ಕೊಡಲೇನು ನಿನ್ನ ಹೆಸರು?–ಡಾ. ಪ್ರೇಮಲತ ಬಿ

ಪೀಠಿಕೆ:
ಪ್ರಯಾಣದಲ್ಲಿ ಅನೇಕ ಬಾರಿ ನಾವು ಸೇರುವ ಊರಿಗಿನ್ನ, ಸಾಗಿ ಹೋಗುವ ದಾರಿಯೇ ನಮ್ಮ ಮನಸ್ಸನ್ನು ಸೆಳೆಯುತ್ತದೆ, ಎಷ್ಟೋ ಸಾರಿ ಮನಸ್ಸಿನಲ್ಲೇ ಅಚ್ಚಳಿಯದೆ ಉಳಿದಿಬಿಡುತ್ತದೆ.
ಪ್ರೀತಿಯೂ ಹಾಗೆಯೇ, ಅದರ ಗುರಿಯನ್ನು ತಲುಪುವುದಕ್ಕಿಂತ ಅದರ ನವಿರಾದ ಭಾವವೇ ಹೆಚ್ಚು ಮುದ ಕೊಡುತ್ತದೆ, ನೆನಪುಗಳೇ ಕಚಗುಳಿಯಿಡುತ್ತವೆ.
ನವಿರಾದ ಭಾವ, ನಾವಿಲಾದ ಮನ, ಮಲ್ಲಿಗೆಯ ದಳಗಳಲ್ಲಿ ಇಳಿದ ಪ್ರೀತಿ, ಇಂತಹ ಅನುಭವ ಕೊಡುವ ಸೊಗಸಾದ ಕವನ ‘ಕೊಡಲೇನು ನಿನ್ನ ಹೆಸರು?’ ನೀವೂ ಓದಿ ಆಸ್ವಾದಿಸಿ.

 

ಥೇಟು ನವಿಲುಗರಿಯ ಹಾಗೆ
ಮನಸಿನ ಪುಟಗಳ ನಡುವೆ
ಬೆಚ್ಚಗೆ ಅಡಗಿ ಮರಿಯಿಟ್ಟು
ನೆನೆದು ನೇವರಿಸಿದಾಗೆಲ್ಲ
ಮುದ ಕೊಡುವ ನವಿರು, ನವಿರು!

ಎದುರಿಲ್ಲದೆ, ಇಡಿಯಾಗಿ ಸಿಗದೆ
ಕಲ್ಪನೆಗಳ ಚಿಗುರು ಕುಡಿಗಳಲಿ
ನಳನಳಿಸಿ ಬಳುಕಿ ಬಾಗಿ
ಕೆನ್ನೆಯಲಿ ಕಚಗುಳಿಯಾಗಿ
ಬೆಚ್ಚಗೆ ಹರಿವ ಉಸಿರು!

ಮುದ ಕೊಡುವ ನವಿರು, ನವಿರು!

ಹೂಬನದ ಸೊಬಗಲ್ಲಿ
ಮಲ್ಲಿಗೆಯ ಅರಳಲ್ಲಿ
ದಳಗಳ ಸುತ್ತುಗಳಲಿ
ಹಾಸಿ ಮಲಗಿದ ಕಂಪಾಗಿ
ಮೈಮನಗಳ ಆಹ್ವಾನಿಸಿ
ಕರೆವ ಕಂಪಿಗೆ ಯಾರ ಮೆರುಗು?

ಮುದ ಕೊಡುವ ನವಿರು, ನವಿರು!

ಕಲ್ಪನೆಯೋ, ಕಾವ್ಯವೋ
ಅರೆಗಳಿಗೆ ಮತ್ತಿನ ಮರುಳಾಗಿ
ಹಗುರಾಗಿ, ಬೆರಗಾಗಿ
ನಿನ್ನೆಡೆಗೆ ತುಡಿವ ತಂತಿನಲಿ
ನನ್ನ ಕಳಕೊಳ್ಳುವ ಪರಿಗೆ
ಕೊಡಲೇನು ನಿನ್ನ ಹೆಸರು?

ಮುದ ಕೊಡುವ ನವಿರು, ನವಿರು!

 

                                                                                               –ಡಾ. ಪ್ರೇಮಲತ ಬಿ

( the same poem has been published in Connect kannada  blog. to see please click on the link below.

http://connectkannada.com/2017/11/16/poem-by-premalatha-2/)