ಭರವಸೆ

ಯುಗಾದಿ  ಹಬ್ಬದ ಕವಿ ಗೋಷ್ಠಿ ‘ಅನಿವಾಸಿ’ ಯ ಬಾಳಿನಲ್ಲಿ ಹೊಸ ಭರವಸೆ ಹುಟ್ಟಿಸುವಲ್ಲಿ ಸಫಲವಾಯಿತು. ಈ ಆಶಯವನ್ನು ಪ್ರತಿಬಿಂಬಿಸುತ್ತಿದೆ ಶಿವಪ್ರಸಾದರ ಕವನ…

ಹುಚ್ಚು ಮಾಧ್ಯಮಗಳ ಹಾವಳಿಯಲ್ಲಿ
ಕುಗ್ಗಿಹೊಗಿವೆ ನಮ್ಮ ಕ್ರಿಯಾತ್ಮಕ ಚಿಂತನೆಗಳು
ಕಂಪ್ಯೂಟರ್ಗಳ ಸಾಮ್ರಾಜ್ಯದಲಿ
ಒಣಗಿಹೋಗಿವೆ ಶಾಹಿ ಕುಡಿಕೆಗಳು
ಸೊರಗಿವೆ ಬಣ್ಣ ಬಣ್ಣದ ಲೇಖನಿಗಳು

ಇ-ಮೇಲ್ ಮೊಬೈಲ್ ಗಳ ಧಾಳಿಯಲ್ಲಿ
ಮಲಗಿವೆ ಪತ್ರ ವ್ಯವಹಾರಗಳು
ಆಂಗ್ಲಭಾಷೆಯ ಪ್ರವಾಹದಲಿ
ಕೊಚ್ಚಿಹೋಗಿವೆ ನಮ್ಮಿ ಭಾಷೆಗಳು
ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು

ತಲೆಯೆತ್ತಿವೆ ಆತಂಕವಾದೀ ಶಕ್ತಿಗಳು
ಉಗ್ರಗಾಮಿಗಳ ಪಿತೂರಿಗಳು
ನಡುಗಿಸಿವೆ ನಾಗರೀಕತೆಯ ಖಾಯಿಲೆಗಳು
ಎಡ್ಸ್ ಡಯಾಬಿಟಿಸ್ ಬ್ಲಡ್ ಪ್ರೆಶರ್ ಗಳು

ಮಾಯವಾಗಿವೆ ಹಚ್ಚ ಹಸುರಿನ ಕಾಡುಗಳು
ಕರಗಲಿವೆ ಹಿಮದ ಗೆಡ್ಡೆಗಳು
ಇಲ್ಲಿವೆ ಪ್ರಕೃತಿ ವಿಕೋಪಗಳು
ಧಗೆ ಬಿಸಿಲು ಸುನಾಮಿ ಭೂಕಂಪಗಳು

ಈ ತಲ್ಲಣ ಗೊಳಿಸುವ ಹಿನ್ನೆಲೆಯಲ್ಲಿ
ಅನಿಶ್ಚಿತ ಇಂದು ನಾಳೆಗಳಲಿ
ಮುರಿದುಬಿದ್ದ ವಿಶ್ವಾಸಗಳಲಿ
ಸರಿ ತಪ್ಪುಗಳ ದ್ವಂದಗಳಲ್ಲಿ

ಇನ್ನೂ ಉಳಿದಿವೆ…
ಭರವಸೆಗಳು, ಛಲಗಳು
ನಿರ್ಧಾರ, ನಂಬಿಕೆ ಮತ್ತು ಆಶಯಗಳು