ದಾಕ್ಷಾಯಿಣಿ ಇಂಗ್ಲಂಡಿನ ಉತ್ತರ ಭಾಗದಲ್ಲಿ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅನಿವಾಸಿಯ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರು. ಈ ಕವನವನ್ನು ಅಕ್ಟೋಬರ್ ತಿಂಗಳಿನಲ್ಲಿ ನಡೆದ ದೀಪಾವಳಿ ಕವಿಗೋಷ್ಠಿಯಲ್ಲಿ ಡಾ. ವೆಂಕಟೇಶಮೂರ್ತಿಯವರ ಸಮ್ಮುಖದಲ್ಲಿ ಅವರು ಸಾದರ ಪಡಿಸಿದ್ದರು. ಅನಿವಾಸಿಗಳ ಮನದಲ್ಲಿ ಸ್ವದೇಶ-ಸದ್ಯ ನೆಲೆಸಿರುವ ದೇಶಗಳ ಮಧ್ಯದ ಭಿನ್ನತೆ, ಅನುಪಮತೆಗಳ ಮಜ್ಜಿಗೆ ಕಡೆದು, ಬೆಣ್ಣೆಯಂತೆ ಹಿತವಾದ ತಾತ್ಪರ್ಯವನ್ನು ಉಣಬಡಿಸಿದ್ದಾರೆ.
ಇಂಡಿಯಾ ಅಥವಾ ಇಂಗ್ಲೆಂಡ್
ನಿರಂತರ ಹೋರಾಟ ಮನದಲ್ಲಿ,
ಹೃದಯಕ್ಕೆ ಬೇಕು ಇಂಗ್ಲೆಂಡಿನ ತಂಪು,
ಮನಸ್ಸಿಗೆ ಬೇಕು ತಾಯ್ನಾಡಿನ ಸೊಂಪು,
ಅಲ್ಲಿನ ಗಲಾಟ ಗದ್ದಲ ಕಿವಿಗೆ ಕರ್ಕಷ.
ಇಲ್ಲಿನ ನಿಃಶಬ್ದವೂ ಬೇಸರ, ನೀರಸ
ಪ್ರಶಾಂತ ಜೀವನ, ಪರಿಣಿತಿಗೆ ಆಹ್ವಾನವಿಲ್ಲಿ,
ಕಲಕಲದ ಕಿತಾಪತಿಯೂ ಬೇಕು ಜೀವನದಲ್ಲಿ.
ಬರ್ಗರ್, ಬನ್, ಬ್ರೆಡ್, ತಿಂದು ಬೋರು,
ಮಸಾಲೆದೋಸೆ ಜಾಸ್ತಿಯಾದರೂ ದೇಹಕ್ಕೆ ತಕರಾರು
ಎಲ್ಲವೂ ಬೇಕು ಅದರದೆ ಪರಿಮಿತಿಯಲ್ಲಿ,
ಈ ಸಮಸ್ಯೆಗೆ ಪರಿಹಾರವೆಲ್ಲಿ?
ತ್ರಿಶಂಕು ಸಹ ತರಲಾರ ಉತ್ತರ ನಮ್ಮ ಇಬ್ಬದ
ನಾವೇ ತರಬೇಕು ಶಾಂತಿ, ಸಂತೋಷ ನಮ್ಮ ಮನಸ್ಸಿಗೆ.
-ದಾಕ್ಷಾಯಿಣಿ ಗೌಡ