ಅನಿವಾಸಿ ಮಿತ್ರರಿಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು. ಹಬ್ಬ ಹರಿದಿನಗಳಲ್ಲಿ, ನಮ್ಮ ಬಾಲ್ಯದ, ನಾವು ಬೆಳೆದುಬಂದ ಜಾಗದ ನೆನಪಾಗುವುದು ಸಹಜ. ಮನೆ, ಜನ ನೆನೆಸಿಕೊಂಡು ಮನಸ್ಸು ಚಿಕ್ಕದಾಗುವುದೂ ಸಹಜವೇ. ಆದರೆ ವರ್ಷಗಳು ಉರುಳಿ ಕಾಲ ಬದಲಾದಂತೆಲ್ಲ, ಎಲ್ಲಿದ್ದರೂ ಬದಲಾವಣೆಗೆ ಹೊಂದದ ಹೊರತು, ಪರ್ಯಾಯವಿಲ್ಲ. ಹಳೆತನ್ನು ಮರೆತು, ಪ್ರಸ್ತುತ ಬದುಕನ್ನ ಅರಿತು, ಬಾಳಿದರೆ ಸಂತಸ ತನ್ನದಾಗುವ ಸಾಧ್ಯತೆ ಹೆಚ್ಚು. ಇದು ಸುಲಭದ ಕಾರ್ಯವೇನಲ್ಲ. ಪ್ರಾಯೋಗಿಕ ನಡುವಳಿಕೆ ಇದ್ದವರಿಗೆ ಬದಲಾವಣೆ, ಭಾವುಕರಿಗಿಂತ ಲೇಸು ಎನ್ನಬಹುದು. ಆಂಗ್ಲನಾಡಿನ ನನ್ನ ಅನುಭವದ ದೀಪಾವಳಿ ನಿಮ್ಮೊಂದಿಗೆ ಹಂಚಿಕೊಳ್ಳುವೆ.
ದೀಪಾವಳಿ ಹೋಗಿ ದೀವಾಲಿ ಆದದ್ದು ….
ವಲಸೆಗಾರರ ಹಬ್ಬ 'festival of lights' ಆಂತಾಗಿ, ಏಕೈಕ ಗುರುತಿನ, ಆನ್ಲೈನ್ ಹೆಸರಿನ ದೀವಾಲಿಯಾಗಿ. Gunpowder, treason and plotನ ದಿನಕ್ಕೂ ಹತ್ತಿರವಾಗಿ, ನಮ್ಮ ಪಟಾಕಿಯೋ, ಆಂಗ್ಲರ ಧಮಾಕಿಯೋ ಗೊಂದಲವಾಗಿ ಜೆಲೀಬಿ, ಲಡ್ಡು, ಕಜ್ಜಾಯಗಳ ಜೊತೆ ಚಾಕಲೇಟ್ ಸೇರಿ, ಚಕ್ಕಲಿ, ಕೋಡುಬಳೆ ಜೊತೆ crisp ನ ಗರಿಗರಿ. ಪಿಜ್ಜಾ ,ಬರ್ಗರ್ ಗಳಿಗೂ ಇಂದು ಆಹ್ವಾನ ಇದೇರಿ ದೀವಾಲಿ ದಿನಾಂಕ ಯಾವತ್ತಿರಲಿ, 'ಆ ವೀಕೆಂಡ್ನ' ಹಬ್ಬ ನಮ್ಮ ಪರಿ. ಕುಟುಂಬದ ಜೊತೆ, ಆನ್ಲೈನ್ನಲ್ಲಿ ಬೆರೆತು, ಮಾತಾಡಿ, ಹತ್ತಿರದ, ವಿಸ್ತೃತ ಕುಟುಂಬದವರೆಲ್ಲರ ಓಡಗೂಡಿ, ಎಲ್ಲರ ಮನೆಗಳ ಉತ್ತಮ ಭಕ್ಷ್ಯಗಳ ರುಚಿ ನೋಡಿ ಸುರ್ ಸುರ್ ಬತ್ತಿ , ಹೂವಿನ ಕುಂಡಗಳ ಆಟವಾಡಿ. ಅನಿವಾಸಿಯಾದರೇನು ಹಬ್ಬ ನಿವಾಸಿಯಲ್ಲವೇನು? ಎಲ್ಲಿದ್ದರೇನು ದೀಪಾವಳಿ ನಮ್ಮೊಂದಿಗೆ ಬಾರದೇನು? ಹಿತೈಷಿ, ಸ್ನೇಹಿತರ ಬಾಂಧ್ಯವ್ಯ, ಸಂಬಂಧಗಳ ವೈಶಿಷ್ಠ್ಯ ಅನಿವಾಸಿ, ನಿನ್ನ ಈ ದೀವಾಳಿ ಹೊಸ ಕೊಡುಗೆ, ಹೊಸಬಗೆಯ ಅದೃಷ್ಟ. - ಡಾ. ದಾಕ್ಷಾಯಿಣಿ ಗೌಡ
******************************************