ತಬ್ಬಲಿಯು ನೀನಾದೆ ಮಗನೆ: ಹೀಗೊಂದು ಮೆಲುಕು

TABBALIYU-NEENAADE-MAGANE (1)‘ತಬ್ಬಲಿಯು ನೀನಾದೆ ಮಗನೆ’, ಈ ಸಲ ಬೆಂಗಳೂರಿಗೆ ಹೋದಾಗ ತಂದ ಡಿವಿಡಿಗಳಲ್ಲಿ ಅದೂ ಒಂದು. ನಸೀರುದ್ದೀನ್ ಷಹಾ(ಶಾಸ್ತ್ರಿ)ನ ಪ್ರಬುದ್ಧ ನಟನೆ, ದಟ್ಟವಾದ ಚಿತ್ರಕತೆ, ಸಿನಿಮೀಯತೆಯಿಲ್ಲದ controlled ನಿರ್ದೇಶನ ಮತ್ತು ಸಂಕೀರ್ಣ ಕತೆ – ಮತ್ತೆ ನಮ್ಮನ್ನು ಅಂದಿನ ಕನ್ನಡದ ಸುಂದರ ಚಿತ್ರಗಳ ಕಾಲಕ್ಕೆ ಕರೆದುಕೊಂಡು ಹೋಗುತ್ತವೆ.

ಶಿಕ್ಶ್ಷಿತ-ಪಾಶ್ಚ್ಯಾತ್ಯ-ಆಧುನಿಕ-ಬಂಡವಾಳಶಾಹಿತನ ಮತ್ತು ಅಶಿಕ್ಷಿತ-ಭಾರತೀಯ-ಸನಾತನ-ಸಮಾಜವಾದಗಳ ನಡುವಿನ ಸಂಕೀರ್ಣ ತಿಕ್ಕಾಟವೇ ಕತೆಯ ವಸ್ತು. ಚಿತ್ರ ಗೋವಿನ ಹಾಡಿನಿಂದ ಶುರುವಾಗುತ್ತದೆ ಮತ್ತು ಚಿತ್ರದ undercurrent ಸಂಕೇತವೂ ಆಗುತ್ತದೆ.

ಅಮೇರಿಕದಲ್ಲಿ ಓದಿ, ಅಲ್ಲಿಯವಳನ್ನೇ ಮದುವೆಯಾಗಿ, ತನ್ನ ಹಳ್ಳಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಧೃಡನಿಶ್ಚಯದಿಂದ ಭಾರತಕ್ಕೆ ನಾಯಕ ಮರಳುತ್ತಾನೆ. ತಂದೆ ಸತ್ತಾಗ ತಲೆ ಬೋಳಿಸಿಕೊಳ್ಳುವುದರಿಂದ ಶುರುವಾಗುವ ಈ ಘರ್ಷಣೆ, ನಾಯಕನ ಹೆಂಡತಿ ಹಳ್ಳಿಗೆ ಬರುವುದು, ನಾಯಕನ ತಾಯಿಯ ಮರಣ, ನಾಯಕನ ಹೆಂಡತಿ ಗೋಮಾಂಸ ತಿನ್ನುವುದು – ಈ ದೃಶ್ಯಗಳಲ್ಲಿ ಬಿಚ್ಹಿಕೊಳ್ಳುತ್ತ, ನಾಯಕನ ಮಗುವಿಗೆ ಹಾಲು ಬೇಕಾಗುವ ದೃಶ್ಯದಲ್ಲಿ ಪರಾಕಾಷ್ಟೆ ತಲುಪುತ್ತದೆ.

ಇದೆಲ್ಲದರಿಂದ ಬೇಸತ್ತು, ಹಳ್ಳಿಯನ್ನು ಬಿಟ್ಟು ಮರಳಿ ಅಮೇರಿಕಕ್ಕೆ ಹೋಗುವ ನಿರ್ಧಾರ ಮಾಡುತ್ತಾನೆ ನಾಯಕ. ಅಂತ್ಯದಲ್ಲಿ, ಮರಳಿ ಮಣ್ಣಿಗೆ ಮರಳುವ ನಿಶ್ಚಯದಿಂದ ತನ್ನ ಮಾರಿದ ಗೋವುಗಳನ್ನು ಗುರುತಿಸಲಾಗದೇ ಗೋವಿಗಳ ಹೆಸರುಗಳನ್ನು ಕೂಗುವ ವ್ಯರ್ಥ ಪ್ರಯತ್ನದಲ್ಲಿ ಚಿತ್ರ ಮುಗಿಯುತ್ತದೆ. ಗೋವಿನ ಹಾಡಿನಲ್ಲಿ ಗೊಲ್ಲ ಕೂಗಿದರೆ ಎಲ್ಲ ಹಸುಗಳೂ ಬಂದು ನಿಲ್ಲುತ್ತವೆ, ಇಲ್ಲಿ ನಾಯಕನಿಗೆ ತನ್ನ ಹಸುಗಳು ಯಾವುವು, ಅವುಗಳ ಹಿಸರು ಗೊತ್ತಿಲ್ಲ, ಸುಮ್ಮನೇ ‘ಗಂಗೇ, ತುಂಗೇ…’ ಎಂದು ಕೂಗುತ್ತಾನೆ; ಚಿತ್ರದ ಆರಂಭದ ಗೋವಿನ ಹಾಡು, ಚಿತ್ರದ ಅಂತ್ಯದಲ್ಲಿ ಸಫಲಗೊಳ್ಳುತ್ತದೆ.

ನಾನಿಲ್ಲಿ ಈ ಚಿತ್ರವನ್ನು ಕಾದಂಬರಿಯ ಜೊತೆ ಹೋಲಿಸಿ ನೋಡುವುದಿಲ್ಲ. ಬಹುಷಃ ಚಿತ್ರ ಕಾದಂಬರಿಗಿಂತ ಹೆಚ್ಚು ದಟ್ಟವಾಗಿದೆ, ಸಂಕೀರ್ಣವಾಗಿದೆ. ಚಿತ್ರದ ನಿರ್ದೇಶನ ತುಂಬ ಸಂಯಮದಿಂದ ಪ್ರಬುದ್ಧವಾಗುತ್ತ ಸಾಗುತ್ತದೆ. ಸಂಕಲನ, ಸಂಗೀತ ಅಷ್ಟಕ್ಕಷ್ಟೇ. ಚಿತ್ರದ ನಾಯಕನ ಹೊಸ ಮನೆ ಕೃತಕವಾಗಿ ಕಂಡರೂ, ಭಾರತದ ಹಳ್ಳಿಯಲ್ಲಿ ಪಶ್ಚಿಮದ ಆಧುನಿಕತೆಯನ್ನು ತರಲು ಹೆಣಗುವ ನಾಯಕನ ಮನಸ್ಥಿತಿಯ ಕನ್ನಡಿಯಂತಿದೆ.

ಹಳ್ಳಿಯ ಹೊರಾಂಗಣ ಚಿತ್ರಣದಲ್ಲಿ ಎಲ್ಲೂ ಹಳ್ಳಿಯ ಅಥವಾ ನಿಸರ್ಗದ romantisism ಇಲ್ಲ; ಬದಲಿಗೆ ಹಳ್ಳಿಯ ದಾರಿದ್ರ್ಯ, ಬಿಸಿಲಿನ ಬೇಗೆ ಕಣ್ಣಿಗೆ ರಾಚುತ್ತದೆ. ಚಿತ್ರದ ಮಾತುಗಳು ಚಿತ್ರದ ಶಕ್ತಿ: ಶಾಸ್ತ್ರಿ ಮತ್ತು ನಾಯಕನ ಮಾತುಗಳಲ್ಲೇ ಭಾರತೀಯತೆ-ಪಾಶ್ಚ್ಯಾತತೆ, ಸಂಪ್ರದಾಯ-ನವ್ಯತೆ, ಸಮಾಜವಾದ-ಬಂಡವಾಳಶಾಹಿ, ಸನಾತನತೆ-ಆಧುನಿಕತೆಗಳ ಗೊಂದಲ, ಘರ್ಷಣೆಗಳ ಜೊತೆಜೊತೆಗೆ ಮನುಷ್ಯ ಸಹಜವಾದ ಈರ್ಷೆ, ದ್ವೇಷ, ಸ್ನೇಹ, ಮಾನವೀಯತೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ.

ನಸೀರುದ್ದೀನ್ ಷಹಾ ಶಾಸ್ತ್ರಿಯ ಎಲ್ಲ ಗುಣಗಳನ್ನೂ, ಒಂಚೂರೂ ಸಿನಿಮೀಯತೆಯಿಲ್ಲದೇ ನಟಿಸುತ್ತಾನೆ, ಅಷ್ಟೇ ಚೆನ್ನಾಗಿ ಸುಂದರಕೃಷ್ಣ ಅರಸ್ ಧ್ವನಿ ಕೊಟ್ಟಿದಾನೆ. ಮಾನು ಕೆಲವೊಮ್ಮೆ ಎಡವಿದ್ದಾನೆ; ಸುಂದರರಾಜ್ ಪಾತ್ರ ಸ್ವಲ್ಪ loud ಆಯಿತು; ನಾಯಕನ ತಾಯಿಯ ಪಾತ್ರ ಮೂಕತನದಲ್ಲಿ ಮೂಲ ಕಾದಂಬರಿಯಂತೆ ಇದ್ದರೂ, ಕೃತಕವೆನಿಸುತ್ತದೆ; ನಾಯಕನ ಹೆಂಡತಿಯ ಪಾತ್ರ overall OK, ಆದರೆ ಇನ್ನೂ ಜೀವವಿರಬೇಕಿತ್ತು.ಛಾಯಗ್ರಹಣ ಚಿತ್ರಕ್ಕೆ ತುಂಬ ಪೂರಕವಾಗಿದೆ.

ಚಿತ್ರ ನಾಯಕ ಹಳ್ಳಿಯನ್ನು ಬಿಡುವ ನಿರ್ಧಾರ ಮಾಡುವವರೆಗೂ ವಾಸ್ತವಿಕವಾಗಿದೆ, ಅಲ್ಲಿಂದ ಮುಂದೆ ಕತೆ ಇದ್ದಕ್ಕಿದ್ದಂತೆ ಕೃತಕವಾಗಿತ್ತದೆ; ಆದರ್ಶೀಕರಣದತ್ತ, ಭಾರತೀಯತೆಯ ‘ವಿಜಯ (?)’ದತ್ತ ಸಾಗುತ್ತದೆ. ನನ್ನ ದೃಷ್ಟಿಯಲ್ಲಿ ನಾಯಕ ತಬ್ಬಲಿಯಾಗುವುದು ನಿಜ, ಆದರೆ ಚಿತ್ರದಲ್ಲಿರುವ ಹಾಗಲ್ಲ. ವಾಸ್ತವಿಕವಾಗಿ ನೋಡಿದರೆ ನಾಯಕನ ಸ್ಥಿತಿಯಲ್ಲಿ ಯಾರೂ ಹಳ್ಳಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ನಾಯಕನ ಹೆಂಡತಿಗಂತೂ ಅಸಾಧ್ಯ.

ನನ್ನ ಪ್ರಕಾರ ಚಿತ್ರದ ಅಂತ್ಯ: ಚಿತ್ರ/ ಕಾದಂಬರಿಯಲ್ಲಿ ನಡೆಯುವಂತೆ ನಾಯಕ-ನಾಯಕನ ಹೆಂಡತಿ (ಆಧುನಿಕತೆ-ಪಾಶ್ಚ್ಯಾತ್ಯ-ಶಿಕ್ಷಿತ) ತಮ್ಮ ಮಗುವಿಗಾಗಿ ಗೋವಿನ ಕೆಚ್ಚಲನ್ನು ಹುಡುಕಿಕೊಂಡು ಹೋಗುವುದಿಲ್ಲ (this scene is extremely unnatural unscientific) ಮತ್ತು ಹಳ್ಳಿ (ಸನಾತನ-ಭಾರತೀಯತೆ-ಮೌಢ್ಯ)ಗರ ಮುಂದೆ ಸೋಲನ್ನೂ ಒಪ್ಪಿಕೊಳ್ಳುವುದಿಲ್ಲ. ಆದರೆ ತನ್ನ ಆಸ್ಠಿಯನ್ನೆಲ್ಲ ಮಾರುವ ನಿರ್ಧಾರ ಮಾಡುತ್ತಾನೆ. ನಾಯಕಿಗೆ ದಿನ ಕಳೆದಂತೆ ಇದೆಲ್ಲ ಅಸಹನೀಯವಾಗುತ್ತದೆ. ಆಕೆ ನಾಯಕನನ್ನು ತೊರೆದು (divorce) ಮರಳಿ ಅಮೇರಿಕಕ್ಕೆ ಹೋಗುತ್ತಾಳೆ; ಹಳ್ಳಿಯ ಜನ ಇದು ತಮ್ಮ ವಿಜಯವೆಂದುಕೊಂಡು ನಾಯಕನಿಗೆ ಹಳ್ಳಿಯಲ್ಲಿ ಉಳಿಯಲು ಅಂಗಲಾಚುತ್ತಿರುವಾಗ ನಾಯಕ ಹಳ್ಳಿಯನ್ನು ತೊರೆದು ಹೋಗುವ ದೃಶ್ಯದಲ್ಲಿ ಚಿತ್ರ ಮುಗಿಯುತ್ತದೆ. ನಾಯಕ, ನಾಯಕನ ಹೆಂಡತಿ-ಮಗು ಮತ್ತು ಹಳ್ಳಿ, ಮೂವರೂ ತಬ್ಬಲಿಗಳಾಗುತ್ತಾರೆ. ನೀವೇನೆನ್ನುತೀರಿ?