‘ಅನಿವಾಸಿ’ಯಲ್ಲಿ ಅಕ್ಷರ ದೀಪಾವಳಿ!

ಹೂವು ಬಳ್ಳಿಗೆ ದೀಪ ;
ಹಸಿರು ಬಯಲಿಗೆ ದೀಪ ;
ಮುನಿಸು ಒಲವಿಗೆ ದೀಪ ;
ಕರುಣೆ ನಂದಾದೀಪ ಲೋಕದಲ್ಲಿ.

ಕತ್ತಲೆಯ ಪುಟಗಳಲಿ ;
ಬೆಳಕಿನ ಅಕ್ಷರಗಳಲಿ
ದೀಪಗಳ ಸಂದೇಶ ಥಳಥಳಿಸಲಿ !
- ಕೆ ಎಸ್ ನರಸಿಂಹಸ್ವಾಮಿ 

ಆತ್ಮೀಯ ಓದುಗರೇ, 
ದೀಪಾವಳಿ ಸಂಚಿಕೆ ಓದಿಗೆ ನಿಮಗೆ ಸ್ವಾಗತ, ಈ ಬಾರಿ ನಿಜಕ್ಕೂ ಅನಿವಾಸಿಯಲ್ಲಿ ಅಕ್ಷರ ದೀಪಾವಳಿ! 
ಡಾ ಜಿ ಎಸ್ ಶಿವಪ್ರಸಾದ್ ಅವರ - ''ಕಾರ್ತೀಕದ ಕತ್ತಲೆಯಲ್ಲಿ ''ಎಂಬ ಸಮಯೋಚಿತ ಕವನ. 
ಡಾ ಮುರಳಿ ಹತ್ವಾರ್ ಅವರ - ದೀಪಾವಳಿಯ ಆಶಯ ಹೊಮ್ಮಿಸುವ ಸುಂದರ ಕವನ. 
ಯೋಗೀಂದ್ರ ಮರವಂತೆ ಅವರ ಅನನ್ಯ ಶೈಲಿಯ ಬರಹ - ''ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು''
'ಅನಿವಾಸಿ' ಗೆ ಮೊದಲ ಬಾರಿಗೆ ಬರೆಯುತ್ತಿರುವ ಮಂಜುನಾಥ ಶ್ರೀನಿವಾಸಮೂರ್ತಿ ಮತ್ತು ಶಶಿಕಾಂತ್ ಅವರು ದೀಪಾವಳಿ ಹಬ್ಬದ ನೆನಪುಗಳನ್ನ ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
'ಅನಿವಾಸಿ'ಯ ಅಕ್ಷರ ಕಣಜ ಅಕ್ಷಯವಾಗಲಿ ಎಂಬ ಆಶಯದೊಂದಿಗೆ,ತಮ್ಮೆಲ್ಲರಿಗೂ ಮತ್ತೊಮ್ಮೆ ದೀಪಾವಳಿ ಹಬ್ಬದ ಶುಭಾಶಯಗಳು. 

- ಸಂಪಾದಕಿ    

ಕಾರ್ತೀಕದ ಕತ್ತಲೆಯಲ್ಲಿ – ಡಾ ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್, ಯು.ಕೆ

ಕಾರ್ತೀಕದ ಕತ್ತಲೆಯಲ್ಲಿ, ಮನೆ ಮನೆಗಳಲ್ಲಿ 
ದೀಪಗಳಿಂದ ದೀಪಗಳು ಬೆಳಗುವಲ್ಲಿ 
ಕವಿದ ಕತ್ತಲೆಯು ಕಳೆಯುವಲ್ಲಿ 
ಬೆಳಕಿನ ಹಬ್ಬ ದೀಪಾವಳಿ

ಢಮ್ ಎಂದು ಸಿಡಿದ ಅಬ್ಬರದ ಪಟಾಕಿಗಳು ಹಲವು
ಸಿಡಿಯಲಾರದೆ ತುಸ್ಸ್ ಎಂದ ಪಟಾಕಿಗಳು ಕೆಲವು
ನೀರಿಕ್ಷೆಯ ಪರೀಕ್ಷೆಗೆ ನಿಲುಕದ ವಿಫಲ ಯತ್ನಗಳು 
ಎಲ್ಲರನ್ನೂ ರಂಜಿಸಿ ಕೊನೆಗೆ ತಾವೇ ಬೂದಿಯಾದ ಧ್ವನಿಗಳು

ಜ್ವಾಲಾಮುಖಿಯಂತೆ ಬೆಂಕಿ ಉಗುಳುವ 
ಬಣ್ಣ ಬಣ್ಣದ ಕುಡಿಕೆಗಳು, ಅವಕಾಶ ಒದಗಿದಾಗ
ತಮ್ಮೊಡಲೊಳಗಿನ ಕಿಚ್ಚನ್ನು ಕಾರಿ  
ಹಗುರಾದ ಹೃದಯಗಳು 

ಗಿರವಿ ಅಂಗಡಿಯಲ್ಲಿ, ಪಾಲೀಷ್ ಪಡೆದು 
ಥಳ ಥಳಿಸುತ್ತಿರುವ ಬೆಳ್ಳಿ ದೀಪಗಳು 
ಲಕ್ಷ್ಮಿ ಪಟಕ್ಕೆ  ಹೂವಿನಲಂಕಾರಗಳು,
ಧೂಪ, ದೀಪ, ಮಂಗಳಾರತಿಗಳು 

ಅದರ ಕೆಳಗಿಟ್ಟ ವರ್ಷದ ಲೆಕ್ಕ ಪುಸ್ತಕದಲ್ಲಿ, 
ಚುಕ್ತವಾಗದೆ ಉಳಿದ ಹಳೆ ಸಾಲಗಳು 
ಏರುತ್ತಿರುವ ಬಡ್ಡಿ, ಚಕ್ರ ಬಡ್ಡಿಗಳು 
ಅದರ ಹಿಂದಿನ ಕಂಬನಿಗಳು, ಕಥೆಗಳು, ವ್ಯಥೆಗಳು 

ನಮ್ಮ ನಿಮ್ಮ ಮನೆಗಳಲ್ಲಿ 
ಬಣ್ಣ ಬಣ್ಣದ ರಂಗೋಲೆ ಚಿತ್ತಾರಗಳು 
ಶಿವಕಾಶಿ ಪಟಾಕಿ ಉದ್ದಿಮೆಯಲ್ಲಿ ಬತ್ತಿ ಹೊಸೆದ 
ಬಾಲಕರು ಕೈತೊಳೆದರೂ ಅಳಿಸಲಾಗದ 
ಕಪ್ಪು ಮಸಿಗಳು, ನನಸಾಗದ ಕನಸುಗಳು 

ದೇಶದ ಗಡಿ ಕಾಯುವ ಯೋಧರಿಗೆ 
ಆಗೊಮ್ಮೆ ಈಗೊಮ್ಮೆ ಸಿಡಿ ಮದ್ದುಗಳ ಮಧ್ಯೆ 
ಹಿಂದಿನ ದೀಪಾವಳಿಯ ನೆನಪುಗಳು, ನಿಟ್ಟುಸಿರುಗಳು  
ದೇಶದ ಬೆಳಕನ್ನೇ ಕಾಪಾಡುವ ಜವಾಬ್ದಾರಿಗಳು  

ಹಠಾತ್ತಾಗಿ ಬೀಸಿದ ಗಾಳಿಯಲ್ಲಿ,
ಅನಿರೀಕ್ಷಿತವಾಗಿ ಹೊಯ್ದ ಮಳೆಯಲ್ಲಿ, 
ಸೊಡರ ಕುಡಿಗಳು ಅತ್ತ ಇತ್ತ ಬಾಗಿ ದೀಪವಾರಿದಾಗ; 
ತಣ್ಣಗೆ ಮಲಗಿದವು ಹಣತೆಗಳು, 
ಮುಂದಿನ ದೀಪಾವಳಿಯ ನಿರೀಕ್ಷೆಯಲ್ಲಿ 

***************************************************************************************

ದೀಪಾವಳಿ ೨೦೨೧ – ಡಾ ಮುರಳಿ ಹತ್ವಾರ್

ಸಹಜನರ ಸುಕೃತಿಯ
ಗೆಳೆತನದ ಹಿರಿಸಿರಿಯ
ಹಣತೆಗಳ ಕಾಂತಿಯಲಿ
ಸವಿಸವಿಯ ಈ ಮನೆಯ 
ಮತ್ತೆ ಒಂದಾಗಿಸೋಣ!

ಸಹಮತಿಯ ಸಮ್ಮತಿಯ
ಚಿಗುರಿಸುವ ಬೇರುಗಳ
ಹಸಿರುಸಿರ ಶಾಂತಿಯಲಿ
ಸವಿಸವಿಯ ಈ ಧರೆಯ 
ಮತ್ತೆ ಸೊಂಪಾಗಿಸೋಣ!

ಸಮರಸದ ಸಂಪ್ರತಿಯ
ಸಿರಿತನದ ಬೆಳಕುಗಳ
ಹೊಸತನದ ಕ್ರಾಂತಿಯಲಿ
ಸವಿಸವಿಯ ಈ ಭುವಿಯ 
ಮತ್ತೆ ತಂಪಾಗಿಸೋಣ!

ದೀಪಾವಳಿ ಶುಭಾಶಯ.

ದೀಪಾವಳಿ ಆಶಯ: ಮುರಳಿ ಹತ್ವಾರರ ರಚನೆಗೆ ರಾಗ-ಧ್ವನಿ ಕೂಡಿಸಿರುವವರು ಅಮಿತಾ ರವಿಕಿರಣ.

***************************************************************************************

ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು – ಯೋಗೀಂದ್ರ ಮರವಂತೆ 

ಬ್ರಿಟನ್ನಿನ ಸದ್ಯದ ಪ್ರಾಕೃತಿಕ ಗುಂಗನ್ನು “ಬೋಳು, ವಣ, ಚಳಿ, ಖಾಲಿ, ಮೌನ” ಇತ್ಯಾದಿ ಶಬ್ದಗಳಿಂದ ವರ್ಣಿಸುತ್ತ ಬೇಸರ ಪಡುವ ಹೊತ್ತಲ್ಲಿ ಐದು ಸಾವಿರ ಮೈಲಿ ದೂರದ ನನ್ನೂರು ಮರವಂತೆಯ ಗದ್ದೆ ಬಯಲುಗಳು ಭತ್ತದ ಗಿಡಗಳಿಂದ ತುಂಬಿಸಿಕೊಂಡು ಗರ್ಭವತಿಯ ಕಳೆಯಲ್ಲಿ ಕುಳಿತಿರುತ್ತವೆ. ಮಾಗಿ ಚಿನ್ನದ ಬಣ್ಣಕ್ಕೆ ಬದಲಾದ ಭತ್ತದ ಗಿಡಗಳು ತೆನೆ ಹೊತ್ತು ಸಣ್ಣ ನಾಚಿಕೆಗೆ ಮತ್ತು ಸ್ವಲ್ಪ ಭಾರಕ್ಕೆ ತಲೆ ತಗ್ಗಿಸಿ, ಆಗಾಗ ಬೀಸುವ ಗಾಳಿಗೆ ಮಂದಹಾಸ ಬೀರುತ್ತಿರುತ್ತವೆ.  ಅಕಾಲದ  ಮಳೆಗೆ ತೊಯ್ದರೂ, ಗುಡುಗು ಸಿಡಿಲುಗಳ ಸದ್ದು ಬೆಳಕುಗಳಿಗೆ ಒಮ್ಮೆ ನಡುಗಿದರೂ ಮತ್ತೆ ಸಾವರಿಸಿಕೊಂಡು ಮಣ್ಣಿನ ಮಕ್ಕಳಲ್ಲಿ ಆಸೆಯನ್ನು ಹುಟ್ಟಿಸಿ ಆತಂಕ ನಿರೀಕ್ಷೆಗಳನ್ನು ಜೀವಂತವಾಗಿ ಇಟ್ಟಿರುತ್ತದೆ. ದಿನದ ಹೆಚ್ಚಿನ ಸಮಯವನ್ನು ಬ್ರಿಟನ್ ಕತ್ತಲೆಯನ್ನು ಧರಿಸಿ ಕಳೆಯುವ ಈ ಕಾಲದಲ್ಲಿ, ಭಾರತ ಬೆಳಕಿನ ಹಬ್ಬಕ್ಕೆ ಮತ್ತೆ ಸಜ್ಜಾಗುತ್ತಿರುವ ವೇಳೆಯಲ್ಲಿ, ಹೀಗೆಲ್ಲ ಹಗಲು ರಾತ್ರಿ ಎನ್ನದೆ ಕಾಡಿ ಸತಾಯಿಸುವ ಮರವಂತೆಯನ್ನು ಒಮ್ಮೆ ನೋಡಿ ಬರೋಣ ಎಂದು ಹೊರಟವನು ನಾನು. ನಾನು ವಾಸಿಸುವ ಬ್ರಿಸ್ಟಲ್ ನಿಂದ ಪ್ಯಾರಿಸ್ ಮುಖಾಂತರ ನದಿ ಸಾಗರ ಕಾಡು ಮರುಭೂಮಿ  ಪರ್ವತ ಕಂದರಗಳನ್ನು ಏರಿ ಹಾರಿ ಬೆಂಗಳೂರನ್ನು ತಲುಪುವ ವಿಮಾನವೊಂದರಲ್ಲಿ  ಟಿಕೇಟು ತೆಗೆಸಿಯಾಗಿದೆ. ಇದು ದೀಪಾವಳಿಯ ಆಸುಪಾಸಿನ ಸಮಯವಾದ್ದರಿಂದ “ಹಬ್ಬದ ಸೀಸನ್” ನ ಉತ್ಸಾಹ ಉನ್ಮಾದ, ಕರ್ನಾಟಕದ ನಗರಗಳಿಂದ ದಿಕ್ಕು ದೆಸೆಗಳಲ್ಲಿರುವ ಹಳ್ಳಿ ಊರುಗಳಿಗೆ ಓಡಾಡುವ ಬಸ್ಸುಗಳಷ್ಟೇ ವಿಮಾನಕ್ಕೂ ಅನ್ವಯಿಸುತ್ತದೇನೋ. ಕಿಕ್ಕಿರಿದು ತುಂಬಿದ ವಿಮಾನದಲ್ಲಿ ಮುಂದಲ್ಲದ, ಕಿಟಕಿಯ ಬದಿಗಲ್ಲದ ಕೊನೆಯ ಸಾಲಿನ ಸೀಟು ನನ್ನದಾಗಿದೆ. ಮತ್ತೆ ಕೊನೆಯ ಸೀಟುಗಳ ಅನುಭವ ಬಸ್ಸುಗಳಷ್ಟೇ ವಿಮಾನಗಳಲ್ಲಿ ಕೂಡ ಮಧುರ ಮತ್ತು ಭಯಂಕರ ಎನ್ನುವುದು ಈಗ ಗೊತ್ತಾಗಿದೆ. ವಾತಾವರಣದ ಪ್ರಕ್ಷುಬ್ದತೆ, ಗಾಳಿಯ ವೇಗ, ಒತ್ತಡಗಳ ಬದಲಾವಣೆಗೆ ವಿಮಾನದ ಬಾಲದ ಕಡೆಗಿರುವ ಸೀಟುಗಳು ಹೆಚ್ಚು ಸ್ಪಂದಿಸುತ್ತವೆ ಎನ್ನುವ ಪುಸ್ತಕದ ಸಿದ್ಧಾಂತಗಳೆಲ್ಲ ಇದೀಗ ಪ್ರಾಯೋಗಿಕವಾಗಿ ಮನದಟ್ಟಾಗಿವೆ. ಇಲ್ಲಿಂದ ಪ್ಯಾರಿಸ್ ಇಂದ ಬೆಂಗಳೂರಿನವರೆಗಿನ ಒಂಭತ್ತು ಘಂಟೆಗಳ ಪ್ರಯಾಣ ನಿದ್ರೆ, ಅಲುಗಾಟ, ಭಯ, ಕಾತರಗಳ ಸಾಂಗತ್ಯದಲ್ಲೇ ಕಳೆದು ಹೋಗಿದೆ.

ಮುಂದೆ ಬೆಂಗಳೂರಿನಿಂದ ಊರಿನ ತನಕದ ಪ್ರಯಾಣದ ಹೊಣೆ ಹೊತ್ತ  ನಮ್ಮ ಬಸ್ಸು ಸೂರ್ಯ ಮೂಡುವ ಮೊದಲೇ ಶಿರಾಡಿ ಘಾಟಿ ಇಳಿದು ಕರಾವಳಿಯ ಸೆಖೆ ವಲಯದೊಳಗೆ ಹೊಕ್ಕಿದೆ. ರಸ್ತೆಯ ಎರಡೂ ಕಡೆಗಳಲ್ಲಿ ಕೋಟೆಯಂತೆ ನಿಂತ ಸಾಲು ತೆಂಗಿನ ಮರಗಳು, ಅವುಗಳ ಹಿಂದೆ ಮರೆಯಲ್ಲಿ ಭತ್ತದ ಗದ್ದೆಗಳು. ನಡು ನಡುವೆ ರಸ್ತೆಯ ಏಕತಾನವನ್ನು ಭಂಗಗೊಳಿಸುವ ನದಿಗಳು ಸೇತುವೆಗಳು. ನಸುಕಿನಲ್ಲೇ ಹೊಳೆಯಿಂದ ಮರಳು ಎತ್ತಿ ದೋಣಿಯಲ್ಲಿ ತುಂಬಿಸುವ ಕಾಯಕ. ಈ ಎಲ್ಲ ನೋಟಗಳನ್ನು ಬೆಂಗಳೂರಿನಿಂದ ಜನರನ್ನು ಹತ್ತಿಸಿಕೊಂಡು ಬಂದು ಕರಾವಳಿಯ ವಿವಿಧ ಊರುಗಳಿಗೆ ತಲುಪಿಸುವ ದುರ್ಗಾಂಬ, ಸುಗಮ, ಕಾಮತ್, ವಿ ಆರ್ ಎಲ್ ಇತ್ಯಾದಿ ಬಸ್ಸುಗಳು ಕಿಟಕಿ ಕಣ್ಣುಗಳಲ್ಲಿ  ತುಂಬಿಕೊಳ್ಳುತ್ತ ಚಲಿಸುತ್ತಿವೆ. ತೆಂಗಿನ ತೋಪಿನ ಒಳಗಿಂದ ಆಗಷ್ಟೇ ಒಂದು ಚಂದದ ನಿದ್ರೆ ಮುಗಿಸಿ ಎದ್ದ ಬಿಸಿ ಕೆನ್ನೆಯ ಮಗುವಿನಂತೆ ಸೂರ್ಯ ಆಕಾಶದ ಏಣಿ ಹತ್ತುತ್ತಿದ್ದಾನೆ. ಇನ್ನು ಆ ಏಣಿ ಊರಿದ ನೆಲದ ಮೇಲೆ, ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳ ಕಡೆಗೆ ಸಾಗುವ  ರಸ್ತೆಗಳಲ್ಲಿ ಪ್ರತಿವರ್ಷದಂತೆ ಮಳೆಗಾಲದ ಅಖೇರಿಗೆ ಬಿದ್ದ ಹೊಂಡಗಳು ತಮ್ಮನ್ನು ಹಾದು ಹೋಗುವ ಎಲ್ಲರನ್ನೂ ಉಪಚರಿಸಿ ಮಾತನಾಡಿಸುವಂತೆ ನನ್ನನ್ನೂ ವಿಚಾರಿಸಿವೆ. ದಶಕದ ಹಿಂದೆ ಮಾದರಿ ರಸ್ತೆಯೆಂದು ಹೊಗಳಿಕೆ ಅಸೂಯೆಯನ್ನು ಪಡೆಯುತ್ತಿದ್ದ ಈ ರಾಷ್ಟ್ರೀಯ ಹೆದ್ದಾರಿ ವರ್ಷವೂ ವಿರೂಪಗೊಳ್ಳುವುದು  ಸಂಪ್ರದಾಯ ಆಗಿಬಿಟ್ಟಿದೆ. ಬಸ್ಸಿನ ಕೊನೆಯ ಸೀಟುಗಳಲ್ಲಿ ಆಸೀನರಾದವರು ತಮ್ಮ ಸುತ್ತಲಿನ ಯಾವ ಅಂದವನ್ನೂ ಗಮನಿಸದೆ, ತಡವಾಗಿ ಟಿಕೇಟು ತೆಗೆಸಿ ಈ ಸೀಟು ದೊರಕಿಸಿದ ತಮ್ಮ ಗೆಳಯನಿಗೂ, ವಾಯುವೇಗದಲ್ಲಿ ಗುಂಡಿಗಳನ್ನು ಲಂಘಿಸಿದ ಬಸ್ಸಿನ ಚಾಲಕನಿಗೂ, ಮತ್ತೆ ರಸ್ತೆಯ ಈ ಪರಿಸ್ಥಿತಿಗೆ ಕಾರಣೀಕರ್ತರು ಎನ್ನಲಾದ ವಾಹನ ದಟ್ಟಣೆ, ಅಧಿಕಾರಿಗಳು, ಮಂತ್ರಿ, ಸರಕಾರ ಎಲ್ಲರಿಗೂ ಬೈಯುತ್ತ ತಮ್ಮ ನಿಲ್ದಾಣ ಎಂದು ಬರುವುದೋ ಎಂದು ಕಾಯುತ್ತಿದ್ದಾರೆ. ಮರವಂತೆಯೊರೆಗಿನ ಬಸ್ಸು ಪ್ರಯಾಣದ “ಕೊನೆಯ ಸೀನ್” ಮತ್ತು “ಶುಭಂ”ನಂತೆ  ಎಡ ಬದಿಯಲ್ಲಿ ಸಮುದ್ರ ಭುಸುಗುಟ್ಟಿ ಹೆಡೆ ಎತ್ತಿ ನೊರೆ ಉಕ್ಕಿಸಿ ಮಾತಾಡಿಸುತ್ತಿದೆ, ಬಲಗಡೆಯಲ್ಲಿ ಸೌಪರ್ಣಿಕೆಯ ಎಂದಿನ ಪ್ರಶಾಂತತೆ ಮನಸ್ಸು ತುಂಬುತ್ತಿದೆ .

ಮುಂಜಾನೆ ಎದ್ದು ಬಲೆ, ದೋಣಿ, ತೊಳೆ, ಕೊಚ್ಚಕ್ಕಿ ಗಂಜಿಯ ಬುತ್ತಿ ಊಟ ಕಟ್ಟಿಕೊಂಡು ಮನೆಬಿಟ್ಟ ಮೀನುಗಾರರು, ಸಮುದ್ರದಲ್ಲಿ ಮೀನು ಹಿಡಿಯುವ ದೋಣಿಗಳ ವ್ಯೂಹ ರಚಿಸಿಕೊಂಡು ಶಿಕಾರಿಯಲ್ಲಿ ತೊಡಗಿದ್ದಾರೆ.  ಬ್ರಿಸ್ಟಲ್ ನಿಂದ ಹಾರಿದ ವಿಮಾನ, ಬೆಂಗಳೂರಿನಿಂದ ಹೊರಟ ಬಸ್ಸು, ದಾರಿಯುದ್ದಕ್ಕೂ ಕಂಡ ತೆಂಗಿನ ತೋಟ, ಗದ್ದೆ, ನದಿ ಸಮುದ್ರ ಇವುಗಳೊಟ್ಟಿಗೆ ಹೀಗೆ ನಿತ್ಯ ಕಾಯಕದ ಸಂಬಂಧ ಹೊಂದಿದವರ ನಡುವೆ ಜಗತ್ತಿನಲ್ಲಿ ನಾನೊಬ್ಬನೇ ನಿರುದ್ಯೋಗಿಯಂತೆ ಮರವಂತೆಯಲ್ಲಿ ಇಳಿದಿದ್ದೇನೆ.

 ದನ ಕರುಗಳು ಕೊಟ್ಟಿಗೆಯಿಂದ “ಅಂಬಾ” ಎಂದು ಕೂಗುವುದು, ಛಂಗನೆ ನೆಗೆಯುತ್ತ ಅಂಗಳದ ಸುತ್ತ ಬರುವುದು, ಕೋಳಿಗಳು ಗುಂಪಿನಲ್ಲಿ ಹುಂಜ ಹೆಂಟೆಗಳು ಚಳ್ಳೆ ಪಿಳ್ಳೆಗಳು ಒಬ್ಬರ ಮನೆಯ ತೋಟದಿಂದ ಇನ್ನೊಬ್ಬರ ಮನೆಯ ತೋಟಕ್ಕೆ ಹಾರುವುದು, ತೆಂಗಿನ ಕಟ್ಟೆಗಳನ್ನು ಕೆದುರುವುದು ಮತ್ತೆ ನಾಯಿಗಳು ಈ ಕೋಳಿ ಗುಂಪನ್ನು ಅವುಗಳ ಮನೆಯ ತನಕವೂ ಅಟ್ಟಿಸಿಕೊಂಡು ಹೋಗುವುದು – ಹತ್ತು ಘಂಟೆಗಳ ಹಿಂದೆ  ಬಿಟ್ಟು ಬಂದ ಪ್ರಪಂಚವನ್ನು ಪೂರ್ಣ  ಒರೆಸಿ ಮರೆಸಿವೆ . ಮಳೆಗಾಲದ ಕೊನೆಯಲ್ಲಿ ಕಂಡುಬರುವ ಹಚ್ಚಹಸಿರು ಗಿಡ ಮರಗಳ ರಾಶಿಯ ನಡುವೆ, ಕಳೆ ಗಿಡಗಳು, ನಾಚಿಕೆ ಮುಳ್ಳಿನ ಗಿಡಗಳೂ ಸೊಂಪಾಗಿ ಬೆಳೆದಿವೆ ಉಳಿದಿವೆ. ಇವರ ಇವುಗಳ ನಡುವೆ ನಾನು ಕೆಲವು ದಿನಗಳ ಕಾಲ ಬನಿಯನ್, ಪಂಚೆ ಉಟ್ಟು ಓಡಾಡುವ ಸುಖ,ಸ್ವಾತಂತ್ರ್ಯ, ಭೋಗವನ್ನು  ನೆನೆದು ಖುಷಿಯಲ್ಲಿದ್ದೇನೆ.

ನಮ್ಮೂರಿನ ಬಹುಪಾಲು ಜನರು ಒಂದೋ ಬೇಸಾಯಗಾರರು ಅಲ್ಲದಿದ್ದರೆ ಮೀನುಗಾರರು. ಭತ್ತದ ಗದ್ದೆಗಳು, ತೆಂಗಿನ ತೋಟಗಳು, ಸಮುದ್ರದ ಒಡಲೊಳಗಿನ ಮತ್ಸ್ಯಗಳೇ ಇವರ ಸಂಪತ್ತು. ಬೇಸಾಯಗಾರರ ಮಕ್ಕಳೆಲ್ಲ ಊರುಬಿಟ್ಟು ಬೊಂಬಾಯಿ ಬೆಂಗಳೂರಿಗೆ ಎಂದೋ ಜಾರಿದ್ದಾರೆ. ಮೀನುಗಾರರ ಮಕ್ಕಳು ಹಲವರು ಊರಲ್ಲೇ ನಿಂತಿದ್ದಾರೆ.ಜೀವನ ಶೈಲಿ, ಕುಲಕಸುಬು ನೀಡುವ ಪ್ರತಿಫಲ, ಬದುಕಿನ ಸವಾಲುಗಳಲ್ಲಿ ಮಳೆಯನ್ನು ನಂಬಿದವರಿಗೂ, ಸಮುದ್ರವನ್ನು ನಂಬಿದವರಿಗೂ ಬಹಳ ವ್ಯತ್ಯಾಸ. ಈ ವ್ಯತ್ಯಾಸದ ನಡುವೆಯೇ ವ್ಯವಸಾಯಗಾರರು ಮತ್ತು ಮೀನುಗಾರರಲ್ಲಿ ಬಹಳ ಜನ ಸೂರ್ಯ ಕಂತಿದ ಮೇಲೆ ಒಂದೇ ಸೂರಿನಡಿ ಕುಳಿತು ಮದ್ಯ ಹೀರುತ್ತಾರೆ. ಇವರನ್ನು ನೆನೆಯುತ್ತ “ಸಾಯಂಕಾಲ ಕುಡ್ಕಂದು ಕುಣಿಯುದು ಚಂದ, ಬೆಳಗಾತ ಎದ್ಕಂಡು ದುಡಿಯುದು ಚಂದ” ಅಂತ ಕುಂದಾಪ್ರದ ಕವಿಯೊಬ್ಬರು ಹೇಳಿದ್ದಿದೆ. ಕೆಲಸಕ್ಕೆಂದು ಊರು ಬಿಟ್ಟವನು ಹೀಗೆ ನೆಂಟನ ಹಾಗೆ ವರ್ಷಕ್ಕೊಮ್ಮೆ ಊರಿಗೆ ಬಂದಿಳಿಯುವ ನನ್ನ ಬಳಿ ಕೆಲವರು ಬೊಂಬಾಯಿ ಬೆಂಗಳೂರಲ್ಲಿರುವ ನನ್ನ ಸಹಪಾಠಿಗಳಾಗಿದ್ದ ತಮ್ಮ ಮಕ್ಕಳ ಬಗ್ಗೆ ಹೇಳಿಕೊಂಡು ಮೆತ್ತಗಾಗುತ್ತಾರೆ. ನನ್ನನ್ನೂ ಅವರ ಮಾತಿನಲ್ಲಿ ಕಟ್ಟಿ ನೆನಪಿನೊಡನೆ ಅಲೆಸಿ ಸುತ್ತಿಸಿ ದಣಿಸುತ್ತಾರೆ.  ಅಂತಹ ಕೆಲವು ಸಹಪಾಠಿ ಮಿತ್ರರು ಬೊಂಬಾಯಿಯಿಂದ ದೀಪಾವಳಿ ರಜೆಗೆಂದೋ, ದೈವದ ಹರಕೆ ತೀರಿಸಲೆಂದೋ ಊರಿಗೆ ಬಂದು, ಬಿಳಿ ಅಂಗಿ ತೊಟ್ಟು ಮೇಲಿನ ಎರಡು ಬಟನ್ ತೆಗೆದು ಮರಾಠಿ ಮಿಶ್ರಿತ ಹಿಂದಿ ಮಾತಾಡಿಕೊಂಡು ಈ ಸಲವೂ ಓಡಾಡುತ್ತಿದ್ದಾರೆ. ಬೊಂಬಾಯಿ ಹತ್ತಿರ ಆದದ್ದರ ಸಂಕೇತವೋ, ಮರವಂತೆ ಬೆಳೆಯುತ್ತಿರುವುದರ ಕುರುಹೋ ಈ ಮಕ್ಕಳ ಅಮ್ಮಂದಿರಾದ ರೈತ ಹೆಂಗಸರು “ಮಜ್ಜಿಗೆ, ರಜೆ” ಎನ್ನುವ ಕನ್ನಡದ ಶಬ್ದಗಳನ್ನು ಸಂಪೂರ್ಣ ಮರೆತು “ದಹಿ”, “ಚುಟ್ಟಿ” ಎನ್ನುವ ಶಬ್ದಗಳನ್ನು ಮಾತಿನಲ್ಲಿ ಬಳಸಲು ಆರಂಭಿಸಿದ್ದಾರೆ .

ದೀಪಾವಳಿಯಂತಹ ಹಬ್ಬಕ್ಕೆ, ದೈವದ ಹರಕೆಗೆ ಅಲ್ಲದಿದ್ದರೆ ಹೀಗೆ ಸುಮ್ಮನೆ, ರಜೆಗೆ ಊರಿಗೆ ಬಂದಿಳಿಯುವವರನ್ನು ಗಮನಿಸದೆ ಲೆಕ್ಕಿಸದೆ ಮೀನು ಹಿಡಿಯುವ ದೋಣಿಗಳು ಪ್ರತಿ ಮುಂಜಾನೆಯೂ ಸಮುದ್ರದಲ್ಲಿ ವ್ಯೂಹ ರಚಿಸುತ್ತಿವೆ; ತೆಂಗಿನ ತೋಟಗಳು ತೂಗಿ ಹಾಡಿ ಗುನುಗಿ ರಮಿಸುತ್ತಿವೆ.  ಭತ್ತದ ಕೊಯ್ಲಿಗೆ ಬೆಳಿಗ್ಗೆಯೇ ಹೋದವರು ಸೊಂಟದಲ್ಲಿ ಕತ್ತಿ ಸಿಕ್ಕಿಸಿಕೊಂಡು ತಲೆಯ ಮೇಲೆ ಹುಲ್ಲಿನ ಹೊರೆ ಹೊತ್ತು ಗದ್ದೆಯ ಸಪೂರ ಅಂಚಿನ ಮೇಲೆ ಹೆಜ್ಜೆ ಇಡುತ್ತ ಸಂಜೆಯಾಗುವಾಗ ಮನೆಗೆ ಮರಳುತ್ತಿದ್ದಾರೆ. ಕತ್ತಲಾಗುವುದರೊಳಗೆ ಹುಲ್ಲು ಕಟ್ಟುಗಳನ್ನು ಅಡಿಮಂಚಕ್ಕೆ ಬಡಿದು ಭತ್ತ ಉದುರಿಸಿ ತಿರಿ ಕಟ್ಟಿ ಶೇಖರಿಸುತ್ತಿದ್ದಾರೆ. ಬಲೆಯಲ್ಲಿ ಸಿಕ್ಕಿಬಿದ್ದ ಮೀನುಗಳ ಸಮೂಹ, ಅಂಗಳದಲ್ಲಿ ಗುಡ್ಡೆಯಾದ ಭತ್ತದ ರಾಶಿಯ ಚಿತ್ರ ಮೂಡುವ ಸಮಯದಲ್ಲೇ ಅಂಗಡಿಗಳ ಮುಂದೆ ನೇತು ಹಾಕಿದ್ದ ಆಕಾಶ ದೀಪಗಳು ಗೂಡು ದೀಪಗಳು ಒಂದೊಂದಾಗಿ, ಮನೆಮನೆಯ ಕಂಬ ಗೇಟು ಗೋಡೆಗಳ ಮೇಲೆ ಜೋತುಬೀಳುತ್ತಾ ಬೆಳಕಿನ ಹಾಡುಹಾಡುತ್ತ ಮೈಮರೆಯುತ್ತಿವೆ. ದೀಪಾವಳಿಯ ಆಗಮನವನ್ನು ಸಾರಿ ಹೇಳಿವೆ.  ಎಲ್ಲೋ ದೂರದಲ್ಲಿ ಕೇಳುವ “ಢಮ್ ಢಮ್” ಸದ್ದು ಕೇಳಿ, ಅಂಗಡಿಯ ಬದಿಗೆ ಕಟ್ಟಿರುವ ಪಟಾಕಿಗಳ ಚಿತ್ರ ಇರುವ ಬ್ಯಾನರ್ ಕಂಡು ನಮ್ಮೂರಿನ ಮಕ್ಕಳ ಕಣ್ಣಲ್ಲಿ ಮಿಂಚು  ಹೊಳೆಯುತ್ತಿದೆ. ಹಾಗಂತ ಈ ಮಕ್ಕಳ ಹೆತ್ತವರು ಹಿರಿಯರು, ಒಂದು ಮುಂಜಾವಿಗೆ ಬಲೆಯೊಂದರ ತುಂಬ ಮೀನು, ವರ್ಷವಿಡೀ ದಣಿದು ಬೀಜ ಬಿತ್ತಿ  ಬೆಳೆದು ಕೊಯ್ಯುವವರಿಗೆ ಬಯಸಿದಷ್ಟು ಬೆಳೆ, ತೆಂಗಿನ ಕೊನೆಗಳು ಹುಳ ಬೀಳದೆ ಬಲಿತು ಮಾರುಕಟ್ಟೆಯಲ್ಲಿ ಸೂಕ್ತ ದರ, ಇವೆಲ್ಲ ದೊರೆಯುವುದೇ ದೀಪಾವಳಿ ಮತ್ತು ಉಡುಗೊರೆ ಎಂದು ಹಾರೈಸುತ್ತಿದ್ದರೆ, ಇವರ ದೈನಿಕದ ಕಾತರ, ನಿರೀಕ್ಷೆ, ದುಗುಡ, ನೆಮ್ಮದಿ, ಸುಖ, ಸಾಂತ್ವನಗಳ ತಳಹದಿಯ ಮೇಲೆ ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ.  

***************************************************************************************

ನನ್ನೂರ ದೀಪಾವಳಿ – ಶಶಿಕಾಂತ್  ಹೆಚ್ ಟಿ 

ಶಶಿಕಾಂತ ಅವರು ಹುಟ್ಟಿ ಬೆಳೆದಿದ್ದು ಬೀರೂರಿನಲ್ಲಿ. ಫೋಟೋಗ್ರಫಿ, ಚಿತ್ರಕಲೆ, ಬರವಣಿಗೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಅವರು ಪ್ರಾಚ್ಯವಸ್ತು ಸಂಗ್ರಹಕಾರರು. – ಸಂ.

ದೀಪಾವಳಿ ಎಂದರೆ ದೀಪಗಳ ಹಬ್ಬ. ಹಬ್ಬದ ಹಿಂದಿನ ದಿನ ದೀಪಗಳನ್ನು ತಂದು ಬೆಳಗೆದ್ದು, ಎಣ್ಣೆ ಹಚ್ಚಿಕೊಂಡು ಅದರಲ್ಲೇ ಕ್ರಿಕೆಟ್ ಆಡಿ ಮಧ್ಯಾಹ್ನ ಸ್ನಾನ ಮಾಡಿ ನೆಕ್ಸ್ಟ್ ಸ್ಕೆಚ್ಚು ಪಟಾಕಿ.  ಮನೇಲಿ ಅಮ್ಮ ಅವರೆಲ್ಲ ಸ್ನಾನ ಮಾಡಿ ಬೆನಕನ ಮಾಡಿ ಎಲ್ಲಾ ಬಾಗಿಲುಗಳಿಗೆ ಬೆನಕನಿಟ್ಟು ಪೂಜೆ ಮಾಡುತ್ತಾರೆ.  ಊಟಕ್ಕೆ ಒಬ್ಬಟ್ಟು, ಸೀಕರಣೆ,  ಪಲ್ಯ, ಹಪ್ಪಳ, ಸೆಂಡಿಗೆ, ಬೋಂಡಾ, ಚಿತ್ರಾನ್ನ ಮಾಡುತ್ತಾರೆ.  ರಾತ್ರಿ ನಮ್ಮ ಚಿಕ್ಕಮಗಳೂರಿನ ದೇವಿರಮ್ಮನ ಬೆಟ್ಟಕ್ಕೆ ಆರತಿ ಮಾಡಿ, ಎಲ್ಲಾ ಹಿರಿಯರ ಕಾಲುಗಳಿಗೆ ನಮಸ್ಕಾರ ಮಾಡಿ, ಮಾಡಿರುವ ಸಿಹಿತಿಂಡಿಗಳನ್ನು ದೇವತೆಗೆ ನೈವೇದ್ಯ ಮಾಡಿ ರಾತ್ರಿ ಊಟ ಮಾಡ್ತಾರೆ.  ಊಟ ಆದ ಮೇಲೆ ಇರೋದು ಮಜಾ, ಅದೇ ಪಟಾಕಿ!  ಯಾರ್ ಮನೆಯಲ್ಲಿ ಜಾಸ್ತಿ ಪಟಾಕಿ ತಂದಿದ್ದಾರೆ, ರಾಕೆಟ್ ಎಷ್ಟಿದವೆ, ಆನೆ ಪಟಾಕಿ ಎಷ್ಟಿದವೆ, ಭೂಚಕ್ರ ಸುಸುರ್ಬತ್ತಿ ಇವನ್ನೆಲ್ಲ ಒಂದೊಂದಾಗಿ ಹಚ್ಚುತ್ತಾ ಬಂದರೆ ಬಹಳ ಚೆನ್ನಾಗಿರುತ್ತೆ.  ನಮ್ಮನೇಲಿ ಮಕ್ಕಳು ಜಾಸ್ತಿ ಇರೋದ್ರಿಂದ ಪಟಾಕಿ ಜಾಸ್ತಿ ಇರುತ್ತೆ.  ಪೂಜೆ ಮಾಡುವಾಗ ಹೂಕುಂಡ ಹಚ್ಚಿದರೆ ಮಜಾನೇ ಬೇರೆ. ಎಲ್ಲರ ಮನೆ ಮುಂದೆ ದೀಪಗಳನ್ನು ಪೂಜಿಸಿ ಇಟ್ಟಾಗ ದೀಪಗಳಿಂದ ಕಂಗೊಳಿಸುತ್ತಿರುವ ಬೀದಿಯನ್ನು ನೋಡೋಕೆ ಚೆಂದ.

****************************************************************************************

ದೀಪಾವಳಿ ನೆನಪುಗಳು – ಮಂಜುನಾಥ್ ಶ್ರೀನಿವಾಸಮೂರ್ತಿ. ಬೆಲ್ಫಾಸ್ಟ್ 

ಮಂಜುನಾಥ್ ಶ್ರೀನಿವಾಸಮೂರ್ತಿ ಮೂಲತಃ ಬೆಂಗಳೂರಿನವರು. ಸದ್ಯಕ್ಕೆ ಬೆಲ್ಫಾಸ್ಟ್ ನಲ್ಲಿ ವೃತ್ತಿ ಮತ್ತು ವಾಸ. ಸಂಗೀತ ಕೇಳುವುದು, ಪುಸ್ತಕ ಓದುವುದು, ಬರವಣಿಗೆ ಮತ್ತು ಚಾರಣ ಮೆಚ್ಚಿನ ಹವ್ಯಾಸಗಳು – ಸಂ.

ದೀಪಾವಳಿ ಭರತಖಂಡದಾದ್ಯಂತ ಆಚರಿಸುವ ದೊಡ್ಡ ಹಬ್ಬಗಳಲ್ಲೊಂದು.  ನಮ್ಮ ಎಲ್ಲಾ ಹಬ್ಬಗಳು ಸಂಭ್ರಮದ ಹಬ್ಬಗಳೇ.  ಆದರೆ  ಐದು ದಿನಗಳ ಈ ದೀಪಾವಳಿಯ ಸಂಭ್ರಮ, ಸಡಗರವೇ ಬೇರೆ.

ಬಾಲ್ಯದ ದಿನಗಳ ದೀಪಾವಳಿಯನ್ನ ಮೆಲುಕು ಹಾಕೋದೇ ಒಂದು ಆನಂದ.  ಆಗ ದೀಪಾವಳಿ ಅಂದ್ರೆ ನೆನಪಾಗುತ್ತಿದ್ದುದು ಹೊಸ ಬಟ್ಟೆ, ಕಜ್ಜಾಯ, ನೆರೆಹೊರೆಯರು-ಬಂಧುಗಳೊಂದಿನ ಒಡನಾಟ ಮತ್ತು ಪಟಾಕಿಯ ಸಂಭ್ರಮ.

ದೀಪಾವಳಿ ಬಂತೆಂದರೆ ಶಾಲೆಗಂತೂ ಮೂರು ದಿನ ರಜ.  ಆಹಾ ಸಂತೋಷವೋ ಸಂತೋಷ!  ಮೊದಲನೇ ದಿನ, ಬೆಳಗಾಗುತ್ತಲೇ  ಅಮ್ಮ ಬಂದು ನನ್ನನ್ನು,  ಅಕ್ಕನನ್ನು ಎಬ್ಬಿಸಿ ‘ಬಾವಿಯಿಂದ ನೀರು ಸೇದಿ, ಮನೇಲಿರೋ ಅರ್ಧ ತೊಟ್ಟಿ ನೀನು ತುಂಬು.. ಇನ್ನರ್ಧ ಇವಳು ತುಂಬಿಸಲಿ’ ಎಂದು ಕೆಲಸ ಹಚ್ಚಿಬಿಡುತ್ತ್ದಿದ್ದರು.  ಆಮೇಲೆ ಅವರು ಮನೆಯನ್ನು ಅಚ್ಚುಕಟ್ಟಾಗಿಸಿ, ಮನೆ ಮುಂದೆ ಗುಡಿಸಿ, ನೀರು ಹಾಕಿ, ಸ್ವಚ್ಛ ಮಾಡಿ, ರಂಗೋಲಿ ಹಾಕಿ ಅಲಂಕಾರ ಮಾಡುತ್ತಿದ್ದರು.  ಎಷ್ಟು ಬಿಂದಿಗೆ ನೀರು ಸೇದಿ ಸುರಿದರೂ ಆಪೋಷಣೆ ತೆಗೆದುಕೊಂಡು ಬಿಡುತ್ತಿದ್ದ ತೊಟ್ಟಿಯು ನಿಜಕ್ಕೂ ಅಕ್ಷಯ ಪಾತ್ರೆಯ ಅನುಭವ ಕೊಡುತ್ತಿತ್ತು.  ತುಂಬಿ ಮುಗಿಸುವ ಹೊತ್ತಿಗೆ ಅಪ್ಪ ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟಿ ಮುಗಿಸುತ್ತಿದ್ದರು.  ಮನೆಯೋ ಮದುವಣಗಿತ್ತಿಯೋ ಎಂಬಂತೆ ಇರುತ್ತಿತ್ತು ಮನೆಯ ಅಲಂಕಾರ.

ಮೊದಲ ದಿನವೇ ಪಟಾಕಿ ಡಬ್ಬದ ಉದ್ಘಾಟನೆಯಾಗಿ, ಮುಂದಿನ ಮೂರು ದಿನಕ್ಕೂ (ಆಸ್ತಿ ಹಂಚಿಕೆಯಂತೆ) ನನಗೂ, ಅಕ್ಕನಿಗೂ ಸರಿಯಾಗಿ ಪಟಾಕಿ ಹಂಚಿಕೆಯಾಗಿ ಬಿಡುತಿತ್ತು.

ಮರುದಿನ ಅಡಿಯಿಂದ ಮುಡಿಯವರೆಗೆ ಎಣ್ಣೆ ಹಚ್ಚಿಕೊಂಡು, ಹಿಂದಿನ ದಿನ ತುಂಬಿದ್ದ ತೊಟ್ಟಿಯ ನೀರಿನಿಂದ, ಗಂಗಾಸ್ನಾನ ಮುಗಿಸಿ, ಹೊಸ ಬಟ್ಟೆ ಧರಿಸಿ ಬರುವಷ್ಟರಲ್ಲಿ, ತುಪ್ಪದ ದೀಪಗಳ ಬೆಳಕಲ್ಲಿ ದೇವರ ಮನೆ ಮಿಗಿ ಮಿಗಿ ಹೊಳೆಯುತಿತ್ತು.  ದೇವರಿಗೆ ನಮಸ್ಕಾರ ಹಾಕಿ, ಊಟ ತಯಾರಾಗುವ ಮೊದಲೇ, ಹೊಟ್ಟೆ ಊಟಕ್ಕೆ ತಯಾರಾಗಿ ಬಿಡುತ್ತಿತ್ತು .

ಸಂಜೆಯಾಗುತ್ತಿದ್ದಂತೆಯೇ ಮನೆಯ ಮುಂದೆ ಹಚ್ಚಿದ್ದ ದೀಪಗಳು ಮತ್ತು ಹೂ ಕುಂಡ, ಸುರ್ ಸುರ್ ಬತ್ತಿ , ಭೂ ಚಕ್ರಗಳು ಕತ್ತಲನ್ನು ನುಂಗಿಹಾಕಿಬಿಡುತ್ತಿದ್ದವು.

ಅಷ್ಟಿಷ್ಟು ಪಟಾಕಿ ಸಿಡಿಸಿ ಮುಗಿಸಿದ ಮೇಲೆ ಕೊನೆಯಲ್ಲಿ ರಾಕೆಟ್ ಹಚ್ಚುವ ಕಾರ್ಯಕ್ರಮದ ಸರದಿ.  ಆಕಾಶದ ಕಡೆ ಮುಖ ಮಾಡಿ ಇಟ್ಟ ರಾಕೆಟ್ ಇನ್ನೇನು ಮೇಲೆ ಹಾರುವ ಸಮಯಕ್ಕೆ ಸರಿಯಾಗಿ, ನಿದ್ದೆ ಸಾಲದೇ ತರಗತಿಯಲ್ಲಿ  ತೂಕಡಿಸಿ  ಬೀಳುವ ತಲೆಯಂತೆ, ಬಲಕ್ಕೆ ಬಾಗಿ

ಪಕ್ಕದ ಮನೆಗೆ ನುಗ್ಗಿ  ಪಕ್ಕದ ಮನೆಯ ಆಂಟಿಯ ಸೀರೆಯಿಂದ ನುಸುಳಿ ಹೋದ  ಸಾಹಸಗಾಥೆಯೂ ಉಂಟು.

ದೀಪಾವಳಿ ಅಮಾವಾಸ್ಯೆ ದಿನ, ಲಕ್ಷ್ಮಿ ಪೂಜೆ ಜೋರು.  ಅಕ್ಕ ಪಕ್ಕದ ಸೇಟು ಮನೆಯವರಿಂದ ಸ್ವೀಟ್ ಬಾಕ್ಸುಗಳ ಆಗಮನ.  ಸಂಜೆ ಆಗುತ್ತಿದ್ದಂತೆ ಮನೆಯ ಸುತ್ತ ಮಣ್ಣಿನ ದೀಪ ಹಚ್ಚುವ ಕಾರ್ಯಕ್ರಮ ಶುರು.

ಪಾಡ್ಯಮಿ ದಿನ ಬಲೀಂದ್ರನ ಪೂಜೆ ಮತ್ತು ಗೋವಿಗೆ ನಮಸ್ಕಾರ ಹಾಕಿ ಬರುವ ವಾಡಿಕೆ.  ನಂತರ ಆನಂದಿಸುತ್ತಾ ಬಹು ಪ್ರಿಯವಾದ ಭೋಜನ ಸೇವನೆಯಿಂದ ಹೊಟ್ಟೆಯೊಳಗಿನ ಅಗ್ನಿದೇವನಿಗೆ ಆಹುತಿ ಕೊಡುವ ಕಾರ್ಯ.  ಕೊನೆಯ ದಿನ ದೊಡ್ಡಮ್ಮನ ಮನೆಯಲ್ಲಿ ಅಕ್ಕಂದಿರ ಔತಣದ ಊಟ.

ಪ್ರಸ್ತುತದಲ್ಲಿ,  ಅನಿವಾಸಿ ಭಾರತೀಯನಾಗಿದ್ದರೂ, ಆ ನೆನಪು, ಪ್ರತಿ ಸಂಪ್ರದಾಯದ ಅನುಸರಣೆಯ ಹಿನ್ನೆಲೆ, ಅರ್ಥ ಮತ್ತು ಮಹತ್ವ ಮನದಲ್ಲಿ ಅಚ್ಚಳಿಯದೆ ಉಳಿದಿದೆ.  ಬೆಂಗಳೂರಲ್ಲಿ ಆಚರಿಸುತ್ತಿದ್ದ ದೀಪಾವಳಿ ಮತ್ತು ಬೆಲ್ಫಾಸ್ಟ್ ನಲ್ಲಿ ಆಚರಿಸೋ ದೀಪಾವಳಿಯಲ್ಲಿ ಎಲ್ಲಿ ವ್ಯತ್ಯಾಸವಿದೆಯೋ ಗೊತ್ತಿಲ್ಲ; ಹಬ್ಬದ ಸಂಭ್ರಮ, ಸಂತೋಷದಲ್ಲಂತೂ ಎಳ್ಳಷ್ಟೂ ವ್ಯತ್ಯಾಸವಿಲ್ಲ.

ಮೊದಲ ದಿನ ನೀರು ತುಂಬುವುದು; ಎರಡನೆಯ ದಿನ ನರಕ ಚತುರ್ದಶಿಯ ದಿನ ದುಷ್ಟ ಸಂಹಾರದ ಸಂಕೇತ ಪಟಾಕಿ ಸಿಡಿಸಿ ಸದ್ದು ಮಾಡಿ ಸಂಭ್ರಮ; ಮೂರನೆಯ ದಿನ ಸಮುದ್ರ ಮಂಥನದಿಂದ ಲಕ್ಷ್ಮಿ ಉದಯಿಸಿದ ದಿನವಾದ್ದರಿಂದ ದೀಪಾವಳಿ-ಅಮಾವಾಸ್ಯೆಯಂದು ಧನ ಲಕ್ಷ್ಮಿ ಪೂಜೆ; ನಾಲ್ಕನೆಯ ದಿನ ಬಲಿಪಾಡ್ಯಮಿ – ಬಲಿಚಕ್ರವರ್ತಿಯ ಭಕ್ತಿ, ದಾನಶೀಲತೆಗೆ ಮೆಚ್ಚಿ ಭಗವಂತ ಪ್ರಸನ್ನನಾದ ದಿನ ಹಾಗೂ ಶ್ರೀ ಕೃಷ್ಣ  ಗೋವರ್ಧನ ಗಿರಿಯನ್ನೆತ್ತಿ ಗೋಸಮೂಹವನ್ನು ರಕ್ಷಿಸಿದ ದಿನ.  ಹಾಗೂ ಐದನೆಯ ದಿನ ಸೋದರರ ದಿನ ಅಥವಾ ಯಮದ್ವಿತೀಯ.

ಹೀಗೆ ದೀಪಾವಳಿಯ ಹಿನ್ನೆಲೆ, ಮಹತ್ವ ಮೆಲುಕು ಹಾಕುತ್ತಾ, ಈ ಸಲದ ದೀಪಾವಳಿಗೆ ನಿಮ್ಮೆಲ್ಲರಿಗೆ ಶುಭ ಕೋರುತ್ತೇನೆ.

ಕೊನೆಗೆ, ಕವಿ ಡಿ ಎಸ್ ಕರ್ಕಿಯವರ ಸಾಲುಗಳನ್ನು ನೆನೆಯುತ್ತಾ, ‘ನರನರವನ್ನೆಲ್ಲ ಹುರಿಗೊಳಿಸಿ ಹೊಸೆದು, ಹಚ್ಚೇವು ಕನ್ನಡ ದೀಪ’ ಎಂದು ಹಾಡುತ್ತಾ, ಕನ್ನಡ ರಾಜ್ಯೋತ್ಸವದ ಈ ಮಾಸದಲ್ಲಿ ಸಂತೋಷ ಸಂಭ್ರಮದಿಂದ ಸಿಹಿನುಡಿಯ ದೀಪಗಳ ಹಬ್ಬ ಆಚರಿಸೋಣ.

ಧನ್ಯವಾದಗಳು .

****************************************************************************************

ದೀಪಾವಳಿ …. ದೀಪಾವಳಿ …. ಬಂತು ಬೆಳಕಿನ, ಸಿಹಿತಿಂಡಿಗಳ, ನಗುಮೊಗಗಳ ದೀಪಾವಳಿ..