‘ಈ ಹೊತ್ತಿಗೆ’ ನವರಾತ್ರಿ ಕಾವ್ಯೋತ್ಸವ: ಒಂದು ವರದಿ – ಅಮಿತಾ ರವಿಕಿರಣ

ಈ ವಾರದ ಪ್ರಸ್ತುತಿಯ ಬಗ್ಗೆ ಹೆಚ್ಚಿನದೇನೂ ಹೇಳಬೇಕಿಲ್ಲ. ಎರಡು ಕಂತುಗಳಲ್ಲಿ ಬರಲಿರುವ ಅಮಿತಾ ರವಿಕಿರಣ ಬರೆದಿರುವ ವರದಿ ಮತ್ತು ಪ್ರಸ್ತುತ ಪಡಿಸಲಾದ ಆರು ಕವಿಗಳ ಕವನಗಳು. ಮೊದಲ ಕಂತಿನಲ್ಲಿ ವರದಿ ಮತ್ತು 3 ಕವಿತೆಗಳಿವೆ. ಅಲ್ಲಲ್ಲಿ ಕವಿಗಳ ಟಿಪ್ಪಣಿಗಳಿವೆ. ಎಂದಿನಂತೆ ಓದಿ, ಅನ್ನಿಸಿದ್ದನ್ನು ಹಂಚಿಕೊಂಡು ಪ್ರೋತ್ಸಾಹಿಸುವಿರೆಂದು ತಿಳಿದಿರುವ – ಎಲ್ಲೆನ್ ಗೂಡೂರ್ (ಸಂ.)

ಈ ಹೊತ್ತಿಗೆ  ಕಾವ್ಯೋತ್ಸವ -ಅನಿವಾಸಿ ಬಳಗದ ಕಾವ್ಯ ನವರಾತ್ರಿ 

ಬುಧವಾರ ಶ್ರೀವತ್ಸ ದೇಸಾಯಿ ಅವರು “ಭಾನುವಾರ ನೀವು ಫ್ರೀ ಇದ್ದೀರಾ? ಒಂದು ಕಾರ್ಯಕ್ರಮವಿದೆ  ‘ಈ ಹೊತ್ತಿಗೆ’ಯ ನವರಾತ್ರಿ ಕಾವ್ಯೋತ್ಸವ ಅಂತೆ” ಎಂಬ ಸಂದೇಶ ಕಳಿಸಿದರು . ಈ ಹೊತ್ತಿಗೆಯ ಹೆಸರು ಕೇಳುತ್ತಲೇ ನಾನು ಬೇರೇನೂ ಯೋಚಿಸದೆ ನಾನು ಬಿಡುವಾಗಿದ್ದೇನೆ, ಖಂಡಿತ ನನಗೆ ಭಾಗವಹಿಸುವ ಇಚ್ಛೆ ಇದೆ ಎಂದು ಹೇಳಿದೆ. 

”ಈ ಹೊತ್ತಿಗೆ” ಎಂಬ ಗುಂಪಿನ ಕಾರ್ಯಕ್ರಮಗಳನ್ನು, ವರದಿಗಳನ್ನು, ಫೋಟೋಗಳನ್ನು, ಸಿಹಿಅಂಗಡಿಯ ಗಾಜಿನ ಒಳಗಿಟ್ಟ ಜಲೇಬಿಯನ್ನು ನೋಡಿ ಆಸೆಪಡುವ ಮಗುವಿನಂತೆ ನಾನೂ ನೋಡಿ ಖುಷಿ ಪಟ್ಟಿದ್ದೇನೆ; ಅಲ್ಲಿ ಚರ್ಚಿತವಾದ ಕೆಲ ಕತೆಗಳ ಪಿಡಿಎಫ್ ಪ್ರತಿಗಳನ್ನು ಕಾಡಿ ಬೇಡಿ ಪಡೆದು ಓದಿದ್ದೇನೆ. ”ಅದ್ದಿಟ್ಟು” ಎಂಬ ಕತೆಯಂತೂ ನನಗೆ ಬಹುದಿನಗಳ ಕಾಲ ಕಾಡಿದ ಈ ಹೊತ್ತಿಗೆಯಲ್ಲಿ ಚರ್ಚಿತವಾದ ಕಥೆ. ಅಷ್ಟೇ ಅಲ್ಲ, ಇದರ ರೂವಾರಿ ಜಯಲಕ್ಷ್ಮಿ ಪಾಟೀಲ್ ಅವರು ನನಗೆ ಗುರು, ಮಾರ್ಗದರ್ಶಕಿ, ನನ್ನನು ‘ಅಮು’ ಎಂದು ಕರೆಯುವ ಪ್ರೀತಿಯ ಅಕ್ಕ.  ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿರುವುದು ನನಗೆ ಹಬ್ಬದ ಸಂಭ್ರಮವೇ!

ಅಷ್ಟು ಆರಾಧನಾಭಾವ ಮೂಡಿಸಿದ ಕಾರ್ಯಕ್ರಮವೊಂದರಲ್ಲಿ ನನ್ನ ಮನೆಯಿಂದಲೇ ಭಾಗವಹಿಸಬಹುದು ಎಂಬುದೇ ನನ್ನ ಉತ್ಸಾಹದ ಕಾರಣವಾಗಿತ್ತು. ನನಗೆ ೬ ಜನ ಕವಿಗಳ ಗುಂಪಿನಲ್ಲಿ ಗಾಯಕಿಯಾಗಿ ಆಯ್ಕೆ ಮಾಡಲಾಗಿತ್ತು, ಹಾಡಲಿಕ್ಕೆ ಪುಸ್ತಕದ ತುಂಬಾ ಭಾವಗೀತೆಗಳಿವೆ, ಯಾವುದಾದರೂ ನವರಾತ್ರಿಗೆ ಹೊಂದುವಂಥದ್ದು ಹುಡುಕಿ ಹಾಡಿದರಾಯಿತು ಎಂಬ ಉಡಾಫೆ ಆಲೋಚನೆಯಲ್ಲಿಯೇ ನಾನು ಗುರುವಾರ ಕಳೆದೆ.  ಶುಕ್ರವಾರ ಬೆಳಿಗ್ಗೆ ಪ್ರಮೋದ್ ಅವರು ಭಾಗವಹಿಸಲಿರುವ ಕವಿಗಳು, ಆಯೋಜಕರು ಮತ್ತು ನಿರ್ವಾಹಕರ ಸಂವಹನ ಸುಲಭವಾಗಲು ವಾಟ್ಸಾಪ್ ಗುಂಪನ್ನು,ಮಾಡಿದರು. ಅಲ್ಲಿ ಕಾರ್ಯಕ್ರಮದ ರೂಪರೇಷೆ ನಿಯಮ, ಸಮಯಗಳನ್ನ ಈ ಹೊತ್ತಿಗೆಯ ಸಂಸ್ಥಾಪಕಿ ಜಯಲಕ್ಸ್ಮಿ ಪಾಟೀಲ್ ಅವರು ಅತಿ ಸ್ಪಷ್ಟವಾಗಿ ವಿವರಿಸಿದರು.  ಆರು ಕವಿಗಳಲ್ಲಿ ಒಬ್ಬರು ”ಅತ್ಯಾಚಾರದ ವಿರುದ್ಧ  ಈ ನವರಾತ್ರಿ” ಎಂಬ ವಿಷಯದ ಬಗ್ಗೆ ಕವನ ಬರೆಯಲಿ ಎಂಬ ಮಾತನ್ನೂ ಹೇಳಿದರು!

ಅದೇ ಸಂದರ್ಭದಲ್ಲಿ  ಅವ್ರು ನನ್ನ ಜವಾಬ್ದಾರಿಯನ್ನೂ  ಜಾಸ್ತಿ ಮಾಡಿದ್ದು.  ಬರೀ ಭಾವಗೀತೆ ಹಾಡಿದರೆ ಆಗದು, ನಿಮ್ಮ ಅನಿವಾಸಿ ಗುಂಪಿನ ಕವಿಗಳು ಯಾರು ಕಾವ್ಯೋತ್ಸವದಲ್ಲಿ ಭಾಗವಹಿಸಿಲ್ಲವೋ ಅವರ ಕವಿತೆಯನ್ನ ಸಂಯೋಜಿಸಿ ಹಾಡಬೇಕು ಎಂದಾಗ ನೆನಪಾಗಿದ್ದು ಮದರ್ಸ್ ಡೇ ದಿನದಂದು ಕೇಶವ್ ಕುಲಕರ್ಣಿ ಅವರು ಬರೆದು ಕಳಿಸಿದ್ದ ಆನ್ ಟೈಲರ್ ಅವರ ಮೈ ಮದರ್ ಪದ್ಯದ ಭಾವಾನುವಾದ ”ಅವಳೇ ಅಮ್ಮ”.  ನಾನು ಆಯ್ಕೆ ಮಾಡಿಕೊಂಡ ಮತ್ತೊಂದು ಹಾಡು ದಿನಕರ ದೇಸಾಯಿಯವರು ಬರೆದ ”ಸತ್ತರೂ ಬದುಕಿರಲಿ ಆತ್ಮವಿಶ್ವಾಸ” ಎಂಬ ಗೀತೆ. ಆ ನಂತರ ನನಗೆ ಗೊತ್ತಾದ ಇನ್ನೊಂದು ವಿಷಯ ನಾನು ಕವಿಗಳ ಪಟ್ಟಿಯಲ್ಲೂ ಇದ್ದೆ,  ಗಾಯನದಲ್ಲಿ ಕೂಡ!  ಪ್ರೇಮಲತಾ, ಜಿ ಎಸ್  ಶಿವಪ್ರಸಾದ್, ಮುರಳಿ ಹತ್ವಾರ್, ರಮ್ಯಾ ಭಾದ್ರಿ, ಎಲ್ಲೆನ್ ಗೂಡೂರ್ ಅವರಂಥ ಕವಿಪುಂಗವರ ಸತ್ವಯುತ ಕವಿತೆಗಳ ಎದಿರು ನನ್ನ ತರಗೆಲೆಗಿಂತಲೂ ಹಗುರಾದ ಕವನ ಓದಲು ನಾಚಿಗೆ ಅನಿಸಿ, ಶ್ರೀವತ್ಸ ಅವರಿಗೆ  ಮತ್ತೆ ಕೇಳಿದೆ ‘ಕವಿಗಳು ಇನ್ನಾರಾದರೂ ಸಿಕ್ಕರೆ  ದಯವಿಟ್ಟು ಕವಿಗಳ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದು ಬಿಡಿ’ ಅಂತ.  ಸಮಯದ ಅಭಾವದಿಂದ ಈ ಬದಲಾವಣೆ ಸಾಧ್ಯವಾಗದೆ ನಾನು ಕವಯಿತ್ರಿಯಾಗಿಯೂ, ಗಾಯಕಿಯಾಗಿಯೂ ಡಬಲ್ ಆಕ್ಟಿಂಗ್ ಮಾಡಬೇಕಾಯ್ತು.  

ಶುಕ್ರವಾರ ಸಂಜೆ ಪ್ರಾಯೋಗಿಕ ಕಾರ್ಯಕ್ರಮವನ್ನು ಎಲ್ಲರ ಸಹಮತಿಯೊಂದಿಗೆ ಯೋಜಿಸಲಾಯಿತು. ಆದರೆ ನವರಾತ್ರಿ ಕಾವ್ಯೋತ್ಸವದಲ್ಲಿ ಭಾಗವಹಿಸುವ ಎಲ್ಲ ತಂಡಗಳಲ್ಲಿ ಇಬ್ಬರು ಹಾಡುಗಾರಿದ್ದರು; ನಮ್ಮಲ್ಲಿ ನಾನೊಬ್ಬಳೇ.  ಅದಕ್ಕಾಗಿ ಮತ್ತೆ ಹುಡುಕಾಟ ಶುರು ಆಯ್ತು.  ಸುಮನಾ ಧ್ರುವ ಅವರು ಸಿಕ್ಕಿದ್ದು, ಮತ್ತು ಕಾರ್ಯಕ್ರಮದ ನಿಯಮದಂತೆ ಅನಿವಾಸಿ ಗುಂಪಿನ ಮತ್ತೊಬ್ಬ ಪ್ರತಿಭಾವಂತ ಕವಯತ್ರಿ ಸ್ಮಿತಾ ಕದಡಿ ಅವರ ಮಳೆ ಕವನಕ್ಕೆ ಸುಮನಾ ರಾಗ ಸಂಯೋಜನೆ ಮಾಡಿದ್ದು ಎಲ್ಲವು ಪೂರ್ವ ನಿಯೋಜಿತ ಎಂಬಂತೆ ನಡೆದು ಹೋಯಿತು. ಕಾರ್ಯಕ್ರಮಕ್ಕೆ ಸಿದ್ಧವಾಗಲು ನಮ್ಮೆಲ್ಲರಿಗಿಂತ ಕಡಿಮೆ ಸಮಯ ಸಿಕ್ಕಿದ್ದು ಸುಮನಾಗೆ.  ಬರೀ ಒಂದು ಘಂಟೆಯ ಅವಧಿಯಲ್ಲಿ ಅವರು ನಮ್ಮ ಕರೆಗೆ ಓಗೊಟ್ಟು ರಿಹರ್ಸಲ್ಲಿಗೂ ಬಂದರು.  ಶುಕ್ರವಾರದ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ನಮಗೆ ಭಾನುವಾರ ಸಂಜೆಯ ತಯಾರಿಗಳ ಬಗ್ಗೆ ಹೇಳಲಾಯಿತು.  ಮತ್ತೊಂದು ತಮಾಷೆ ಎಂದರೆ  ಜಯಲಕ್ಷ್ಮಿ ಅವರು ”ನಿಮ್ಮ ಗುಂಪಿನಾಗ್ ಬರೀ ಐದ ಮಂದಿ ಕವಿಗಳು ಅದೀರಿ; ಆರನೆಯವರು ಎಲ್ಲ ಅದಾರು? ಯಾಕ್ ಬಂದಿಲ್ಲ?” ಅಂದಾಗ ನಾನೇ ಆ ಆರನೇ ಕವಯಿತ್ರಿ ಎಂದು  ಮೆತ್ತಗೆ ಕೈ ಮೇಲೆತ್ತಿದೆ.  ಅವರ ಕಣ್ಣಲ್ಲಿ ಇದ್ದ ಆಶ್ಚರ್ಯ, ”ನೀನು ಬರೀತಿs ಅಮು? ನಂಗ್ ಗೊತ್ತಿರಲಿಲ್ಲ!!!” ಅಂದಾಗ ನನ್ನಲ್ಲಿನ ಕವಯಿತ್ರಿ, ಆಟಂನಲ್ಲೇ (autumn) ಡಬಲ್ ಡುವೆ ಹೊದ್ದು ಮಲಗಿಬಿಟ್ಟಳು!

ಇನ್ನು ಭಾನುವಾರ ಮಧ್ಯಾಹ್ನ ೪ ಘಂಟೆಗೆ (UK ಸಮಯ) ಸರಿಯಾಗಿ ನಾವೆಲ್ಲಾ ಸ್ಟ್ರೀಮ್ ಯಾರ್ಡ್ ಕದ ತಟ್ಟಿ ಒಳಗೆ ಹೋಗಿ ಕುಳಿತೆವು. ‘ಈ ಹೊತ್ತಿಗೆ’ಯ ವತಿಯಿಂದ ಶ್ರುತಿ ಅವರು ನಮ್ಮನ್ನು ಸ್ವಾಗತಿಸಿದರು. ಅವರ ಸ್ಪಷ್ಟ ಮಾತು ಕೇಳಲು ನಿಜಕ್ಕೂ ಹಿತವಾಗಿತ್ತು.  ನಂತರ ನಮ್ಮ ಕಾರ್ಯಕ್ರಮದ ಚುಕ್ಕಾಣಿ ಹಿಡಿದಿದ್ದು ಶ್ರೀವತ್ಸ ದೇಸಾಯಿ ಅವರು. ಅನಿವಾಸಿ ಬಳಗದ ‘ಈ  ಹೊತ್ತಿಗೆ’ಯ ನವರಾತ್ರಿ ಕಾವ್ಯೋತ್ಸವವನ್ನ  ಪ್ರೇಮಲತ ಅವರು ತಮ್ಮ ಕವಿತೆಯಲ್ಲಿ ದುರ್ಗೆಯನ್ನು ಮತ್ತೆ ಹುಟ್ಟಿಬಾ ಎನ್ನುತ್ತಾ ಆರಂಭಿಸಿದರು. ನಂತರ ನಾನು ಕೇಳಿಸಿಕೊಂಡ ಪ್ರತಿ ಕವಿತೆಯೂ ಅದೆಷ್ಟು ಸುಂದರವಾಗಿ, ವಿಭಿನ್ನ ಶೈಲಿಯೊಂದಿಗೆ ಮನಮೋಹಕವಾಗಿ ಮೂಡಿ ಬಂದವು. 

ಸುಮನಾ ಹಾಡಿದ ”ಮಳೆ ಮಳೆ” ಯಮನ್ ರಾಗದಲ್ಲಿ ಹಿತವಾಗಿ ಮೊದಲ ಮಳೆಯ ತುಂತುರು ಮತ್ತು ಮಣ್ಣಿನ ಘಮದಂತೆ ನೆನಪಲ್ಲಿ ಉಳಿಯಿತು. ಎರಡನೇ ಸುತ್ತಿನ ಕವನ ವಾಚನದ ನಂತರ ಹಾಡಿದ ರಾಷ್ಟ್ರಕವಿ ಜಿ ಎಸ್ ಎಸ್ ಅವರ ”ಸ್ತ್ರೀ ಎಂದರೆ ಅಷ್ಟೇ ಸಾಕೆ?” ಸುಪ್ರಸಿದ್ಧ ಕವನದ ಗಾಯನ ಮಾಧುರ್ಯ, ತನ್ಮಯತೆಯಿಂದ ಕೂಡಿತ್ತು. ಕಾರ್ಯಕ್ರಮ ಮುಗಿದ ನಂತರ ಕೇಶವ್ ಕುಲಕರ್ಣಿ ಅವರ ಪದ್ಯದ ಸಾಹಿತ್ಯ ಬೇಕು ಎಂದು ಹಲವರು ನನ್ನಲ್ಲಿ ಕೇಳಿದರು. ಹೀಗೊಂದು ಎಲ್ಲೂ ತಡೆಯಿಲ್ಲದ, ಸಮಯಬದ್ಧ ಯಶಸ್ವೀ ಕಾರ್ಯಕ್ರಮ ನಡೆಸಿಕೊಟ್ಟ ಅನಿವಾಸಿ, ‘ಈ ಹೊತ್ತಿಗೆ’ಯಲ್ಲೇ ಶಿಸ್ತಿನ ತಂಡ ಎಂದು ಹೆಸರಾಗಿದೆ ಎಂದು ಜಯಲಕ್ಷ್ಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಕೇಳಿ ಮನಸ್ಸು  ಖುಷಿಯಿಂದ ಅರಳಿತು. 

‘ಈ ಹೊತ್ತಿಗೆ’ಯ ಕುರಿತು 

‘ಈ ಹೊತ್ತಿಗೆ’ ಶುರುವಾಗಿದ್ದು ಹೇಗೆ? ಇದು ಯಾರ ಆಲೋಚನೆ? ಇದರ ಬೆಳವಣಿಗೆ ಕುರಿತು ದಯವಿಟ್ಟು ತಿಳಿಸಿ ಎನ್ನುವ ನನ್ನ ಪ್ರಶ್ನೆಗೆ ಜಯಲಕ್ಷ್ಮಿ ಅವರ ಉತ್ತರ ಇಂತಿದೆ.  

ಜೆಪಿ: ನಾ ಮುಂಬೈನಾಗ್  ಇದ್ದಾಗ ‘ಮನೆ ಮನೆ ಸಾಹಿತ್ಯ’ ಅನ್ನೋ ಕಾರ್ಯಕ್ರಮ ಆಗ್ತಿತ್ತು, ಭಾಳ ಚಂದದ ಕಾರ್ಯಕ್ರಮ ಅದು. ಬೆಂಗಳೂರಿಗೆ ಶಿಫ್ಟ್ ಆದ ನಂತರ ಅಂಥದ್ದೊಂದು ಕಾರ್ಯಕ್ರಮ ಮಾಡಬೇಕು ಅನ್ನೋ ಆಶಾ ಇತ್ತು.  ಹಂಗ ಕೆಲವು ಸಮಮನಸ್ಕ ಸ್ನೇಹಿತರ ಜೋಡಿ ಕೂಡಿ ಪುಸ್ತಕ ಓದಿ ಅದರ ಬಗ್ಗೆ ಚರ್ಚೆ ಮಾಡೋ ಒಂದು ಗುಂಪು ಮಾಡಿದೆ. ಮುಂಬೈನ ಕಾರ್ಯಕ್ರಮದ ರೂಪುರೇಷೆ ಬೇರೇದಿತ್ತು, ಇದು ಬೇರೆನೇ! ಸಾಮ್ಯತೆ ಅಂದ್ರೆ ಸಭಾಂಗಣ ಮತ್ತೊಂದು ಅನ್ನದೇನೇ ಒಂದು ಜಾಗದಲ್ಲಿ ಸಾಹಿತ್ಯಾಸಕ್ತರ, ಸಾಹಿತಿಗಳ ಅನೌಪಚಾರಿಕ ಭೇಟಿ ಮಾತ್ರ.  ‘ಈ ಹೊತ್ತಿಗೆ’ ಶುರು ಆಗಿದ್ದು ಒಂದು ಫೇಸ್ಬುಕ್ ಪೋಸ್ಟಿನಿಂದ.  ಇದರ ಉದ್ದೇಶ ಇದ್ದಿದ್ದು ಹೊಸ ಪುಸ್ತಕ ಓದೋದು, ಓದಿಸೋದು; ಸಾಮಾನ್ಯ ಓದುಗರಾಗಿ ಅದರ ಬಗ್ಗೆ ಚರ್ಚೆ ನಡೆಸುವುದು.  ಇಲ್ಲಿ ಯಾರೂ ವಿಮರ್ಶಕರಲ್ಲ, ಎಲ್ಲ ಸಾಮಾನ್ಯ ಓದುಗರು.  ಈವರೆಗೆ ೭೫ ಪುಸ್ತಕಗಳನ್ನು ಓದಿ ನಾವು ಚರ್ಚಿಸಿದ್ದೇವೆ.  ‘ಈ ಹೊತ್ತಿಗೆ’ಯು ವಾರ್ಷಿಕೋತ್ಸವದ ನಿಮಿತ್ತ ‘ಹೊನಲು’ ಎಂಬ ಕಾರ್ಯಕ್ರಮ ಆಯೋಜಿಸಿ ವಿಮರ್ಶಾಕಮ್ಮಟ, ಲೇಖಕರ ಜೊತೆ ಓದುಗರ ಚರ್ಚೆ, ಕಥಾಕಮ್ಮಟ, ವಚನಕಮ್ಮಟ ಮತ್ತು ಕಳೆದೆರಡು ವರ್ಷಗಳಿಂದ ಕಥಾ ಸ್ಪರ್ಧೆಗಳನ್ನೂ ಆಯೋಜಿಸುತ್ತಾ ಬಂದಿದೆ. 

‘ಈ ಹೊತ್ತಿಗೆ’ ಎಂಬುದು ಆಸಕ್ತರಿಂದ ಬೆಳೆದುಬಂದದ್ದು, ಇದು ಯಾವುದೇ ಅನುದಾನ, ಸರಕಾರೀ ಸೌಲಭ್ಯಗಳ ಹಂಗಿಲ್ಲದೆ ತನ್ನ ಸತ್ವ-ಶಕ್ತಿಗಳಿಂದಲೇ ಮನೆಮಾತಾಗಿದ್ದು, ಸಾಹಿತ್ಯಾಸಕ್ತರ ಪ್ರೀತಿ ಗಳಿಸಿದ್ದು.   

ಮೊದಲು ೧೫ ದಿನಕ್ಕೊಮ್ಮೆ ಒಂದು ಪುಸ್ತಕ ಓದ್ತಾ ಇದ್ವಿ,ನಾವು ಮೊದಲು ಓದಿ ಚರ್ಚೆ ಮಾಡಿದ ಪುಸ್ತಕ ಕೆವಿ ಅಯ್ಯರ್ ಅವರ ‘ರೂಪದರ್ಶಿ’.  ಆಮೇಲೆ ಪ್ರತಿ ತಿಂಗಳಿಗೊಂದು ಪುಸ್ತಕ ಓದುವ ನಿಯಮವಾಯ್ತು.  ೧೦ ಜನರಿಂದ ಶುರು ಆದ ‘ಈ ಹೊತ್ತಿಗೆ’ ಇವತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವಷ್ಟರ ಮಟ್ಟಿಗೆ ಬೆಳೆದಿದೆ ಎಂಬ ಹೆಮ್ಮೆ ನನಗೆ.  ಬರುವ ಫೆಬ್ರವರಿ (೨೦೨೧) ೧೦ನೇ ತಾರೀಖಿಗೆ ‘ಈ ಹೊತ್ತಿಗೆ’ಗೆ ೮ ವರ್ಷ ತುಂಬುತ್ತದೆ. ‘ಈ ಹೊತ್ತಿಗೆ’ಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ https://ehottige.wordpress.com/about/

– ಅಮಿತಾ ರವಿಕಿರಣ್

ಕವಿತೆಗಳು

ಮತ್ತೆ ಹುಟ್ಟಲಿ ದುರ್ಗೆ .. - ಡಾ. ಪ್ರೇಮಲತ ಬಿ. 

ಮಹಿಷನ ಪೂಜಿಸಿದರೇನಂತೆ
 ತ್ರಿಲೋಕ ದಹಿಸೆಂದು ಅವನು ಹೇಳಲಿಲ್ಲ
 ಬ್ರಹ್ಮನಿಂದ ವರಪಡೆದರೇನಂತೆ
 ಅಬಲೆಯ ಬಲಾತ್ಕರಿಸೆಂದು ಅವನು ಹರಸಲಿಲ್ಲ
 ಹುಣ್ಣಿಮೆಯೋ ಮಹಾಲಯವೋ
 ಮಹಿಷಾಸುರನ ಕ್ರೌರ್ಯಕ್ಕೆ ಎಣೆಯಿಲ್ಲ,
 ಬಗೆ ಬಗೆಯ ಛಧ್ಮವೇಶವೂ ರಕ್ಷಿಸಲಿಲ್ಲ
 ಕೊನೆಗೆ
 ಮಹಿಳೆಯೋರ್ವಳ ರೋಷಕ್ಕೆ
 ಪುರುಷನೊಬ್ಬನ ಅಹಂಕಾರಕ್ಕೆ
 ಅಲಂಕಾರಿಕ ಅಂತ್ಯ…
 ತ್ರಿಶೂಲ ಹೊಕ್ಕಿತ್ತು ಕರುಳು ಚೆಲ್ಲಿತ್ತು
 ಮೂಜಗದ ಶಾಪಕ್ಕೆ ದುರ್ಗೆಯ ಕೋಪಕ್ಕೆ
 ಮಹಿಷಾಸುರನ ಪ್ರಾಣ ಹಾರಿತ್ತು....
  
 ಹಾಗೆಂದು ಬದಲಾಯಿಸಿಬಿಟ್ಟಿತೇ ಕಾಲ?
 ಬಣ್ಣ,ವೇಷ, ವಾಸನೆಗಳ ಈ ಜಗ?
 ಇಲ್ಲ ಇಲ್ಲ ಆಗಾಗ ಮತ್ತೊಮ್ಮೆ ಮಗದೊಮ್ಮೆ
 ಮತ್ತೆ  ಮತ್ತೆ ನಗ್ನವಾಗುತ್ತಲೇ ಇದೆ
 ಪುರುಷನೊಳಗಿನ ಮೃಗ
 ಮರಳಿ ಬಾ ದುರ್ಗಾಮಾತೆ …
 ರಕ್ತ ಬೀಜಾಸುರರಿವರು
 ಅಬಲೆಯರ ಹುಡುಕುವರು
 ಹೇಡಿಗಳಂತೆ ಹೊಂಚುವರು, 
 ಒಬ್ಬಳ ಮೇಲೆ ಹಲವು ಹತ್ತು ಜನರು
 ಕಾಮಾಂಧರಾಗಿ ಎರಗಿ ಭೋಗಿಸಿ
 ಸಾಯಿಸಿ, ಅಡಗುತ್ತ ತೇಕುವರು
 ಕಾಲ ಇಂದಿಗೂ ಬದಲಾಗಿಲ್ಲ...
  
 ಉಧ್ಬವಿಸಲಿ ಸಾವಿರದಿ ಕಾಳಿಯರು, 
 ದುರ್ಗೆಯರು,ಶುಭಾಂಕರಿಯರು
 ರಕ್ಕಸರ ಠಕ್ಕತೆಗೆ ಆಗಿ ಉತ್ತರ
 ಮೀರಿ ಜಗದೆತ್ತರ
 ಮಾಟದ ಮೈಯ ಕೋಮಲಾಂಗಿಯರು
 ಹಣೆತುಂಬ ರಕ್ತ ಕಾರಿ
 ಬಿರು ಬಿರುಸಿನ ಕೇಶ ಕೆದರಿ
 ಸಾವಿರ ಮಹಿಷರ ಮರ್ದನಕ್ಕೆ ನಾಂದಿ ಹಾಡಿ
 ಕತ್ತಲೆಗೆ-ಬೆಳಕಿನ ದಾರಿ ತೋರಿ
 ದುರ್ಗೆಯಾಗಲಿ ಇಂದಿನ ಮಹಿಳೆ
 --------------------------
ಡಾ.ಪ್ರೇಮಲತ ಬಿ.

(ಮಹಿಷಾಸುರ ಮಹಿಷ ದೇವರನ್ನು ಪೂಜಿಸುತ್ತಿದ್ದ ಅಸುರ. ಆತನಿಗೆ ಕೋಣನ (ಮಹಿಷ) 
ತಲೆಯಿತ್ತು ಎನ್ನಲಾಗಿದೆ. ಬ್ರಹ್ಮನಿಂದ ವರವನ್ನು ಪಡೆದಿದ್ದವನು)


ಯಮುನೆ ಮತ್ತು ಗಂಗೆ  –  ಡಾ. ಜಿ ಎಸ್ ಶಿವಪ್ರಸಾದ್ 
 
 ಚಲುವೆ ಯಮುನೆ ನಡೆದಳು
 ಉಲ್ಲಾಸದಿ ಮನೆಗೆ 
 ಗಂಗಾ ನದಿಯ ಬದಿಯಲ್ಲಿ 
 ಹಾಡನು ಗುನುಗುತ ಮನದಲ್ಲಿ 
  
 ಬೈಕಿನಲಿ ಬಂದಿಳಿದರು 
 ನಾಲ್ಕಾರು   ರಾವಣರು 
 ಯಮುನೆಯ ಎಳೆದೊಯ್ದರು ಪಕ್ಕಕ್ಕೆ 
 ತೀರದ ಕಾಮ ದಾಹಕ್ಕೆ 
  
 ಸಂಜೆ ಬಾನಿನ ತುಂಬಾ ಕೆಂಪು ಕಲೆ 
 ಅಳುವ ಅಸಹಾಯಕ ಅಬಲೆ 
 ಅವಸರದಲಿ ಸಂಭವಿಸಿದ ಸೂರ್ಯಾಸ್ತ 
 ಕೋಗಿಲೆಯ ಸ್ವರವು ಇಂದೇಕೊ ಅಸ್ತವ್ಯಸ್ಥ  
  
 ಕತ್ತಲಲಿ ಕರಗಿದವು 
 ರಾವಣರ ಕರಾಳ ಛಾಯೆಗಳು 
 ಮೌನದಲ್ಲೊಂದು ಮೆಲ್ಲ ನಿಟ್ಟುಸಿರು  
 ಆಗಾಗ್ಗೆ ಊಳಿಡುವ ನಾಯಿಗಳು 
  
 ಕರಗಿದ ಕಾಡಿಗೆಯೊಂದಿಗೆ 
 ಹರಿದ ಕಪ್ಪು ಕಣ್ಣೀರು!
 ಬಾಡಿದ ಮುಖ, ತಗ್ಗಿಸಿದ ತಲೆ 
 ಯಮುನೆಗೆ ಇನ್ನಿಲ್ಲ ನೆಮ್ಮದಿಯ ನೆಲೆ 
   
 ಮೆಲ್ಲಗೆ ಹೆಜ್ಜೆ ಇಟ್ಟಳು ಅವಳು  
 ಹರಿವ ಗಂಗೆಯ ಕಡೆಗೆ, 
 ಕಣ್ಣು ಮುಚ್ಚಿ ದೃಢ ನಿರ್ಧಾರದಲಿ 
 ಧುಮುಕಿದಳು ತಾಯಿಯ ಮಡಿಲಗೆ 
  
 ತಾಯಿ ಗಂಗೆಯ ಕಥೆಯೂ ಹೀಗೆ 
 ಮೂಲದಲಿ ನಿರ್ಮಲ ಅವತಾರ  
 ಹರಿದ್ವಾರದಲ್ಲಿ ಪ್ರಶಾಂತ ಸಾಕಾರ  
 ತಾಯಿಗೆ ಆರತಿ, ದೀಪಗಳ ಅಲಂಕಾರ 
  
 ಬೀಗುತ ಮೊರೆಯುತ ಹರಿದಳು 
 ಪಾವನೆ ಕಡಲನು ಸೇರುವ ತವಕದಲಿ 
 ಕೊಳಚೆ ನೀರಿನ ಅಭಿಷೇಕದಲಿ  
 ಬೆಂದ ಶವಗಳ ನೈವೇದ್ಯದಲಿ 
  
 ಲೋಕದ ನಾನಾ ಪಾಪವ ತೊಳೆದು 
 ತಾನೇ  ಕಲ್ಮಷಗೊಂಡಳು  ಗಂಗೆಯು  ಇಂದು    
 ನಿಲ್ಲಲಿ ಹೆಣ್ಣಿನ ಅತ್ಯಾಚಾರ 
 ಮೂಡಲಿ ಸದ್ಭಾವನೆ ಸದ್ವಿಚಾರ

- ಜಿ ಎಸ್ ಶಿವಪ್ರಸಾದ್

ಟಿಪ್ಪಣಿ: ಯಮುನೆ ಮತ್ತು ಗಂಗೆ ಎಂಬ ಈ ಕವನದಲ್ಲಿ ಯಮುನೆ ಎಂಬ ಯುವತಿ ಅತ್ಯಾಚಾರಕ್ಕೆ 
ಒಳಗಾಗುವ ಕಥೆ ಇದೆ. ಅತ್ಯಾಚಾರದ ಸನ್ನಿವೇಶವನ್ನು ಮತ್ತು ಅದು ಒಡ್ಡುವ ಮಾನಸಿಕ ಹಿಂಸೆಯನ್ನು 
ಕವನದಲ್ಲಿ ತರುವ ಪ್ರಯತ್ನವಿದೆ. ಈ ರೀತಿಯ ವಿಷಯವನ್ನು ಕವನದಲ್ಲಿ ಸೂಕ್ಷ್ಮವಾಗಿ ತರಲು 
ರೂಪಕಗಳನ್ನು ಬಳಸಲಾಗಿದೆ. ಇಲ್ಲಿ ಬರುವ 'ಸಂಜೆ ಬಾನಿನ ತುಂಬಾ ಕೆಂಪು ಕಲೆ' ಯಮುನೆಯ 
ಮನಸ್ಥಿತಿಯನ್ನು ಮತ್ತು ಇದಕ್ಕೆ ಸಾಕ್ಷಿಯಾಗಿ ನಿಂತ ನಿಸರ್ಗದ ನಿಲುವನ್ನು ಬಣ್ಣಿಸುತ್ತದೆ.  ಅವಸರದಲಿ 
ಸಂಭವಿಸಿದ ಸೂರ್ಯಾಸ್ತ ಎನ್ನುವ ಸಾಲಿನಲ್ಲಿ ಸಾಮಾನ್ಯವಾಗಿ ಸೂರ್ಯಾಸ್ಥದ  ಕೊನೆಭಾಗ ಅವಸರದಲ್ಲಿ 
ಸಂಭವಿಸುವಂತೆ ತೋರುವುದು ಸಾಮಾನ್ಯ, ಇಲ್ಲಿ ಜರುಗಿದ ಹೇಯ ಕೃತ್ಯವನ್ನು ಸಹಿಸಲಾರದ ಸೂರ್ಯ 
ತಾನು ಅವಸರದಲ್ಲಿ ನಿರ್ಗಮಿಸಿದ ಎಂಬುದು ಕವಿಯ ವರ್ಣನೆ. ಯಮುನೆಯ ದುಃಖಕ್ಕೆ ನಿಸರ್ಗವು 
ಸ್ಪಂದಿಸಿ ಕೋಗಿಲೆಯ ಸ್ವರವು ಅಸ್ತವ್ಯಸ್ಥಗೊಳ್ಳುತ್ತದೆ. ಯಮುನೆ ಹಚ್ಚಿದ ಕಾಡಿಗೆಯು ಕಣ್ಣೀರಲ್ಲಿ ಕರಗಿ 
'ಕಪ್ಪು ಕಣ್ಣೀರು' ಹರಿಯುವುದು ಇಲ್ಲಿಯ ಕರಾಳ ಕೃತ್ಯಕ್ಕೆ ಪ್ರತೀಕವಾಗುತ್ತದೆ. ಯಮುನೆ ಇಲ್ಲಿ ಅಸಹಾಯಕ 
ಅಬಲೆ, ಅವಮಾನವನ್ನು ಮತ್ತು ಮುಂದಿನ ಪರಿಸ್ಥಿತಿಯನ್ನು ಎದುರಿಸಲಾಗದೆ ಆತ್ಮಹತ್ಯೆಗೆ 
ತೊಡಗುತ್ತಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳು ಪೊಲೀಸರಿಗೆ ದೂರು ನೀಡಿ ನ್ಯಾಯ 
ದೊರಕಿಸಿಕೊಳ್ಳುವ ಪ್ರಸಂಗಗಳು ಇರಬಹುದು; ಆದರೆ ಇನ್ನೂ ಕೆಲವು ಸೂಕ್ಷಮತಿಯ ಹೆಣ್ಣುಮಕ್ಕಳು 
ಪರಿಸ್ಥಿತಿಯನ್ನು ಎದುರಿಸಲಾರದೆ ಆತ್ಮಹತ್ಯೆಗೆ ತೊಡಗಿಕೊಳ್ಳಬಹುದು. ಯಮುನೆಯು  ಹಾರಿಕೊಳ್ಳುವ 
ನದಿ ಗಂಗಾನದಿ! ಗಂಗೆಯ ಕಥೆಯೂ ಒಂದು ರೀತಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣನ್ನು ಪ್ರತಿನಿಧಿಸುತ್ತದೆ. 
ಕಲ್ಮಷಗೊಳ್ಳುವ ಗಂಗೆಯ ಕಥೆ ಅತ್ಯಾಚಾರದ ಇನ್ನೊಂದು ಆಯಾಮವನ್ನು ತೆರೆದಿಡುತ್ತದೆ.  ಒಂದು 
ಉಲ್ಲಾಸದಲ್ಲಿ ಶುರುವಾಗುವ ಯಮುನೆಯ ಪ್ರಸಂಗ ಮತ್ತು ಹರಿದ್ವಾರದಲ್ಲಿ ಪೂಜೆಗೆ ಅರ್ಹಳಾದ ನಿರ್ಮಲ 
ಗಂಗೆಯು ಕೊನೆಗೆ ದಾರುಣ ಪರಿಸ್ಥಿತಿ ತಲುಪುವುದರಲ್ಲಿ ಒಂದು ವ್ಯಥೆ ಇದೆ.  ಲೋಕದ ಪಾಪವನ್ನು 
ತೊಳೆದು ತಾನೇ ಕಲ್ಮಷಗೊಳ್ಳುವ ಪ್ರಸಂಗದಲ್ಲೂ ಒಂದು ವೈದೃಶ್ಯವಿದೆ. ಅಂದಹಾಗೆ ಯಮುನಾ ನದಿ 
ಸೇರುವುದು ಗಂಗೆಯಲ್ಲಿ ಮತ್ತು ಈ ಕವಿತೆಯಲ್ಲಿ ಯುವತಿ ಯಮುನೆ ಗಂಗಾನದಿಯಲ್ಲಿ ಸೇರಿಕೊಳ್ಳುವ 
ಹೋಲಿಕೆಯನ್ನು ಗಮನಿಸಬಹುದು. ಈ ಕಾರಣಕ್ಕಾಗಿ ಈ ಕವಿತೆಯನ್ನು ಯಮುನೆ ಮತ್ತು ಗಂಗೆ ಎಂದು 
ಕರೆಯಲಾಗಿದೆ. 
 ಅದಿತಿ – ಡಾ. ಮುರಲಿ ಹತ್ವಾರ್   
  
 ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:
 ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.  
 ಒಂದಿಷ್ಟೂ ಬಿಸಿಯಾಗಲಿಲ್ಲ ಅದು 
 ಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನ
 ಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ 
  
 ಹೇಗೆ ಬಿಸಿಯಾದೀತು? ನಾಜೂಕಿನಿಂದ 
 ಧೂಳೊರೆಸಿಕೊಳ್ಳುವದು ಅಭ್ಯಾಸವಾದಮೇಲೆ. 
 ಬೇರು ಕಿತ್ತು, ಕೈ-ಕಾಲು ಕೊಯ್ದು, 
 ನೀರು, ಎಣ್ಣೆಯಲದ್ದಿದ ತುಂಡುಗಳ ಅಂಟಿಸಿ, 
 ಮೇಲೊಂದು ಹತ್ತಿಯ ಮೆತ್ತೆಯಿಟ್ಟು ಕಟ್ಟಿದ ಕುರ್ಚಿಯಲ್ಲವೇ ಅದು. 
  
 ಆ ಆಫ್ರಿಕಾದ ಅಮ್ಮ, ಅಲ್ಲ, ಎಲ್ಲರ ಅಮ್ಮ 
 ಅವಳ ಕಥೆ ಹೇಳಿಕೊಂಡಾಗಲೂ ಅಷ್ಟೇ. 
 ಆಕೆ "ಅಯ್ಯೋ, ನಂಬಿಬಿಟ್ಟೆ ಆ ಜನದ ಮಾತು,
 'ಅಮ್ಮ, ಬೇಡಮ್ಮ, ಬಿಡಬೇಡ ನನ್ನ ಇವರೊಟ್ಟಿಗೆ"
 ಎಂದ ಇನ್ನೂ ನೆರೆಯದ ಕೂಸಿನ ಮಾತೂ ಕೇಳದಷ್ಟು. 
 ಕೆಟ್ಟೆ, ನಾ ಕೆಟ್ಟೆ, ನನ್ನ ಮಕ್ಕಳನ್ನು ಇನ್ನಾದರೂ ಬದುಕಲು ಬಿಟ್ಟುಬಿಡಿ"
 ಎಂದು ಗೋಳಿಟ್ಟರೂ ಒಂದಿಷ್ಟೂ ಒದ್ದೆಯಾಗಲಿಲ್ಲ ಆ ಕುರ್ಚಿ. 
  
 ಅದರ ಒಣ ಪ್ರತಿಷ್ಠೆ ನೋಡಿ ನೋಡಿ ಸಾಕಾಗಿತ್ತು ಅವನಿಗೂ. 
 ಎತ್ತಿ ನೆಲಕ್ಕೆಸೆದ ಜೋರಾಗಿ. ಶಬ್ದ ಹುಟ್ಟಿ ಮೌನವಾಯಿತು ಅಷ್ಟೇ.  
 ಕತ್ತಿಯಲಿ ಕೊಚ್ಚಿದ  - ನೋವು ಹುಟ್ಟಬಹುದೆಂದು. 
 ಒಂದಿಷ್ಟು ತರಚಿತಷ್ಟೇ. ಅಲ್ಲಾಡಲಿಲ್ಲ ಅದು. ಅವನೂ ಬಿಡಲಿಲ್ಲ:
  
 ಮಾರಮ್ಮನ ಗುಡಿಯ ಸುತ್ತ ಸುತ್ತಿಸಿದ;
 ರಕ್ತೇಶ್ವರಿಯ ಕೋಲ ಕಟ್ಟಿದ; ಕೆಂಡದ ಮೇಲೆ ದೂಡಿದ 
 ಸುಟ್ಟು ಬೂದಿಯಾಯಿತೇ ಹೊರತು ಕೆಚ್ಚು ಕೆರಳಲಿಲ್ಲ. 
  
 ಕಣ್ಣಿಗೆ ಸಿಡಿದ ಆ ಬೂದಿ ಬೆಳೆದ ರೊಚ್ಚಿನಲಿ, 
 ದುರ್ಗಮ್ಮನಿಗೆ ಹೊದಿಸಿದ್ದ ಸೀರೆಯಲಿ ಮೈ ಸುತ್ತಿಕೊಂಡ; 
 ಅಣ್ಣಮ್ಮನ ಅರ್ಚನೆಯ ಕೆಂಪನ್ನ ಹಣೆಗೊತ್ತಿಕೊಂಡ 
 ಗಿರಗಿರನೆ, ಗಿರಗಿರನೆ, ಗಿರಗಿರನೆ ತಿರುಗಿದ:
  
 ಉಧೋ! ಉಧೋ! ಎನ್ನುತೆದ್ದವು 
 ನೆಲದಡಿಯ ಚಿನ್ನ, ಚಿಪ್ಪಿನೊಳಿಟ್ಟ ಮುತ್ತು  
 ಕುದಿಯುತಲಿ - ಕುಣಿಕುಣಿದು ಕಂಪಿಸಿ. 
 ಅಲ್ಲೋಲ ಕಲ್ಲೋಲ ಎಲ್ಲೆಲ್ಲೂ 
 ಎಲ್ಲವೂ ಛಿದ್ರ, ಛಿದ್ರ, ಛಿದ್ರ;
 ಉಸಿರಿಲ್ಲದ ಕಾರ್ಗತ್ತಲ ಮೌನಗರ್ಭದಲಿ ಲೀನ. 
  
 ಆ ತುಂಬು ಗರ್ಭದ 
 ಮೌನದ ಬಸಿರೊಡೆದು 
 ಹೊಸ ಬೆಳಕೊಂದು ಹುಟ್ಟಿ 
 ಮತ್ತೆ ಅದಿತಿಯಾಯಿತು
  
 - ಮುರಲಿ ಹತ್ವಾರ್
 **************************************************************
 ಟಿಪ್ಪಣಿ:  ಕವಿತೆ ಒಂದು ಚಿತ್ರವಿದ್ದಂತೆ. ಲೋಕಾರ್ಪಣೆಯಾದಮೇಲೆ ಅರ್ಥೈಸುವ, ವಿಮರ್ಶಿಸುವ ಅಥವಾ 
ಅನುಭವಿಸುವ ಎಲ್ಲಾ ಹಕ್ಕು ಓದುಗರದ್ದು. ಬರೆದ ಕವಿ ಮತ್ತು ಬರೆಸಿಕೊಂಡ ಕವಿತೆ ಇಬ್ಬರೂ ಆ ಓದುಗರ 
ಅಧೀನ. ಹಾಗಿರುವಾಗ, ಕವಿತೆಯನ್ನು ವಿಮರ್ಶಿಸುವುದು ಹುಂಬತನವಾದೀತು.  ಆದರೆ, ಈ ಕವಿತೆ 
ನನ್ನೊಳಗೆ ಬೆಳೆದ ರೀತಿ ಮತ್ತು ಅದಕ್ಕೆ ನೀರೆರದ ಕೆಲವು ಘಟನೆಗಳನ್ನ ಹಂಚಿಕೊಳ್ಳಬೇಕೆನಿಸುತ್ತಿದೆ.

  ವೃತ್ತಿಯಲ್ಲಿ ವೈದ್ಯನಾದ್ದರಿಂದ ಪ್ರತಿನಿತ್ಯ ಆರೋಗ್ಯ ಸಮಸ್ಯೆಯಿರುವವರ ಭೇಟಿ ಸಾಮಾನ್ಯ. ಆ 
ರೋಗಿಗಳು ಅವರ ದೈಹಿಕ ಸಮಸ್ಯೆಗಳ ಜೊತೆಗೆ ಆಗಾಗ ಅವರನ್ನು ಕಾಡುವ ಕೆಲವು ವಿಚಾರಗಳನ್ನು 
ಹೇಳಿಕೊಳ್ಳುವದೂ ಅಪರೂಪವಲ್ಲ. ಹಾಗೆ ಹೊರಬಂದ ಕಥೆಗಳಲ್ಲಿ ಕೆಲವೊಂದು ಮನಸ್ಸಿನ ಆಳಕ್ಕಿಳಿದು 
ಕೊರೆಯುತ್ತವೆ. ಅಂತಹುದರಲ್ಲಿ ಒಂದು ಒಬ್ಬ ಇರಾಕಿನವ ಹೇಳಿಕೊಂಡ ಅವನ ಮತ್ತು ಅವನ 
ಮನೆಯವರ ಮೇಲೆ ನಡೆದ ಘೋರ ಅತ್ಯಾಚಾರ. ಇನ್ನೊಂದು ಆಫ್ರಿಕಾ ಮೂಲದ ಮಹಿಳೆಯೊಬ್ಬಳ ಕಥೆ. 
ಮಧ್ಯವಯಸ್ಕಳಾದ ಆಕೆಯ ಮನೆಯಲ್ಲಿ ಇದ್ದದ್ದು ಮೂರು ಜನ: ಆಕೆ, ಆಕೆಯ ೧೦-೧೧ರ ಮಗಳು, ಮತ್ತು 
ಆಕೆಯ ಹೊಸ ಪಾರ್ಟ್ನರ್. ಆ ಪಾರ್ಟ್ನರನನ್ನು ಈಕೆ ತನ್ನ ಮಗಳ ತಂದೆಯಂತೆ ಎಂದು ನಂಬಿದ್ದಳು. 
ಆದರೆ ಆತನ ವಿಚಾರ ಬೇರೆಯದೇ ಆಗಿತ್ತು....
 
 ಈ ಎರಡೂ ಕಥೆಗಳನ್ನು ಕೇಳಿದ ದಿನ ಸುಧಾರಿಸಿಕೊಳ್ಳಲು ಸುಮಾರು ಹೊತ್ತು ಬೇಕಾಯಿತು. ಅವರು 
ಹೋದ ನಂತರ ರೂಮಿನಲ್ಲಿ ಉಳಿದ ಕುರ್ಚಿಗಳಿಗೂ ನನಗೂ ಏನು ವ್ಯತ್ಯಾಸ ಎನ್ನುವ ಪ್ರಶ್ನೆ ಕಾಡಲು 
ಶುರು ಮಾಡಿತು. ಅದು ಹೊರಗೆ ಬರಲು ಒಂದು ದಾರಿ ಹುಡುಕುತಿತ್ತು.

  ಹೋದ ವಾರ, ಈ-ಹೊತ್ತಿಗೆಯವರ ಕಾವ್ಯ ವಾಚನ ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಪಾಟೀಲರು 
ಅತ್ಯಾಚಾರದ ವಿರುದ್ಧ ಹೋರಾಟದ, ದುರ್ಗೆಯರ ಗೆಲುವಿನ ಬಗ್ಗೆ ಕವನ ಬರೆದರೆ ಚೆನ್ನ ಎಂದದ್ದು, ಮೇಲೆ 
ಹೇಳಿದ ಕಾಡುವ ವಿಚಾರಗಳು ಹೊರ ಬರಲು ಒಂದು ದಾರಿ ಹುಡಿಕಿ ಕೊಟ್ಟಿತು. ಶೋಷಣೆ ಎನ್ನುವದು 
ಸರ್ವ ವ್ಯಾಪಿ. ಹಾಗೆಯೇ ಅದನ್ನು ಮಾಡುವ ಬಹುರೂಪಿಗಳೂ ಗೊತ್ತಾಗದಷ್ಟು ನಯವಾಗಿ ಎಲ್ಲೆಲ್ಲೂ 
ಬೆರೆತಿದ್ದಾರೆ ಎನ್ನುವ ನನ್ನ ನಂಬಿಕೆ ಪಾಟೀಲರ ಮಾತುಗಳಲ್ಲಿ ಹೊಸ ಅರ್ಥ ಹುಡುಕಿಸಿತು.

 ಆಗ ಅನಿಸಿದ್ದು, ದುರ್ಗೆ ಎಂದರೆ ಶಕ್ತಿ ಅರ್ಥಾತ್ ಸ್ತ್ರೀ ಶಕ್ತಿ. ಇದು ಪಾಸಿಟಿವ್ ಮತ್ತು ಆಕ್ಟಿವ್ ಫೋರ್ಸ್. 
ಇದರ ವಿರುದ್ಧದ ಪುರುಷ ಶಕ್ತಿ ಪ್ಯಾಸಿವ್  ಮತ್ತು ಸಪ್ಪ್ರೆಸ್ಸಿವ್ ಎನಿಸಿತು. ಇವೆರಡೂ ಶಕ್ತಿಗಳು ದೈಹಿಕವಾದ 
ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಇರಬಹುದು. ಈ ಶಕ್ತಿಗಳ ಸಂಘರ್ಷದಲ್ಲಿ ಇದುವರೆಗೆ ಪುರುಷ ಶಕ್ತಿ 
ಬಲ ಸಾಧಿಸಿದೆ. ಅದು ಸೋಲಬೇಕಾದರೆ ಒಂದು ರೆವೊಲ್ಯೂಷನ್ ಬೇಕು. ಅದರಲ್ಲಿ ಪುರುಷ ಶಕ್ತಿ 
ಯಾವುದೊ ಬ್ಲಾಕ್-ಹೋಲ್ ಒಳಗೆ ಮತ್ತೆ ಬರದಂತೆ ಸೇರಿ, ಹೊಸದಾಗಿ ಹುಟ್ಟುವ 'ಬಿಗ್ ಬ್ಯಾಂಗ್' ಶಕ್ತಿ 
ಅನಂತವಾದ, ಎಲ್ಲೆಯಿಲ್ಲದ, ಅ-ದಿತಿಯಾಗಿ ಹೊಮ್ಮಲಿ ಎನ್ನುವ ಆಶಯ ಹಲವು ದೈವೀ 
ರೂಪಕಗಳೊಂದಿಗೆ, ಪುರುಷಶಕ್ತಿ ಸ್ತ್ರೀಶಕ್ತಿಯಾಗಿ ಬದಲಾಗುವದನ್ನ ಮತ್ತು ಒಂದು ಕ್ರಾಂತಿಯ ಹೊಸ 
ಹುಟ್ಟನ್ನ ಬಿಂಬಿಸುವ ಕವಿತೆಯಾಯಿತು.

  ಆ ಅದಿತಿಯನ್ನೇ ಪುರಾಣಗಳಲ್ಲಿ ಶಕ್ತಿರೂಪಿಯಾಗಿ ತೋರಿಸಿದ್ದಲ್ಲವೇ ಎನ್ನುವ ಆಲೋಚನೆ ನನ್ನ ಕವನಕ್ಕೆ 
ಬಲ ಕೊಟ್ಟಿತು. ಹಾಗೆಯೇ, ಬಯೋಲಾಜಿಕಲ್ ಸೆಕ್ಸ್ ಮತ್ತು ಜೆಂಡರ್ ಐಡೆಂಟಿಟಿ ಎರಡೂ ಒಂದೇ ಅಲ್ಲ 
ಎಂದು ನಾನು ಒಪ್ಪುವ ಇತ್ತೀಚಿನ ವಾದವೂ ಸಹ ಸಾಥ್ ಕೊಟ್ಟಿತು. ಒಂದು ರೀತಿಯಲ್ಲಿ ಈ ವಾದ ತುಂಬಾ 
ಹಳೆಯದೇ ಎಂದು ಅರ್ಧ-ನಾರೀಶ್ವರ ಮತ್ತು ಮೋಹಿನಿಯಿರು ಕುಣಿ-ಕುಣಿದು ನೆನಪಿಸಿದರು.
  
ಈ ಕವನದಲ್ಲಿ ಬರುವ ಮಾರಮ್ಮ, ದುರ್ಗಮ್ಮ, ಅಣ್ಣಮ್ಮ ಇವರೆಲ್ಲ ಒಂದೋ ಊರ ದೇವರುಗಳು ಅಥವಾ 
ಸಮಾಜದ ಕೆಳಸ್ತರದ ಜನರೆಂದು ಬಿಂಬಿಸುವವರ ದೇವರುಗಳು. ಹಾಗೆಯೇ ರಕ್ತೇಶ್ವರಿ ದಕ್ಷಿಣ ಕನ್ನಡದ ಒಂದು ದೈವ. 
  
ಕುರ್ಚಿ ಮತ್ತು ಅದಿತಿ ಎರಡು ಮಾತ್ರ ಈ ಕವಿತೆ ಬರೆಯಲು ಶುರು ಮಾಡಿದಾಗ ನನ್ನ ತಲೆಯಲ್ಲಿ 
ಗಟ್ಟಿಯಾಗಿ ಇದ್ದದ್ದು. ಎಲ್ಲಾ ಅಮ್ಮಂದಿರೂ ಅವರವರೇ ಬಂದು ಕುಳಿತುಕೊಂಡು ಸಾಲುಗಳನ್ನು ಬೆಳೆಸಿ, 
ಅ-ದಿತಿಯವರೆಗೆ ತಂದು ಬಿಟ್ಟದ್ದು. 

ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.

ನಾಗತಿಹಳ್ಳಿ ಚಂದ್ರಶೇಖರ್ ಅಂದರೆ ತಕ್ಷಣವೇ ಅವರ ಚಲನಚಿತ್ರಗಳು ಕನ್ನಡಿಗರ ಕಣ್ಣ ಮುಂದೆ ಬರುತ್ತವೆ. ಕನ್ನಡ ಲೋಕಕ್ಕೆ ಸದಭಿರುಚಿಯ ಚಲನಚಿತ್ರಗಳನ್ನಷ್ಟೇ ಅಲ್ಲ ಅವರು ಕೊಡುತ್ತಿರುವುದು. ಅವರ ರೆಕ್ಕೆಗಳು ಸಾಹಿತ್ಯದ ಹಲವಾರು ವೈವಿಧ್ಯತೆಗಳನ್ನು, ಅವರ ಬೇರುಗಳು ಗಾಢವಾದ ಸಾಮಾಜಿಕ ಕಳಕಳಿಯನ್ನು ಅಪ್ಪಿಕೊಂಡಿವೆ. ಡಾ. ಚಂದ್ರಶೇಖರ್ ಅನಿವಾಸಿಬಳಗದ ಮುಂದೆ ಬಂದದ್ದು ಸೆಪ್ಟೆಂಬರ್ ೨೫ರ ಭಾನುವಾರದಂದು. ಆ ವಿಶೇಷ ಸಂದರ್ಭದ ಬಗ್ಗೆ ಅನಿವಾಸಿಸದಸ್ಯರಾದ ಡಾ. ಪ್ರೇಮಲತ ಬರೆಯುತ್ತಾ, ಅವರು ಡಾ. ಚಂದ್ರಶೇಖರ್ ರ ಜೊತೆ ನಡೆಸಿದ ಸಂವಾದವನ್ನೂ ಕೂಡ ಓದುಗರೊಡನೆ ಹಂಚಿಕೊಂಡಿದ್ದಾರೆ. ಬನ್ನಿ, ಈ ಶುಕ್ರವಾರದ ಲೇಖನವನ್ನು ಓದುತ್ತಾ ನಾಗತಿಹಳ್ಳಿ ಚಂದ್ರಶೇಖರ್ ರ ಲೋಕದಲ್ಲಿ ಇಣುಕೋಣ. – ಸಂ.

ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.

ಕನ್ನಡ ಚಿತ್ರರಂಗದಲ್ಲಿ ಈಗ ಉಳಿದಿರುವ ಕೆಲವೇ ಮಂದಿ ಪ್ರತಿಭಾವಂತ, ಸ್ರುಜನಶೀಲ ನಿರ್ದೇಶಕರಲ್ಲಿ ದೊಡ್ಡದಾದ ಹೆಸರು ಡಾ. ನಾಗತಿಹಳ್ಳಿ ಚಂದ್ರಶೇಖರದು.ಇವರು ಬರೇ ನಿರ್ದೇಶಕರಲ್ಲ. ಎಂ.ಎ. ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವ ವಿದ್ಯಾಲಯದಿಂದ ಚಿನ್ನದ ಪದಕಗಳೊಂದಿಗೆ ಪಡೆದವರು. ಕನ್ನಡ ಪ್ರಾಧ್ಯಾಪಕರಾಗಿ ದಶಕಕ್ಕೂ ಹೆಚ್ಚು ಕಾಲ ಕೆಲಸಮಾಡಿದವರು. ಹಾಗಂತಲೇ ಇವರನ್ನು ‘ಮೇಷ್ಟ್ರು’ ಅಂತ ಈಗಲೂ ಕರೆಯುವವರಿದ್ದಾರೆ.ಜೊತೆಗೆ ಬರಹಗಾರರು.  ಸರಳವಾಗಿ, ನೇರವಾಗಿ ಮಾತಾಡುವವರು.ಅಂಕಣಗಾರರು.

ಇಷ್ಟೆಲ್ಲ ಕಿಚ್ಚಿರುವ ಇವರು ಚಲನಚಿತ್ರ ರಂಗಕ್ಕೆ ಬಂದದ್ದು, ಇತ್ತೀಚೆಗೆ ನಿಧನರಾದ ಅಶೋಕ್ ಪೈ ಅವರ 1986 ರ  ‘ಕಾಡಿನಬೆಂಕಿ’ ಚಲನಚಿತ್ರದ ಮೂಲಕ. ಈ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಇವರು ಬರೆದಿದ್ದಾರೆ. ಇದಕ್ಕೆ best regional feature film ಅನ್ನೋ ರಾಷ್ಟ್ರ ಮನ್ನಣೆಯ  ಜೊತೆಗೆ ರಾಜ್ಯ ಪ್ರಶಸ್ತಿ ಬಂತು. ಇವರದೇ ಚೊಚ್ಚಲ ನಿರ್ದೇಶನದ ’ಉಂಡೂ ಹೋದ-ಕೊಂಡೂ ಹೋದ” ಚಿತ್ರವನ್ನು ಮಾಡಿದರು. ಇದರ ಚಿತ್ರಕಥೆ-ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಬಂತು.ಇಲ್ಲಿಂದ ಮುಂದೆ ಇವರು ಮೇಲಿನ ಎಲ್ಲ ಮಾಧ್ಯಮಗಳೊಂದಗೆ ತಮ್ಮನ್ನು ಹಂಚಿಕೊಂಡಂತವರು. ಸಿನಿಮಾ, ದೂರ ದರ್ಶನ, ಪತ್ರಿಕೆಗಳು, ಪುಸ್ತಕಗಳು,ಮತ್ತು ಸಾಮಾಜಿಕವಾಗಿ ಮತ್ತ್ತಷ್ಟು ಬೆಳೆದವರು.’ನಾಗತಿಹಳ್ಳಿ ಟೆಂಟ್ ಸಿನಿಮಾ’ ಅನ್ನೋ ಹೆಸರಲ್ಲಿ ನಟನೆ ಮತ್ತು ಸಿನಿಮಾದ ಬರಹಗಳಿಗೆ ತರಭೇತಿ ಶಾಲೆಯನ್ನು ತೆರೆದು ಮತ್ತೆ”ಮೇಷ್ಟ್ರು’  ಆದವರು! ತನ್ನ ಬದುಕಿನ ಎಲ್ಲ ಆಸಕ್ತಿಗಳನ್ನು ಬಗಲಲ್ಲಿ ಇರಿಸಿಕೊಂಡೇ ಮುಂದುವರೆದಿರುವ ಇವರ ಬದುಕಿನಲ್ಲಿ ಈಗ ಅದೆಷ್ಟು ಸಣ್ಣ ಕಥೆಗಳಿಗಾಗುವಷ್ಟು ಸರಕಿದೆಯೋ  ಗೊತ್ತಿಲ್ಲ!!

ಯಾರಾದರೂ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯಲ್ಲಿ ಹುಟ್ಟಿ, ಯಾವ ವಶೀಲಿಯೂ ಇಲ್ಲದೆ, ಗಾಡ್ ಫಾದರ್ ಗಳ ಅಭಯವಿಲ್ಲದೆ   ಬೆಂಗಳೂರಿನಲ್ಲಿ ಹೆಸರುಮಾಡಬೇಂಕೆಂದರೆ ಅಪ್ಪಟ ಪ್ರತಿಭೆಯಿರಬೇಕು. ತಮ್ಮ ಸ್ಥಾನವನ್ನು ಗಳಿಸಲು ಅವಿರತ ಕೆಲಸ ಮಾಡಿರಬೇಕು.ಜೀವನದಲ್ಲಿ ಶಿಸ್ತಿರಬೇಕು. ಒಂದಷ್ಟು ವಿಶಷ್ಟ ಆದರ್ಶಗಳನ್ನು ಮೈ ಗೂಡಿಸಿಕೊಂಡಿರಬೇಕು. ಅಪಾಯಕರ ಸಾಹಸಗಳನ್ನು ಉಸಿರಿಡಿದು ಮಾಡಲು ತಯಾರಿರಬೇಕು.ನೂರು ಜನರ ನಡುವೆ ಕೆಲಸಮಾಡುವ ಹೊಂದಾಣಿಕೆಯ ಸ್ವಭಾವವನ್ನು ಹೊಂದಿರಬೇಕು.ಕಾರ್ಯನೈಪುಣ್ಯತೆಯನ್ನು ಉಳಿಸಿಕೊಳ್ಳಲು ಸಮಯದ ಜೊತೆ ಗುದ್ದಾಡುವ ಛಲವಿರಬೇಕು.ಫಲಿತಾಂಶವಾಗಿ ಸಿಗುವ ಅಮ್ರುತವನ್ನೂ, ಹಾಲಾಹಲವನ್ನೂ ನುಂಗಿ ತಡೆದುಕೊಳ್ಳುವ ತಾಕತ್ತಿರಬೇಕು. ಕಾಲಿಗೆ ಚಕ್ರ, ಕಣ್ಣಿಗೆ ಎಣ್ಣೆ,ಮಿದುಳಿನ ಅವಿರತ ಕೆಲಸ, ಹತ್ತು ಕೆಲಸಗಳ ಮಧ್ಯೆ ಅಪಾರ  ತಾಳ್ಮೆ  58 ರ ಹರೆಯದಲ್ಲೂ  ಇವರಲ್ಲಿ ಬೇಕಾದಷ್ಟಿದೆ!

ಇವರ ಇದುವರೆಗಿನ ಸಾಧನೆಗಳ ಅವಲೋಕನಕ್ಕೆ, ಸಂದಿರುವ ಪ್ರಶಸ್ತಿಗಳ ಪಟ್ಟಿಗೆ ಇವರದೇ ಹೆಸರಿನ ವೆಬ್ ಸೈಟಿಗೆ ಭೇಟಿ ನೀಡುವದೇ ಉಚಿತ. http://www.nagathihalli.com/

’ಇಷ್ಟಕಾಮ್ಯ’ ಚಿತ್ರದ ಜೊತೆ ಇವರನ್ನು ಇಂಗ್ಲೆಂಡಿಗೆ ಬರಮಾಡಿಕೊಂಡವರು, ಕನ್ನಡಿಗರು, ಯು.ಕೆ.  ಅಧ್ಯಕ್ಷರಾದ ಗಣಪತಿ ಭಟ್. ಜೂನ್ ತಿಂಗಳಲ್ಲಿ ನಾಗತಿಹಳ್ಳಿಯವರನ್ನು ಬರಮಾಡಿಕೊಂಡು, London, Bristol, Cardiff, Dorset ಗಳಲ್ಲಿ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಟ್ಟವರು.

ಈ ಕನ್ನಡ ಸಂಘ 2008 ರಲ್ಲೇ ನಾಗತಿಯವರ ’ಮಾತಾಡ್, ಮಾತಾಡ್ ಮಲ್ಲಿಗ” ಸಿನಿಮಾವನ್ನು Reading ನಲ್ಲಿ 200 ಜನರೆದುರು ಪ್ರದರ್ಶನ ಮಾಡಿತ್ತು. ಇದಕ್ಕು ಮೊದಲು ಇತರೆ 25 ಕ್ಕೂ ಹೆಚ್ಚು ಸಿನಿಮಾಗಳನ್ನು ತರಿಸಿ ಕನ್ನಡ ಸಮುದಾಯಕ್ಕೆ ಮನರಂಜನೆ ಒದಗಿಸಿದೆ.ಈಗ ಒಂದು ವರ್ಷ ದಿಂದ KUK Talkies ನ  ಬ್ಯಾನರಿನಡಿ  ಕನ್ನಡದ ಸಿನಿಮಾಗಳಿಗೆ ಮಾರುಕಟ್ಟೆ ಗಳಿಸುವಲ್ಲಿ ನಿರತರಾಗಿದ್ದಾರೆ.

ಮತ್ತೆ ಈ ಬಾರಿ ನಾಗತಿಯವರನ್ನು ಬರಮಾಡಿಕೊಂಡು, ಅವರ ಜೊತೆ  Cambridge, Doncaster ಮತ್ತು Newcastle ಗಳಿಗೆ ಓಡಾಡಿಸಿದವರು ಗಣಪತಿ ಭಟ್.’ಕನ್ನಡಿಗರು, ಯು.ಕೆ.’ ಯ  ಸಂಪರ್ಕಕ್ಕೆ ಬಂದವರು ಸುಮನ-ಗಿರೀಶ್ ದಂಪತಿಗಳು. ಸಾಂಸ್ಕ್ರಿತಿಕ ಕಾರ್ಯಕ್ರಮಗಳ ಬಗ್ಗೆ ಅಪಾರ ಆಸಕ್ತಿಯಿರುವ, ರಂಗಭೂಮಿಯ ಅನುಭವವಿರುವ ಸುಮನಾರಿಗೆ ಇಷ್ಟಕಾಮ್ಯ ಪ್ರದರ್ಶನವನ್ನು ನಡೆಸಲು ನಿರ್ಧಾರ ತೆಗೆದುಕೊಳ್ಳಲು ಅರ್ಧ ಗಂಟೆಯ ಸಮಯವಿತ್ತು! ಯಾವ ಬಳಗ-ಕೂಟಗಳ ಒತ್ತಾಸೆಯಿಲ್ಲದೆ ವಯಕ್ತಿಕವಾದ ನಿರ್ಧಾರವನ್ನು ತಗೊಂಡವರು ಸುಮನಾ. ಒತ್ತಾಸೆಯಾಗಿ ನಿಂತವರು ಪತಿ ಡಾ. ಗಿರೀಶ್ ವಸಿಷ್ಟ. Doncaster ರಿನ ಇವರ ಮನೆಗೆ ನಾಗತಿಯವರನ್ನು ಕರೆತಂದವರು ಗಣಪತಿ ಭಟ್. ರಾತ್ರಿ ಸುಮನಾರ ಆತಿಥ್ಯಕ್ಕೆ ರುಚಿ ಸೇರಿಸಿದವರು ರಂಗಭೂಮಿಯ ಅನುಭವವಿರುವ ಸುಮನಾರ ತಾಯಿ ಲೀಲ-ತಂದೆ ರಾಮಸ್ವಾಮಿ.

ರಾಮಸ್ವಾಮಿ, ಅಭಿಷೇಕ್, ನಾಗತಿಹಳ್ಳಿ ಚಂದ್ರಶೇಖರ್, ಕಾಜಲ್, ಡಾ, ಗಿರೀಶ್ ವಸಿಷ್ಟ, ಡಾನ್ಕ್ಯಸ್ಟೆರಿನ ಪ್ರದರ್ಶನಕ್ಕೆ ಕಾರಣರಾದ ಸುಮನ ಗಿರೀಶ್ ಮತ್ತು ಅವರ ತಾಯಿ ಶ್ರೀಮತಿ ಲೀಲ ರಾಮಸ್ವಾಮಿ. (ಚಿತ್ರ-ಸಂದರ್ಶಕಿಯದು)

ಬೆಳಗಿನ ತಿಂಡಿಯ ನಂತರ ಒಂದು ಸಣ್ಣ ಸಂದರ್ಶನಕ್ಕೆ ಅವಕಾಶ ಕೇಳಲಾಗಿತ್ತು. ಅದೇ ಊರಿನ ಹಿರಿಯ ವೈದ್ಯರಾದ ಡಾ, ಶ್ರೀವತ್ಸ ದೇಸಾಯಿಯವರು ಈ ಸಂದರ್ಶನದ ರೆಕಾರ್ಡಿಂಗ್ ಗೆ ಸಜ್ಜಾಗಿ ಬಂದರು. ಈ ರೆಕಾರ್ಡಿಂಗ್ ನ ಸಣ್ಣ ತುಣುಕನ್ನು ಯು-ಟ್ಯೂಬಿನಲ್ಲಿ ನೋಡಬಹುದು.

ಮೊದಲಿಗೆ ದಾ.ದೇಸಾಯಿಯವರು ತಮ್ಮ ಹಸ್ತಾಕ್ಷರ ವನ್ನು ಸೇರಿಸಿ  ’ಅನಿವಾಸಿಗಳ ಅಂಗಳದಿಂದ’ ಪುಸ್ತಕವನ್ನು ನಾಗತಿಯವರಿಗೆನೀಡಿದರು. ನಂತರವೇ ಸಂದರ್ಶನ ಶುರುವಾದದ್ದು!

ಸಂದರ್ಶಕಿ ಡಾ. ಪ್ರೇಮಲತ ಮತ್ತು ಅನಿವಾಸಿಗಳ ಚೊಚ್ಚಲ ಪುಸ್ತಕದ ಅವಲೋಕನದಲ್ಲಿರುವ ನಾಗತಿಹಳ್ಳಿಯವರು ಚಿತ್ರಕ್ರುಪೆ-ಗಣಪತಿ ಭಟ್

೧) ಸ್ರುಜನಾತ್ಮಕವಾದ ಚಲನಚಿತ್ರಗಳ ಮೂಲಕ ನೀವಿವತ್ತು ಮನೆ ಮನೆ ಮಾತಾಗಿದ್ದೀರ. ನಿಮಗೆ ಸಂತ್ರುಪ್ತಿಯನ್ನು ತಂದೊಕೊಟ್ಟಿರುವ ಚಿತ್ರ/ಚಿತ್ರಗಳು ಯಾವುವು?

ನನ್ನ ಚಿತ್ರ ಗಳ ಪಟ್ಟಿಯನ್ನು ಅವಲೋಕಿಸಿದಾಗ ಯವುದೂ ಇಲ್ಲ. ಯಾಕಂದ್ರೆ, ಪ್ರತಿ ಸಿನಿಮಾನ ಮತ್ತೆ ಮತ್ತೆ ನೋಡಿದಾಗ ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಅಂತ ಹಲವಾರು ಸಂದರ್ಭದಲ್ಲಿ ಅನ್ನಿಸಿದೆ. ಜನ ’ಅಮೆರಿಕಾ ಅಮೆರಿಕಾ’ ವನ್ನು, ’ಅಮ್ರುತಧಾರೆ”ಯನ್ನು ಉಲ್ಲೇಖಿಸ್ತಾರೆ.ಆದ್ರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ನೋ ಹೊಳಹುಗಳು ಬರ್ತಾ  ಇರುತ್ತವೆ, ಅತ್ರುಪ್ತಿ, ಸ್ರುಜನಶೀಲ ಮನಸ್ಸಿನ ಒಂದು ಭಾಗ.

೨) ನೀವು ಮೂಲತಃ ಬರಹಗಾರರು. ಕಥೆಗಳಲ್ಲಿನ ಪಾತ್ರ ಗಳಿಗೆ ಜೀವ ಕೊಟ್ಟು ನಡೆಸುವಾಗ ಇರೋ ತ್ರುಪ್ತಿ,ಚಲನಚಿತ್ರಗಳ ಪಾತ್ರಗಳನ್ನು ನಿರ್ದೇಶಿಸುವಾಗ ಸಿಗುತ್ತಾ?

ಇದು ಮೂಲಭೂತವಾಗಿ ಕಾವ್ಯ ಮೀಮಾಂಸೆಗೆ ಸಂಬಂಧ ಪಟ್ಟ ಪ್ರಶ್ನೆ. ನಾನು ಎಲ್ಲ ಅರ್ಥಗಳಲ್ಲಿ ಅಲೆಮಾರಿ. ಜಾಗದಿಂದ ಜಾಗಕ್ಕೆ ,ಮಾಧ್ಯಮದಿಂದ ಮಾಧ್ಯಮಕ್ಕೆ ಸುತ್ತುತಾ ಇರ್ತೀನಿ. ಆಯಾ ಮಾಧ್ಯಮಕ್ಕೆ ಹೋದಾಗ ಅಲ್ಲಿನ ವ್ಯಾಕರಣವನ್ನು ಗ್ರಹಿಸಿ ನಿರ್ವಹಿಸಬೇಕಾಗುತ್ತೆ. ಎಲ್ಲಿ ಹೋದಾಗ ನಾನೇನು ಮಾಡಬಲ್ಲೆ ಅನ್ನೋ ಪ್ರಶ್ನೆ ಮಾತ್ರ ಉಳಿಯುತ್ತೆ. ವ್ಯಾವಹಾರಿಕವಾಗಿ ಚಿತ್ರರಂಗ ಹೆಚ್ಚು, ಸಾಹಿತ್ಯ ಕಡಿಮೆ ಅನ್ನೂ ಅರ್ಥ ನನ್ನ ವ್ಯಾಪ್ತಿಯಲ್ಲಿ ಬರೋಲ್ಲ. ಎರಡೂ ಕಡೆ ಪಾತ್ರಗಳನ್ನು ನಡೆಸೋ ಚಾಲೆಂಜ್, ಅದರ ಗುದ್ದಾಟ ನನ್ನಗೆ ಇಷ್ಟ.

೩) ಬರಹ-ಚಲನ ಚಿತ್ರ ನಿರ್ದೇಶನ ಎರಡನ್ನೂ ನಿಮ್ಮ ಮುಂದಿಟ್ಟು ಒಂದನ್ನು ಮಾತ್ರ ಆರಿಸಿಕೊಳ್ಳಿ ಅಂದ್ರೆ ನಿಮ್ಮ ವಯಕ್ತಿಕ ಆಯ್ಕೆ ಯಾವುದು? ಯಾಕೆ?

ನಿಸ್ಸಂಶಯವಾಗಿ ಸಾಹಿತ್ಯ.

ಕಾರಣ, ಸಾಹಿತ್ಯದಲ್ಲಿನ ಸ್ವಯಂಭು. ಇಲ್ಲಿ ನಾನು ಮತ್ತು ಓದುಗ ಅಷ್ಟೇ. ಸಿನಿಮಾದಲ್ಲಿ, ಹಲವು ಪರಿಣತರ ಪ್ರತಿಭೆಯನ್ನು ಹೊರ ಬರಿಸಿ ಅದರಿಂದ ಒಂದು ಪಾಕ ಸಿದ್ದಪಡಿಸಿ ಕ್ರುತಿಯನ್ನು ಸ್ರುಷ್ಟಿಸಬೇಕಾಗುತ್ತೆ. ಇದರಲ್ಲಿ ಸಂಮೋಹನ ಇದೆ.  ಸಂಕೀರ್ಣವಾದ ಮ್ಯಾನೇಜ್ ಮೆಂಟ್ ವಿಚಾರಗಳು, ಸೈಕಾಲೊಜಿ, ಈಗೋಸ್ ಎಲ್ಲ ಇರುತ್ತೆ. ಜೊತೆಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೆಗಲ ಮೇಲಿರೋದರಿಂದ ನನ್ನಂತ ಸೂಕ್ಶ್ಮ ಮನಸ್ಸಿನ ವ್ಯಕ್ತಿಗೆ ಯಾರ ಬಂಡವಾಳಕ್ಕೆ ಎಲ್ಲಿ ದಕ್ಕೆ ಆಗುತ್ತೋ ಅನ್ನೋ ಆತಂಕ ಸಹಜವಾಗಿರುತ್ತೆ.

ಇದು ಸಾಹಿತ್ಯದಲ್ಲಿಲ್ಲ. ಅಲ್ಲದೇ ನಾನು ಹೊರಟು ಬಂದ ಬಿಂದು, ತವರುಮನೆ ಸಾಹಿತ್ಯವೇ ಆದ್ದರಿಂದ ಸಾಹಿತ್ಯಕ್ಕೇ ನನ್ನ ಮೊದಲ ಆದ್ಯತೆ. ಸಿನಿಮಾದಲ್ಲೂ ನನ್ನಗೆ ಅಪಾರ ಅನುಭವ, ಪ್ರತಿಫಲಗಳು ದೊರೆತಿವೆ. ಅದರ ಬಗ್ಗೆ ನನ್ನಲ್ಲಿ ಕ್ರುತಘ್ನತೆ  ಖಂಡಿತಾ ಇದೆ.

ಸಾಹಿತ್ಯಕ್ಕೂ-ಸಿನಿಮಾಕ್ಕೂ ಇರೋ ಕಲಾತ್ಮಕತೆ ಮತ್ತು ಗಲ್ಲಾಪೆತ್ಟ್ಟಿಗೆಯ ಸೇತುವೆಯನ್ನು ಹಾದವರು ಇದ್ದಾರೆ. ಆದರೆ ಉಳಿದಿರುವ ಏಕಾಂಗಿ ನಾನು. ಆದ್ಯತೆಯ ಪ್ರಶ್ನೆ ಬಂದಾಗ ಸಾಹಿತ್ಯಕ್ಕೆ ಸದಾ ಮೊದಲ ಸ್ಥಾನ.

೪) ಇತ್ತೀಚೆಗೆ ಕನ್ನಡ ಚಲನ ಚಿತ್ರಗಳ ಗುಣ ಮಟ್ಟ ಕುಸಿತಾ ಇದೆ.ಇದಕ್ಕೆ ಕಾರಣ ಒಳ್ಳೆ ಚಿತ್ರಕ್ಕೆ ಇವತ್ತು ಮಾರುಕಟ್ಟೆ ಇಲ್ಲ ಇಲ್ದೇ ಇರೋದು.ಇದು  ಎಲ್ರಿಗೂ ಗೊತ್ತು.ಹಿಂದೆ ಇದ್ದಂತ ಮಾರುಕಟ್ಟೆ ಈಗ ತಟ್ಟಂತ ಕಣ್ಮರೆ ಆಗೋಕೆ ಏನು ಕಾರಣ?

ವೇಗದ ಮನೋಧರ್ಮ.ಕಾಲಕ್ಕೆ ಬಂದಿರೋ ವೇಗ. ಕಲೆಗೆ ತಗುಲಿರೋ ಶಾಪ!

ತಕ್ಷಣ ರೋಮಾಂಚನ ಬೇಕು ಅನ್ನೋ ಧಾವಂತ ಪ್ರೇಕ್ಷಕನಿಗೆ, ಅಹೋ ರಾತ್ರಿ ಕೋಟಿಗಟ್ಟಲೆ ಹಣ ಮಾಡಬೇಕು ಅನ್ನೋದು ಉದ್ಯಮದವರಿಗೆ . ಹಿಂದೆ ಚಲನಚಿತ್ರಗಳು   ವರ್ಷಗಟ್ಟಲೆ ಓಡ್ತಾ ಇದ್ದವು. ನೆನಪಿನಲ್ಲಿ ಉಳೀತಿದ್ದವು. ಈಗಿನ ಚಿತ್ರಗಳು ವಾರ  ಮಾತ್ರ ಓಡಿ, ತಟ್ಟಂತ  ಕಣ್ಮರೆಯಾಗಿ ಬಿಡ್ತಾವೆ. ಉಳಿಸಿ ಹೋಗೋದು ಏನೂ ಇಲ್ಲ. ಜೊತೆಗೆ ಸಿದ್ದ ಕತೆಗಳನ್ನು, ರೀಮೇಕ್ ಗಳನ್ನು ತಂದು ಸಿನಿಮಾ ಮಾಡ್ತಾರೆ. ವರ್ಶಕ್ಕೆ 200 ಸಿನಿಮಾ, ವಾರಕ್ಕೆ 6 ಸಿನಿಮ ಬಿಡುಗಡೆ ಆಗ್ತಿವೆ. ಇದರ ಬಗ್ಗೆ  ಯಾವ ನಿಯಂತ್ರಣವೂ ಇಲ್ಲ. ಕನ್ನಡದ ಅಸಲೀ ಚಿತ್ರ, ಅಸಲೀ ಪ್ರತಿಭೆಗಳ ಚಿತ್ರ ಮಾಡೋ ನಮ್ಮಂತವರು ಏಕಾಂಗಿಗಳು. ಆದರೆ ’ಆ ’ ಕಡೆಯವರಿಗೆ ಹೇಳುವಷ್ಟು ದೊಡ್ಡವನಲ್ಲ ನಾನು.

 ’ಇಷ್ಟಕಾಮ್ಯ  ಚಿತ್ರವನ್ನು ನೋಡಿ.ಪ್ರತಿಯೊಂದು ಸಂಭಾಷಣೆಯಲ್ಲಿ, ದ್ರುಶ್ಯಗಳಲ್ಲಿ ಆಳವಾದ ಚಿಂತನೆಗಳಿವೆ. ವರ್ಷಗಟ್ಟಲೆ ಚರ್ಚೆ ಮಾಡಿದ ವಿಚಾರಗಳಿವೆ. ಅದನ್ನು ನೋಡಿ ಅರ್ಥ ಮಾಡಿಕೊಳ್ಳೋಕೆ ವ್ಯವಧಾನ ಇರಬೇಕಷ್ಟೆ.

೫)ನೀವು ಒಬ್ಬ ಸಾಹಿತಿ. ಬರಹಗಾರರು. ಕನ್ನಡ ಭಾಷೆ ಮತ್ತು ಕನ್ನಡ ಚಿತ್ರೋದ್ಯಮವನ್ನು ಅರಿತಿರೋವ್ರು. ಅದಕ್ಕೇ ಈ ಪ್ರಶ್ನೆ.ಇತ್ತೀಚೆಗಿನ ಸಿನಿಮದಲ್ಲಿ ಉಪಯೋಗ್ಸೋ ಭಾಷೆ ಕೇಳೋಕೆ ಬೇಜಾರಾಗುತ್ತೆ.ಸಾಹಿತ್ಯಕ ಕನ್ನಡವಲ್ದಿದ್ದ್ರೂ ಸಾಧಾರಣ ಆಡು ಭಾಷೆಯನ್ನು ಉಪಯೋಗಿಸಿದ್ರೆ ಸಿನಿಮಾ ಮಾಧ್ಯಮ ಜನರಿಗೆ ತಲುಪಲ್ವಾ?

’ಇಷ್ಟಕಾಮ್ಯ’ ದ ಉದಾಹರಣೆ ಮತ್ತೆ ಕೊಡ್ತಿದ್ದೀನಿ ಅಂತ ಮುಖಸ್ತುತಿ ಅಂದುಕೋ ಬೇಡಿ.ಅದರಲ್ಲಿನ ಸಂಭಾಷಣೆಯನ್ನು ಗಮನಿಸಿ.

ಸರಳ ಕನ್ನಡವನ್ನು ಬಯಸೋ ಜನ ಖಂಡಿತಾ ಇದ್ದಾರೆ.ಆದರೆ ಅವರ ಅಭಿರುಚಿಯನ್ನು ಸಂಪೂರ್ಣ ನಾಶಮಾಡಲಾಗಿದೆ. ಅದಕ್ಕೆ ಕಾರಣ ಚಿತ್ರರಂಗ ’ಅಕ್ಷರ ದ್ವೇಷಿ” ಗಳಾಗ್ತಿರೋದು. ಹಾಗಾಗಿ ಅಕ್ಷರ ದಾರಿದ್ರ್ಯ, ಸಾಂಸ್ಕ್ರುತಿಕ ದಾರಿದ್ರ್ಯ ಎದ್ದು ಕಾಣಿಸುತ್ತೆ. ಉದಾಹರಣೆಗೆ, ಒಂದು ಇಡೀ ತಲೆಮಾರಿನ  Icon, ರಾಜ್ ಕುಮಾರರನ್ನು ತಗೊಳ್ಳಿ. ಇವರಿಗೆ ರಂಗ ಭೂಮಿ ಅನುಭವ ಇತ್ತು. ಹಾಡು, ಉಚ್ಚಾರಣೆಗಳ ತರಭೇತಿ ಇತ್ತು. ಒಬ್ಬ ರಾಜಕುಮಾರನ ಹಿಂದೆ ಒಬ್ಬ ಚಿ. ಉದಯಶಂಕರ ಇದ್ರು. ಉತ್ತಮ ವಚನ, ಕೀರ್ತನೆ ಭಾವಗೀತೆಗಳನ್ನು ಉಣ ಬಡಿಸ್ತಿದ್ರು. ಈ ಹಿನ್ನೆಲೆ ಇವತ್ತು ತಪ್ಪಿ ಹೋಗಿದೆ.

ಇವತ್ತಿನ ನಟರು ಒಳ್ಳೆಯವರು, ಕನ್ನಡದ ಬಗ್ಗೆ ದೊಡ್ಡ ಮಾತಾಡ್ತಾರೆ. ಇವರಿಗೆ ಒಳ್ಳೇ ಸಿನಿಮ ಬೇಕು. ಜನರ ಪ್ರೀತಿ ಬೇಕು. ವಿವಾದ ಬಂದ್ರೆ ಕನ್ನಡಕ್ಕಾಗಿ ಬೀದಿಗಿಳೀತಾರೆ. ಆದರೆ ಅವರಿಗೆ ಸಾಂಸ್ಕ್ರುತಿಕ ಸ್ಪರ್ಶವೇ ಇಲ್ಲ. ಹೀಗೆ ಹೇಳಿದ್ರೆ Typical ಕನ್ನಡ ಮೇಷ್ಟ್ರು ಹೀಗೆ ಮಾತಾಡ್ತಾರೆ’ ಅಂತಾರೆ.ಅದಕ್ಕೂ- ಇದಕ್ಕು ಯಾವ ಸಂಭಂಧವೂ ಇಲ್ಲ. ಜನಜೀವನದಲ್ಲಿರೋ, ಸರಳ,ಸಾಧಾರಣ ನುಡಿಗಟ್ಟುಗಳನ್ನು ಸಮಯೊಚಿತವಾಗಿ ಬಳಸೋದು ಸಂಭಾಷಣೆ. ಸಿನಿಮಾ ಪ್ರಬಲ ಮಾಧ್ಯಮ. ಕನ್ನಡವನ್ನು ಸರಿಯಾಗಿ ಬಳಸದೇ ಇದ್ರೆ ಮುಂದೆ ಈಗಿನ ಕನ್ನಡವೇ ನಿಜವೇನೋ ಅನ್ನೋ ಅಪಾಯ ಖಂಡಿತ.

೬) ಚಲನಚಿತ್ರಗಳು ಭಾಷೆ ಜೊತೆ, ಸಂಸ್ಕ್ಕ್ರುತಿಯನ್ನು ಕೂಡ  ಪ್ರತಿಪಾದಿಸುತ್ತವೆ. ಇವತ್ತಿನ ಚಿತ್ರಗಳಲ್ಲಿ ನಾಯಕನೇ ಹಿಂಬಾಲಕರ ಕೆನ್ನೆಗೆ ಕಾರಣ ಇಲ್ಲದೇ ಹೊಡೆಯೋದು, ಪದೇ ಪದೇ ಪುನರಾವರ್ತಿಸಿ ಹೊಡೆಯೋದನ್ನು  ಹಾಸ್ಯದ ಹೆಸರಲ್ಲಿ ತೋರಿಸ್ತಿದ್ದಾರೆ. ಇದು ಇವತ್ತಿನ ಪೀಳಿಗೆಗೆ ನೀಡೋ ಸಂದೇಶವನ್ನು ಏನಂತ ಹೇಳ್ತೀರಿ?

ಇದು ಅಭಿರುಚಿಯ ಪ್ರಶ್ನೆ.ಅಭಿರುಚಿಯನ್ನು ಮಾಧ್ಯಮಗಳು ಯಾವಾಗ ಕಡೆಗಣಿಸ್ತಾವೋ ಆಗ ಅದು ಅತ್ಯಂತ ಅಪಾಯದ ಸ್ಥಿತಿಯನ್ನು ತಲುಪುತ್ತವೆ.ಪ್ರಬಲ ಮಾದ್ಯಮ ಸಿನಿಮಾಕ್ಕೆ ಒಳ್ಳೆಯ ಅಭಿರುಚಿಯನ್ನು ಉಳಿಸೋ ಗುರುತರ ಹೊಣೆ ಇದೆ. ಜಗತ್ತಿನಲ್ಲಿ ಇಲ್ದೇ ಇರೋ ಹಿಂಸೆ,  ಕೆಟ್ಟ ಸಂಭಾಷಣೆಯನ್ನು ಇವತ್ತು ಸಿನಿಮಾದಲ್ಲಿ ನೋಡ್ತೀವಿ.

ಕಲೆ ಅಂದಾಗ ಒಂದಿಷ್ಟು ವೈಭವೀಕರಣ,  ಉತ್ಪ್ರೇಕ್ಷೆ ಸಹಜ . ಆದರೆ ಅದನ್ನು ಕಲಾತ್ಮಕವಾಗಿ ಮುಂದಿಡಬೇಕು. ಆತಂಕದ ವಿಚಾರ ಅಂದ್ರೆ ಕೆಟ್ಟ ಸಿನಿಮಾ ಬಂದಾಗ ಜನ ಅದನ್ನು ತಿರಸ್ಕರಿಸ್ತಾ ಇಲ್ಲ. “ಅವರು ನೋಡ್ತಾರ್ರಿ ಅದಕ್ಕೆ ಮಾಡ್ತೀವಿ ಅಂತ ಇವರು, ಇವರು ಕೊಡ್ತಾರ್ರೀ ಅದಕ್ಕೆ ನೋಡ್ತೀವಿ” ಅಂತ ಅವರು ಹೇಳ್ತಾರೆ.

ಕೊನೆಗೆ ಇದು ಸಮಾಜದಲ್ಲಿನ ಜನರ ಹೊಣೆಗಾರಿಕೆಯ ಪ್ರಶ್ನೆ. ರಾಜಕಾರಣಿಗಳು, ಸಾಂಸ್ಕ್ರುತಿಕ ನಾಯಕರ ಸಾಕ್ಷಿ ಪ್ರಶ್ನೆ ವಿಚಾರ.

೭) ಭಾಷೆ ಸತ್ರೆ, ಅದಕ್ಕೆ ಸಂಭಂಧಿಸಿದ ಸಾಹಿತ್ಯ, ಚಿತ್ರೋದ್ಯಮ ಮತ್ತೆ ಇವೆರಡಕ್ಕೂ ಪೂರಕವಾಗಿರೋ ಉದ್ಯಮಗಳ ಅವನತಿ ಕಟ್ಟಿಟ್ಟ ಬುತ್ತಿ. ಹಾಗಾಗಿ ಕನ್ನಡ ಉಳಿಸೋಕೆ ಈ ಉದ್ಯಮಗಳು ಮಾಡ್ತಿರೋ ಕೆಲಸಗಳೇನು? ಮಾಡ ಬಹುದಾದ ಕೆಲಸಗಳೇನು?

ಕನ್ನದ ಕಟ್ಟೊ ವಿಚಾರ ಬಹಳ ಇದೆ. ಓದು, ಬರಹ, ನಾಟಕ, ಸಿನಿಮ , ಸಂಘ , ಸಂಸ್ಥೆಗಳು ಇವೆಲ್ಲ ಭಾಷೆ ಜೊತೆ ತಳುಕು ಹಾಕಿಕೊಂಡ ವಿಚಾರಗಳು. ಇವನ್ನೆಲ್ಲ ಮಾಡೋ ಅಂತ ಜನರಿದ್ದಾರೆ ಆದ್ರೆ ಅವರನ್ನು ಅನುಸರಿಸೋ ರಣ ಪಡೆಯಿಲ್ಲ.

ಬೇರೆ ಭಾಷೆಗಳಿಗೂ , ಕನ್ನಡಕ್ಕು ಇದೇ ವ್ಯತ್ಯಾಸ. ಕನ್ನಡಿಗ ಇವತ್ತು intellectual arrogance ಬೆಳೆಸಿಕೊಂಡು ಸಿನಿಮಾಕ್ಕೆ ಬರ್ತಾನೆ. ಆತನಲ್ಲಿ ಸಿನಿಕತೆ ಎದ್ದು ಕಾಣುತ್ತೆ. ’ಕನ್ನಡ ಸಿನಿಮಾ” ಅನ್ನೋ ಧೋರಣೆಯಿಂದ ಸಿನಿಮಾಕ್ಕೆ ಬರ್ತಾನೆ. ಬೇರೆ ಭಾಷೆಯ ಜನ ಭಾಷೆಗೆ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾರೆ. ಇದು ಇಲ್ದೇ ಇರೋದ್ರಿಂದ  ಕನ್ನಡದಲ್ಲಿ ಕೊಡುವವನ ಮತ್ತು ನೋಡುವವನ ನಡುವಿನ ಕಂದಕ ದೊಡ್ಡದಾಗಿದೆ.

೮) ಹೊರದೇಶದಲ್ಲಿರೋ ಕನ್ನಡಿಗರು ಇದಕ್ಕೆ ಯಾವ ರೀತಿ ಬೆಂಬಲ ಕೊಡಬಹುದು?

ಹೆಚ್ಚೇನೂ ನಿರೀಕ್ಷಿಸಲಾಗಲ್ಲ. ಭಾಷೆ- ಸಂಸ್ಕ್ರುತಿ ಎಲ್ಲ ಬಿಟ್ಟು ಬಂದ ಕಾರಣಕ್ಕೆ ಅನಿವಾಸಿಗಳಲ್ಲಿ ಒಂದು ಬಗೆಯ nostalgia ಇರುತ್ತೆ . ಅಲ್ಲಿಗೆ ಮರಳಿ ಹೋಗಲು ಆಗಲ್ಲ ಅನ್ನೋ ಕಾರಣಕ್ಕೆ ಕನ್ನಡ ಮಹತ್ವದ್ದು ಅನ್ನೋ ಭಾವನೆ ಇರುತ್ತೆ ಹಾಗಾಗಿ  ಒಳನಾಡಿನ ತುಡಿತಕ್ಕಿಂತ ಹೊರನಾಡಿನ ತುಡಿತ ತೀವ್ರವಾಗಿದೆ.

ನಾನು ನನ್ನ ಹಳ್ಳಿಯ, ನಾನು ಓದಿದ ಕನ್ನಡ  ಶಾಲೆಯನ್ನು ದತ್ತು ತಗೊಂಡಿದ್ದೀನೆ, ಕೈಲಾದ್ದು ಮಾಡ್ತಿದ್ದೀನಿ. ಆತಂಕದ ವಿಚಾರ ಅಂದ್ರೆ 200 ಇದ್ದ ವಿದ್ಯಾ ರ್ಥಿಗಳ ಸಂಖ್ಯೆ 30 ಕ್ಕೆ ಇಳಿದಿರೋದು!!! ಅನಿವಾಸಿಗಳಾಗಲೀ, ನಿವಾಸಿಗಳೇ ಆಗಲಿ , ಕನ್ನಡವನ್ನು ಏಕ ಪ್ರಕಾರವಾಗಿ ಪ್ರೀತಿಸ್ಬೇಕು. ಅದು ನಮ್ಮೆಲ್ಲರ ಹೊಣೆಗಾರಿಕೆ.

೯)  England  ಪ್ರವಾಸದ  high lights ಏನು?”

ಮಾತಾಡ್ ಮಾತಾಡ್ ಮಲ್ಲಿಗೆ’ ಪ್ರದರ್ಶನಕ್ಕೆ ಹಿಂದೆ ಬಂದಿದ್ದೆ.  ಆದರೆ ಈ ಬಾರಿ, ಕನ್ನಡಿಗರು, ಯು.ಕೆ.ಯ ಮಿತ್ರತ್ವದಿಂದ ಇಂಗ್ಲೆಂಡಿನ ನಾನ ಊರುಗಳಿಗೆ ಹೋಗಿ ಚಿತ್ರ ತೋರಿಸಿ, ಮಾತಾಡೋ ಸಂದರ್ಭ ಬಂದಿದೆ.ಇದು ದೊಡ್ಡ ವ್ಯವಹಾರವೇನಲ್ಲ. ಆದರೆ, ವ್ಯವಹಾರದ ಆಚೆಗಿನ ಪ್ರೀತಿ, ವಿಶ್ವಾಸದ ಅನುಭವ ಆಯ್ತು. ಬಸವಣ್ಣನ ಪ್ರತಿಮೆ ನೋಡಿದೆ.ಭಾರತೀಯ ವಿದ್ಯಾ ಭವನಕ್ಕೆ ಹೋಗಿದ್ದೆ. ನಂದ ಕುಮಾರ್ ಅವರು ಮಾಡ್ತಿರೋ ಕನ್ನಡ ಚಟುವಟಿಕೆಗಳನ್ನು  ನೋಡಿ ತುಂಬ ಸಂತೋಷವಾಗಿದೆ. ಕನ್ನಡದ  ಬಗ್ಗೆ ತುಡಿಯೋ ನೀವೆಲ್ಲ ಕನ್ನಡದ  ಆಶಾ ಕಿರಣಗಳೇ.

ಎಡ ತುದಿ-ವಿಡೀಯೋ ಮಾಡಿದ ಡಾ, ಶ್ರೀವತ್ಸ ದೇಸಾಯಿ, ಬಲತುದಿ- ಕನ್ನಡಿಗರು ಯುಕೆ ಯ ಅಧ್ಯಕ್ಷ ಶ್ರೀ ಗಣಪತಿ ಭಟ್

೧೧) ಕನ್ನಡ  ಚಿತ್ರ ರಂಗದ ಮುಂದಿನ ಭವಿಷ್ಯ ನಿಮ್ಮ ಊಹೆನಲ್ಲಿ ಏನು?

ನಾನು ಪ್ರವಾದಿ ತರ ಮಾತಾಡೊಲ್ಲ.

ಸದ್ಯಕ್ಕೆ ಸಂಖ್ಯೆ ಜಾಸ್ತಿ ಆಗಿದೆ. ಗುಣ ಮಟ್ಟ ಕಡಿಮೆ ಆಗಿದೆ. ನಿಧಾನವಾಗಿ ವಿಶ್ವ ಮಾರುಕಟ್ಟೆ ತೆರೆದು ಕೊಳ್ತಾ ಇದೆ.ಕನ್ನಡ ಮಾರಿಕಟ್ಟೆ  ಸೀಮಿತ ಮಾರುಕಟ್ಟೆ.  ವಿದೇಶಿ ಪ್ರದರ್ಶನಗಳು ಶೈಶವಾಸ್ಥೆ ಯಲ್ಲಿದೆ. ಇದಕ್ಕೊಂದು ಕ್ರಮ ಮತ್ತು ಗುಣ ಮಟ್ಟದ ಅಗತ್ಯವಿದೆ.

ಇವತ್ತಿನ ಕನ್ನಡ ಸಿನಿಮಾದಲ್ಲಿರೋ ಸಾಂಸ್ಕ್ರುತಿಕ ಶೂನ್ಯತೆ ಭಯ ತರೊ ಅಂತದ್ದು. ಆದ್ದರಿಂದ ಕಾಲ ಈ ಪ್ರಶ್ನೆಗೆ ಏನು ಉತ್ತರ ಕೊಡುತ್ತೆ ಅಂತ  ಕಾದು ನೋಡಬೇಕು.

೧೨)ಸಿನಿಮಾ, ಟಿ. ವಿ.,ನಿಮ್ಮ ತರಭೇತಿ ಶಾಲೆ, ಈ ರೀತಿಯ ಓಡಾಟದ ನಡುವೆ ನಿಮ್ಮಲ್ಲಿರೋ ಬರಹಗಾರನ ಆರೋಗ್ಯ ಹೇಗಿದೆ?

ಅದರ ಬಗ್ಗೆ ಆತಂಕ ಇದೆ. ಪ್ರಜಾವಾಣಿಗೆ ’ರೆಕ್ಕೆ ಬೇರು” ಅನ್ನೋ ಕಾಲಂ ಬರೀತಿದ್ದೆ.  ’ಇಷ್ಟಕಾಮ್ಯ’ ದ ಕಾರಣ ನಿಲ್ಲಿಸಿದೆ. ಈಗ ಈ ಕೆಲಸ ಮುಗಿದಿದೆ. ಸಿನಿಮಾ ದೈಹಿಕವಾಗಿ  ಹಿಂಡಿ ಹಿಪ್ಪೆ ಮಾಡೋ ಕಾರಣ ಬರಹಕ್ಕೆ ಬೇಕಾದ ಶಕ್ತಿ ಕಡಿಮೆಯಾಗಿದೆ. ಬರವಣಿಗೆಯನ್ನು ಮತ್ತೆ  ಶುರುಮಾಡಿ ನನ್ನ ನೆಚ್ಚಿನ ಸಣ್ಣಕಥೆ ಗಳ ಬರಹವನ್ನು ಮುಂದುವರಿಸಬೇಕು.

ನಿಮ್ಮ ಮಾಧ್ಯಮದ ಮೂಲಕ ಎಲ್ಲ ಕನ್ನಡದ ಮನಸ್ಸುಗಳಿಗೆ ಶರಣು ಶರಣಾರ್ಥಿ. ಸಾಹಿತ್ಯ, ಪ್ರಕಟನೆ, ಸಿನಿಮಾ ಈ ಯಾವುದರ ಬಗ್ಗೆ ಏನೇ ಸಹಾಯ ಬೇಕೆಂದರೂ ಕೇಳಿ. ನಿಮಗೆ ಸ್ಪಂದಿಸಲು ನಾನು ಯಾವಗಲೂ ತಯಾರಿದ್ದೇನೆ. ಕನ್ನಡ ಕಟ್ಟೋ ಕೆಲಸ ನಿರಂತರವಾಗಿ ನಡೆಯಲಿ. ಧನ್ಯವಾದ.

ಡಾ. ಪ್ರೇಮಲತ ಬಿ

ಈ ಸಂದರ್ಶನವನ್ನು ಕೆಳಗಿನ ಲಿಂಕ್ ಒತ್ತುವುದರ ಮೂಲಕ ನೋಡಬಹುದು.ಕ್ರುಪೆ-ಡಾ. ಶ್ರೀವತ್ಸ ದೇಸಾಯಿ 

https://www.youtube.com/watch?v=TSGa8sLV61A