸೌಮ್ಯವಾದ ಬಿಸಿಲು ಮತ್ತು ತಂಪಾಗಿ ಸರೋವರದ ಮೇಲಿಂದ ಬೀಸಿ ಬರುತ್ತಿದ್ದ ತಂಗಾಳಿಯಲ್ಲಿ ನಡೆದಾಡುವುದು ಹಿತವಾಗಿತ್ತು.   ಎರಡನೆಯ ಮಹಾಯುದ್ಧದ ನಂತರ, ಬರ್ಲಿನ್ ಯುದ್ಧದಲ್ಲಿ ಪೂರ್ಣವಾಗಿ ನಷ್ಟಹೊಂದಿತ್ತು ಎನ್ನುವುದನ್ನು ನಂಬಲು ಅಸಾಧ್ಯವೆಂಬಂತಿರುವ ಇಂದಿನ ಬರ್ಲಿನ್ ನಗರದ ವ್ಯವಸ್ಥೆ, ಅಲ್ಲಿನ ಅಚ್ಚುಕಟ್ಟು, ವಿಶಾಲವಾದ ಸ್ವಚ್ಛ ರಸ್ತೆಗಳು ಪ್ರವಾಸಿಗನನ್ನು ನಿಜಕ್ಕೂ ಗೊಂದಲಕ್ಕೀಡಾಗಿಸುತ್ತವೆ. ಭವನವಿರುವ ರಸ್ತೆಯಲ್ಲಿ ನಡೆಯುತ್ತಾ ಅಕ್ಕಪಕ್ಕ ನೆರೆಹೊರೆಯನ್ನು ನೋಡಿದಾಗ, ಅದೊಂದು ಶ್ರೀಮಂತರ ಮತ್ತು ಮೇಲ್ಮಟ್ಟದ ಮಧ್ಯಮವರ್ಗದ ಬಡಾವಣೆಯೆಂದು ಕಂಡುಬಂತು. ಈಗ ಸುಮಾರು ನೂರು ವರ್ಷಗಳ ಹಿಂದೆ ಕಟ್ಟಿರಬಹುದಾದ ಭವ್ಯವಾದ, ಸಣ್ಣ ಅರಮನೆಯಂತಹ ಮನೆಗಳು, ಕೆಲವಂತೂ ಡಿಸ್ನಿಲ್ಯಾಂಡಿನಲ್ಲಿರುವ Sleeping Beauty ದುರ್ಗವನ್ನು ನೆನಪಿಸುವಂತಿದ್ದು, ಆ ಭವನಗಳ ಸುತ್ತಮುತ್ತಲಿದ್ದ ಸೊಗಸಾದ ಉದ್ಯಾನವನಗಳನ್ನು ಕಂಡು ಸೋಜಿಗವೆನಿಸಿತು.

CC - The Wannsee house
CC – The Wannsee house

ಕಡೆಗೊಮ್ಮೆ ವಾಂಝಿ ಭವನದ (House Of Wannsee) ಮುಂದೆ ನಿಂತಾಗ ಅದರ ಸುಂದರತೆಗೆ ಮನಸೋತಿತು. ಆದರೆ ಜೊತೆಯಲ್ಲೇ, ಇಂತಹ ಮನೋಹರವಾದ ಸ್ಥಳದಲ್ಲಿ, ಜಗತ್ತಿನ ಅತ್ಯಂತ ಹೇಯ ಕೃತ್ಯವೊಂದರ ಬೆಳವಣಿಗೆ ಮತ್ತು ಅಭಿವೃದ್ಧಿಗಳನ್ನು ಚರ್ಚಿಸಲಾಗುತ್ತಿತ್ತು ಎಂದು ತಿಳಿದಾಗ ಮನ ನೊಂದಿತು. ವಾಂಝಿ ಸರೋವರದ ಸುತ್ತಲೂ ಇರುವ ಈ ಪ್ರದೇಶ, ಇಂದು ಬರ್ಲಿನ್ನಿನ ಅತ್ಯಂತ ಶ್ರೀಮಂತ ಬಡಾವಣೆಗಳಲ್ಲಿ ಒಂದು. ಈ ಭವ್ಯವಾದ ಕಟ್ಟಡವನ್ನು 1915ರಲ್ಲಿ ಕಟ್ಟಲಾಗಿದ್ದು, ಅದು ಅಂದಿನ ಶ್ರೀಮಂತ ಉದ್ಯಮಿಯೊಬ್ಬನ ವಿಲ್ಲಾ ಆಗಿತ್ತಂತೆ. ಅದನ್ನೇ 1941ರಿಂದ, 1945ರವರೆಗೆ, ಹಿಟ್ಲರನ SS ಪಡೆಯ ಉನ್ನತಾಧಿಕಾರಿಗಳು, ತಮ್ಮ ಸಭೆಗಳಿಗಾಗಿ ಉಪಯೋಗಿಸುತ್ತಿದ್ದರು ಎಂದು ತಿಳಿದುಬರುತ್ತದೆ. ಇಲ್ಲಿ ಅವರು ಯೂರೋಪಿಯನ್ ಯಹೂದ್ಯರ ಗಡೀಪಾರು ಹಾಗೂ ಕಗ್ಗೊಲೆಯ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದರು. ಯಹೂದ್ಯರನ್ನು ಕೊಲೆಗಯ್ಯುವ ಬಗ್ಗೆ ನಡೆಸುವ ವಿಶೇಷ ಪ್ರಚಾರ, ಮತ್ತು ಅವರನ್ನು ಹತ್ಯೆಗೈಯ್ಯುವ ವಿವಿಧ ವಿಧಾನಗಳ ಬಗ್ಗೆ ಪ್ರತಿನಿಧಿಗಳು ತಮ್ಮ ವರದಿಯನ್ನು  ಸಲ್ಲಿಸುತ್ತಿದ್ದರು.   ಭವನದ ಮುಂದೆ ಇರುವ ಫಲಕದಲ್ಲಿ, House of The Wannsee Conference, Memorial and Educational Trust ಎಂಬ ಬರಹವಿದೆ. ಭವನದ ಮುಂದಿನ ವಿಶಾಲ ಉದ್ಯಾನ ಮತ್ತು ನೀರಿನ ಚಿಲುಮೆಗಳು, ಗತಕಾಲದ ವೈಭವವನ್ನು ತಿಳಿಸುತ್ತದೆ. ಸುಂದರವಾದ ರೋಡೋಡೆಂಡ್ರಾನ್ ಪುಷ್ಪಗಳು, ಹೂಗಳಿಂದ ನಳನಳಿಸುವ ಗುಲಾಬಿ ಗಿಡಗಳು ನಮ್ಮನ್ನು ಸ್ವಾಗತಿಸಿತು. ಪ್ರವೇಶ ದರವಿರದೆ ಉಚಿತವಾಗಿ ಸಂದರ್ಶಿಸಬಹುದಾದ ಈ ಸ್ಥಳದಲ್ಲಿ, ಭಾನುವಾರದಂದು ಜನಸಂದಣಿ ಅಷ್ಟಿರಲಿಲ್ಲ! ಇನ್ನೂ ಪ್ರವಾಸಿಗರ ಋತುಮಾನ ಪ್ರಾರಂಭವಾಗಿಲ್ಲ ಎಂದನಿಸಿತು. ಎರಡು ಅಂತಸ್ತುಗಳ ಈ ಭವನದಲ್ಲಿ, ಮೊದಲ ಹಂತದಲ್ಲಿ ಅಂದಿನ ಯಹೂದ್ಯರ ಸಮುದಾಯ, ಅವರ ಪ್ರಗತಿ, ಅವರ ಸಂಸ್ಕೃತಿಗಳು, ಹಾಗೂ ಅಂದಿನ ಜರ್ಮನಿಯ ಸಮಾಜದಲ್ಲಿ ಅವರಿಗಿದ್ದ ಸ್ಥಾನಮಾನಗಳನ್ನು ಪರಿಚಯಿಸುವ ಅನೇಕ ಛಾಯಾಚಿತ್ರಗಳಿವೆ. ಅವುಗಳನ್ನು ನೋಡುತ್ತಿದ್ದಂತೆಯೇ, ಅವರ ಕುಟುಂಬಗಳನ್ನು ಛಿದ್ರಿಸಿದ ಜರ್ಮನ್ ಪಡೆಗಳ ಹೇಯಕೃತ್ಯಗಳು, ಹಾಗೂ ಆ ಕೃತ್ಯದಲ್ಲಿ ನಾಶವಾದ ಅವರ ಕುಟುಂಬ, ಅದರಲ್ಲಿ ಹಾಗೂ ಹೀಗೂ ಬದುಕುಳಿದ ಬೆರಳೆನಿಸುವಷ್ಟು ಸದಸ್ಯರ ಇಂದಿನ ಜೀವನದ ಬಗ್ಗೆಯೂ ಮಾಹಿತಿಗಳಿವೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಅಂದಿನ ಜರ್ಮನ್ ಸಮಾಜದ ಪ್ರಮುಖ ಬುದ್ಧಿಜೀವಿಗಳೂ ಕೂಡಾ, ಯಹೂದ್ಯರ ಬಗ್ಗೆ ಎಷ್ಟು ಹೇಯವಾಗಿ ಯೋಚಿಸುತ್ತಿದ್ದರು ಎನ್ನುವುದು, ಅಲ್ಲಿ ಪ್ರದರ್ಶನಕ್ಕಿಟ್ಟಿರುವ ಅವರ ಕಾಗದಗಳು ಮತ್ತು ಲೇಖನಗಳ ತುಣುಕುಗಳಿಂದ ತಿಳಿದುಬರುತ್ತದೆ. ಅಂದಿನ ಜರ್ಮನ್ ಇತಿಹಾಸಕಾರನೊಬ್ಬ (ನನಗೆ ಅವನ ಹೆಸರು ನನಪಾಗುತ್ತಿಲ್ಲ) “ಯಹೂದ್ಯರು ಜರ್ಮನಿ ದೇಶದಲ್ಲಿ ವಾಸವಾಗಿರಬೇಕಾದರೆ, ಅವರು ಜರ್ಮನ್ನರಂತೇ ಜೀವಿಸಬೇಕು. ಅವರ ನಡೆನುಡಿಗಳು ಜರ್ಮನ್ನರಂತೆಯೇ ಇರಬೇಕು. ಇಲ್ಲದಿದ್ದರೆ ಅವರು ನಮ್ಮ ಸಮಾಜದ ಮುಖ್ಯ ಅಂಗವಾಗಲು ಸಾಧ್ಯವಿಲ್ಲ. ಅವರು ಹಾಗೆ ಮಾಡದಿದ್ದಲ್ಲಿ ನಮ್ಮಲ್ಲಿ ಒಬ್ಬರಾಗುವುದು ಹೇಗೆ? ಆದ್ದರಿಂದ ಅವರು ನಮ್ಮ ಜರ್ಮನ್ ಸಮಾಜದಲ್ಲಿ ಹುಣ್ಣುಗಳಿದ್ದಂತೆ. ನಮಗೆ ಒಂದು ರೀತಿಯ ಶಾಪವಿದ್ದಂತೆ. ಅವರು ಈ ದೇಶದಲ್ಲಿರಕೂಡದು” ಎಂದು ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ. ಕೇವಲ ಹಿಟ್ಲರನ ಪಡೆಗಳು ಮತ್ತು ಆಡಳಿತವರ್ಗವೇ ಅಲ್ಲಾ, ಅಲ್ಲಿನ ಸಮಾಜದ ಇತರ ವರ್ಗದವರೂ ಅವರನ್ನು ದ್ವೇಷಿಸುತ್ತಿದ್ದರು ಎಂದು ತಿಳಿದುಬರುತ್ತದೆ.   ಇಲ್ಲಿ ಸಂಗ್ರಹಿಸಿರುವ ಅನೇಕ ದಾಖಲೆಗಳಲ್ಲಿ, ಹಿಟ್ಲರನ ಆಡ್ ಳಿತದವರು, ಅವನ ಮುಖ್ಯ ಅಧಿಕಾರಿಗಳು (ಈ ಅಧಿಕಾರಿಗಳಲ್ಲಿ, ಹಿಮ್ಲರ್, ಗೋಯ್ಥ್, ಗೋಬ್ಬೆಲ್, ಅಡಾಲ್ಫ್ ಐಖ್ ಇನ್ನೂ ಹಲವರು ಮುಖ್ಯರು) ನಡೆಸಿದ ಪತ್ರವ್ಯವಹಾರದ ದಾಖಲೆಗಳನ್ನು ಮೂಲರೂಪದಲ್ಲಿ ನೋಡಿ ಓದಬಹುದು. ಕ್ರಮವಿಹಿತ ನಡುವಳಿಕೆಗಳ ದಾಖಲೆಗಳು (Wannsee Protocol Documents) ಎಂದು ಕರೆಯಲಾಗುವ ಈ ಪತ್ರಗಳನ್ನು ಓದಿದಾಗ, ಯೂರೋಪಿಯನ್ ಯಹೂದ್ಯರ ಸಾಮೂಹಿಕ ಹತ್ಯೆಯ ಪಿತೂರಿ, ಮತ್ತು ಅದರಲ್ಲಿ ಜರ್ಮನ್ ಸಾರ್ವಜನಿಕ ಆಡಳಿತದವರು ಸಕ್ರಿಯವಾಗಿ ಭಾಗಿಯಾಗಿದ್ದರು ಎಂಬ ವಿಷಯ ತಿಳಿದುಬರುತ್ತದೆ. ಈ ಭವನದ ಶಾಶ್ವತ ಪ್ರದರ್ಶನದಂತೆ ಇಟ್ಟಿರುವ ದಾಖಲೆಗಳನ್ನು “ವಾಂಝಿ ಸಮ್ಮೇಳನ, ಹಾಗೂ ಯೂರೋಪಿಯನ್ ಯಹೂದ್ಯರ ನರಹತ್ಯೆ” ಎಂಬ ಶೀರ್ಷಿಕೆಯ ದಾಖಲೆಗಳೆಂದು ಕರೆದಿದ್ದಾರೆ. 20ನೆಯ ಜನವರಿ, 1942ರಂದು ನಡೆದ ಈ ಸಮ್ಮೇಳನವನ್ನು, ಈ ಭವನದ ಭೋಜನಶಾಲೆಯಲ್ಲಿ ನಡೆಸಲಾಗಿತ್ತು.Dsc_0056 reduced ಯುದ್ಧಾನಂತರ ಈ ಸ್ಥಳವನ್ನು ಒಕ್ಕೂಟದ ಸೇನೆಯವರು ಬಳಸುತ್ತಿದ್ದರು. ನಂತರ ಇದನ್ನು ವಯಸ್ಕರ ಶಿಕ್ಷಣ ಕೇಂದ್ರವನ್ನಾಗಿ ಮಾರ್ಪಡಿಸಲಾಗಿತ್ತು. ಆದರೆ 1965ರಲ್ಲಿ ಪ್ರಸಿದ್ಧ ಜರ್ಮನ್-ಪೋಲಿಷ್-ಯಹೂದಿ ಇತಿಹಾಸಕಾರನಾದ ಜೋಸೆಫ್ ವುಲ್ಫ಼ನ ಸತತ ಪ್ರಯತ್ನದ ಹೊರತಾಗಿಯೂ, ಇದನ್ನು ದಾಖಲೆಗಳ ಕೇಂದ್ರವನ್ನಾಗಿ ಪರಿವರ್ತಿಸುವ ಕಾರ್ಯ ವಿಫಲಗೊಂಡಿತ್ತು. ಕಡೆಗೆ 1991ರಲ್ಲಿ ಬರ್ಲಿನ್ ಗೋಡೆ ಪತನಗೊಂಡನಂತರ, 1992ರಲ್ಲಿ ವಾಂಝಿ ಸಮ್ಮೇಳನದ 50ನೆಯ ವಾರ್ಷಿಕ ಸಂದರ್ಭದಲ್ಲಿ, ಈ ಭವನವನ್ನು ಶೈಕ್ಷಣಿಕ ಮತ್ತು ಸ್ಮಾರಕವನ್ನಾಗಿ ಉದ್ಘಾಟಿಸಲಾಯಿತು. 2006ರಲ್ಲಿ, ಇಲ್ಲಿ ನೂತನ ಪ್ರದರ್ಶನಗಳನ್ನು ಸ್ಥಾಪಿಸಿ, ಈಗ ಈ ಭವನವನ್ನು ಒಂದು ಪ್ರವಾಸಿಗರ ಸಂದರ್ಶನದ ಸ್ಥಳವನ್ನಾಗಿ ಪರಿವರ್ತಿಸಲಾಗಿದೆ. ಅಷ್ಟೇ ಅಲ್ಲದೇ, ಜೋಸೆಫ್ ವುಲ್ಫ಼ನ ಹೆಸರಿನಲ್ಲಿ ಒಂದು ಗ್ರಂಥಾಲಯವೂ ಇದೆ. ಇಲ್ಲಿರುವ ಪುಸ್ತಕಗಳ ಸಂಗ್ರಹದಲ್ಲಿ, ಮೈಕ್ರೋಫ಼ಿಲ್ಮ್ ದಾಖಲೆಗಳು, ಶ್ರವ್ಯ-ದೃಶ್ಯ ವಸ್ತುಗಳು, ಸಂಶೋಧನಾ ಸಾಹಿತ್ಯ, ಕಣ್ಣಾರೆ ಕಂಡ ಸಾಕ್ಷಿಗಳ ವರದಿಗಳು, ಜೀವನ ಚರಿತ್ರೆಗಳು, ಯಹೂದ್ಯರ ಚರಿತ್ರೆ, ಯಹೂದಿ-ವಿರೋಧಿ, ಶೋಷಣೆ, ಮತ್ತು ನರಹತ್ಯೆ, ನಾಝಿಗಳ ಚರಿತ್ರೆ ಹೀಗೆ ಹಲವು ಹತ್ತು ವಿಷಯಗಳ ಉತ್ತಮ ಸಂಗ್ರಹವಿದೆ.   ಇದನ್ನೆಲ್ಲಾ ನೋಡಿ ಮನಸ್ಸು ಭಾರವೆನಿಸಿತು. ನಾವಿನ್ನೂ ಜನ್ಮತಳೆಯುವ ಮೊದಲೇ ನಡೆದಿದ್ದ ಈ ಹತ್ಯಾಕಾಂಡದ ಬಗ್ಗೆ ಕೇವಲ ಇಲ್ಲಿನ ಚಿತ್ರಗಳಲ್ಲಿ ನೋಡಿಯೇ ಇಷ್ಟು ನೋವುಂಟಾಗುತ್ತದೆ. ಆ ಹತ್ಯಾಕಾಂಡದಲ್ಲಿ ಬೇಯ್ದ ಯಹುದಿಗಳ ಪಾಡು ಹೇಗಿರಬಹುದು ಎನ್ನುವುದನ್ನು ಊಹಿಸಲೂ ಅಸಾಧ್ಯ. ಮನ ಅದರ ಬಗ್ಗೆ ಯೋಚಿಸುತ್ತಾ ಹೊರಗಿನ ತೋಟದೊಳಕ್ಕೆ ನಡೆದಾಗ, ಇಂದಿನ ಈ ಸುಂದರ ವಾತಾವರಣದಲ್ಲಿ ನಿಂತು, ಅಂದಿನ ವಿದ್ಯಮಾನಗಳನ್ನು ಕೇವಲ ಯೋಚಿಸುವಷ್ಟು ಮಾತ್ರಾ ಅವಕಾಶ ಸಿಕ್ಕ ನಮ್ಮ ಪೀಳಿಗೆ ಒಂದು ರೀತಿಯಲ್ಲಿ ಅದೃಷ್ಟವಂತರೆಂದೇ ತಿಳಿಯಬೇಕು. ಭವನದ ಹಿಂದಿನ ಸರೋವರ ಗಂಭೀರವಾಗಿತ್ತು. ಸರೋವರದಲ್ಲಿ ಸೂರ್ಯನ ಬಿಸಿಲಿನಲ್ಲಿ ನಳನಳಿಸುತ್ತಿದ್ದ ಕೆಂಪು ಮತ್ತು ಶ್ವೇತವರ್ಣದ ನೈದಿಲೆಗಳು ಅಲ್ಲಿ ಸುಳಿಯುತ್ತಿದ್ದ ತಂಗಾಳಿಯಲ್ಲಿ ಓಲಾಡುತ್ತಿದ್ದವು. ಸರೋವರದಲ್ಲಿ ಸಂತೋಷವಾಗಿ ಈಜಾಡುತ್ತಿದ್ದ ಮಲ್ಲಾರ್ಡ್ ಬಾತುಕೋಳಿಯ ಸಂಸಾರ !5ಕಣ್ಣಿಗೆ ಬಹಳ ಆಪ್ಯಾಯಮಾನವೆನಿಸಿತು. ಸರೋವರದಲ್ಲಿ ಜಲಕ್ರೀಢೆಯಾಡುತ್ತಿದ್ದ ಮೀನುಗಳು, ಅಲ್ಲೇ ತೇಲಾಡುತ್ತಿದ್ದ ಹತ್ತಾರು ದೋಣಿಗಳು ಮನವನ್ನು ಇನ್ನಾವುದೋ ಪ್ರಪಂಚಕ್ಕೆ ಸೆಳೆದೊಯ್ದಿತ್ತು. ಸುತ್ತಲಿನ ಹಸಿರುತುಂಬಿದ ಮರಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದ ವಿಧವಿಧದ ಹಕ್ಕಿಗಳು ಮನಸ್ಸಿಗೆ ಶಾಂತಿಯಿತ್ತವು. ಅಲ್ಲೇ ಕುಳಿತು ಫೋಟೋ ಕ್ಲಿಕ್ಕಿಸುತ್ತಿದ್ದ ನನ್ನ ಮನ, ಇಂತಹದೊಂದು ಶಾಂತ, ಸುಂದರ ಜಾಗ, ಅಂತಹ ಹೇಯ, ಬೀಭತ್ಸ ಕೃತ್ಯದ ಚರ್ಚೆಗೆ ಕುಳಿತ ರಾಕ್ಷಸ ಜನರ ಸಮ್ಮೇಳನಕ್ಕೆ ಏಕಾದರೂ ಕೇಂದ್ರವಾಗಿತ್ತೋ ಎಂದು ಮರುಗಿತು.   ಹಾಗೇ ನನ್ನ ಯೋಚನೆಗಳಲ್ಲೇ ಮುಳುಗಿದ್ದಾಗ, ನನ್ನ ಸ್ನೇಹಿತರ ಜೊತೆಯಲ್ಲಿ ಮಹಿಳೆಯೊಬ್ಬಳು ಸಂಭಾಷಿಸುವುದು ಕೇಳಿಸಿತು. ಆಕೆಯ ಆಂಗ್ಲ ಉಚ್ಚಾರಣೆಯಿಂದ, ಆಕೆ ಒಬ್ಬ ಯಹೂದಿಯೆಂದು ಅರಿವಾದಾಗ, ಆಸಕ್ತಿಯಿಂದ ಅವರ ಸಂಭಾಷಣೆಯನ್ನೇ ಆಲಿಸಿದೆ. ನನ್ನ ಭಾರತದ ಸ್ನೇಹಿತರು ಯಹೂದಿಗಳ ಹತ್ಯಾಕಾಂಡದ ಬಗ್ಗೆ ಪರಿತಾಪ ವ್ಯಕ್ತಪಡಿಸುತ್ತಾ, ತಾವು ಇತ್ತೀಚೆಗೆ ಪ್ಯಾಲಸ್ಟೈನ್ ಪ್ರದೇಶಕ್ಕೆ ಭೇಟಿಯಿತ್ತಿದ್ದೆ ಎಂದರು. ಒಡನೆಯೇ ಆ ಮಹಿಳೆ, ಅಲ್ಲಿರುವುದು ಕೇವಲ ಇಸ್ರೇಲ್, ಪ್ಯಾಲಸ್ಟೈನ್ ಎಂಬ ಯಾವ ದೇಶವೂ ಇಲ್ಲ ಎನ್ನುತ್ತಾ ಅಲ್ಲಿಂದ ಕಾಲ್ತೆಗೆದಳು. ಅದನ್ನು ನೋಡಿದ ನನಗೆ ಆಘಾತವಾಯಿತು. ಕೇವಲ 70 ವರ್ಷಗಳ ಹಿಂದಷ್ಟೇ ನರಹತ್ಯೆಗೊಳಗಾದ ಈ ಪಂಗಡದವರ ಬಾಯಲ್ಲಿ ಈ ಮಾತು ಬರುತ್ತಿದೆಯಲ್ಲಾ ಎಂದು ಆಶ್ಚರ್ಯವಾಯಿತು. ಅಂದು ತಾವು ಅನುಭವಿಸಿದ ಕಷ್ಟವನ್ನು, ಇಂದು ಇಸ್ರೇಲ್ ತನ್ನ ನೆರೆಯ ಪ್ಯಾಲಸ್ಟೈನ್ ಜನಾಂಗಕ್ಕೆ ಕೊಡುತ್ತಿದೆ. ಆ ಪ್ರದೇಶದ ವಿದ್ಯಮಾನಗಳನ್ನು ದಿನಬೆಳಿಗ್ಗೆದ್ದು ಸುದ್ದಿಯಲ್ಲಿ ಕೇಳುವ ನಮಗೆ, ಜನಪ್ರಿಯ ಆಂಗ್ಲ ನಾಣ್ಣುಡಿಯಾದ Bullied has become a bully ವಾಕ್ಯದ ನೆನಪಾಯಿತು. ಅದೇನೇ ಇರಲಿ, ಹಿಟ್ಲರನ ಆಡ್ಯಳಿತದಲ್ಲಿ ನಡೆದ ಹೇಯಕೃತ್ಯವನ್ನು, ಪ್ರಪಂಚದ ಇನ್ನಾವ ದುಷ್ಟಕಾರ್ಯವೂ ಸರಿಗಟ್ಟಲಾರದು, ಮತ್ತು ಅದಕ್ಕೆ ಯಾವುದೇ ರೀತಿಯ ಸಮರ್ಥನೆಯನ್ನು ನೀಡುವುದು ಮಹಾಪರಾಧ.

ಲೇಖನ ಮತ್ತು ವಾಂಝಿ ಚಿತ್ರಗಳು:   ಡಾ ಉಮಾ ವೆಂಕಟೇಶ್

ಮ್ಯಾಸಿಡೋನಿಯಾದ ಬಂದರು ಪಟ್ಟಣ- ಥೆಸ್ಸಲೋನಿಕಿ (Thessaloniki)

 

ಉಮಾ ಅನಿವಾಸಿಯ ಜೀವನಾಡಿ. ಪ್ರಪಂಚ ಸುತ್ತಿದ ಅನುಭವ ಅವರದು. ಹೊಸ ಜಾಗವನ್ನು ತಾವು ನೊಡಿದ್ದಲ್ಲದೇ, ಅನಿವಾಸಿಯ ಓದುಗರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿ ಉಣಿಸುವ ಜಾಯಮಾನ ಅವರದ್ದು. ಗ್ರೀಸ್ ದೇಶ ಇಂದಿನ ಜನಾಂಗಕ್ಕೆ ಸಮುದ್ರ ತಡಿಯ ಅನುಭವಕ್ಕೆ; ಸುತ್ತ ಹರಡಿರುವ ನೀಲ ಮೆಡಿಟರೇನಿಯನ್ ಸಮುದ್ರದಲ್ಲಿನ ದ್ವೀಪ ಸಮೂಹಗಳಿಗೆ ಪ್ರಸಿದ್ಧಿ. ನಮಗೆಲ್ಲ ಅಲೆಕ್ಸಾಂಡರ್, ಆರ್ಕಿಮಿಡಿಸ್ ಅವರಂಥ ವಿಶ್ವ ವಿಖ್ಯಾತ ವ್ಯಕ್ತಿಗಳಿಂದ ಪರಿಚಯ. ಸೂಕ್ತವಾಗಿ, ಚಕ್ರವರ್ತಿ ಅಲೆಕ್ಸಾಂಡರ್ ನ ಜನ್ಮಸ್ಥಳವನ್ನು ಸಂದರ್ಶಿಸಿ ಗತ ವೈಭವನ್ನು ಮೆಲಕು ಹಾಕುತ್ತ, ಸಧ್ಯದ ಪರಿಸ್ಥಿತಿಯನ್ನು ಈ ಲೇಖನದಲ್ಲಿ ಮನೋಜ್ಞವಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ…

ಅಲೆಕ್ಸಾಂಡರನ ಪ್ರತಿಮೆ
ಅಲೆಕ್ಸಾಂಡರನ ಪ್ರತಿಮೆ

ಅಲೆಕ್ಸಾಂಡರ್ ಚಕ್ರವರ್ತಿ ಅಲ್ಲೆಲ್ಲೋ ಬರುತ್ತಿದ್ದಾನಂತೆ ಎಂದು ಕೇಳಿದಾಕ್ಷಣವೇ, ನಮ್ಮಲ್ಲಿದ್ದ ರಾಜರು ಹೆದರಿ ಶರಣಾಗತರಾಗುತ್ತಿದ್ದರಂತೆ ಎಂದು ನಮ್ಮ ತಾಯಿ ಚಿಕ್ಕಂದಿನಲ್ಲಿ ನಮಗೆ ಹೇಳಿದ್ದ ಮಾತುಗಳು ಕಿವಿಯಲ್ಲೇ ಗುನುಗುತ್ತಿದೆಯೇನೋ ಅನ್ನಿಸುತ್ತದೆ. ಭಾರತದಲ್ಲಿದ್ದ ಎಲ್ಲಾ ರಾಜರೂ ಅವನಿಗೆ ಹೆದರಿ ತಲೆಬಗ್ಗಿಸಿದ್ದಾಗ, ನಮ್ಮಲ್ಲಿದ್ದ ಒಬ್ಬ ರಾಜ ಪೌರಸ್ ತನ್ನ ಆತ್ಮಾಭಿಮಾನದಿಂದಲೇ ಅವನನ್ನು ಗೆದ್ದಿದ್ದ ಪ್ರಸಂಗವನ್ನು ಕುರಿತಾಗಿ, ನಮ್ಮ ಕನ್ನಡ ಪಠ್ಯ ಪುಸ್ತಕದಲ್ಲಿ ನಮಗಿದ್ದ ಒಂದು ನಾಟಕದ ನೆನಪಾಗುತ್ತದೆ. ಪ್ರಪಂಚದ ಅತ್ಯಂತ ಮಹತ್ವಾಕಾಂಕ್ಷಿ ಸಾಮ್ರಾಟರಲ್ಲಿ ಒಬ್ಬನಾದ ಮಹಾನ್ ಗ್ರೀಕ್ ಯೋಧ ಅಲೆಕ್ಸಾಂಡರನ ಹೆಸರನ್ನು ಕೇಳದವರಾರು? ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿಯೇ ತಂದೆಯ ಕೊಲೆಯಾದನಂತರ, ಸಾಮ್ರಾಜ್ಯದ ಹೊಣೆಯನ್ನು ತನ್ನ ಕೈಗೆತ್ತಿಕೊಂಡ ಅವನ ಶೌರ್ಯಪರಾಕ್ರಮಗಳ ಬಗ್ಗೆ, ಅವನು ಭಾರತಕ್ಕೆ ದಂಡೆತ್ತಿ ಬಂದ ರೀತಿ ಎಲ್ಲವೂ ಒಂದು ಅದ್ಭುತವಾದ ಚಾರಿತ್ರಿಕ ಸಂಗತಿ.

 

ಈ ಪರಾಕ್ರಮಿಯ ಜನ್ಮಸ್ಥಾನವಾದ ಥೆಸ್ಸಲೋನಿಕಿ ಪಟ್ಟಣಕ್ಕೆ ಭೇಟಿ ನೀಡುವ ಅವಕಾಶವೊಂದು ಕಳೆದ ವಾರ ನನಗೆ ಲಭ್ಯವಾಯಿತು. Displaying DSC_0050.JPGಸಧ್ಯದಲ್ಲಿ ಜರ್ಮನಿಯ ರಾಜಧಾನಿ ಬರ್ಲಿನ್ನಿನಲ್ಲಿ ವಾಸ್ತವ್ಯ ಹೋಡಿರುವ ನಮಗೆ, ಇದೊಂದು ಅಪರೂಪವಾದ ಅವಕಾಶವೆನ್ನಿಸಿತ್ತು. ಸರಿ, ಬರ್ಲಿನ್ನಿನ ಶೋನೆಫ಼ೆಲ್ಡ್ ವಿಮಾನ ನಿಲ್ದಾಣದಿಂದ ಬಡ್ಜೆಟ್ ವಾಯುಯಾನ ಕಂಪನಿ ಈಸಿ-ಜೆಟ್ ವಿಮಾನದಲ್ಲಿ, ಸುಮಾರು ೨ ಗಂಟೆಗಳ ಸುಲಭವಾದ ಪ್ರಯಾಣದ ನಂತರ, ನಾವು ಥೆಸ್ಸಲೋನಿಕಿಯ ಮಾಕೆಡೋನಾ ವಿಮಾನ ನಿಲ್ದಾಣದಲ್ಲಿ ಇಳಿದೆವು. ಕ್ರಿ.ಪೂ. ೩೧೫ ಅಂದರೆ ಸುಮಾರು ೩,೩೩೦ ವರ್ಷಗಳ ಇತಿಹಾಸವಿರುವ, ಮ್ಯಾಸಿಡೋನಿಯಾ ಪ್ರಾಂತ್ಯದ ಈ ಪಟ್ಟಣವನ್ನು, ಸುಂದರವಾದ ಪರ್ವತ ಮಾಲೆಗಳು ಆಗ್ನೇಯ ದಿಕ್ಕಿನಲ್ಲಿ ಆವರಿಸಿದ್ದರೆ, ಇದರ ಪೂರ್ವಕ್ಕೆ ಏಜಿಯನ್ ಸಮುದ್ರವಿದೆ. ಮೌಂಟ್ ಒಲಿಂಪಸ್ ಪರ್ವತವೇ ಇಲ್ಲಿನ ಅತ್ಯಂತ ಎತ್ತರವಾದ ಶೃಂಗ. ವಿಮಾನ ನಿಲ್ದಾನದಿಂದ ಸುಮಾರು ೨೫ ನಿಮಿಷಗಳ ದೂರದಲ್ಲಿರುವ ಥೆಸ್ಸಲೋನಿಕಿ ಪಟ್ಟಣ, ಹತ್ತಿರವಾದಂತೆ ಅಲ್ಲಿನ ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ಕಠಿಣತೆಯನ್ನು ನಮಗೆ ಪರಿಚಯಿಸಿತು. ರಸ್ತೆಗಳ ಬದಿಯಲ್ಲಿ ಶೇಖರವಾಗಿದ್ದ ಕಸದ ಡಬ್ಬಗಳು, ಗೀರು-ಬರಹಗಳಿಂದ ತುಂಬಿ ಹೋದ ಗೋಡೆಗಳು, ಅವ್ಯವಸ್ಥೆಯ ವಾಹನಸಂದಣಿ, ಅಲ್ಲಲ್ಲೇ ಕಾಣಬರುವ ಬಡ ಭಿಕ್ಷುಕರು ಇದಕ್ಕೆ ಸಾಕ್ಷಿಯಾಗಿದ್ದವು. ಬಿಬಿಸಿ ಕೃಪೆಯಿಂದ ಗ್ರೀಕಿನ ಹಣಕಾಸಿನ ತೊಡಕಿನ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿರುವ ಕಾರಣ, ಈ ದೃಶ್ಯಗಳು ಆಘಾತಕಾರಿಯಾಗಿರಲಿಲ್ಲ.

 

ಥೆಸ್ಸಲೋನಿಕಿಯ ಉತ್ತಮ ಅಪಾರ್ಟಮೆಂಟ್ ಹೋಟೆಲಿನಲ್ಲಿ ತಂಗಿದ್ದ ನಮಗೆ, ಊಟ-ತಿಂಡಿಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಪ್ರಸಂಗ ಬರಲಿಲ್ಲ. ಮೆಡಿಟರೇನಿಯನ್ ರೀತಿಯ ಆಹಾರ ಸೇವನೆಯಿರುವ ಗ್ರೀಸಿನಲ್ಲಿ, ಉತ್ತಮ ಗುಣಮಟ್ಟದ ಸಸ್ಯಾಹಾರ ದೊರೆಯುತ್ತದೆ. ಹಣ್ಣಹಂಪಲು ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುವ ಈ ದೇಶದಲ್ಲಿ, ಸಸ್ಯಾಹಾರಿಗಳು ಯಾವ ತೊಂದರೆಯನ್ನೂ ಎದುರಿಸಬೇಕಿಲ್ಲ. ಎಲ್ಲೆಲ್ಲೂ ಕೆಂಪು ಬಿಳಿ ಕಣಿಗಿಲೆ ಗಿಡಗಳು ಹುಲುಸಾಗಿ ಬೆಳೆದು ನಿಂತ ಇಲ್ಲಿಯ ಉದ್ಯಾನವನಗಳು ಮತ್ತು ರಸ್ತೆಯ ಬದಿಗಳು ಕಣ್ಣನ್ನು ತಂಪುಗೊಳಿಸುತ್ತವೆ. ಪಟ್ಟಣದ ಒಂದು ಬದಿಗೆ ವಿಸ್ತಾರವಾಗಿ ಹರಡಿರುವ, ನಸುಹಸಿರು ಬಣ್ಣದ ಏಜಿಯನ್ ಸಮುದ್ರದ ಮುಂದೆ ನಡೆದಾಡುವ ಅನುಭವ ನಿಜಕ್ಕೂ ಆನಂದಮಯವೆನ್ನಿಸಿತು. ಈ ಸಮುದ್ರತಡಿಯ ಒಂದು ತುದಿಯಲ್ಲಿರುವ ಬಂದರಿನಿಂದ, ಮತ್ತೊಂದು ತುದಿಗೆ ಸುಮಾರು ೫ ಕಿಲೋಮೀಟರುಗಳ ದೂರವಿದೆ. ಥೆಸ್ಸಲೋನಿಕೆಯ ಉತ್ತಮ ಹೋಟೆಲುಗಳ ಸಾಲೇ ಇರುವ ಮತ್ತೊಂದು ಬದಿ, ಜನಗಳಿಂದ ತುಂಬಿ ಗಿಜಿಗುಟ್ಟುತ್ತಿರುತ್ತದೆ. ರಸ್ತೆಯ ಉದ್ದಕ್ಕೂ ತುಂಬಿರುವ ವಿವಿಧ ರೀತಿಯ ಉಪಹಾರಗೃಹಗಳಲ್ಲಿ ಕುಳಿತು ಹರಟೆಹೊಡೆಯುವ ಇಲ್ಲಿನ ಯುವಜನತೆಯ ಕೈಯಲ್ಲಿ, ಹೊಗೆಯಾಡುವ ಸಿಗರೇಟನ್ನು ನೋಡಿ ನನಗೆ ಸ್ವಲ್ಪ ನಿರಾಸೆಯೆನಿಸಿತು. ಗಂಡಸರಷ್ಟೇ ಸಂಖ್ಯೆಯ ಹೆಂಗಸರೂ ಕೂಡಾ ನಿರಾಳವಾಗಿ ಧೂಮಪಾನ ನಡೆಸಿದ್ದರು. ಬಹುಶಃ ಗ್ರೀಸಿನ ಜನತೆ ಮತ್ತು ಸರ್ಕಾರ ಸಾರ್ವಜನಿಕ ಧೂಮಪಾನದ ಹಾನಿಯ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

 

ಸಮುದ್ರದ ದಂಡೆಯ ಉದ್ದಕ್ಕೂ ನಡೆಯುತ್ತಾ ನಡೆದ ನನಗೆ, ಪಾದಚಾರಿಗಳ ಜೊತೆಗೆ ಸೈಕಲ್ ಸವಾರರ ದಂಡೇ ಇದ್ದದ್ದು ಕಂಡುಬಂತು. ಇತ್ತೀಚೆಗೆ ಯುರೋಪಿನ ದೇಶಗಳಲ್ಲಿ (ಅದರಲ್ಲೂ ಹಾಲೆಂಡ್ ಮತ್ತು ಜರ್ಮನಿ), ಸೈಕಲ್ ಸವಾರಿ ಬಹಳ ಜನಪ್ರಿಯವಾಗುತ್ತಿದೆ. ಉತ್ತಮ ದೇಹದಾರ್ಢ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಪರಿಸರವನ್ನೂ ಕಾಪಾಡಬಹುದಾದ ಇಲ್ಲಿನ ಜನಗಳ ಮನೋಭಾವ ನಿಜಕ್ಕೂ ಶ್ಲಾಘನೀಯ. ಈ ಚಾರಿತ್ರಿಕ ನಗರವು ನ್ಯಾಶನಲ್ ಜಿಯಾಗ್ರಫಿ ಮ್ಯಾಗಝೀನ್ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರವಾಸಿಗರ ಆಯ್ಕೆಯ ಅತ್ಯುತ್ತಮ ಪಟ್ಟಣಗಳಲ್ಲಿ ಒಂದು ಎಂದು ತಿಳಿದು ಬರುತ್ತದೆ. ಇದೇನೂ ಆಶ್ಚರ್ಯದ ವಿಷಯವಲ್ಲ. ಸುಮಾರು 2,500 ವರ್ಷಗಳ ಇತಿಹಾಸವಿರುವ ಈ ನಗರದಲ್ಲಿ, ರೋಮನ್, ಬೈಝಂಟೈನ್, ಆಟ್ಟೋಮಾನ್ ಸಾಮ್ರಾಜ್ಯದ ವೈಭವಗಳ ಗುರುತನ್ನು ಧಾರಾಳವಾಗಿ ಕಾಣಬಹುದು. ಈ ಸಾಮ್ರಾಜ್ಯಗಳ ಸಾರ್ವಭೌಮರು ನಿರ್ಮಿಸಿರುವ ಅದ್ಭುತ ಸ್ಮಾರಕಗಳು, ಇಂದಿಗೂ UNESCO ವಿಶ್ವ ಪರಂಪರೆಯ ತಾಣಗಳಾಗಿ ನಿಂತು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸಾರ್ವಭೌಮ ಅಲೆಕ್ಸಾಂಡರನ ಮಲಸಹೋದರಿ ಥೆಸ್ಸಲೋನಿಕೆಯ ಹೆಸರಿನಿಂದ ಕರೆಯಲ್ಪಡುವ ಈ ನಗರದ ಹೆಸರಿಗೆ, “ವಿಜಯ” ಎನ್ನುವ ಅರ್ಥವೂ ಇದೆ. ಭೂಗರ್ಭದ ನ್ಯೂನತೆಯ ರೇಖೆಯಲ್ಲಿರುವ ಈ ಪ್ರದೇಶ, ಭೂಕಂಪಗಳಿಂದ ಪೀಡಿತವಾಗಿದ್ದು, ಅದರ ಪರಿಣಾಮಗಳನ್ನು ಇಲ್ಲಿನ ಕಟ್ಟಡಗಳಲ್ಲಿ ಕಾಣಬಹುದು.

 

Displaying DSC_0034.JPGಸಮುದ್ರದ ದಂಡೆಯಲ್ಲಿ ನಡೆಯುತ್ತಾ ಸಾಗಿದ್ದ ನನಗೆ, ಇಲ್ಲಿನ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾದ White Tower, ಅಥವಾ ಶ್ವೇತ ಗೋಪುರ ಕಾಣಿಸಿತು. ೧೨ಯ ಶತಮಾನದಲ್ಲಿ, ಇಲ್ಲಿಯ ಬಂದರನ್ನು ಭದ್ರಪಡಿಸುವ ಉದ್ದೇಶದಿಂದ, ಆಟ್ಟೋಮಾನ್ ರಾಜರಿಂದ ನಿರ್ಮಿಸಲ್ಪಟ್ಟ ಈ ಗೋಪುರವು, ಮುಂದೆ ಒಂದು ಕುಖ್ಯಾತ ಸೆರೆಮನೆಯಾಯಿತಲ್ಲದೇ, ಆಟ್ಟೋಮಾನ್ ರಾಜರ ಸಮಯದಲ್ಲಿ ಸಾಮೂಹಿಕ ಹತ್ಯೆಗಳ ಸ್ಥಳವಾಗಿತ್ತು. ಸುಣ್ಣದ ಬಿಳಿಯ ಬಣ್ಣದಿಂದ ಬಳಿಯಲ್ಪಟ್ಟಿರುವ ಈ ಗೋಪುರವನ್ನು, ಇಂದು ಈ ಪಟ್ಟಣದ ಲಾಂಛನವನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಪ್ರವಾಸಿಗರಿಂದ ಕಿಕ್ಕಿರಿದಿದ್ದ ಇಲ್ಲಿ, ಹಲವು ಛಾಯಾಚಿತ್ರಗಳನ್ನು ಕ್ಲಿಕ್ಕಿಸಲು ಸ್ವಲ್ಪ ಪರದಾಡಬೇಕಾಯಿತು. ನಗರದ ಇನ್ನೂ ಹಲವಾರು ಸುಂದರ ಮತ್ತು ಭವ್ಯವಾದ ಕಟ್ಟಡಗಳನ್ನು ಇಲ್ಲಿಂದ ಕಾಣಬಹುದಾಗಿದೆ. ಅಲ್ಲಲ್ಲೇ ಇರುವ ಉದ್ಯಾನವನಗಳಲ್ಲಿ ಅರಳಿನಿಂತ ರೋಡೋಡೆಂಡ್ರಾನ್ ಪುಷ್ಪಗಳು, ಕಣ್ಸೂರೆಗೊಳ್ಳುವಂತಿದ್ದವು. ಹಕ್ಕಿಗಳ ಕಲರವ, ಅದರಲ್ಲೂ ಗಿಣಿಗಳ ಧ್ವನಿಕೇಳಿ, ನನ್ನೂರು ಮೈಸೂರಿನ ನೆನಪಾಯಿತು. ಸಮುದ್ರದಲ್ಲಿ ಸದ್ದಿಲ್ಲದೇ ಸಾಗಿದ್ದ ಹಲವಾರು ಹಡಗುಗಳು, ಎಲ್ಲರ ಗಮನವನ್ನೂ ಸೆಳೆದಿದ್ದವು. ಅಲ್ಲಿಂದ ಸ್ವಲ್ಪ ಮುಂದೆ ಸಾಗುತ್ತಾ ನಡೆದಾಗ ಮತ್ತೊಂದು ಪ್ರವಾಸಿಗರ ಆಕರ್ಷಣೆ ನನ್ನ ಕಣ್ಸೆಳೆಯಿತು. ಗ್ರೀಕ್ ಸಾರ್ವಭೌಮ, ಮಹಾನ್ ಯೋಧ ಅಲೆಕ್ಸಾಂಡರ್ ಚಕ್ರವರ್ತಿಯು, ಕುದುರೆಯ ಮೇಲೆ ಕುಳಿತ ಕರಿಶಿಲೆಯ ದೊಡ್ಡ ಪ್ರತಿಮೆಯನ್ನು ನೋಡಿ ನನ್ನ ಮನಸ್ಸು, ಈಗ ಕೆಲವು ವರ್ಷಗಳ ಹಿಂದೆ ನೋಡಿದ್ದ, ಅಲೆಕ್ಸಾಂಡರನ ಜೀವನವನ್ನು ಆಧಾರಿಸಿ ತೆಗೆದ ಹಾಲಿವುಡ್ಡಿನ ಚಲನಚಿತ್ರವನ್ನು ನೆನೆಯಿತು. ಮಹಾನ್ ದಾರ್ಶನಿಕ, ಚಿಂತಕ, ವಿಜ್ಞಾನಿ ಹೀಗೆ ಹಲವು ಹತ್ತು ವಿಷಯಗಳ ಮಹಾವಿದ್ವಾಂಸನಾಗಿದ್ದ ಅರಿಸ್ಟಾಟಲನಂತಹ ಮಹಾಮೇಧಾವಿಯ ಶಿಷ್ಯನಾದ ಈ ಚಕ್ರವರ್ತಿಯ ಜೀವನದ ಸಾಹಸಗಾಥೆ ನಿಜಕ್ಕೂ ಆಸಕ್ತಿಪೂರ್ಣ. ಒಬ್ಬ ಮಹತ್ವಾಕಾಂಕ್ಷಿಯಾಗಿದ್ದ ಈ ಚಕ್ರವರ್ತಿ, ಪ್ರಪಂಚದ ಚರಿತ್ರೆಯಲ್ಲಿ ಇಂತಹ ದೊಡ್ಡ ಸ್ಥಾನವನ್ನು ಗಳಿಸಿ, ಜನಗಳ ಮನದಲ್ಲಿ ಚಿರಂತನವಾಗಿ ನಿಲ್ಲುವಂತೆ ಮಾಡಿದ ಅವನ ಸಾಹಸಮಯ ಜೀವನ ಬಹುಶಃ ನಭೂತೋ ನಭವಿಷ್ಯತಿ ಎನ್ನುವಂತಿದೆ. ಆದರೆ ಇಂದು ಗ್ರೀಸ್ ದೇಶದಲ್ಲಿರುವ ನೂರಾರು ಸಮಸ್ಯೆಗಳು, ಅಲ್ಲಿನ ಯುವಜನತೆ ನಿರುದ್ಯೋಗವನ್ನು ಎದುರಿಸಿ ನಡೆಸುತ್ತಿರುವ ಹೋರಾಟ, ಇತರ ದೇಶಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿಯನ್ನು ನೋಡಿದರೆ, ಅವರಿಗೆ ಅಲೆಕ್ಸಾಂಡರನಂತಹ ಸಾಹಸ ಪುರುಷನ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲ ಎನ್ನಿಸುತ್ತದೆ. ಕೆಲವೊಮ್ಮೆ ಚರಿತ್ರೆಯ ಗತವೈಭವಗಳು, ಪ್ರಸಕ್ತ ಸಮಸ್ಯೆಗಳಿಗೆ ಯಾವ ಪರಿಹಾರವನ್ನೂ ಒದಗಿಸಲು ಅಸಮರ್ಥವಾಗುತ್ತವೆ.

 

Displaying DSC_0210.JPGನಗರದ ಮಧ್ಯಭಾಗವು ಸಾರ್ವಜನಿಕ ಕಚೇರಿಗಳ ಕಟ್ಟಡಗಳು, ಚಾರಿತ್ರಿಕ ಸ್ಥಳಗಳು, ಅಂಗಡಿಗಳು, ಮಾರುಕಟ್ಟೆಗಳು, ಚೌಕಗಳಿಂದ ತುಂಬಿದೆ. ಅರಿಸ್ಟಾಟಲನ ಹೆಸರಿನಿಂದ ಕರೆಯಲ್ಪಡುವ ಭಾರಿ ಚೌಕದ ಸುತ್ತಮುತ್ತಾ, ಭಾರಿ ಜನಸಂದಣಿಯಿದ್ದು, ನಗರದ ಜೀವಾಳವೇ ಇದಾಗಿದೆ. ಸಮುದ್ರದ ದಂಡೆಯಲ್ಲಿ ನಡೆದಿದ್ದಂತೆಯೇ, ಅಲ್ಲೇ ಇದ್ದ ಉಪಹಾರಗೃಹದೊಳಗಿದ್ದ ಚೆಲುವಾದ ಕೊಳದಲ್ಲಿ ಅರಳಿ ನಿಂತ ನೈದಿಲೆ ಪುಷ್ಪಗಳು ನನ್ನ ಕಣ್ಸೆಳೆದವು. ಹತ್ತಿರ ಹೋಗಿ ಅವುಗಳ ಚೆಲುವನ್ನು ಸವಿದು ಅವುಗಳ ಚಿತ್ರವನ್ನು ನನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸುತ್ತಿದ್ದಾಗ, “ನೀರಿಗೆ ನೈದಿಲೆ ಶೃಂಗಾರ” ಎನ್ನುವ ಬಸವಣ್ಣನವರ ವಚನದ ಸಾಲುಗಳಲ್ಲಿ ಎಂತಹ ಸತ್ಯವಿದೆ ಎಂದೆನಿಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲೇ ನಡೆದಾಡಿದ ನನ್ನ ಮನ, ಮರುದಿನ ನಾವು ಭೇಟಿ ನೀಡಲಿದ್ದ ಮತ್ತೊಂದು ಚಾರಿತ್ರಿಕ ಸ್ಥಳದ ಬಗ್ಗೆ ಯೋಚಿಸುತ್ತಿತ್ತು.

 

Sikandar, 1941, Sohrab Modi.jpgಮರುದಿನ ಥೆಸ್ಸಲೋನಿಕಿಯ ಅರಿಸ್ಟಾಟಲ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದವರು, ಅಲೆಕ್ಸಾಂಡರ್ ಚಕ್ರವರ್ತಿಯ ತಂದೆ ಎರಡನೆಯ ಫಿಲಿಪ್, ಮತ್ತು ಅಲೆಕ್ಸಾಂಡರನ ಮಗನ ಸಮಾಧಿಗಳಿರುವ, ಒಂದು ಪ್ರಸಿದ್ಧ ಪುರಾತತ್ವದ ಸ್ಥಳಕ್ಕೆ ಸಣ್ಣ ಪ್ರವಾಸವನ್ನೇರ್ಪಡಿಸಿದ್ದರು. Vergina the Archaeological Site of Aigai, ಎಂಬ ಹೆಸರಿನ ಈ ಜಾಗವು UNESCO ಜಾಗತಿಕ ಪರಂಪರೆಯ ಒಂದು ತಾಣವಾಗಿದ್ದು, ಇದು ಥೆಸ್ಸಲೋನಿಕಿಯಿಂದ ಸುಮಾರು ೯೦ ಕಿಲೋಮಿಟರುಗಳ ದೂರದಲ್ಲಿದೆ. ಕ್ರಿ.ಪೂ. ೧೧ನೆಯ ಶತಮಾನದ ರಾಜಮನೆತನದ ಸಮಾಧಿಗಳನ್ನು ಹೊಂದಿರುವ ಈ ಸ್ಥಳವು, ಯೂರೋಪಿಯನ್ ನಾಗರೀಕತೆಯ ಬೆಳವಣಿಗೆಗೆ ಒಂದು ಅಸಾಧಾರಣ ಪುರಾವೆಯಾಗಿದ್ದು, ಶಾಸ್ತ್ರೀಯ ನಗರಸ್ಥಿತಿಯಿಂದ, ಸಾಮ್ರಾಜ್ಯಶಾಹಿ ರಚನೆಗಳಾದ ರೋಮನ್ ಅವಧಿಗಳಿಗೆ ಪರಿವರ್ತಿತವಾದ ಸಮಯವನ್ನು ಪ್ರತಿನಿಧಿಸುವ ಒಂದು ಮಹೋನ್ನತ ಸಾರ್ವತ್ರಿಕ ಮೌಲ್ಯದ ಸ್ಥಳವಾಗಿದೆ. ವೆರ್ಗೀನಾ ಎಂಬ ಆಧುನಿಕ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು, ೧೯೭೭ರಲ್ಲಿDisplaying DSC_0035.JPG ಸಾರ್ವಭೌಮ ಅಲೆಕ್ಸಾಂಡರನ ತಂದೆ, ಮ್ಯಾಸಿಡೋನಿಯಾದ ಫಿಲಿಪನ ಸಮಾಧಿಯನ್ನು ಅನ್ವೇಷಿಸಿದಾಗ ಪ್ರಸಿದ್ಧಿಯಾಯಿತು. ಈ ಸಮಾಧಿಯಿರುವ ದಿಬ್ಬವು ಹೊರಗಿನಿಂದ ಆಕರ್ಷಕವೆನಿಸದಿದ್ದರೂ, ಒಮ್ಮೆ ಒಳಹೊಕ್ಕು ನೋಡಿದಾಗ, ಮೋಡಿಮಾಡುತ್ತದೆ. ೧೯೩೭ರಲ್ಲಿ ಪ್ರಾರಂಭವಾದ ಇಲ್ಲಿನ ಉತ್ಖನನಗಳು, ೧೯೭೭ರಲ್ಲಿ ಫಿಲಿಪ್ ಮತ್ತು ಅವನ ಮೊಮ್ಮಗನ ಸಮಾಧಿಗಳನ್ನು ಹೊರತೆಗೆದಾಗ ಪ್ರಸಿದ್ಧಿಯಾದವು. ಕ್ರಿ.ಪೂ ೩೩೬ ಅಕ್ಟೋಬರ್ ತಿಂಗಳಲ್ಲಿ, ನಾಟಕಮಂದಿರದಲ್ಲಿ, ತನ್ನ ರಕ್ಷಣಾದಳದ ಸಿಪಾಯಿಯ ಕೈಯಲ್ಲೇ ಹತನಾದ ಫಿಲಿಪ್, ಒಳಗಿನ ಪಿತೂರಿಗೆ ಬಲಿಯಾಗಿದ್ದನೆಂದು ತಿಳಿದುಬರುತ್ತದೆ.ಈ ರಾಜಸಮಾಧಿಗಳ ಕೋಣೆಗಳಲ್ಲಿ ಕಂಡುಬಂದಿರುವ ವಸ್ತುಗಳು, ನೋಡುಗರನ್ನು ಮತ್ತೊಂದು ಲೋಕ ಮತ್ತು ಸಮಯಕ್ಕೆ ಕೊಂಡೊಯ್ಯುತ್ತವೆ. ರಾಜನ ಉಡುಪುಗಳು, ಚಿನ್ನಾಭರಣಗಳು, ಪಾತ್ರೆಪರಟಿಗಳು, ವರ್ಣರಂಜಿತ ಗಿಲಾವುಗಳು (Frescos), ದಂತದ ಸಾಮಾನುಗಳು, ಯುದ್ಧದ ಪರಿಕರಗಳು, ಅಂದಿನ ನಾಗರೀಕತೆಯ ಉತ್ಕೃಷ್ಟತೆಯನ್ನು ಎತ್ತಿಹಿಡಿಯುತ್ತವೆ. ಈ ಸಮಾಧಿಗಳ ಒಳಗೆ ಛಾಯಾಚಿತ್ರಗಳನ್ನು ತೆಗೆಯಲು ಅನುಮತಿಯಿಲ್ಲ. ಆದರೂ ಸಹಾ, ನಮ್ಮ ಕಣ್ಣುಗಳು ಸೆರೆಹಿಡಿದ ಚಿತ್ರಗಳನ್ನು, ನಮ್ಮ ಮನ ಶಾಶ್ವತವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಯಿತು ಎನ್ನುವುದರಲ್ಲಿ ಸಂದೇಹವೇ ಇಲ್ಲ. ನಮ್ಮೊಡನಿದ್ದ ಮಾರ್ಗದರ್ಶಿ ಈ ಸ್ಥಳದ ಬಗ್ಗೆ ಎಲ್ಲಾ ವಿಷಯಗಳನ್ನು ಬಹಳ ವಿವರವಾಗಿ, ನಿರರ್ಗಳವಾಗಿ ಹೇಳುತ್ತಿದ್ದ ರೀತಿ ನಮ್ಮನ್ನೆಲ್ಲಾ ಗ್ರೀಸ್ ಚರಿತ್ರೆಯನ್ನು ಮತ್ತೊಮ್ಮೆ ಓದಿ ನೋಡಲು ಪ್ರೇರೇಪಿಸಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಲೇ ಬೇಕಾಗಿಲ್ಲ. ಕೊನೆಯಲ್ಲಿ ಆಕೆ ಅಲ್ಲಿನ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಂಶೋಧಕಿ ಎಂದು ತಿಳಿದು ಬಂದಾಗ, ಆಕೆಯ ಜ್ಞಾನದ ಬಗ್ಗೆ ನಮ್ಮ ಗೌರವ ಇಮ್ಮಡಿಯಾಯಿತು.

 

ಮಾರನೆಯ ದಿನ ಅಲ್ಲಿನ ಸ್ಥಳಿಯ ರೆಸ್ಟೋರೆಂಟ್ ಒಂದರಲ್ಲಿ ಮದ್ಯಾನ್ಹದ ಭೋಜನ ಮಾಡಿ, ಸ್ಥಳೀಯ ಖಾದ್ಯಗಳ (ಸಸ್ಯಾಹಾರ) ಸವಿಯನ್ನೂ ಸವಿದೆವು. ಆಲೀವ್ ಎಣ್ಣೆಯಲ್ಲಿ ಹುರಿದ ತರಕಾರಿಗಳು, ಬೇಯಿಸಿದ ಕಾಳಿನ ಜೊತೆಗೆ ಸೇರಿಸಿದ ಅನ್ನ, ಸೊಪ್ಪು, ಹೀಗೆ ಹಲವಾರು ವಿಧದ ಸ್ವಾದಿಷ್ಟವಾದ ಭೋಜನ ನಮ್ಮ ಮನಸ್ಸನ್ನು, ಹೊಟ್ಟೆಯನ್ನು ಸಂತೃಪ್ತಿಗೊಳಿಸಿತು. ಹೀಗೆ ಸಂಸ್ಕೃತಿ, ಪರಂಪರೆ, ಇತಿಹಾಸದ ವೈಭವ ಮತ್ತು ಆಧುನಿಕತೆಯ ಪರಿಪೂರ್ಣ ಮೌಲ್ಯಗಳಿಂದ ಕೂಡಿದ ಥೆಸ್ಸಲೋನಿಕಿಯ ಹಿರಿಮೆ, ಗ್ರೀಸಿನ ಮತ್ತೊಂದು ಶ್ರೇಷ್ಠ ನಗರ ಅಥೆನ್ಸಿನ ವೈಭವಕ್ಕೆ ಸರಿಸಾಟಿಯಿಲ್ಲದಿದ್ದರೂ, ಪ್ರಚಂಡ ಇತಿಹಾಸ, ಹಾಗೂ ವಿಶೇಷ ಲಕ್ಷಣಗಳಿಂದ ತನ್ನದೇ ಆದ ಸೌಂಧರ್ಯ ಮತ್ತು ಸೊಬಗನ್ನು ಹೊಂದಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

-ಉಮಾ ವೆಂಕಟೇಶ್