ಗೌರಿ ಲಂಕೇಶ್ – ಬದುಕು ಮತ್ತು ಬರಹ: ಡಾ. ಪ್ರೇಮಲತ ಬಿ

ಲೇಖಕರು: ಡಾ. ಪ್ರೇಮಲತ ಬಿ

ದಂತವೈದ್ಯರಾಗಿರುವ ಡಾ. ಪ್ರೇಮಲತ ಬಿ ಕೆ ಎಸ್ ಎಸ್ ವಿ ವಿ, ಯುಕೆ (ಅನಿವಾಸಿ.ಕಾಂ) ಬಳಗದ ಅತ್ಯಂತ ಸಕ್ರಿಯ ಬರಹಗಾರರು. ಅವರು ಬರೆದ ಹಲವಾರು ಕವನಗಳು `ಅವಧಿ` ಮತ್ತು `ಕನೆಕ್ಟ್ ಕನ್ನಡ` ಜಾಲಗಳಲ್ಲಿ ಪ್ರಕಟವಾಗಿವೆ. `ಕೆಂಡಸಂಪಿಗೆ` ಜಾಲತಾಣಕ್ಕೆ ಲೇಖನಮಾಲೆಯನ್ನು ಕಳೆದ ವರ್ಷ ಬರೆದಿದ್ದಾರೆ. ಅವರು ಬರೆದ ` ಬಾಯೆಂಬ ಬ್ರಹ್ಮಾಂಡ` ಎನ್ನುವ ದಂತವೈದ್ಯಸಾಹಿತ್ಯದ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಇತ್ತೀಚೆ ಪ್ರಕಟಿಸಿದ್ದಾರೆ. ಅಸ್ಖಲಿತ ಅಪ್ಪಟ ಕನ್ನಡದಲ್ಲಿ ಒಂದಿನಿತೂ ತಡವರಿಸದೇ ಸ್ಫಟಿಕದಂತೆ ಮಾತನಾಡುತ್ತಾರೆ. ಇತ್ತೀಚೆ ` ಕನ್ನಡ ಬಳಗ`ದ ಆಶ್ರಯದಲ್ಲಿ ನಡೆದ ಮಹಿಳಾ ಸಾಹಿತಿಗಳ ಗೋಷ್ಠಿಯಲ್ಲಿ ಪ್ರೇಮಲತ ಗೌರಿ ಲಂಕೇಶ್ ಅವರ ಬಗ್ಗೆ ಮಾತಾಡಿದರು. ಅದರ ಪೂರ್ಣರೂಪ ಇಲ್ಲಿದೆ. ದಯವಿಟ್ಟು ಓದಿ, ಪ್ರತಿಕ್ರಿಯೆ ಬರೆಯಲು ಮಾತ್ರ ಮರೆಯದಿರಿ. – ಸಂ

ವಚನ, ಕಥೆ, ಕವನ, ಕಾದಂಬರಿ, ಚರಿತ್ರೆ, ಲೇಖನ, ಚಿತ್ರ ಕಥೆ , ವಿಮರ್ಶೆ, ಹಾಸ್ಯ ಮತ್ತು ವರದಿಗಳನ್ನು ಬರೆದ ಹಲವು  ಲೇಖಕಿಯರು ಕನ್ನಡಕ್ಕೆ ಸಂದಿದ್ದಾರೆ. ಇವುಗಳಲ್ಲಿ ವಿಮರ್ಶೆ ಮತ್ತು ಚರಿತ್ರೆಯ ಸಾಹಿತ್ಯ ಪ್ರಕಾರಗಳನ್ನು ಬರೆದ ಲೇಖಕಿಯರು ಕಡಿಮೆ ಎಂತಲೇ ಹೇಳಬಹುದು. ಪತ್ರಿಕೋದ್ಯಮದಲ್ಲಿ ನಾನಾ ಸ್ತರಗಳಲ್ಲಿ ತೊಡಗಿಕೊಂಡ ಮಹಿಳಾ ವರದಿಗಾರರೂ, ಸಂಪಾದಕಿಯರೂ ಇದ್ದಾರೆ. ಆದರೆ ಪತ್ರಿಕೋದ್ಯಮವನ್ನೇ ವೃತ್ತಿಯಾಗಿ ನಡೆಸುತ್ತ ಸಾಮಾಜಿಕ ಕಳಕಳಿಗಳಲ್ಲಿ  ಭಾಷಣ ಮತ್ತು ಅಕ್ಷರ ಸ್ವರೂಪಕ್ಕಿಂತ ಹೆಚ್ಚಿನ ಮಟ್ಟದಲ್ಲಿ ತೊಡಗಿಕೊಂಡವರು ಬಹಳ ವಿರಳವಾಗಿ ಸಿಗುತ್ತಾರೆ. ವಿಮರ್ಶೆ ಮತ್ತು ಪತ್ರಿಕೋದ್ಯಮ ಎರಡೂ ಮನರಂಜನೆಯಾಗಿ ಮಾತ್ರ ಮಾಡುವ ಸಾಹಿತ್ಯ ಪ್ರಕಾರಗಳಲ್ಲ. ಇವನ್ನು ಬರಹಗಾರ/ರ್ತಿ ತಮ್ಮ ದುಡಿಮೆಯ ಮಾರ್ಗವನ್ನಾಗಿ ಮಾತ್ರ ಮಾಡಿಕೊಂಡಲ್ಲಿ ಅವು ಏಕಪ್ರಕಾರದ ವರದಿ/ಬರಹಗಳಗೋ ಅಥವಾ ಯಾವುದಾದರೊಂದು ರಾಜಕೀಯ ಪಕ್ಷ, ಧರ್ಮ ಅಥವಾ ಸಂಸ್ಥೆಗಾಗಿಯೋ ಕೆಲಸ ಮಾಡುವವರು ಬರೆದಂತಿರುತ್ತದೆ. ಇಂಥವರು ಯಶಸ್ವಿಯಾಗಬಹುದು, ಹಣವನ್ನು ಕಾಣಬಹುದು. ರಾಜಕೀಯವಾಗಿ ಮೇಲೇರಬಹುದು; ಒಟ್ಟಾರೆ, ’ಗೆದ್ದವನದೇ ದೊಣ್ಣೆ’ ಎನ್ನುವಂತೆ ಅಂತವರು ಸಲ್ಲುತ್ತಾರೆ. ಗೆಲ್ಲುತ್ತಾರೆ. ಎಲ್ಲರೂ ಅವರನ್ನು ಹಿಂಬಾಲಿಸುತ್ತಾರೆ. ಇನ್ಯಾರಾದಾರರೂ ಭಿನ್ನವಾಗಿ ನಿಂತರೆ, ಅವರು ’ಸರಿಯಿಲ್ಲ’ ಎನ್ನುವ ನಮ್ಮ ಸಾಂಪ್ರದಾಯಿಕ ಮನು ಸಂಸ್ಕೃತಿ ಅಂಥವರ ಬಾಯನ್ನು ಮುಚ್ಚಿಸಲು ಹೀನ ಕೃತ್ಯಗಳಿಗಿಳಿಯುತ್ತದೆ. ಇದು ಶತಮಾನಗಳಿಂದ ನಡೆದು ಬಂದಿರುವ ವಿಚಾರ.

ಗೌರಿ ಲಂಕೇಶ್

ಕನ್ನಡದಲ್ಲಿ ಬರೆದ ಲೇಖಕಿಯರು ಹನ್ನೆರಡನೇ ಶತಮಾನದಿಂದಲೇ ಇದ್ದಾರೆ. 12 ನೇ ಶತಮಾನ ಕಂಡ ಕ್ರಾಂತಿ, ತೋರಿದ ವಿಶ್ವರೂಪಿ ಧರ್ಮ, ಧರ್ಮಕ್ಕೆ ಮಿಗಿಲಾದ ಕಾಯಕದ ನಂಬುಗೆ, ಸ್ವತಂತ್ರ್ಯ ಮನೋಧರ್ಮ, ತ್ಯಾಗದ ಪರಮಾವಧಿಗಳು ಸಮಾಜದಲ್ಲಿ ಪ್ರವರ್ತಕರು ಬಂದು ಹಲವು ಬದಲಾವಣೆಗಳಿಗೆ ಕಾರಣರಾಗಿ ತಂದ ಸಂಘರ್ಷದ ಅಸದಳತೆಯನ್ನು ತೋರುತ್ತದೆ. ಈ ಕಾಲದಲ್ಲಿ ಒತ್ತಟ್ಟಿಗೆ ೩೬ ಕನ್ನಡ ವಚನಕಾರ್ತಿಯರು ಬರೆದ ದಾಖಲೆಗಳಿವೆ! ೧೭-೧೮ನೇ ಶತಮಾನದಲ್ಲಿ ಕೂಡ ಇಂಗ್ಲಿಷ್ ಲೇಖಕಿಯರು ಗಂಡಸರ ಹೆಸರಲ್ಲಿ ಬರೆಯಬೇಕಾದ ಅನಿವಾರ್ಯತೆಯಿದ್ದದ್ದನ್ನು ನೋಡಿದರೆ, ಸಮಾಜವೊಂದರ ವಿಕಸನ, ಆಲೋಚಿಸುವ ಕ್ರಮದಲ್ಲಿ ದಾಖಲಾದ ಉನ್ನತ ಮಟ್ಟ, ಮಹಿಳೆಯರು ಕಾಯಕ ಮಾರ್ಗದಲ್ಲಿ, ವಚನ ಸಾಹಿತ್ಯದಲ್ಲಿ ತೊಡಗಿಕೊಂಡ ಬಗೆ ಪ್ರಪಂಚದ ಇತರೆ ಸಮಾಜಗಳಿಗೆ ಹೋಲಿಸಿದರೆ ಅತ್ಯದ್ಭುತವಾಗಿ ವಿಕಸಿತವಾಗಿದ್ದು ಕನ್ನಡನಾಡಿನಲ್ಲಿ ಎಂಬುದನ್ನು ತೋರಿಸುತ್ತದೆ. ಈ ಶತಮಾನದ ಕೊನೆಯಲ್ಲಿ ನಡೆದ ಗಲಭೆಯಲ್ಲಿ ಶರಣರ ಹತ್ಯೆ ಅವ್ಯಾಹಿತವಾಗಿ ನಡೆದು ವೈಚಾರಿಕತೆಯನ್ನು ಅಧಿಕಾರ ಕೈ ತಪ್ಪುವ ಭಯದಲ್ಲಿ ಬರ್ಭರತೆ, ನುಂಗಿಹಾಕಿದ್ದನ್ನು ಕಾಣುತ್ತೇವೆ. ಆಗೆಲ್ಲ ಶರಣರು ಭಯೋತ್ಪಾದಕರೆಂದೂ, ಧರ್ಮಭ್ರಷ್ಟರೆಂದೂ ಒಂದು ನಂಬಿಕೆ ಹರಡಿ ಅವರನ್ನು ಕಂಡ ಕಂಡಲ್ಲಿ ಕೊಚ್ಚಿ ಹಾಕುವ ಕೆಲಸ ಶುರುವಾದಾಗ ಶರಣರು  ತಮ್ಮ ಕೆಲವು ವಚನದ ಪುಸ್ತಕಗಳ ಜೊತೆ ಚೆಲ್ಲಾ ಪಿಲ್ಲಿಯಾಗಿ ಓಡಿಹೋಗಬೇಕಾಯ್ತು. ಅಲ್ಲಿಂದ ಮುಂದಕ್ಕೆ, ಕಾಲ ನಡೆದದ್ದು ಹಿಂದಕ್ಕೆ! ೧೫ನೇ ಶತಮಾನದಲ್ಲಿ ಬಂದ ದಾಸ ಸಾಹಿತ್ಯ ಮತ್ತೆ ಆಶಾಕಿರಣವಾಯ್ತಾದರೂ ಮಹಿಳೆಯರು ಮಂಚೂಣಿಯಲ್ಲಿ ಕಾಣಿಸಲಿಲ್ಲ.

ಮತ್ತೆ ಒಂಭತ್ತು ಶತಮಾನಗಳು ಕಳೆದರೂ ಸಾಮಾಜಿಕ ಮಟ್ಟದಲ್ಲಿ ಅವೇ ಧರ್ಮ, ಜಾತಿ, ಲಿಂಗ, ಬೆದರಿಕೆ, ಹತ್ಯೆ, ಸಮಾಜವನ್ನು ಚಿಧ್ರಿಸಿ ಯಾವುದರಲ್ಲೂ ಐಕ್ಯತೆ ಇಲ್ಲದಂತೆ ನೋಡುವುದರ ಸುತ್ತಲೇ ರಾಜಕಾರಣ ಸುತ್ತುತ್ತಿದೆ. ಸಂಪೂರ್ಣ ಸಹಿಶ್ಣುತೆ ಬಹುಶಃ ಸಾಧ್ಯವಿಲ್ಲ ಎನ್ನುವುದು ಒಪ್ಪಬೇಕಾದ ಮಾತು. ಆದರೆ ತಮ್ಮ ರಾಜಕೀಯ ಹುನ್ನಾರಗಳಿಗೆ ಆಗೀಗ ಸುಮ್ಮನಿರುವ ವ್ಯವಸ್ಥೆಗಳನ್ನು ಕಲಕಿ ಮುಗ್ದ ಜನರ ಬದುಕನ್ನು ಕಲಕುವ ಕೆಲಸ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ಮತಧರ್ಮ ರಾಜಕಾರಣ ವಿಜೃಂಬಿಸುತ್ತಿದೆ!

ಕೃಪೆ: ಸತೀಶ್ ಆಚಾರ್ಯ

ಹೀಗಾಗಿ ಇಂತಹ ಪ್ರಭುತ್ವವನ್ನು ಪ್ರಶ್ನಿಸಿದ ಕೆಲವರ ಬರಹಗಳು ಅವರದೇ ವಯಕ್ತಿಕ ನಿಲುವುಗಳ ಪ್ರತಿಪಾದನೆಯಾಗಿದ್ದು ಅಂತಹ ಬರಹಗಳಿಗೆ ತಮ್ಮದೇ ದೃಷ್ಟಿಕೋನವನ್ನು, ಹಿಂಬಾಲಕರನ್ನು ಸೃಷ್ಟಿಸುವ ಶಕ್ತಿಯಿರುತ್ತದೆ. ಅದು ಕೆಲವರಿಗೆ ಹಿಡಿಸುತ್ತದೆ. ಮತ್ತೆ ಕೆಲವರಿಗೆ ಹಿಡಿಸುವುದಿಲ್ಲ. ಉದಾಹರಣೆಗೆ,  ಪೂರ್ವ ಪಾಕಿಸ್ತಾನದಲ್ಲಿ ( ಈಗಿನ ಬಾಂಗ್ಲಾದೇಶದಲ್ಲಿ) ಹುಟ್ಟಿ, ಬಾಂಗ್ಲಾದೇಶದಲ್ಲಿ ಬೆಳೆದ ತಸ್ಲಿಮಾ ನಸ್ರೀನ್ ವೃತ್ತಿಯಲ್ಲಿ ಪ್ರಸೂತಿ ತಜ್ಞೆ. ಆದರೆ ತನ್ನ ಬರಹಗಳಲ್ಲಿ ಆಕೆ ತೋರಿದ ಹೊಸ ದೃಷ್ಟಿಕೋನ ಆಕೆಯ ಧರ್ಮದ ಜನರು ಆಕೆಯ ವಿರುದ್ದವೇ ಫತ್ವಾ ಹೊರಡಿಸುವಂತೆ ಮಾಡಿತು. ಆಕೆಯ ಗಂಡ ನಾಲ್ಕೇ ವರ್ಷಗಳಲ್ಲಿ ವಿಚ್ಚೇದನ ನೀಡಿದ. ಪ್ರಾಣಭಯದಿಂದಾಗಿ  ಆಕೆ ಯೂರೋಪು ಮತ್ತು ಅಮೆರಿಕಾದಲ್ಲಿ ಹತ್ತು ವರ್ಷ ಬದುಕಿ, ಭಾರತಕ್ಕೆ ಬಂದರೆ ಅಲ್ಲಿನ ಆಕೆಯದೇ ಧರ್ಮದ ಮುಖಂಡರು ಮತ್ತೆ ಆಕೆಯ ಹತ್ಯೆಯ ಸಂಚು ಮಾಡಿದರು. ಧರ್ಮ ಎನ್ನುವುದು ಸಂವಿಧಾನಕ್ಕಿಂತ, ಮನುಷ್ಯತ್ವಕ್ಕಿಂತ, ಕಾನೂನಿಗಿಂತ ಹೆಚ್ಚಿನದೆಂದು ನಂಬಿದ ಯಾವ ದೇಶಗಳಲ್ಲಿಯೂ ಆಕೆ ಸಲ್ಲುತ್ತಿಲ್ಲ. ಸಲ್ಮಾನ್ ರಶ್ದಿಯನ್ನು, ಸಾನಿಯಾ ಮಿರ್ಝಳನ್ನೂ ಇವೇ ಧರ್ಮದ ವಿಚಾರಗಳು ಕಾಡಿದವು.  ಆಗರ್ಭ ಶ್ರೀಮಂತರಾಗಿದ್ದವರು ಅಥವಾ ಪ್ರಾಣರಕ್ಷಣೆಗೆ ಮುಂದುವರೆದ ದೇಶಗಳಿಗೆ ಶರಣಾರ್ತಿ ಕೇಳಿ ಸೇರಿದವರು ಮಾತ್ರವೇ ಬದುಕುಳಿದಿರುವುದು. ಆಗೆಲ್ಲ ಇವರ ಧರ್ಮದ ಹೊರಗಿರುವ ನಾವು ’ಇವೆಲ್ಲ ಸಂಕುಚಿತ ಮನದ ಜನರ ಮತ್ತು ಅಸಹಿಷ್ಣುತೆಯ ಪ್ರತೀಕಗಳು’ ಎಂದು ಜರಿದೆವು. ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಭಾಷಣ ಬಿಗಿದೆವು.

2017  ಸೆಪ್ಟೆಂಬರ್ ೫ನೇ ತಾರೀಖು ಸಂವಿಧಾನ ಬದ್ದ, ಸ್ವತಂತ್ರ ದೇಶ ಭಾರತದಲ್ಲಿ ವೈಚಾರಿಕತೆಯನ್ನು ಮತ್ತು ಪ್ರಭುತ್ವವನ್ನು ಪ್ರಶ್ನಿಸಿದ  ಪ್ರೊ.ಕಲ್ಬುರ್ಗಿ ಯ ನಂತರ ಮತ್ತೊಂದು ಹತ್ಯೆಯಾಯ್ತು. ಅದು ಪತ್ರಿಕೋದ್ಯಮಿ, ಬರಹಗಾರ್ತಿ ಗೌರಿ ಲಂಕೇಶರದ್ದು !

ಹಲವರು ಸತ್ತ ನಂತರ ಹೆಚ್ಚು ಬೆಳಕಿಗೆ ಬರುತ್ತಾರಂತೆ. ಗೌರಿಯ ವಿಚಾರದಲ್ಲೂ ಇದೇ ನಿಜವಾಯ್ತು. ಗೌರಿ ಲಂಕೇಶ್  ಸಣ್ಣ ವಯಸ್ಸಿಗೇ ಪತ್ರಿಕೋದ್ಯಮಕ್ಕೆ ಬಂದ ಕಾರಣ ಸಾಯುವ ವೇಳೆಗೆ ೩೨ ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ದುಡಿದಿದ್ದರು.

ಇವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ೧) ಗಿಡುಗಗಳಿಗೆ ಬಲಿಯಾದ ಬೆನಝಿರ್ ಭುಟ್ಟೋ (೨೦೦೮). ೨) ಕಂಡಹಾಗೆ-ಸಂಪಾದಕೀಯ ಬರಹಗಳ ಸಂಗ್ರಹ-೧ (೨೦೦೯). ೩) ಕಂಡಹಾಗೆ-ಸಂಪಾದಕೀಯ ಬರಹಗಳ ಸಂಗ್ರಹ-೨ (೨೦೧೧). ೪) ಕಂಡಹಾಗೆ-ಸಂಪಾದಕೀಯ ಬರಹಗಳ ಸಂಗ್ರಹ-೩ (೨೦೧೩), ೫)  ಎಲ್. ಬಸವರಾಜು ಬದುಕು ಮತ್ತು ಮಾರ್ಗ-ಸಂಪಾದನೆ (೨೦೧೦). ೬) ದರವೇಶಿ ಕಥೆಗಳು-  ಇಂದ್ರೀಶ್ ಶಾ ರ ಪುಸ್ತಕ ಅನುವಾದ (೨೦೦೨). ೭) ಕಪ್ಪು ಮಲ್ಲಿಗೆ- ಅನುವಾದಿತ ಆಧುನಿಕ  ಸಣ್ಣ ಕಥೆಗಳ ಸಂಚಯ (೨೦೧೦). ೮) ಜುಗಾರಿ ಕ್ರಾಸ್- ಪೂರ್ಣ ಚಂದ್ರ ತೇಜಸ್ವಿಯವರ ಕನ್ನಡ ಕಥೆಯ ಇಂಗ್ಲಿಷ್ ಅನುವಾದ (೨೦೦೪). ೯) ಆವರಣ (ಎಸ್. ಎಲ್. ಭೈರಪ್ಪ) ರ  ಪುಸ್ತಕ ವಿಮರ್ಶಾ ಲೇಖನಗಳ ಸಂಪಾದನೆ (೨೦೦೭) . ೧೦) ಇವೆಲ್ಲ ಪ್ರಕಟಣೆಗಳ ಜೊತೆ ಒಟ್ಟು ೩೨ ವರ್ಷಗಳ ಕಾಲದ ಪತ್ರಿಕೋದ್ಯಮ ಬರಹಗಳು ( ೧೫ ವರ್ಷ ಇಂಗ್ಲಿಷ್ ಮತ್ತು ಸಾಯುವ ದಿನಗಳವರೆಗಿನ ೧೭ ವರ್ಷಗಳ ಕನ್ನಡ ಪತ್ರಿಕೋದ್ಯಮ).

ಕೃಪೆ: ಮಂಜುಲ್

ಕನ್ನಡ ಪತ್ರಿಕೋದ್ಯಮ ಮತ್ತು ಬರವಣಿಗೆಯಲ್ಲಿ ಬಂಡಾಯ, ಹೊಸತನ, ನವೀನ ಶೈಲಿಯನ್ನು ತಂದ ಪ್ರತಿಭಾವಂತ ಪತ್ರಿಕೋದ್ಯಮಿ ಪಾಳ್ಯದ ಲಂಕೇಶ್.  ಈ ಉದ್ಯಮದ ಯಾರಿಗೂ ಸೊಪ್ಪು ಹಾಕದ ಈತ ಜಾಹೀರಾತುಗಳೇ ಇಲ್ಲದೆ 2 ಲಕ್ಷಕ್ಕೂ ಹೆಚ್ಚಿದ್ದ ಚಂದಾದಾರರ ಹಣದಿಂದಲೇ ಪತ್ರಿಕೆ ನಡೆಸಿ, ಸಿನಿಮಾ ಮಾಡಿ, `ಪ್ರಗತಿ ರಂಗ’ ಎಂಬ ರಾಜಕೀಯ ಪಕ್ಷವನ್ನೂ ಕಟ್ಟಿದ್ದ ವ್ಯಕ್ತಿ. ಹೊಸ ಬಗೆಯ ಕನ್ನಡ ಪತ್ರಿಕೋದ್ಯಮಕ್ಕೆ  ನಾಂದಿ ಹಾಡಿದ ಈತ ತನ್ನಂತೆ ಹೊಸದಾಗಿ ಬರೆಯಬಲ್ಲ, ಹೊಸದಾಗಿ ಯೋಚಿಸಬಲ್ಲ ಎಲ್ಲರಿಗೂ ಪ್ರಿಯವಾದ ವ್ಯಕ್ತಿ. ಆದರೆ ಎಲ್ಲ ಹೊಸತನ್ನೂ ವಿರೋಧಿಸುವ ನಮ್ಮ ಸಮಾಜದಲ್ಲಿ ಈತನ ವಿರುದ್ಧವಾಗಿ ನಿಂತವರು ಬಹಳ ಮಂದಿ. ಆದರೆ ಅಂಥವರ ಹಣದ ಮರ್ಜಿಗೆ ಬಿದ್ದಿಲ್ಲದ ಈತನನ್ನು ಮಿತಗೊಳಿಸುವುದು, ಕಟ್ಟಿಹಾಕುವುದು ಕಷ್ಟವಾಗಿತ್ತು. ಇವರ ಮೊದಲ ಪುತ್ರಿ ಗೌರಿ.

ಅಪ್ಪನ ಬಗ್ಗೆ ಈಕೆಗೆ ಇನ್ನಿಲ್ಲದ ಅಭಿಮಾನವಿದ್ದರೂ ಅದನ್ನು ವ್ಯಕ್ತಪಡಿಸಲು  ಈಕೆಗೆ ಲಂಕೇಶ್ ನೀಡಿದ ಅವಕಾಶಗಳು ಬಹಳ ಕಡಿಮೆ. ಆದರೆ ವಿಚಾರಶೀಲ ಮಗಳಾಗಿದ್ದ ಗೌರಿಗೆ ಪೂರ್ಣ ವ್ಯಕ್ತಿ ಸ್ವಾತಂತ್ರ್ಯ ನೀಡಿದ್ದರು. ಈಕೆ ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಮುಂದೆ ಡೆಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ನ ಪತ್ರಿಕೋದ್ಯಮ ವಿಭಾಗದಲ್ಲಿ. ಅದಾದ ನಂತರ ಅಮೆರಿಕಾ, ಫ್ರಾನ್ಸ್ ಮತ್ತು ಸೌತ್ ಆಫ್ರಿಕಾದಲ್ಲಿ ಪತ್ರಿಕೋದ್ಯಮದಲ್ಲಿ ತರಬೇತಿ ಪಡೆದು ಬಂದ ಗೌರಿ ಟೈಮ್ಸ್ ಆಫ್ ಇಂಡಿಯಾ, ಸಂಡೆ ಮತ್ತು ದಿಲ್ಲಿಯ ಈ ಟಿವಿ ಚಾನೆಲ್ಲಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದರು. ಈಕೆಯ ವಿಚಾರಗಳು ವಿದೇಶಿಯರ ಉದಾರ ನೀತಿಯ ವಿಚಾರ ಮಟ್ಟದಲ್ಲಿದ್ದು, ಸೀಮಿತವಾದ ದೇಶೀ ಅರಿವಿನ ಮಿತಿಯೊಳಗೆ ಮಾತ್ರ ಇರಲು ನಿರಾಕರಿಸುತ್ತಿತ್ತು. ಜಾತಿ ,ಮತ ಮತ್ತು ಧಾರ್ಮಿಕ ನಂಬಿಕೆಗಳು ಪ್ರಜಾಪ್ರಭುತ್ವಕ್ಕಿಂತ ದೊಡ್ಡವಲ್ಲ ಎಂಬ ಈಕೆಯ ನಂಬಿಕೆಗಳು ಹಲವರಿಗೆ ಜೀರ್ಣವಾಗಿರಲಿಲ್ಲ. ಉದಾರೀಕರಣವಾದಿ ಶಿಕ್ಷಣ, ಅಪ್ಪಟ ಜಾತ್ಯಾತೀತತೆ, ಮುಕ್ತ ಮನಸ್ಸು ಮತ್ತು ಬದುಕಿನ ಬಗ್ಗೆ ಪ್ರೀತಿ ಇದ್ದ ಗೌರಿಯಲ್ಲಿ ಸಣ್ಣತನ, ಕುಟಿಲತೆಯ ಲವಲೇಶಗಳು ಇರಲಿಲ್ಲ.

ಗೌರಿ ಲಂಕೇಶ್ ಪತ್ರಿಕೆ

ಲಂಕೇಶ್ ಆ ಕಾಲದಲ್ಲಿ ಕುವೆಂಪು ಅವರ ಸರಳ ಮದುವೆ  ’ಮಂತ್ರ ಮಾಂಗಲ್ಯ’ ವನ್ನು ಇತರರಿಗೆ ಮಾಡಿಸುತ್ತಿದ್ದರು. ಆದರೆ ತಮ್ಮದೇ ಮಗಳಾದ ಗೌರಿಗೆ ಅದ್ದೂರಿಯಾಗೇ ಮದುವೆ ಮಾಡಬೇಕೆಂದು ಅಂದುಕೊಂಡಿದ್ದರು. ಗೌರಿ ಇದನ್ನು ವಿರೋಧಿಸಿದವಳು. ಆಕೆಯನ್ನು ಒಪ್ಪಿದ ಮತ್ತು ತಾಯಿ ಅಳಿಯನಾಗಲೆಂದು ಆಸೆಪಟ್ಟ ಇಬ್ಬರು ವೈದ್ಯ ಗಂಡುಗಳನ್ನು ನಿರಾಕರಿಸಿ ತಾನು ಪ್ರೀತಿಸಿದ ವೈದ್ಯನೋರ್ವನ ಮಗ ಪತ್ರಿಕೋದ್ಯಮಿ ಚಿದಾನಂದ ರಾಜಘಟ್ಟ ಎಂಬುವವನೊಂದಿಗೆ ಸರಳವಾಗಿ ರಿಜಿಸ್ಟರ್ ಮದುವೆಯಾದವಳು. ಅದನ್ನು ಸಮ್ಮತಿಸಿದ್ದ ಲಂಕೇಶ್ ಅವರೊಡನೆ ಉತ್ತಮ ಸಂಬಂಧ ಹೊಂದಿದ್ದರು. ಆರ್ಥಿಕವಾಗಿ ಸುಖವಾಗೇ ಬೆಳೆದ ಗೌರಿ ಮತ್ತು ಚಿದಾನಂದ ಮದುವೆಯ ನಂತರ ಎರಡೂ ಕಡೆಯಿಂದ ಆರ್ಥಿಕ ಸಹಾಯವನ್ನು ನಿರಾಕರಿಸಿ ತಮ್ಮದೇ ಬದುಕನ್ನು ಕಟ್ಟಿಕೊಂಡವರು. ಅಲ್ಲಿಂದಲೆ ಗೌರಿಯ ಸ್ವತಂತ್ರ ವ್ಯಕ್ತಿತ್ವ ಶುರುವಾಗಿತ್ತು.

೨೦೦೦ದಲ್ಲಿ ಲಂಕೇಶ್ ಸತ್ತ ನಂತರ ತಂದೆಯ ಮೇಲಿನ ಅಗಾಧವಾದ ಪ್ರೀತಿಗೆ ತನ್ನ ೧೫ ವರ್ಷಗಳ ವೃತ್ತಿಪರ  ಆಂಗ್ಲ ಭಾಷಾ ಕೆಲಸವನ್ನು ಬಿಟ್ಟು, ಕನ್ನಡ ಪತ್ರಿಕೆಯನ್ನು ನಡೆಸಲು ಕರ್ನಾಟಕಕ್ಕೆ ಧಾವಿಸಿ ಬಂದಳು. ತಂದೆ ಸತ್ತ ಮರುವಾರವೂ ಪತ್ರಿಕೆ ನಿಲ್ಲದಂತೆ ನಡೆಸಿದಳು. ಇಂಗ್ಲೀಷ್ ಪತ್ರಿಕೆಯಷ್ಟೇ ನಿರ್ಭಿಡತೆಯನ್ನು ಕನ್ನಡ ಪತ್ರಿಕೆಗೂ ತರಲು ಮುಂದಾದಳು. ಆದರೆ ಅವಳಿಗೆ ಮುಂದೆ ಆಘಾತ ಕಾದಿತ್ತು. ಲಂಕೇಶ್ ಸತ್ತಾಗ ಪತ್ರಿಕೆಯ ಪೂರ್ತಿ ವಾರಸುದಾರಿಕೆಯನ್ನು ಈಕೆಯ ತಮ್ಮ ಇಂದ್ರಜಿತ್ ಗೆ ಮಾಡಿದ್ದರು. ಪತ್ರಿಕೆಗಳಲ್ಲಿ ಏನನ್ನೇ ಬರೆದರೂ ಗಂಡು ಮಗನಿಗೆ ಎಲ್ಲವನ್ನೂ ಬರೆದು ಗೌರಿ ಮತ್ತು ಕವಿತಾ ಇಬ್ಬರಿಗೂ .ಲಂಕೇಶ್ ಪತ್ರಿಕೆಯ ಪಾಲುದಾರಿಕೆಯನ್ನು ನೀಡಿರಲಿಲ್ಲ. ಗೌರಿ ’ಲಂಕೇಶ್ ಪತ್ರಿಕೆ” ಯಲ್ಲಿ ಐದು ವರ್ಷಗಳ ಕಾಲ ಕೇವಲ ಒಬ್ಬ ಕೆಲಸಗಾರಳಾಗಿದ್ದಳು. ತಾತ್ವಿಕ ಭಿನ್ನಾಭಿಪ್ರಾಯಗಳ ಕಾರಣ  ಮುಂದೆ ಗೌರಿ ಈ ಪತ್ರಿಕೆಯನ್ನು ಬಿಟ್ಟು, ಯಾವತ್ತೋ ನೋಂದಣಿ ಮಾಡಿಸಿದ್ದ ತನ್ನದೇ ಹೆಸರಿನ `ಗೌರಿ ಲಂಕೇಶ್ ಪತ್ರಿಕೆ’ಯನ್ನು ಶುರು ಮಾಡಿದಳು. ಹಾಗಾಗಿ ಅಪ್ಪನ ಪತ್ರಿಕೆಯನ್ನು ಮಾತ್ರವೇ ನಡೆಸುತ್ತಿದ್ದಳು ಎಂದುಕೊಂಡವರಿಗ ನಿಜದ ಅರಿವೇ ಇಲ್ಲದಿರುವುದು ಸ್ಪಷ್ಟ. ಆದರೆ ಅಪ್ಪ ಕೂರುತ್ತಿದ್ದ ಕುರ್ಚಿಯನ್ನು ತನ್ನ ಕುರ್ಚಿಯ ಪಕ್ಕ ಹಾಕಿಕೊಂಡು ಕೂತು ಕೆಲಸಮಾಡುತ್ತಿದ್ದ ಅವಳನ್ನು `ರಾಮನ ಪಾದುಕೆಯನ್ನು ಇಟ್ಟುಕೊಂಡು ರಾಜ್ಯ ಭಾರ ಮಾಡಿದ ಭರತನಂತೆ’ ಎಂದು ಕುಚೋದ್ಯ ಮಾಡಿ ನಗುತಿದ್ದ ಜನರೂ ಇದ್ದರು. ಸಣ್ಣದೊಂದು ಪತ್ರಿಕೆಯನ್ನು ಅಪ್ಪನ ರೀತಿಯಲ್ಲೆ ಪತ್ರಿಕೆ ನಡೆಸಬೇಕೆಂದು ಆಕೆ ಪ್ರಯತ್ನಿಸಿದ ಕಾರಣ ’ಲಂಕೇಶ್ ಪುತ್ರಿಕೆ’ ಎಂದು ಚುಡಾಯಸಿದರೂ ಇದ್ದರು. ಅಪ್ಪನ ರೀತಿಯಲ್ಲೇ ಜಾಹೀರಾತು ಇಲ್ಲದೆ ಪತ್ರಿಕೆ ನಡೆಸಲು ಮುಂದಾದ ಗೌರಿಗೆ ಕಾಡಿದ ಹಣಕಾಸಿನ ಮುಗ್ಗಟ್ಟು ಅಷ್ಟಿಷ್ಟಲ್ಲ. ಆದರೆ ರಾಜಕಾರಣಿಗಳನ್ನು ಓಲೈಸಿ ಬರೆಯಲು, ಜಾಹೀರಾತುಗಾರರ ಮುಲಾಜಿಗೆ ಬೀಳಲು ಆಕೆ ಸುತಾರಾಂ ಒಪ್ಪಲಿಲ್ಲ. ಲಂಕೇಶ್ ಪ್ರಕಾಶನದಿಂದ ಪ್ರಕಟಿಸಿದ ಪುಸ್ತಕ ಮತ್ತು ತನ್ನ ಪುಸ್ತಕಗಳ ಆದಾಯ ಎಲ್ಲವನ್ನೂ ಆಕೆ ಪತ್ರಿಕೆಗಾಗಿಯೇ ಸುರಿದಳು. ತಾನು ಸಾಯುವ ದಿನಗಳಲ್ಲಿ ತನ್ನ ಜೀವ ವಿಮೆಯ ಹಣವನ್ನೂ ತೆಗೆದು ಎಲ್ಲರಿಗೂ ಸಂಬಳ ನೀಡಿದ್ದಳು. ಹಲವು ರಾಜಕಾರಣಿಗಳ ಕುಮ್ಮಕ್ಕು, ಹಣ ಸರಬರಾಜು ಇದ್ದಿದ್ದಲ್ಲಿ ಇವೆಲ್ಲದರ ಅಗತ್ಯ ಈಕೆಗೆ ಇರಲಿಲ್ಲ. ಅದೇ ರೀತಿ ತಾನು ನಂಬಿದ ಧ್ಯೇಯಗಳಿಗಾಗಿಯಲ್ಲದಿದ್ದರೆ ನಮ್ಮ- ನಿಮ್ಮಂತೆ ಒಂದು ವೃತ್ತಿಯನ್ನು ಮಾಡಿಕೊಂಡು ದೈಹಿಕವಾಗಿ, ಸಾಮಾಜಿಕವಾಗಿ ಸುಖವಾಗಿರಲು ಯಾವ ತೊಂದರೆಗಳೂ ಇರಲಿಲ್ಲ. ಇನ್ನೊಬ್ಬರಿಗೆ ಯಾವ ಧ್ಯೇಯಗಳು ಇರಬೇಕು ಅಥವಾ ಇರಬಾರದು ಎಂಬುದನ್ನು ಅವರು ಇನ್ನೊಬ್ಬರಿಗೆ ಸಂವಿಧಾನೇತರ ರೀತಿಯಲ್ಲಿ ಕಿರುಕುಳ ಕೊಡದಿದ್ದಲ್ಲಿ ನಾವು ಹೇಳುವುದು, ನಿರ್ಣಯಮಾಡುವುದು ಸರಿಯೂ ಅಲ್ಲ. ಅಥವಾ ಆಕೆ ಹಣಮಾಡಲಿಲ್ಲ, ಪತ್ರಿಕೆಯನ್ನು ಲಾಭದಾಯಕವಾಗಿ ನಡೆಸಲಿಲ್ಲ ಎಂಬ ಕಾರಣಕ್ಕೆ ಆಕೆ ಪತಿತಳಾಗುವುದೂ ಇಲ್ಲ. ಆದರೆ ಈಕೆಯ ನಿರುಮ್ಮಳತೆಯನ್ನು ಸಹಿಸದ ಹಲವರು ಹಾಗೆಂದು ಅಪಪ್ರಚಾರ ಮಾಡುತ್ತ ಬಂದರು.

ಪತ್ರಿಕೆ ನಡೆಸುವವರಿಗೆ ಬೆದರಿಕೆಗಳು ಮತ್ತು ಮಾನನಷ್ಟ ಮೊಕದ್ದಮೆಗಳು ಬರುವುದು ಸರ್ವೇಸಾಮಾನ್ಯ. ಅವು ಬೇಡವೇ ಬೇಡವೆಂದರೆ ಸಾಹಿತ್ಯಕ, ಸಿನಿಮಾ ಅಥವಾ ಮನರಂಜನೆಯ ಪತ್ರಿಕೆಗಳನ್ನು ಮಾತ್ರ ನಡೆಸಲು ಸಾಧ್ಯ. ಗೌರಿಗೂ ಇಂತಹ ಬೆದರಿಕೆಗಳು ಬರುತ್ತಿದ್ದವು. ರಾಜಕಾರಣಿಗಳು ರಕ್ಷಣೆ ಒದಗಿಸುತ್ತೇವೆಂದಾಗಲು, ಮುಲಾಜಿಲ್ಲದೆ ಸಿಗದಿದ್ದ ಈ ರಕ್ಷಣೆಯನ್ನು ಗೌರಿ ನಿರಾಕರಿಸಿದ್ದಳು. ತನಗಿದ್ದ ಪತ್ರಿಕಾ ರಂಗದ ವಶೀಲಿಯನ್ನು ತನ್ನ ಹಣಕಾಸಿನ ವಿಚಾರಕ್ಕೆ ಉಪಯೋಗಿಸಿಕೊಳ್ಳದೆ ತಾನು ನಂಬಿದ್ದ ಧ್ಯೇಯಗಳಿಗಾಗಿ ಮಾತ್ರ ಬಳಸುತ್ತಿದ್ದಳು. ಗೌರಿಯ ಅನುಯಾಯಿಗಳು ನಾಥುರಾಂ ಗೋಡ್ಸೆಯನ್ನು ಭಾರತದ ನೇತಾರರೆಂದು ಕರೆಯಲು ತಯಾರಿಲ್ಲದವರಾಗಿದ್ದರು. ಮೋದಿ ಮಾತ್ರ ನಮ್ಮ ದೇಶದ ಮಹಾತ್ಮನೆಂದು ಕರೆಯಲು ಸಿದ್ದರಿಲ್ಲದವರು. ಹಿಂದುತ್ವ ಅಥವಾ ಹಿಂದೂವಾದಿ ರಾಷ್ಟ್ರದ ಹೆಸರಲ್ಲಿ ಸಮಾಜವನ್ನು ಹಿಂದೂ, ಮುಸಲ್ಮಾನ, ಕ್ರಿಶ್ಚಿಯನ್ನರೆಂದು ಮತೀಯವಾಗಿ ಒಡೆದು  ಭಾರತದಲ್ಲಿ ಮತ್ತೊಂದು ಮಾರಣಹೋಮ ಮಾಡುವ ವಿಚಾರವನ್ನು ವಿರೋಧಿಸಿದವರು, ನಿರಾಕರಿಸಿದವರು. ಹಾಗಾಗಿ, ಮೋದಿಯನ್ನು ಮತ್ತು ಇತ್ತೀಚೆಗಿನ ಹೊಸ ಆರ್. ಎಸ್.ಎಸ್ ಅನ್ನು ಉಗ್ರವಾಗಿ ಮತ್ತು ನೇರವಾಗಿ ಖಂಡಿಸಿದವರು. ಪ್ರತಿ ರಾಜಕೀಯ ಪಕ್ಷಕ್ಕೆ ವಿರೋಧ ಪಕ್ಷಗಳಿರುವುದು ಹೇಗೆ ಒಳಿತೋ ಹಾಗೆಯೇ ವಿರುದ್ಧವಾದ ಪತ್ರಿಕಾ ದೃಷ್ಟಿಕೋನಗಳಿರುವುದು ಮುಕ್ತ ಸಮಾಜವನ್ನು ತೋರಿಸುತ್ತದೆಯೇ ಹೊರತು ಸಂಕುಚಿತ ಸಮಾಜವನ್ನಲ್ಲ. ಅದನ್ನು ವಿರೋಧಿಸುವ ದೃಷ್ಟಿಕೋನವಷ್ಟೆ ಸಂಕುಚಿತವಾದ್ದು.

೨೦೦೨ರಲ್ಲಿ ಬಾಬಾಬುಡನ್ ಗಿರಿಯನ್ನು  ಕರ್ನಾಟಕದ ಅಯೋಧ್ಯೆ ಮಾಡುತ್ತೇನೆಂದು ಅಂದಿನ ಸರ್ಕಾರ ಹೊರಟಾಗ, ಸಾಮಾಜಿಕ ಅಭಿಪ್ರಾಯಕ್ಕಾಗಿ ಒಂದು ಸಮಿತಿಯನ್ನು ನಿರ್ಮಿಸಲಾಗಿತ್ತು. ಗಿರೀಶ್ ಕಾರ್ನಾಡ್, ಕೆ. ಮರುಳ ಸಿದ್ದಪ್ಪ, ಗೋವಿಂದರಾವ್ ಜೊತೆಯಲ್ಲಿ ಗೌರಿಯೂ ಹೋಗಿದ್ದಳು. ಈ ಹುನ್ನಾರದ ಹಿಂದಿದ್ದ ರಾಜಕೀಯ ಮತ್ತು  ಫ್ಯಾಸಿಸ್ಟ್ ಸೈದ್ದಾಂತಿಕೆಯನ್ನು ಅರಿತ ಗೌರಿಯಲ್ಲಾದ ತಳಮಳ ಆಕೆಯನ್ನು ಸಮಾಜ ಕಾರ್ಯಕರ್ತೆಯನ್ನಾಗಿಸಿತು. ಕರ್ನಾಟಕ ಕೋಮು ಸೌಹಾರ್ದಾ ವೇದಿಕೆಯನ್ನು ಸೃಷ್ಟಿಸಿತು. ಆಕೆಯನ್ನು ಕೋಮು ಸೌಹಾರ್ದತೆಯ ಹಲವು ಹೋರಾಟಗಳಿಗೆ ಮುಂದುಮಾಡಿತು. ರಾಷ್ಟ್ರಮಟ್ಟದಲ್ಲಿ ಗೌರಿ ಗುರುತಿಸಲ್ಪಟ್ಟಳು  (ಇಪ್ಪತ್ತು ವರ್ಷಗಳ ಹಿಂದೆ ಬಾಬಾಬುಡನ್ ಗಿರಿಯ ದತ್ತಾತ್ತ್ರೇಯ- ದರ್ಗಾಕ್ಕೆ ನಾನು ಹೋಗಿ ಬಂದಿದ್ದೇನೆ. ಹಿಂದೂ -ಮುಸ್ಲಿಮ ಸ್ಥಳೀಯರು ಅತ್ಯಂತ ಶಾಂತಿಯುತವಾಗಿ ಇರುವ ಈ ಜಾಗದಲ್ಲಿ ಮತಧರ್ಮ ರಾಜಕಾರಣಕ್ಕೆ ಆಗ ಯಾವ ಜಾಗವೂ ಇರಲಿಲ್ಲ).

೨೦೦೪ರ ಮತ್ತೊಂದು ತಿರುವಿನಲ್ಲಿ ಗೌರಿಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ಪತ್ರಿಕೋದ್ಯಮ ಓದುತ್ತಿರುವಾಗ ಆಕೆಗೆ ಸೀನಿಯರ್ ಆಗಿದ್ದ ಸಾಕೇತ ರಾಜನ್ ಎನ್ನುವ ಪತ್ರಕರ್ತ ಮತ್ತು ಮಾವೋವಾದಿ ಕಾರ್ಯಕರ್ತನ ಭೇಟಿಯಾಗುತ್ತದೆ. ಈ ನಕ್ಸಲೀಯ ನಾಯಕ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಗೌರಿ ಆತನನ್ನು ಮತ್ತೆ ಭೇಟಿಯಾಗುತ್ತಾಳೆ. ನಕ್ಸಲರು ಆಗ ಕರ್ನಾಟಕದ ಪಶ್ಚಿಮ ಘಟ್ಟಗಳನ್ನು ತಮ್ಮ ಹೋರಾಟತಾಣವನ್ನಾಗಿ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದವರು. ಅವರ ಹೋರಾಟದ ಉದ್ದೇಶ ಉತ್ತಮವೇ ಆಗಿತ್ತು ಎಂದು ಮೆಚ್ಚಿಕೊಂಡಿದ್ದ ಗೌರಿ ಅವರು ಆರಿಸಿಕೊಂಡಿದ್ದ ಸಶಸ್ತ್ರ ಹೋರಾಟವನ್ನು ಖಂಡಿಸುತ್ತಾಳೆ. ಸೌಹಾರ್ದತೆಗೆ ಕರೆ ಕೊಡುತ್ತಾಳೆ. ಸರ್ಕಾರದೊಂದಿಗೆ ಶಾಂತಿಯುತ ಹೋರಾಟ ಮಾಡಲು ಕರೆಕೊಟ್ಟು ಅವರಲ್ಲಿ ಕೆಲವರು ಶಸ್ತ್ರತ್ಯಾಗ ಮಾಡಲು ಕರೆಕೊಟ್ಟು ನೆರವಾಗುತ್ತಾಳೆ. ಈಕೆಗಿದ್ದ ಸುಭಗ ಇಂಗ್ಲೀಷ್ ಭಾಷೆ, ಪತ್ರಿಕೋದ್ಯಮದ ಮತ್ತು ಸಮಾಜ ಕಾರ್ಯಕರ್ತೆಯ ಹಿನ್ನೆಲೆಗಾಗಿ ಸರ್ಕಾರ ಈಕೆಯನ್ನು  ಮಾವೋವಾದಿ ನಕ್ಸಲೀಯರ ಜೊತೆ ಶಾಂತಿ ಸಂಧಾನ ನಡೆಸಲು ಒಪ್ಪಿಸುತ್ತದೆ. ಆದರೆ ಸರ್ಕಾರ ಇವಳು ಶಾಂತಿಯುತ ಸಂಧಾನ ನಡೆಸುತ್ತಿರುವಾಗಲೇ ೨೦೦೫ರಲ್ಲಿ ಸಾಕೇತ್ ರಾಜ್ ಮತ್ತಿತರ ನಕ್ಸಲೀಯರನ್ನು ಗುಂಡಿಟ್ಟು ಕೊಲ್ಲುತ್ತದೆ. ಇದರಿಂದ ವಿಚಲಿತಳಾದ ಗೌರಿ, ಸರ್ಕಾರ ಮತ್ತು ನಕ್ಸಲೀಯರು ಇಬ್ಬರೂ ಶಾಂತಿಯುತ ಹೋರಾಟ ಮಡುವಂತೆ ಬರೆಯುತ್ತಲೇ ಹೋಗುತ್ತಾಳೆ. ೨೦೧೦ರ ವೇಳೆಗೆ ಗೌರಿ ಮಹಿಳೆಯರು, ದಲಿತರು, ನಕ್ಸಲರು ಎಲ್ಲರಿಗೂ ದನಿಯಾಗುತ್ತ ನಡೆಯುತ್ತಾಳೆ. ಈ ವೇಳೆಗೆ ಆಕೆ ಪತ್ರಕರ್ತೆಯಾಗಿ ಮಾತ್ರವಲ್ಲದೆ ಹೋರಾಟಗಾರ್ತಿಯಾಗಿಬಿಡುತ್ತಾಳೆ. ಹಿಂದುತ್ವವಾದೀ ಹೆಸರಲ್ಲಿ ದೇಶವನ್ನು ಒಡೆಯುವುದನ್ನು ೧೯೯೦ರಿಂದಲೇ  ಲಂಕೇಶ್ ಕೂಡ ವಿರೋಧಿಸುತ್ತ ಬಂದಿದ್ದ ವ್ಯಕ್ತಿ. ಅದನ್ನೇ ಮುಂದುವರೆಸುವ ಗೌರಿ ೨೦೦೩ರಲ್ಲೇ ಸುಳ್ಳುಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾಳೆ. ಗೌರಿ ಎಂಬ ಈ ದಿಟ್ಟ ಮಹಿಳೆ ವಿವಾದಗಳೇ ಇಲ್ಲದ ವ್ಯಕ್ತಿಯೇನಲ್ಲ. ವಿವಾದಗಳೇ ಇಲ್ಲದ ಸಾಮಾಜಿಕ ಕಾರ್ಯಕರ್ತರು, ಪತ್ರಿಕೋದ್ಯಮಿಗಳು ಇಲ್ಲವೂ ಇಲ್ಲ. ನೈತಿಕತೆಯ ಲವಲೇಶವೂ ಇಲ್ಲದೆ, ರಾಜಕೀಯ ದಾಳಗಳಾಗಿ, ಆತ್ಮಗಳನ್ನು ಮಾರಿಕೊಂಡ ಸಾವಿರಾರು ಪತ್ರಿಕೋದ್ಯಮಿಗಳು ನಮ್ಮ ದೇಶದಲ್ಲದ್ದಾರೆ. ಇವರ ಬಗ್ಗೆ ಚಕಾರ ಎತ್ತದ ಸಮಾಜ ಮಹಿಳೆಯೋರ್ವಳ ದಿಟ್ಟತನವನ್ನು ಮಾತ್ರ ಸಹಿಸದೆ ಪ್ರಹಾರಗಳನ್ನು ನೀಡುತ್ತ ಹೋಯಿತು. ಇಂತಹ ಹಲವು  ಘಟನೆಗಳಿಂದ ಆಕೆ ಕಲಿಯುತ್ತಲೇ ಹೋಗುತ್ತಾಳೆ. ಸಾಮಾಜಿಕ ಕಾರ್ಯಕರ್ತೆಯಾಗಿ ಅವಿರತ ದುಡಿಯುತ್ತಾಳೆ. ಒಂದಿಷ್ಟು ಗಳಿಕೆ, ಅದರಲ್ಲೇ ಪ್ರಪಂಚ ಗೆದ್ದ ಅತ್ಯಲ್ಪ ಸುಖಗಳು ಅವಳಿಗೆ ಸುಸಲಿತವಾಗಿ ಸಿಗಲು ಯಾವ ತಡೆಗಳು ಇಲ್ಲದಿದ್ದರೂ ಅವೆಲ್ಲಕ್ಕೂ ಮೀರಿ ಸಮಾಜವನ್ನು, ರಾಜಕೀಯವನ್ನು ಬದಲಿಸುವ ಕೆಲಸಗಳಿಗೆ ಮುಂದಾಗುತ್ತಾಳೆ.

ಚಿತ್ರಕೃಪೆ: ಸ್ಕ್ರೋಲ್.ಇನ್

೨೦೧೭ರಲ್ಲಿ ಆಕೆಯ ಹತ್ಯೆಯಾದಾಗ ಬರೀ ಪತ್ರಿಕೋದ್ಯಮದ ವ್ಯಕ್ತಿಗಳು ಮಾತ್ರವಲ್ಲದೆ ಯುವಕರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಎಲ್ಲರೂ ರಸ್ತೆಗಿಳಿದು ಅವಳ ಹತ್ಯೆಯನ್ನು ಖಂಡಿಸಿದ್ದು ಇದೇ ಕಾರಣಕ್ಕೆ. ಆಕೆ ಬರೀ ಪತ್ರಕರ್ತೆ-ಬರಹಗಾರ್ತಿಯಲ್ಲದೆ ಸಾಮಾಜಿಕ ಕಾರ್ಯಕರ್ತೆ ಮತ್ತು ಹೋರಾಟಗಾರ್ತಿಯಾಗಿದ್ದು ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆಯಿಟ್ಟ ವ್ಯಕ್ತಿಯಾಗಿದ್ದಳು. ೨೦೧೦ ಮತ್ತು ನಂತರದ ೨೦೧೩ರ ರಾಜಕೀಯ ಪಕ್ಷಗಳು ಈ ಉದಾರಿ ಮತ್ತು ಮುಕ್ತಮನಸ್ಸಿನ ಹೆಣ್ಣನ್ನು ತಮ್ಮ ಆಟಗಳಿಗೆ ಬಳಸಿಕೊಂಡವೋ ಹೇಳಲಾಗುವುದಿಲ್ಲ. ಆದರೆ ಈ ಕಾರಣಕ್ಕೆ ಒಬ್ಬ ಧ್ಯೇಯವಂತ ಪತ್ರಕರ್ತೆಯ ಬಲಿಯಂತೂ ಆಯಿತು. ಅಸಂವಿಧಾನಕ ರೀತಿಯಲ್ಲಿ ಪ್ರತಿದಿನ ಕ್ರೌರ್ಯಗಳನ್ನು ಮಾಡುವ ಹಲವರು ಧುರೀಣರು ನಮ್ಮ ನಡುವೆ ತಲೆಯೆತ್ತಿ ಓಡಾಡುತ್ತಾರೆ. ಸಂವಿಧಾನ ಶಿಕ್ಷಿಸಬಲ್ಲಂತ ಒಂದೇ ಒಂದು ತಪ್ಪುನ್ನು ಗೌರಿ ಮಾಡಿದ್ದಿದ್ದರೆ ಆಕೆಯನ್ನು ಜೈಲಿಗೆ ತಳ್ಳಲು ಯಾವುದೇ ಅಡೆ ತಡೆಗಳಿರಲಿಲ್ಲ. ಅಂತಹ ಯಾವ ತಪ್ಪನ್ನೂ ಮಾಡದ ಗೌರಿ ಪ್ರಭುತ್ವವನ್ನು ಪ್ರಶ್ನಿಸಿದ ಒಂದೇ ಕಾರಣಕ್ಕೆ ಹತ್ಯೆಗೊಳಗಾಗಿದ್ದು ಅಭವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಡಿದ ಅತ್ಯಾಚಾರವಾಯ್ತು. ಆಕೆ ಬದುಕಿದ್ದಿದ್ದರೆ ಸಿಗದಷ್ಟು ಹೆಸರು ಅವಳಿಗೆ ಸಿಕ್ಕಿತು. ಈ ಕಾರಣಗಳಿಗಾಗಿ ಗೌರಿ ಧೈರ್ಯ, ಧ್ಯೇಯಗಳಿಗೆ ಬದ್ದಳಾದ ಪತ್ರಿಕೋದ್ಯಮಿ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಳು.

ಈಕೆಯ ಬರಹದಲ್ಲಿ ಖಂಡಿತವಾಗಿ ಕಾಲ್ಪನಿಕ ಪಾತ್ರಗಳಿಲ್ಲ. ಅವೆಲ್ಲ ಕಥೆ, ಕಾವ್ಯ ಮತ್ತು ಕಾದಂಬರಿಗಳಿಗೆ ಸೀಮಿತ. ಪತ್ರಿಕೋದ್ಯಮದ ಬರಹಗಾರ್ತಿಯಾದ ಗೌರಿಯ ವಿಚಾರದಲ್ಲಿ ಈ ಕಾರಣಕ್ಕೇ ’ಬದುಕು ಮತ್ತು ಬರಹ ’ ವನ್ನು ಒತ್ತಟ್ಟಿಗಿಟ್ಟು ನೋಡಲು ಸಾಧ್ಯವಿದೆ.

Advertisements