ಮಾರ್ಬಲ್ ಆರ್ಚ್ ಕೇವ್ಸ್

ಅಮಿತಾ ರವಿಕಿರಣ್ 

 ಮನುಷ್ಯನ ತಣಿಯದ ಕುತೂಹಲ ಅದೆಷ್ಟೋ ಆವಿಷ್ಕಾರಗಳಿಗೆ ಕಾರಣ ವಾಗಿದೆ, ಮಾನವನ ಪ್ರತಿ ಹೊಸ ಹುಡುಕಾಟದ ಅಂತ್ಯದಲ್ಲಿ ನಿಸರ್ಗ ಮತ್ತೊಂದು ಒಗಟನ್ನು ಬಿಸಾಕಿ ನಗುತ್ತ ನಿಲ್ಲುತ್ತದೆ. ಮಾನವ ಮತ್ತೆ ಹುಡುಕುತ್ತಾನೆ ಹುಡುಕುತ್ತಲೇ ಇರುತ್ತಾನೆ.  ನಿಸರ್ಗದ ಚಲುವು ಮತ್ತು ಮಾನವನ ಕೌಶಲ್ಯ ಎರಡೂ ಜೊತೆಗೆ ನಿಂತು ಮಾತನಾಡುವುದು ಅಪರೂಪಕ್ಕೆ ಕಾಣಸಿಗುವ ದೃಶ್ಯ. ಅಂಥದ್ದೊಂದ್ದು ನಿಸರ್ಗದ ವಿಸ್ಮಯ ಮತ್ತು ಮಾನವನು ಅತಿ ಜತನದಿಂದ ಅದರ ಮೂಲರೂಪಕ್ಕೆ ಧಕ್ಕೆ ಬಾರದಂತೆ ಕಾದುಕೊಂಡಿರುವ ಅಪರೂಪದ ಸ್ಥಳವೇ  ನಾರ್ದರ್ನ್ ಐರ್ಲ್ಯಾಂಡಿನಲ್ಲಿರುವ 'ಮಾರ್ಬಲ್ ಆರ್ಚ್ ಕೇವ್ಸ್'.  

 ಭೂಮಿಯ ಮೇಲ್ಪದರಿನಲ್ಲಿ ರೂಪುಕೊಳ್ಳುವ ಅನೇಕ ರೀತಿಯ ಗುಹೆಗಳನ್ನು ತಜ್ಞರು ಗುರುತಿಸುತ್ತಾರೆ ಮತ್ತು ಅವುಗಳು ರೂಪುಗೊಂಡಿರುವ ರೀತಿ, ವಿನ್ಯಾಸ, ಲಕ್ಷಣಗಳನ್ನ ಗಮನಿಸಿ ಈ ಗುಹೆಗಳನ್ನು ಈ ೫ ಪ್ರಕಾರವಾಗಿ  ವಿಂಗಡಿಸುತ್ತಾರೆ ಅವುಗಳಲ್ಲಿ ಕೆಲವು ಇಲ್ಲಿವೆ .
೧. ಸೊಲ್ಯುಶನ್ ಕೇವ್ಸ್(Solution caves)
ಸುಣ್ಣದ ಕಲ್ಲು ಮತ್ತು ನೀರಿನ ನಿರಂತರ ಸಹಚರ್ಯ ರೂಪಿಸುವ ಗುಹೆಗಳು. 

೨.ವೋಲ್ಕಾ ಕೇವ್ಸ್( volcanic caves) 
ಭೂಮಿಯೊಳಗಿಂದ ಉಕ್ಕುವ ಲಾವಾ , ಜ್ವಾಲಾಮುಖಿಗಳು ತಣಿದು ಹೋದಮೇಲೆ ಉಂಟಾದ ಗುಹೆಗಳು. ಹವಾಯಿಯನ್ ದ್ವೀಪದಲ್ಲಿ ಇರುವ Kazumara caves ಸುಮಾರು ೪೬ಮೈಲು ಗಳಷ್ಟು ಉದ್ದದ ಗುಹೆ ಆಗಿದ್ದು  ಜಗತ್ತಿನಲ್ಲಿ ಅತ್ಯಂತ ದೊಡ್ಡ ಜ್ವಾಲಾಮುಖಿ ಗುಹೆ ಎಂದು ಹೆಸರಾಗಿದೆ.   

೩.ತಲಸ್ ಕೇವ್ಸ್ (Talus caves)
ಎತ್ತರ ಪರ್ವತ ಪ್ರದೇಶದಿಂದ ನೈಸರ್ಗಿಕ ವೈಪರಿತ್ಯ ಗಳಿಂದ  ಕಲ್ಲುಗಳು ಉರುಳಿ ಪರ್ವತದ ಕೆಳಭಾಗದಲ್ಲಿ ಉಂಟುಮಾಡುವ ಗುಹೆಗಳು.

೪.ಸೀ ಕೇವ್ಸ್ (Sea caves) 
ಸಮುದ್ರದ ನೀರು ಮತ್ತು ದಡ ದಲ್ಲಿರುವ ಕಲ್ಲುಬಂಡೆಗಳ ಘರ್ಷಣೆ ಮತ್ತು ಮರಳು ತೆರೆಯೊಂದಿಗೆ ಸ್ಥಳಾಂತರ ಗೊಳ್ಳುವಾಗ ಉಂಟಾಗುವ ಗುಹೆಗಳು. ಇಂಥಹ ಹಲವು ಗುಹೆಗಳನ್ನು ನಾವು ಯುಕೆ, ಫ್ರಾನ್ಸ, ಅಮೇರಿಕ ಮತ್ತು  ಹವಾಯಿಯನ್ ದ್ವೀಪಗಳಲ್ಲಿ ನೋಡಬಹುದು. 

೫ ಗ್ಲೇಸಿಯರ್  ಕೇವ್ಸ್ (Glacier caves)
ಗ್ಲೇಸಿಯರ್ ಹಿಮಬಂಡೆ ಗಳಿಂದ ಉಂಟಾಗುವ ಗುಹೆ , ಕಾಣಲು ಮಂಜಿನ ಮಹಲಿನಂತೆ ಕಂಡರೂ ವಾಸ್ತವದಲ್ಲಿ ಇದು ಸಶಕ್ತ ಗುಹೆಯಾಗಿರುತ್ತದೆ . ಇಂಥ ಗ್ಲೇಸಿಯರ್ ಹಿಮದ ನಡುವೆಯೇ ೪೦೦ ವರ್ಷಗಳ ಕಾಲ ನಮ್ಮ ಕೇದಾರನಾಥ್ ದೇವಸ್ತಾನ ಧ್ಯಾನ ಮಾಡುತಿತ್ತು  ಎಂಬುದು ತಜ್ಞರ ಅಂಬೋಣ. ಗ್ಲೇಸಿಯರ್ ಗುಹೆಗಳಿಂದಾಗಿ  ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಇನ್ನೊಂದು ದೇಶ Iceland 

ಮಾರ್ಬಲ್ ಆರ್ಚ್ ಕೇವ್ಸ್
ಉತ್ತರ ಐರ್ಲೆಂಡಿನ ಫರ್ಮಾನಾ ಕೌಂಟಿ ವ್ಯಾಪ್ತಿಯಲ್ಲಿ ಬರುವ ಮಾರ್ಬಲ್ ಆರ್ಚ್ ಕೇವ ಸಂಶೋಧಿಸಿದ್ದು ಫ್ರಾನ್ಸ್ ನ ಸ್ಪೆಲಿಯೋಲೋಜಿಸ್ಟ್ (speleology-study of caves and other karts) ಎಡ್ವರ್ಡ್ ಅಲ್ಫ್ರೆಡ್ ಮಾರ್ಟೆಲ್, ೧೮೯೫ರಲ್ಲಿ ಈತ ಮತ್ತು ಡಬ್ಲಿನ್ ವಾಸಿ ನಿಸರ್ಗ ತಜ್ಞ ಜೆಮೀ ಒಂದು ಕ್ಯಾನ್ವಾಸ್ ಬೋಟಿನಲ್ಲಿ ಆರಂಭ ದ್ವಾರದಿಂದ ಸುಮಾರು ೩೦೦ ಮೀಟರ್ ದೂರದ ಗುಹೆಯ ಮಾರ್ಗ ಕ್ರಮಿಸಿ ನಕ್ಷೆ ಮಾಡಿ ಇಟ್ಟರು. ನಂತರ ಕ್ರಮವಾಗಿ ಹಲವು ಆಸಕ್ತರು ಸೇರಿ ಸುಮಾರು ೪. ೫ ಕಿಲೋಮೀಟರ್ ಗಳಷ್ಟು ಉದ್ದದ ಈ ಗುಹೆಯನ್ನು ಎಲ್ಲರ ಗಮನಕ್ಕೆ ತಂದರು.  

ಮಾರ್ಬಲ್ ಆರ್ಚ್ ಕೇವ ಸುಣ್ಣದ ಕಲ್ಲುಗಳಿಂದ ಉಂಟಾದ ಗುಹೆ . ಈ ಗುಹೆಯ ಒಳಗೆ ಕ್ಲಾಡಾ ಮತ್ತು  ಒವೆನಬ್ರೀನ್  ಹೆಸರಿನ ನದಿಗಳ ಸಂಗಮವಾಗುತ್ತದೆ, ಮತ್ತು ಇಲ್ಲಿ ಉಂಟಾಗಿರುವ ಭೌಗೊಲಿಕ  ಬದಲಾವಣೆಗಳು ,ಕಲ್ಲು ಗಳ ಮೇಲಿನ ವಿನ್ಯಾಸಗಳು ಮಿಲಿಯನ  ವರ್ಷಗಳ ಕಾಲ ನದಿಗಳ ಏರಿಳಿತ ಮತ್ತು ಹರಿಯುವಿಕೆಯ ಪರಿಣಾಮಗಳೇ ಆಗಿವೆ. 

೨೦೦೮ರಲ್ಲಿ ಯುನೆಸ್ಕೋ  ಈ ಪ್ರದೇಶವನ್ನು 'ಗ್ಲೋಬಲ್ ಜಿಯೋ ಪಾರ್ಕ್' ಎಂದು ಘೋಷಿಸಿತು. ೧೯ನೇ  ಶತಮಾನದಿಂದಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಆಗಿದ್ದ ಈ ಸ್ಥಳ ೨೦೦೮ ರ ನಂತರ ಯೂರೋಪಿನ ಮುಖ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಬಂದಿತು.
ಐರ್ಲ್ಯಾಂಡ್ ಗೆ ಭೇಟಿ ಕೊಟ್ಟವರು ಇದನ್ನು ನೋಡದೆ ಮರಳಿದರೆ ಅವರ ಪ್ರವಾಸ ಅಪೂರ್ಣ ಎಂದೇ ಅರ್ಥ. 

ಸಾಂಪ್ರದಾಯಿಕ  ದ್ವಾರ ಹೊಕ್ಕಿದ ನಂತರ ೧೫೦ ಮೆಟ್ಟಿಲು ಮತ್ತು ಒಂದೂವರೆ ತಾಸಿನ ನಿರಂತರ ನಡಿಗೆ ,  ಗುಹೆಯೊಳಗೆ ಹರಿಯುವ ನದಿಯಲ್ಲಿ ೫ ನಿಮಿಷದ ದೋಣಿಯಾನ, ದೋಣಿಯಲ್ಲಿ ಕುಳಿತಾಗ ಕಲ್ಲಿನ ಕಮಾನುಗಳಿಂದ ಒಸರುವ ನೀರ ಒರತೆ , ಕಡಿದಾದ ಭಾಗದಲ್ಲಿ ನಡೆಯುತ್ತಿರುವಾಗ ಪಟ್ಟನೆ ಎದುರಾಗುವ ಬಂಡೆಗಳು. ಅದೇನೇನೋ ವಿನ್ಯಾಸಗಳು ಅಲ್ಲೇಲ್ಲೊ ಹಿಮ ತುಂಬಿ ಕೊಂಡಂತೆ , ಮತ್ತೊಂದೆಡೆ ಹೂಕೋಸು ಅರಳಿದಂತೆ, ಒಮ್ಮೆ ಆಕಳ ಕೆಚ್ಚಲು, ಮತ್ತೊಮ್ಮೆ ಪುಟ್ಟ ಕುಟೀರ, ಅದೋ ಆ ಕಲ್ಲು ಆಕಳ ಕಿವಿಯಂತಿದೆ ಅಂದು ಕೊಂಡು ಈಚೆ ತಿರುಗಿದರೆ ಭಯಂಕರ ರಾಕ್ಷಸ ಬಾಯಿ ತೆರೆದು ನಿಂತಂತೆ!  ಅದು ಭೂಮಿಯ ಒಳ ಪದರ ಅಮ್ಮನ ಮಡಿಲಿನಂತೆ ತಂಪು ತಂಪು. ನೆಲ ಕಾಣುವ ನೀರು ಹಿತ ನೀಡಿದರೆ ಕೆಲವೊಂದೆಡೆ  ಕಪ್ಪಗಿನ ಕಂದಕ ಭಯ ಹುಟ್ಟಿಸುತ್ತವೆ ಸಧ್ಯಕ್ಕೆ ಈ ಗುಹೆಯ ೧ ಭಾಗ ಮಾತ್ರ ಪ್ರವಾಸಿಗರು ನೋಡಬಹುದು ಉಳಿದ ೩ ಭಾಗದಲ್ಲಿ ನೀರು ತುಂಬಿಕೊಂಡಿದೆ. ಚಳಿಗಾಲದಲ್ಲಿ ಈ ಸ್ಥಳ ಪೂರ್ತಿಯಾಗಿ ಮುಚ್ಚಿರುತ್ತದೆ, ಜೊತೆಗೆ ತಾಪಮಾನ ಮತ್ತು ಏರಿಳಿತದ ದಾರಿಯ ಕಾರಣದಿಂದ ಉಸಿರಾಟದ ತೊಂದರೆ ಇರುವವರಿಗೆ ಈ ಗುಹೆಯಾ ಓಡಾಟ ಅಷ್ಟು ಸೂಕ್ತವಲ್ಲ ಎನ್ನುವುದು ಟಿಕೆಟ್ ಕೌಂಟರಿನಲ್ಲಿ ಕೊಟ್ಟ ಸೂಚನೆಯಾಗಿತ್ತು. ಪುಟ್ಟ ಮಕ್ಕಳನ್ನು ಎತ್ತಿಕೊಂಡಾಗಲಿ, ಪ್ರಾಮ್ ಮೇಲೆ ಆಗಲಿ ಈ ಗುಹೆಯಲ್ಲಿ ಓಡಾಡುವುದು ಕಷ್ಟ. 

ಮೊದಲ ಸಲ ನಾವು ಸ್ನೇಹಿತರೊಂದಿಗೆ ಇಲ್ಲಿಗೆ ಹೋದಾಗ, ನಗುವೆಂದರೇನು ಎಂಬುದರ ಪರಿಚಯವೇ ಇಲ್ಲದ ನಮ್ಮ ಗೈಡ್ ನಮ್ಮ ಟ್ರಿಪ್ಪಿನ ಮತ್ತೊಂದು ಆಕರ್ಷಣೆ ಆಗಿದ್ದ. ಭತ್ತ ಹಾಕಿದರೆ ಅರಳಾಗಿ ಬರುವಷ್ಟು ಸಿಡುಕನಾಗಿದ್ದ.  ಪ್ರಯಾಣದಲ್ಲಿ ಮೆಟ್ಟಿಲುಗಳನ್ನು ಕಂಡ ಕೂಡಲೇ ನನಗೆ ಆಗುತ್ತಿದ್ದ ತಳಮಳ !! ಒಂದೂವರೆ ತಾಸಿನ ಈ ಪಯಣದ ನಂತರ ಹಸಿವಿನಿಂದ ಹೈರಾಣಾಗಿ ಬಂದಾಗ ಮನೆಯಿಂದಲೇ ಮಾಡಿ ತಂದ ಬಿಸಿಬೇಳೆ ಭಾತ್ ಮತ್ತು ಸ್ಯಾಂಡ್ವಿಚ್ ನಮ್ಮ ಪಾಲಿಗೆ ಎಂದಿಗಿಂತ ರುಚಿಯಾಗಿದ್ದವು. ಟಿಕೆಟ್ ಕೌಂಟರ್ ಮತ್ತು ಸ್ವಾಗತ ಕಚೇರಿಯ ಜೊತೆಗೆ ಇಲ್ಲೊಂದು ಕೆಫೆಯೂ ಇದೆ. ಅವರು ಮಾಡಿಕೊಡುವ   
ವೆನಿಲ್ಲಾ ಐಸ್ಕ್ರೀಂ ಮತ್ತು ಬಿಸಿ ಬಿಸಿ ಬ್ರೌನಿ ಸವಿಯದಿದ್ದರೆ  ನಮ್ಮ ಪ್ರವಾಸದಲ್ಲಿ ಏನೋ ತಪ್ಪಿ ಹೋದಂತೆ ಅನಿಸುತ್ತದೆ. ಇವನ್ನು ಹೇಳಲೇಬೇಕು ಎನಿಸಿತು ಏಕೆಂದರೆ ಇದೆಲ್ಲ ಆಗಿದ್ದು ನಮ್ಮ ಈ ಗುಹೆಗಳಿಗೆ ಮೊದಲಬಾರಿ ಭೇಟಿ ಕೊಟ್ಟಾಗ. ಆ ನಂತರ ಅದೆಷ್ಟು ಸಲ ಹೋಗಿ ಬಂದಿದ್ದರೂ ಮತ್ತೆ ಮತ್ತೆ ಹೋಗಿ ಬರಬೇಕು ಎನ್ನುವಂತಹ ಜಾಗ ಇದು. 

ಮಾರ್ಬಲ್ ಆರ್ಚ್ ಕೇವ್ಸ್ ಬೆಲ್ಫಾಸ್ಟ್ ನಗರದಿಂದ ೯೧ಮೈಲಿ ದೂರದಲ್ಲಿದೆ. ಹತ್ತಿರದ Enniskillen, Florence court, ಮತ್ತು ಹಲವು ದ್ವೀಪಗಳನ್ನೂ, ಫರ್ಮಾನಾ ಊರಿನ ಹತ್ತಿರ ಇರುವ ಚಂದದ ಜಲಪಾತಗಳನ್ನೂ ನೋಡಬಹುದು. ಇಲ್ಲಿ ಅಕ್ಕ ಪಕ್ಕದ ಹಳ್ಳಿಗಳಲ್ಲಿ  ಒಳ್ಳೆಯ cottage ವಸತಿ ಸೌಲಭ್ಯ ಲಭ್ಯವಿದೆ. ನೀವು ಮೊದಲೇ ಈ ಗುಹೆಯ ಸ್ವಾಗತ ಕಚೇರಿಗೆ ಕರೆ ಮಾಡಿ opening hours ಬಗ್ಗೆ ಪಕ್ಕ ಮಾಹಿತಿ ಪಡೆದು ಹೋಗುವುದು ಒಳ್ಳೆಯದು. ಜೋರಾಗಿ ಮಳೆ ಗಾಳಿ ಇದ್ದ ಹೊತ್ತಲ್ಲಿ ಇದನ್ನು ಯಾವುದೇ ಮೂನ್ಸೂಚನೆ ಇಲ್ಲದೆಯೂ ಮುಚ್ಚಲಾಗುತ್ತದೆ. ಈ ನಿರಾಸೆ ನಮಗೂ ಒಮ್ಮೆ ಆಗಿದ್ದಕ್ಕೆ ಮೊದಲೇ ಪೂರ್ಣ ಮಾಹಿತಿ ತೆಗೆದುಕೊಂಡು ಹೋಗುವುದು ಒಳಿತು.   

ಅಲ್ಲಿ ನಾನು ಫೋಟೋ ಕ್ಲಿಕ್ಕಿಸಲು ಪರದಾಡಿದ್ದು ಮತ್ತೊಂದು ಕತೆ , ನನ್ನ ಕಣ್ಣಿಗೆ ಕಂಡಷ್ಟು ನನ್ನ ಕ್ಯಾಮರಾ ಕಣ್ಣಿಗೆ ಕಾಣಲಿಲ್ಲ. ಅದಕ್ಕೆ ಅಂತರ್ಜಾಲದಲ್ಲಿ ಸಿಕ್ಕ ಚಿತ್ರಗಳನ್ನೇ ಇಲ್ಲಿ ಹಾಕುತ್ತಿದ್ದೇನೆ. 
ನೀವು ಬೆಲ್ಫಾಸ್ಟ್ ಅಥವಾ ಐರ್ಲೆಂಡ್ ಗೆ ಭೇಟಿ ಕೊಟ್ಟರೆ ಮಾರ್ಬಲ್ ಆರ್ಚ್ ಕೇವ್ಸ್ ಗೆ ಮರೆಯದೆ ಭೇಟಿ ಕೊಡಿ. 
Photo credits: The Fermanagh Herald and Wikipedia 

’ಡೊವ್ ಡೇಲ್ ’ ಮತ್ತು ’ಗಂಟು-ಮೂಟೆ ’-ಅರ್ಪಿತ ರಾವ್

       ಅರ್ಪಿತ ರಾವ್ ಮಗನೊಂದಿಗೆ

ಪರಿಚಯ

ಅರ್ಪಿತ  ರಾವ್  ಹುಟ್ಟಿ ಬೆಳೆದಿದ್ದು ಸೊರಬ ತಾಲೂಕಿನ ಬರಿಗೆ ಎಂಬ ಪುಟ್ಟ ಹಳ್ಳಿಯಲ್ಲಿ. ಮೊದಲಿನಿಂದ ಹಸಿರು ತುಂಬಿದ ಕಾಡು , ಧೋ ಎಂದು ಸುರಿಯುವ ಮಳೆ ನೋಡಿ ಅದೇನೋ ಕವನ ಗೀಚುವ , ಕಥೆ ಬರೆಯುವ ಹುಮ್ಮಸ್ಸು ಇದಕ್ಕೆ ಸಾಥ್ ನೀಡಿದ್ದು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿದ್ದು ಪತ್ರಕರ್ತರಾದ  ಇವರ ಅಪ್ಪ . ಕನಸನ್ನು ನನಸಾಗಿಸಿದ್ದು ಉಜಿರೆಯ ಪತ್ರಿಕೋದ್ಯಮ ವಿಭಾಗ. ಸಂಯುಕ್ತ ಕರ್ನಾಟಕದಲ್ಲಿ ಇಂಟರ್ನ್ಶಿಪ್ , ದೂರದರ್ಶನದಲ್ಲಿ ಸ್ವಲ್ಪ ದಿನಗಳ ವೃತ್ತಿ.

ಮದುವೆಯಾಗಿ ಬಂದಿದ್ದು ಲಂಡನ್ ಗೆ್. ಕಳೆದ ೮ ವರ್ಷಗಳಿಂದ ಇಂಗ್ಲೆಂಡ್ ನಲ್ಲಿ ವಾಸ. ಆಕ್ಸಫರ್ಡ್ ನ ಬ್ಯಾನ್ಬರಿಯಲ್ಲಿ  ಪ್ರಸ್ತುತ ವಾಸ.  ವಿಜಯ ನೆಕ್ಸ್ಟ್ , ವಿಜಯಕರ್ನಾಟಕ , ಸಖಿ ಪಾಕ್ಷಿಕ ,ಉದಯವಾಣಿ, ಹೊಸದಿಗಂತ ಮುಂತಾದ ಪತ್ರಿಕೆಗಳಲ್ಲಿ ಸಾಕಷ್ಟು ಲೇಖನಗಳು ಪ್ರಕಟಗೊಂಡಿವೆ. ಬೇಸರ ಕಳೆಯಲು ಗೀಚುವ,ಕೆಲವೊಮ್ಮೆ ಪ್ರಕಟಗೊಂಡ ಲೇಖನಗಳನ್ನು  ಇವರದೇ ಸ್ವಂತ ಬ್ಲಾಗ್ http://ibbani-ibbani.blogspot.co.uk/ ಇಲ್ಲಿ ಓದಬಹುದು .  ಜಾನಪದ ಗೀತೆಗಳನ್ನು ಹಾಡುವುದು , ಹೊಸ ರುಚಿ ಮಾಡುವುದು ಹವ್ಯಾಸ . ಪ್ರಸ್ತುತ ರಿಟೇಲ್ ವಿಭಾಗದಲ್ಲಿ ಉದ್ಯಮದಲ್ಲಿರುವ ಅರ್ಪಿತ ಅನಿವಾಸಿಯಲ್ಲಿ ಹಲವು ನೆನಪುಗಳನ್ನು ಈ ಹಿಂದೆ ಹಂಚಿಕೊಂಡಿದ್ದಾರೆ. ಕಳೆದವಾರ ಹಣತೆ ಎನ್ನುವ ಅರ್ಥಪೂರ್ಣ ಕವನವನ್ನು ಬರೆದಿದ್ದರು. ಈ ವಾರ ಡೊವ್ ಡೇಲ್ ಎನ್ನುವ ಸ್ಥಳಕ್ಕೆ ಕೊಟ್ಟ ಭೇಟಿಯನ್ನೂ ಜೊತೆಗೆ ತಾವು ನೋಡಿದ ಗಂಟು-ಮೂಟೆ ಎನ್ನುವ ಬಹು ಚರ್ಚಿತ ಸಿನಿಮಾ ಬಗ್ಗೆ ವಯಕ್ತಿಕ ಅನಿಸಿಕೆ್ಗಳನ್ನು  ಹಂಚಿಕೊಂಡಿದ್ದಾರೆ- –ಸಂ


ಇಂಗ್ಲೆಂಡಿನ ಬಹುತೇಕ ಭಾಗಗಳು ವರ್ಷದ ಬೇರೆಬೇರೆ ಕಾಲಮಾನಗಳಲ್ಲಿ ವಿಭಿನ್ನ ರೀತಿಯಲ್ಲಿ ಕಾಣುತ್ತವೆ ಮತ್ತು ಅದಕ್ಕೆ ತನ್ನದೇ ಆದ ವೈಶಿಷ್ಟತೆಯನ್ನು ಕೂಡ ಹೊಂದಿರುವುದು ಕಂಡುಬರುತ್ತದೆ. ಉದಾಹರಣೆಗೆ ಬೇಸಿಗೆಯಲ್ಲಿ ಒಂದು ರೀತಿಯ ಹಸಿರಾದರೆ ಚಳಿಗಾಲದಲ್ಲಿ ಬೋಳು ಮರಗಳು ಕೆಲವೊಮ್ಮೆ ಹಿಮ ತುಂಬಿದ ಶ್ವೇತವರ್ಣವನ್ನು ಮೈತುಂಬಿಸಿಕೊಂಡಿರುವ ಪ್ರಕೃತಿಯ ಅಂದವನ್ನು ನೋಡುವುದೇ ಇನ್ನೊಂದು ಸೊಬಗು. ಹಾಗೆಯೇ ಶಿಶಿರ ಋತುವಿನಲ್ಲಿ ಹೂವಿನಿಂದ ಹಾಸಿ ಹೊದ್ದಿರುವ ಪ್ರಕೃತಿಯನ್ನು ಕಣ್ಣು ತುಂಬಿಸಿಕೊಳ್ಳುವುದು ಎಲ್ಲಕ್ಕಿಂತ ಚೆಂದ.

ಹಾಗೆಯೇ ಇನ್ನೇನು ಇಲ್ಲಿನ ವಸಂತ ಕಾಲ ಮುಗಿದು ಚಳಿಗಾಲ ಪ್ರಾರಂಭವಾಗಬೇಕು ಎನ್ನುವಾಗ  ನಾವು ಈ ಭಾರಿ ಹೋಗಿದ್ದು ಪೀಕ್ ಡಿಸ್ಟ್ರಿಕ್ಟ್ . ಹೆಸರಿಗೆ ತಕ್ಕ ಹಾಗೆ ಇಲ್ಲಿ ಎಲ್ಲಿ ನೋಡಿದರೂ ಹಸಿರು ಬೆಟ್ಟಗಳು. ಮಲೆನಾಡಿನಲ್ಲಿ ಬೆಳೆದ ನನಗೆ ಹಸಿರು ಬೆಟ್ಟಗುಡ್ಡಗಳು ಹೊಸದಲ್ಲ ಅವುಗಳ ತಪ್ಪಲಿನಲ್ಲೇ ಬೆಳೆದು ಬಂದಿದ್ದರಿಂದ ಅದೊಂದು ರೀತಿಯಲ್ಲಿ ಎಷ್ಟು ಸೋಜಿಗವೋ ಅಷ್ಟೇ ರೂಢಿ ಕೂಡ ಎನ್ನಬಹುದು. ಆದರೆ  ಇಲ್ಲಿನ ಬೆಟ್ಟಗಳ  ಸೊಗಸೇ ಬೇರೆ. ಎತ್ತರದ ದಟ್ಟ ಅರಣ್ಯಗಳ ನಡುವಿನ ಬೆಟ್ಟಗಾಡುಗಳು ಇದಲ್ಲ. ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ತಾನೇ ಮಾಡಿಕೊಂಡಿದ್ದಾನೇನೋ ಎಂಬಂತಿರುತ್ತದೆ ಇಲ್ಲಿನ ಬೆಟ್ಟಗಳು.ಪೀಕ್ ಡಿಸ್ಟ್ರಿಕ್ಟ್ ನ ಯಾವುದೇ ಭಾಗಗಳಿಗೆ ಹೋದರೂ ಕೂಡ ಸಾಕಷ್ಟು ನಡೆಯುವುದು ಅಥವಾ ಬೆಟ್ಟ ಹತ್ತುವುದು ಇದ್ದೇ ಇರುತ್ತದೆ ಆದ್ದರಿಂದ ರಣ ಬಿಸಿಲಿನಲ್ಲಿ ಹೋದರೆ ಬೆಟ್ಟ ಹತ್ತುವುದು ಕಷ್ಟವಾಗಬಹುದು ಆದ್ದರಿಂದ  ಸ್ಪ್ರಿಂಗ್ ಕಾಲದಲ್ಲಿ ಹೋದರೆ ಇಲ್ಲಿನ ಪ್ರವಾಸಿ ಸ್ಥಳಗಳನ್ನು ಸಾಕಷ್ಟು ಮಜಾ  ಮಾಡಬಹುದು .

ಹಾಗೆ ಈ ಬಾರಿ ನಾವು ನೋಡಹೋಗಿದ್ದು ಪೀಕ್ ಡಿಸ್ಟ್ರಿಕ್ಟ್ ನ ಡೋವ್ ಡೇಲ್

ಡೋವ್ ಡೇಲ್ :

ಡರ್ಬಿಶೇರ್ ನಲ್ಲಿರುವ ಡೋವ್ ಡೇಲ್ ಗೆ ವರ್ಷಪೂರ್ತಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ನಾವು ಹೋಗಿದ್ದು ಸೆಪ್ಟೆಂಬರ್ ನ ಮಧ್ಯ ಭಾಗವಾದ್ದರಿಂದ ಹದವಾದ ಚಳಿ ಜೊತೆಗೆ ಸೂರ್ಯನ ಎಳೆ ಬಿಸಿಲು ಎರಡೂ ಬೆರೆತು ಮನಸ್ಸಿಗೆ ಮುದ ನೀಡುವ ವಾತಾವರಣವಾಗಿತ್ತು . ಡೋವ್ ಡೇಲ್ ಸ್ಟೆಪ್ಪಿಂಗ್ ಸ್ಟೋನ್ ಎಂದೇ ಕರೆಯಲಾಗುವ ಈ ಪ್ರವಾಸಿ ಸ್ಥಳವನ್ನು ಡೋವ್ ಡೇಲ್ ವಾಕ್ ಎಂದು ಕೂಡ ಹೇಳುತ್ತಾರೆ.  ಇದಕ್ಕೆ ಕಾರಣ ಇಲ್ಲಿ ಹರಿಯುತ್ತಿರುವ ನದಿಯ ಮದ್ಯೆ ಕಲ್ಲನ್ನು ಇಡಲಾಗಿದ್ದು ಇಲ್ಲಿನ ಬೆಟ್ಟವನ್ನು ಹತ್ತಲು ಒಂದೊಂದೇ ಕಲ್ಲುಗಳನ್ನು ದಾಟಿ ಹೋಗಬೇಕು.
ಇಲ್ಲಿ ಹದಿನೆಂಟನೇ ಶತಮಾನದಲ್ಲಿ  ಪ್ರಾರಂಭವಾದ  ಪ್ರವಾಸೋದ್ಯಮ ಇಂದು ಯುನೈಟೆಡ್ ಕಿಂಗ್ಡಮ್  ನ ಅತ್ಯಂತ  ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಲಾಮ್ ಎಂಬ ಹಳ್ಳಿಯಲ್ಲಿ ಸುಮಾರು ೪೫ ಮೈಲಿಯವರೆಗೆ ಹರಿಯುವ ಡೋವ್ ಎಂಬ ನದಿಯ ತಟದಲ್ಲಿ ಸುಣ್ಣದ ಕಲ್ಲಿನ ಕೊರೆತಗಳಿಂದ ನಿರ್ಮಾಣವಾದ ಬೆಟ್ಟವನ್ನು ಡೋವ್ ಡೆಲ್ ವ್ಯಾಲಿ ಎಂದೇ ಕರೆಯುತ್ತಾರೆ.

ಅದೆಲ್ಲಕ್ಕಿಂತ ಇಲ್ಲಿ ಮನಸೂರೆಗೊಳ್ಳುವುದು ಡೋವ್ ನದಿಯ ಜುಳುಜುಳು ನಾದದ ಮಧ್ಯೆ  ಸ್ಟೆಪ್ಪಿಂಗ್ ಸ್ಟೋನ್ ಗಳಲ್ಲಿ ಅತ್ತ  ದಾಟಿ ಹೋದರೆ ಸುತ್ತಲೂ ಹಸಿರು ಹಾಸಿದ ಬೆಟ್ಟಗಳು ಮತ್ತು ಅದನ್ನು ನೋಡಲೆಂದೇ ಪ್ರವಾಸಿಗರೊಂದಿಗೆ ಬಂದಂತಿರುವ ಚಿನ್ನದ ಗೆರೆ ಎಳೆದಂತೆ ಕಾಣುವ ಸೂರ್ಯನ ಹದವಾದ ಕಿರಣಗಳು . ಬೆಟ್ಟದ ತುದಿಯನ್ನು ಹತ್ತಿ ನೋಡಿದರೆ ಅಲ್ಲಿನ ಚಿತ್ರಣ ಮನಸ್ಸನ್ನು ಮುದಗೊಳಿಸುವುದು ಖಂಡಿತ.

ಡರ್ವೆಂಟ್ :

ಡೋವ್ ಡೇಲ್ ನಿಂದ ಸುಮಾರು ಒಂದು ತಾಸು ಕಾರಿನ ಪ್ರಾಯಾಣ ಡರ್ವೆಂಟ್ ಗೆ.  ಡರ್ವೆಂಟ್ ಕೂಡ ಪೀಕ್ ಡಿಸ್ಟ್ರಿಕ್ಟ್ ನ ಒಂದು ಮುಖ್ಯ ಪ್ರವಾಸಿ ತಾಣಗಲ್ಲಿ ಒಂದು . ಡೋವ್ ಡೇಲ್ ನಿಂದ ಡರ್ವೆಂಟ್ ಪ್ರಯಾಣವೇ ಸುಂದರ. ಇಕ್ಕೆಲಗಳಲ್ಲಿ ಇರುವ ಬೆಟ್ಟಗಳ ನಡುವೆ ಕಾರಿನಲ್ಲಿ ಹೋಗುವ ಅನುಭವ ಒಂದುರೀತಿಯ ಮುದ ನೀಡುತ್ತದೆ. ಹಸಿರು ಮತ್ತು ಹಳದಿ ಬಣ್ಣಗಳಿಂದ ಕುಡಿದ ಬೆಟ್ಟಗಳು ಮತ್ತು ಅಲ್ಲಲ್ಲಿ ಕುದುರೆ , ಮೇಕೆ , ಕುರಿಗಳು  ಮೇಯುತ್ತಿರುವುದನ್ನು  ಕಾಣಬಹುದು.  ಕೆಲವು ಭಾಗಗಳಲ್ಲಿ ಇಲ್ಲಿನ ಟ್ರೆಕಿಂಗ್ ಎಂದೇ ಬರುವ ಜನರು ನಡೆದು ಹೋಗುವುದು ಅಥವಾ ಸೈಕ್ಲಿಂಗ್ ಮಾಡಿಕೊಂಡು ಪ್ರವಾಸಿ ಸ್ಥಳಕ್ಕೆ ಹೋಗುತ್ತಿರುವುದು ಕಂಡುಬರುತ್ತದೆ.


ಡೋವ್ ಡೇಲ್ ಗೆ ಹೋಲಿಸಿದರೆ ಡರ್ವೆಂಟ್ ಸಂಪೂರ್ಣ ವಿಭಿನ್ನ ಎನಿಸುತ್ತದೆ. ಇದೊಂದು ನಿಸರ್ಗಧಾಮ . ಡಾರ್ವೆಂಟ್ ನಲ್ಲಿ ಹಸಿರು ಹಾಸಿ ಹೊದ್ದಂತಿರುವ ಸ್ಥಳದಲ್ಲಿ ಪ್ರವಾಸಿಗರಿಗೋಸ್ಕರವೇ ಕುಳಿತುಕೊಳ್ಳಲು ಅಲ್ಲಲ್ಲಿ ಕಲ್ಲಿನ ಬೆಂಚು. ಅಲ್ಲಿ ಕುಳಿತು ಎದುರುಗಿರುವ ಪ್ರಕೃತಿಯನ್ನು ನೋಡುತ್ತಿದ್ದರೆ ಸುತ್ತಲಿನ ಪ್ರಪಂಚವೇ ಮರೆತಂತ ಅನುಭವ.  ಇಲ್ಲಿ ಡರ್ವೆಂಟ್ ನದಿಗೆ  ಬ್ರಿಜ್ ಕಟ್ಟಲಾಗಿದೆ . ಜೊತೆಗೆ ಇದನ್ನು ಡರ್ಬಿಶೈರ್ ನ ಲೇಕ್ ಡಿಸ್ಟ್ರಿಕ್ಟ್ ಎಂದು ಕರೆಯಲಾಗುತ್ತದೆ. ಜೊತೆಗೆ ಇಲ್ಲಿ ಕಾಡುಗಳ ಮಧ್ಯೆ ನಡೆದುಕೊಂಡು ಹೋಗಿ ಪ್ರವಾಸಿ ಸ್ಥಳವನ್ನು ತಲುಪಬೇಕಾಗಿದ್ದು ಇದು ದಿನನಿತ್ಯದ ಜೀವನ ಜಂಜಾಟದಲ್ಲಿರುವವರಿಗೆ ಒಂದು ರೀತಿಯ ಪ್ರಶಾಂತ ವಾತಾವರಣವನ್ನು ನೀಡುತ್ತದೆ.

ಇಷ್ಟೇ ಅಲ್ಲದೆ ಪೀಕ್ ಡಿಸ್ಟ್ರಿಕ್ಟ್ ಗೆ ಹೋಗುವಾಗ ಆಗಾಗ ಬರುವ ಮಳೆ ಎದುರಿಸಲು ರೈನ್ ಕೋಟ್ ಅಥವಾ ಕೊಡೆ ಮತ್ತು ಬೆಟ್ಟವನ್ನು ಹತ್ತಲು ಟ್ರೆಕಿಂಗ್ ಗೆ ಸೂಕ್ತವಾದ ಶೂ  ಅನಿವಾರ್ಯ.

———————ಅರ್ಪಿತ ರಾವ್, ಬ್ಯಾನ್ಬರಿ


ಚಿತ್ರ ವಿಮರ್ಶೆ-  ’ಗಂಟು-ಮೂಟೆ ’


ಆ ಚಿತ್ರ ಪ್ರಾರಂಭವಾಗುವುದೇ ಹಾಗೆ ಚಲನಚಿತ್ರದ ಮೇಲೆ ಅತೀವ ಹುಚ್ಚನ್ನು ಹಚ್ಚಿಕೊಂಡಿರುವ ಹೆಣ್ಣು ಮಗಳು ಒಂಟಿಯಾಗಿ ಮೂವಿ ನೋಡಲು ಹೋದಾಗ ಅನಿವಾರ್ಯವಾಗಿ ಶೋಷಣೆಗೆ  ಒಳಗಾಗಿ ತತ್ತರಿಸಬೇಕಾಗುತ್ತದೆ . ಹಾಗಂತ ಇದು ಹೆಣ್ಣಿನ ಶೋಷಣೆಗೆ ಸಂಬಂಧ ಪಟ್ಟ  ಕಥೆಯಲ್ಲ. ಜೀವನದ ಪಯಣದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಗಂಟು ಮೂಟೆ ಕಟ್ಟಿಕೊಂಡು ಓಡಾಡುತ್ತಿರುವವರೇ .

ನಾವು ಇರುವಷ್ಟು ದಿನ ನಮ್ಮ ಜೊತೆ ಕೆಲವು ಮರೆಯಲಾರದ ನೆನಪುಗಳನ್ನು ಹೊತ್ತು ಸಾಗುವುದು ಅನಿವಾರ್ಯ ಕೂಡ.  ಅಂತಹ ಒಂದು ಪ್ರಯಾಣವನ್ನು ತಿಳಿಸುವ ಚಿತ್ರವೇ ರೂಪ ರಾವ್ ನಿರ್ದೇಶನದ ಗಂಟು ಮೂಟೆ . ಒಂದು ಮುಗ್ದ ವಯಸ್ಸಿನ ಹೆಣ್ಣು ಮಗಳು  ವಯಸ್ಸಿಗೆ ಮೀರಿ ಪ್ರೀತಿಯಲ್ಲಿ ಮುಳುಗಿ ತನ್ನ ಬದುಕನ್ನೇ ಹೇಗೆ ತಿರುಗಿಸಿಕೊಳ್ಳಬಲ್ಲಳು ಎಂಬುದನ್ನು ಈ ಚಿತ್ರ ಮನದಟ್ಟು ಮಾಡುತ್ತದೆ. ಹದಿಹರೆಯದಲ್ಲಿ ಕಾಡುವ ಪ್ರೀತಿ ಹೇಗೆ ಜೀವನ ಪರ್ಯಂತ ಮರೆಯಲಾರದೆ ಬೆನ್ನತ್ತ್ತಿ ಬಂದುಬಿಡಬಹುದು ಎಂಬುದನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಿದೆ .ಚಿತ್ರದಲ್ಲಿ ಕಂಡು ಬರುವ ಕೆಲವು ಘಟನೆಗಳು ಬಹುತೇಕ ಜನರು ಶಾಲಾ ಕಾಲೇಜುಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸಿರುವುದು ನಿಜವಾದ್ದರಿಂದ ನೋಡುಗರನ್ನು ನೆನಪಿನ ಲೋಕಕ್ಕೆ ಕರೆದುಕೊಂಡು ಹೋಗಬಹುದಾದ ಚಿತ್ರವಿದು.

ಚಲನಚಿತ್ರ ನೋಡಿ , ಪ್ರೀತಿಯ ಬರಹಗಳನ್ನು ಬರೆದು , ಚಲನಚಿತ್ರದ ಹೀರೋ ಗಳ ಮೇಲೆ ಬೆಳೆಯುವ ಪ್ರೀತಿ ಕೊನೆಗೆ ತನಗೂ ಅಂತಹದೇ ಒಂದು  ಹುಡುಗನನ್ನು ಹುಡುಕುವಲ್ಲಿ ತಲ್ಲಣಿಸುತ್ತದೆ ಎಂದು ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರಬುದ್ಧವಾಗಿ ಬೆಳೆಯುವ ಮೊದಲೇ ಇಂತಹ ಆಸೆಗಳಿಗೆ ಒಳಗಾಗುವ ಹೆಣ್ಣು ಮುಂದೇನೆ್ಲ್ಲ ಅನುಭವಿಸಬೇಕಾಗಬಹುದು ಎಂಬುದನ್ನು ತೋರಿಸುವ ಪ್ರಯತ್ನ ರೂಪ ರಾವ್ ಮಾಡಿದ್ದಾರೆ .   ಚಲನ ಚಿತ್ರ ಸಂಪೂರ್ಣವಾಗಿ ೯೦ ರ ದಶಕದಲ್ಲಿ ನಡೆದಿರಬಹುದಾದ ಘಟನೆಗಳಂತೆ ಪತ್ರ ಮತ್ತು ಲ್ಯಾಂಡ್ಲೈನ್ ಫೋನ್ ಇಂತವನ್ನೆಲ್ಲ ತೋರಿಸಿದರೂ ಕೂಡ ಹೆಚ್ಚಿನ ಕಡೆ ಇದು ಇಂದಿಗೂ ಕೂಡ ಅನ್ವಯಿಸುತ್ತದೆ ಎಂದು ನನ್ನ ಅಭಿಪ್ರಾಯ. ಇಂದು ಕೂಡ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಲ್ಲಿ ಇಂತಹ ಆಸೆ ಆಕಾಂಕ್ಷೆಗಳು ಸಹಜ ಮತ್ತು ಅದು ಕೂಡ ಇಂತಹದೇ ಪರಿಣಾಮವನ್ನು ಬೀರಿದ ಉದಾಹರಣೆಗಳನ್ನು ನಮ್ಮ ಸುತ್ತಮುತ್ತಲೇ ಕಾಣಬಹುದು.

ಈಗಿನ ಹೈಸ್ಕೂಲ್ ಮತ್ತು ಕಾಲೇಜಿನ ಮಕ್ಕಳು ಈ ಚಿತ್ರವನ್ನು ನೋಡಿ ತಾವೂ ಹೀಗಾಗಬಾರದು ಎಂಬುದನ್ನು ಮನಗೊಳ್ಳಬೇಕು ಎಂಬ ಸಂದೇಶವನ್ನು ಸಾರ ಹೊರಟಿರುವ ಚಿತ್ರವಿದು . ಆದರೆ ಅಲ್ಲಲ್ಲಿ ಕಂಡು ಬರುವ ಅಗತ್ಯಕ್ಕಿಂತ ಹೆಚ್ಚೆನಿಸುವ ಪ್ರೇಮಕ್ಕಿಂತ ಆ ಸಮಯದಲ್ಲಿ ಕಂಡುಬರುವ ಬಯಕೆಯನ್ನು ತೋರಿಸುವ ಕಿಸ್ಸಿಂಗ್ ಸೀನ್ ಗಳು ಮುಜುಗರ ಉಂಟು ಮಾಡುವಂತೆಯೂ ಅದರ ಅವಶ್ಯಕತೆ ಇರಲಿಲ್ಲ ಎಂದು ಕೂಡ ಅನ್ನಿಸುತ್ತದೆ.  ಹದಿಹರೆಯದ ಪ್ರೀತಿ ಹೇಗೆ ಮಕ್ಕಳ ಜೀವನವನ್ನೇ ಹಾಳುಮಾಡಿಬಿಡಬಲ್ಲದು ಎಂಬುದನ್ನು ಇಲ್ಲಿ ತೋರಿಸಲಾಗಿದೆ.  ಹದಿಹರೆಯದ ಸಮಯದಲ್ಲಿ ಹುಟ್ಟುವ ಮೊದಲ ಪ್ರೀತಿ ಕೊನೆಯವರೆಗೂ ಇರುತ್ತದೆಯೋ ಇಲ್ಲವೋ ಆದರೆ ಅದರ ನೆನಪು ಮಾತ್ರ ಕಾಡುವುದು ಖಂಡಿತ ಎಂಬುದು ಈ ಚಲನಚಿತ್ರದ ಪೂರ್ಣ ಸಂದೇಶ. ಅಂತಹ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರ ಇಡೀ ಇಬ್ಬರ ಜೀವನವನ್ನೇ ಹಾಳುಮಾಡಿಬಿಡಬಹುದು ಅಥವಾ ಒಂದು ವ್ಯಕ್ತಿತ್ವವನ್ನು ರೂಪಿಸಲು ಬುನಾದಿ ಆಗಿಬಿಡಬಹುದು ಎಂಬುದನ್ನು ತೋರಿಸಿರುವ ಚಿತ್ರವಿದು. ಕಥಾನಾಯಕಿಯನ್ನೇ ಮುಖ್ಯವಾಗಿ ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ತೇಜು ಬೆಳವಾಡಿಯವರ ಪಾತ್ರ ಸಹಜ ಸುಂದರವಾಗಿ ಮೂಡಿ ಬಂದಿದೆ.

      ರೂಪ ರಾವ್-ನಿರ್ದೇಶಕಿ

ಚಿತ್ರದಲ್ಲಿ ಬರುವ ಹಾಡುಗಳು ಒಳ್ಳೆಯ ಸಾಹಿತ್ಯವನ್ನು ಹೊಂದಿದ್ದು , ಕಾಲೇಜಿನ ಮಕ್ಕಳ ಮನಸ್ಥಿತಿ ಸಾರುತ್ತದೆ. ಕಥೆಗೆ ತಕ್ಕ ಪಾತ್ರವನ್ನು ಮಾಡುವಲ್ಲಿ ನಿಶ್ಚಿತ್ ಮತ್ತು ತೇಜು ಬೆಳವಾಡಿ ಇಬ್ಬರೂ ಯಶಸ್ವಿಯಾಗಿದ್ದಾರೆ. ಕಥಾ ನಾಯಕನಾದ ನಿಶ್ಚಿತ್ ಕೂಡ ಚಲನಚಿತ್ರ ಮುಗಿದ ನಂತರವೂ ಮನಸ್ಸಿನಲ್ಲಿ ಉಳಿಯುತ್ತಾರೆ . ನೀವೂ ಒಮ್ಮೆ ಈ ಚಲನಚಿತ್ರ ವೀಕ್ಷಿಸಿ ಮತ್ತು ಹಳೆಯ ದಿನಗಳ ಮೆಲುಕುಹಾಕಿ.-ಅರ್ಪಿತ ರಾವ್, ಬ್ಯಾನ್ಬರಿ

(ಮುಂದಿನ ವಾರ -ದೃಶ್ಯ ಕಾವ್ಯಗಳು)