ಕವಿತೆಯೊಂದು ಬೇಕಿದೆ -ಮುರಳಿ ಹತ್ವಾರ್ ಅವರ ಕವಿತೆ

ಯಾವುದೇ ಸೃಜನಶೀಲ ಕಾರ್ಯವೇ ಆಗಲಿ ಅದು ಶ್ರಾವ್ಯ ಮಾಧ್ಯಮದಲ್ಲೇ ಇರಲಿ, ದೃಶ್ಯ ಅಗಲಿ ಅಥವಾ ಬರಹ/ಸಾಹಿತ್ಯಕಲೆಯೇ ಇರಲಿ ಅದಕ್ಕೆ ಎರಡು ಮೂಲ ಸಾಮಗ್ರಿಗಳು ಮೇಳೈಸಿರಬೇಕು. ಅವೇ ಏಳು ಸ್ವರಗಳು, ಅವೇ ಏಳು ಬಣ್ಣಗಳು, ಅದೇ ಪ್ರಕೃತಿ ಒಂದು ಕಡೆ; ಇನ್ನೊಂದು ಕಡೆ, ಇನ್ನೂ ಮುಖ್ಯವಾಗಿ ಕಲಾಕಾರನ ಕಿವಿ, ಕಣ್ಣು, ಎದೆ / ಮೆದುಳು. ನಾವು ದಿನ ನಿತ್ಯ ನೋಡುವ ಅದೇ ಸೂರ್ಯೋದಯ, ಸೂರ್ಯಾಸ್ತವೇ ಇರಲಿ, ಕೋಗಿಲೆಯ ಇಂಚರವೇ ಇರಲಿ  ಸುತ್ತಲಿನ ಬದುಕಿನ ಏರಿಳಿತಗಳು ಇವು ಆತನ ಅನುಭವ, ಕಲಾಕೌಶಲತೆಗನುಗುಣವಾಗಿ ಉತ್ತಮ, ಅತ್ಯುತ್ತಮ (ಅಥವಾ ವಿಕೃತ ಸಹ!) ರಾಗ, ಚಿತ್ರ, ಕವಿತೆ, ಕಥನ ಕೃತಿಗಳಾಗಿ ಹೊರಬೀಳುತ್ತವೆ. ವಿಮರ್ಶಕ ಬುದ್ಧಿಯ, ಸ್ಪಂದಿಸುವ ಕವಿಮನಸ್ಸು ಬೇಕು ಸುತ್ತಲಿನ ಜನಸಾಮಾನ್ಯರ ಆಗು ಹೋಗುಗಳು, ಅವರ ಜೀವನವನ್ನು ಕಂಡು ಕವಿತೆ ಕಟ್ಟಲು ಎನ್ನುವ ಮುರಳಿ ಹತ್ವಾರರ ಈ ಕವನ ನಿಮ್ಮನ್ನೂ ಸಹ ಯೋಚನೆಗೆ ಹಚ್ಚಿಸುವದರಲ್ಲಿ ಸಂದೇಹವಿಲ್ಲ! ಓದಿ ನಿಮ್ಮ ಪ್ರತಿಕ್ರಿಯೆಯನ್ನು ಬರೆಯಿರಿ ಇಲ್ಲಷ್ಟೇ ಅಲ್ಲ, ’ಅನಿವಾಸಿ’ಯ ಪುಟಗಳಲ್ಲಿ ಸಹ. ನಿಮ್ಮ ಕಮೆಂಟುಗಳನ್ನು ಎದುರುನೋಡುತ್ತೇವೆ. 

(Locum) ಸಂಪಾದಕ 

ಕವಿತೆಯೊಂದು ಬೇಕಿದೆ 
ನೋಡುವ ಕಣ್ಗಳಿಗೆ 
ಕವಿತೆಯೊಂದು ಬೇಕಿದೆ 
ಓದುವ ಮನಗಳಿಗೆ 
 
ಮೋಡದ ಕುರುಹಿಲ್ಲದ ಗಗನ 
ಸಿಡಿಲಾರ್ಭಟದ ಮುಗಿಲ ನರ್ತನ 
ಬೆವರೊರೆಸಿದ ಟವಲಿನ ವಾಸನೆ 
ಕೊಡೆಯಡಿಯ ಕೆಸರಿನ ಶೋಧನೆ 

ರೈಲಿಯ ಕಿಟಕಿಯಲ್ಲಿ ಕಾಣುವ ವಿಮಾನ 
ಮುಗಿಲೊಳಗಿನ ವಿಮಾನ ಯಾನ 
ಭರ್ರನೆ ಓಡುವ  ಸ್ಪೊರ್ಟು ಕಾರು 
ಫುಟ್-ಪಾತಲಿ ಉರುಳುವ ವೀಲುಚೇರು 

ಫುಡ್ ಬ್ಯಾಂಕಿನ ಖಾಲಿ ಶೆಲ್ಪಿನ ಪಟ್ಟಿ 
ತುಂಬಿ ತುಳುಕುವ ಎಂಜಲು ತೊಟ್ಟಿ 
ಪ್ರೈವೇಟ್ ಸ್ಕೂಲಿನ ದುಬಾರಿ ಟೈ 
ಹಸಿದ ಮಕ್ಕಳ ಖಾಲಿ ಕೈ 

ಸಿಗರೇಟು ಹೊಗೆಯಲಿ ತೇಲುವ ಅಮ್ಮ 
ಮಗುವನ್ನು ಆಡಿಸುವ ಐಪ್ಯಾಡಮ್ಮ 
ತರತರದ ಆಲ್ಕೊಹಾಲು ಬಾಟಲು 
ಶವಾಗಾರದ ಐಸ್ ತುಂಬಿದ ಬಟ್ಟಲು 

ಎಲ್ಲವನ್ನೂ ತುಂಬಿ ಪದಗಳ ಕ್ಯಾನ್ವಾಸಿಗೆ 
ಅಕ್ಷರಗಳ ಕುಂಚಕ್ಕೆ ಭಾವಗಳ ಬಣ್ಣ ಹಚ್ಚಿ 
ನೋಡುವ ಕಣ್ಗಳು , ಓದುವ ಮನಗಳು 
ಕಟ್ಟುವ ಚೌಕಟ್ಟಲಿ ನಿಲ್ಲುವವವು ಕವಿತೆಯಾಗಿ

ಮುರಳಿ ಹತ್ವಾರ್