
ಕನ್ನಡ ಬಳಗ ಯು ಕೆ, ಇದೇ ಅಕ್ಟೋಬರ್ ೩೧, ೨೦೧೫ ರಂದು ಚೆಲ್ಟನಂ ದಲ್ಲಿ ದೀಪಾವಳಿ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸುತು. ನ್ಯೂಜರ್ಸಿಯಿಂದ ಬಂದ ಕಲಾತರಂಗ ತಂಡದ ವತಿಯಿಂದ ಅದರ ಸದಸ್ಯರಾದ ಕವಿ-ನಟ-ನಾಟಕಕಾರರಾದ ಬ. ರಾ. ಸುರೇಂದ್ರ ಅವರು ಈ ಸಮಾರಂಭಕ್ಕೆಂದೇ ರಚಿಸಿದ ತಮ್ಮ ಕವನವನ್ನುಓದಿ ಬಳಗಕ್ಕೆ ಸಮರ್ಪಿಸಿದರು. ಜೊತೆಗೆ ಕಟ್ಟು ಹಾಕಿಸಿದ ಅದರ ನಕಲನ್ನು ಅಧ್ಯಕ್ಷರಿಗೆ ಕೊಟ್ಟರು. ಅದನ್ನು ಈ ವೇದಿಕೆಯ ಓದುಗರಿಗೆ ಮುಂದೆ ಇಡುತ್ತಿದ್ದೇವೆ:
”ಯು.ಕೆ. ಕನ್ನಡ ಬಳಗ”
ಸಹಸ್ರಾರು ವರುಷಗಳ ಹಿಂದಿನಿಂದ
ಮೈವೆತ್ತಿ ನಿಂದು ಮೆರೆದ ಭವ್ಯತೆಯ ಮೆರುಗಿನಿಂದ
ಇಂದು ಶತ ಯೋಜನೆಗಳ ದೂರವೂ ಬಾಧ್ಯವಾಗದೆ
ಮಿಂಚಿನ ವೇಗದಲ್ಲಿ ಓಡುವ ಕಾಲವೂ ಬಾಧಿಸದೆ
ನಾಗರೀಕತೆಯ ಅಡಿಪಾಯದ ಮೇಲೇರಿರುವಲ್ಲಿ
ಭವ್ಯ ಸಂಸ್ಕೃತಿಯ ಅರಮನೆಯ ಕಟ್ಟಿರುವಲ್ಲಿ
ನಮ್ಮನ್ನು ನಾವು ಮರೆತು ಮೆರೆಯಲಿಚ್ಛಿಸುವಾಗ
ನಮ್ಮತನದ ಕರೆ ಅಲೆ ಅಲೆಯಾಗಿ ತೇಲಿ ಬಂದಾಗ
ಹೆಪ್ಪುಗಟ್ಟಿದ ಮನಗಳಲ್ಲಿ ಹೊಂಬಿಸಿಲು ಬೀಸಲು
ಕನ್ನಡದ ಹೃದಯ ಕಮಲಗಳು ಅರಳಿರಲು
ಭಾಷೆ, ಭಾಷೆಗಳ ಹಂದರದಲ್ಲಿ ಕೋಟಿ ಕೋಟಿ ಕನ್ನಡಿಗರು ನಲಿದಿರುವಾಗ
ಕಲೆಗಳ ಸುಂದರ ರಂಗವಲ್ಲಿ ಬಿಡಿಸಿ ವಿಶ್ವದೆಲ್ಲೆಡೆ ಪಸರಿರುವಾಗ
ಕಡಲಾಚೆಯ ಯು.ಕೆ.ಯಲ್ಲೂ ನೆಲೆ ಕಂಡು ಮೊಳಕೆಯೊಡೆದಾಗ
ಲಂಡನ್ನಿಗರ ಶುಭ ಹಾರೈಕೆಯಲ್ಲಿ ಹಸನಾಗಿ ಬೆಳೆದು ಮೊಗ್ಗಾದಾಗ
ನಾಡನ್ನೂ ನಾಡವರನ್ನೂ ಸ್ಮರಿಸುತ್ತಾ
ನವ್ಯತೆಯ ಮೆರುಗಲ್ಲಿ ಮರೆಯಾಗುತ್ತರುವ ಸಂಸ್ಕೃತಿಯ ಎತ್ತಿ ತೋರಿಸುತ್ತಾ
ಇಂದು ಸುಂದರ ಮಲ್ಲಿಗೆಯ ಹೂವಾಗಿ ಅರಳಿ ಪರಿಮಳ ನಾಡ ಸೇರುವಾಗ
ಹೃದಯ ತುಂಬಿಬಂದ ತಾಯಿ ಭುವನೇಶ್ವರಿಯು ನಲಿದಿರುವಾಗ
ನಸುನಕ್ಕು “ಜೈ ಕರ್ನಾಟಕ” ಎಂದು ಮಂತ್ರ ಪುಷ್ಪಗಳ ಉದುರಿಸಿದಂತಾಯ್ತು
ಧನ್ಯೆ ನಾನು ಎಂದು ಯು.ಕೆ.ಕನ್ನಡಿಗರ ಹರಸಿದಂತಾಯ್ತು.

ಬ ರಾ ಸುರೇಂದ್ರ (USA)