ಕ್ರಿಸ್ಮಸ್ ಹಬ್ಬದ ಸಡಗರಕ್ಕೆ ಕವಿತೆಗಳ ತೋರಣ

ಪ್ರಿಯ ಓದುಗರೇ, 
ಈ ವಾರ ಅನಿವಾಸಿ ಅಂಗಳದಲಿ ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಹೊತ್ತು ಎರಡು ಕವಿತೆಗಳು ನಿಮಗಾಗಿ ಕಾಯುತ್ತಿವೆ. ನಾವು ಭಾರತೀಯರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಆ ನೆಲದ ಆಚರಣೆಯ ಸೊಬಗಿನಲ್ಲಿ ನಮ್ಮ ನಾಡಿನ ಯಾವುದೋ ಛಾಯೆಯನ್ನು ಅರಸುತ್ತೇವೆ. ಸಂಗೀತ ಸಾಹಿತ್ಯ ಲೋಕವೂ ಇದಕ್ಕೆ ಹೊರತಲ್ಲ. ಅದೇ ನೆಲೆಯಲ್ಲಿ ಈ ವಾರದ ಅನಿವಾಸಿ ಸಂಚಿಕೆ ನಮ್ಮನಾಡಿನ ಹೆಮ್ಮೆಯ ಕವಿ ಬೇಂದ್ರೆಯವರ ಕವಿತೆಯ ಧಾಟಿಯಲ್ಲಿ ಡಾ ಜಿ ಎಸ್ ಶಿವಪ್ರಸಾದ ಮತ್ತು ಡಾ ಶ್ರೀವತ್ಸ ದೇಸಾಯಿ ಅವರು ಬರೆದ ಎರಡು ಮಜಾಶೀರ ಕ್ರಿಸ್ಮಸ್ ಸಂಬಂಧಿ ಕವಿತೆಗಳೊಂದಿಗೆ ನಿಮ್ಮ ಮುಂದಿದೆ. ಜೊತೆಗೆ ಬೆಲ್ಫಾಸ್ಟ್ ನಗರದ ಕ್ರಿಸ್ಮಸ್ ಮಾರ್ಕೆಟ್ ನ ಒಂದಷ್ಟು ಚಿತ್ರಗಳಿವೆ. 
ತಮ್ಮೆಲ್ಲರಿಗೂ ಕ್ರಿಸ್ಮಸ್ ಸಂಭ್ರಮಾಚಾರಣೆಯ ಶುಭಾಶಯಗಳು. 
-ಸಂಪಾದಕಿ 

ಇನ್ನು ಯಾಕ ಬರಲಿಲ್ಲವ್ವ ?

ಡಾ ಜಿ ಎಸ್ ಶಿವಪ್ರಸಾದ್, ಶೇಫೀಲ್ಡ್

ಸ್ಯಾಂಟ ಇನ್ನು ಯಾಕೆ ಬರಲಿಲ್ಲ? 
( ದ.ರಾ.ಬೇಂದ್ರೆ ಅವರ ಕ್ಷಮೆಯಾಚಿಸಿ) 

ಇನ್ನು ಯಾಕೆ ಬರಲಿಲ್ಲವ್ವ 
ಅಜ್ಜ ನಮ್ಮವ 
ವರ್ಷ ವರ್ಷ ಕ್ರಿಸ್ಮಸ್ಸಿಗಂತ 
ಬಂದು ಹೋಗಾವಾ 

ಕೆಂಪು ಮೂಗಿನ ಜಿಂಕಿ ಮ್ಯಾಲೆ 
ಜಾರಿ ಬರುವವ 
ಮನಿಮ್ಯಾಲಿನ ಚಿಮ್ನಿಯೊಳಗ   
ತೂರಿ ಬರುವವ 

ಬಿಳಿ ಗಡ್ಡ, ಬಿಳಿ ಮೀಸೆ 
ಹೊತ್ತು ನಿಂತವ 
ಡೊಳ್ಳುಹೊಟ್ಟೆ ಮ್ಯಾಲೆ 
ಕೆಂಪು ಅಂಗಿತೊಟ್ಟವ 

ಕೂಸು ಕೂಸಿನ ಕೆನ್ನೆ ಸವರಿ 
ಉಡುಗೊರೆ ಕೊಟ್ಟವ 
ಚಿಣ್ಣರ ಕನಸಿಗೆ ಬಣ್ಣ ತುಂಬಿ 
ನಕ್ಕು ನಲಿದವ 

ಬೆನ್ನಿನ ಮ್ಯಾಲೆ ಬಯಕೆಯ 
ಭಾರವ ಹೊತ್ತು ತಂದವ 
ಕತ್ತಲಲ್ಲಿ ಬೆಳಕನು ಚಲ್ಲಿ 
ಮಾಯವಾದವ 

ಮೂರು ಬಾರಿ ಕೋವಿಡ್ ವ್ಯಾಕ್ಸಿನ್ 
ಹಾಕಿಸಿ ಕೊಂಡವ 
ಓಮೈಕ್ರಾನಿನ ಹೆಸರ ಕೇಳಿ 
ಅಂಜಿ ಕೂತವ!

ಡಾ ಜಿ ಎಸ್ ಶಿವಪ್ರಸಾದ್

ಕ್ರಿಸ್ಮಸ್ ಕ್ಯಾರಲ್

ಡಾ ಶ್ರೀವತ್ಸ ದೇಸಾಯಿ


ಯುಗ ಯುಗಾದಿ ಕಳೆದರೂ
ನಾತಾಳ* ಮರಳಿ ಬರುತಿದೆ
ಅದರ ಬೆನ್ನು ಹತ್ತಿದ ಬೇತಾಳದಂತೆ
ಹೊಸವರ್ಷವು ಮರಳಿ ಬರುತಿದೆ
ಚಾಕಲೇಟು, ಪ್ರೆಸೆಂಟ್ ಬಿಲ್ ಹೊತ್ತು
ಬೆನ್ನೂ ಬಿಲ್ಲಾಗಿ ಬಾಗಿದೆ, ಕಿಸಿಗೆ ತೂತು ಬಿದ್ದಿದೆ
ಬ್ಯಾಂಕು ಬ್ಯಾಲನ್ಸ್ ಅಂತೂ ಪಾತಾಳ ಸೇರಿದೆ!
*	*	*	*	*
ಅಲ್ಲಿ ಪಾರ್ಟಿಯಂತೆ, ಜನಜಂಗುಳಿ ಸೇರಿ ಹಂಗಾಮಾ ಮಾಡಿದೆ
ಆದರೆ ನಿಮಗೊಂದು ಎಚ್ಚರಿಕೆ!
ಮುತ್ತಿನಂಥ ನಿಮ್ಮ ಹಳೆಗೆಳತಿಯೊಬ್ಬಳು
‘ಮಿಸಲ್ ಟೋ‘ ದಡಿ ಕಾದುಕೂತಿದ್ದಾಳೆ
ಅಪ್ಪಿ ಮುತ್ತುಗಳ ಮಳೆಗರೆಯಲು
ಕಾಡುವ ಹಳೆಯ ನೆನಪುಗಳ ಓಕುಳಿಯಾಡಿದ್ದಾಳೆ 
ಕಂಡರೂ ಕಾಣದಂತೆ ಮಡದಿ ಕಿಡಿಕಿಡಿಯಾಗಿದ್ದಾಳೆ!
ಬರುತ್ತದೆ ನಿಮ್ಮತ್ತ ಒಂದು ಪಾರ್ಟಿ ಕ್ರಾಕರ್, ಜೋಕೆ!

*ನಾತಾಳ= ಕ್ರಿಸ್ಮಸ್ 

ಚಿತ್ರಗಳು – ಅಮಿತಾ ರವಿಕಿರಣ್

ವೈವಿಧ್ಯಮಯ ಕ್ರಿಸ್ಮಸ್ ಹಬ್ಬ – ವಿನತೆ ಶರ್ಮ ಬರೆದ ಲೇಖನ

ಇ೦ಗ್ಲೆಡಿನ ಛಳಿಯ ಜೊತೆಗೆ ಶುರುವಾಗುತ್ತದೆ ಕ್ರಿಸ್ ಮಸ್ ನ ಗಾಳಿ. ಜನ ಹಬ್ಬಕ್ಕೆ ಉಳಿದಿರುವ ದಿನಗಳನ್ನೆಣಿಸಲು ಶುರುಮಾಡುತ್ತಾರೆ. ಎಲ್ಲಕ್ಕಿ೦ತ ಹೆಚ್ಚು ಕೇಳಿಬರುವ ಶಬ್ದ ”ಪ್ರೆಸೆ೦ಟ್ಸ್ ಅಥವಾ ಕಾಣಿಕೆ”. ದೂರದರ್ಶನದಲ್ಲಿ ಪ್ರಸಾರವಾಗುವ ಚಲನಚಿತ್ರಗಳು ಈ ಹಬ್ಬದ ಬಗೆಗಾದರೆ, ಜಾಹೀರಾತುಗಳೆಲ್ಲ ನೆ೦ಟರಿಗೆ, ಮಕ್ಕಳಿಗೆ ಮತ್ತು ಸ್ನೇಹಿತರಿಗೆ ಕೊಡಬೇಕಾಗುವ ಕಾಣಿಕೆಗಳ ಬಗೆಗೆ. ಪ್ರತಿ ಊರಿನ ಬೀದಿಗಳಲ್ಲಿ ಹಬ್ಬದ ಪ್ರಯುಕ್ತ ತಿ೦ಗಳಿಗೆ ಮೊದಲೆ ಬೆಳುಗುವ ದೀಪಾಲ೦ಕಾರ, ಮನೆಗಳ ಮು೦ದಿನ ದೀಪಗಳು, ಕೆಲಸ ಮಾಡುವ ಜಾಗ, ಅ೦ಗಡಿಗಳಲ್ಲಿ ಮತ್ತು ಮನೆಗಳಲ್ಲಿ ಅಲ೦ಕೃತ ಕ್ರಿಸ್ ಮಸ್ ನ ಮರ. ಇದನ್ನೆಲ್ಲಾ ನೋಡಿದಾಗ ಈ ಹಬ್ಬದ ಸ೦ಭ್ರಮವನ್ನು ತಪ್ಪಿಸಿಕೊಳ್ಳಲು ಯಾರಿ೦ದಲೂ ಸಾಧ್ಯವಿಲ್ಲವೆ೦ದೆನಿಸುತ್ತದೆ. ಧರ್ಮ ಯಾವುದಾದರೇನು, ನಮ್ಮ ಸುತ್ತಲಿನ ಸ೦ಭ್ರಮದಲ್ಲಿ ಭಾಗಿಗಳಾಗಿ ಆನ೦ದಿಸೋಣ. ಈ ಹಬ್ಬದ ಪರಿಚಯ ಮತ್ತು ವೈವಿಧ್ಯತೆಯನ್ನು ನಮ್ಮೊ೦ದಿಗೆ ಈ ವಾರದ ಲೇಖನದಲ್ಲಿ ಹ೦ಚಿಕೊ೦ಡಿದ್ದಾರೆ ವಿನುತೆ ಶರ್ಮ – ಸ೦

 

ವೈವಿಧ್ಯಮಯ ಕ್ರಿಸ್ಮಸ್ ಹಬ್ಬ

ಲೇಖಕಿ – ವಿನತೆ ಶರ್ಮ

ಕ್ರಿಸ್ಮಸ್ ಹಬ್ಬ ಬಂದಿದೆ.

ಬಹುಶಃ ಅನೇಕ ದೇಶಗಳಲ್ಲಿ ಮಕ್ಕಳು ತಮ್ಮ ಜನ್ಮ ದಿನವಲ್ಲದ ಮತ್ತೊಂದು ದಿನಕ್ಕೆ ಕಾದು ಎದುರು ನೋಡುವ ದಿನ ಈ ಕ್ರಿಸ್ಮಸ್ ಹಬ್ಬ. ಮಕ್ಕಳಷ್ಟೇ ಅಲ್ಲ, ಅವರ ಹಿರಿಯರಿಗೂ ಕ್ರಿಸ್ಮಸ್ ಹಬ್ಬದ ಜೊತೆಗಿನ ನಂಟು ದೂರದ ನೆಂಟನಿಗಿಂತಲೂ ಒಂದು ಕೈ ಜಾಸ್ತಿ!

ಧಾರ್ಮಿಕವಾಗಿ ಕ್ರಿಸ್ಮಸ್ ಹಬ್ಬಕ್ಕೆ ಇರುವ ವೈವಿಧ್ಯಮಯ ಹಿನ್ನೆಲೆ ಎಷ್ಟು ಕುತೂಹಲವಾದದ್ದೋ ಅದು ಸಾಂಸ್ಕೃತಿಕವಾಗಿ ಮತ್ತು ಸಮುದಾಯ ಹಬ್ಬವಾಗಿ ಭೂಗೋಳವನ್ನು ಆವರಿಸಿದ್ದು ಅಷ್ಟೇ ಅಚ್ಚರಿ ಹುಟ್ಟಿಸುವ ವಿಷಯ. ಬೆಂಗಳೂರಿನಲ್ಲಿ ಕೆಲ ಕಾಲ ಇದ್ದ ನಮ್ಮ ಪಕ್ಕದ ಮನೆಯವರು ಕ್ರೈಸ್ತ ಧರ್ಮ ಪಾಲಕರು. ಅವರಿಂದ ಕ್ರಿಸ್ಮಸ್ ಹಬ್ಬದ ಪರಿಚಯವಾಗಿತ್ತು. ಹತ್ತು ದಿನಗಳ ನಮ್ಮ ದಸರಾ ಹಬ್ಬಕ್ಕೆ ನಾವು ಹೋಲಿಸುತ್ತಿದ್ದೆವು. ನಂತರ ಆಸ್ಟ್ರೇಲಿಯಾದ ಕಡು ಬೇಸಗೆಯಲ್ಲಿ ಬರುವ ಕ್ರಿಸ್ಮಸ್ ತನ್ನ ವೈವಿಧ್ಯತೆಯ ಬೇರೆ ಮುಖವನ್ನು ಪರಿಚಯಿಸಿತ್ತು. ಈಗ ಇರುವ ಇಂಗ್ಲೆಂಡ್ ನಲ್ಲೋ ನಿಜವಾದ ‘ಬಿಳಿ ಕ್ರಿಸ್ಮಸ್’ ಹಬ್ಬದ ಠಾಕುಠೀಕು. 

ಪಾಶ್ಚಾತ್ಯ ದೇಶಗಳಲ್ಲಿ ಧಾರ್ಮಿಕ ಪದ್ಧತಿಯಂತೆ ಕ್ರಿಸ್ಮಸ್ ಹಬ್ಬದ ಮಾಸವನ್ನು ಹಲವಾರು ಸಂಕೇತಗಳಿಂದ ಬರಮಾಡಿಕೊಳ್ಳುತ್ತಾರೆ. ‘ಅಡ್ವೆಂಟ್’ ಕ್ಯಾಲೆಂಡರ್ ಪ್ರಕಾರ ದಿನಗಳನ್ನೆಣಿಸಿ, ಕ್ರಿಸ್ತ ಹುಟ್ಟುವ ಕಾಲಕ್ಕೆಂದು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಕಡೆಯ ಹನ್ನೆರಡು ದಿನಗಳನ್ನು ಗುರುತರವಾಗಿ ಕಳೆದು ಹನ್ನೆರಡರ ಮಧ್ಯರಾತ್ರಿ ಮಗು ಜನನ ಕಾಲವನ್ನು ಚರ್ಚ್ ಗಳಲ್ಲಿ Mass ಮೂಲಕ ಆಚರಿಸುತ್ತಾರೆ. ಪಾಶ್ಚಾತ್ಯರು ತಾವು ಹೋಗಿ ನೆಲೆಸಿದ ವಿವಿಧ ದೇಶಗಳಲ್ಲಿ ಈ ಪದ್ಧತಿ ಹೆಚ್ಚು ಕಡಿಮೆ ಹಾಗೇ ಮುಂದುವರೆದಿದೆ. ಆದರೂ, ಕ್ರೈಸ್ತ ಧರ್ಮದಲ್ಲೂ ಇರುವ ಪಂಗಡಗಳು ಕ್ರಿಸ್ಮಸ್ ಆಚರಣೆಯಲ್ಲಿ ತಮ್ಮದೇ ಆದ ವಿವಿಧ ಛಾಪನ್ನು ಹೊಂದಿವೆ. ಅದಕ್ಕೆ ಅನುಗುಣವಾಗಿ  ಜೆರುಸಲೆಮ್ ನಲ್ಲಿ ಆಚರಿಸುವ ಕೆಲ ಪದ್ಧತಿಗಳು ಇಂಗ್ಲೆಂಡ್ ನಲ್ಲಿ ಬೇರೆ ರೂಪಗಳನ್ನು ತಾಳಬಹುದು. ರಷ್ಯಾ ದೇಶದ ಕೆಲ ಭಾಗಗಳಲ್ಲಿ ಈಗಲೂ ಜನವರಿ ೬ ಅಥವಾ ೭ ರಂದು ಕ್ರಿಸ್ಮಸ್ ಆಚರಿಸುತ್ತಾರೆ. ಆ ದಿನ Three Kings ಬಂದರು ಎಂಬ ನಂಬಿಕೆಯನ್ನಾಧರಿಸಿ. ಅವರವರ ಭಕುತಿಗೆ ಅವರವರ ಆಚರಣೆ ಎನ್ನಬಹುದೇನೋ!

ಹನ್ನೆರಡು ದಿನಗಳು ಏನೇನು ಉಡುಗೊರೆಗಳನ್ನು ಒಳಗೊಂಡಿವೆ ಅನ್ನೋದನ್ನ ಈ ಹಾಡು ತಿಳಿಸುತ್ತದೆ.

ಮಗು ಕ್ರಿಸ್ತನ ಜನ್ಮದಿನಾಂಕ ಖಚಿತವಾಗಿ ಯಾರಿಗೂ ತಿಳಿದಿಲ್ಲದಿದ್ದರೂ ಸುಮಾರು ನಾಲ್ಕನೇ ಶತಮಾನದಲ್ಲಿ ರೋಮನ್ನರು ಡಿಸೆಂಬರ್ ೨೫ ಕ್ರಿಸ್ಮಸ್ ಹಬ್ಬ ಎಂದು ಘೋಷಿಸಿದರು ಎಂದು ನಂಬಿಕೆ. ಈ ನಂಬಿಕೆಯ ಬುನಾದಿ ಎಂದರೆ ಡಿಸೆಂಬರ್ ೨೫ ರಂದು ಪಶ್ಚಿಮ ದೇಶಗಳ ಹವಾಮಾನದ ಪ್ರಕಾರ ಅತಿ ಕಡಿಮೆ ಬೆಳಕಿರುವ ದಿನ (ಆಗಿನ ನಂಬಿಕೆ; ಈ ವರ್ಷ ಡಿಸೆಂಬರ್ ೨೧ರಂದು). ಅಂದರೆ ಚಳಿಗಾಲದಲ್ಲಿ ಬರುವ ಒಂದು ಸಂಕ್ರಮಣದ ದಿನ. ಆ ದಿನದಿಂದ ಸೂರ್ಯನ ಬೆಳಕು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೊಸ ಬೆಳಕನ್ನ, ಸೂರ್ಯ ರಶ್ಮಿಯನ್ನ ತರುವ ಚೇತನವೊಂದು ಪ್ರಕೃತಿಯಲ್ಲಿ ಮೂಡುತ್ತದೆ. ರೋಮನ್ನರು ಆ ದಿನವನ್ನೇ ಪ್ರಶಸ್ತವೆಂದು ಆರಿಸಿಕೊಂಡರು. ಅವರು ‘ಧರ್ಮಬಾಹಿರ’ವೆಂದು ತಿಳಿದಿದ್ದ ಪೇಗನ್ ಸಂಸ್ಕೃತಿಯ (ಪ್ರಕೃತಿ ಶಕ್ತಿಗಳನ್ನು ಪೂಜಿಸುವ ಸಮುದಾಯಗಳು) ಹಬ್ಬಗಳ ಹುಟ್ಟಡಗಿಸಲು ಕೂಡ ಡಿಸೆಂಬರ್ ತಿಂಗಳನ್ನು ರೋಮನ್ನರು ಆರಿಸಿಕೊಂಡರು ಎಂಬ ವಾದವೂ ಇದೆ. ಆ ಮೂಲಕ ದೈವಿಕ ಶಕ್ತಿಯನ್ನು ಮಾನವರೂಪದಲ್ಲಿ ನೋಡುವ ಪದ್ಧತಿಯನ್ನು ಹುಟ್ಟುಹಾಕಿದರೆಂದು ಕೂಡ ವಾದಿಗಳು ಹೇಳುತ್ತಾರೆ. ಪೇಗನ್ನರು ಪ್ರಕೃತಿ ಆರಾಧಕರು. ಅವರು ಚಳಿಗಾಲದ ಅತಿ ಕಡಿಮೆ ಸೂರ್ಯನ ಬೆಳಕಿರುವ ಸಂಕ್ರಮಣದ ದಿನವನ್ನು Winter Solstice ಎಂದು ಆಚರಿಸುತ್ತಿದ್ದರು. Holy, Ivy ಮತ್ತು ವಿವಿಧ ಫರ್ನ್ ಮರಗಳನ್ನು ಬಳಸಿ ಅಲಂಕಾರ ಮಾಡುತ್ತಿದ್ದರು. ಆ ಆಚರಣೆಗಳು ಇಂದಿಗೂ ಉಳಿದಿವೆ. ಉತ್ತರ ಯುರೋಪ್ ಕಡೆಯಿಂದಲೂ ಬಹಳಷ್ಟು ಪ್ರಭಾವವಿದೆ.

ಅಂತಹ ಭಿನ್ನಾಭಿಪ್ರಾಯಗಳು ಏನೇ ಆಗಿದ್ದರೂ, ಉಪವಾಸ ವ್ರತದ ಮಾಸದಲ್ಲಿ ಕಡೆಯ ಹನ್ನೆರಡು ದಿನಗಳಿಗೆ ಪ್ರಾಮುಖ್ಯತೆಯಿದೆ. ಕಾಲ ಸರಿದಂತೆ ಸಾಂಪ್ರದಾಯಿಕ ಕ್ರಿಸ್ಮಸ್ ಹಬ್ಬಕ್ಕೆ ಹಲವಾರು ಸೇರ್ಪಡೆಗಳಾಗಿವೆ. ಅವಲ್ಲಿ ಗುರುತರವಾದವು ಎಂದರೆ Advent ಕ್ಯಾಲೆಂಡರ್ ಪ್ರಕಾರ ದಿನ ಎಣಿಸಿ ನೇಮ ಪಾಲಿಸುವುದು, ಮನೆಮುಂದೆ ಅಡ್ವೆಂಟ್ ಹಾರವನ್ನು ಪ್ರದರ್ಶಿಸುವುದು, ಸಾಂಘಿಕ ಜೀವನದ ಎಲ್ಲೆಡೆ (ಮನೆಗಳಲ್ಲಿ, ಹಳ್ಳಿ ಚೌಕದಲ್ಲಿ, ಪಟ್ಟಣದ ಮಾರುಕಟ್ಟೆಗಳಲ್ಲಿ ಇತ್ಯಾದಿ ಕಡೆ) ಕ್ರಿಸ್ಮಸ್ ಮರವನ್ನಿಟ್ಟು ವಿವಿಧ ರೀತಿಯಲ್ಲಿ ಅಲಂಕರಿಸಿ, ಬಣ್ಣಗಳನ್ನು ತುಂಬಿ, ಝಗಮಗ ಲೈಟುಗಳನ್ನು ಹಾಕುವುದು, ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಳ್ಳುವುದು, ಮತ್ತು ಕ್ರಿಸ್ತ ಹುಟ್ಟಿದ ಸನ್ನಿವೇಶವನ್ನು (ನೇಟಿವಿಟಿ ಶೋ) ಮರುಸೃಷ್ಟಿಸುವುದು.

Read More »