ಮಾತುಗಳು – ಕೇಶವ ಕುಲಕರ್ಣಿ ಬರೆದ ಕವನ
(ಕೇಶವ್ ಕುಲಕರ್ಣಿ ಅವರು ಬರೆದ ‘ಮಾತುಗಳು’ ಎಂಬ ಈ ಕವನ ಬಹಳ ನಿಗೂಢ ಹಾಗೂ ಅರ್ಥಗರ್ಭಿತವಾಗಿದೆ. ಇದನ್ನು ಒಂದು ಸುತ್ತು ಓದಿದ ಕೂಡಲೇ ಗ್ರಹಿಸುವುದು ಸುಲಭವಲ್ಲ. ಪದ್ಯದಲ್ಲಿ ಅಡಗಿರುವ Metaphor ಕೂಡ ಒಮ್ಮೆಗೆ ಮೇಲೆದ್ದು ತೋರುವುದಿಲ್ಲ. ಈ ಕವನವನ್ನು ಗ್ರಹಿಸುವುದಕ್ಕೆ ಒಂದೆರಡು ಬಾರಿಯಾದರೂ ಓದಬೇಕು.
ಕೇಶವ್ ತಿಳಿಸಿದ ಹಾಗೆ ಈ ಕವನದಲ್ಲಿ ಅವರು ವಿಶೇಷ ಶೈಲಿಯನ್ನು ಬಳಸಿಕೊಂಡಿದ್ದಾರೆ. ಇದು ಒಂದು ಉತ್ತಮ ಪ್ರಯೋಗ. ಇದನ್ನು ‘ಪದ ಸರಣಿ’ (Chain Verse) ಎಂದು ಗುರುತಿಸಬಹುದು. ಈ ಒಂದು ಬರವಣಿಗೆಯ ಶೈಲಿಯಲ್ಲಿ ಕವನದಲ್ಲಿನ ಒಂದು ಚರಣದ (Paragraph) ಕೊನೆಯ ಸಾಲಿನಲ್ಲಿ ಕಾಣುವ ಪದ ಮುಂದಿನ ಚರಣದ ಮೊದಲನೆ ಪದವಾಗಿ ಮೂಡುತ್ತದೆ. ಉದಾಹರಣೆಗೆ ಮೊದಲ ಚರಣದ ಕೊನೆ ಸಾಲಿನ ‘ಮಡಕೆ’ ಮುಂದಿನ ಚರಣದ ಮೊದಲನೇ ಸಾಲಿನಲ್ಲಿ ‘ಮಡಕೆಗಳು’ ಎಂದು ಮೂಡುತ್ತದೆ. ಹಾಗೆ ಎರಡನೆ ಚರಣದ ಕೊನೆ ಸಾಲಿನಲ್ಲಿ ಕಾಣುವ ‘ಧೂಳು’ ಮೂರನೇ ಚರಣದ ಮೊದಲನೆ ಸಾಲಿನಲ್ಲಿ ‘ಧೂಳುಗಳು’ ಎಂದು ರೂಪುಗೊಂಡಿದೆ. ಮೂರು, ನಾಲ್ಕು ಸಾಲಿನ ಈ ಒಂದು ವಿಶೇಷ ಕಾವ್ಯ ಶೈಲಿ ಬಹಳ ಪುರಾತನವಾದದ್ದು! ಈ ಶೈಲಿಯಲ್ಲಿ ಬರೆದ ಕವನಗಳು ಬಹಳ ವಿರಳ. ಫ್ರೆಂಚ್, ಜರ್ಮನ್ ಹಾಗೂ ಇಂಗ್ಲೀಷ್ ಸಾಹಿತ್ಯದಲ್ಲಿ ಈ ಶೈಲಿಯನ್ನು ಕೆಲವು ಬರಹಗಾರರು ಅಳವಡಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ಸಾಹಿತಿ ಚಿ. ಉದಯ ಶಂಕರ್ ಅವರು ತಮ್ಮ ಕೆಲವು ರಚನೆಯಲ್ಲಿ ಈ ಶೈಲಿಯನ್ನು ಬಳಸಿಕೊಂಡಿರುವ ವಿಚಾರ ಕೆಲವರಿಗೆ ಮಾತ್ರ ತಿಳಿದಿರಬಹುದು.
‘ಮಾತು ಮನೆ ಕೆಡುಸ್ತು (ಮಡಕೆ) ತೂತು ಒಲೆ ಕೆಡುಸ್ತು’ ಎಂಬ ಗಾದೆ ಈ ಕವನಕ್ಕೆ ಸ್ಫೂರ್ತಿ ಒದಗಿಸಿರಬಹುದು !
ಈ ನಿಗೂಢ ಕವನವನ್ನು ಓದುಗರು ತಮ್ಮದೇ ಆದ ದೃಷ್ಟಿ ಕೋನಗಳ ಮೂಲಕ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿ ಕೊಳ್ಳಬಹುದು. ನಿಮ್ಮೆಲ್ಲರ ಪ್ರತಿಕ್ರಿಯೆಗಳ ಬಳಿಕ ಕೇಶವ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಲ್ಲಿ……. “ಮಾತುಗಳು” ಕವನವನ್ನು ಓದಿ ಮತ್ತೆ ಓದಿ…. ಚರ್ಚೆ ಮಾಡೋಣ – ಸಂ)
ಮಾತುಗಳು
ಬಿದ್ದಿವೆ ಮೂಲೆಯಲ್ಲಿ
ಮಡಕೆಗಳ ಒಳಗೆ
ಮಡಕೆಗಳು
ನಾರಿವೆ ಗವ್ವೆನುವ
ಧೂಳು ಕುಡಿದು
ಧೂಳುಗಳು
ಹಾರಿವೆ ಗಾಳಿ ಬೀಸಿ
ಮನೆ ತುಂಬ
ಮನೆ
ಸೋತಿದೆ ಸೋರಿ
ಕಂಬ ಒದ್ದೆಯಾಗಿ
ಕಂಬಗಳು
ಟೊಳ್ಳಾಗಿವೆ ಒಳಗೆ
ಹೊರಗೆಲ್ಲ ಗಾಯಗಳು
ಗಾಯಗಳು
ಬಿರಿದಿವೆ ರಕ್ತಮಾಂಸ
ಗೆದ್ದಲು ಮುಗಿಬಿದ್ದಿವೆ
ಗೆದ್ದಲುಗಳು
ತಿನ್ನುತ್ತವೆ (ಒಂದು ದಿನ) ಮಡಕೆಯಲ್ಲಿ
ಬಿದ್ದ ಮಾತುಗಳ