ಅಡುಗೆ – ಅಡುಗೆಮನೆ ಸರಣಿ: ಉಮಾ ವೆಂಕಟೇಶ್ ಮತ್ತು ಪ್ರೇಮಾ ಸಾಗರ್

ಅಡುಗೆ – ಅಡುಗೆಮನೆ ಸರಣಿಯ ಎರಡನೆಯ ಆವೃತ್ತಿಗೆ ಸ್ವಾಗತ. ಆಧುನಿಕ ಎಲೆಕ್ಟ್ರಿಕ್ ಹಾಟ್ ಪ್ಲೇಟಿನ ಅವಾಂತರ ಹೋದವಾರ ಓದಿ ‘ಹೊಸದರ ಜೊತೆಗೆ ಒದ್ದಾಟವೇ ಗತಿ' ಅಂದ್ಕೊಬಹುದು ನೀವು; ಹಾಗಂತ ಮುಂಚಿನ ಅಡುಗೆಮನೆಯ ಪರಿಕರಗಳೇನೂ ಕಡಿಮೆಯಿರಲಿಲ್ಲ ಅನ್ನೋದು ಉಮಾ ವೆಂಕಟೇಶ್ ಅವರ ಅನುಭವ. ಬರಿಯ ಚಹಾ ಮಾತ್ರವಲ್ಲ, ನಮ್ಮ ಪ್ರೀತಿಯ ಕಾಫಿಯೂ ಒಮ್ಮೊಮ್ಮೆ ಇಕ್ಕಟ್ಟಿಗೆ ಸಿಕ್ಕಿಸಬಹುದೆಂದು ಪ್ರೇಮಾ ಸಾಗರ್ ಹೇಳುತ್ತಾರೆ. ನಡೆಯಿರಿ, ನೋಡೋಣ. – ಎಲ್ಲೆನ್ ಗುಡೂರ್ (ಸಂ.)

ರುಬ್ಬುಗುಂಡಿನ ಪ್ರಸಂಗ – ಉಮಾ ವೆಂಕಟೇಶ್

ಮಧ್ಯಮಿಕ ಶಾಲೆಯ ದಿನಗಳವು. ಮೈಸೂರಿನ ಮಡಿವಂತ ಬ್ರಾಹ್ಮಣ ಕುಟುಂಬಗಳಲ್ಲಿ ಮಹಿಳೆಯರು ತಿಂಗಳ ಮೂರು ದಿನಗಳು ಹೊರಗಿರುತ್ತಿದ್ದ ಸುದ್ದಿ ಎಲ್ಲರಿಗೂ ತಿಳಿದ ಸಾಮಾನ್ಯ ಜ್ಞಾನವಾಗಿತ್ತು.  ಒಟ್ಟು ಕುಟುಂಬಗಳಲ್ಲಿ ಮನೆಯ ಇತರ ಮಹಿಳೆಯರು ಅಡುಗೆಮನೆ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.  ಹಾಗಾಗಿ ಮಕ್ಕಳಿಗೆ ಆ ಸಮಯದಲ್ಲಿ ಅಡುಗೆಮನೆಯ ಬಗ್ಗೆ ಯಾವ ರೀತಿಯಲ್ಲೂ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ.  ಆದರೆ ೭೦ರ ದಶಕದಲ್ಲಿ ಒಟ್ಟು-ಕುಟುಂಬದ ದೃಶ್ಯ ಬದಲಾಗಿ, ಸಣ್ಣ ಕುಟುಂಬಗಳ ಪದ್ಧತಿ ಶುರುವಾಗಿತ್ತು.  ನಮ್ಮ ಮನೆಯಲ್ಲಿ ನಾವಿಬ್ಬರು, ನಮಗೆ ಮೂರು ಮಕ್ಕಳು ಎನ್ನುವ ಭಾರತ ಸರ್ಕಾರದ ಕುಟುಂಬ ಯೋಜನೆಯ ಜಾಹೀರಾತಿನ ಘೋಷಣೆಯ ಪ್ರಕಾರ ನಾವು ಮೂರು ಮಕ್ಕಳು.  ನಮ್ಮ ತಂದೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದರಿಂದ, ತಿಂಗಳ ಆ ಮೂರು ದಿನಗಳ ಅಡುಗೆಮನೆ ಜವಾಬ್ದಾರಿ ಮಾಧ್ಯಮಿಕ ಶಾಲೆಯಲ್ಲಿದ್ದ ನನ್ನ ಅಕ್ಕ, ನಾನು ಮತ್ತು ನನ್ನ ತಮ್ಮನ ಹೆಗಲಿಗೆ ಬಿತ್ತು.  ಸರಿ, ಆಗೆಲ್ಲ ಇನ್ನೂ ಗ್ಯಾಸ್ ಸ್ಟವ್, ಮಿಕ್ಸರ್, ಗ್ರೈಂಡರುಗಳಂತಹ ಸೌಲಭ್ಯವಿರಲಿಲ್ಲ.  ಎಲ್ಲವೂ ನಮ್ಮ ತೋಳ್ಬಲವನ್ನು ಪರೀಕ್ಷಿಸುವ ಕಲ್ಲಿನ ಉಪಕರಣಗಳೇ ಬಳಕೆಯಲ್ಲಿದ್ದ ಕಾಲ. ನಾವೋ ಮಹಾ ಸಂಕೇತಿ ಬ್ರಾಹ್ಮಣ ಜನ!  ಹುಳಿ ಮಾಡಿದರೆ ಅದನ್ನು ತಿರುವಿ ಮಾಡಬೇಕು.  ಪುಡಿ ಹಾಕಿದ ಸಾಂಬಾರ್ ಯಾರಿಗೂ ಹಿಡಿಸುತ್ತಿರಲಿಲ್ಲ.  ಭಾರಿ ಪೊಗರಿನ ಜನ.  ಸರಿ ನಮ್ಮಮ್ಮ, ಮೂಲೆಯಲ್ಲಿ ನಿಂತು ಹೇಗೆ ಮಾಡಬೇಕು ಎನ್ನುವುದನ್ನು ನಿರ್ದೇಶಿಸಿ ನಮ್ಮ ಕೈಯಲ್ಲಿ ಅಡುಗೆ ಮಾಡಿಸುತ್ತಿದ್ದರು.  ನನ್ನ ಅಕ್ಕನಿಗೆ ಅಡುಗೆಮನೆಯ ಬಗ್ಗೆ ಹೆಚ್ಚಿನ ಅಸ್ಥೆಯಿರಲಿಲ್ಲ.  ಅವಳು ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವ ಕೆಲಸ ಮಾಡಿ, ಕೈತೊಳೆದುಕೊಳ್ಳುತ್ತಿದ್ದಳು.  ನಾನು, ನನ್ನ ತಮ್ಮ ಇಬ್ಬರಿಗೂ ಅಡುಗೆಮನೆಯ ಬಗ್ಗೆ ಮಹಾ ಕುತೂಹಲ.  ಅಂದು ಈರುಳ್ಳಿ-ಆಲೂಗೆಡ್ಡೆ ಹಾಕಿ ವಿಶೇಷವಾದ ಸಾಂಬಾರ್ ಮಾಡಿ ಎಲ್ಲರ ಮನಗೆಲ್ಲಲು ನಿರ್ಧರಿಸಿದೆವು.  ಸರಿ ತೊಗರಿಬೇಳೆಯನ್ನು ಸ್ಟವ್ ಮೇಲೆ ಬೇಯಿಸಿ ಆಯಿತು.  ತರಕಾರಿಯನ್ನು ಹಾಗೂ ಹೀಗೂ ಹೆಚ್ಚಿ ಅದನ್ನೂ ಬೇಯಿಸಿದ್ದೆವು.  ಆಮೆಲೆ ಬಂತು ಹುಳಿಗೆ ಮಸಾಲೆಯನ್ನು ರುಬ್ಬುಗುಂಡಿನಲ್ಲಿ ತಿರುವಿ ಮಾಡುವ ಸನ್ನಿವೇಶ!  ಅಮ್ಮ ಸಾರಿನ ಪುಡಿ ಹಾಕಿ ಕೆಲಸ ಮುಗಿಸಿ ಎಂದು ನೀಡಿದ ಸಲಹೆಯನ್ನು ನಾನು ನನ್ನ ತಮ್ಮ ಸಾರಾಸಗಟಾಗಿ ತಿರಸ್ಕರಿಸಿದೆವು.  ಮನೆಯಲ್ಲಿದ್ದ ರುಬ್ಬುಗುಂಡಿನ ಗಾತ್ರ ನೋಡಿ ಸ್ವಲ್ಪ ಭಯವಾದರೂ, ಮನಸ್ಸಿಲ್ಲಿದ್ದ ಛಲ, ನಮ್ಮನ್ನು ಆ ಕಾರ್ಯ ಮಾಡಲೇಬೇಕೆಂಬ ನಿರ್ಧಾರಕ್ಕೆ ನೂಕಿತ್ತು.  ಸರಿ ಮೊದಲಿಗೆ ಎಲ್ಲಾ ಸಾಂಬಾರ ಪದಾರ್ಥಗಳನ್ನೂ ಬಾಂಡಲೆಯಲ್ಲಿ ಹುರಿದೆವು.  ನಂತರ ಅದನ್ನು ಕಬ್ಬಿಣದ ಹಾರೆಯಿಂದ ನಾನು ಹಾಗೂ ಹೀಗೂ ಮುಲುಕುತ್ತಾ ಪುಡಿಮಾಡಿಯೇ ಬಿಟ್ಟೆ.  

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್

ಸರಿ ಇನ್ನು ರುಬ್ಬುವ ಕೆಲಸ.  ನನ್ನ ತಮ್ಮ, “ಲೇ ಅಕ್ಕ ನಾ ಮಾಡ್ತೀನಿ ಕಣೆ” ಎಂದು ತನ್ನ ಶೌರ್ಯವನ್ನು ಮೆರೆದಾಗ ನಾನು ತಕ್ಷಣವೇ ಒಪ್ಪಿಕೊಂಡೆ.  ಇಲ್ಲಿ ಒಂದು ಸಮಸ್ಯೆ ಇತ್ತು.  ರುಬ್ಬುವ ವ್ಯಕ್ತಿ ಒಂದು ಕೈಯಿಂದ ಮಸಾಲೆಯನ್ನು ರುಬ್ಬುಗುಂಡಿನ ಕುಳಿಗೆ ನೂಕುತ್ತಾ, ಮತ್ತೊಂದು ಕೈಯಲ್ಲಿ ರುಬ್ಬು ಗುಂಡನ್ನು ತಿರುಗಿಸಿ ಕೆಲಸ ಮುಗಿಸಬೇಕಿತ್ತು.  ಇದು ಒಂದು ರೀತಿಯಲ್ಲಿ ಮಲ್ಟಿ-ಟಾಸ್ಕಿಂಗ್ ಕೆಲಸ.  ಮೊದಲ ಬಾರಿಗೆ ಈ ಕಾರ್ಯವನ್ನು ಯಾವ ಟ್ರಯಲ್ ಇಲ್ಲದೇ ಆ ಎಳೆ ವಯಸ್ಸಿನಲ್ಲಿ ನಿಭಾಯಿಸುವುದು ಸ್ವಲ್ಪ ಚಾಲೆಂಜಿಂಗ್ ಕೆಲಸ.  ಸರಿ ನನ್ನ ತಮ್ಮ ರುಬ್ಬುಗುಂಡಿನ ಮುಂದೆ ಕುಳಿತು ಕಾರ್ಯ ಪ್ರಾರಂಭಿಸಿದ.  ಅವನು ಲೇ ಅಕ್ಕ ನೀನು ನೀರು ಸ್ವಲ್ಪ ಸ್ವಲ್ಪವಾಗಿ ಸೇರಿಸಿದರೆ, ನಾನು ರುಬ್ಬುತ್ತೇನೆ ಎಂದು ಜಾಣ್ಮೆ ಮೆರೆದಾಗ, ನಾನು ಖುಷಿಯಾಗಿ, ಇನ್ನೇನು ಕೆಲಸ ಮುಗಿದೇ ಹೋಯ್ತು ಎಂದು ಉಬ್ಬಿದೆ.  ಸರಿ ಅವನ ಪಕ್ಕದಲ್ಲಿ ನೀರಿನ ಪಾತ್ರೆ ಹಿಡಿದು ಕುಳಿತೆ.  ನನ್ನ ತಮ್ಮ ಇಲ್ಲಿ ಒಂದು ತಪ್ಪು ಮಾಡಿದ.  ಎಲ್ಲಾ ಮಸಾಲೆಪುಡಿಯನ್ನೂ ಒಮ್ಮೆಗೆ ಕುಳಿಗೆ ತುಂಬಿ, ಅದನ್ನು ಬಹಳ ಬೇಗ ತಿರುವಿ ಮುಗಿಸಿಬಿಡುವ ಯೋಚನೆಮಾಡಿದ್ದ.  ನಾನು ಅದನ್ನು ಗಮನಿಸದೆ, ಒಮ್ಮೆಗೆ ನೀರನ್ನು ಕುಳಿಗೆ ಹುಯ್ದೆ.  ಸರಿ ನನ್ನ ತಮ್ಮ ಗುಂಡನ್ನು ಕುಳಿಗೆ ಬಿಟ್ಟಾಗ, ಒಮ್ಮೆಗೆ ಅದರಲ್ಲಿದ್ದ ಮಸಾಲೆಯೆಲ್ಲಾ ನನ್ನ ಕಣ್ಣಿಗೆ ಹಾರಿತು.  ನಾನು ಜೋರಾಗಿ ಅರಚಿಕೊಂಡು, ಅವನ ತಲೆಯ ಮೇಲೆ ಜೋರಾಗಿ ಎರಡು ಸಲ ಕುಟ್ಟಿ ಬಚ್ಚಲು ಮನೆಯತ್ತ ಧಾವಿಸಿದೆ.  ಮನೆಯ ಹೊರಗೆ ಕಾಂಪೌಂಡಿನಲ್ಲಿ ನಿಂತಿದ್ದ ಅಮ್ಮ ಓಡಿ ಬಂದು ನೋಡಿ ತಲೆತಲೆ ಚಚ್ಚಿಕೊಂಡು ನನ್ನ ತಮ್ಮನ ಮೇಲೆ ಹರಿಹಾಯ್ದರು.  ಸರಿ ನಾನು ಭಂಡತನದಿಂದ ಕಣ್ಣು ತೊಳೆದು, ಮತ್ತೊಮ್ಮೆ ರುಬ್ಬುಗುಂಡಿನ ಕಡೆಗೆ ವಾಪಸಾದೆ.  ಈ ಬಾರಿ ಕುಳಿಯಲ್ಲಿದ್ದ ಮಸಾಲೆಯನ್ನು ಹೊರತೆಗೆದು ಅದನ್ನು ಸ್ವಲ್ಪಸ್ವಲ್ಪವಾಗಿ ಒಳಗೆ ನೂಕಿಕೊಂಡು ರುಬ್ಬಬೇಕೆಂದು ಅಮ್ಮನಿಂದ ಆದೇಶ ಬಂತು. ಮತ್ತೆ ಪ್ರಾರಂಭವಾಯ್ತು ರುಬ್ಬುವ ಕಾರ್ಯ.  ನನ್ನ ತಮ್ಮ ಒಂದು ಕೈಯಲ್ಲಿ ಮಸಾಲೆ ನೂಕಿಕೊಳ್ಳುವುದೇನೋ ಮಾಡಿದ, ಆದರೆ ರುಬ್ಬುವ ಗುಂಡನ್ನು ತಿರುಗಿಸುವುದಕ್ಕೆ ಬದಲಾಗಿ, ಅವನ ತಲೆಯನ್ನು ತಿರುಗಿಸಲು ಪ್ರಾರಂಭಿಸಿದ.  ನಾವೆಲ್ಲಾ ಆ ದೃಶ್ಯವನ್ನು ನೋಡಿ ನಗಲಾರಂಭಿಸಿದೆವು.  ಅದನ್ನು ಗಮನಿಸಿದ ನನ್ನ ತಮ್ಮ, “ಲೇ ಅಕ್ಕ ಸ್ವಲ್ಪ ನನ್ನ ತಲೆ ಹಿಡಿದುಕೊ, ನಾನು ಬೇಗ ರುಬ್ಬಿ ಬಿಡುತ್ತೇನೆ” ಎಂದಾಗ ನನ್ನ ತಾಯಿ ಬಿದ್ದುಬಿದ್ದು ನಗಲಾರಂಭಿಸಿದರು.  ಕಡೆಗೆ ರುಬ್ಬುವ ಕಾರ್ಯವನ್ನು ನಾನೇ ನಿರ್ವಹಿಸಿದೆ.  ಈ ಪ್ರಕರಣವನ್ನು ಮನೆಯ ಇತರ ಸಂಬಂಧಿಗಳ ಮುಂದೆ ಹೇಳಿಕೊಂಡು ಲೆಕ್ಕವಿಲ್ಲದಷ್ಟು ಬಾರಿ ನಕ್ಕಿದ್ದೇವೆ.  ನನ್ನ ತಂದೆಯ ಹಲವು ಸೋದರ ಸಂಬಂಧಿಗಳು ಈಗಲೂ ಆ ಪ್ರಕರಣ ಜ್ಞಾಪಿಸಿಕೊಂಡು, ನಮ್ಮ ಶ್ರೀನಿವಾಸ ಹುಳಿಗೆ ರುಬ್ಬಿದ್ದನ್ನು ಮರೆಯುವ ಹಾಗಿಲ್ಲ ಎಂದು ಮೆಲಕು ಹಾಕುತ್ತಾರೆ.  ಇಂದು ಅಡುಗೆ ಮನೆಯಲ್ಲಿ ನಮಗಿರುವ ಸೌಲಭ್ಯಗಳು ಅನೇಕ.  ಕುಕಿಂಗ್-ರೇಂಜ್, ಮಿಕ್ಸರ್, ಗ್ರೈಂಡರ್, ಫ಼ುಡ್-ಪ್ರೊಸೆಸರ್ ಒಂದೆ ಎರಡೇ; ಆದರೂ ಮನೆಯಲ್ಲಿ ಹಿರಿಯರು ಇಂದಿಗೂ ದೋಸೆ, ಇಡ್ಲಿ ನಮ್ಮ ಹಿಂದಿನ ರುಬ್ಬುಗುಂಡಲ್ಲಿ ಮಾಡಿದ ರುಚಿ ಈ ಆಧುನಿಕ ಉಪಕರಣ ಬಳಸಿ ಮಾಡಿದರೆ ಇರುವುದಿಲ್ಲ ಎಂದು ಗೊಣಗುವುದನ್ನು ಕೇಳುತ್ತಿರುತ್ತೇನೆ.  ಹಳೆಯ ಪೀಳಿಗೆಯ ತಲೆಗಳಿಗೆ ಹೊಸತನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವ ಮನಸ್ಸಿಲ್ಲ.  “Old habits die hard”.

*********************************************************************************

ರೀ … ಒಂದ್ ಕಪ್ಪು ಪ್ರೇಮಕಾಫಿ!” – ಪ್ರೇಮಾ ಸಾಗರ್  

ಸುಮಾರು 2 ವರ್ಷಗಳ ಹಿಂದಿನ ಮಾತಿರಬಹುದು.  ಆಫೀಸ್ ನಲ್ಲಿ ಬಹಳ ಕೆಲಸವಿದ್ದ ಸಮಯ. ಒಂದು ದಿನ ಆಫೀಸ್ ಮುಗಿದ ನಂತರ ಮಕ್ಕಳನ್ನು ಪಿಕಪ್ ಮಾಡಿ ಮನೆ ತಲುಪಿದ್ದೆ.  ಸಂಜೆ ಮನೆಗೆಲಸಗಳು ಹೆಚ್ಚಾಗಿ, ಮಕ್ಕಳ ರಗಳೆಯೂ ಹೆಚ್ಚಾಗಿ ಸರಿದೂಗಿಸಲಾರದೆ ಕಣ್ಣೀರು ಬಂದಿತ್ತು.  ಮನೆಯವರು ಗದರುತ್ತಾ “ಅಷ್ಟೇ ತಾನೇ? ನಾನಿಲ್ಲವೆ? ಅಡುಗೆ ಮನೆ ಕೆಲಸ ನನಗೆ ಬಿಡು” ಎಂದಾಗ, ಆಶ್ಚರ್ಯ ದಿಂದ ಕಣ್ಣರಳಿತ್ತು.  ಎಂದೂ ಅಡುಗೆ ಮಾಡಿರದ ಅವರು “ಇರು, ನಿನ್ನ ಮೂಡ್ ಸರಿ ಮಾಡಲು ಏನು ಬೇಕೆಂದು ನನಗೆ ಗೊತ್ತು” ಎಂದು ತಕ್ಷಣ ಅಡುಗೆ ಮನೆಗೆ ನಡೆದರು.

ನಾನು ಇನ್ನೂ ತಲೆಯ ಮೇಲೆ ಕೈ ಹೊತ್ತು ನನ್ನದೇ ಲೋಕದಲ್ಲಿ ಕುಳಿತಿದ್ದೆ.  ಕಾಫಿಯ ಸುಗಂಧ ಬಂದಾಗ ಎದುರಿಗೇ ಬಿಸಿ ಬಿಸಿ ಕಾಫಿ!  “ಕಾಫಿ ಮಾಡಿದಿರಾ?” ಎಂದಾಗ, “ಕುಡಿದು ನೋಡು” ಥಟ್ ಅಂತ ಬಂತು ಉತ್ತರ.  ನನ್ನ ಮನಸ್ಥಿತಿಯೋ, ಕಾಫಿಯ ವಿಶಿಷ್ಟ ರುಚಿಯೋ, “ವಾವ್, ಅಮೇಜಿಂಗ್!” ನಾನು ಉದ್ಗರಿಸಿದ್ದೆ!  ಹೀಗೆ ಶುರುವಾಯಿತು ನಮ್ಮ ಸಂಜೆಯ ಕಾಫಿಯೊಂದಿಗೆ ಪ್ರೇಮ ಸಲ್ಲಾಪ. ನಿಧಾನವಾಗಿ ದಿನನಿತ್ಯ ಕಾಫಿ ಮಾಡುವ ಕೆಲಸ ಪತಿಯ ಪಾಲಾಯಿತು.  ಇಂಡಿಯಾದಿಂದ ಬಹಳ ದೂರವಿದ್ದ ನಮಗೆ ಇದನ್ನು ಗುಟ್ಟಾಗಿಡುವುದು ಕಷ್ಟವಾಗಲಿಲ್ಲ.

ಹೀಗೆ ವರ್ಷವೇ ಕಳೆದಿರಬೇಕು.  ಅತ್ತೆ ಮಾವ ನಮ್ಮೊಂದಿಗೆ ಸ್ವಲ್ಪ ಕಾಲ ಕಳೆಯಲು ಬಂದಿದ್ದರು. ಇಂಡಿಯಾದಿಂದ ಯಾರಾದರೂ ಬಂದರೆ ನಮಗೆ ಎಲ್ಲಿಲ್ಲದ ಖುಷಿ!  ಆಗ ಮನೆಯಿಂದ ಕೆಲಸ ಮಾಡುವುದು ಇಷ್ಟು ಸಾಮಾನ್ಯವಾಗಿರಲಿಲ್ಲ.  ಕೊರೊನ ಬರುವ ಮುಂಚೆ ನಮಗೂ ಆಫೀಸಿಗೆ ಹೋಗದೇ ಕೆಲಸ ಮುಗಿಸಲು ಉತ್ಸಾಹ.  ಅಂತಹದೊಂದು ದಿನ ಲ್ಯಾಪ್ಟಾಪಿನಲ್ಲಿ ಮಗ್ನವಾಗಿದ್ದ ನನಗೆ ಸುತ್ತ ಮುತ್ತಲಿನ ಹರಾಸು ಇರಲಿಲ್ಲ. ಹತ್ತಿರದಲ್ಲಿ ಕುಳಿತಿದ್ದ ಅತ್ತೆ ಮಾವ ಗಮನಕ್ಕೆ ಬರಲಿಲ್ಲ. “ರೀ, ಸ್ವಲ್ಪ ಕಾಫಿ ಮಾಡಿ, ಬ್ರೇಕ್ ತೊಗೊಳ್ಳುವ” ರಾಗವಾಗಿ ಕೂಗು ಹಾಕಿದ್ದೇ ತಲೆಯೆತ್ತಿ ನೋಡಿದೆ!  ಮನೆಯವರ ಮುಖದಲ್ಲಿ ಉದ್ವೇಗ!  ತಕ್ಷಣ ನನ್ನ ಕೈ ತನ್ನಿಂತಾನೇ ಬಾಯಿ ಮುಚ್ಚಿತು.  ಅಷ್ಟರಲ್ಲೇ “ಓಹ್!” ಎಂಬ ಉದ್ಗಾರವೂ ಹೊರ ನುಸುಳಿತ್ತು!

ಭೂಮಿಯೇ ನನ್ನನ್ನು ನುಂಗಬಾರದೇ? ಹ್ಯಾರಿ ಪಾಟರ್ ನಂತೆ ಚಿಟಿಕೆ ಹೊಡೆದು ಮಾಯವಾಗಬಾರದೇ?  ಇದು ಬರೀ ಕನಸಾಗಿರಬಾರದೇ?  ಹೀಗೆ ಎಷ್ಟೆಲ್ಲ ಆಲೋಚನೆಗಳು ಕ್ಷಣದಲ್ಲಿ ಆವರಿಸಿದವು.

“ಹಾಗೇ ನಮಗೂ ಒಂದೊಂದು ಲೋಟ ಕಾಫಿ ಮಾಡು ಮಗ.  ಎಷ್ಟು ಚಳಿ ಇಲ್ಲಿ.  ಇನ್ನೊಮ್ಮೆ ಕಾಫಿ ಚಪ್ಪರಿಸೋಣ”  ಎಂದಾಗಲೇ ಅತ್ತೆಯ ಕಡೆ ನೋಡಲು ಧೈರ್ಯ ಮಾಡಿದ್ದು.  ಅವರ ಕಳ್ಳನೋಟ ನೋಡಿ ಕೃತಜ್ಞತೆಯ ಮುಗುಳು ನಗೆ ನನ್ನದಾಯಿತು.  ಎಲ್ಲರೂ ನಗತೊಡಗಿದಾಗ  ಕಾಫಿಯ ಘಮಘಮದ ಜೊತೆಗೆ ಅಕ್ಕರೆಯ ನಗು ಮನೆಯೆಲ್ಲ ಆವರಿಸಿತು.  ಕಾಫಿಯ ಮಹಿಮೆ ನಮ್ಮನ್ನೆಲ್ಲ ಮತ್ತಷ್ಟು ನಿಕಟವಾಗಿಸಿತ್ತು!

ಚಂದಿರ…… ಚಂದಿರ…… – ಎರಡು ಕವನಗಳು; ಮುರಳಿ ಹತ್ವಾರ್ ಹಾಗೂ ಪ್ರೇಮಾ ಸಾಗರ್

ವಿಜ್ಞಾನಿಗೆ ಸುಮಾರು ನಾಲ್ಕೂವರೆ ಬಿಲಿಯನ್ ವರ್ಷಗಳಿಂದ ಭೂಮಿಯ ಸುತ್ತ ಸುತ್ತುವ ಕಲ್ಲಾದರೂ, ಚಂದ್ರ ಪ್ರತಿಯೊಬ್ಬ ದೇಶದ, ಭಾಷೆಯ, ಸಂಸ್ಕೃತಿಯ ಕವಿಯ ಪ್ರೀತಿಯ ವಿಷಯ. ಚಂದ್ರ ನಮ್ಮಲ್ಲಿ ಮಕ್ಕಳಿಗೆ ಆಟವಾಡಿಸುವ ಚಂದಾಮಾಮನಾದರೆ, ಪಾಶ್ಚಾತ್ಯ ದೇಶಗಳಲ್ಲಿ ಚೀಸಿನಿಂದ ಮಾಡಲ್ಪಟ್ಟವನಾಗುತ್ತಾನೆ. ಮುಖ್ಯವಾಗಿ, ಪ್ರೇಮಿಗಳಿಗೆ ಅದರಲ್ಲೂ ವಿರಹಿಗಳಿಗೆ, ಚಂದ್ರನ ಬಗ್ಗೆ ಮಾತಾಡದಿದ್ದರೆ ಆಗುವುದೇ ಇಲ್ಲ; ಪ್ರೇಮಿಗಳಿಗೆ ತಂಪಾಗಿ ಬೆಳಗುವ ಚಂದ್ರ, ವಿರಹಿಗಳನ್ನು ಬಿಸಿಯಾಗಿ ಸುಡುತ್ತಾನಂತೆ! ಸಧ್ಯಕ್ಕೆ, ಮತ್ತೆ `ರೇಸ್ ಟು ಮೂನ್` ಶುರುವಾಗುವ ಲಕ್ಷಣಗಳೂ ಇವೆ. ಅಂತಹ ಚಂದ್ರನ ಬಗ್ಗೆ ನಮ್ಮ ಅನಿವಾಸಿಯ ಮುರಳಿ ಹತ್ವಾರ್ ಹಾಗೂ ಹೊಸದಾಗಿ ಪರಿಚಯಿಸುತ್ತಿರುವ ಕವಯಿತ್ರಿ ಪ್ರೇಮಾ ಸಾಗರ್ ಅವರ ಅನಿಸಿಕೆಗಳೇನು, ಓದೋಣವೆ? ಓದಿ ನಾವೂ ಬರೆಯುವ, ಬರೆದದ್ದನ್ನು `ಅನಿವಾಸಿ.ಕಾಂ`ಗೆ ಕಳಿಸುವ… – ಎಲ್ಲೆನ್ ಗುಡೂರ್ (ಸಂ.)

ಚಂದಿರನಲ್ಲಿ ನೀರಿದೆಯಂತೆ – ಮುರಳಿ ಹತ್ವಾರ್

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್
 ಬನ್ನಿ ಹೋಗೋಣ
 ಚಂದಿರನಲ್ಲಿ ನೀರಿದೆಯಂತೆ
  
 ಚಂಬು-ಬಿಂದಿಗೆ, ಹಾರೆ-ಗುದ್ದಲಿ
 ದಿಂಬು-ಹಾಸಿಗೆ ಹಿಡಿದು ಬನ್ನಿ ಸಾಲಲಿ
 ಪ್ರೋಕ್ಷಣೆ ಆಪೋಶನಗಳ ಮಡಿಯಲಿ
 ಗುಂಡಿ ತೋಡಬೇಕಿದೆ ಶಶಿಯ ಬಯಲಲಿ
  
 ಅಗೆದಷ್ಟೂ ಬಗೆಬಗೆಯ ನಿಧಿಯಂತೆ,
 ಕಣಕಣವೂ ಅಪರಿಮಿತ ಬೆಲೆಯಂತೆ,
 ತುಂಡುಗಳ ಭುವಿಗೆ ಕಳಿಸೋಣವಂತೆ
 'ಮೇಡ್ ಇನ್ ಮೂನ್' ಗೆ ಕಾದಿದೆ ಸಂತೆ
  
 ಏನು ಬೇಕಾದರೂ ಕಟ್ಟಬಹುದು
 ಕಲ್ಲು ಕಲ್ಲಿಗೂ ನಿಮ್ಮ ಹೆಸರೇ ಇಟ್ಟು
 ದೇವರೆಂದು ಜನ ಪೂಜಿಸಲೂ ಬಹುದು
 ನಿಮಗೇ ಹರಕೆಯ ಹಾರ ಕೊಟ್ಟು!
  
 ಹೇಳಿ, ಯಾರು ಬರುತ್ತೀರಿ?
 ನೀವಾ! ಹೆಸರೇನೆಂದಿರಿ?
 ಬೆಂಗಳೂರಿನಲ್ಲಿ ಒಂದೆರಡು ಸೈಟು?
 ಹೋಗಲಿ, ಬ್ಯಾಂಕಿನಲ್ಲಿ ದೊಡ್ಡ ಡೆಪಾಸಿಟ್ಟು?
 ಅಧಿಕಾರ ಮಾಡುವ ಧಿಮಾಕಿನ ಸೀಟು?
 ಯಾವುದು ಇಲ್ಲವೇ?
 ಬೆವರಿನ ಅಂಗಡಿಯಾದರೂ ಇಟ್ಟಿದ್ದೀರಾ?
 ಇಲ್ಲಾ, ಮಾರಿಕೊಳ್ಳುವ ಮಾದಕತೆಯ ಮಾರ್ಕೆಟ್ಟು?
  
 ಯಾವುದೂ ಇಲ್ಲ ಎಂದರೆ, ಪಕ್ಕಕ್ಕೆ ಬನ್ನಿ.
 ಬಲವಿಲ್ಲದ, ಎಡವೆನ್ನದ ನಡುವೊಂದು
 ನೀರಿಲ್ಲದ ಮರುಭೂಮಿಯ ಮಡು
 ಮರೀಚಿಕೆಯ ಮಾಯೆಯಲ್ಲಿ ಮಜಾ ಮಾಡಿ. 
  
 ಉಳಿದವರು ಬನ್ನಿ, ಬನ್ನಿ,
 ಈಗಲೇ ಹಾರಬೇಕಿದೆ ಮೇಲೆ
 ಹೆಜ್ಜೆ ಮೊದಲಿಟ್ಟವರೇ ರಾಜರಂತೆ
 ಕಾಲಿಟ್ಟಮೇಲೆ ಉಳಿದೆಲ್ಲ ಚಿಂತೆ
  
 ನೀರು ಖಾಲಿಯಾದರೆ ಏನು ಎಂದಿರಾ
 ಆದಾಗ ನೋಡೋಣ ಬಿಡಿ
 ಹೇಗೂ ಚೆನ್ನಾಗಿ ಕಲಿತಿದ್ದೇವಲ್ಲ
 ಚಿಮ್ಮಿಸಿದರಾಯಿತು ಚಂದ್ರನ
 ಮೂಲೆ ಮೂಲೆಯಲ್ಲೂ
 ಬಿಸಿ ಬಿಸಿಯ ನೆತ್ತರಿನ ಬುಗ್ಗೆ! 

*************************************************

ಹೀಗೊಂದು ಗೆಳೆತನದ ಬಯಕೆ! – ಪ್ರೇಮಾ ಸಾಗರ್

ಪರಿಚಯ: ನಾನು ಒಬ್ಬ ಹವ್ಯಾಸಿ ಲೇಖಕಿ. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಈಳಿ ಎಂಬ ಸಣ್ಣ ಊರಿನವಳು. ಬೆಂಗಳೂರಲ್ಲಿ ಶಿಕ್ಷಣ ಪಡೆದು Engineering degree ಪಡೆದುಕೊಂಡಿದ್ದೇನೆ. IT ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಗಂಡ ಹಾಗು ಮಕ್ಕಳೊಡನೆ Milton Keynes ನಲ್ಲಿ ವಾಸವಾಗಿದ್ದೇನೆ.

ಚಿಕ್ಕಂದಿನಿಂದಲೂ ಹಲವಾರು ಭಾಷೆಗಳಲ್ಲಿ ಹಾಗು ಅನ್ಯಸಂಸ್ಕೃತಿಗಳಲ್ಲಿ ಆಸಕ್ತಿ. ಇಂತಹ ಆಸಕ್ತಿಯನ್ನು ವಿಕಾಸಗೊಳಿಸುವ, ವ್ಯಕ್ತಪಡಿಸುವ ಒಂದು ಮಾಧ್ಯಮವನ್ನು ಬರವಣಿಗೆಯಲ್ಲಿ ಕಂಡೆ. ನನ್ನ ತಾಯಿಯವರಾದ ಶ್ರೀಮತಿ ಕಮಲಾ ಅನಂತ, ಆಗಾಗ ಹವ್ಯಾಸಕ್ಕಾಗಿ ಬರೆಯುತ್ತಿದ್ದ ಚುಟುಕು ಕವನಗಳು ನನ್ನನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು. ನನಗೇ ಗೊತ್ತಿಲ್ಲದಂತೆ ಈ ಚಿಕ್ಕ ಹವ್ಯಾಸ ನನ್ನಲ್ಲಿ ಬಂದು ಸೇರಿಕೊಂಡಿತು.

ನಾನು ಬರೆವ ಪದ್ಯಗಳು ಹಾಗು ಲೇಖನಗಳು ನನ್ನ ಭಾವನೆಗಳಿಗೆ, ಆಸೆಗಳಿಗೆ, ಅಂದಾಜುಗಳಿಗೆ ರೆಕ್ಕೆ ಕೊಟ್ಟು, ಸೆರೆಯಿಲ್ಲದಂತೆ ಎತ್ತರಕ್ಕೆ ಹಾರಿಸುವ ಧ್ಯೇಯ ನನ್ನದಾಗಿದೆ; ಈಗಿನವರೆಗೂ ನನ್ನ ಕಣ್ಣುಗಳಿಗಷ್ಟೇ ಸೀಮಿತವಾಗಿದ್ದು, ನನ್ನ ಮನಸ್ಸನ್ನು ಹಗುರವಾಗಿಸುವ ಕಾರ್ಯ ಮಾಡುತ್ತಾ ಬಂದಿವೆ. ಇದು ನನ್ನ ಮೊದಲ ಪ್ರಕಟಣೆ.

ಇಂತಹದೊಂದು ಹವ್ಯಾಸ ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ನನ್ನ ಅಮ್ಮನಿಗೂ, ಶಿಕ್ಷಕರಿಗೂ, ನನ್ನನ್ನು ಪ್ರೋತ್ಸಾಹಿಸುವ ನನ್ನೆಲ್ಲ ಬಂಧು ಬಾಂಧವರಿಗೂ ನಾನು ಸದಾ ಚಿರಋಣಿ.

***

 ಬಾನಿನ ಅಂಗಳದಿ ಬೆಳ್ಳಿಯ ಆಟ..
 ಮುಚ್ಚಿಡಲೆಂದು ಮೋಡದ ಓಟ! 
  
 ಚಂದಿರನೆಡೆಗೆ ನನ್ನಯ ಒಲವೇ.. 
 ಮಿಣುಕಲೂ ಆಗಸ ಅದೆಂತಹ ಚಲುವೇ!
  
 ಇದ್ದರೆ ಸಾಕೇ ತಂಗಾಳಿಯ ಒಡನಾಟ?
 ಕಾತುರದಿ ಕಾದಿಹೆನು ನಿನ್ನಯ ನೋಟ!
  
 ಮೈ ಜುಂ ಎನುತಿದೆ ಕಿರಣದ ಮತ್ತು..
 ಕಾಡಲು ತರವೇ ಸಂಜೆಯ ಹೊತ್ತು? 
  
 ನೀ ಅಲ್ಲಿ ನಾನಿಲ್ಲಿ ನಿಲುಕದಾ ಮಾತು..
 ಸಾಧ್ಯವೆ ಹರಟೆ ಜೊತೆಯಲ್ಲಿ ಕೂತು?
  
 ನೀಲಾಂಬರವನೆ ನೀ ಹೊದೆದಾ ಮೇಲೆ.. 
 ತಲುಪುವುದೆ ನಿನಗೆ ನಾ ಕರೆಯುವಾ ಓಲೆ? 
  
 ಬಂದುಬಿಡು ಸಾಕು ಈ ಕಣ್ಣಮುಚ್ಚಾಲೆ..
 ಮುನಿಸಿಕೊಂಡರೆ ನೋಡೆನು ನಾನ್ ಇನ್ನೆಂದೂ ಮೇಲೆ !
  
 - ಪ್ರೇಅಸಾ
********************************************