ಚಂದಿರ…… ಚಂದಿರ…… – ಎರಡು ಕವನಗಳು; ಮುರಳಿ ಹತ್ವಾರ್ ಹಾಗೂ ಪ್ರೇಮಾ ಸಾಗರ್

ವಿಜ್ಞಾನಿಗೆ ಸುಮಾರು ನಾಲ್ಕೂವರೆ ಬಿಲಿಯನ್ ವರ್ಷಗಳಿಂದ ಭೂಮಿಯ ಸುತ್ತ ಸುತ್ತುವ ಕಲ್ಲಾದರೂ, ಚಂದ್ರ ಪ್ರತಿಯೊಬ್ಬ ದೇಶದ, ಭಾಷೆಯ, ಸಂಸ್ಕೃತಿಯ ಕವಿಯ ಪ್ರೀತಿಯ ವಿಷಯ. ಚಂದ್ರ ನಮ್ಮಲ್ಲಿ ಮಕ್ಕಳಿಗೆ ಆಟವಾಡಿಸುವ ಚಂದಾಮಾಮನಾದರೆ, ಪಾಶ್ಚಾತ್ಯ ದೇಶಗಳಲ್ಲಿ ಚೀಸಿನಿಂದ ಮಾಡಲ್ಪಟ್ಟವನಾಗುತ್ತಾನೆ. ಮುಖ್ಯವಾಗಿ, ಪ್ರೇಮಿಗಳಿಗೆ ಅದರಲ್ಲೂ ವಿರಹಿಗಳಿಗೆ, ಚಂದ್ರನ ಬಗ್ಗೆ ಮಾತಾಡದಿದ್ದರೆ ಆಗುವುದೇ ಇಲ್ಲ; ಪ್ರೇಮಿಗಳಿಗೆ ತಂಪಾಗಿ ಬೆಳಗುವ ಚಂದ್ರ, ವಿರಹಿಗಳನ್ನು ಬಿಸಿಯಾಗಿ ಸುಡುತ್ತಾನಂತೆ! ಸಧ್ಯಕ್ಕೆ, ಮತ್ತೆ `ರೇಸ್ ಟು ಮೂನ್` ಶುರುವಾಗುವ ಲಕ್ಷಣಗಳೂ ಇವೆ. ಅಂತಹ ಚಂದ್ರನ ಬಗ್ಗೆ ನಮ್ಮ ಅನಿವಾಸಿಯ ಮುರಳಿ ಹತ್ವಾರ್ ಹಾಗೂ ಹೊಸದಾಗಿ ಪರಿಚಯಿಸುತ್ತಿರುವ ಕವಯಿತ್ರಿ ಪ್ರೇಮಾ ಸಾಗರ್ ಅವರ ಅನಿಸಿಕೆಗಳೇನು, ಓದೋಣವೆ? ಓದಿ ನಾವೂ ಬರೆಯುವ, ಬರೆದದ್ದನ್ನು `ಅನಿವಾಸಿ.ಕಾಂ`ಗೆ ಕಳಿಸುವ… – ಎಲ್ಲೆನ್ ಗುಡೂರ್ (ಸಂ.)

ಚಂದಿರನಲ್ಲಿ ನೀರಿದೆಯಂತೆ – ಮುರಳಿ ಹತ್ವಾರ್

ವ್ಯಂಗ್ಯಚಿತ್ರ: ಲಕ್ಷ್ಮೀನಾರಾಯಣ ಗುಡೂರ್
 ಬನ್ನಿ ಹೋಗೋಣ
 ಚಂದಿರನಲ್ಲಿ ನೀರಿದೆಯಂತೆ
  
 ಚಂಬು-ಬಿಂದಿಗೆ, ಹಾರೆ-ಗುದ್ದಲಿ
 ದಿಂಬು-ಹಾಸಿಗೆ ಹಿಡಿದು ಬನ್ನಿ ಸಾಲಲಿ
 ಪ್ರೋಕ್ಷಣೆ ಆಪೋಶನಗಳ ಮಡಿಯಲಿ
 ಗುಂಡಿ ತೋಡಬೇಕಿದೆ ಶಶಿಯ ಬಯಲಲಿ
  
 ಅಗೆದಷ್ಟೂ ಬಗೆಬಗೆಯ ನಿಧಿಯಂತೆ,
 ಕಣಕಣವೂ ಅಪರಿಮಿತ ಬೆಲೆಯಂತೆ,
 ತುಂಡುಗಳ ಭುವಿಗೆ ಕಳಿಸೋಣವಂತೆ
 'ಮೇಡ್ ಇನ್ ಮೂನ್' ಗೆ ಕಾದಿದೆ ಸಂತೆ
  
 ಏನು ಬೇಕಾದರೂ ಕಟ್ಟಬಹುದು
 ಕಲ್ಲು ಕಲ್ಲಿಗೂ ನಿಮ್ಮ ಹೆಸರೇ ಇಟ್ಟು
 ದೇವರೆಂದು ಜನ ಪೂಜಿಸಲೂ ಬಹುದು
 ನಿಮಗೇ ಹರಕೆಯ ಹಾರ ಕೊಟ್ಟು!
  
 ಹೇಳಿ, ಯಾರು ಬರುತ್ತೀರಿ?
 ನೀವಾ! ಹೆಸರೇನೆಂದಿರಿ?
 ಬೆಂಗಳೂರಿನಲ್ಲಿ ಒಂದೆರಡು ಸೈಟು?
 ಹೋಗಲಿ, ಬ್ಯಾಂಕಿನಲ್ಲಿ ದೊಡ್ಡ ಡೆಪಾಸಿಟ್ಟು?
 ಅಧಿಕಾರ ಮಾಡುವ ಧಿಮಾಕಿನ ಸೀಟು?
 ಯಾವುದು ಇಲ್ಲವೇ?
 ಬೆವರಿನ ಅಂಗಡಿಯಾದರೂ ಇಟ್ಟಿದ್ದೀರಾ?
 ಇಲ್ಲಾ, ಮಾರಿಕೊಳ್ಳುವ ಮಾದಕತೆಯ ಮಾರ್ಕೆಟ್ಟು?
  
 ಯಾವುದೂ ಇಲ್ಲ ಎಂದರೆ, ಪಕ್ಕಕ್ಕೆ ಬನ್ನಿ.
 ಬಲವಿಲ್ಲದ, ಎಡವೆನ್ನದ ನಡುವೊಂದು
 ನೀರಿಲ್ಲದ ಮರುಭೂಮಿಯ ಮಡು
 ಮರೀಚಿಕೆಯ ಮಾಯೆಯಲ್ಲಿ ಮಜಾ ಮಾಡಿ. 
  
 ಉಳಿದವರು ಬನ್ನಿ, ಬನ್ನಿ,
 ಈಗಲೇ ಹಾರಬೇಕಿದೆ ಮೇಲೆ
 ಹೆಜ್ಜೆ ಮೊದಲಿಟ್ಟವರೇ ರಾಜರಂತೆ
 ಕಾಲಿಟ್ಟಮೇಲೆ ಉಳಿದೆಲ್ಲ ಚಿಂತೆ
  
 ನೀರು ಖಾಲಿಯಾದರೆ ಏನು ಎಂದಿರಾ
 ಆದಾಗ ನೋಡೋಣ ಬಿಡಿ
 ಹೇಗೂ ಚೆನ್ನಾಗಿ ಕಲಿತಿದ್ದೇವಲ್ಲ
 ಚಿಮ್ಮಿಸಿದರಾಯಿತು ಚಂದ್ರನ
 ಮೂಲೆ ಮೂಲೆಯಲ್ಲೂ
 ಬಿಸಿ ಬಿಸಿಯ ನೆತ್ತರಿನ ಬುಗ್ಗೆ! 

*************************************************

ಹೀಗೊಂದು ಗೆಳೆತನದ ಬಯಕೆ! – ಪ್ರೇಮಾ ಸಾಗರ್

ಪರಿಚಯ: ನಾನು ಒಬ್ಬ ಹವ್ಯಾಸಿ ಲೇಖಕಿ. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಈಳಿ ಎಂಬ ಸಣ್ಣ ಊರಿನವಳು. ಬೆಂಗಳೂರಲ್ಲಿ ಶಿಕ್ಷಣ ಪಡೆದು Engineering degree ಪಡೆದುಕೊಂಡಿದ್ದೇನೆ. IT ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಗಂಡ ಹಾಗು ಮಕ್ಕಳೊಡನೆ Milton Keynes ನಲ್ಲಿ ವಾಸವಾಗಿದ್ದೇನೆ.

ಚಿಕ್ಕಂದಿನಿಂದಲೂ ಹಲವಾರು ಭಾಷೆಗಳಲ್ಲಿ ಹಾಗು ಅನ್ಯಸಂಸ್ಕೃತಿಗಳಲ್ಲಿ ಆಸಕ್ತಿ. ಇಂತಹ ಆಸಕ್ತಿಯನ್ನು ವಿಕಾಸಗೊಳಿಸುವ, ವ್ಯಕ್ತಪಡಿಸುವ ಒಂದು ಮಾಧ್ಯಮವನ್ನು ಬರವಣಿಗೆಯಲ್ಲಿ ಕಂಡೆ. ನನ್ನ ತಾಯಿಯವರಾದ ಶ್ರೀಮತಿ ಕಮಲಾ ಅನಂತ, ಆಗಾಗ ಹವ್ಯಾಸಕ್ಕಾಗಿ ಬರೆಯುತ್ತಿದ್ದ ಚುಟುಕು ಕವನಗಳು ನನ್ನನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದವು. ನನಗೇ ಗೊತ್ತಿಲ್ಲದಂತೆ ಈ ಚಿಕ್ಕ ಹವ್ಯಾಸ ನನ್ನಲ್ಲಿ ಬಂದು ಸೇರಿಕೊಂಡಿತು.

ನಾನು ಬರೆವ ಪದ್ಯಗಳು ಹಾಗು ಲೇಖನಗಳು ನನ್ನ ಭಾವನೆಗಳಿಗೆ, ಆಸೆಗಳಿಗೆ, ಅಂದಾಜುಗಳಿಗೆ ರೆಕ್ಕೆ ಕೊಟ್ಟು, ಸೆರೆಯಿಲ್ಲದಂತೆ ಎತ್ತರಕ್ಕೆ ಹಾರಿಸುವ ಧ್ಯೇಯ ನನ್ನದಾಗಿದೆ; ಈಗಿನವರೆಗೂ ನನ್ನ ಕಣ್ಣುಗಳಿಗಷ್ಟೇ ಸೀಮಿತವಾಗಿದ್ದು, ನನ್ನ ಮನಸ್ಸನ್ನು ಹಗುರವಾಗಿಸುವ ಕಾರ್ಯ ಮಾಡುತ್ತಾ ಬಂದಿವೆ. ಇದು ನನ್ನ ಮೊದಲ ಪ್ರಕಟಣೆ.

ಇಂತಹದೊಂದು ಹವ್ಯಾಸ ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ನನ್ನ ಅಮ್ಮನಿಗೂ, ಶಿಕ್ಷಕರಿಗೂ, ನನ್ನನ್ನು ಪ್ರೋತ್ಸಾಹಿಸುವ ನನ್ನೆಲ್ಲ ಬಂಧು ಬಾಂಧವರಿಗೂ ನಾನು ಸದಾ ಚಿರಋಣಿ.

***

 ಬಾನಿನ ಅಂಗಳದಿ ಬೆಳ್ಳಿಯ ಆಟ..
 ಮುಚ್ಚಿಡಲೆಂದು ಮೋಡದ ಓಟ! 
  
 ಚಂದಿರನೆಡೆಗೆ ನನ್ನಯ ಒಲವೇ.. 
 ಮಿಣುಕಲೂ ಆಗಸ ಅದೆಂತಹ ಚಲುವೇ!
  
 ಇದ್ದರೆ ಸಾಕೇ ತಂಗಾಳಿಯ ಒಡನಾಟ?
 ಕಾತುರದಿ ಕಾದಿಹೆನು ನಿನ್ನಯ ನೋಟ!
  
 ಮೈ ಜುಂ ಎನುತಿದೆ ಕಿರಣದ ಮತ್ತು..
 ಕಾಡಲು ತರವೇ ಸಂಜೆಯ ಹೊತ್ತು? 
  
 ನೀ ಅಲ್ಲಿ ನಾನಿಲ್ಲಿ ನಿಲುಕದಾ ಮಾತು..
 ಸಾಧ್ಯವೆ ಹರಟೆ ಜೊತೆಯಲ್ಲಿ ಕೂತು?
  
 ನೀಲಾಂಬರವನೆ ನೀ ಹೊದೆದಾ ಮೇಲೆ.. 
 ತಲುಪುವುದೆ ನಿನಗೆ ನಾ ಕರೆಯುವಾ ಓಲೆ? 
  
 ಬಂದುಬಿಡು ಸಾಕು ಈ ಕಣ್ಣಮುಚ್ಚಾಲೆ..
 ಮುನಿಸಿಕೊಂಡರೆ ನೋಡೆನು ನಾನ್ ಇನ್ನೆಂದೂ ಮೇಲೆ !
  
 - ಪ್ರೇಅಸಾ
********************************************