ಕನಸು, ಕಾರುಣ್ಯ, ಕುಟುಂಬ ಮೌಲ್ಯಗಳ ಕ್ರಿಸ್ಮಸ್ — ವಿನತೆ ಶರ್ಮ ಬರೆದ ವಿಶೇಷ ಕ್ರಿಸ್ಮಸ್ ಲೇಖನ

ಕ್ರಿಸ್ಮಸ್ ಹಬ್ಬ ಮತ್ತೆ ಬಂದಿದೆ. ಆಸ್ತಿಕರಿಗೆ ಬೇಕಾದಂತೆ ಧಾರ್ಮಿಕ ಆಚರಣೆ, ನಾಸ್ತಿಕರಿಗೆ ಬೇಕಾದ ಬರೀ ಸೆಲೆಬ್ರೇಶನ್ – ಎರಡನ್ನೂ ಕೊಡುವ ಕ್ರಿಸ್ಮಸ್ ಹಬ್ಬ ‘ಗ್ಲೋಬಲ್ ಫೆಸ್ಟಿವಲ್’ ಪಟ್ಟ ಹೊಂದಿದೆ. ಈ ಡಿಸೆಂಬರನ ಕ್ರಿಸ್ಮಸ್ ಮತ್ತು ಮಾರ್ಚ್/ ಏಪ್ರಿಲ್ ನಲ್ಲಿ ಬರುವ ಈಸ್ಟರ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ದೊಡ್ಡ ಕ್ರಿಶ್ಚಿಯನ್ ಹಬ್ಬಗಳು/ ಆಚರಣೆಗಳು. ಬೇರಂತೆ ಕೆಲವು ಹಬ್ಬಗಳಿದ್ದರೂ ಇವೆರಡನ್ನೂ ಪ್ರಪಂಚದಾದ್ಯಂತ ದೊಡ್ಡದಾಗಿ ಆಚರಿಸುತ್ತಾರೆ. ಜೀಸಸ್ ಕ್ರೈಸ್ಟ್ ಹುಟ್ಟಿದ ದಿನ ಎಂದು ಸಂಭ್ರಮಿಸುವ ಒಂದು ದಿನದ ಈ ಜಾಗತಿಕ ಹಬ್ಬದ ಸಡಗರಕ್ಕೆ ಪ್ರಪಂಚದ ಚಳಿ ದೇಶಗಳ ಜನ ಇಡೀ ವರ್ಷ ಕಾಯುತ್ತಾರೆ.

20141206_174000ಚಳಿ ದೇಶಗಳಲ್ಲಿ ಹೊಸವರ್ಷದ ಆದಿಯಲ್ಲಿ ಹಿಮ, ಮಂಜು ತುಂಬಿದ ಪ್ರಕೃತಿಯಲ್ಲಿ ಜನರು ಹಿಮದಾಟಗಳನ್ನು ಆಡುವುದು ಬಿಟ್ಟು ಅಷ್ಟೊಂದು ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಶಾಲಾ ದಿನಗಳ ರಜೆಯಲ್ಲಿ ಅಲ್ಲಿ ಇಲ್ಲಿ ಹೋಗುತ್ತಾರೆ. ಬಿಟ್ಟರೆ ಮತ್ಯಾವ ಸಂಭ್ರಮ ಸಡಗರ ಇಲ್ಲ. ಜೀವನ ಬಹಳಾ ಡಲ್, ಬೇಸರ ಮತ್ತು ಒಂಥರಾ ಡಿಪ್ರೆಸ್ಸಿಂಗ್. ಸೂರ್ಯನಿಲ್ಲ, ಶಾಖವಿಲ್ಲ, ಚೆಂದವಿಲ್ಲ, ಏನೋ ಸಪ್ಪೆತನ, ಚೈತನ್ಯವಿಲ್ಲ ಎಂದು ಜನರು ಗೊಣಗಾಡುತ್ತಾರೆ. ಹೀಗೆ ಜನವರಿ ಮತ್ತು ಫೆಬ್ರವರಿ ಕಳೆದು ಮಾರ್ಚ್ ಬರುವ ಹೊತ್ತಿಗೆ ಜನರಿಗೆ “ಸಧ್ಯ ಈಸ್ಟರ್ ಬರುತ್ತಿದೆ, ಮತ್ತೆ ಶುರು ಮಾಡೋಣ ನಮ್ಮ ತಯಾರಿ – ಚಾಕೊಲಟ್ ಕೊಳ್ಳೋಣ, ಮನೆ ಶುಭ್ರ ಮಾಡಿ, ಮಕ್ಕಳಿಗೆಲ್ಲ ಈಸ್ಟರ್ ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಕತೆಗಳನ್ನು ಹೇಳೋಣ, ಎಲ್ಲಿ ಆ  ಈಸ್ಟರ್ ಮೊಟ್ಟೆ” ಎಂದು ಹೇಳುವ ಅವಸರ ಶುರುವಾಗುತ್ತದೆ. ಜೀವನದಲ್ಲಿ ಮತ್ತೆ ಸಡಗರ. ಹೊರಗೆ ಸ್ವಲ್ಪ ಸೂರ್ಯ ರಶ್ಮಿ ಕಾಣಿಸಿ, ಚಳಿ ಕಡಿಮೆ ಆದಂತೆಲ್ಲ ಜನರ ಉತ್ಸಾಹ ಹೆಚ್ಚುತ್ತದೆ. ಈಸ್ಟರ್ ಹಬ್ಬದ ಜೋರು, ವಾಕರಿಕೆಯಾಗುವಷ್ಟು ತಿಂದ ಚಾಕೊಲೆಟ್ ಜೀರ್ಣವಾಗುವ ಹೊತ್ತಿಗೆ ವಸಂತ ಋತುವಿನ ಉಲ್ಲಾಸ. ಹೊಸ ಹೂಗಳ ಅಂದಚೆಂದ.

ನಂತರ ಬರುವ ಬೇಸಗೆ ಕಾಲಕ್ಕೆ ಎಲ್ಲರೂ ಎದುರು ನೋಡುತ್ತಾರೆ. ಬೇಸಗೆ ಮುಗಿದು ಮರ ಗಿಡಗಳೆಲ್ಲ ಎಲೆ ಕಳಚಿಕೊಳ್ಳಲು ಆರಂಭವಾದಾಗ ಮತ್ತೆ ಅದೇ ಬೇಸರ. ಆಗಲೇ ಶುರುವಾಗುತ್ತದೆ ಈ ಕ್ರಿಸ್ಮಸ್ ಮಾತು. ಜೀವನದಲ್ಲಿ ಏನೋ ಗರಿ ಕೆದರಿದಂತೆ. ಕ್ರಿಸ್ಮಸ್ ಸಮಯದ ಸಡಗರ ಉಲ್ಲಾಸದಲ್ಲಿ ಎಲ್ಲರೂ ಸೇರಿಕೊಳ್ಳುತ್ತಾರೆ. ಎಲ್ಲಾ ಕಡೆಯೂ ಬಣ್ಣಗಳ, ಆಕರ್ಷಕ ಚಿತ್ತಾರಗಳ ಚೆಲುವಿನ ನೋಟ. ಎರಡು ಮೂರು ತಿಂಗಳ ಮುಂಚಿನಿಂದಲೇ ಹಬ್ಬದ ತಯಾರಿ ಶುರು ಮಾಡಿಕೊಳ್ಳುತ್ತಾರೆ. ಆ ಕಾಯುವಿಕೆಗೆ ಎಷ್ಟು ಧಾರ್ಮಿಕ ಭಾವನೆಯಿದೆಯೋ ಅಷ್ಟೇ ಗಟ್ಟಿಯಾದ ಕಾರಣಗಳು ಬೇರೆ ಬೇರೆಯಾದವು ಎಂದು ನನಗೆ ಈ ವರ್ಷ ಅರ್ಥವಾಗುತ್ತಿದೆ.

ನಾನು ಹೈಸ್ಕೂಲಿನಲ್ಲಿದ್ದಾಗ ಕುತೂಹಲದಿಂದ ಪಕ್ಕದ ಮನೆಯವರು ಹೋಗುತ್ತಿದ್ದ ದೂರದ ಚರ್ಚ್ ಗೆ ನಾನೂ ಹೋಗಿ ಬಂದಿದ್ದೆ. ಹಾಗೆ ಇನ್ನೊಮ್ಮೆ ಅದೇ ಕುತೂಹಲದಿಂದ ಮನೆ ಹತ್ತಿರವೇ ಇದ್ದ ಮಸೀದಿಗೆ ಹೋದಾಗ ‘ನೀನು ಹುಡುಗಿ ಇಲ್ಲಿಗೆ ಬರಬಾರದು, ಹೆಂಗಸರಿಗೆ ಇಲ್ಲಿ ಪ್ರವೇಶವಿಲ್ಲ’ ಎಂದಾಗ ಮನಸ್ಸು ಪೆಚ್ಚಾಗಿತ್ತು. ಮುಂದೆ ನಾನು ಸಿಕ್ಕರ ಗುರುದ್ವಾರ, ಬುದ್ಧರ, ಜೈನರ ಧಾರ್ಮಿಕ ಸ್ಥಳಗಳಿಗೆ ಹೋಗುವ ಜೊತೆಗೆ ಸೂಫಿ ಪಂಥರ ಪವಿತ್ರ ಸ್ಥಳಗಳಿಗೆ ಕೂಡ ಹೋದೆ. ಹಾಗೆ ವ್ಯಾಟಿಕನ್ ಕೂಡ ನೋಡಿ ಬಂದೆ. ನನ್ನ ಎಲ್ಲಾ ಭೇಟಿಗಳಲ್ಲೂ ಇದ್ದ ಉದ್ದೇಶ ಅವುಗಳ ಚರಿತ್ರೆ, ಅಂತಹ ಸ್ಥಳಗಳನ್ನು ಸೃಷ್ಟಿ ಮಾಡಿದ ಪರಿಯ ಬಗ್ಗೆ ತಿಳಿದುಕೊಳ್ಳುವುದು.

ಬೆಂಗಳೂರಿನಲ್ಲಿ ಬೆಳೆಯುತ್ತಿದ್ದ ದಿನಗಳಲ್ಲಿ ನಮ್ಮ ಮನೆ ಆ ಪಕ್ಕ ಒಂದು ಕ್ರಿಶ್ಚಿಯನ್ ಕುಟುಂಬ, ಈ  ಪಕ್ಕ ಒಂದು ಮಲೆಯಾಳಿ ಭಾಷೆ ಮಾತಾಡುತ್ತಿದ್ದ ಕುಟುಂಬ, ಎದುರು ಮನೆಯಲ್ಲಿ ಬೆಂಗಾಲಿಗಳು, ಆ ಕಡೆ ತೆಲುಗರು, ತಮಿಳರು, ಮತ್ತೊಂದು ಕಡೆ ಅಯ್ಯರ್ ಕುಟುಂಬ, ಆಂಗ್ಲೋ ಇಂಡಿಯನ್ ರ ಮನೆ – ಹೀಗೆ ಎಲ್ಲರ ಮನೆ ಮಕ್ಕಳು ನಾವು ಜೊತೆ ಸೇರಿ ಅವರವರ ಪ್ರದೇಶಗಳ ಆಟಗಳನ್ನು, ಅವರ ಇವರ ಭಾಷೆ ಕೂಡ ಅಷ್ಟಷ್ಟು ಕಲಿತದ್ದು ಇತ್ತು. ಹಾಗೆ ಹಬ್ಬಗಳು ಬಂದಾಗ ನಮ್ಮ ಮನೆಗಳ ಗಣೇಶ, ದಸರಾ, ದೀಪಾವಳಿ ಹಬ್ಬಗಳಿಗೆ, ಅವರ ಮನೆಗಳ ಕ್ರಿಸ್ಮಸ್, ದುರ್ಗಾ ಪೂಜಾ ಹಬ್ಬಗಳಿಗೆ ನಾವೆಲ್ಲಾ ಮಕ್ಕಳು ಸೇರಿಕೊಂಡು ಸಂಭ್ರಮಿಸುತ್ತಿದ್ದೆವು. ಆ ಸಂಭ್ರಮಕ್ಕೆ, ನಮ್ಮ ಆನಂದಕ್ಕೆ ಯಾವುದೇ ಗೋಡೆಗಳಾಗಲಿ, ಬೇಲಿಗಳಾಗಲಿ ಇರಲಿಲ್ಲ. ಧರ್ಮ, ಜಾತಿ, ಭಾಷೆ ಮೀರಿದ ಬರೀ ಹರ್ಷ, ಸಂತೋಷ, ನಗು, ಮಕ್ಕಳಾಟದ ಪ್ರಪಂಚ ಅದಾಗಿತ್ತು.

ಕ್ರಿಸ್ಮಸ್ ಹಬ್ಬದ ಮುಂಚೆ ನಮ್ಮ ಪಕ್ಕದ ಮನೆಯವರು ದೊಡ್ಡದೊಂದು ನಕ್ಷತ್ರವನ್ನು ಅವರ ತೆಂಗಿನ ಮರಕ್ಕೆ ಏರಿಸಿ, ಸುತ್ತಾ ಮುತ್ತಾ ಮರಗಳಿಗೆ ಬಣ್ಣದ ದೀಪಗಳನ್ನು ಹಾಕುತ್ತಿದ್ದರು. ಅದು ಆಗಷ್ಟೇ ನಮ್ಮ ದೀಪಾವಳಿ ಮುಗಿದ ಚಳಿ ಸಮಯ. ಸಂಜೆ ಕತ್ತಲಾದಂತೆ ನಾವು ಹೊರ ಬಂದು ಆ ಬಣ್ಣದ ಮಿನುಗುವ ನಕ್ಷತ್ರ, ಆ ದೀಪಗಳ ಸರಣಿಗಳನ್ನು ನೋಡಿದ್ದೇ ನೋಡಿದ್ದು. ಅವರ ಮನೆಗೆ ಅವರ ಚರ್ಚ್ ನ ಕ್ಯರೋಲ್ಸ್ ಗುಂಪು ಬಂದು ವಾದ್ಯಗಳ ಜೊತೆಗೆ ಹಾಡುಗಳನ್ನು ಹಾಡುತ್ತಿದ್ದರು. ನಮಗೆ ನಮ್ಮ ವೀಣೆ, ತಂಬೂರಿ, ತಬಲಾಗಳ, ದೇವರನಾಮಗಳ  ಪರಿಚಯ ಎಷ್ಟು ಚೆನ್ನಾಗಿತ್ತೋ ಅಷ್ಟೇ ಅಪರಿಚಿತವಾದದ್ದು ಆ ದೊಡ್ಡ  ಗಿಟಾರ್, ಡ್ರಮ್. ಸರಿ ಆ ವಾದ್ಯಗಳನ್ನು ಬಾಯಿಬಿಟ್ಟುಕೊಂಡು ನೋಡುವುದು – ಅದೊಂದು ಥರ ಮಾಂತ್ರಿಕತೆಯನ್ನೇ ಸೃಷ್ಟಿ ಮಾಡುತ್ತಿದ್ದ ಆ ದಿನಗಳ ನೆನಪು ಈಗಲೂ ನನ್ನ ಮನಸ್ಸಿಗೆ ಆಪ್ಯಾಯಮಾನ. ಅವರ ಮನೆಯೊಳಗೆ ಮತ್ತೊಂದು ಕ್ರಿಸ್ಮಸ್ ಗಿಡ, ಅದಕ್ಕೆ ನಾನಾ ರೀತಿಯ ಅಲಂಕಾರ. ಆ ಆಲಂಕಾರಿಕ ವಸ್ತುಗಳ ಹೆಸರೇ ನಮಗೆ ತಿಳಿದಿರಲಿಲ್ಲ, ಅವುಗಳನ್ನು ನಾವು ಕ್ರಿಸ್ಮಸ್ ಸಮಯ ಬಿಟ್ಟು ಮತ್ಯಾವಾಗಲೂ ನೋಡುತ್ತಿರಲಿಲ್ಲ. ಹೀಗಾಗಿ ನಮಗೆ ಕ್ರಿಸ್ಮಸ್ ಮಾಂತ್ರಿಕತೆ ಜೊತೆಗೆ ಒಂಥರಾ ಅಪರಿಚಿತತನವನ್ನೂ ಕೊಡುತ್ತಿತ್ತು.

ನಮ್ಮ ಬೊಂಬೆಹಬ್ಬದಲ್ಲಿ ನಾವುಗಳು ಚೊಕ್ಕವಾಗಿ ಅಂತಸ್ತುಗಳನ್ನು ಮಾಡಿ ಬೊಂಬೆಗಳನ್ನು ಕೂಡಿಸಿ, ಪಕ್ಕದ ಮೂಲೆಯಲ್ಲಿ ರಾಗಿ ತೆನೆ ಬೆಳೆಸಿ ಅಲ್ಲಿ ಪಾರ್ಕ್, ಕಾಡು, ವನ, ತೋಟ ಹೀಗೆಲ್ಲಾ ಪ್ರತ್ಯೇಕ ಜಾಗ ಮಾಡಿ ಇಡುತ್ತಿದ್ದೆವು. ಸಂಜೆಯಾದರೆ ಮನೆಗಳಿಗೆ ಹೋಗಿ, ಅವರ ಗೊಂಬೆಗಳನ್ನು, ಪಾರ್ಕ್ ಇತ್ಯಾದಿಗಳನ್ನು ನೋಡಿ ಸಂತೋಷ ಪಟ್ಟು ಅವರು ಕೊಟ್ಟ ತಿಂಡಿ ತಿನಿಸುಗಳನ್ನು ಸವಿಯುತ್ತಿದ್ದೆವು. ತಿನಿಸು ಚೆನ್ನಾಗಿಲ್ಲ ಎಂದಾದರೆ ಮುಜುಗರಪಟ್ಟುಕೊಂಡು ಮುಂದಿನ ವರ್ಷ ಅವರ ಮನೆಗೆ ಬರೀ ಬೊಂಬೆ ನೋಡಲು ಹೋಗೋಣ, ತಿನಿಸು ಕೊಟ್ಟರೆ ಬೇಡ ಹೇಳೋಣ ಎಂದು ನಿರ್ಧಾರ ಮಾಡಿದರೂ ಮುಂದಿನ ವರ್ಷ, ಬಂದಾಗ ಅದೆಲ್ಲ ಮರೆತೇ ಹೋಗುತಿತ್ತು! ಕೆಲವರು ಬೊಂಬೆ ಹಬ್ಬದಲ್ಲಿ ಹೊರಗಡೆಯೂ ಅಲಂಕಾರ ಮಾಡಿ, ದೀಪಗಳನ್ನು ಹಾಕಿ, ಬೊಂಬೆಗಳನ್ನು ಅವರ ತೋಟದಲ್ಲಿ ತುಂಬಾ ಜಾಣ್ಮೆಯಿಂದ ಇರಿಸುತ್ತಿದ್ದರು. ಅಂತಹವರ ಮನೆಗೆ ಎರಡೆರಡು ಸಲ ನಾವು ಮಕ್ಕಳು ಹೋಗುತ್ತಿದ್ದೆವು. “ಆಗ್ಲೇ ಒಂದ್ಸಾರಿ ನಿಮ್ಮ ಗುಂಪು ಬಂದಿತ್ತಲ್ಲಾ, ಮತ್ತೆ ಬಂದಿದೀರ ಯಾಕೆ, ನಮ್ಮನೆ ತಿಂಡಿ ಚೆನ್ನಾಗಿದೆ ಅನ್ನಿಸತ್ತೆ” ಎಂದು ಆ ಮನೆಗಳ ತಾತಅಜ್ಜಿಯರು ಹೇಳಿದಾಗ ಮುಖ ಕೆಂಪು ಮಾಡಿಕೊಂಡು ಜಾಗ ಖಾಲಿ ಮಾಡುತ್ತಿದ್ದೆವು.

ಅದೇ ರೀತಿ ಯಾವುದೇ ನಿರ್ಬಂಧವಿಲ್ಲದೆ ಅಷ್ಟೇ ಕೂತೂಹಲದಿಂದ, ಆಸಕ್ತಿಯಿಂದ, ಅಚ್ಚರಿಯಿಂದ ಕ್ರಿಸ್ಮಸ್ ಸಮಯದಲ್ಲಿ ಬೀದಿ ಬೀದಿ ಹೊಕ್ಕು ದೀಪವಿಟ್ಟುಕೊಂಡು ಮರದ ಮೇಲೆ ಮಿನುಗುವ ಕ್ರಿಸ್ಮಸ್ ನಕ್ಷತ್ರಗಳನ್ನು ನೋಡಿ, ಕೊರಳೆತ್ತಿ, ನಕ್ಷತ್ರದೊಳಗೆ ಅದು ಹೇಗೆ ದೀಪ ಹೋಯ್ತು ಎಂದು ಬೆರಗಿನಿಂದ ಬಣ್ಣಬಣ್ಣದ ದೀಪಾಲಂಕಾರವನ್ನು ಆಸ್ವಾದಿಸಿ ಮನೆಗೆ ಬರುತ್ತಿದ್ದೆವು. ಕ್ರಿಸ್ಮಸ್ ದಿನ ಹೊಸಬಟ್ಟೆ ಹಾಕಿಕೊಂಡು, ಬಲು ಚೆನ್ನಾಗಿ ಅಲಂಕರಿಸಿಕೊಂಡು ಪಕ್ಕದ ಮನೆಯ ಹುಡುಗಿ ಶಿಸ್ತಾಗಿ ಕ್ರೋಷಾ ಬಟ್ಟೆಯ ಮುಸುಕು ಹಾಕಿಕೊಂಡ ಹೊಳೆಯುವ ತಟ್ಟೆಯ ತುಂಬಾ ಏನೇನೋ ತಿಂಡಿಗಳನ್ನ ಕೊಡುತ್ತಿದ್ದಳು. ನಾವು ಮುಜುಗರವಿಲ್ಲದೆ ಅವಳನ್ನೇ ಅವುಗಳ ಹೆಸರೇನೆಂದು ಕೇಳುತ್ತಿದ್ದೆವು. ಅವಳೂ ಕೂಡ ನಮ್ಮ ಮನೆಯ ದಸರಾ ಹಬ್ಬದ ತಿನಿಸುಗಳ ಹೆಸರುಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದಳು.

ಈಗ ಇಂಗ್ಲೆಂಡಿನ ಮೈ ಕೊರೆಯುವ ಚಳಿಯಲ್ಲಿ ಕ್ರಿಸ್ಮಸ್ ಆಚರಣೆ. ಮೊನ್ನೆ ಬೆಳಗ್ಗೆ ಎದ್ದು ಹೊರಗಡೆ 20141206_141700ಕಿಟುಕಿಯಿಂದ ಇಣುಕಿದರೆ ಕಾರಿನ ಮೇಲೆ, ಹುಲ್ಲಿನ ಮೇಲೆ, ಆಪಲ್ ಮರಗಳ ಮೇಲೆ ಬಿಳಿ ಮಕಮಲ್ಲಿನ ಬಟ್ಟೆಯನ್ನು ಯಾರೋ ಹರಡಿದಂತೆ ಇತ್ತು. ಓಹೋ ಇದು ಬಿಳಿ ಕ್ರಿಸ್ಮಸ್ ನಾಂದಿ ಎಂದೆನಿಸಿತು. ಕಳೆದೆರಡು ತಿಂಗಳುಗಳಿಂದ ಅಂಗಡಿಗಳಲ್ಲಿ, ಸೂಪರ್ ಮಾರ್ಕೆಟ್ಗಳಲ್ಲಿ, ಗಾರ್ಡನ್ ಸೆಂಟರ್ ಗಳಲ್ಲಿ, ಸಣ್ಣ ಪುಟ್ಟ ಅಂಗಡಿಗಳಲ್ಲಿ ಎಲ್ಲೆಲ್ಲೂ ನಾನ ರೀತಿಯ ಕ್ರಿಸ್ಮಸ್ ಸಂಬಂಧಪಟ್ಟ ವಸ್ತುಗಳು, ತಿನಿಸುಗಳು ಏನೆಲ್ಲಾ ಮಾರಾಟವಾಗುತ್ತಿದೆ. ಕ್ರಿಸ್ಮಸ್ ಡಿನ್ನರ್ ಎಂದು ಪ್ರತಿಯೊಂದು ಹೋಟೆಲ್, ಮೋಟೆಲ್, ಇನ್, ಪಬ್, ಎಲ್ಲವೂ ಆಗಲೇ ಪೂರ್ತಿ ಬುಕ್ ಆಗಿದೆ. ವರ್ಷದ ಅತ್ಯಂತ ದೊಡ್ಡ ಹಬ್ಬದ ಹರ್ಷದ ಈ ಸಮಯದಲ್ಲಿ ಮನೆಮಂದಿಗೆ, ಬಂಧುಬಳಗದವರಿಗೆ, ಸ್ನೇಹಿತರಿಗೆ, ತಿಳಿದವರಿಗೆ ಕ್ರಿಸ್ಮಸ್ ಉಡುಗೊರೆ ಕೊಡಲು ಜನರು ಏನೆಲ್ಲಾ ಮುತುವರ್ಜಿ ವಹಿಸುತ್ತಾರೆ! ಆಸ್ತಿಕರೋ, ನಾಸ್ತಿಕರೋ – ಎಲ್ಲರೂ ಹೇಳುವುದು ಒಂದೇ ಮಾತು, ಕ್ರಿಸ್ಮಸ್ ಸಮಯ ವರ್ಷದ ಅತ್ಯಂತ ಮುಖ್ಯವಾದ ಸಮಯ.

ನನ್ನ ಬಿಳಿ ಕ್ರಿಸ್ಮಸ್ ಕೂಡ ಹಾಗೆ ನಡೆದಿದೆ, ನಾವೂ ನಮ್ಮ ಮನೆಯಲ್ಲಿ ಕ್ರಿಸ್ಮಸ್ ಮರಕ್ಕೆ ಅಲಂಕಾರ ಮಾಡಿದ್ದೀವಿ. ಹಿಂದೊಮ್ಮೆ ನನಗೆ ಗೊತ್ತಿರದಿದ್ದ ಕ್ರಿಸ್ಮಸ್ ಆಲಂಕಾರಿಕ ವಸ್ತುಗಳ ಸುಮಾರು ಹೆಸರುಗಳು ಈಗ ನನಗೆ ಗೊತ್ತು. ಅಕ್ಕ ಪಕ್ಕದವರು, ಸ್ನೇಹಿತರು ಕೊಡುತ್ತಿರುವ ಕ್ರಿಸ್ಮಸ್ ಶುಭ ಹಾರೈಕೆಯ ಗ್ರೀಟಿಂಗ್ ಕಾರ್ಡ್ಗಳನ್ನು ಇಡಲು ಜಾಗ ಹುಡುಕಬೇಕಾಗಿದೆ. ಎರಡು ವಾರಗಳ ಹಿಂದೆ ಸಾಂಟಾ ಮತ್ತವನ ಭಟರು ಹಾಡುವ ಬಂಡಿಯಲ್ಲಿ ಬಂದು ನಮ್ಮ ನೆರೆಹೊರೆಯ ಮಕ್ಕಳಿಗೆಲ್ಲಾ ಸಿಹಿ ಹಂಚಿ ಆಶೀರ್ವಾದ ಮಾಡಿದರು.

ನಾನು ಹೋಗುತ್ತಾಬರುತ್ತಾ ಜನರ ಆನಂದವನ್ನು ನೋಡಿ, ಅವರು ತಿಂಗಳುಗಳಿಂದ ಎದುರು ನೋಡುವ, ತಯ್ಯಾರಿ ನಡೆಸುವ ಪರಿ ಕಂಡು ಆಶ್ಚರ್ಯಪಡುವುದೇ ಆಗಿದೆ. ಒಂದು ಕಡೆ ಅಬ್ಬಬ್ಬಾ ಏನೀ ಪರಿ ಖರ್ಚು, ಈ ಪರಿ ಹಣದ ಚೆಲ್ಲಾಟ ಎಂದೆನಿಸುತ್ತದೆ. ಪ್ರತಿಯೊಂದನ್ನು ಭಾರಿ ಬೆಲೆಗೆ ಮಾರುತ್ತಿರುವ ವ್ಯವಹಾರದ ಮಂದಿಯ ಮಾರ್ಕೆಟಿಂಗ್ ಕುಶಲತೆಗೆ ಭೋ ಪರಾಕ್ ಎನ್ನಬೇಕು; ಕ್ರಿಸ್ಮಸ್ ಎಂದರೆ ಬೇಕಾದಷ್ಟು ಹಣ ಮಾಡಿಕೊಳ್ಳುವ ಒಂದು ಷಡ್ಯಂತ್ರ ಎಂದೆನಿಸಿ ಗೊಣಗುವುದೂ ನಡೆದಿದೆ. ಬರು ಬರುತ್ತಾ ನಮ್ಮ ದೀಪಾವಳಿಯ ಆರ್ಭಟವೂ ಅಷ್ಟೇ ಜೋರಾಗಿದೆಯಲ್ಲಾ!

ಆದರೆ ಇನ್ನೊಂದು ಕಡೆ ನೋಡಿದರೆ ಅಷ್ಟೇ ಮುತುವರ್ಜಿಯಿಂದ ಸಾವಿರಾರು ಜನರು ಕ್ರಿಸ್ಮಸ್ ಗಿವಿಂಗ್ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಹಬ್ಬದ ಸಮಯದಲ್ಲಿ ಬಡವರಿಗೆ, ನಿರ್ಗತಿಕರಿಗೆ, ವಯಸ್ಸಾಗಿ ಓಲ್ಡ್ ಏಜ್ ಹೋಂ ಗಳಲ್ಲಿರುವವರಿಗೆ, ಕಡಿಮೆ ಆದಾಯವಿರುವವರಿಗೆ, ಇಡೀ ದೇಶದ ಎಲ್ಲಾ ಶಾಲೆಗಳ ಮಕ್ಕಳಿಗೆ, ಆಸ್ಪ್ರತ್ರೆಗಳಲ್ಲಿ ಇರುವ ಮಂದಿಗೆ… ಹೀಗೆ ಸಾವಿರಾರು ಸಮುದಾಯ ಗುಂಪುಗಳಿಗೆ ಸಹಾಯ ಮಾಡಲು ಹಣ, ಕಾಣಿಕೆಗಳ ಸಂಗ್ರಹಣೆ ನಡೆದಿದೆ. ಇಂತಹ ಸಮುದಾಯ ಗುಂಪುಗಳಿಗೆ, ಸಂಗ್ರಹದಾರರಿಗೆ ಕೂಡ ಕ್ರಿಸ್ಮಸ್ ವರ್ಷದ ಅತ್ಯಂತ ಮುಖ್ಯವಾದ ಸಮಯ. ಜನರು ಕೊಳ್ಳುವುದರ ಜೊತೆಗೆ ಕೊಡುವುದನ್ನು ಕೂಡ ಅಷ್ಟೇ ಮನಃಪೂರ್ವಕವಾಗಿ ಮಾಡುತ್ತಿದ್ದಾರೆ. ಅದನ್ನು ಮೆಚ್ಚಬೇಕು.

ಪ್ರಪಂಚದ ಅನೇಕ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬದ ಅಲಂಕಾರಿಕ ಮರ, ವಿವಿಧ ಬಗೆಯ ವಸ್ತುಗಳ, ತಿಂಡಿತಿನಿಸುಗಳ ಮಾರಾಟದ ವ್ಯವಹಾರ ಜೋರಾಗಿದೆ. ಬೆಂಗಳೂರಿನ ಮಾಲ್ ಗಳಲ್ಲಿ ಇಟ್ಟಿರುವ ಬೃಹದಾಕಾರ ಅಲಂಕೃತ ಮರಗಳ ಚಿತ್ರ ನೋಡಿದಾಗ ಅರೆ ಇದೇ ತದ್ರೂಪ್ ಮರ, ಅಲಂಕಾರಗಳು, ಮಾಲ್ ನ ಓಣಿ, ಅದೇ ವಿದೇಶಿ ಹೆಸರಿನ ಅಂಗಡಿ ಈ ಇಂಗ್ಲೆಂಡಿನಲ್ಲೂ, ಆ ಅಸ್ಟ್ರೆಲಿಯಾದಲ್ಲೂ ಇದೆಯಲ್ಲಾ ಅನ್ನಿಸುತ್ತದೆ. ಸಾರಾಸಾಗಟ್ಟು ನಡೆದಿರುವ ಜಾಗತೀಕರಣದ ಪರಿಣಾಮಗಳ ನಿಜ ಆಗ ಮತ್ತಷ್ಟು ಮನವರಿಕೆಯಾಗುತ್ತದೆ. ಹಣ ಉಳ್ಳವರ, ಇಲ್ಲದಿರುವವರ ಕನಸುಗಳ ಸಾಮ್ರಾಜ್ಯದ ನಿಜ ಏನು ಎಂಬ ಯಕ್ಷಪ್ರಶ್ನೆ ಏಳುತ್ತದೆ. ಕೊಳ್ಳುಬಕ ಸಂಸ್ಕೃತಿಯನ್ನು ಉಂಟು ಮಾಡಿರುವ ನಮ್ಮದೇ ಪರಸ್ಥಿತಿಯ ಬಗ್ಗೆ ಬೇಸರವೂ ಆಗುತ್ತದೆ. ಸರಳತೆ ಸಂಭ್ರಮಗಳು ತುಂಬಿದ್ದ ನಮ್ಮ ಬಾಲ್ಯದ ಹಬ್ಬಗಳ ಜಾಗವನ್ನು ಆಕ್ರಮಿಸಿಕೊಂಡಿರುವ ಈಗಿನ ವಸ್ತುಗಳು, ಆಟ ಸಾಮಗ್ರಿಗಳು ಹಬ್ಬಗಳು ತರುವ ಆನಂದವನ್ನು ಕುಗ್ಗಿಸುತ್ತಿವೆಯೇನೋ ಎಂಬ ಭಾವನೆ. ಈ ಕ್ರಿಸ್ಮಸ್ ಹಬ್ಬ ನೀಡುವ “ನಿನಗಾದಷ್ಟು ದಾನ ಮಾಡು, ದೊಡ್ಡ ಹೃದಯದಿಂದ ಕೊಡು, ನೀಡು” ಎನ್ನುವ ಸಂದೇಶವನ್ನು ಮರೆಯದಿರೋಣ.

ನಮ್ಮ ಮಕ್ಕಳು ಹಬ್ಬದ ದಿನ ಚಿಕ್ಕಪ್ಪನ ಮನೆಗೆ ಹೋಗಿ ಅಲ್ಲಿ ಬಂದು ಸೇರುವ ಮತ್ತಿತರ ನೆಂಟರಿಷ್ಟರ ಜೊತೆ ಸಂತೋಷದಿಂದ ಕಳೆಯುವ ಸಮಯಕ್ಕೆ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಆಸ್ಟ್ರೇಲಿಯದಲ್ಲಿದ್ದಾಗ ಶಾಲೆಯಲ್ಲಿ ಆಚರಿಸಿದ್ದ ತಮ್ಮ ಹುಟ್ಟಿದ ಹಬ್ಬ ಮತ್ತು ಕ್ರಿಸ್ಮಸ್ ಗಳನ್ನು ಇಂಗ್ಲೆಂಡ್ ನಲ್ಲಿ ಕುಟುಂಬದವರೊಡನೆ ಆಚರಿಸುತ್ತಿರುವ ಮಕ್ಕಳಿಬ್ಬರ ಮುಖ ಅರಳಿದ ನೈದಿಲೆ.

ಕ್ರಿಸ್ಮಸ್ ಎಂದರೆ ನಮ್ಮ ಕುಟುಂಬ, ಬಂಧುಮಿತ್ರರ ಒಡನಾಟ, ಎಲ್ಲರೂ ಸೇರಿ ಪರಸ್ಪರ ಆತ್ಮೀಯತೆಯಿಂದ ಸೌಹಾರ್ದತೆ, ಪ್ರೀತಿ, ವಿಶ್ವಾಸವನ್ನು ಹಂಚಿಕೊಳ್ಳುವ ಸಮಯ ಎನ್ನುವುದು ಮನದಟ್ಟು ಆಗುತ್ತಿದೆ. ದೇಶ, ಸಮಾಜ, ಸಂಸ್ಕೃತಿ ಬೇರೆಯಾದರೇನಂತೆ – ಹಬ್ಬಗಳಲ್ಲಿ ಅಡಕವಾಗಿರುವ ಕುಟುಂಬ, ಸಾಂಘಿಕ ಮೌಲ್ಯಗಳನ್ನು ನಾವು ಮತ್ತಷ್ಟು ಗುರ್ತಿಸಬೇಕು, ಕಾಪಿಟ್ಟು ಜೋಪಾನ ಮಾಡಬೇಕು ಎನ್ನಿಸುತ್ತದೆ. ಈ ಮೌಲ್ಯಗಳೇ ಅಲ್ಲವೇ ನಮ್ಮನ್ನು ಕೈ ಹಿಡಿದು ನಡೆಸುತ್ತಿರುವುದು, ಪೀಳಿಗೆಯಿಂದ ಪೀಳಿಗೆಗೆ ದಾರಿದೀಪವಾಗಿರುವುದು.

ಎಲ್ಲರಿಗೂ ಕ್ರಿಸ್ಮಸ್ ಸಮಯದ ಶುಭ ಹಾರೈಕೆಗಳು.

                                                                                               ವಿನತೆ ಶರ್ಮ