ನಮ್ಮ ತಾಯಿ ಮನೆ

ಅನಿವಾಸಿ ಜಾಲ ಜಗುಲಿಯಲ್ಲಿ ಹಿಂದೆ ಹಲವಾರು ಹಾಸ್ಯ ಮತ್ತು ಲಘು ಬರಹಗಳನ್ನು ಕೊಟ್ಟು ನಮ್ಮನ್ನು ಮನೋರಂಜಿಸಿದ ಡಾ. ವತ್ಸಲಾ ರಾಮಮೂರ್ತಿ ಅವರು ಈಗ ಒಂದು ಆತ್ಮೀಯ ಹೃದಯಸ್ಪರ್ಶಿ ಕವನವನ್ನು ನೀಡಿದ್ದಾರೆ. ಹೊಸತು ಹಳೆಯದನ್ನು ಕಬಳಿಸಿದಾಗ ಅಲ್ಲಿ ಉಂಟಾಗುವ ಸಂಘರ್ಷ ಮತ್ತು ಯಾತನೆ ಈ ಕವನದಲ್ಲಿ ಅಡಗಿದೆ. ಹಳೆ ಸವಿನೆನಪುಗಳು ಕೆರಳಿ ಈ ಆತ್ಮೀಯ ಕವನ ರೂಪುಗೊಂಡಿರಬಹುದು. ಕವನದ ಹಿನ್ನೆಲೆಯನ್ನು ಮತ್ತು ಹಳೆ ನೆನಪುಗಳನ್ನು ಕವಿಯಿತ್ರಿಯಿಂದಲೇ ಕೇಳೋಣ ಬನ್ನಿ

 

ನಮ್ಮ ತಾಯಿ ಮನೆ

ಡಾ. ವತ್ಸಲಾ ರಾಮಮೂರ್ತಿ

ಒಂದು ದಿನ ಸಂಜೆ ವಾತಾವರಣ ತುಂಬ ಚೆನ್ನಾಗಿ ಇತ್ತು. ಹಿತಕರವಾದ ಗಾಳಿ ಲ್ಯಾವೆಂಡರ್ ಸುವಾಸನೆಯನ್ನು ಹೊತ್ತುತರುತಿತ್ತು. ಆಕಾಶದಲ್ಲಿ ಸೂರ್ಯ ಮುಳುಗುತ್ತಿದ್ದ . ಕೆಂಪು ಹಳದಿ ಹಸಿರು ಬಣ್ಣದ ಓಕುಳಿ ಆಡುತ್ತಿದ್ದ
ಚಂದಾಮಾಮ ಬೆಳ್ಳಿ ತಟ್ಟೆಯಂತೆ ಹೊಳೆಯುತ್ತ ಮೇಲೇರುತ್ತಿದ್ದ. ಒಂದು ಕಡೆ ಸೂರ್ಯ ಮುಳುಗುತ್ತಿದ್ದ ಮಾತ್ತೊಂದು ಕಡೆ ಚಂದ್ರ ಮೇಲೇರುತ್ತಿದ್ದ .ಸುತ್ತಲೂ ಬೆಟ್ಟಗಳ ಸಾಲು , ಅದರಮೇಲೆ ತೇಲಾಡುವ ಬಿಳಿ ಕಪ್ಪು ಮೋಡಗಳು ನಾನಾ ತರಹದ ಆಕಾರಗಳ ವೇಷ ತೊಟ್ಟ ವನಿತೆಯರಂತೆ ಮೆರದಾಡುತ್ತಿದ್ದವು. ನಕ್ಷತ್ರಗಳು ಮಿನುಗು ದೀಪದಂತೆ ಬಾನಿನಲ್ಲಿ ಹೊಳೆಯುತ್ತಿತ್ತು. ಪಕ್ಷಿಗಳು ಚಿಲಿ ಪಿಲಿ ಗುಟ್ಟುತ್ತಾ ಮರಿಗಳನ್ನು ಗೂಡಿಗೆ ಕರೆಯುತ್ತಿದ್ದವು. ಸುಂದರವಾದ ಪರಿಸರವನ್ನು ಆಸ್ವಾದಿಸುತ್ತ ಕುಳಿತ್ತಿದ್ದೆ. ಎಲ್ಲಿಂದಲೋ ನನ್ನ ಮೊಮ್ಮಕ್ಕಳಾದ ಅನೀಕ , ಅನ್ಯ ಓಡಿ ಬಂದರು. ಅಜ್ಜಿ!ಅಜ್ಜಿ! ನೀನು ಹುಡುಗಿಯಾಗಿದ್ದಾಗ ನಿನ್ನ ಮನೆ ಹೇಗಿತ್ತು? ಏನೇನು ನಡಿಯುತ್ತಿತ್ತು ಅಂತ ಕೇಳಿದರು. ನಾನು ಅಯ್ಯೋ ಮಕ್ಕಳೇ ಈ ಅನಿವಾಸಿಗೆ ೪೫ ವರುಷಗಳ ಹಿಂದೆ ನಡೆದದ್ದೆಲ್ಲಾ ಮರೆತುಹೋಗಿದೆ ಹೋಗ್ರೆ ! ಹೋಗ್ರೆ ! ಅಜ್ಜಿನ ಕಾಡಬೇಡಿ ಅಂದೆ. ಅವರು ಹಾಗೆ ಅಂದ ಮಾತ್ರಕ್ಕೆ ಬಿಡುತ್ತಾರೆಯೇ ?
ನೆನೆಪಿನ ಸುರಳಿ ಬಿಚ್ಚಿತ್ತು. ಅದೇ ಈ ಪದ್ಯ

 

ಫೋಟೊ  ಕೃಪೆ ಗೂಗಲ್

 

 

 

ನಮ್ಮ ತಾಯಿ ಮನೆ

ಬದಲಾಗಿದೆ ನನ್ನ ತಾಯಿಮನೆ, ಗಂಟೆನಾದ ಕೇಳುತ್ತಿಲ್ಲ
ದೇವರ ಮನೆಯಲ್ಲಿ ಮುಂಜಾನೆಯ ವೇದ ಮಂತ್ರ ಘೋಷವಿಲ್ಲಾ
ಬೆಳಗು ಸಂಜೆಯ ಹಕ್ಕಿಗಳಿಂಚರವಿಲ್ಲ
ಕೇಳುತಿದೆ ಕರ್ಕಶ ಸಿನಿಮಾ ಹಾಡು ಟಿ.ವಿ. ಯಲ್ಲೆಲ್ಲಾ

ಬಾವಿ ಕಟ್ಟೆ ಹಗ್ಗ ಕೊಡಗಳಿದ್ದ ಹಿತ್ತಲು
ಈಗ ಸಿಟ್ ಔಟು
ಹಳೆಮನೆಗಳ ಕೆಡವಿ ಕಟ್ಟಿದ್ದಾರೆ
ಸುತ್ತ ಹೊಸ ಲೇ ಔಟು !

ಕಡಪಕಲ್ಲಿನ ಹರಟೆ ಕಟ್ಟೆ ಈಗಿಲ್ಲ
ಅಟ್ಟದಲ್ಲಿ ಇಲಿಮರಿಗಳ ಸದ್ದಿಲ್ಲ
ಅಕ್ಕಿ ಭತ್ತ ಕಾಳುಗಳ ನೆಲಮಾಳಿಗೆ ಇಲ್ಲ .
ಕಟ್ಟಿಗೆ ಒಲೆಯಲ್ಲಿ ಹೋರಾಡುವ ಅಮ್ಮನಿಲ್ಲ.

ಈಗ ಬಂದಿದೆ;
ದೊಡ್ಡ ದೊಡ್ಡ ಹೊಳೆಯುವ ಊಟದ ಟೇಬಲುಗಳು
ಚಿತ್ರ ವಿಚಿತ್ರ ಪಿಂಗಾಣಿ ತಟ್ಟೆ ಲೋಟಗಳು
ಮಾಯಾವಾಗಿದೆ ನಮ್ಮೂರ ಸಂತೆ ಚಾಪೆಗಳು
ತುಂಬಿವೆ, ಬುಟ್ಟಿ ತುಂಬ ಕೀವಿ ಚೆರ್ರಿ ಹಣ್ಣುಗಳು

ಉಪಹಾರಕ್ಕೆ ರಾಗಿರೊಟ್ಟಿ ಈರುಳ್ಳಿ ಚಟ್ನಿ ಗಳಿಲ್ಲ
ಮಕ್ಕಳಿವೆ ಕೈತುತ್ತು ನೀಡುವವರು ಯಾರೂ ಇಲ್ಲ
ಶ್ವಾನಗಳೇ ನಮ್ಮ ಪ್ರೀತಿಯ ಕುಸುಗಳಾಗಿವೆಯಲ್ಲ
ಉಳಿದಿರುವುದು ಬರಿ ನೆನಪುಗಳೇ ಎಲ್ಲಾ