ಈ ವೇದಿಕೆಯ ಓದುಗರಿಗೆ ಚಿರಪರಿಚಿತ ಡಾ. ಪ್ರೇಮಲತ ಬಿ. ಅವರ ಹೊಸ ಕವನವಿದು.
ಅನುರಕ್ತ!
ಹಾಡು ಹಕ್ಕಿ ಹಾಡನಾಡಿದಾಗ
ನಿನ್ನ ನೋವಾಗಿ ಕಾಡಿದೆನೇನು?
ಬೀಳು ಬೆಳಕ ಪ್ರಕಾಶದಲಿ ನಿನ್ನ
ಬಳಲಿಸಿದೆನೇನು ಹುಡುಗಾ?
ಸವಿಯೂಟದಲಿ ರುಚಿ ಕಳೆದು
ಬೆಂದಕ್ಕಿಯಲಿ ಕಲ್ಲಾದೆನೇನು ಕಾಡಿ?
ಅಸ್ಪಶ್ಟ ಕಲ್ಪನೆಯಲಿ ಬೆವರಾಗಿ
ಮುಟ್ಟಿದರೆ, ಹೊಗೆಯಾದೆನೇನು ಹುಡುಗಾ?
ಮಂದೆಯಲಿ ನೀ ಮೈಮರೆತು
ದಿಗಂತದಲಿ ದೃಷ್ಟಿಯಿಟ್ಟು ಕಳೆದು
ಮಾತ ಮರೆಸಿ ,ಮಂಕನನ್ನಾಗಿಸಿ
ಪಿಸುನುಡಿಯಾದೆನೇನು ಹುಡುಗಾ?
ನವಿರು, ನವಿರಾದ ಭಾವಗಳಲಿ
ಅರ್ಥ ಕಳೆದು, ಹುಡುಕಾಡಿ, ಹೃದಯದ
ಹಂದರವ ಮೀಟಿ, ನಾದತರಂಗವ
ನುಡಿಸಿ,ನಿನ್ನ ಕಳೆದೆನೇನು ಹುಡುಗಾ?
ನಿನ್ನ ನೆಮ್ಮದಿಯ ಬದುಕ ಕೆಡಿಸಿ
ಮೈ ಹಿಂಡಿ ತೆಗೆದು, ತೊಡೆಯಲಾಗದ
ತಲೆನೋವಾದೆನೇನು ಗೆಳೆಯಾ?
ಪ್ರೇಮಲತ ಬಿ.