ರಹಸ್ಯಗಳ ಗೂಡು ಬ್ರಾಡ್ಸ್ ವರ್ತ್ -ಭಾಗ 1 

ಐತಿಹಾಸಿಕವಾಗಿ ಯು.ಕೆ ಅಥವಾ ಯುನೈಟೆಡ್  ಕಿಂಗ್ಡಮ್ ಅದರ ಹೆಸರು ಸೂಚಿಸುವಂತೆ ರಾಜ ಮನೆತನಗಳ ಒಕ್ಕೊಟ ಎನ್ನಬಹುದು. ಈ ರಾಜಮನೆತನಗಳ ಇತಿಹಾಸವನ್ನು ಪರಿಶೀಲಿಸಿದಾಗ ಅಲ್ಲಿ ಎಲಿಜಬೀತನ್, ಜಾರ್ಜಿಯನ್, ವಿಕ್ಟೋರಿಯನ್ ಮತ್ತು ಎಡ್ವರ್ಡಿಯನ್ ಕಾಲ ಘಟ್ಟಗಳು ಕಂಡುಬರುತ್ತವೆ. ಈ ಕಾಲಘಟ್ಟಗಳಲ್ಲಿ ವಿಕ್ಟೋರಿಯನ್ ಸಮಯ ಅತ್ಯಂತ ಮಹತ್ವವಾದದ್ದು. ಅಂದು ಸಾಮಾಜಿಕವಾಗಿ, ರಾಜಕೀಯ ಕ್ಷೇತ್ರದಲ್ಲಿ, ಸಾಹಿತ್ಯ, ಕಲೆ, ವಿಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಮುನ್ನಡೆಗಳು ಸಂಭವಿಸಿದವು. ಜಾರ್ಜಿಯನ್ ಕಾಲಘಟ್ಟದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಪ್ರಪಂಚದ ದಕ್ಷಿಣ ಮತ್ತು ಪೂರ್ವ ನೆಲಗಳಲ್ಲಿ ತನ್ನ  ಪ್ರಭುತ್ವವನ್ನು ಸ್ಥಾಪಿಸಿ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವುದಲ್ಲದೆ ಅಲ್ಲಿಯ ಸಂಪತ್ತನ್ನು ತಮ್ಮದಾಗಿಸಿಕೊಂಡು ಶ್ರೀಮಂತಗೊಂಡಿತು. ಅದೇ ಸಮಯದಲ್ಲಿ ಹೇಯ ಕೃತ್ಯವಾದ ಗುಲಾಮಗಿರಿ ಮತ್ತು ಇತರ ವ್ಯಾಪಾರಗಳು ಕುದುರಿ ದಲ್ಲಾಳಿಗಳು ಶ್ರೀಮಂತರಾದರು. ಆರ್ಥಿಕವಾಗಿ ಇರುವವರ ಮತ್ತು ಇಲ್ಲದವರ ನಡುವೆ  ಕಂದರಗಳು ಮೂಡಿತು. ರಾಜರು, ಸಾಮಂತರು, ಶ್ರೀಮಂತರು ಇಂಗ್ಲೆಂಡಿನಲ್ಲಿ ಭವ್ಯ ಬಂಗಲೆಗಳನ್ನು ಕಟ್ಟಿಕೊಂಡು ಮೇಲಿನ ಹಂತಗಳಲ್ಲಿ ತಾವು ವೈಭವದ ಬದುಕನ್ನು ಅನುಭವಿಸುತ್ತ ವಾಸಿಸುತ್ತಿದ್ದರೇ, ಅದೇ ಮನೆಗಳಲ್ಲಿ ಬಡವರು ತಮ್ಮ ಪ್ರಭುಗಳ  ಸೇವೆಗೈಯುತ್ತ ಕೆಳಹಂತದಲ್ಲಿ ಸಾಧಾರಣವಾಗಿ ಬದುಕುತ್ತಿದ್ದರು. ಸಮಾಜದಲ್ಲಿ ಹೀಗೆ ಅಸಮತೆ ಇದ್ದು ಜನ ಅದನ್ನು ಒಪ್ಪಿಕೊಂಡು ಬದುಕುತ್ತಿದ್ದರು.  ವಿಕ್ಟೋರಿಯನ್ ಕಾಲಘಟ್ಟದಲ್ಲಿ ರಾಯಲ್ ಹಾರ್ಟಿಕಲ್ಚರಲ್ ಸಂಸ್ಥೆ ಹುಟ್ಟಿಕೊಂಡು ಅದು ಈ ಶ್ರೀಮಂತರ ಮನೆಗಳ ಹೂದೋಟದ ವಿನ್ಯಾಸಕ್ಕೆ ಹೊಸ ಆಲೋಚನೆಗಳನ್ನು, ಸಾಧ್ಯತೆಗಳನ್ನು ಒದಗಿಸಿತು. ಹಳೆ ಮನೆಗಳನ್ನು ಕೆಡವಿ ನೂತನವಾದ ಕಟ್ಟಡಗಳು, ಮತ್ತು ಅದರ ಸುತ್ತಣ ನೂರಾರು ಎಕರೆ ಪ್ರದೇಶಗಳಲ್ಲಿ ಹಸಿರು ಹಾಸು, ಹಲವು ಜಾತಿಯ ಮರಗಳು, ಸರೋವರಗಳು, ಸಂದರ ಅಲಂಕೃತ ಹೂದೋಟಗಳು, ಶಿಲ್ಪಾಕೃತಿಗಳು, ಜಿಂಕೆಗಳು, ನವಿಲುಗಳು ಸೇರಿಕೊಂಡವು. ಈ ಅರಮನೆಗಳು ಅನುವಂಶೀಯವಾಗಿ ಮುಂದಿನ ಪೀಳಿಗೆಗಳಿಗೆ ಹಸ್ತಾಂತರಗೊಂಡವು. ಕಾಲಕ್ರಮೇಣ ಈ ಭವ್ಯವಾದ ಮನೆಗಳನ್ನು ಸುಸ್ಥಿತಿಯಲ್ಲಿ ಇಡಲು ಬೇಕಾದ ಹಣ, ಜನಬಲ ಇವುಗಳ ಕೊರತೆಯಿಂದಾಗಿ ಈ ಕಟ್ಟಡಗಳು ಶಿಥಿಲಗೊಳ್ಳಲು ಶುರುವಾದವು. ಈ ಭವ್ಯವಾದ ಮನೆಗಳನ್ನು ಉಳಿಸಿಕೊಳ್ಳಲು ಅವುಗಳನ್ನು  ದತ್ತಿ ಸಂಸ್ಥೆಗೆ ಮಾರಿಕೊಳ್ಳುವುದು ಅನಿವಾರ್ಯವಾಯಿತು. ಇಪ್ಪತನೆ ಶತಮಾನದಲ್ಲಿ ಹಲವಾರು ಸರ್ಕಾರದ ಹೊರಗಿರುವ ಸಂಘಟನೆಗಳಾದ ನ್ಯಾಷನಲ್ ಟ್ರಸ್ಟ್, ಇಂಗ್ಲಿಷ್ ಹೆರಿಟೇಜ್ ಸಂಸ್ಥೆಗಳು ಈ ಕಟ್ಟಡಗಳನ್ನು ಮತ್ತು ವಿಸ್ತಾರವಾದ ತೋಟಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸಿ ಸಾರ್ವಜನಿಕರು ಹಣ ಕೊಟ್ಟು ವೀಕ್ಷಿಸುವ ಒಂದು ವ್ಯಾಪಾರವಾಗಿ ಮಾರ್ಪಾಟು ಮಾಡಬೇಕಾಯಿತು. ಈ ವ್ಯವಸ್ಥೆ ವ್ಯಾವಹಾರಿಕ ದೃಷ್ಟಿಯಿಂದ ಲಾಭದಾಯಕದವಾದ ಆಯೋಜನೆ ಎನ್ನಬಹುದು. ಈ ರೀತಿಯ ನೂರಾರು ಭವ್ಯ ಮನೆಗಳು ಯು.ಕೆ.ಯ ಹಲವಾರು ಪ್ರದೇಶಗಳಲ್ಲಿ ಕಟ್ಟಲಾಗಿದ್ದು ಈಗ ಅವು ಸ್ಥಳೀಯ ಪ್ರೇಕ್ಷಣೀಯ ತಾಣವಾಗಿವೆ. ಇಂತಹ ಒಂದು ತಾಣವಾದ ಬ್ರಾಡ್ಸ್ ವರ್ತ್ ಹಾಲ್ ಕುರಿತು ಡಾ.ದೇಸಾಯಿಯವರು ಲೇಖನವನ್ನು ಬರೆದು ಓದುಗರಿಗೆ ಪರಿಚಯಿಸಿದ್ದಾರೆ. ಈ ಬರಹದಲ್ಲಿ ಬ್ರಾಡ್ಸ್ ವರ್ತ್ ಹಾಲಿನ ಇತಿಹಾಸ, ಮಾಹಿತಿ, ಮತ್ತು ಹೂದೋಟದ ಸುಂದರ ವರ್ಣನೆ ಇವೆ. ಈ ಲೇಖನ ಎರಡು ಕಂತಿನಲ್ಲಿ ಪ್ರಕಟವಾಗುತ್ತಿದೆ. ಎರಡನೇ ಕಂತನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ.
       -ಸಂಪಾದಕ 

ರಹಸ್ಯಗಳ ಗೂಡು ಬ್ರಾಡ್ಸ್ ವರ್ತ್ -ಭಾಗ 1 – ಶ್ರೀವತ್ಸ ದೇಸಾಯಿ

ಈ ಲೇಖನದ ಕೊನೆಯಲ್ಲಿ ವಿಡಿಯೋ ಇದೆ

 ನಾನು ಹೇಳ ಹೊರಟಿದ್ದು ಇಂಗ್ಲೆಂಡಿನ ಯಾರ್ಕ್ ಶೈರಿನಲ್ಲಿರುವ ನಮ್ಮೂರಾದ ಡೋಂಕಾಸ್ಟರ್ ದಲ್ಲಿರುವ ಬ್ರಾಡ್ಸ್ ವರ್ತ್ ಎನ್ನುವ ಹೆಸರಿನ ಕಂಟ್ರಿ ಹೋಂ (Country Home)  ಅಥವಾ ‘ಜಮೀನುದಾರರ ಮನೆ’.  ಆ ಅಕರ್ಷಕ ಮನೆ ಮತ್ತು ಅದರ ಸುತ್ತಲಿನ  ಸ್ಥಿರಾಸ್ತಿ (ಎಸ್ಟೇಟ್) ನಮ್ಮೂರಿನ ಗುಟ್ಟು. Doncaster’s best kept secret ಎಂದು ಕೆಲವರೆಂದರೆ, ಅಮೀರ್ ಖುಸ್ರೋನ ಮಾತುಗಳನ್ನೇ ಬಳಸಿ ’ಗರ್ ಫಿರ್ದೌಸ್ ಬರ್- ರುಯೇ-ಜಮೀ -ಅಸ್ತ್; ಹಮೀ ಅಸ್ತೋ, ಹಮೀ ಅಸ್ತೋ ಹಮೀ ಅಸ್ತ್’ ಅಂತ ಮೂರು ಬಾರಿ ಅದು ”ಭೂಲೋಕದ ಸ್ವರ್ಗ” ಎಂದು ಫೇಸ್ ಬುಕ್ಕಿನಲ್ಲಿ ಉತ್ಪ್ರೇಕ್ಶೆ ಮಾಡಿದವರೂ ಇದ್ದಾರೆ. ಮೇಲೆ ಉಲ್ಲೇಖಿಸಿದ ಆ ವರ್ಣನೆ ಜಹಾಂಗೀರ ಕಂಡ ಕಾಶ್ಮೀರ್ ಅಂತ ಕೆಲವರ ವಾದ. ಅದೇನೇ ಇರಲಿ ಜಹಾಂಗೀರನಂತೆ ಎಂಟು ಸಲ ಅಲ್ಲದಿದ್ದರೂ ಪ್ರತಿಯೊಬ್ಬರೂ ಒಮ್ಮೆಯಾದರೂ ಬಂದು ನೋಡುವಂಥ ಸ್ಥಳ ಅದು. ನಾನಂತೂ ಹಲವಾರು ಸಲ ಭೇಟಿಕೊಟ್ಟಿದ್ದೇನೆ ’ನಮ್ಮೂರ ರತ್ನ’ಕ್ಕೆ. ಮೇ ತಿಂಗಳ ಹೂಬಿಸಿಲಲ್ಲಿ ಹಳದಿ ಹೂಗಳ ಲೆಬರ್ನಂ ಕಮಾನಿನ ಕೆಳಗೆ ನಿಂತು ನೋಡಿದಾಗ ಆ ಹಳದಿ ಕಲ್ಲಿನ ಕಟ್ಟಡ  ಕಂಗೊಳಿಸುವ ಆ ದೃಶ್ಯವೊಂದೇ ಸಾಕು ನೀವು ತೆತ್ತ ಹದಿನಾಲ್ಕು ಪೌಂಡುಗಳ ಪ್ರವೇಶ ದರ ವಸೂಲಾಗಲು! ಬನ್ನಿ, ಈಗ ಈ ಮಹಲಿನ ಕಥೆಯನ್ನು ಅರಿಯೋಣ.

ಈ ಮನೆಯ ಇತಿಹಾಸ ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಆರಂಭವಾಗುತ್ತದೆ. ಎಂಟು ಸಾವಿರ ಎಕರೆಗಳ ಎಸ್ಟೇಟ್ ಮತ್ತು ಅದರ ಮಧ್ಯದ ’ಹಾಲ್’ (ಇಲ್ಲಿ ತಾವು ವಾಸಿಸುವ ಭವ್ಯ ಮನೆಗೆ ’ಹಾಲ್’ ಎಂದು ಕರೆಯುವ ವಾಡಿಕೆ)  ಸ್ವಿಸ್ಸರ್ಲೆಂಡಿನ ಜೆನೀವಾದಲ್ಲಿ ಬ್ಯಾಂಕರ್ ಆಗಿದ್ದ ಪೀಟರ್ ಥೆಲುಸ್ಸನ್ ಎನ್ನುವವನ ಪಾಲಿಗೆ ಬಂದದ್ದು 1790 ರಲ್ಲಿ. ಫ್ರಾನ್ಸ್ ದೇಶದ ಲಿಯಾನ್ ದಿಂದ ಕ್ಯಾಥೊಲಿಕ್ ಫ್ರೆಂಚರ ಮತಾಂಧತೆಗೆ ಗುರಿಯಾಗಿ ಹೊರದೂಡಲ್ಪಟ್ಟು ಇಂಗ್ಲೆಂಡಿಗೆ ವಲಸೆ ಹೋದ ಹ್ಯೂಗೆನೋ (Hugenot) ಎನ್ನುವ ಪ್ರಾಟೆಸ್ಟಂಟ ಕ್ರಿಸ್ತ ಮತದ ಅನುಯಾಯಿಗಳ ಮನೆತನದಲ್ಲಿ ಹುಟ್ಟಿದ ಆತನ ಕುಟುಂಬ ಈ ದೇಶಕ್ಕೆ ಬಂದು ನೆಲೆಸಿ ಶ್ರೀಮಂತರಾದರು. ಆ ಶ್ರೀಮಂತಿಕೆಯ ಹಿಂದಿನ ರಹಸ್ಯವನ್ನು ಮುಂದಿನ ಕಂತಿನಲ್ಲಿ ನೋಡುವಾ. ತಾನು ಗಳಿಸಿದ ಸೊತ್ತು ತನ್ನ ತರುವಾಯ ತನ್ನ ವಂಶಜರಿಂದ ಜಾರಿಹೋಗದಿರಲೆಂದು ಆತ ಚತುರತೆಯಿಂದ ಬರೆದ ಚರಿತ್ರಾರ್ಹ ಉಯಿಲಿನ ಪ್ರಕಾರ ಅರ್ಧ ಶತಮಾನದ ನಂತರ ಆತನ ಮೊಮ್ಮಗ ಆಗರ್ಭ ಶ್ರೀಮಂತ ಚಾರ್ಲ್ಸ್ ಥೆಲುಸ್ಸನ್ ಅದರ ವಾರಸುದಾರನಾದ. ಹಳೆಯ ಮನೆಯನ್ನು ಕೆಡವಿಸಿ ಹೊಸದಾಗಿ ಈಗ ನಾವು ನೋಡುವ ಮನೆ ಮತ್ತು  ಅದರ ಸುತ್ತಲಿನ ಅತ್ಯಂತ ಸುಂದರ ತೋಟಗಳನ್ನು ತನ್ನ ಅಂತಸ್ತಿಗೆ ತಕ್ಕಂತೆ ನಿರ್ಮಿಸಿದ. ಅದು ಶ್ರೀಮಂತರ ಆಡುಂಬೊಲವಾಯಿತು. ಆ ನಂತರ ತಲೆತಲಾಂತರವಾಗಿ ಈ ಆನುವಂಶಿಕ ಸೊತ್ತು ಆ ಮನೆತನದಲ್ಲಿ ಉಳಿದವು. ಅದನ್ನು ಬಿಟ್ಟಗಲದೆ ಅದರ ಒಂದು ಕೋಣೆಯಲ್ಲಿ ಮಾತ್ರ ತಾನೊಬ್ಬಳೇ ವಾಸವಾಗಿದ್ದ ಕೊನೆಯ ಮಾಲಕಿ ಸಿಲ್ವಿಯಾ 1988 ರಲ್ಲಿ ತೀರಿಕೊಂಡಾಗ ಆ ಭವ್ಯ ವಿಕ್ಟೋರಿಯನ್ ಮಹಲು ಮತ್ತು ಒಳಗಿನ ಬೆಲೆ ಬಾಳುವ ಸಂಗ್ರಹಗಳು ಅ ಕಾಲಘಟ್ಟದಲ್ಲೇ ಹೆಪ್ಪುಗಟ್ಟಿ ನಿಂತಿದ್ದವು. ಪಾಳು ಬೀಳುತ್ತಿದ್ದ ಸೋರುತ್ತಿದ್ದ ಸೂರು ಮತ್ತು ಧೂಳಿನಿಂದಾವೃತವಾದ ಬೆಲೆಬಾಳುವ ಮಹೋಗನಿ ಪೀಠೋಪಕರಣ, ಸಜ್ಜು-ಸರಂಜಾಮುಗಳು ಬಿಕೋ ಎನ್ನುತ್ತಿದ್ದವು. ಅವಳ ಮಗಳು ಇಂಗ್ಲಿಷ್ ಹೆರಿಟೇಜ್ (English Heritage) ಎನ್ನುವ ಚ್ಯಾರಿಟಿ ಸಂಸ್ಥೆಗೆ ಅದನ್ನು ಕೊಟ್ಟು ಪುನರುಜ್ಜೀವನಗೊಳಿಸಿದ ನಂತರ ಸಾವಿರಾರು ಪ್ರೇಕ್ಷಕರನ್ನು ವರ್ಷವಿಡೀ ಆಕರ್ಷಿಸುತ್ತಿದೆ. ಕೋವಿಡ್ ನಂತರದ ಈ ವರ್ಷದಲ್ಲಿ ಮರಳಿ ಬಂದ ಜನ ಸಂದಣಿ ಅದರ ಜನಪ್ರಿಯತೆಗೆ ಸಾಕ್ಷಿ.

ನವನವೋನ್ಮೇಷಶಾಲಿನಿ ಬ್ರಾಡ್ಸ್ ವರ್ತ್

ಕಳೆದ ನಾಲ್ಕು ದಶಕಗಳಲ್ಲಿ ಅಲ್ಲಿಗೆ ನಾನು ಅನೇಕ ಸಲ ಭೆಟ್ಟಿಕೊಟ್ಟಿದ್ದೇನೆ.  15 ಏಕರೆ ಗಾರ್ಡನ್ ವಿವಿಧ ಋತುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನವವವಧುವಿನಂತೆ ಸಿಂಗರಿಸಿಕೊಳ್ಳುತ್ತದೆ. ಅದಕ್ಕೆ ಅದರಲ್ಲಿಯ landscaped gardens ಕಾರಣ. ಭೂಮಿಯ ಏರಿಳಿತಕ್ಕನುಗುಣವಾಗಿ ನಿರ್ಮಿಸಿದ ಹೂವಿನ ತೋಟಗಳು, ಹೂವಿನ ಬಳ್ಳಿಯ ಮತ್ತು ಕಲ್ಲಿನ ಕಮಾನುಗಳು, ಉದ್ದನ್ನ ಗುಲಾಬಿಗಳ ಬಳ್ಳಿಮನೆ (pergola), ಧನುರ್ ವಿದ್ಯೆ (archery)ಗಾಗಿಯೇ ನಿರ್ಮಿಸಿದ ಟಾರ್ಗೆಟ್ ಹೌಸ್, ಹಸಿರು ಮಲ್ಮಲ್ ನಂತೆ ’ಕ್ರೋಕೆ’ ಆಟಕ್ಕಾಗಿ ನಿರ್ಮಿಸಿದ ಹುಲ್ಲಿನ ಮೈದಾನ, ಬೇಲಿಗುಂಟ ವಿವಿಧ ಭಂಗಿಗಳಲ್ಲಿ ಮುದ್ದಿನ ಪ್ರಾಣಿ, ಪಕ್ಷಿಗಳೊಂದಿಗೆ ಅಲ್ಲಲ್ಲಿ ನಿಂತ ಯುವತಿಯರ ಬಿಳಿ ಕಲ್ಲಿನ ಶಿಲ್ಪಗಳು; ಇವೆಲ್ಲ ಒಂದು ತರಹದ ’ರಾಜವೈಭವವನ್ನು’’ ಸಾರುತ್ತವೆ. 19ನೆಯ ಶತಮಾನದ ಮಧ್ಯದಲ್ಲಿ  ಒಂದೇ ದಶಕದಲ್ಲಿ ಈ ಮನೆ ಮತ್ತು ಸುತ್ತಲಿನ ತೋಟವನ್ನು ನಿರ್ಮಿಸಿದ ಕೀರ್ತಿ ಆ ಬ್ಯಾಂಕರ್ ನ ಮೊಮ್ಮಗ ಚಾರ್ಲ್ಸ್ ಸಾಬಿನ್ ಆಗಸ್ಟಸ್ ಥೆಲುಸ್ಸನ್ ಗೆ ಸಲ್ಲುತ್ತದೆ. ತನ್ನ ಕುಟುಂಬದ ವಾಸಸ್ಥಾನವಾದ ಮೂರಂತಸ್ತಿನ ’ಹಾಲ್’ ಅಂದರೆ ಮಹಲನ್ನು ಮ್ಯಾಗ್ನೀಸಿಯನ್ ಸುಣ್ಣದ ಕಲ್ಲಿನಿಂದ ಕಟ್ಟಿಸಿದ. ಅದರ ಸುತ್ತಲೂ ವಿಶಾಲವಾದ ತೋಟ. ಮೇ ತಿಂಗಳಿನಲ್ಲಿ ಲೆಬರ್ನಮ್ (ಕುಕ್ಕೆ) ಹೂ ಮರದ ಕಮಾನಿನ ತೋರಣದಲ್ಲಿ ಹಳದಿ ಹೂಗಳು ಜೋತು ಬಿದ್ದಾಗ ತೆಗೆದ ಫೋಟೋಗಳನ್ನು ಪ್ರತಿವರ್ಷವೂ ಫೇಸ್ ಬುಕ್ ತುಂಬ ನೋಡ ಬಹುದು. ವಸಂತಋತುವಿನಲ್ಲಿ ಉದ್ಯಾನದ ಉದ್ದಗಲಕ್ಕೂ ರಚಿಸಿದ ಪಾತಿಗಳ ತುಂಬ ಬಣ್ಣ ಬಣ್ಣದ ಹೂಗಳು. ಅದನ್ನು ನೋಡಲು ಜನ ಹಿಂಡು ಹಿಂಡಾಗಿ ಬಂದು ಸೇರುತ್ತಾರೆ. ಅವುಗಳನ್ನು ದಾಟಿ ಮುಂದೆ ಹೋದರೆ ಮೆಟ್ಟಲುಗಳ ಇಕ್ಕೆಲಗಳಲ್ಲಿ ಕಿರುಕಂಟಿ ಫರ್ನ್ ಪ್ರಭೇದಗಳಿಂದ ತುಂಬಿದ ಗ್ರೋಟೋ (grotto). ಕೆಲವರಿಗೆ ಜೂನ್ ತಿಂಗಳಿನಲ್ಲಿ ಸುಗಂಧ ಬೀರುವ ಗುಲಾಬಿಗಳ ಛಾವಣಿಯಡಿ ನಡೆದಾಡಲು ಬಲು ಖುಶಿ. ಅದರ ಇನ್ನೊಂದು ತುದಿಯಲ್ಲಿ ಎತ್ತರದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿದ ಪುಟ್ಟ ಸಮ್ಮರ್ ಹೌಸ್ ದಲ್ಲಿ ನಿಂತು ಪುನರ್ನಿರ್ಮಿಸಿದ ತೋಟ ಮತ್ತು ಮಹಲಿನ ಗಾಂಭೀರ್ಯ ಸೌಂದರ್ಯವನ್ನು ಸವಿಯಬಹುದಾಗಿದೆ.

ಬ್ರಾಡ್ಸ್ ವರ್ತ್ ಹಾಲ್

ವಿಕ್ಟೋರಿಯಾ ಕಾಲದ ಒಬ್ಬ ಸಿರಿವಂತ ”ಜಮೀನ್ದಾರಿ’’ ಮನೆತನದ ವೈಭವವನ್ನು ನೋಡಬೇಕೆಂದರೆ ಇಂಥದೊಂದು ಭವ್ಯ ಮನೆಯಯೊಳಗೆ ಕಾಲಿಡಬೇಕು. ಅದು ಸಣ್ಣದೊಂದು ಗುಡ್ಡದ ಮೇಲೆ ನಿಂತಿದೆ. ಹಸಿರುಟೊಂಗೆಗಳನ್ನು ಕೈಚಾಚಿ ಕನಿಷ್ಠ ಪಕ್ಷ 350 ವಸಂತಗಳನ್ನು ನೋಡಿದ ಲೆಬನೀಸ್ ಸಿಡಾರ್ ಜಾತಿಯ ಮಹಾವೃಕ್ಷ ಅದರದ್ವಾರದಲ್ಲಿ. ಅದನ್ನು ಬಳಸಿದ ಡ್ರೈವ್ ಮೇಲೆ  ಕುದುರೆಗಳ ಸಾರೋಟಿನಲ್ಲಿ ಆರೂಢನಾಗಿ ಬಂದ ’ಸಾಹೇಬ’ನನ್ನು ಪೋರ್ಟಿಕೋದಲ್ಲಿ  ಸ್ವಾಗತಿಸಲು ನಿಂತಿರುತ್ತಿದ್ದ ಅದರ ಮನೆಯಾಳು (footman). ಘನವಾದ ಮಹೋಗನಿ ಬಾಗಿಲನ್ನು ತೆರೆದು ಒಳಗೆ ಹೋದವರನ್ನು ಸ್ವಾಗತಿಸುವ ’ಮೊಗಸಾಲೆಯಲ್ಲಿ ಹಲವಾರು ಇಟಲಿಯ ಅಮೃತಶಿಲೆಯ ಶಿಲ್ಪಗಳು ಕಣ್ಸೆಳೆಯುತ್ತವೆ. ಅವುಗಳಲ್ಲಿ ಒಂದೇ ಕಲ್ಲಿನಲ್ಲಿ ಶಿಲ್ಪಿ ಪಿಯಟ್ರೋ ಮ್ಯಾಗ್ನಿ ಕೊರೆದ ”ಉಯ್ಯಾಲೆಯಾಡುತ್ತಿರುವ ಕುವರಿ” ಯ ಶಿಲ್ಪ ಅತ್ಯಂತ ಆಕರ್ಷಕ. ಅದರಾಚೆಗೆ ಮೇಲ್ಮನೆಗೆ ಹೋಗುವ ಮೆಟ್ಟಿಲುಗಳು ಕಾಣುತ್ತವೆ. ಕೆಳಮನೆಯ ಕೋಣೆಗಳನ್ನೆಲ್ಲ ಎತ್ತಿ ಹಿಡಿದ ಸ್ಕಾಗ್ಲಿಯೊ ಎನ್ನುವ ಇಮಿಟೇಷನ್ ಮಾರ್ಬಲ್ ’ಶಿಲಾ” ಸ್ತಂಭಗಳು; ನೆಲದ ಮೇಲೆ ಮೆತ್ತನೆಯ ರತ್ನಗಂಬಳಿ, ಅನೇಕ ಶಿಲ್ಪಗಳು; 400ಕ್ಕೂಹೆಚ್ಚಿನ ಮರದ ಫರ್ನಿಚರ್ಗಳು ’ಮಹೋಗನಿ ಗಾನ’ದ ನಿಟ್ಟುಸಿರನ್ನು ಬಿಡುತ್ತವೆ (ಮುಂದಿನ ಕಂತಿನಲ್ಲಿ ಓದಿ). ಅದೇ ಮರದಿಂದ ಕೆತ್ತಿದ ಡೈನಿಂಗ್ ಟೇಬಲ್, ಕುರ್ಚಿ, ಊಟದ ಮನೆಯ ಪೀಠಗಳು, ದಿವಾನ ಖಾನೆಯಲ್ಲಿ ಓಟೋಮನ್ ಆಸನಗಳು, ಅವಕ್ಕೆ ’ಚಿನ್ಜ್’ ಹೊದಿಕೆಗಳು; ಗೋಡೆಯಮೇಲಿನ ಬೆಲೆಬಾಳುವ ಚಿತ್ರಗಳು; ಅವುಗಳಲ್ಲಿ ಹಲವಾರು ಮಾಲಕರ ರೇಸ್ ಕುದುರೆಗಳ ಚಿತ್ರಗಳು ಬಿಲಿಯರ್ಡ್ ರೂಮಿನ ಗೋಡೆಗಳ ಮೇಲೆ; ಅಮೂಲ್ಯ ವಸ್ತುಸಂಗ್ರಹಗಳು; ಬೆಳ್ಳಿ ಪಾರಿತೋಷಕಗಳು (Trophies) ವಿವಿಧ ಕೋಣೆಗಳನ್ನು ತುಂಬಿವೆ.  ಈ ಮನೆ ಮೂರು ಅಂತಸ್ತಿನಲ್ಲಿದ್ದರೂ ಪ್ರಮುಖವಾಗಿ “Upstairs and Downstairs Life Style” ಅನ್ನು ಪ್ರತಿನಿಧಿಸುತ್ತದೆ. ಅದೊಂದು ಪ್ರಖ್ಯಾತ ಟೆಲಿವಿಷನ್ ಸರಣಿಯ ಶೀರ್ಷಿಕೆಯಾಗಿತ್ತು ಸಹ. ಮೇಲ್ಮನೆಗಳಲ್ಲಿ ಶ್ರೀಮಂತರ ವಾಸ. ಅಂದರೆ ನೆಲಮಾಳಿಗೆಯಲ್ಲಿ ಬಟ್ಲರ್ ಮತ್ತು ಸೇವಕರು. ಕೆಳಮನೆಯಲ್ಲಿ(basement) ವಿಶಾಲವಾದ ಕಿಚನ್. ಅದರಾಚೆಗೆ ಸೇವಕ ಸೇವಕಿಯರ ವಾಸಸ್ಥಳ, ವಿಶ್ರಾಂತಿ ಕೋಣೆಗಳು. 1990ರಲ್ಲಿ  ಇದನ್ನು ಕೊಂಡು ನಿರ್ವಹಿಸುತ್ತಿರುವ ಇಂಗ್ಲಿಷ್ ಹೆರಿಟೇಜ್ ಸಂಸ್ಥೆ ಸೋರುತ್ತಿದ್ದ ಸೂರುಗಳಿಗೆ ಆವಶ್ಯಕ ದುರಸ್ತಿ-ರಿಪೇರು ಮಾಡಿದ ನಂತರ ಕೊನೆಯ ಮಾಲಕರು ಬಿಟ್ಟ ಸ್ಥಿತಿಯಲ್ಲೇ ಮನೆಯನ್ನು ಇಟ್ಟಿದ್ದಾರೆ. ಗೋಡೆಯ ಮೇಲಿನ ವಾಲ್ ಪೇಪರುಗಳು ಅಲ್ಲಲ್ಲಿ ಮಾಸಿದ್ದು ಕಾಣಿಸುತ್ತದೆ. ಆದರೆ ಕೆಂಪು-ಕಂದು ಬಣ್ಣದ ಪಾಲಿಶಿನಿಂದ ಮಿರಿ ಮಿರಿ ಮಿಂಚುವ ಮಹೋಗನಿ ಬಾಗಿಲು ಟೇಬಲ್ಗಳು ಮಾತ್ರ ಕಳೆದ ವರ್ಷವಷ್ಟೇ ತಂದು ಕಟ್ಟಿದಂತೆ ಭ್ರಮೆ ಹುಟ್ಟಿಸುತ್ತವೆ.

ಮೋಡಿಮಾಡಿದ ರಾತ್ರಿಯ ತೋಟ (Enchanted Garden)

ಇದು ಬ್ರಾಡ್ಸ್ವರ್ತ್ ತೋಟದ ಶರದೃತುವಿನ ವಾರ್ಷಿಕ ಆಕರ್ಷಣೆಯಾಗಿತ್ತು. ಅಕ್ಟೋಬರ್ ತಿಂಗಳ ಎರಡು ವಾರ ರಾತ್ರಿ ಸಮಯದಲ್ಲಿ ತೋಟದ ತುಂಬೆಲ್ಲ ವಿವಿಧ ಬಣ್ಣದ ವಿದ್ಯುತ್ ಬಲ್ಬುಗಳಿಂದ  ದೀಪಾಲಂಕಾರ ಮಾಡಿರುತ್ತಾರೆ! ಅದೆಷ್ಟೋ ಸಲ ಹಗಲಿನಲ್ಲಿ ಆ ತೋಟದ ಸೊಬಗನ್ನು ಕಣ್ಣಾರೆ ಕಂಡಿದ್ದರೂ ಆ ಸಮಯದಲ್ಲಿ ಅದೊಂದು ಇಂದ್ರನ ನಂದನವನವಾಗಿ ಮಾರ್ಪಟ್ಟಿರುತ್ತದೆ. ಆ ನೋಟವನ್ನು ಸವಿಯಲು ಮೊದಲೇ ಸ್ಪೆಶಲ್ ತಿಕೀಟು ಕೊಳ್ಳದಿದ್ದರೆ sold out ಆಗುವ ಸಾದ್ಯತೆ ಹೆಚ್ಚು. ಈಗ ಕೋವಿಡ್ನಿಂದಾಗಿ  ಈ ವಾರ್ಷಿಕ ಸಂಭ್ರಮ ನಿಂತು ಹೋಗಿರಬಹುದು. ಇಷ್ಟರಲ್ಲಿ ಇದನ್ನು ಮತ್ತೆ ಪ್ರಾರಂಭವಾಗಲೆಂದು ಆಶಿಸುವೆ.

Animal Cemetery (with painting of Coup in inset)

ಮುದ್ದು ಪ್ರಾಣಿಗಳ ಕಬ್ರಸ್ತಾನ (Animal cemetery)

ಬ್ರಿಟಿಶರಿಗೆ ಸಾಕು ಪ್ರಾಣಿಗಳೆಂದರೆ (pets) ಪಂಚಪ್ರಾಣ. ದೇಶದ ವಿವಿಧ ಕಡೆಗಳಲ್ಲಿ ತಮ್ಮ ಮುದ್ದು ಪ್ರಾಣಿಗಳಿಗಾಗಿಯೇ ಗೋರಿಗಳನ್ನು ಕಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಲಂಡನ್ನಿನ ಹೈಡ್ ಪಾರ್ಕಿನಲ್ಲಿ 300ನಾಯಿಗಳನ್ನು ಹೂತಿದ್ದಾರೆ. ಪ್ರಸಿದ್ಧ ಆಂಗ್ಲ ಕವಿ ಬೈರನ್ ತನ್ನ ಮುದ್ದು ನಾಯಿ ಬೋಟ್ಸ್ ವೇನಿಗೆ ಸಂಗಮರವರಿ ಕಲ್ಲಿನ ಸ್ಮಾರಕವನ್ನು ಕಟ್ಟಿಸಿದ. ಬ್ರಾಡ್ಸ್ವರ್ತ್ ನಲ್ಲಿ ತೀರಿಕೊಂಡ ಮುದ್ದು ಪ್ರಾಣಿಗಳಿಗಾಗಿಯೇ ತೋಟದ ಒಂದು ಮೂಲೆಯಲ್ಲಿ ಸ್ಪೇಶಲ್ ಕಬ್ರಸ್ತಾನವಿದೆ. ಅಲ್ಲಿ ‘ಕೂಪ್’ ಎನ್ನುವ ನಾಯಿಯಿಂದ ಮೊದಲ್ಗೊಂಡು ಪಾಲಿ ಎನ್ನುವ ಗಿಣಿಯ ವರೆಗೆ ಸಾಲಾಗಿ ಮಣ್ಣುಮಾಡಿದ ಹತ್ತಿಪ್ಪತ್ತು ಪ್ರಾಣಿಗಳ ಹೆಸರುಗಳನ್ನು ಗೋರಿಗಳ ಮೇಲೆ ಕಾಣಬಹುದು. ಕೂಪ್ ನ ಪೇಂಟಿಂಗ್ ಸಹ ’ಹಾಲ್’ ನ ಮೊದಲ ಕೋಣೆಯಲ್ಲಿದೆ.  

 ಅವನತಿಯತ್ತ ಸರಿದ ಬ್ರಾಡ್ಸ್ವರ್ತ್

ಇಂಗ್ಲಿಷ್ ಹೆರಿಟೇಜ್ ನವರು 1990ರಲ್ಲಿ ಇದನ್ನು ಕೊಳ್ಳುವ ಮೊದಲು ಒಂದುಕಾಲದಲ್ಲಿ ’ರಾಜವೈಭವ’ದಿಂದ ಮೆರೆದ ಈ ಎಸ್ಟೇಟ್ ಬರಬರುತ್ತ ಪೂರ್ತಿಯಾಗಿ ಅವನತಿಯತ್ತ ಸರಿಯಲಾರಂಭಿಸಿತ್ತು. ಒಂದು ಕಾಲದಲ್ಲಿ ಚಾರ್ಲ್ಸ್ ಥೆಲ್ಲುಸನ್ ಕಾಲದಲ್ಲಿ ಹತ್ತಾರು ಸೇವಕರು, ಅಡಿಗೆಯವರು, ಆಳುಗಳಿಂದ ಮತ್ತು ತೋಟಗಾರರಿಂದ ತುಂಬಿರುತ್ತಿತ್ತು. ಪಕ್ಷಿಗಳ ಶೂಟಿಂಗ್ ಸೀಸನ್ನಿನಲ್ಲಿ ಆತನೇರ್ಪಡಿಸಿದ ಅದ್ದೂರಿ ಪಾರ್ಟಿಗೆಂದು ಬಂದ ಅಂತಸ್ತಿನ ಜನರಲ್ಲಿ ಈತನ ಆತಿಥ್ಯ ಮನೆಮಾತಾಗಿತ್ತು. ಮನೆಯ ಮಾಲೀಕರ ನಡತೆಯಲ್ಲೂ  ಆಢ್ಯತೆ ಇತ್ತು. ತನಗೆ ಇಷ್ಟವಿದ್ದ ರೀತಿಯಲ್ಲಿ ಮಾಂಸವನ್ನು ರೋಸ್ಟ್ ಮಾಡಿರದಿದ್ದರೆ ಅದನ್ನು ಅಸಿಸ್ಟಂಟ್ ಕುಕ್ ಟೇಬಲ್ಲಿನ ಮೇಲಿಟ್ಟು ಸಜ್ಜುಗೊಳಿಸಿ ಬರುವಷ್ಟರಲ್ಲೇ ಆಕೆಯೇ ಹಿಂದೆಯೇ ಆ ಜಾಯಿಂಟು ರವಾನಿಯಾಗಿ ಬಂದು ಬೀಳುತ್ತಿತ್ತು! ಅದರ ಜೊತೆಗೇ ’ಸಾಹೇಬನ’ ಅಬ್ಬರ, ಬೈಗುಳ, ಇತ್ಯಾದಿ. ಕಾಲಕ್ರಮೇಣ ಎಸ್ಟೇಟಿನ ಆಮದು ಕಡಿಮೆಯಾಯಿತು. ಮಾಲಕರ ಸ್ವಾಮಿತ್ಯದಲ್ಲಿದ್ದ ಕಲ್ಲಿದ್ದಲು ಗಣಿಗಳ ಆಮದು ಕುಂಠಿತವಾಯಿತು. ಇಂಗ್ಲಿಷ್ ಕಾಯಿದೆಯ ಪ್ರಕಾರ ತೆತ್ತಬೇಕಾದ ಮರಣ ಸುಂಕ (ಡೆತ್ ಡ್ಯೂಟಿ) ಇಂಥ ಎಲ್ಲ ”ಕಂಟ್ರಿ ಜೆಂಟ್ಸ್” ಗಳಿಗೆ ಮಾರಕವಾಗಿ ಪರಿಣಮಿಸಿತು. ದೊಡ್ಡ ಮನೆಗಳ ಮೇಲ್ಛಾವಣಿಗಳು ಸೋರಿ ರಿಪೇರಿ ಕೆಲಸದ ವೆಚ್ಚ ದುಬಾರಿಯಾಯಿತು. ಚಳಿಗಾಲದಲ್ಲಿ ಇಡೀ ಮನೆಯಯನ್ನು ಕಾಯಿಸುವ ಬದಲು ವಾಸದ ಕೋಣೆಗಳನ್ನಷ್ಟೇ ಬೆಚ್ಚಗಿಡಬೇಕಾದ ಪ್ರಸಂಗ ಬಂತು. ಕೊನೆಯ ಮಾಲಕಿ ಸಿಲ್ವಿಯಾ ಗ್ರಾಂಟ್-ಡಾಲ್ಟನ್ ಒಂಟಿಯಾಗಿ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದಳು. ಪಾಳು ಬೀಳುತ್ತಿದ್ದ ಬ್ರಾಡ್ಸ್ವರ್ತ್ ಹಾಲ್ ಗೆ ಪುನರ್ಜನ್ಮ ಕೊಟ್ಟಿದ್ದು ಇಂಗ್ಲಿಷ್ ಹೆರಿಟೇಜ್ ದತ್ತಿ ಸಂಸ್ಥೆ.

ಭವ್ಯ ದಿವಾನಖಾನೆ

ಈಗ ಬ್ರಾಡ್ಸ್ ವರ್ತ್ ನಲ್ಲಿ  ಬ್ರಿಟಿಷ್ ಬೇಸಿಗೆಯ ಪ್ರತಿ ಆದಿತ್ಯವಾರ ಮಧ್ಯಾಹ್ನ ಹೊರಾಂಗಣದಲ್ಲಿ ಬ್ರಾಸ್ ಬ್ಯಾಂಡ್ ಸಂಗೀತ ಕಚೇರಿ ನಡೆಯುತ್ತಿದೆ. ಪ್ರೇಕ್ಷಕರು ಅದನ್ನು ಕೇಳುತ್ತ ಬಿಸಿಲಿನಲ್ಲಿ ಕುರ್ಚಿಯಲ್ಲಿ ಕುಳಿತು ಮಧ್ಯಾಹ್ನದ ಎರಡೂವರೆಗೆ  ಚಹ ಸೇವಿಸುತ್ತ ಕೇಕ್ ತಿನ್ನುವದು ಈಗ ಕಂಡುಬರುವ ಸರ್ವೇ ಸಾಮಾನ್ಯ ದೃಶ್ಯ. ಇದೇನಾ ಅಮೀರ್ ಖುಸ್ರೋವಿನ ಕನಸಿನ ’ಹಮೀ ಅಸ್ತ, ಹಮೀ ಅಸ್ತ, ಹಮೀ ಅಸ್ತ್? 

ವಿಡಿಯೋ ಮತ್ತು ಎಲ್ಲ ಫೋಟೋಗಳು: ಶ್ರೀವತ್ಸ ದೇಸಾಯಿ

ಮ್ಯಾಗ್ ಪೈಗಳು ಮತ್ತು ಲಕ್ಷ್ಮಣ ರೇಖೆ…

ಓದುಗರೆ, ಈ ವಾರದ ಅನಿವಾಸಿಯಲ್ಲಿ ಎರಡು ಭಿನ್ನವಾದ, ಭಾವನಾತ್ಮಕ ಸಣ್ಣಕತೆಗಳನ್ನು ಓದುವ ಅವಕಾಶ ನಿಮ್ಮದು.
ಈ ಕಥೆಗಳೆರಡೂ ತರುವ ಸಾಹಸದ, ಹೋರಾಟದ ಭಾವಸಂದೇಶ ನಿಜಕ್ಕೂ ಶಕ್ತಿಯುತವಾದದ್ದು. ಈ ವಾರದ ಲೇಖಕರು ಡಾ. ಶ್ರೀವತ್ಸ ದೇಸಾಯಿ ಮತ್ತು ಶ್ರೀಮತಿ ಗೌರಿಪ್ರಸನ್ನ.
ಮ್ಯಾಗ್ ಪೈಗಳು’ ಕತೆಯಲ್ಲಿ ಶ್ರೀವತ್ಸ ದೇಸಾಯಿಯವರು, ವಿಧಿ ಕೆಲವೊಮ್ಮೆ ಜೀವನದಲ್ಲಿ ತ೦ದೊಡ್ಡುವ ಕ್ರೂರ ಸವಾಲುಗಳನ್ನು, ಅವನ್ನು ಎದುರಿಸಿ, ಗೆಲ್ಲುವ/ಸೋಲುವ ಮನುಜನ ಅನಿರತ ಹೋರಾಟ, ಈ ನೋವನ್ನು ಹಂಚಿಕೊಳ್ಳುವ, ಭರಿಸುವ, ಸಂಗಾತಿಯ ಭಾವನೆಗಳನ್ನು, ಈ ಹೋರಾಟ ಮನದಲ್ಲಿ ತುಂಬುವ ಶೂನ್ಯತೆಯನ್ನು, ಮನಮಿಡಿಯುವಂತೆ ಬರೆದಿದ್ದಾರೆ.
ಶ್ರೀಮತಿ ಗೌರಿಪ್ರಸನ್ನ ತಮ್ಮ ಲಕ್ಷ್ಮಣರೇಖೆ’ ಯಲ್ಲಿ ಸೀತೆಯ ಸ್ವಗತದ ಮೂಲಕ ಅಂದಿನ ಮತ್ತು ಇಂದಿನ ಪುರುಷಪ್ರಧಾನ ಸಮಾಜ ಹೆಣ್ಣಿನ ಜೀವನದಲ್ಲಿ, ಪುರುಷ ತನ್ನ ಸ್ವಾರ್ಥಕ್ಕಾಗಿ ಎಳೆದ ಬಹುಬಗೆಯ ರೇಖೆಗಳ ಉಲ್ಲೇಖನದ ಜೊತೆಗೆ, ಈ ರೇಖೆಗಳು ರಚಿಸಿದ ನಿರ್ಭಂಧನಗಳು, ಮಿತಿಗಳು, ಆಕೆಯ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಮೇಲೆ ಶಾಶ್ವತವಾಗಿ ಮಾಡಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಓದಿ ಪ್ರತಿಕ್ರಿಯಿಸಿ – ಸಂ

ಮ್ಯಾಗ್ ಪೈಗಳು

ಕೈಯಲ್ಲೊಂದು ಪುಸ್ತಕವಿದ್ದರೂ ರಶ್ಮಿ ನೆಟ್ಟ ದೃಷ್ಟಿಯಿಂದ ಒಂದೇ ಸಮನೆ ಕಿಡಕಿಯ ಹೊರಗಿನ ಪ್ರೂನಸ್ ಮರದ ಮೇಲಿನ ಮ್ಯಾಗ್ ಪೈಗಳನ್ನೇ ನೋಡುತ್ತಿದ್ದವಳಿಗೆ, ಸುಧೀರ ಅವಳಿಗಾಗಿ ಒಂದು ಲೋಟದಲ್ಲಿ ಬಿಸಿ ಹಾಲು ಮತ್ತು ಆಪ್ಪಲ್ ಹೋಳುಗಳನ್ನು ತಂದು ಬೆಡ್ಡಿನ ಪಕ್ಕದಲ್ಲಿಟ್ಟದ್ದು ಆಕೆಗೆ ಗೊತ್ತೇ ಆದಂತೆ ಕಾಣಲಿಲ್ಲ. “ಬೇಗ ಇದನ್ನು ತಿಂದು ಹಾಲು ಕುಡಿದು ವಿಶ್ರಾಂತಿ ಮಾಡು, ಆ ಹಕ್ಕಿಗಳು ಎಲ್ಲೂ ಹೋಗುವದಿಲ್ಲ,” ಎಂದು ಆಕೆಯ ಗುಳಿಬಿದ್ದ ಕಣ್ಣುಗಳನ್ನು ನೋಡುತ್ತ ಹಣೆಯಮೇಲೆ ತನ್ನ ತುಟಿಗಳನ್ನು ಮೆಲ್ಲನೆ ಒತ್ತಿ ಹೇಳಿದ. ಕ್ಯಾನ್ಸರ್ ಮರುಕಳಿಸಿದಾಗಿನಿಂದ ಅವಳು ಹೆಚ್ಚು ಸಮಯ ದಿಂಬಿಗೆ ಒರಗಿ ಹಾಸಿಗೆಯಿಂದಲೇ ಕಿಡಕಿಯಿಂದ ಮನೆಯ ಹಿಂದಿನ ತೋಟದ ಬೇಲಿಯ ಪಕ್ಕದ ಮರದ ಮೇಲೆ ವಾಸಿಸುತ್ತಿದ್ದ ಆ ಪಕ್ಷಿಗಳ ಜೋಡಿ, ಅವುಗಳ ಲಲ್ಲೆ, ಅವುಗಳ ಮೇಟಿಂಗ್ ಕಾಲ್, ಅದನ್ನೆ ನೋಡುತ್ತಿರುತ್ತಾಳೆ. ಪುಸ್ತಕವನ್ನು ಮಗುಚಿಟ್ಟು ಸುಧೀರನತ್ತ ದೃಷ್ಟಿ ಹೊರಳಿಸಿ, ’ಥಾಂಕ್ಸ್’ ಅಂದು ಹಣ್ಣನ್ನು ತಿನ್ನುತ್ತ, ’ಆ ಜೋಡಿ ಈ ಸಲ ಬಡತಿಯಾದಂತೆ ಮೇಲಿನ ಟೊಂಗೆಗಳಲ್ಲಿ ಗೂಡು ಕಟ್ಟಿದೆ, ನೋಡಿದೆಯಾ?’ ಎಂದು ನಕ್ಕಳು.

Three for Joy

ಕoಬಿಯ ಮೇಲೆ ಕುಳಿತು ಹೊಂಚು ಹಾಕಲು ಹವಣಿಸುತ್ತಿದ್ದ ಕರಿಯ ಬೆಕ್ಕನ್ನು ನೋಡುತ್ತ ಸುಧೀರ ಅಂದ: ‘ಬಡತಿಯಲ್ಲ, ಸೇಫ್ಟಿ; ಸ್ವರಕ್ಷಣೆಗೆ! ಸರಿ ಕತ್ತಲಾಗುತ್ತಿದೆ, ನಿನ್ನ ಓದು ಮುಗಿಸಿ ಮಲಗು ಇನ್ನು.’ ಎಂದು ಪುಸ್ತಕವನ್ನು ತಿರುವಿ ನೋಡಿದ. ತೆರೆದ ಪುಟದಲ್ಲಿ ಓ ಹೆನ್ರಿಯ ’ಕೊನೆಯ ಎಲೆ ‘ ಕಥೆ. ಹೊರಗೆ ಚಳಿಗಾಲ ಪ್ರಾರಂಭವಾಗಿತ್ತು. ಅಕ್ಟೋಬರಿನ ಗಾಳಿ ಜೋರಾದಂತೆ ಇನ್ನು ಕೆಲವು ಎಲೆಗಳು ಆ ಮರದಿಂದ ಉದುರಿದವು. ಸುಧೀರ ಆ ಪುಸ್ತಕದ ಒಂದು ಸಾಲನ್ನು ಜೋರಾಗಿ ಓದಿದ: ’’ಹನ್ನೆರಡು, ಹನ್ನೊಂದು, ಹತ್ತು, ಒಂಬತ್ತು …ಜೋನ್ಸಿ ಮರದ ಮೇಲಿಂದ ಒಂದೊಂದಾಗಿ ಉದುರಿ ಮರದ ಮೇಲೆ ಎಲೆಗಳನ್ನು ಎಣಿಸುತ್ತಿದ್ದಳು..,” ಇದು ಬರೀ ಕಥೆ, ಚಿನ್ನಾ.ಇದನ್ನು ತೊಗೊಂಡು ಏನು ಮಾಡುತ್ತಿ? ನೀನು ಆಶಾವಾದಿ. ಇದು ಸರಿಯಲ್ಲ’ ಎನ್ನುತ್ತ ಸುಧೀರ ಅವಳ ಕೈಯನ್ನು ಅದುಮಿ, ಕಿಡಕಿಯ ಪರದೆಯೆನ್ನೆಳೆದು ದೀಪವನ್ನಾರಿಸಿ ತನ್ನ ಕೋಣೆಗೆ ವಿಶ್ರಮಿಸಲು ಹೋದ.

ಹೊರಗಡೆ ಕತ್ತಲೆ ಆವರಿಸುತ್ತಿದ್ದಂತೆ ನೆನಪಿನ ಪರದೆ ತೆರೆಯಿತು. ಯೋಚಿಸಲಾರಂಭಿಸಿದ. ತಾವಿಬ್ಬರೂ ಮೆಡಿಕಲ್ ಪಾಸಾದ ಕೂಡಲೇ ಇಂಗ್ಲೆಂಡಿಗೆ ಬರಬೇಕೆನ್ನುವ ಕನಸನ್ನು ಸಾಕಾರ ಮಾಡಿದ್ದರು, ಕರಿಯರ್ ನಲ್ಲಿ ಇಬ್ಬರೂ ಯಶಸ್ವಿಯಾಗಿ, ಮುದ್ದಾದ ಎರಡು ಮಕ್ಕಳೊಂದಿಗೆ ಸಂಸಾರ. ಆಮೇಲೆ ಈ ’ಡ್ರೀಮ್ ಹೌಸ” ಕಟ್ಟಿದ್ದು, ಈಗ ಮಕ್ಕಳಿಬ್ಬರೂ ಗೂಡಿನಿಂದ ಹಾರಿಹೋಗಿದ್ದಾರೆ. ತಮ್ಮದೇ ಸುಖ ಸಂಸಾರಗಳನ್ನು ಕಟ್ಟಿದ್ದಾರೆ. ರಿಟೈರ್ಮೆಂಟಿನ ಯೋಚನೆ ಮಾಡುತ್ತಿರುವಾಗಲೇ ಆಘಾತ. ಆಕೆಗೆ ಕ್ಯಾನ್ಸರ್. ಒಂದು ಪುಪ್ಫುಸದ ಆಪರೇಷನ್ ಆಗಿ ಆರು ವರ್ಷಗಳಾಗಿ, ಕ್ಯಾನ್ಸರ್ ಗೆದ್ದಳು ಅಂತ ಸಂತೋಷದಲ್ಲಿರುವಾಗಲೆ ಅದು ಮರುಕಳಿಸಿ ಈಗ ಮೂರು ತಿಂಗಳಿಂದ ಕೀಮೋಥೆರಪಿ ಶುರುವಾಗಿದೆ. ಈಗದು ಸಫಲವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅದಕ್ಕೆ ಅವಳ ಮನೋಸ್ಥೈರ್ಯ ಮತ್ತು ಆಶಾವಾದವೇ ಕಾರಣ. ಹೊರಗಡೆ ಪಕ್ಕದ ಮನೆಯ ಬೆಕ್ಕು ಬೇಟೆಯಾಡುತ್ತಿರುವಾಗ ಮಾಡುವ ’ಮಿಯಾಂ” ಸದ್ದು ಅವನನ್ನು ಎಚ್ಚರಿಸಿತು, ಜೊತೆಗೆ ಚಿಂವ್ ಗುಟ್ಟುತ್ತ ’ಪಢ ಪಢ’ವೆಂದು ಹಾರಿ ಪಾರಾದ ಹಕ್ಕಿಗಳ ರೆಕ್ಕೆಯ ಸದ್ದು ಕೇಳಿಸಿತು. ಈ ಹಿಂದೆ ಅದೇ ಮರದಲ್ಲಿ ಗೂಡು ಕಟ್ಟಿದ ಅದೆಷ್ಟೋ ಪುಟ್ಟ ಹಕ್ಕಿಗಳು ಬೇಲಿಯ ಮೇಲೆ ಕಾಯ್ದು ಕುಳಿತಿರುತ್ತಿದ್ದ ಈ ಯಮದೂತ ಬೆಕ್ಕಿನ ಬಾಯಿಗೆ ಸಿಕ್ಕಿಬಿದ್ದುದು ನೆನಪಾಗಿ ಎದೆಯಲ್ಲಿ ಕಸಿವಿಸಿಯಾಯಿತು. ಆದರೆ ಈಗಿನವು ಈ ಮ್ಯಾಗ್ ಪೈಗಳು , ಮಡಿವಾಳ ಹಕ್ಕಿ ಎಂತಲೂ ಹೆಸರು. ಸ್ವಲ್ಪ ದೊಡ್ಡ ಹಕ್ಕಿಗಳು; ಬುದ್ಧಿವಂತ ಹಕ್ಕಿಗಳೆಂದೂ ಪ್ರತೀತಿ. ಅವುಗಳು ಸುಲಭದಲ್ಲಿ ತಪ್ಪಿಸಿಕೊಳ್ಳುತ್ತವೆ. ಸಂಘ ಜೀವಿಗಳು. ಒಮ್ಮೊಮ್ಮೆ ತೋಟದ ಹುಲ್ಲಿನ ಮೇಲೆ ಈ ಜೋಡಿ ಹಕ್ಕಿಗಳಲ್ಲದೆ ಬೇರೆ ಮ್ಯಾಗ್ ಪೈಗಳೂ ಬಂದು ಜೊತೆಗೂಡುತ್ತಿದ್ದವು.  ಸುಧೀರ ಎಣಿಸಿದ್ದ: ’ಒಂದು, ಎರಡು, ಮೂರು..’ ಈ ಚಳಿಗಾಲ ದಾಟಿ ಮುಂದಿನ ವರ್ಷದ ಜೂನ್ ತಿಂಗಳಲ್ಲಿ ಇಬ್ಬರೂ ಭಾರತ ಯಾತ್ರೆಗೆ ಹೋಗುವ ಕನಸು ಕಾಣುತ್ತ, ಆಕೆಯ ಕಣ್ಣುಗಳಲ್ಲಿ ಇಂದು ಕಂಡ ಹೊಳಪನ್ನು ನೆನೆಸುತ್ತ ಅವಳು ಗುಣಮುಖವಾಗುವ ಲಕ್ಷಣಗಳು ಎಂದು ತನ್ನ ಬೆಡ್ರೂಮಿಗೆ ಹೋಗಿ ನಿದ್ದೆ ಹೋದ.

 * *  *  *  *  *  *  *  *  *  *  *

ಒಂದು ತಿಂಗಳ ನಂತರ —

ಕ್ರೆಮಟೋರಿಯಮ್ ದಿಂದ ವಾಪಸ್ಸಾದ ಆ ಕರಿಯ ಹರ್ಸ್ (hearse) ಕೊನೆಯದು. ಶೋಕಗ್ರಸ್ತ ಮಿತ್ರರನ್ನಿಳಿಸಿ ಆ ಮನೆಯ ಡ್ರೈವ್ ದಿಂದ ಫ್ಯೂನೆರಲ್ ಹೋಮಿಗೆ ಹೊರಟಿತು. ಅದರ ಹಿಂದೆಯೇ ಸುಳಿದ ಗಾಳಿಯ ರಭಸ ಮ್ಯಾಗ್ ಪೈ ಪುಚ್ಚಗಳನ್ನು ಬೀದಿಯತ್ತ ಕೊಂಡೊಯ್ದಿತು. ಸುಧೀರ ’ಓ ಹೆನ್ರಿಯ ಕಥೆಗಳ” ಪುಸ್ತಕವನ್ನು ಕಸದ ಬಿನ್ನಿನಲ್ಲಿ ಒಗೆಯುತ್ತಿದ್ದಂತೆ ಹಿಂದಿನ ತೋಟದ ಆ ಪ್ರೂನಸ್ ಮರದಿಂದ ಒಮೇ ಸವನೆ ಒಂಟಿ ಮ್ಯಾಗ್ ಪೈ ಹಕ್ಕಿಯ ಆರ್ತನಾದ ಕೇಳಿಸುತ್ತಿತ್ತು. ಜೊತೆಗೆ ಕರಿ ಬೆಕ್ಕಿನ ಸಂತೃಪ್ತ ’ಮಿಯಾಂವ’ ಕೂಗು. ಸುಧೀರ ಗಕ್ಕನೆ ಅಲ್ಲೇ ನಿಂತ. ಶಾಲೆ ಮುಗಿಸಿ ತನ್ನ ಮನೆಯ  ಡ್ರೈವ್ ದಾಟಿ ತಮ್ಮಮನೆಗೆ ಹೋಗುತ್ತಿದ್ದ ಶಾಲಾ ಬಾಲಕರಲ್ಲಿ ಕೆಲವರು ತಾವು ಕಲಿತಿದ್ದ ‘Magpie Nursery Rhyme’ ದ ಸಾಲುಗಳನ್ನು ಹಾಡುತ್ತ ನಡೆದಿದ್ದರು: ”One for sorrow, two for mirth, three for funeral…”

ಶ್ರೀವತ್ಸ ದೇಸಾಯಿ

ಲಕ್ಷ್ಮಣ ರೇಖೆ……    

‘ಭವತಿ ಭಿಕ್ಷಾಂ ದೇಹಿ’..ಹಸಿವಿನ ದೈನ್ಯತೆಯಿರದ ಗಂಭೀರ ದನಿ. ಭಿಕ್ಷಾಪಾತ್ರೆಯನ್ನು ಹಿಡಿದ ಕಾಷಾಯಧಾರಿಯೊಬ್ಬ ನಿಂತಿದ್ದಾನೆ ಬಾಗಿಲಲ್ಲಿ.. ಲಕ್ಷ್ಮಣರೇಖೆಯ ಆಚೆ ಬದಿಯಲ್ಲಿ.ತಳಮಳಗೊಂಡಿದ್ದ ಮನಸ್ಸಿಗೆ ಸ್ವಲ್ಪ ಶಾಂತಿ. ಈ ಕಾಷಾಯಕ್ಕೂ ,ನನಗೂ ಎಂಥದೋ ಆತ್ಮೀಯತೆ. ಈ ದೀಘ೯ಕಠಿಣ ವನವಾಸ ಸಹ್ಯವಾದದ್ದೇ ಈ ಕಾಷಾಯಧಾರಿಗಳಿಂದ. ಅತ್ರಿ-ಅನಸೂಯೆ, ಗೌತಮ-ಅಹಲ್ಯೆ…ಎಷ್ಟೆಲ್ಲ ಅಂತಃಕರಣದ ಜೀವಗಳು!! ರಾಜಷಿ೯ಯಾದ ಅಪ್ಪ ಜನಕಮಹಾರಾಜನ ರಾಜಸಭೆಯಲ್ಲೂ ಅಷ್ಟೇ …ರಾಜಕೀಯಕ್ಕಿಂತ ವೇದಾಂತವೇ ಹೆಚ್ಚು ಚಚೆ೯ಯಾಗುತ್ತಿತ್ತು. ಯಾಜ್ಞವಲ್ಕ್ಯ ,ಅಷ್ಟಾವಕ್ರ, ಶತಾನಂದ…ನನ್ನ ರಾಮಭದ್ರನನ್ನು ನನ್ನೆಡೆ ಕರೆತಂದ ದೈವರೂಪಿ ವಿಶ್ವಾಮಿತ್ರನೂ ಕಾಷಾಯಧಾರಿಯೇ. ಕಾವಿ ಎಂದರೆ ನಂಬುಗೆ ,ಪ್ರೀತಿ, ಧೈರ್ಯ, ಭರವಸೆ… “ಮಗೂ, ಅನ್ನಪೂಣೆ೯ಯ ಪ್ರತಿರೂಪವಾಗಿರಬೇಕು ಗೃಹಿಣಿ. ಹಸಿದ ಹೊಟ್ಟೆ ತಣಿಸುವುದು ಯಾವ ರಾಜಸೂಯ ,ಅಶ್ವಮೇಧಕ್ಕಿಂತ ಕಡಿಮೆಯದಲ್ಲ ಮಗಳೇ”.. ಅಮ್ಮ ಯಾವಾಗಲೂ ಹೇಳುತ್ತಿದ್ದ ಹಿತನುಡಿ. ಅದಕ್ಕೆಂದೇ ಸನ್ಯಾಸಿಯೊಬ್ಬನಿಗೆ ಭಿಕ್ಷೆ ನೀಡಲು ನನಗೆ ಲಕ್ಷ್ಮಣರೇಖೆ ಅಡ್ಡಬರಲಿಲ್ಲ. ಅಲ್ಲದೇ ನಾನಿಲ್ಲಿ ನೀಡಿದ ಅನ್ನಭಿಕ್ಷೆ ತೊಂದರೆಯಲ್ಲಿರುವ ನನ್ನ ನಲ್ಲನಿಗೆ ಪ್ರಾಣಭಿಕ್ಷೆಯ ಅಭಯಪ್ರದಾನ ಮಾಡೀತೇನೋ ಎಂಬ ಒಳಮನದ ಆಶಯ. ಅಪ್ಪನ ಮೌಲ್ಯಗಳ, ಅಮ್ಮನ ಆದಶ೯ಗಳ, ನನ್ನ ನಂಬುಗೆಗಳ ಅಲಿಖಿತ ರೇಖೆಗಳೆದಿರು ಆ ಲಿಖಿತ ಲಕ್ಷ್ಮಣರೇಖೆ ನನಗೆ ಕಾಣಲೇ ಇಲ್ಲ; ದಾಟಿದೆ.. ಘಟಿಸಬಾರದ್ದು ಘಟಿಸಿಯೇ ಹೋಯ್ತು.

Lakshmana Rekha – Alchetron, The Free Social Encyclopedia

ರಾವಣ ಕೇವಲ ಸೀತೆಯನ್ನಲ್ಲ ಹೊತ್ತೊಯ್ದದ್ದು…ಕಾಷಾಯದ ಘನತೆಯನ್ನು, ಒಳ್ಳೆಯದರ ಬಗೆಗಿನ ನಂಬಿಕೆಯನ್ನು, ಶಿವದ ಭರವಸೆಯನ್ನುಹೊತ್ತೊಯ್ದ. ಹೆದರಿಕೆ ದಶಶಿರಗಳನ್ನು ಹೊತ್ತು ಅಟ್ಟಹಾಸಮಾಡುತ್ತ ಬರುವ ಲಂಕಾಧಿಪತಿ ರಾವಣನಿಂದಲ್ಲ; ನಿಸ್ಸಂಗತೆಯ, ಧೀರತೆಯ ಪ್ರತೀಕವಾದ ಕಾವಿವೇಷ ಧರಿಸಿ ಬಂದು ‘ದೇಹಿ’ ಎಂದು ಅನ್ನ ಕೇಳಿ ಎಳೆದೊಯ್ಯುವ ದುರುಳರಿಂದ.

‘ಸೀತೆಯಾದರೇನು? ಲೋಕಮಾತೆಯಾದರೇನು? ಲಕ್ಷ್ಮಣರೇಖೆ ದಾಟಿದರೆ ಹೆಣ್ಣು -ತಿನ್ನಲೇಬೇಕು ಮಣ್ಣು’ ಎಂದಾಡಿಕೊಂಡು ಮಣ್ಣಿನ ಮಗಳಿಗೇ ಮಣ್ಣು ತಿನ್ನಿಸಿತೀ ಲೋಕ. ಹುಟ್ಟಿದಂದಿನಿಂದ ರೇಖೆಗಳು… ನೇಗಿಲೆಳೆದ ರೇಖೆಯಿಂದ ಸೀಳಿದ ನೆಲದಿಂದಲೇ ಹೊರಬಂದ ಅವನಿಜೆ ನಾನು.. ಮುಂದೆ ತಾಯ್ತಂದೆಯರ ಅಂತಃಕರಣದ ಬೆಳ್ಳಿರೇಖೆ, ವಧುವಾಗ ಹೊರಟಾಗ ಶಿವಧನಸ್ಸಿನ ಪರಾಕ್ರಮದ ರೇಖೆ, ಯುವರಾಣಿಯಾಗಲಿರುವಾಗ ಮಂಥರೆ-ಕೈಕೇಯಿಯರ ವಕ್ರ ರೇಖೆ, ಪಂಚವಟಿಯಲ್ಲಿ ಲಕ್ಷ್ಮಣರೇಖೆ, ಅಶೋಕವನದಲ್ಲಿ ಪಾತಿವೃತ್ಯದ ರೇಖೆ, ಅಗ್ನಿಕುಂಡದಲ್ಲಿ ಪಾವಿತ್ರ್ಯದ ರೇಖೆ, ಸ್ತ್ರೀತ್ವದ, ಸತೀತ್ವದ, ಮಾತೃತ್ವದ, ಕುಲಧಮ೯ಗಳ, ವಂಶಮಯಾ೯ದೆಗಳ, ಸಂಸ್ಕ್ರತಿ -ಸಂಸ್ಕಾರಗಳ, ನೀತಿನಿಯಮಗಳ, ಆಚಾರ-ವಿಚಾರಗಳ….ಬರಿಗಣ್ಣಿಗೆ ಕಾಣಿಸದ ಅಸಂಖ್ಯಾತ ರೇಖೆಗಳು….ಅಂದಿಗೂ -ಇಂದಿಗೂ ಎಲ್ಲ ಸೀತೆಯರ ಭವಿಷ್ಯ ರೂಪಿಸುತ್ತಿರುವ ಲಕ್ಷ್ಮಣ ರೇಖೆಗಳು….

ಗೌರಿ ಪ್ರಸನ್ನ‌

 

  

.