ಮೊದಲನೆಯ ಮಹಾಯುದ್ಧದ ಅಜ್ಞಾತ ಯೋಧರಿಗೆ ಯು. ಕೆ. ಕನ್ನಡತಿಯ ನೃತ್ಯಾಂಜಲಿ -ಶ್ರೀವತ್ಸ ದೇಸಾಯಿ ಬರೆದ ಲೇಖನ

ಒಂದು ಶತಮಾನವಾಯಿತು ಮೊದಲ ಮಹಾಯುದ್ಧ ಮುಗಿದು. ಅಂದು ಪರಂಗಿಗಳ ಆಳ್ವಿಕೆಯಲ್ಲಿದ್ದ ಭಾರತದ ಸೈನಿಕರು ಅಪಾರ ಬೆಲೆ ತೆತ್ತರು. ಆದರೆ ಅವರ ಬಲಿದಾನ ಯಾವ ಮಾನ್ಯತೆಯನ್ನೂ ಪಡೆಯಲಿಲ್ಲ. ದಿಲ್ಲಿಯ ಇಂಡಿಯಾ ಗೇಟ್ ನಲ್ಲಿ ಮೊದಲ ಮಹಾಯುದ್ಧದಲ್ಲಿ ಮಡಿದ ಯೋಧರ ಹೆಸರು ಕೆತ್ತಿದ್ದರೂ ಹೆಚ್ಚಿನ ಭಾರತೀಯರಿಗೆ ಇದರ ಮಾಹಿತಿಯೂ ಇಲ್ಲ. ಈ ವಾರ ಮರೆವಿನಂಗಳದಿಂದ ಈ ಕೆಚ್ಚೆದೆಯ ಕಲಿಗಳ ನೆನಪನ್ನು ಹೊರತರುತ್ತಿರುವ ಶಾಂತಾ ರಾವ್ ಅವರ ಪ್ರಯತ್ನವನ್ನು ನಮ್ಮ ಮುಂದೆ ಹಂಚಿಕೊಡಿದ್ದಾರೆ ಶ್ರೀವತ್ಸ ದೇಸಾಯಿಯವರು. ಮಹಾಯುದ್ಧದ ಯೋಧರ ಬಗ್ಗೆ ಸಂಶೋಧನೆ ಮಾಡಿ, ಅಂದು ಹೋರಾಡಿದ ಕನ್ನಡಿಗರನ್ನೂ ನಮಗೆ ಪರಿಚಯ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಮಗೆ ಸಾಧ್ಯವಾದರೆ ನೃತ್ಯರೂಪಕವನ್ನೂ ವೀಕ್ಷಿಸಿ.(ಸಂ)

ಇಂಗ್ಲಂಡಿನ  ಹ್ಯಾಲಿಫ್ಯಾಕ್ಸ್ ನ ಶಾಂತಾ ರಾವ್ ಅವರ ನೃತ್ಯ ರೂಪಕದಲ್ಲಿ ಬರುವ ಒಂದು ಹೃದ್ರಾವಕ ದೃಶ್ಯ: ಯುದ್ಧಕ್ಕೆ ಸಜ್ಜಾಗಿ ಹೊರಟ ಆಜಾನಬಾಹು ಸಿಖ್ ಯುವಕನನ್ನು ಹರಸಿ ಕಣ್ಣೀರು ತುಂಬಿ ಬೀಳ್ಕೊಡುತ್ತಿದ್ದಾಳೆ ಹೆತ್ತ ತಾಯಿ. ಆಗಷ್ಟೇ ತಾನೆ ತನ್ನ ಕೈಯಾರೆ ತನ್ನೆದೆಯ ಪ್ರೀತಿ, ವಾತ್ಸಲ್ಯ ಬೆರೆಸಿ ತನ್ನ ಕೈಯಿಂದ ಮಾಡಿದ ಸ್ವಾದಿಷ್ಟ ಊಟ ಕೊನೆಯ ಬಾರಿ ತನ್ನ ಕರುಳ ಕುಡಿಗೆ ತಿನಿಸಿ, ಕೊನೆಯ ಬಾರಿ ಹಾಲಿನ ಜೊತೆಗೆ ಬಹುಶಃ ತನ್ನ ಕಣ್ಣೀರನ್ನೂ ಬೆರೆಸಿದ್ದಾಳೆ! ತಾಯಿಯ ಕಾಲಿಗೆ ನಮಸ್ಕರಿಸಿ ಅಳಬೇಡವೆಂದು ಬಾಯಿ ಮೇಲೆ ಬೊಟ್ಟಿಟ್ಟು ಬೇಡಿ ಹೊರಟ ಆತನ ತಲೆಮೇಲೆ ಸಿಖ್ಕ ಧರ್ಮಗ್ರಂಥ ‘ಗುರುಗ್ರಂಥ ಸಾಹಿಬ್’. ಅದನ್ನು ಭಕ್ತಿಪೂರ್ವಕವಾಗಿ ಶಿರೋಧಾರಣ ಮಾಡಿ ತಾಳಕ್ಕೆ ಸರಿಯಾಗಿ ಹೆಜ್ಜೆಯಿಡುತ್ತ ನೇಪಥ್ಯದತ್ತ ಸರಿಯುವಾಗ ಹಿನ್ನೆಲೆಯಲ್ಲಿ ಮಿಡಿವ ಆರ್ದ್ರತೆಯಲ್ಲಿ ಮಿಂದ ವೇಣು ಗಾನ. ಪ್ರೇಕ್ಷಕರ ಎದೆಯಲ್ಲಿ ಏನೋ ಕಸಿವಿಸಿ, ಕಣ್ಣಂಚಿನ ಕೊನೆಯಲ್ಲಿ ಒಂದು ಅಶ್ರುಬಿಂದು. ಆತನ ಹಿಂದೆ ಬಿಳಿ ಪರದೆಯ ಮೇಲೆ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ ಭಾರತೀಯ ಯೋಧರು ಮರಳುಗಾಡಿನಲ್ಲಿ ಪ್ರಾರ್ಥನೆಗೆ ಹೊರಟ ಕಪ್ಪು-ಬಿಳಿ

Unknown becomes Knownದಲ್ಲಿಯ ಒಂದು ದೃಶ್ಯ (ಚಿತ್ರಕೃಪೆ: annapurnadance.com)

ಛಾಯಾಚಿತ್ರದ ಪ್ರೊಜೆಕ್ಷನ್. ಪ್ರೇಕ್ಷಕರ ಸುದೀರ್ಘ ಕರತಾಡನದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳುತ್ತದೆ.

ಈ ನಿರೂಪಣೆ ಬರೀ ಕಾಲ್ಪನಿಕ ಕಟ್ಟು ಕಥೆಯಲ್ಲ. ಈ ಸನ್ನಿವೇಶ ಆ 18 ವರ್ಷದ ತರುಣನಂತೆಯೇ ಬ್ರಿಟಿಷ್ ಸೈನ್ಯದಲ್ಲಿ ಸೇರಿ ಅವರ ಪರವಾಗಿ ಯುದ್ಧ ಮಾಡಿ ಮಡಿದ 74,000 ಅವಿಭಾಜಿತ ಭಾರತದ ಯೋಧರ ಕಥೆಯನ್ನು ಹೇಳುತ್ತಿದೆ ಎಂಬ ಸತ್ಯದ ಮನವರಿಕೆ ಮೊದಲ ಸಲ ಆದಾಗ ಸಭಿಕರ ಮೈನವಿರೇಳುತ್ತದೆ! ಮೊದಲನೆಯ ಮಹಾಯುದ್ಧದ (1914-18) ಶತಾಬ್ದಿಯ ಸಂದರ್ಭದಲ್ಲಿ ಈ ನೃತ್ಯ ರೂಪಕವನ್ನು ಯುಕೆ ದಲ್ಲಿf ಕಳೆದೆರಡು ವರ್ಷಗಳಲ್ಲಿ ಹತ್ತಾರು ಕಡೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ ನಿರ್ದೇಶಕಿ ಶಾಂತಾ ರಾವ್. ಇದಲ್ಲದೆ ತಾವೇ ಹುಟ್ಟು ಹಾಕಿದ ಅನ್ನಪೂರ್ಣ ಡಾನ್ಸ್ ಕಂಪನಿಯ ವತಿಯಿಂದ ಶಾಲೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಅಂಗ ವಿಕಲ (ಡಿಸೆಬಲ್ಡ್) ಗ್ರುಪ್, ಮಹಿಳಾ ಸಂಘ (Womens Institute) ಗಳಲ್ಲಿ ನೂರಾರು ಪ್ರಾತ್ಯಕ್ಷಿಕೆ, ಕಥಾರೂಪಕಗಳನ್ನು (story telling) ಪ್ರದರ್ಶಿಸಿದ ಹೆಗ್ಗಳಿಕೆ ಇವರದಾಗಿದೆ. ಯು.ಕೆ.ದ ಯಾರ್ಕ್ ಶೈರಿನಲ್ಲಿ 1975 ರಿಂದಲೂ ವಾಸಿಸುತ್ತಿರುವ ಕುಂದಾಪುರದ ಮೂಲದವರಾದ ಶಾಂತಾ ರಾವ್ ಅವರು ಯು ಕೆ ಕನ್ನಡ ಬಳಗದ ಆಜೀವ ಸದಸ್ಯೆ ಸಹ. ಭರತ ನಾಟ್ಯದಲ್ಲಿ ಪಾರಂಗತರಾದ ಶಾಂತಾ ಅವರಿಗೆ ಅ ಮಹಾಯುದ್ಧದಲ್ಲಿ ಮಡಿದು ಮಣ್ಣಾಗಿ ’ನಿರ್ನಾಮವಾಗಿ’ ಹೋದ ಅಜ್ಞಾತ ಯೋಧರಿಗೆ ತಮ್ಮಿಂದ ಒಂದು ಶ್ರದ್ಧಾಂಜಲಿಯಾದರೂ ಸಲ್ಲಬೇಕು ಎಂದು ಪಣ ತೊಟ್ಟು ಕಳೆದ ವರ್ಷ ಕಾರ್ಯಪ್ರವೃತ್ತರಾದರು. ಅದರ ಫಲವೇ ಈ ”Unknown becomes Known” ಎನ್ನುವ ನಾಟ್ಯ ರೂಪಕ.
Read More »