ಯು ಕೆ ಕನ್ನಡ ಬಳಗದ ತುಂಬ ಹುರ್ರೇ ಹೆನ್ರಿಗಳು? ಅವರಲ್ಲಿ ಐಶ್ವರ್ಯ ಬಂದರೆ? …
ಯುಗಾದಿ ಹಾಸ್ಯಕವನ ಗೋಷ್ಠಿಯಲ್ಲಿ ಇವು ಕೇಳಿ ಬಂದವು.
1) ಮೊದಲು ಹಂಪಾಪುರ ಗಿರಿಧರ ಬರೆದ ಮೂರು ಹನಿಗವನಗಳು
೧. ತಿರುಚಿದ ಗಾದೆ
ಅರ್ಧ ರಾತ್ರಿಯಲ್ಲಿ
ಐಶ್ವರ್ಯ ಬಂದರೆ…
ಐಶ್ವರ್ಯ ಬಂದರೆ…
ಕೊಡೆ ಹಿಡಿಯುವ ಬದಲು
ಒಂದು ಹನಿ ಮುತ್ತು ಕೊಡೆ
ಎಂದನಂತೆ, ಛತ್ರಿ
೨. ಬಾಬ
ಯೋಗ ಕಲಿಯಲು ಹೋದ
ಮಲ್ಲಿಕೆಯ ಶೆರೆ ಹೊತ್ತಾದ
ಮೇಲೆ ಗೊತ್ತಾಯಿತು, ಬಾಬಾ
ಮುಚ್ಚಿದ ಕಣ್ಣೋoದನ್ನು
ಇನ್ನು ಬಿಚ್ಚಲಾಗುತ್ತಿಲ್ಲ
೩. ಪ್ರೇಮ ಪತ್ರ
ನಾನು ಕಾಲೇಜಿನಲ್ಲಿದ್ದಾಗ ಅಗ್ದಿ ಚಲೋ
ಪ್ರೇಮ ಪತ್ರ ಬರೆಯುತ್ತಿದೆ.
ಎಲ್ಲ ಹುಡುಗರದ್ದು ಒಂದೇ ರಿಕ್ವೆಸ್ಟು
ನನಗೊಂದು ಪತ್ರ ಬರೆದು ಕೊಡು ಎಂದು.
ಪ್ರೇಮ ಪತ್ರಗಳಿಗೆ ಎರಡು ಅಂತ್ಯಗಳು
ಒಂದು ಮದುವೆ
ಇನ್ನೊಂದು ಏಟು
ಆದರೆ, ಪರಿಣಾಮ ಒಂದೇ
— ಹಂಪಾಪುರ ಗಿರಿಧರ
2) ಎರಡನೆಯದಾಗಿ ಶ್ರೀವತ್ಸ ದೇಸಾಯಿ ಹೆಸರಿಟ್ಟ ಹೆನ್ರೀಕರಣ!
ಏನ್ರೀ,
ಬೇರೆ ಹೆಸರೇ ತೋಚುವದಿಲ್ಲವೆ?
ರಾಮ-ಕೃಷ್ಣ-ಮೂರ್ತಿ-ರಾಜ
ಶಿವ-ಬಸವ-ಶಂಕರ-ಗೌಡ
ಬಳಗದ ಕೈಪಿಡಿ ಪೂರ್ತಿ
ಈ ಹೆಸರುಗಳದೇ ಭರ್ತಿ!
ಕ.ಬ. ಯುಗಾದಿ ಸಂಭ್ರಮ
ವಿಭಿನ್ನ ಉಡುಪು-ತೊಡುಪುಗಳ ಸಡಗರ
ಹೆಂಡಂದಿರು ತಮ್ಮ ಗಂಡಂದಿರನ್ನು ಕರೆದಾಗ
ಅರ್ಧಂಬರ್ಧ ಕೇಳಿಸಿಕೊಂಡ ಆಂಗ್ಲ ಮಿತ್ರನಿಗೆ ವಿಸ್ಮಯ
ಕೂಡಿದ ಗಂಡುಗಲಿಗಳ ಹೆಸರೆಲ್ಲ Henry ಏಕೆ?
—ಶ್ರೀವತ್ಸ ದೇಸಾಯಿ