ರಾಮ ಸೀತೆಯರ ಶ್ರೀಲ೦ಕೆಯ ಪ್ರವಾಸ(ವನ)!!

(  ಪುರಾಣದಲ್ಲಿ  ರಾವಣ  ಸೀತಾದೇವಿಯನ್ನು ಬಲವಂತವಾಗಿ  ಪುಷ್ಪಕವಿಮಾನದಲ್ಲಿ ಶ್ರೀಲಂಕೆಗೆ ಕದ್ದೊಯ್ದ! ಹೆಂಡತಿಯ ರಕ್ಷಣೆಗೆ ಶ್ರೀರಾಮ ವಾನರ ಸೇನೆಯೊಂದಿಗೆ ದೌಡಯಿಸಿದ!! ಅವರ ಕತೆಯನ್ನು ನಮಗೆ ವಾಲ್ಮೀಕಿಗಳು ಶ್ರೀ ರಾಮಾಯಣ ಮಹಾಕಾವ್ಯದ ಮೂಲಕ ಹೇಳಿದ್ದಾರೆ.

ಆದರೆ ನಮ್ಮ ಆಧುನಿಕ ರಾಮ-ಸೀತೆಯರು  ಪ್ರವಾಸದ ಗುಂಗಲ್ಲಿ ವಿಮಾನವನ್ನೇರಿ ಶ್ರೀಲಂಕಾದ ಪ್ರಯಾಣವನ್ನು ಸ್ವ -ಇಚ್ಚೆಯಿಂದ ಕೈಗೊಂಡು  ತಮ್ಮ ಅನುಭವಗಳನ್ನು ಸ್ವತಃ  ಆಕರ್ಷಕ  ಶೀರ್ಷಿಕೆಯೊಂದಿಗೆ ಬರೆದುಕಳಿಸಿ  ಹಂಚಿಕೊಂಡಿದ್ದಾರೆ. ಓದಿ ಆನಂದಿಸಿ!!  -ಸಂ)

—————————————————————————————————————————————-

ಈ ಪ್ರವಾಸ ಮಾಡುವುದಕ್ಕೆ ಬಹಳ ದಿನದಿ೦ದ ಆಸೆ ಇತ್ತು, ಆದರೆ ಅನೇಕ ಕಾರಣಗಳಿ೦ದ  ಇದು ಸಾದ್ಯವಾಗಿರಲಿಲ್ಲ. ಆದರೆ ನಾವು ಈ ವರ್ಷ ಬೆ೦ಗಳೂರಿಗೆ  ಹೋದಾಗ ಎರಡು ಮೂರು ದಿನದಲ್ಲಿ ಬೇಕಾದ  ವ್ಯವಸ್ಠೆ ಮಾಡಿ ಹೊರಟಿದ್ದಾಯಿತು. ಇನ್ನೂ ಒ೦ದು ಕಾರಣ , ಭೈರಪ್ಪನವರ ಹೊಸ ಪುಸ್ತಕ, ಉತ್ತರಕಾ೦ಡದಲ್ಲಿ ಬಹಳ ಸೊಗಸಾಗಿ “ಒರಿಜಿನಲ್” ರಾಮ ಮತ್ತು ಸೀತೆಯರ ವನವಾಸದ ಬಗ್ಗೆ ಬರೆದಿದ್ದಾರೆ!  ಏನೇ ಕಾರಣವಿರಲಿ ಬಿಡಿ ಈ ಪ್ರಯಾಣಕ್ಕೆ ಈ ವರ್ಷ ಲಭ್ಯ ಇತ್ತು!

೭ ದಿನ ಸಾಕು ಲ೦ಕೆಯ ಪ್ರವಾಸಕ್ಕೆ! ನಿಮಗೆ ಇ೦ಟರ್ನೆಟ್ ಸ೦ಪರ್ಕ ಇದ್ದರೆ ನೀವೇ ಏಲ್ಲಾ ಬುಕಿ೦ಗ್ ಮಾಡಬಹುದು. ಆದರೆ ಸ್ವಲ್ಪ ಸ೦ಶೋಧನೆ ಬೇಕು.  ೩ ದಿನ ಕೊಲೊ೦ಬೊ ಮತ್ತು ೩ ದಿನ ಕ್ಯಾ೦ಡಿ ಸಾಕು. ಈ ಎರಡು ಕಡೆಯಿ೦ದ ಸುತ್ತಮುತ್ತಲ ಜಾಗಗಳಿಗೆ ಹೋಗಬಹುದು.

ದಿನ ೧-೩,  ಕೊಲೊ೦ಬೊ ನಲ್ಲಿ ಓಜ಼ೊ ಹೊಟೆಲ್ ಸಮುದ್ರದ ಏದುರಿಗೆ ಇದೆ. ಬಹಳ ಅನಕೂಲವಾಗಿತ್ತು. ನಮಗೆ ಏಲ್ಲಿ ಹೋದರೂ ಊಟದ ಸಮಸ್ಯೆ ಇದ್ದೇಇರತ್ತೆ.ನನಗಿ೦ತನನ್ನ ಪತ್ನಿ ಸೀತುಗೆ. ಇದರ ಬಗ್ಗೆ ನಾನು ಹಿ೦ದೆ ಬರೆದ್ದಿದ್ದೇನೆ!! ಆದರೆ ಇಲ್ಲಿ ಅ೦ಥಾ ತೊ೦ದರೆ ಏನೂ ಇರಲಿಲ್ಲ. ಈ ಹೊಟೆಲ್ ನಲ್ಲಿ ಬೇಕಾದಸ್ಟು ಸಸ್ಯಾಹಾರಿ ಊಟ ಇತ್ತು. ಬೇಕಾದರೆ ಹತ್ತಿರದಲ್ಲೆ ೩ ದಕ್ಷಿಣ ಭಾರತದ ಕೆಫೆಗಳೂ ಇತ್ತು.

ಇಲ್ಲಿ ನೋಡಬೇಕಾದ್ದು, ಗ೦ಗರಾಮ್ಯ ಬುದ್ಧನ ದೇವಾಲಯ, ಬಟಾನಿಕಲ್ ಗಾರ್ಡೆನ್ಸ್, ಲೈಟ್ ಹೌಸ್, ಗಾಲೆ ಗ್ರೀನ್ ಮು೦ತಾದವು.

shrilanka 1

 

shrilanka 2
ಬುದ್ದ ದೇವಾಲಯದಲ್ಲಿ ರಾಮಮೂರ್ತಿ ಮತ್ತು ಸೀತಾ ದಂಪತಿಗಳು

ಬುದ್ದನ ದೇವಲಯ ಸುಮಾರು ೧೨೦ ವರ್ಷದ್ದು. ಇದು ಸಿಟಿ ಮಧ್ಯದಲ್ಲಿ ಬಹಳ ವಿಶಾಲ ವಾದ ಜಾಗದಲ್ಲಿ, ಬೈರ ಸರೋವರದ ದಡದಲ್ಲಿ ಸು೦ದರವಾದ ಸ್ಠಳ. ಇದರ ಹತ್ತಿರ ದಕ್ಷಿಣ ಭಾರತದ ದೇವಸ್ಥಾನ (ಯಾವ ದೇವರು ಅನ್ನುವುದು ಜ್ಣಾಪಕ ಇಲ್ಲ) .  ಸಾಯ೦ಕಾಲ ಗಾಲೆ ಬೀಚ್ನಲ್ಲಿ ಓಡಾಡಬಹುದು. ಹೊಟೆಲ್ ಟ್ಯಾಕ್ಸಿ ಅಥವ ಟೂರ್ ಕ೦ಪನಿಯ ವರಿ೦ದ ದಿನದ ಮಟ್ಟಿಗೆ ಬಾಡಿಗೆ ಮಾಡಬಹುದು. ನಿಮ್ಮ ವಯಸ್ಸು ಕಡಿಮೆ ಇದ್ದು ಸ್ವಲ್ಪ ಸಾಹಸದ ಉತ್ಸಾಹ ಇದ್ದರೆ ಟುಕ್-ಟುಕ್ ( ಬೆ೦ಗಳೂರಿನ ಆಟೋ ರಿಕ್ಷ) ತೊಗೋಳಿ.  ಬಟಾನಿಕಲ್ ಗಾರ್ಡೆನ್ಸ್ ನೋಡುವುದಕ್ಕೆ ಅರ್ಧ ದಿನ ಬೇಕು ಆದರೆ ಅ೦ಥಹ ಅಪರೂಪದ ಗಿಡ ಅಥವ ಮರಗಳು ಇಲ್ಲ.

ಕೊಲೊ೦ಬೊ ದಿ೦ದ ೭೦ ಕಿಲೊ ಮೀಟರ್ ಹೋದರೆ ಪಿನ್ನವಾಲ ನಲ್ಲಿ ಅನಾಥ ಆನೆಗಳಿಗೆ ಆಶ್ರಯ ಇದೆ. ೬೦-೭೦ ಆನೆಗಳು ಇಲ್ಲಿವೆ. ಆದರೆ ಟಿಕೆಟ್ ತು೦ಬ ದುಬಾರಿ. ನಿಮ್ಮ ಹತ್ತಿರ OCI card ಇದ್ದರೆ  ಅರ್ದ ಬೆಲೆ. ನಾವು ನಮ್ಮಕರ್ನಾಟಕದಲ್ಲೂ ಇ೦ತಹ ಜಾಗಗಳನ್ನು ನೋಡಬಹುದು.

shrilanka 3

ಮು೦ದಿನ ಹಾಲ್ಟ್ ಕ್ಯಾ೦ಡಿ, ಸುಮಾರು ೧೫೦ ಕಿಲೋ ಮೀಟರ್ ದೂರ.  ಕೊಲೊ೦ಬೊ ಇ೦ದ ದಿನಕ್ಕೆ ೨  ಟ್ರೈನ್ ಗಳಿವೆ. ಬೆಳಗ್ಗೆ ೭ ಮತ್ತು ಮಧ್ಯಾನ್ಹ ೩ ರಕ್ಕೆ.  ಇಲ್ಲಿ ಟ್ರೈನ್ ಗಳು ಇನ್ನೊ  ಹಳೆಯ ಕಾಲದ್ದು ಏನೂ ಪ್ರಗತಿ ಸಾಕಸ್ಟು ಆಗಿಲ್ಲ. ಈ ಪ್ರಯಾಣ ಚೆನ್ನಾಗಿತ್ತು.  ಕ್ಯಾ೦ಡಿ ನಲ್ಲೊ ಓಜ಼ೂ ಹೊಟೆಲ್ ನಲ್ಲಿ ೩ ದಿನ.  ಈ ಊರು ತು೦ಬಾ ಚೆನ್ನಾಗಿದೆ. ನಮ್ಮ ಹೊಟೆಲ್ ಕ್ಯಾ೦ಡಿ ಸರೋವರ ದ ದಡದಲ್ಲೆ ಇತ್ತು. ಅದರ ಸುತ್ತ ಹೋದರೆ ಸುಮಾರು ೫-೬ ಕಿಲೋ ಮೀಟರ್.  ೧೫೯೨-೧೮೦೫ ವರಗೆ ಊರು ಈ ಪ್ರದೇಶದ ರಾಜಧಾನಿ ಆಗಿತ್ತು.  ಇಲ್ಲಿ ತು೦ಬಾ ಪ್ರಸಿದ್ದವಾದ ಜಾಗ ಶ್ರೀದಲದ ಮಾಲಿಗಾವ ಬುದ್ದನ ದೇವಾಲಯ ( Temple of Tooth)  ಈ ಜಾಗ ಮು೦ಚೆ ಅರಮನೆ ಆಗಿತ್ತು. ಸಾಯ೦ಕಾಲ ಪೂಜೆಯ ವೇಳೆಗೆ ಸಾವಿರಾರು ಜನ ಸೇರಿರುತ್ತಾರೆ. ಒ೦ದು ಶೋಚನಿಯವಾದ ವಿಷಯ ಇಲ್ಲಿಗೆ ಸಂಬಂಧ ಪಟ್ಟ ವಿಚಾರಗಳು  ಸಿ೦ಹಳೀಸ್ ಭಾಷೆ ಯಲ್ಲಿ ಮಾತ್ರ.

ಬೆಳಗ್ಗೆ ಬುದ್ಧನ ಅನೇಕ ಪ್ರತಿಮೆಗಳಿರುವ ಕಡೆ ಹೋಗಬಹುದು.

shrilanka 5
ಆನೆಗಳ ಅನಾಥಾಲಯ

 

shrilanka 6
ನುವಾರ ಎಲ್ಲೆಯ ದ ಹತ್ತಿರದ ಸೀತೆಯ ದೇವಾಲಯ

ಕ್ಯಾ೦ಡಿ ಇ೦ದ ೭೦ ಕಿಲೊ ಮೀಟರ್ Nuwara Elliyaಇಲ್ಲಿ ಚಹ ಬೆಳೆಯುವ ಜಾಗ. ಬ್ರಿಟಿಷ್ ಆಡಳಿತದಲ್ಲಿ ಈ ಊರನ್ನು ಇ೦ಗ್ಲೆ೦ಡಿನ ಮಾದರಿಯಲ್ಲಿ ಕಟ್ಟಿದರು. ರೇಸ್ ಕೋರ್ಸ್ (Royal Turf) ಮತ್ತು  Golf Course ೧೮೯೯  ಆರ೦ಭವಾಯಿತು. ಇಲ್ಲಿಗೆ ಕ್ಯಾ೦ಡಿ ಇ೦ದ ಟ್ರೈನ್ ಪ್ರಯಾಣ ಬಹಳ ಚೆನ್ನಾಗಿದೆ.

ಸಮೀಪದಲ್ಲಿ ಸೀತಾ ದೇವಸ್ಥಾನ ಇದೆ.  ಇಲ್ಲೇ ಹನುಮ೦ತ ಸೀತೆಯನ್ನು ಹುಡಕಿದ್ದು  ಅ೦ತ ಪ್ರತೀತಿ.  ನಮಗೆ ಸಮಯ  ಇದ್ದಿದ್ದರೆ  ಟ್ರಿ೦ಕೋಮಲೈ ನಲ್ಲಿ ಕೋನೇಶ್ವರನ ದೇವಸ್ತಾನ (The temple of thousand pillars) ಬಹಳ ಪ್ರಸಿದ್ದವಾದ್ದು. ಇದು ಚೋಳರ ಕಾಲದಲ್ಲಿ ಪ್ರಸಿದ್ದಿ ಆದರೂ ಸುಮರು ೨೫೦ ಬಿ ಸಿ ಇ೦ದ ಈ ಜಾಗದಲ್ಲಿ ದೇವಸ್ತಾನ ಇತ್ತು ಎ೦ದು ಚೆರಿತ್ರೆಗಾರರು ನ೦ಬಿದ್ದಾರೆ. ಆದರೆ ೧೬೨೨-೨೪ ವರ್ಷಗಳಲ್ಲಿ ಯೂರೋಪಿನ ಸೇನೆ ಗಳು ಈ ದೇವಸ್ಥಾನವನ್ನು ಲೂಟಿ ಮಾಡಿದರು. ಸುಮುದ್ರದ ದಲ್ಲಿ ಮುಳಗಿದ್ದ ಅನೇಕ ಪ್ರತಿಮೆಗಳನ್ನು ತೆಗೆದು ಈ ದೇವಸ್ಥಾನವನ್ನು  ೧೯೫೨ ರಲ್ಲಿ  ಪ್ರಸಿದ್ದ ವೈಜ್ನಾನಿಕ Arthur C Clarke ಮತ್ತು ಇತರರು ಸೇರಿ ಸುಧಾರಣೆ ಮಾಡಿದರು.

shrilanka 7

ನಿಮಗೆ ಸುಮ್ಮನೆ ಬೀಚ್ ನಲ್ಲಿ ರಿಲಾಕ್ಸ್ ಮಾಡುವುದಕ್ಕೆ  ಇಷ್ಟ ಇದ್ದರೆ, ಕೊಲೊ೦ಬೊ ಇ೦ದ ದಕ್ಷಿಣದಲ್ಲಿ ಬೆ೦ಟೋಟ ದಲ್ಲಿ ಇರಬಹುದು.ಈ ದೇಶದಲ್ಲಿ ಇನ್ನೂ ನೋಡುವ ಜಾಗಗಳು ಅನುರಾಧಪುರ, ಪುರಾತನ ಈ ದೇಶದ ರಾಜಧಾನಿ. ಇದು ಈಗ Unesco heritage site ಆಗಿದೆ.

ಟೂರ್ ಕ೦ಪನಿ ಮೂಲ ಹೋದರೆ ಅವರೇ ಏಲ್ಲ ಏರ್ಪಾಡು ಮಾಡಿರುತ್ತಾರೆ, ಆದರೆ ನೀವೇ ಮಾಡಿಕೊ೦ಡರೆ ನಿಮಗೆ ಬೇಕಾದಹಾಗೆ ಇರಬಹುದು. But this may not be everybody’s cup of tea!.

ಚಿತ್ರ ಲೇಖನ -ಡಾ. ರಾಮಮೂರ್ತಿ, ಬೇಸಿಂಗ್ ಸ್ಟೋಕ್.

 

‘ಟೆನೆರಿಫ್’ ಎಂಬ ಸಮ್ಮೋಹಕ ದ್ವೀಪ – ಪ್ರೇಮಲತಾ ಬರೆದ ಪ್ರವಾಸ ಕಥನ

ಸ್ಪೇನ್ ದೇಶದ ದಕ್ಷಿಣ ಭಾಗದಲ್ಲಿ ಕೆನೆರಿಯ ದ್ವೀಪಗಳಿವೆ. ಈ ಏಳು ದ್ವೀಪಗಳಲ್ಲಿ ಟೆನೆರಿಫ಼್ ದ್ವೀಪ ಅತಿ ದೊಡ್ಡದು ಮತ್ತು ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತದ್ದು.  ನಮ್ಮಲ್ಲಿ ಪ್ರತಿ ವರ್ಷ ಕಾಶಿ –ರಾಮೇಶ್ವರಕ್ಕೆ ತಪ್ಪದೆ ಹೋಗುವಂತೆ, ಪ್ರಪಂಚದ ನಾನಾ ದೇಶಗಳಿಂದ ಟೆನೆರಿಫ಼್ ದ್ವೀಪಕ್ಕೆ ಬರುವವರಿದ್ದಾರೆ!.

ಮಕ್ಕಳಿಗೆ ಬಂದ  ಕಳೆದ ಫ಼ೆಬ್ರವರಿಯ ಶಾಲಾ ರಜೆಯಲ್ಲಿ ಸ್ಪೈನ್ ದೇಶದ ಟೆನೆರಿಫ಼್ ದ್ವೀಪಕ್ಕೆ ಹೋಗಲು ತಯಾರಿ ನಡೆಯಿತು. ಈ ದ್ವೀಪ ಪ್ರವಾಸಿಗರಿಗೆ ಅತಿ ಪ್ರೀಯವಾದ ತಾಣ. ಇಂಗ್ಲೆಂಡಿನ ಚಳಿಗಾಲದಲ್ಲಿ ನರಳಿ ಸ್ವಲ್ಪ ಸೂರ್ಯನ ಶಾಖದಲ್ಲಿ ಮೀಯಲು ಉತ್ಸುಕರಾಗಿ ಹೊರೆಟೆವು. ಇಂಗ್ಲೆಂಡಿನ ಆಂಗ್ಲರಿಗೆ “ಸ್ಪೇನ್“ ಮತ್ತು ’ಬಿಸಿಲು’ ಒಂದು ರೀತಿಯಲ್ಲಿ ಪರ್ಯಾಯ ಪದಗಳು. ಅದರಲ್ಲೂ ದಕ್ಷಿಣ ಭಾಗದ ಸ್ಪೇನಿನ ದ್ವೀಪಗಳಲ್ಲಿ ಸೂರ್ಯನ ಬಿಸಿಲು ಹುಡುಕಿ ಹೊರಟವರಿಗೆ ನಿರಾಸೆಯಿಲ್ಲ. ಹಾಗಾಗಿ ಹಲವರು ಈ ದ್ವೀಪದಲ್ಲಿ ಮನೆಗಳನ್ನು, ಫ್ಲಾಟುಗಳನ್ನು  ಕೊಂಡುಕೊಂಡು ಇಡೀ ಚಳಿಗಾಲವನ್ನು ಇಲ್ಲಿ ಕಳೆಯುತ್ತಾರೆ. ಮಿಕ್ಕಂತೆ, ಈ ಮನೆಗಳನ್ನು ಇತರೆ ಪ್ರವಾಸಿಗರಿಗೆ ಬಾಡಿಗೆ ನೀಡಿ ಖರ್ಚು ಹುಟ್ಟಿಸಿಕೊಳ್ಳುತ್ತಾರೆ.

ಈ ದ್ವೀಪ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನು ಮನರಂಜಿಸಲು ಸಿದ್ದವಾದ ತಾಣ. ಪ್ರವಾಸೋದ್ಯಮ ಈ ದ್ವೀಪಗಳ ಮುಖ್ಯ ಆದಾಯಮೂಲ ಕೂಡ. ಈ ಕೆನೆರಿಯ ದ್ವೀಪಗಳ ವೈಶಿಷ್ಟವೆಂದರೆ ಈ ಏಳೂ ದ್ವೀಪಗಳು ಅಗ್ನಿಪರ್ವತಗಳ ಸಿಡಿತದಿಂದ ಸಮುದ್ರದಲ್ಲಿ  ಉದ್ಭವವಾದಂತವು. ಪ್ರಾಚೀನ ಕಾಲದ ಲ್ಯಾಟಿನ್ನಿನಲ್ಲಿ ’ಕೆನೆರಿಯ ದ್ವೀಪ’ ಅಂದರೆ ’ನಾಯಿಗಳ ದ್ವೀಪ’ ಎಂದು. ಇಲ್ಲಿ ಅಂತಹ ನಾಯಿಗಳೇನೂ ಇಲ್ಲ. ಸಮುದ್ರದ ಭಾರೀ ಗಾತ್ರದ  ಅಪಾರ ಸಂಖ್ಯೆಯ ’ಸೀಲು” ಗಳನ್ನು ಉದ್ದೇಶಿಸಿ  ಹಿಂದಿನ ಕಾಲದಲ್ಲಿ ರೋಮನ್ನರಿಟ್ಟ ಹೆಸರೇ  ಈಗಲೂ ಉಳಿದಿದೆ. ವಿಪರ್ಯಾಸ ಅಂದರೆ ಈಗ ಆ ಜಾತಿಯ ಸೀಲ್ ಗಳು ಸಂಪೂರ್ಣ ಅವನತಿಯಾಗಿರುವುದು! ಕೆನೆರಿಯ ದ್ವೀಪಗಳ ಹೆಸರಿನ ಬಗ್ಗೆ ಇನ್ನೂ ಅನೇಕ ಪ್ರತೀತಿಗಳಿವೆ.

tanarife

ಉತ್ತರ ಟೆನೆರಿಫ್ ನ ಒಂದು ವಿಹಂಗಮ ನೋಟ

ಈ ದ್ವೀಪಗಳ ಆದಿವಾಸಿಗಳು ಗ್ವಾಂಚೆಸ್ ಅನ್ನುವ ಜನರು. ಇವರು ನಾಯಿಯ ತಲೆಯಿದ್ದ ದೇವರನ್ನು ಪೂಜಿಸುತ್ತಿದ್ದರೆಂಬ ಕಾರಣಕ್ಕೆ ಈ ಹೆಸರು ಬಂದಿರಬಹುದು ಎಂದು ಕೂಡ ಕೆಲವರು ಹೇಳುತ್ತಾರೆ.ಅನುಬಿಸ್ ಎನ್ನುವ ನಾಯಿಯ ತಲೆಯಿರುವ ಈಜಿಪ್ಟ್ ದೇಶದ ದೇವರಿಂದ ಈ ದ್ವೀಪಗಳಿಗೆ ನಾಯಿಗಳ ದ್ವೀಪ ಎಂಬ ಹೆಸರು ಬಂತು ಎಂಬ ಮಾತು ಕೂಡ ಕೇಳಿಬಂದಿದೆ.

ಟೆನೆರಿಫ಼್ ಸುಮಾರು ೮ ಮಿಲಿಯನ್ ವರ್ಷಗಳಷ್ಟು ಹಳೆಯದು. ಮೂರು ಮಿಲಿಯನ್ ವರ್ಷಗಳಲ್ಲಿ ಒಂದಾದ ಮೇಲೆ ಒಂದರಂತೆ ಅಗ್ನಿಪರ್ವತಗಳು ಸಿಡಿದು ಈ ದ್ವೀಪದ ಸೃಷ್ಟಿಯಾಗಿದೆ.

ಆಗ್ನಿಪರ್ವತದ ಆಸ್ಪೋಟ, ಅದರ ಹಿಂದೆ ಶಿಲೆಗಳ ಕೊರೆತ, ವಿಶಿಷ್ತ್ಟ ಆಕೃತಿಯ ನೆಲವನ್ನು ಸೃಷ್ಟಿಸಿದೆ. ಇಲ್ಲಿನ ನೆಲ ಬರಡು ಬರಡು. ಬರಿಯ ಬಂಡೆಗಳು, ಕಲ್ಲು, ಕೊರಕಲುಗಳು ತುಂಬಿರುವ ಈ ದ್ವೀಪದಲ್ಲಿ ಹತ್ತು ತಿಂಗಳಾದರೂ ಮಳೆ ಬರುವುದಿಲ್ಲವಂತೆ. ಎಲ್ಲೆಲ್ಲಿಯೂ ಕತ್ತಾಳೆ, ಶಾಖವನ್ನು ತಡೆಯುವ ಶಕ್ತಿಯಿರುವ ಪೈನ್ ಮರಗಳು.

ಆಗ್ನಿ ಪರ್ವತದ ಸಿಡಿತಗಳಿಂದಾಗಿ ನಿರ್ಮಿತವಾದ ಈ ದ್ವೀಪಗಳು ಮೊದಲು ಬರಿ ಬಂಡೆಗಳಾಗಿದ್ದವಂತೆ. ಹುಲ್ಲುಗರಿಕೆ ಅಥವಾ ಕುರುಚಲು ಪೊದೆಗಳು ಇಲ್ಲಿ ಬೆಳೆಯಲು ಹಲವು ಮಿಲಿಯನ್ ವರ್ಷಗಳೇ ತಗುಲಿವೆ ಎನ್ನುತ್ತಾರೆ. ಮಾನವರು ಈ ದ್ವೀಪಗಳನ್ನು ತಮ್ಮದಾಗಿಸಿಕೊಂಡು ಹಲವು ಹೊಸ ತಳಿಗಳನ್ನು ಈ ದ್ವೀಪಕ್ಕೆ ಪರಿಚಯಿಸಿದ್ದಾರೆ. ಕಾಲಾನುಕ್ರಮದಲ್ಲಿ ಬಂಡೆಗಳು ಕರಗಿ, ನಶಿಸಿ, ಸೃಷ್ಟಿಸಿದ ಫಲವತ್ತಾದ ಮಣ್ಣಿನಲ್ಲಿ ಮಾನವರು ಕೃಷಿಯನ್ನು ಆರಂಭಿಸಿದ್ದಾರೆ.

ಹಸಿರನ್ನು ಅಗ್ನಿಪರ್ವತಗಳ ದ್ವೀಪದಲ್ಲಿ ಕಾಣಿಸಲು ಮಾನವನ ಪ್ರಯತ್ನ  ನಿರಂತರವಾಗಿ ಸಾಗಿದೆ. ಗಾಲ್ಫಿನ ಮೈದಾನಗಳು, ಶಾಖವನ್ನು ತಡೆಯಬಲ್ಲ ಕಣಿಗಿಲೆ, ಕತ್ತಾಳೆಯ ವಿವಿಧ ಪೊದೆಗಳು, ಗಂಟೆ ಹೂವು, ಪೇಪರ್ ಹೂವಿನ ಅರ್ಥಾತ್ ಬೋಗನವಿಲ್ಲಾ ಬಳ್ಳಿಗಳ ಮೇಲೆ ಸರ್ಕಾರ ಅಪಾರ ಹಣ ಸುರಿದಿದೆ.ಸಮುದ್ರದ ನೀರಿನಿಂದ ಉಪ್ಪಿನ ಅಂಶವನ್ನು ಬೇರ್ಪಡಿಸಿ, ಅದನ್ನೇ ಮನೆ ಬಳಕೆಗೆ, ಹೂ ದೋಟಗಳಿಗೆ ಹಾಯಿಸಿ ಬದುಕುತ್ತಾರೆ.ಇಲ್ಲಿನ ಭೂಮಿ ಒಣ ಮರುಭೂಮಿಯಾದರು, ಅಗ್ನಿಪರ್ವತದ ಸ್ಪೋಟದಿಂದ ಖನಿಜಭರಿತವಾಗಿದೆ . ಹೀಗಾಗಿ ಕಣ್ಣು ಹಾಯಿಸುವಷ್ಟು ದೂರಕ್ಕೂ ಪರದೆಗಳನ್ನು ಹಾಯಿಸಿ ಅದರ ನೆರಳಿನಲ್ಲಿ ಅಪಾರವಾಗಿ ಬಾಳೆಯನ್ನು ಬೆಳೆಯುತ್ತಾರೆ.ಇದನ್ನು ಇಡೀ ದ್ವೀಪದಲ್ಲಿ ಮತ್ತು ದೇಶದಲ್ಲಿ ಸರಬರಾಜು ಮಾಡುತ್ತಾರೆ. ಅಷ್ಟೇ ಅಲ್ಲದೆ, ಟೆನೆರಿಫಿನ ರಾಜಧಾನಿಯಾದ ಸಾಂತಾಕ್ರೂಜಿನ ಬಂದರುಗಳಿಗೆ ಪೆಟ್ರೋಲ್  ತುಂಬಿಸಿಕೊಳ್ಳಲು ಬರುವ ಮೆಡಿಟರೇನಿಯನ್ ಸಮುದ್ರದ ಹಡಗುಗಳಿಗೂ ಸರಬರಾಜು ಮಾಡುತ್ತಾರೆ.  ತಂಬಾಕು, ತರಕಾರಿ, ಕಬ್ಬು,  ಬಾದಾಮಿ ಮತ್ತು ಅಂಜೂರದ ಹಣ್ಣುಗಳನ್ನು ಕೂಡ ಬೆಳೆಯುತ್ತಾರೆ. ಅಪಾರವಾಗಿ ನಡೆವ ಈ ಕೃಷಿಯ ಪರಿಣಾಮವಾಗಿ, ಇಲ್ಲಿರುವ ಮಣ್ಣಿನ ಫಲವತ್ತತೆ ಕಡಿಮೆಯಾಗುವ ಬಗ್ಗೆ ಮುನ್ನೆಚ್ಚರಿಕೆ ಕೇಳಿಬಂದಿದೆ.

ಭೂಗೋಳದ ಪರಿಮಿತಿಯಲ್ಲಿ ಈ ದ್ವೀಪವು ಆಫ್ರಿಕ ಖಂಡಕ್ಕೆ ಸೇರುತ್ತದೆ.ಆದರೆ ಈ ಏಳೂ  ಕೆನೆರಿಯ ದ್ವೀಪಗಳನ್ನು ಗೆದ್ದು ವಶಪಡಿಸಿಕೊಂಡು,  ಅವನ್ನು ಸ್ಪೇನ್ ದೇಶ ತನ್ನ ಆಡಳಿತಕ್ಕೆ ಒಳಪಡಿಸಿಕೊಂಡಿದೆ. ಈ ದ್ವೀಪಗಳ ವಿಶೇಷತೆಯನ್ನು ವೃದ್ಧಿಪಡಿಸಿ ಸಿರಿವಂತ ದ್ವೀಪಗಳನ್ನಾಗಿಸಿದೆ.

ಹಾಗಾದರೆ ಕುಡಿಯುವ ನೀರು? ಇದನ್ನು ತಿಳಿಯಲು ಈ ದ್ವೀಪದ ಉತ್ತರ ಭಾಗಕ್ಕೆ ಹೋಗಬೇಕು. ಉತ್ತರ ಭಾಗ, ದಕ್ಷಿಣ ಭಾಗದಷ್ಟು ಒಣ ಭೂಮಿಯಲ್ಲ. ಇಲ್ಲಿ ಹಸಿರನ್ನು ಕಾಣಬಹುದು. ಕಿತ್ತಳೆ, ನಿಂಬೆ, ಆಲೂಗೆಡ್ಡೆ, ಬಾರ್ಲಿ, ಟೊಮಟೊಗಳನ್ನು ಬೆಳೆಯುವಷ್ಟು ಇಲ್ಲಿನ ವಾತಾವರಣ ಹದವಾಗಿದೆ.  ಆದರೆ ಇದು ಮಳೆಯಿಂದ ಸಾದ್ಯವಾದದ್ದಲ್ಲ! ಈ ಭಾಗ ಸಮುದ್ರ ಮಟ್ಟದಿಂದ ಬಹಳ ಎತ್ತರದಲ್ಲಿದ್ದು, ಇಲ್ಲಿನ ಪೈನ್ ಮರಗಳು ನೀರನ್ನು ಹಾದುಹೋಗುವ ಮೋಡಗಳಿಂದ ಸೂಜಿಮೊನೆಯಂತ ಎಲೆಗಳಿಂದ ಹೀರಿ ನೆಲಕ್ಕೆ ಕಳಿಸುವ ಪರಿಣಿತಿಯನ್ನು ಹೊಂದಿದ್ದು, ದಿನಕ್ಕೆ ಪ್ರತಿ ಮರವೂ ಸುಮಾರು ಹತ್ತು ಲೀಟರುಗಳಷ್ಟು ನೀರನ್ನು ಸಂಗ್ರಹಿಸುವುದರಿಂದ, ಆ ಸಿಹಿ ನೀರನ್ನು ಶೇಖರಿಸಿ, ಬಾಟಲುಗಳಿಗೆ ತುಂಬಿ ಮಾರಾಟ ಮಾಡುತ್ತಾರೆ! ಇಲ್ಲಿ ಬೆಳೆದಿರುವ ಈ ವಿಶೇಷ ಜಾತಿಯ ಪೈನ್ ಮರಗಳಿಗೆ ಕೆನೆರಿಯ ಪೈನ್ ಮರಗಳೆಂದೇ ಹೆಸರು.

ಕೆಲವು ಜಾತಿಯ ಜೇಡ, ಹಲ್ಲಿಗಳ ಹೊರತಾಗಿ ಇಲ್ಲಿ ಬದುಕಿ ಬೆಳೆದು ರಕ್ಷಿತವಾಗಿರುವ ಜೀವಜಾಲ ಯಾವುದೂ ಇಲ್ಲ.

ಟೆನರಿಫ್ ಒಟ್ಟು ಜನಸಂಖ್ಯೆ ೯೦೬,೮೫೪ ಮಾತ್ರ. ೨೦೩೪ ಚದರ ಕಿ.ಮೀ. ವಿಸ್ತಾರವಾದ ಟೆನೆರಿಫ್, ಕೆನೆರಿಯ ದ್ವೀಪಗಳಲ್ಲೆ ಅತ್ಯಂತ ದೊಡ್ಡ ದ್ವೀಪ. ಬಂದರುಗಳಿರುವ ಎರಡು ದೊಡ್ಡ ನಗರಗಳು ಇಲ್ಲಿವೆ. ಇಂದಿನ ರಾಜಧಾನಿಯಾದ ಸಂತಾಕ್ರೂಜ್ ನಗರ ಮತ್ತು ಹಳೆಯ ರಾಜಧಾನಿ ಲ ಲಗುನ. ಲ ಲಗುನದಲ್ಲಿ ಟೆನೆರಿಫ್ ದ್ವೀಪಗಳಲ್ಲಿಯೇ ಪುರಾತನವಾದ ಯೂನಿವರ್ಸಿಟಿಯಿದೆ. ಟೆನೆರಿಫ಼ ಪುಟ್ಟ ದ್ವೀಪದಲ್ಲಿಯೇ, ದಕ್ಶಿಣಕ್ಕೊಂದು ಮತ್ತು ಉತ್ತರದಲ್ಲೊಂದು ವಿಮಾನ ನಿಲ್ದಾಣಗಳಿವೆ.

ಟೆನೆರಿಫ್ ನ ಟೈಡೆ ಅಗ್ನಿ ಪರ್ವತ

೧೨,೭೧೮ ಅಡಿ ಎತ್ತರವಿರುವ ಟೈಡೆ ಅಗ್ನಿಪ್ರರ್ವತ ಇಡೀ ಸ್ಪೇನ್ ದೇಶದಲ್ಲೇ ಅತಿ ಎತ್ತರದ ಪರ್ವತ. ಈ ಪ್ರರ್ವತಕ್ಕೆ  ಪ್ರತಿ ವರ್ಷ ೩ ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೇಬಲ್ ಕಾರಿನಲ್ಲಿ ( ಪ್ರತಿಬಾರಿ ೩೪-೩೮ ಜನರಂತೆ) ಈ ಅಗ್ನಿಪರ್ವತ ಶಿಖರದ ತುದಿಯಲ್ಲಿರುವ ಅದರ ಬಾಯಿಯೊಳಕ್ಕೆ (೧೧,೬೬೩ ಅಡಿ) ಒಂದು ಮೈಲಿ ಕೆಳಗಿನವರೆಗೂ ಹೋಗಬಹುದು. ಹವಾಮಾನ ಸರಿಯಿಲ್ಲದಿದ್ದರೆ ಅದೂ ಇಲ್ಲ. ಇಲ್ಲಿಂದ ಮೇಲಕ್ಕೆ ಚಾರಣ ಮಾಡಿದರೆ ಅದರ ಬಾಯಲ್ಲಿ ಇಣುಕಿ ನೋಡಬಹುದು.

ಆದರೆ ಕೊನೆಯ ೬೬೦ ಅಡಿಗಳನ್ನು ಹತ್ತಲು ಪರ್ಮಿಟ್ಟಿನ ಅಗತ್ಯವಿದೆ.ಮಧ್ಯೆ ಮಧ್ಯೆ ಹೊಗೆಯಾಡುವ ಹಲವು ರಂಧ್ರಗಳಿದ್ದು, ಭೂಗರ್ಭದಲ್ಲಿ ಈಗಲೂ ಕುದಿಯುತ್ತಿರುವ ಶಾಖವನ್ನು ನೆನಪಿಸುತ್ತದೆ.  ಗಂಧಕಾಮ್ಲದ (Sulphuric acid) ವಾಸನೆ, ಕೊಳೆತ ಮೊಟ್ಟೆಯ ವಾಸನೆಯಾಗಿ ದಾರಿಯುದ್ದಕ್ಕೂ ಕಾಡುತ್ತದೆ. ಪರ್ವತದ ಕೆಳಭಾಗದಲ್ಲಿ ೨೨ ಡಿಗ್ರಿ ಹವಾಮಾನವಿದ್ದರೆ, ಶಿಖರದಲ್ಲಿ ಕೇವಲ ೩ ಡಿಗ್ರಿಯಿದ್ದು,  ಗಂಟೆಗೆ ೫೦ಮೈಲಿ ವೇಗದಲ್ಲಿ ಗಾಳಿ ಬೀಸುತಿತ್ತು. ಸುತ್ತಲೂ ಉಂಡೆ-ಉಂಡೆಯಾಗಿ ಹಲವಾರು ಮೈಲಿಗಳ ಉದ್ದಕ್ಕೂ ಲಾವಾ ಹರಿದು ಗಟ್ಟಿಯಾಗಿ ಕಲ್ಲುಗಳಾಗರುವುದನ್ನು ಕಂಡೆವು. ಹೀಗೆ ಹರಿದು ಗಟ್ಟಿಯಾದ ಲಾವಾದ ಕಲ್ಲುಗಳನ್ನು ಕಡಿದು, ಕೊರೆದು ರಸ್ತೆಗಳನ್ನು ನಿರ್ಮಿಸಿದ್ದಾರೆ. ಹಲವು ಬಂಡೆಗಳಲ್ಲಿನ ಕಬ್ಬಿಣದ ಅಂಶ ಹೊರಗಿನ ಹವಾಮಾನಕ್ಕೆ ತೆರೆದುಕೊಂಡ ಕಾರಣ ನೀಲಿ, ಹಸಿರು ಬಂಡೆಗಳಾಗಿದ್ದರೆ, ಸಾವಿರಾರು ವರ್ಷಗಳ ಕೊರೆತಕ್ಕೆ ಒಳಗಾಗಿ ಹಲವು ರೂಪುಗಳನ್ನು ತಾಳಿದ ಬಂಡೆಗಳು ನಮ್ಮ ಕಲ್ಪನೆಯನ್ನು ಕೆದಕುತ್ತವೆ.

tanarife 2                                ಟೈಡೆ ಅಗ್ನಿ ಪರ್ವತ ಮತ್ತು ಕುರುಚಲು ಪೊದೆಗಳು

ಸಮುದ್ರದ ತಳದಿಂದ ಮೇಲಕ್ಕೆ ೨೪.೬೦೦ ಅಡಿ ಎತ್ತರವಿರುವ ಈ ಪರ್ವತವು, ಹವಾಯಿ ದ್ವೀಪದಲ್ಲಿರುವ ಮೊನಾ ಕೇಯಾ, ಮೊನಾ ಲೊವಗಳ ನಂತರ ಅಗ್ನಿಪರ್ವತದ ದ್ವೀಪಗಳಲ್ಲೇ ಅತಿ ಎತ್ತರದ ಅಗ್ನಿಪರ್ವತವೆನಿಸಿದೆ .  ಎತ್ತರದಲ್ಲಿ, ಟೆನೆರಿಫ಼ ಪ್ರಪಂಚದಲ್ಲೇ ೧೦ನೆ ಎತ್ತರದ ದ್ವೀಪವಾಗಿದೆ. ಈ ಪರ್ವತದಲ್ಲಿ ಇತ್ತೀಚೆಗೆ ಆದ ಸ್ಪೋಟವೆಂದರೆ ಅದು ೧೯೦೯ರಲ್ಲಿ. ಆಗ ಸಂಭವಿಸಿದ ದುರಂತದ ನಂತರ ಟೈಡೆ ಪರ್ವತವನ್ನು ಅಪಾಯಕಾರಿ ಪ್ರರ್ವತಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಸುತ್ತ ಮುತ್ತಲ ೭೩ ಚದರ ಮೈಲಿ ಪ್ರಾಂತ್ಯವನ್ನು ಯುನೆಸ್ಕೋ ಜೂನ್ ೨೯, ೨೦೦೭ರಲ್ಲಿ, ಸಂರಕ್ಷಿತ ಪ್ರಾಂತ್ಯವೆಂದು ಘೋಷಿ ಸಲಾಗಿದೆ. ಹಾಗಾಗಿ, ಇಲ್ಲಿಂದ ಒಂದು ಸಣ್ಣ ಕಲ್ಲನ್ನು ಕೂಡ ಹೊರಗೊಯ್ಯಲು ಬಿಡುವುದಿಲ್ಲ.

ಹಲವು ಪರ್ವತಗಳಿಗಿರುವಂತೆ ಈ ಪರ್ವತಕ್ಕೂ ಅಂಟಿದಂತೆ ಕೆಲವು ಪೌರಾಣಿಕ ಕತೆಗಳಿವೆ. ಗ್ವಾಯಿಟೆ ಎಂಬ ರಾಕ್ಷಸನು ಮ್ಯಜಿಕ್ ಎಂಬ ಬೆಳಕಿನ ದೇವನನ್ನು ಅಪಹರಿಸಿ ಈ ಪರ್ವತದ ಹೊಟ್ಟೆಯಲ್ಲಿ ಬಚ್ಚಿಟ್ಟು ಇಡೀ ಪ್ರಪಂಚವನ್ನು ಅಂಧಕಾರದಲ್ಲಿ ಮುಳುಗಿಸಿದನಂತೆ. ಈ ದ್ವೀಪದ ವಾಸಿಗಳು ತಮ್ಮ ಪರಮ ದೈವವಾದ ಅಚಮನನ್ನು ಪ್ರಾರ್ಥಿಸಿದರಂತೆ. ಅಚಮನು, ಗ್ವಯಿಟೆಯ ಜೊತೆ ಕಾದಾಡಿ ಶಾಖ ಮತ್ತು ಬೆಳಕಿನ ದೈವವಾದ ಮ್ಯಜಿಕನನ್ನು ಬಿಡುಗಡೆ ಮಾಡಿ, ಟೈಡೆ ಪರ್ವತದ ಹೊಟ್ಟೆಯಲ್ಲಿ ಗ್ವಾಯಿಟೆಯನ್ನು ಬಂಧಿಸಿದನಂತೆ. ಈ ಅಗ್ನಿ ಪರ್ವತ ಸ್ಪೋಟವಾದಾಗಲೆಲ್ಲ ಜನರು ಪಟಾಕಿಗಳನ್ನು ಹಚ್ಚಿ ಅವನು  ಹೊರಬರದಂತೆ ಹೆದರಿಸುವುದನ್ನು ಈಗಲೂ ಮಾಡುತ್ತಾರೆ. ಇವನನ್ನು ಕರೀ ನಾಯಿಯ ರೂಪದಲ್ಲಿ ಪ್ರತಿಪಾದಿಸುತ್ತಾರೆ.

tanarife 3                                    ಅಗ್ನಿ ಪರ್ವತದ ಶಿಖರದಲ್ಲಿ ಲೇಖಕಿ ಮಗನೊಂದಿಗೆ

ಕಾಕತಾಳೀಯವೆಂಬಂತೆ, ಹವಾಯಿಯಲ್ಲೂ ಕೂಡಾ ಜನರು ಇಂತಹ ಒಂದು ಕತೆಯಲ್ಲಿ ನಂಬಿಕೆಯಿಟ್ಟಿದ್ದಾರೆ. ವ್ಯತ್ಯಾಸ ಅಂದರೆ, ಹವಾಯಿಯಲ್ಲಿ ಇದು ಹೆಣ್ಣು ದೇವತೆ.

ಟೈಡೆ ಪರ್ವತದಲ್ಲಿ ೨೦೦೩ ರಲ್ಲಿ ಕೂಡ ಅಗ್ನಿ ಸ್ಫೋಟದ ಚಟುವಟಿಕೆ ಕಾಣಿಸಿಕೊಂಡು ಜನರಲ್ಲಿ ಭೀತಿಯನ್ನುಂಟು ಮಾಡಿತ್ತು . ಮುಂದಿನ ಹಲವು ನೂರು ವರ್ಷಗಳಲ್ಲಿ ಇದು ಮತ್ತೆ ಆಸ್ಪೋಟಿಸುತ್ತದೆ ಎಂದೂ, ಇದು ದಕ್ಷಿಣ ಇಟಲಿಯಲ್ಲಿರುವ ಪ್ರಸಿದ್ಧ ಅಗ್ನಿಪರ್ವತಗಳಾದ, ವೆಸೂವಿಯೆಸ್ ಮತ್ತು ಎತ್ನಾ ಪರ್ವತಗಳಂತೆ  ಜನರನ್ನು ದೊಡ್ಡ ದುರಂತಕ್ಕೆ ಈಡು ಮಾಡುತ್ತದೆಯೆಂದು ಇಲ್ಲಿನವರೆಗಿನ ವಿದ್ಯಮಾನಗಳಿಂದ ತಿಳಿದುಬಂದಿದೆ. ಈ ಪರ್ವತದ ಕಟ್ಟು ಸ್ಥಿರವಾಗಿರದ ಕಾರಣ ಒಂದು ಭಾಗ  ಸಮುದ್ರದಲ್ಲಿ ಕುಸಿದು ಅಟ್ಲಾಂಟಿಕ್ ಸಮುದ್ರದಲ್ಲಿ ಭಾರೀ ಸುನಾಮಿಯನ್ನು ಉಂಟು ಮಾಡಿ, ಅದರಿಂದ ಉತ್ಪನ್ನವಾಗುವ ದೈತ್ಯಾಕಾರದ ಅಲೆಗಳು, ಉತ್ತರ ಅಮೆರಿಕೆಯ ಪೂರ್ವದಿಕ್ಕಿನಲ್ಲಿರುವ ದೊಡ್ಡ ನಗರಗಳನ್ನೇ ಕಬಳಿಸುವ ಸಾಧ್ಯತೆಗಳಿವೆ ಎಂದು ಭೂಗರ್ಭಶಾಸ್ತ್ರಜ್ಯರು ಭವಿಷ್ಯವಾಣಿ ನುಡಿದಿದ್ದಾರೆ.

ಇಲ್ಲಿ ಮಂಗಳ ಗ್ರಹದ ವಾತಾವರಣವನ್ನು ಅರಿಯಲು ಸುಮಾರು ಸಂಶೋಧನೆಗಳಾಗಿವೆ. ಭಾರೀ ಆಸ್ಪೋಟಗಳ ನಂತರ ಅಲ್ಲಿ ಬದುಕಬಲ್ಲಂತಹ ಸಸ್ಯ ಮತ್ತು ಸಣ್ಣ ಪ್ರಾಣಿ ಸಮುದಾಯಗಳ ಸಂಶೋಧನೆ ಮತ್ತು ಖನಿಜಗಳ ಸಂಶೋದನೆಗಳಲ್ಲಿ  ಅಮೆರಿಕಾದ  ಬಾಹ್ಯಾಕಾಶ ಸಂಸ್ಥೆ “ನಾಸಾ“ ಆಸಕ್ತಿ ತೋರಿದೆ.

ಇತರೆ ಕೆನೆರಿಯ ದ್ವೀಪಗಳು

ಫೋರ್ಟೆವೆನ್ಟುರ, ಗ್ರಾಂಡ್ ಕೆನೆರಿಯಾ, ಲ್ಯಂಜರೋಟಿ , ಲ ಗೊಮೇರ, ಲ ಪಾಮ, ಮತ್ತು  ಎಲ್ ಹೀರೋ  ಕೆನೆರಿಯ ದ್ವೀಪಗಳು ವರ್ಷಕ್ಕೆ ೧೨ ಮಿಲಿಯನ್ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತವೆ.

ಮೊರಕ್ಕೋದಿಂದ ಬರೇ ೬೨ ಮೈಲಿ ದೂರದಲ್ಲಿರುವ ಈ ದ್ವೀಪಗಳ ಬಗ್ಗೆ ಸ್ಪೇನ್ ಮತ್ತು ಮೊರಕ್ಕೋಗಳ ಮಧ್ಯೆ ವೈಮನಸ್ಯಗಳಿವೆ. ಇಲ್ಲಿನ ಕಬ್ಬಿನ ಬೆಳೆ ಮತ್ತು ಸಕ್ಕರೆಯ ಉತ್ಪಾದನೆ ಈ ಪುಟ್ಟ ದ್ವೀಪಗಳಿಗೆ ಪೋರ್ಚುಗೀಸರಿಂದ, ಡಚ್ಚರಿಂದ, ಕಡಲ್ಗಳ್ಳರಿಂದ ಯುದ್ದಗಳನ್ನು ಕೂಡ ತಂದಿವೆ. ಕೆನೆರಿಯ ಜನ ಸಮುದಾಯ, ಸ್ಪೇನ್,ಇಂಗ್ಲೀಷ್,ಇಟಾಲಿಯನ್, ಡಚ್,  ಮೊರೊಕ್ಕೋ ಮತ್ತು  ಇತರ ಆಫ್ರಿಕಾ ದೇಶದ ಜನರನ್ನು ಹೊಂದಿದ್ದು, ಅವರೆಲ್ಲಾ ಸಹಬಾಳ್ವೆಯಿಂದ ಜೀವಿಸುತ್ತಿದ್ದಾರೆ . ಈ ದ್ವೀಪದಲ್ಲಿ ನಮ್ಮ ಭಾರತೀಯರೂ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ!

ದಕ್ಷಿಣ ಭಾರತದಲ್ಲಿ ಈ ದ್ವೀಪದ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲವಾದರೂ, ಉತ್ತರ ಭಾರತದಲ್ಲಿ ಈ ಸಣ್ಣ ದ್ವೀಪಗಳಿಗೆ ನಮ್ಮ ಭಾರತೀಯರನ್ನು ಕರೆತರುವ ದಲ್ಲಾಳಿಗಳ ದೊಡ್ಡ ಗುಂಪೇ ಇದೆಯಂತೆ. ಟೆನೆರಿಫ಼್ ದ್ವೀಪದಲ್ಲಿಯೇ ಸುಮಾರು ೫೦೦೦ ಮಂದಿ ಭಾರತೀಯರಿದ್ದಾರೆ! ಇತರೆ ದ್ವೀಪಗಳಲ್ಲೂ ಇವರು ಹಂಚಿ ಹೋಗಿದ್ದಾರೆ. ಟೆನೆರಿಫ಼ನ ಉತ್ತರ, ದಕ್ಷಿಣ ಮತ್ತು ಮಧ್ಯ ಭಾಗದಲ್ಲಿ ಹರಡಿಕೊಂಡಿರುವ ಈ ಭಾರತೀಯರು, ವ್ಯಾಪಾರ, ವಹಿವಾಟು, ಹೊಟೆಲ್ಲುಗಳು ಇತ್ಯಾದಿ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು ಇಪ್ಪತ್ತೈದು  ವರ್ಷಗಳಿಂದ ಇಲ್ಲಿ ನೆಲೆ ನಿಂತು ಬಟ್ಟೆ ಅಂಗಡಿ, ಎಲೆಕ್ಟ್ರೊನಿಕ್ ಉಪಕರಣಗಳ ಅಂಗಡಿ ಮತ್ತು ಹೊಟೆಲುಗಳನ್ನು ನಡೆಸುತ್ತಿರುವ ಪುಣೆ, ಕಲಕತ್ತ ಮತ್ತು ಗುಜರಾತ್ ರಾಜ್ಯಗಳಿಂದ ಬಂದಿರುವ ಹಲವರನ್ನು ಮಾತಾಡಿಸಿದೆವು. ಸ್ಪೈನ್ ದೇಶದ ಸ್ಪಾನಿಶ್  ಭಾಶೆಯನ್ನು ಕಲಿಯುವುದು ಸುಲಭ  ಎಂದು ಅಭಿಪ್ರಾಯ ಪಡುವ ಇವರು,  ಇಲ್ಲಿಯ ನೆಲ, ಭಾಷೆ ಮತ್ತು ಸಂಪ್ರದಾಯಗಳಿಗೆ ಒಗ್ಗಿಕೊಂಡು, ತಮ್ಮ ಮನೆಗಳಲ್ಲಿ ಭಾರತೀಯತೆಯನ್ನು ಉಳಿಸಿಕೊಂಡು,  ಎಲ್ಲ ಅನಿವಾಸಿ ಭಾರತೀಯರಂತೆಯೇ ಇಬ್ಬಂದಿಯ ಬದುಕಿನಲ್ಲಿ ತೊಡಗಿಕೊಂಡಿದ್ದಾರೆ.

ಆಂಗ್ಲ ಭಾಷೆ ಅಥವಾ ಹಿಂದಿ ಮಾತಾಡಲು ಕೂಡಾ ಗೊತ್ತಿರದ ಜನರನ್ನು ಭಾರತದಿಂದ ಕರೆತರಲು ಅಪಾರ ಹಣಪಡೆದು, ಇನ್ನಿಲ್ಲದ ಕನಸುಗಳ ಪಟ್ಟಿಯನ್ನು ತೋರಿಸಿ ಸವಿಮಾತನ್ನಾಡಿ ಮಧ್ಯಸ್ತಿಕೆಯನ್ನು ವಹಿಸಿ ಭಾರತದಿಂದ ಜನರನ್ನು ಇಲ್ಲಿಗೆ ಕರೆತಂದು, ನಡುನೀರಲ್ಲಿ ಕೈ ಬಿಡುವ  ದಲ್ಲಾಳಿಗಳ ಬಗ್ಗೆ ಎಚ್ಚರದಿಂದಿರಬೇಕೆಂದು ಸಂದೇಶ ಸಾರುತ್ತಾರೆ. ಹೀಗೆ ಕನಸುಗಳನ್ನು ಹೊತ್ತು ಇಲ್ಲಿ ಬಂದು ಬವಣೆ ಪಡುವ ಜನರ ಬಗ್ಗೆ ಮರುಕವಿದೆ.
ಟೆನೆರಿಫ಼ ಸೇರಿದಂತೆ ಏಳೂ  ಕೆನೆರಿಯ ದ್ವೀಪಗಳು ಪ್ರಕೃತಿಯ ಆಟದ, ವಿಕೋಪದ ಪರಿಣಾಮವಾಗಿ ನಿರ್ಮಾಣವಾಗಿವೆ. ಪ್ರಕೃತಿಗೆ ಯಾರೂ ಸಾಟಿಯಲ್ಲ. ಆದರೆ ಮಾನವನ ವಿಶೇಷತೆ, ಕಲ್ಲನ್ನು ಹೂವಿನಂತೆ ಅರಳಿಸಿ ಬದುಕು ಮಾಡಿಕೊಂಡಿರುವುದನ್ನು ಇಲ್ಲಿ ಡಣಾಡಾಳಾಗಿ ಕಾಣಬಹುದು.