ಅನಿವಾಸಿಯಲ್ಲಿ ”ಕಳ್ಳರ ಕಾರುಬಾರು”

ಆತ್ಮೀಯ ಓದುಗರೇ , 

ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ಕಳ್ಳರು, ಮತ್ತವರು ಎಸಗುವ ಕಳ್ಳತನ, ದರೋಡೆ ಕುರಿತಾದ ಸುದ್ದಿ ಕೇಳುತ್ತೇವೆ, ನಿಯತಕಾಲಿಕೆಗಳಲ್ಲಿ ಓದೇ ಇರುತ್ತೇವೆ, ಆ ಕ್ರೌರ್ಯ ತುಂಬಿದ ಕೃತ್ಯ ಎಸಗುವವರ ಕುರಿತು ಒಂದು ರೀತಿಯ ತಿರಸ್ಕಾರ ಮತ್ತು ಭಯವು ಬೇಡವೆಂದರೂ ಮನದಲ್ಲಿ ಮೂಡಿಬಿಡುತ್ತದೆ. ಜೊತೆಗೆ ಕಳ್ಳತನವಾದ ವಸ್ತು ಮರಳಿ ಸಿಗುವುದು ಅದೃಷ್ಟವೇ ಸರಿ! ಆ ಭಯ ಮತ್ತು ಅದೃಷ್ಟದ ಸುತ್ತಲೇ ಇರುವ ಎರಡು ರಂಜನೀಯ ಘಟನೆಗಳನ್ನು ಈ ವಾರ ಅನಿವಾಸಿ ಬಳಗದ ಇಬ್ಬರು ಹಿರಿಯ ಸದಸ್ಯರು ತಮ್ಮ ನೆನಪಿನ ಸಂಚಿಯಿಂದ ತೆಗೆದು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ವತ್ಸಲಾ ರಾಮಮೂರ್ತಿ ಅವರು ಬರೆದ ”ಕಳ್ಳ ಬಂದ”  ಮತ್ತು ಶ್ರೀವತ್ಸ ದೇಸಾಯಿ ಅವರ ”ಕಳ್ಳಬಂದ-ಕ್ಯಾಮರಾ ಹೋತು-ವಾಪಸ್ ಬಂತು”ಎಂಬೆರೆಡು ಲಘು ಹಾಸ್ಯ ಬರಹಗಳು ಈ ವಾರ ನಿಮ್ಮ ಓದಿಗಾಗಿ. ಈ ಬರಹಗಳು ನಿಮಗೂ, ನಿಮ್ಮ ಜೀವನದಲ್ಲಾದ ಇಂಥಹುದೇ ಅನುಭವಗಳನ್ನ ನೆನಪಿಸಿದರೆ ಅದಕ್ಕೆ ಅಕ್ಷರ ರೂಪ ಕೊಟ್ಟು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಮರೆಯದಿರಿ. ಸರ್ವರಿಗೂ ಶರನ್ನವರಾತ್ರಿಯ ಶುಭಾಶಯಗಳು.

– ಸಂಪಾದಕಿ

ಕಳ್ಳ ಬಂದ – ವತ್ಸಲಾ ರಾಮಮೂರ್ತಿ ಬರೆದ ಹಾಸ್ಯ ಬರಹ

ಆ ದಿನ ನಾನು, ನನ್ನ ಗಂಡ, ನನ್ನ ಸ್ನೇಹಿತೆ ಸುಮಾ (ಸುಮತಿ) ಮತ್ತು ಅವಳ ಗಂಡ ಅರವಿಂದ ನಾವೆಲ್ಲರೂ, ವಾಣಿವಿಲಾಸ ಹಾಸ್ಪಿಟಲ್ ಕೆಲಸ ಮುಗಿಸಿ
ಮನೆಗೆ ಹೊರೆಟೆವು. ಅರವಿಂದ “ನನಗೆ ಸುಸ್ತಾಗಿದೆ ಕಾಫಿ ಕುಡಿದು ಹೋಗೋಣ ಬನ್ನಿ “ ಎಂದು ಹೇಳಿದಾಗ ನನ್ನ ಪತಿರಾಯ
“ನಾನು ಬರಲ್ಲಪ್ಪ“  ಎಂದು ಹೊರಡಲು ಅನುವಾದರು. ನಾನು ಅವರ ಹಿಂದೆ ಬಾಯಿ ಮುಚ್ಚಿಕೊಂಡು ನಡೆದೆ. I was too tired to argue with him. 
ಗೆಳತಿ ಸುಮಾ ”ನಾನೂ ಬರುವುದಿಲ್ಲಪ್ಪ ಬೇಕಾದರೆ ನೀನು  ಹೋಗು ಆದರೆ ವಾಪಸ ಬಂದಾಗ ಮನೆ ಬಾಗಿಲು ತೆಗೆಯುವುದಿಲ್ಲ ನೋಡು ”
ಅಂದು ಸಿಡುಕಿದಳು. ಅರವಿಂದ ತುಂಬಾ ಹಠವಾದಿ “ಸರಿ ನೀನು ಹೋಗು ನಾನು ಮಸಾಲೆದೋಸೆ ತಿಂದು ಕಾಫಿ ಕುಡಿದು
ಬರುತ್ತೇನೆ “ಅಂತ ಹೇಳಿ ದಾಪುಗಾಲು ಹಾಕುತ್ತ ಹೋರಟೇ ಬಿಟ್ಟ . 
ನಾನು ಸುಮಾಳನ್ನು ಕುರಿತು “ಬಾರೆ ಅತಿ ಜಂಬ ಹೋಡಿತಾನೆ ನಾವು ಹೋಗೋಣ.“ ಎಂದು ನಮ್ಮ ಮನೆದಾರಿ ಹಿಡಿದೆವು.  ನಮ್ಮೆಲ್ಲರಿಗೂ ಗಳ್ಳಸ್ಯ, ಕಂಠಸ್ಯ. ನಾವು ನಮ್ಮ  ಪ್ರೌಢಶಾಲಾ ದಿನಗಳಿಂದಲೂ ಸಹಪಾಠಿಗಳು ,ಸ್ನೇಹಿತರು.
ನಮ್ಮ ಮನೆ ಮತ್ತು ಸುಮಾಳ ಮನೆ ಒಂದೇ ರಸ್ತೆಯಲ್ಲೇ ಇತ್ತು. ದಾರಿಯುದ್ದಕ್ಕೂ ಧುಮುಗುಡುತ್ತ  ಸುಮಾ ಮನೆ ಸೇರಿ ಬಾಗಿಲು ಜಡಿದಳು .
ನಾವಿಬ್ಬರು ನಮ್ ಮನೆಗೆ ಬಂದು ಬಿಸಿ ಬಿಸಿ ಕಾಫಿ, ಕೋಡುಬಳೆ ತಿನ್ನುತ್ತಾ ಟಿವಿ ನೋಡುತ್ತಾ ಇದ್ದೆವು .
ಒಂದು ಘಂಟೆ ಕಳೆದಿರಬಹುದು .ಫೋನ್ ಬಡಿದುಕೊಂಡಿತು. ಅಯ್ಯೋ! ಇದೊಂದು ಫೋನ್ ಕಾಟ, ಎಂದು ಗೊಣಗಾಡಿಕೊಂಡು “ಹಲೋ ಯಾರು ಮಾತನಾಡುವುದು ?” ಎಂದು ಖಾರವಾಗಿ ಕೇಳಿದೆ, ಅಸಮಾಧಾನ, ತುಸು ಕೋಪದ ಧ್ವನಿಯಲ್ಲಿ . ಆ ಕಡೆಯಿಂದ ನಡುಗುವ ಧ್ವನಿಯಲ್ಲಿ. ”ಲೇ ಲೇ ಪಾಪು “ ಎಂದು ನನ್ನ ಮನೆಯಲ್ಲಿ ಪ್ರೀತಿಯಿಂದ ಕರೆಯುವ ಹೆಸರಿನಿಂದ ಕರೆದಾಗ, ನಾನು ಇನ್ನೂ ಖಾರವಾಗಿ “ಯಾರ್ ನೀನು?“ ಎಂದೆ .
ಅಳು ಧ್ವನಿಯಲ್ಲಿ ”ನಾನು ಸುಮಾ ಕಣೇ, ನಮ್ಮ ಮನೆಗೆ ಕಳ್ಳ  ಬಂದಿದಾನೆ. ಮೇಲೆ  ನಡೆದಾಡುವ ಸದ್ದು ಕೇಳಿಸುತ್ತಾ ಇದೆ. ನನ್ನ ಎದೆ ನಡುಗುತ್ತಿದೆ ಹೆದರಿಕೆಯಿಂದ. ಬೇಗ ಬಾರೆ“ ಅಂತ ಮುಸು ಮುಸು ಅಳಲು ಶುರು ಮಾಡಿದಳು.  ಅವಳಿಗೆ ಕಳ್ಳ ಅನ್ನೋ ಆ ಪದ  ಕೇಳಿದರೆ ಮೈ ಬೆವರುತ್ತದೆ.
ಅವಳು ಮಗುವಾಗಿದ್ದಾಗ ಗಲಾಟೆ, ತುಂಟತನ ಮಾಡಿದಾಗೆಲ್ಲಾ  ಕಳ್ಳ ಬಂದು ಎತ್ತಿ ಕೊಂಡು ಹೋಗುತ್ತಾನೆ ನೋಡು  ಅಂತ ಹೆದರಿಸಿ ಹೆದರಿಸಿ, ಅದೇ ಅವಳ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ.
ಆ ವಿಚಾರದಲ್ಲಿ ಅವಳಿಗೆ ಇಷ್ಟು ತಿಳಿ ಹೇಳಿದರೂ ತಾರ್ಕಿಕವಾಗಿ ಯೋಚಿಸಲು ಸಾಧ್ಯವೇ ಆಗಿಲ್ಲ, ಎಷ್ಟು ತಮಾಷೆ,ಬುದ್ದಿವಾದ ಹೇಳಿದರೂ ಅವಳ ಭಯ ಹೋಗಿಲ್ಲ. ಅವಳ ಮನೋಭಯದ ಅರಿವಿರುವ ನಾನು, ನನ್ನ ಪತಿರಾಯನನ್ನ ಎಳೆದುಕೊಂಡು ಆಕೆ ಮನೆಕಡೆ ಹೊರಟೆ 
ಮನೆಬಾಗಿಲು ತಟ್ಟಿ “ನಾನು ಪಾಪು” ಅಂದಮೇಲೆಯೇ ಆಕೆ ನಡುಗುತ್ತ ಬಾಗಿಲು ತೆಗದದ್ದು.

ಮೆತ್ತಗೆ ಒಳಗೆ ಹೋದೆವು. ಮೇಲೆ ಬಾತ್ರೂಮ್ನಲ್ಲಿ ನೀರು ಬಿಟ್ಟಿರುವ ಸದ್ದು, ಸಣ್ಣ ಧ್ವನಿಯಲ್ಲಿ ಹಾಡುವ ಸದ್ದು ಕೇಳಿಸಿತು.
“ನೋಡಿದೆಯಾ ಈ ಕಳ್ಳ ಭಡವ! ಎಷ್ಟು ಕೊಬ್ಬು! ನಮ್ಮ ಬಾತ್ರೂಮ್ನಲ್ಲಿ  ‘ಇಳಿದು ಬಾ ತಾಯೆ ಹರನ ಜಡೆಯಿಂದ‘ ಅಂತ ಹಾಡುತ್ತಿದ್ದಾನೆ,“ ಎಂದು ಮತ್ತೆ ರೋಷಗೊಂಡಳು. ಆಕೆಗೆ ಸ್ವಲ್ಪ ಸಮಾಧಾನ ಮಾಡಿ ಮೊದಲು ನಾಯಿಯನ್ನು ಬಿಟ್ಟೆವು. ಅದು ಬೌ ಅಂತ ಮೇಲೆ ಹೋಗಿ, ೫ ನಿಮಿಷಕ್ಕೇ ಸಂತೋಷವಾಗಿ ವಾಪ್ಪಸ್ಸು ಬಂತು. ”ಕಳ್ಳ,ನಾಯಿಗೆ ಮ್ಯಾಜಿಕ್ ಮಾಡಿದ್ದಾನೆ” ಎಂದು ಹೇಳಿದ ಸುಮಾ ಸ್ವಲ್ಪ ಹೊತ್ತು ಮೌನವಾದಳು. ಮತ್ತೆ “ನನ್ನ ಅಮ್ಮ ಕೊಟ್ಟ ನೆಕ್ಲೆಸ್ನ ಹಾಸಿಗೆ ಒಳಗೆ ಬಚ್ಚಿ ಇಟ್ಟಿದ್ದೆ. ಸೇಫ್ ಡೆಪಾಸಿಟ್ ನಲ್ಲಿ ಇಡಬೇಕು ಅಂತ, ಕಳ್ಳ ಎಲ್ಲ ಒಡವೆಗಳು, ದುಡ್ಡು, ಮದುವೆ ಸೀರೆಗಳು ಎಲ್ಲ ಜಮಾಯಿಸುತಿದ್ದಾನೆ.“ ಎಂದು ಮತ್ತೆ  ಜೋರಾಗಿ ಕಿರಿಚಾಡಿದಳು. ನಾನು ನನ್ನ ಗಂಡನಿಗೆ, ನೀವೊಮ್ಮೆ ಹೋಗಿ ನೋಡಿಯಲ್ಲ, ಧೈರ್ಯವಿದ್ದರೆ ಅಂತ ಬೇಕಂತ ಕೆಣಕಿದೆ. ಆ ಮಾತಿನಿಂದ ಅವರಿಗೆ ಕೊಂಚ ಅಸಮಾಧಾನ ಆಯಿತಾದರೂ ಮರುಕ್ಷಣವೇ ದಬದಬ ಮೆಟ್ಟಿಲೇರಿ ಮಹಡಿಗೆ ಹೋದರು.  ಒಂದಷ್ಟು ಹೊತ್ತು ಸದ್ದೇ ಇಲ್ಲ. ಈಗ ನಮ್ಮಿಬ್ಬರಿಗೂ ನಿಜವಾಗಲೂ ಆತಂಕವಾಯಿತು. ಧೈರ್ಯ ಮಾಡಿ ನಾವಿಬ್ಬರೂ ಮಹಡಿ ಮೇಲೆ ಹೋದೆವು. ಅಲ್ಲಿ ನೋಡಿದರೆ ನನ್ನ ಪತಿರಾಯ ಮತ್ತು ಅರವಿಂದ ಏನು ಆಗಿಲ್ಲ ಅನ್ನೋ ಹಾಗೆ ನಗುತ್ತ ಹರಟೆ ಹೊಡೆಯುತ್ತ  ನಿಂತಿರುವುದನ್ನು ಕಂಡ ಸುಮತಿ ಕೆಂಡಾಮಂಡಲ ಸಿಟ್ಟು ತಾಳಿದಳು. ಸ್ವಲ್ಪ ಹೊತ್ತಿಗೆ ಎಲ್ಲವು ಸರಿಯಾಗಿ ಆಕೆಯೂ ಸಮಾಧಾನ ಗೊಂಡಳು.

ಹಾಗಾದರೆ ಆದದ್ದೇನು? ಅರವಿಂದ ತಿಂಡಿತಿಂದು ಮನೆಗೆ ಬಂದ. ಸುಮಾಳ ಕೋಪದ ಕಾವು ಈ ಮೊದಲೂ ಅನುಭವಿಸಿದ್ದರಿಂದ ಮತ್ಯಾಕೆ ರಗಳೆ ಎಂದು ಹಿಂದಿನ ಬಾಗಿಲಿನಿಂದ ಮನೆಗೆ ನುಸುಳಿಕೊಂಡ. ಆರಾಮವಾಗಿ ಸ್ನಾನ ಮಾಡಿ ನಿದ್ರೆಮಾಡಲು ತಯಾರಿ ನಡುಸುತಿದ್ದ . ಆದರೆ ಪಾಪ! ಸುಮಾಳ ಬಾಲ್ಯದ ಕಳ್ಳನ ಕುರಿತು ಇದ್ದ ಹೆದರಿಕೆಯ ಕೆಂಡ ಕೆದಕಿದ್ದ.
ಈ ಘಟನೆಯನ್ನು ಈಗಲೂ ನೆನೆಸಿಕೊಂಡು ನಾವೆಲ್ಲಾ ನಗುತ್ತೇವೆ. ಸುಮಾ ಮಾತ್ರ ” ಇವತ್ತಿಗೂ ನನಗೆ ಕಳ್ಳರ ಬಗ್ಗೆ ವಿಪರೀತ ಭಯ!
ದಯವಿಟ್ಟು ನನ್ನ ಗಂಡನಿಗೆ ಹೇಳಬೇಡಿ.” ಎಂದಾಗ ನಾವೆಲ್ಲ ನಗೆಗಡಲಲ್ಲಿ ತೇಲುತ್ತೇವೆ.

ಕಳ್ಳ ಬಂದ – ಕ್ಯಾಮರಾ ಹೋತು – ವಾಪಸ್ ಬಂತು!

ಶ್ರೀವತ್ಸ ದೇಸಾಯಿ ಅವರ ಅನನ್ಯ ಅನುಭವ ಕಥನ.

ಆಘಾತ -1 – ಕಳುವು

ಇದು ಎರಡು ದಶಕಗಳ ಹಿಂದಿನ ಘಟನೆ. ಆಗ ನಮ್ಮ ಮನೆಗೆ ಬರ್ಗ್ಲರ್ ಅಲಾರ್ಮ್ ಇರಲಿಲ್ಲ. ನನಗೆ ವಿಡಿಯೋ ಕ್ಯಾಮರಾದ ಹವ್ಯಾಸ ಶುರುವಾಗಿತ್ತು. ಶರತ್ಕಾಲದಲ್ಲಿ ಗಿಡ ಮರಗಳ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತಿದ್ದವು. ಆ ಮಧ್ಯಾಹ್ನ ಅದರ ಶೂಟಿಂಗ್ ಮಾಡಿ ಮನೆಯಲ್ಲಿ ಅ ವಜ್ಜೆಯ ಕ್ಯಾಮರಾ ಇಟ್ಟು ಶಾಲೆಯಿಂದ ನನ್ನ ಹನ್ನೆರಡು ವರ್ಷದ ಮಗಳನ್ನು ಕರೆದುಕೊಂಡು ಬರಲು ಸ್ಕೂಲಿಗೆ ಓಡಿದೆ. ಮನೆಗೆ ಬಂದು ನೋಡುತ್ತೇನೆ, ತುಡುಗು ಆಗಿತ್ತು. ತೋಟದ ಕಡೆ ಮುಖಮಾಡಿದ್ದ ಕಿಡಕಿಯ ಗಾಜನ್ನು ಒಡೆದು ಒಳಗೆ ಬಂದು ನನ್ನ ಬೆಡ್ರೂಮಿನಲ್ಲಿಟ್ಟಿದ್ದ ಆ ಕ್ಯಾಮರಾ, ಮತ್ತು ಕೆಲ ಸಾಮಾನುಗಳನ್ನು ನನ್ನ ಆ ಅರ್ಧ ಗಂಟೆಯ ಅನುಪಸ್ಥಿತಿಯಲ್ಲಿ ಕದ್ದು ಮಾಯವಾಗಿದ್ದ ಆ ಕಳ್ಳ. ಆಗ ಹೆರಾಯಿನ್ ಮತ್ತಿತರ ಮಾದಕ ದ್ರವ್ಯಗಳ ಅಡಿಕ್ಟ್ ಆಗಿದ್ದ ಕಳ್ಳರ ಸಂಖ್ಯೆ ಹೆಚ್ಚಾಗಿತ್ತು ಅಂತ ಓದಿದ್ದೆ. ಮನೆಗೆ ಬಂದ ಕೂಡಲೆ ಮೊದಲು ಮಗಳಿಗೆ ತಿಂಡಿ ಕೊಡಬೇಕೆಂದು ನನ್ನ ಮನದ ತಲ್ಲಣ-ಕಳವಳವನ್ನು ತೋರಗೊಡದೆ ಕಳವಾದದ್ದು ಗೊತ್ತಾಗದೆ ತನ್ನ ಕೋಣೆಗೆ ಹೋಗಿದ್ದ ಅವಳನ್ನು ಕರೆದು ಸುದ್ದಿ ಹೇಳಿದೆ.

ಆಘಾತ -2  ಸ್ಥಿತಪ್ರಜ್ಞ

ಅವಳ ತಾಯಿ ಇನ್ನೂ ಕೆಲಸದಿಂದ ಬಂದಿರಲಿಲ್ಲ. ನಾನೇ ಉಪಹಾರ ಕೊಡುತ್ತ ಸ್ಥಿತಪ್ರಜ್ಞನಂತೆ ’ಬ್ರೆಕ್ಕಿನ್ ನ್ಯೂಸ್’ (breaking news) ಹೇಳಿದೆ. We are burgled ಅಂತ. ವಿನೋಬಾ ಭಾವೆಯವರು ಶಿವಣಿ ಜೈಲಿನ ರಾಷ್ಟ್ರ ಭಕ್ತ ಕೈದಿಗಳಿಗೆ ಸಂಜೆಯ ಉಪನ್ಯಾಸ ಕೊಡುತ್ತಿದ್ದರಂತೆ ಭಗವದ್ಗೀತೆಯ ಮೇಲೆ. ಅವರ ಬೇಡಿಕೆಯ ಮೇರೆಗೆ ಎಲ್ಲ ಉಪನ್ಯಾಸಗಳನ್ನು ತಮ್ಮ ‘ಸ್ಥಿತಪ್ರಜ್ಞ ದರ್ಶನ’ ಪುಸ್ತಕದಲ್ಲಿ ಬರೆದಿದ್ದರು. ಅದನ್ನು ನನ್ನ ಅಜ್ಜ ಕನ್ನಡೀಕರಿಸಿದ್ದರು. 2,700 ಸಲ ಅಜ್ಜ ಭಗವದ್ಗೀತೆಯನ್ನು ಓದಿದ್ದರಂತೆ. ನಾನು ಆಗ ತಾನೆ ಮೊದಲ ಸಲ ಸ್ಥಿತಪ್ರಜ್ಞನ ಲಕ್ಷಣಗಳನ್ನು ಓದಲಾರಂಭಿಸಿದ್ದೆ (ಅಧ್ಯಾಯ 2, ಶ್ಲೋಕಗಳು 58-72). ಮಗಳು ಏನೇನೆಲ್ಲ ಹೋಗಿದೆ ಅಂತ ಕೇಳಿದಳು. ಬಹಳ ದಿನಗಳಿಂದಲೂ ನನಗೆ ಹೊಸತೊಂದು ಕ್ಯಾಮ್ ಕಾರ್ಡರ್ ಕೊಳ್ಳುವ ಮನಸ್ಸಿದೆ ಎಂಬುದು ಅನ್ನುವದು ಅವಳಿಗೂ ಗೊತ್ತಿತ್ತು. ಆಗಾಗ ತಮಾಷೆಗೆಂದು ಅದು ಕಳೆದು ಹೋದರೆ ಇನ್ಶೂರನ್ಸ್ ನಲ್ಲಿ ನನಗೆ ಹೊಸತು ಸಿಕ್ಕೀತೆಂದು ಹೇಳಿದ್ದು ನೆನಪಿಸಿಕೊಂಡು, ’ಇದೇನು ನಾಟಕವೋ? Have you set it up for insurance?’ ಅನ್ನಬೇಕೇ? ನಾನು ಕಳಕೊಂಡಿದ್ದಕ್ಕಿಂತ ಈ ಮಾತು ಹೆಚ್ಚು ಆಘಾತಕಾರಿಯಾಗಿತ್ತು! ನನ್ನ ಮಗಳೂ ಸಹ ನಂಬಲಾರಳೆ ನನ್ನ ಪರಿಸ್ಥಿತಿಯನ್ನು? ಲೌಂಜಿಗೆ ಕರೆದುಕೊಂಡು ಹೋಗಿ ಒಡೆದು ಅರ್ಧ ತೆರೆದ ಕಿಡಕಿ ಮತ್ತು ನೆಲದಮೇಲೆ ಚೆಲ್ಲಾಪಿಲ್ಲಿಯಾಗಿ ಪಸರಿಸಿದ ಗಾಜಿನ ಚೂರುಗಳನ್ನು ತೋರಿಸಿದೆ. ಇನ್ನು ಮುಂದೆ ಅವಳ ಅಮ್ಮನನ್ನು ನಂಬಿಸುವದು ಉಳಿದಿತ್ತು! ಪೋಲೀಸಿನವರಿಗೆ ಫೋನು ಮಾಡಿ ವಿವರ ಕೊಟ್ಟೆ. ಏನೇನೆಲ್ಲ ಹೋಗಿದೆ ಅಂತ ವರದಿ ಮಾಡಿದೆ. ಅವರು ಶಾಲೆಯ ಟೈಮ್ ನಲ್ಲೇ ಇಂಥ ಕಳುವುಗಳ ಹಾವಳಿ ಇರುತ್ತದೆ. ಯಾಕಂದರೆ ಕಳ್ಳರಿಗೆ ಗೊತ್ತು, ಆ  ಸಮಯದಲ್ಲಿ ಮನೆಯಲ್ಲಿ ಯಾರೂ ಇರುವುದಿಲ್ಲ ಅಂತ. ಹೊಂಚು ಹಾಕಿ ಕಾಯುತ್ತಿರುತ್ತಾರೆ, ಅಲಾರ್ಮ್ ಇಲ್ಲದ ಮನೆಗಳ ಬೇಟೆಯಾಡುತ್ತಿರುತ್ತಾರೆ. ಅದಕ್ಕೇ ಬರ್ಗ್ಲರ್ ಅಲಾರ್ಮ್ ಇಟ್ಟುಕೊಳ್ಳ ಬೇಕು ಇತ್ಯಾದಿ ಉಪದೇಶವನ್ನು ತಾಳ್ಮೆಯಿಂದ ಕೇಳಿಸಿಕೊಂಡೆ. ನನ್ನ ವೈಯಕ್ತಿಕ ವಿವರಗಳನ್ನು ಕೇಳಿ ಬರೆದು ಕೊಂಡು ನನ್ನ ವಿಳಾಸಕ್ಕೆ ಫಿಂಗರ್ ಪ್ರಿಂಟ್ ಎಕ್ಸ್ಪರ್ಟ್ ಮತ್ತು ಡಿಟೆಕ್ಟಿವ್ ಬರುತ್ತಾರೆ ಅಂತ ಭರವಸೆ ನೀಡಿದ ಸ್ವಿಚ್ ಬೋರ್ಡ್ನಲ್ಲಿ ಕುಳಿತಿದ್ದ ಪೋಲೀಸ್ ಆಫೀಸರ್.

ಆಘಾತ -3

ಅಷ್ಟರಲ್ಲಿ ಕೆಲಸದಿಂದ ನನ್ನ ಹೆಂಡತಿ ಬಂದಳು. ಗಾಜಿನ ಚೂರುಗಳನ್ನು ನೋಡಿ ಹೌಹಾರಿದಳು. ನಗುತ್ತ ಬಂದವಳ ಮುಖಚರ್ಯೆಯೇ ಬದಲಾಯಿತು. ಏನಾಯಿತು ಅಂತ ಕೇಳಿದಳು. ಎಲ್ಲ ಹೇಳಿದೆ. ಏನು ಕಳಕೊಂಡೆ, ಅಂದಳು. ಯಾದಿ ಒಪ್ಪಿಸಿದೆ. ಮತ್ತೇನು ಅಂದಳು. ಈಗಾಗಲೇ ಬುದ್ಧಿ ಸ್ವಲ್ಪ ಸ್ತಿಮಿತ್ತಕ್ಕೆ ಬಂದು ಮತ್ತೆರಡು ಸಲ ಕಪಾಟು, ಡ್ರಾ ಎಳೆದು ಎಲ್ಲ ಹುಡುಕಾಡಿದ್ದೆ. ಸ್ವಲ್ಪ ಕ್ಯಾಶ್ ಹೋಗಿದೆ, ಅಂದೆ. ’’ಎಲ್ಲ ಅಲ್ಲಲ್ಲೇ ಒಗೆದಿರುತ್ತೀ. ನಿನಗೆ ನೂರು ಸಲ ಹೇಳಿದ್ದೆ, ಬರ್ಗ್ಲರ್ ಅಲಾರ್ಮ್ ಹಾಕಿಸು ಅಂತ, ಕೇಳಿದೆಯಾ?” ಪೂಜೆ ಶುರು. ”ಮತ್ತೆ ಎಲ್ಲ ಸರಿಯಾಗಿ ನೋಡಿದೆಯಾ?” ಗೋಣು ಅಲ್ಲಾಡಿಸುತ್ತ ಹೇಳಿದೆ: ”ನಮ್ಮ ಆಸ್ಪತ್ರೆಯ ಶತಮಾನೋತ್ಸವದ ಕಂಚಿನ ಮೆಡಲ್ ಕಾಣವಲ್ಲದು …’’ ಅಂತ ಮೆಲ್ಲಗೆ ಎಳೆಯಲಾರಂಭಿಸಿದೆ. ”ಎಲ್ಲಿ ಒಗೆದಿದ್ದೀಯೊ. ನಿನ್ನ ಅಶಿಸ್ತು ನನಗೆ ಗೊತ್ತಿಲ್ಲವೆ?’’ ಆಪಾದನೆ ನಂಬರ್  ನೂರಾ ಒಂದು. ”ಸರಿ ಏನಾದರೂ ತಿಂದು, ಕುಡಿ. ಆ ಇನ್ಸ್ಪೆಕ್ಟರ್ ಯಾವಾಗ ಬರುತ್ತಾನೋ, ಶನಿ.” ಈಗ ಪೂಜೆ ಆ ನಿಷ್ಪಾಪಿಯತ್ತ ಡೈವರ್ಟ್ ಆಗುತ್ತಿದೆ ಅನಿಸಿತು. ಕತ್ತಲಾಗುತ್ತಿದ್ದಂತೆ ಸ್ವಲ್ಪೇ ಹೊತ್ತಿನಲ್ಲಿ ಆತ ಬಂದ. ಒಳಗೆ ಕಾಲಿಡುತ್ತಿದ್ದಂತೆಯೇ. ’’ನೀವು ಸುದೈವಿಗಳಲ್ಲವೇ” ಅಂದ. ನನಗೋ ಮೊದಲೇ ರೇಗಿ ಹೋಗಿತ್ತು. ಇದನ್ನು ಕೇಳಿ ಇದೆಂಥ ನಿರ್ದಯಿ ಈತನ ಮಾತು ಅಂತ ನೆತ್ತಿಗೇರಿತು.”ಇದೇನು ಇಂದು ಕನ್ನ ಹಾಕಿದ ಮನೆಗೆ ಬಂದು ಹೀಗೆ ಹೇಳುವದೇ?’’ ಅಂತ ಖಾರವಾಗಿಯೇ ಕೇಳಿದೆ. ಆಮೇಲೆ ಅರ್ಥವಾಯಿತು ಅವನಂದುದರ ತಾತ್ಪರ್ಯ. ಅತ್ತ ಬೆರಳ ಗುರುತುಗಳ ಪ್ರತಿ ತೊಗೊಳ್ಳಲು ಕಿಡಕಿಗಳಿಗೆ ಎಲ್ಲ ಗ್ಲಾಸು, ಬಾಗಿಲು, ಗೋಡೆ ತುಂಬ ಬಿಳಿ ಪುಡಿಗಳನ್ನು ಪಸರಿಸಿ, ಇನ್ನೂ ಕತ್ತಲೆ ಮಾಡುವುದರಲ್ಲಿ ನಿರತಳಾಗಿದ್ದ ಸಹೋದ್ಯೋಗಿಯತ್ತ ನೋಡುತ್ತ ಎಲ್ಲ ಸರಿಯಾಗಿ ಮಾಡು ಅಂತ ಹೇಳುತ್ತ ನಮ್ಮ ಮನೆಯನ್ನು ದೋಚಿದ ಕಳ್ಳ ಈಗಾಗಲೆ ಅರೆಸ್ಟ್ ಆಗಿ ಲಾಕಪ್ಪಿನಲ್ಲಿದ್ದಾನೆ ಅನ್ನುವ ಸುದ್ದಿ ಹೇಳಿದ. ನನಗೆ ನಂಬಲೇ ಆಗಲಿಲ್ಲ. ಅದು ಹೇಗೆ ಇಷ್ಟು ಬೇಗನೆ ಅಂದೆ. ನನಗೆ ಆ ವಿಭಾಗದವರು ಹೇಳಿದ್ದೇನೆಂದರೆ ನಿಮ್ಮ ಮನೆಯಲ್ಲಿ ಕದ್ದು ಇಲ್ಲಿಂದ ಹೊರಟವ ಊರ ಮಧ್ಯದಲ್ಲಿ ಸಿಕ್ಕಿ ಬಿದ್ದ. ಆತನ ಕಾರಿನಲ್ಲಿ ಸಿಕ್ಕ ಸಾಮಾನುಗಳಲ್ಲಿ ನಿಮ್ಮ ಕ್ಯಾಮ್ ಕಾರ್ಡರಿನ ಮೇಲೆ ನೀವು ಢಾಳಾಗಿ ಇನ್ವಿಸಿಬಲ್ ಇಂಕ್ ಪೆನ್ನಿನಲ್ಲಿ ಬರೆದ ಪೋಸ್ಟ್ ಕೋಡ್ ಕಂಡು ನಿಮ್ಮದೆಂದು ಗುರುತಿಸಿದ್ದೇವೆ, ಅಂದ. ಆತ ಶಹಭಾಶ್ ಗಿರಿಗೆ ಕಾಯುತ್ತಿದ್ದ. ಅದೆಂಥ ನಿರಾಶೆ ನನಗೆ! ಹೊಸ ಕ್ಯಾಮರಾದ ಆಸೆಗೆ ಅಲ್ಲೇ ತಿಲಾಂಜಲಿ. ಆದರೂ ಸ್ಥಿತಪ್ರಜ್ಞನಂತೆ ಮುಖದಲ್ಲಿ ಅದನ್ನು ತೋರಗೊಡದೆ ’’ವಂಡರ್ ಫುಲ್! ನಿಮ್ಮ ಪತ್ತೇದಾರಿಗೆ ಅಭಿನಂದನೆಗಳು,’’ ಅಂತ ಕೈಕುಲುಕಿದೆ. (ಆಗ ಅದಕ್ಕೆ ಪರವಾನಗಿ ಇತ್ತು!). ಪೋಲೀಸ್ ಸ್ಟೇಶನ್ನಿಗೆ ನಾಳೆ ಬಂದು ರಿಪೋರ್ಟಿಗೆ ಸಹಿ ಮಾಡಿ, ರೆಡಿ ಮಾಡಿದ್ದರೆ ನಿಮ್ಮ ವಸ್ತುಗಳನ್ನು ಪಡೆದು ರಿಸೀಟ್ ಕೊಟ್ಟು ಹೋಗ ಬಹುದು ಅಂದಾಗ ತಾಯಿ ಮಗಳು ಕಣ್ಣು ಮಿಟುಕಿಸುತ್ತ ನನ್ನತ್ತ ನೋಡಿ ನಕ್ಕಿದ್ದು ಮರೆಯುವಂತಿಲ್ಲ.

ಆಮೇಲೆ ತಿಳಿದ ವಿಚಾರವೆಂದರೆ ಈ ಡ್ರಗ್ ವ್ಯಸನಿಗಳನ್ನು ಕಾಯದೇ ಪ್ರಕಾರ ಲಾಕಪ್ ಮಾಡುವದು ಸುಲಭವಲ್ಲವಂತೆ. ಅದಕ್ಕೇ ಅವರಿಗೆ ಗೊತ್ತಾಗಲಾರದಂತೆ ಅವರ ಮೇಲೆ ಕಣ್ಣು ಇಟ್ಟು ಅವರ ಬೆನ್ನು ಹತ್ತಿ ಕೈಗೆ ಸಿಕ್ಕಾಗ ವಿಚಾರಸುತ್ತಾ ಕಾರಿನಲ್ಲಿ ಕದ್ದ ಮಾಲುಗಳು ಸಿಕ್ಕಾಗ ಕಳುವಿನ ಅಪರಾಧಕ್ಕಾಗಿ ಅವರನ್ನು ಜೇಲಿಗೆ ಕಳಿಸಿ ಕೆಲವು ವಾರ, ಅಥವಾ ತಿಂಗಳಾದರೂ ಸಮಾಜದಿಂದ ದೂರ ಇಡುವ ಗತ್ತು ಇದು, ಅಂತ. ನನ್ನ ದುರದೃಷ್ಟ ನಮ್ಮ ಮನೆಯ ಕಳ್ಳನನ್ನು ಹಿಂಬಾಲಿಸಿರಬಹುದಾದ ಪೋಲೀಸರಿಗೆ ಕಳುವಿನ ಮಾಲು ಆ ದಿನವೇ ಸಿಗಬೇಕೇ? ಅದನ್ನೇ ಆ ಡಿಟೆಕ್ಟಿವ್ ಹೇಳಿದ್ದು.

 ಹಿನ್ನುಡಿ:

ನಮ್ಮ ವಿಡಿಯೋ ಕ್ಲಬ್ಬಿನ ’’EDIT” ಎನ್ನುವ ನಿಯತಕಾಲಿಕ ಪತ್ರಿಕೆಗೆ ಲೇಖನವೊಂದನ್ನು ಬರೆದೆ: ‘When a copper (ಪೋಲೀಸ) didn’t deserve a Gold (ಮೆಡಲ್)!’ ಬೆರಳ ಗುರುತುಗಳ ಬಿಳಿ ಹುಡಿಯನ್ನು ಮೆತ್ತಿದ ಆ ಕ್ಯಾಮ್ ಕಾರ್ಡರ್ ನನಗೇ ವಾಪಸ್ ಬಂದು ಇನ್ನೆಷ್ಟೋ ದಿನಗಳ ವರೆಗೆ ನನ್ನ ಹತ್ತಿರ ಇತ್ತು. ಮೋಬೈಲ್ ಫೋನ್ ಕ್ಯಾಮರಾ ಬರುವ ವರೆಗೆ ಎರಡು ಮೂರು ಬೇರೆ ಬೇರೆ ವಿಡಿಯೋ ಕ್ಯಾಮರಾ ಬದಲಾಯಿಸಿದ್ದೆ.

ಈಗ ಮನೆಗೆ ಬರ್ಗ್ಲರ್ ಅಲಾರ್ಮ್ ಇದೆ. ನನ್ನ ಕಳೆದು ಹೋಗಿದ್ದ ಆ ಅಸ್ಪತ್ರೆಯ ಸ್ಮರಣಾರ್ಥಕ ಮೆಡಲ್ ಮನೆಯಲ್ಲೇ ಸಿಕ್ಕಿದೆ! ಮೂರನೆಯ ಸುತ್ತಿನ ಗೀತಾ ಅಧ್ಯಯನದಲ್ಲಿ ನಾನು ಇನ್ನೂ ಎರಡನೆಯ (ಸ್ಥಿತಪ್ರಜ್ಞನ) ಅಧ್ಯಾಯದ ಅಧ್ಯಯನದಲ್ಲೇ ಇದ್ದೇನೆ. ಇನ್ನು ಬರೀ ಎರಡು ಸಾವಿರ ಚಿಲ್ಲರೆ ಸಲ ಅಷ್ಟೇ ಉಳಿದಿದೆ!

ಶ್ರೀವತ್ಸ ದೇಸಾಯಿ

ಡೋಂಕಾಸ್ಟರ್

ದೃಶ್ಯ-ಕಾವ್ಯಗಳು- ಡಾ. ರಾಮ್ ಶರಣ್ ಮತ್ತು ಅನಿವಾಸಿಯ ಐವರು ಕವಿಗಳು

  • ಆಕರ್ಷಕ, ಅರ್ಥಪೂರ್ಣ ಮತ್ತು ಕಾವ್ಯಚಿತ್ರವೆನ್ನುವಂತಹ ದೃಶ್ಯಗಳನ್ನು ತಮ್ಮ ಕ್ಯಾಮರಾದಿಂದ ಸೆಳೆದು ಕಳಿಸಿದವರು ಅನಿವಾಸಿಯ  ಹವ್ಯಾಸಿ  ಛಾಯಾಚಿತ್ರಕಾರ ಡಾ. ರಾಮ್ ಶರಣ್. ಚಿತ್ರ ಚೌಕಟ್ಟಿನಲ್ಲಿ ಮೂಡಿಸಿದ  ಅವರ ದೃಶ್ಯಗಳನ್ನು ಪದ ರೂಪದಲ್ಲಿ ಕಾವ್ಯಗಳನ್ನಾಗಿಸಿದವರು ಅನಿವಾಸಿಯ ಐವರು ಪ್ರತಿಭಾವಂತ ಕವಿಗಳಾದ ಶ್ರೀನಿವಾಸ ಮಹೇಂದ್ರಕರ್, ವಿನತೆ ಶರ್ಮಾ. ಅಮಿತಾ ರವಿಕಿರಣ್, ವಿಜಯನರಸಿಂಹ ಮತ್ತು ಕೇಶವ ಕುಲಕರ್ಣಿ ಯವರು.

ಆಸಕ್ತಿಯ ವಿಚಾರ ಎಂದರೆ ಈ ದಿನದವರೆಗೆ ಯಾರು , ಯಾವ  ಚಿತ್ರಕ್ಕೆ ಏನು ಬರೆಯಬಹುದೆಂದು ರಾಮಶರಣರಿಗೆ ತಿಳಿದಿರಲಿಲ್ಲ. ಹಾಗೆಯೇ ಕವಿಗಳಿಗೆ  ಯಾರ ಚಿತ್ರಕ್ಕೆ ತಾವು ಬರೆಯುತ್ತಿದ್ದೇವೆಂದು  ತಿಳಿದಿರಲಿಲ್ಲ. ಒಂದೊಂದು ಚಿತ್ರವನ್ನು ಒಬ್ಬೊಬ್ಬರಿಗೆ ಕಳಿಸಿ 5-6 ಸಾಲುಗಳ  ಪುಟ್ಟ ಕವನಗಳನ್ನು ಮಾತ್ರವೇ ನಾನು ಅಪೇಕ್ಷಿಸಿದ್ದು. ಒಂದು ಚೌಕಟ್ಟಿನಲ್ಲಿ ಒಂದು ಚಿತ್ರವನ್ನೇನೋ ಹಿಡಿದಿಡಬಹುದು. ಆದರೆ ಅನಿವಾಸಿಯ ಕವಿಗಳ ಲಹರಿಗೆ ಚೌಕಟ್ಟು ಹಾಕಲಾದೀತೇ? ಎಲ್ಲರೂ ವಿಫುಲವಾಗೇ ಬರೆದು ಕಳಿಸಿ ಆಶ್ಚರ್ಯಗೊಳಿಸಿದ್ದಾರೆ. ಚಿತ್ರದ ಮೂಲ ಮತ್ತು ಮೂಲೆ ಮೂಲೆಯ ಪ್ರತಿ ವಿವರವನ್ನು ಕಾವ್ಯವಾಗಿಸಿದ್ದಾರೆ.

ಹಾಗಂತ ಚಿತ್ರಗಳ ಚಮತ್ಕಾರವೇನೂ ಕಡಿಮೆಯಿಲ್ಲ. ಉದಾಹರಣೆಗೆ ಒಂದು ಕವನದ ಚಿತ್ರ, ಸಂಧ್ಯಾ ಸಂದೇಶವೋ, ಉಷೆಯ ಉಗಮವೋ ಕವಿಯನ್ನು ಚಿಂತಿಸವಂತೆ ಮಾಡಿತು. ಚಿತ್ರಕಾರ ಕಳಿಸಿದ ಚಿತ್ರ -ಶೀರ್ಷಿಕೆಗಳು ಮತ್ತೆ ಕೆಲವು ಕವಿಗಳ ಕಲ್ಪನೆಯ ದಿಕ್ಕನ್ನು ಬದಲಿಸಿತು. ಮತ್ತೆ ಕೆಲವರು ಚಿತ್ರಗಳಿಗೆ ತಮ್ಮದೇ  ಹೆಸರಿಟ್ಟು ಕವನ ಬರೆದರು. ಮತ್ತೆ ಇನ್ನೊಬ್ಬರಲ್ಲಿ  ನೇರ ಚಿತ್ರದಲ್ಲಿನ ಒಳಚಿತ್ರ ತಲೆಕೆಳಗಾದ ಆಶ್ಚರ್ಯ ಮತ್ತೆಲ್ಲವನ್ನು ಮರೆಸಿ ಹಲವು ತರ್ಕಗಳನ್ನು ಮೂಡಿಸಿದರೆ,  ಮಗದೊಬ್ಬರು ಮನಸ್ಸು ಬಂದಷ್ಟು ಕನಸಿಸಿ ’ ಉದ್ದವಾಯ್ತೇ ’ ಎಂದು ಕೇಳಿಕೊಂಡರು! ಏನಾದರಾಗಲಿ  ಚಿತ್ರಗಳಲ್ಲಿನ ಬೆಳಕು ಮತ್ತು ಬಣ್ಣಗಳು ಕವಿಗಳ ಮನಸ್ಸಿನ ಅಳತೆಗೋಲು ಮತ್ತು ಕಲ್ಪನೆಗಳನ್ನು ಕದಲಿಸಿ ಚಲಿಸುವಂತೆ ಮಾಡಿರುವುದು ಮಾತ್ರ  ಖಂಡಿತ ನಿಜ.

ಪ್ರೀತಿಯಲ್ಲಿ ಮೈ ಮರೆತ ಪ್ರೇಮಿಗಳ ಸುತ್ತಲಲ್ಲಿ ಸ್ತಬ್ದವಾದ ಸಮಯ,ನಿರಂತರ ಹರಿವ ಸಮಯ ಸರಳುಗಳ ಹಿಂದೆ ಬಂಧಿಯಾದ ಭಾವ,  ಸಂಧ್ಯೆಯೋ-ಉಷೆಯೋ ಬಣ್ಣಗಳ ಓಕುಳಿ ಭೂಮ್ಯಾಕಾಶಗಳಿಗೆ ರಂಗೆರಚಿ ಬಿಡಿಸಿದ ಚಿತ್ತಾರ, ಸುಂದರ ರಮಣೀಯ ದೃಶ್ಯದಲ್ಲಿ ನಿರಂತರವಾಗುವ ತನುವಿನ ಧ್ಯಾನ,    ಮನುಜನ ಬೆರಳ ನಡುವಿನ ಮಾಯಕದ ಗೋಲ- ಸುಂದರವಾದ  ದೃಶ್ಯಗಳು ಮತ್ತು ಕಾವ್ಯಗಳು.

ಹಿಂದಿನ ಪ್ರಯತ್ನದಲ್ಲಿ ಒಬ್ಬ ಚಿತ್ರಕಾರ, ಒಬ್ಬ ಕವಿ ಮಾತ್ರ ಭಾಗವಹಿಸಿದ್ದರು. ಈ ವಾರದ ವಿಶೇಷದಲ್ಲಿ ಒಬ್ಬ ಚಿತ್ರಕಾರನ ಚಿತ್ರಗಳಿಗೆ ಬೇರೆ , ಬೇರೆ ಕವಿಗಳ ಭಾವಗಳು,ಕಲ್ಪನೆಗಳು ಸಾಕ್ಷಾತ್ಕಾರವಾಗಿ ಹೊಸ ಚಮತ್ಕಾರವನ್ನು ಮೂಡಿಸಿವೆ. ಪ್ರತಿಯೊಬ್ಬ ಕವಿಯದೂ ಅದೆಷ್ಟು ಭಿನ್ನವಾದ ದಾಟಿ ಎಂಬುದನ್ನು ತೋರಿಸಿದೆ.

ಚಿತ್ರಗಳನ್ನು ನೋಡಿ ನಿಮ್ಮ ಮನಸ್ಸಿನಲ್ಲಿಯೂ ಗುನುಗು ಮೂಡಿದರೆ, ಪ್ರಯತ್ನ ಪಟ್ಟವರ ಬೆನ್ನು ತಟ್ಟಬೇಕೆನ್ನಿಸಿದರೆ  ಖಂಡಿತ  ಕಮೆಂಟಿಸಿ.–ಡಾ. ಪ್ರೇಮಲತ ಬಿ

ಕಂಬಿಯ ಕಂಪನಗಳು ಬೆಳಕಿನೊಡನೆ ಸೆಣೆಸಿ
ಗೆದ್ದಿವೆ ನನ್ನ ಕರಣದೊಳಿಳಿದು
ನಾ ಗೆಲ್ಲಬಾರದೇಕೆ ನಿನ್ನ ಸ್ಪರ್ಶದ ಕಂಪನದಿ
ಗಂಟೆಯ ಮುಳ್ಳುಗಳ ತಡೆದು

ನಿರ್ಲಿಪ್ತ ಜಗತ್ತೊಂದು ನಮ್ಮ ಸುತ್ತಲೂ
ಹೆಣೆದುಕೊಳ್ಳಬಾರದೇ , ಈ ಕಾಲನ ಓಟವ
ಕಳಚಿಕೊಂಡು , ನಮ್ಮಿಬ್ಬರ ಬೆರಳುಗಳ
ಹೊಸೆದುಕೊಂಡು ,ಎಂದೆಂದಿಗೂ
ಮನಸುಗಳ ಬೆಸೆದುಕೊಂಡು

                                                                      ——–ಶ್ರೀನಿವಾಸ ಮಹೇಂದ್ರಕರ್

ಕಾಲವೆಂಬುದು…

ಬಂಧಿತ ಒಳಗಿನುಸಿರ ತಲ್ಲಣದ ನಿರ್ವಾತ

ಅಂಟಿರುವ ಖಾಲಿ ಗೋಡೆಗಂಜಿ ಗಡಿಯಾರ

ಬೇಡುವ ನಿರ್ಭೀತಿ, ಸಮಯದ ಚಲನದ

ಸ್ವತಂತ್ರ, ಅತಂತ್ರ ನಿರ್ಧಾರ ಕಿಟಕಿ ಸರಳಿನ

ಗೆರೆಗಳು ಬರೆವ ಪಥ ವಿದೃಶ.

ಹೊಸ ಗಾಳಿಯ ಯುಗಾದಿ ಗರಿಮೆ

ರಾತ್ರಿ ಮಿಣುಕು ಹುಳು ಕಾಲದ ಅಣುಕು

ಕತ್ತಲೆಯೇ ಅದರ ಬೆಳಕು ಬೇಕಿಲ್ಲದಕೆ

ನಮ್ಮ ನಿರ್ಧರಿತ ಸಾವು ಸೂಚಿಸುವ ಸಮಯ

ಬಂಧನವ ಬಿಸಾಡಿದ ಗೆರೆಯಿಲ್ಲದ ವಿದೃಶ ಪಥ.

ಮನಸ್ಸುಗಳ ಪಥಸಂಚಲನ ಮನುಜ ಗಣಕ

ಕೀಲಿಕೊಟ್ಟ ಮುಳ್ಳು ಜೀವಸ್ವರವಾದೀತೇ

ಸರಳುಗಳಾಚೀಚಿನ ಒಳಹೊರಗಿನ ಮರೆಮಾಚಿನ

ಪ್ರಪಂಚಗಳ ದೊಡ್ಡ ಕೈ, ಚಿಕ್ಕ ಕೈ ಬಿಚ್ಚಿಕೊಳ್ಳುವುದೇ

ಗೋಡೆ ಮೇಲಿನ ಗಡಿಯಾರ ಹೇಳುವ ವಿದೃಶ ಕಥೆ.

ಕಪ್ಪು ಬಿಳುಪು, ರಾತ್ರಿ ಹಗಲು ಪಾತ್ರಗಳು

ನಿಡುಸುಯ್ದು ಕ್ಯಾಕರಿಸಿದರೂ ಬತ್ತಲೊಲ್ಲದ ದೀಪ

ಜಗ್ಗಿದರೂ ತಲೆ ತಿರುಗುವುದು ಗಡಿಯಾರದೆಡೆಗೆ

ಪಥಸಂಚಲನದ  ವಿದೃಶ ಸೈನಿಕನಲ್ಲವಾದರೂ

ದೊಡ್ಡ ಚಿಕ್ಕ ಮುಳ್ಳು ಮಾರ್ಗದರ್ಶಿ.

                                               ———  ವಿನತೆ ಶರ್ಮ

ಹೀಗೊಂದು ಕನಸಿದೆ,
ಹಾಂ ಕನಸಷ್ಟೇ,!!
ಕೇಳುವೆಯ??

ಬೆಳಗು ಮೂಡುವ ಮುನ್ನ
ಇಬ್ಬನಿ ದಾರಿ ಇಬ್ಬಾಗಿಸಿ,
ನಾವಿಬ್ಬರು ನಡೆಯೋಣ
ಒಂದಷ್ಟು ದೂರ,

ಅದೋ ಗುಡ್ಡದ ತುದಿಯಲ್ಲಿ
ಸಣ್ಣ ಗುಡಿಸಲ ಕಟ್ಟೋಣ,
ನನಗೊಂದು ಒಲೆ ಒಟ್ಟಿಕೊಡು
ಹೊಳೆನೀರ ಚಹಾ ಮಾಡಿಕೊಡುವೆ,
ಅಲ್ಲೇ,
ಒಟ್ಟಿಗೆ ಕೂತು ಕುಡಿಯೋಣ,

ಎಳೆ ಬಿಸಿಲಿನಲ್ಲಿ ಚಳಿ ಕಾಯಿಸೋಣ,
ತಳಕಾಣುವ ಹೊಳೆ ,

ಅಲ್ಲಿ ತಳಕಾಡುವ ಕೆಂಬಣ್ಣದ ರಾಣಿಮೀನು,

ಬೆಳಕ ಗೆರೆಗೆ ಮಿರುಮಿರುಗಿ ಮಿನುಗಿ
ಅಲ್ಲೇ ಕಣ್ಣಾಮುಚ್ಚಾಲೆ ಆಡುವುದನ್ನ ನೋಡೋಣ,

ಬಾನು ನೀಲಿ ರಂಗಿನಲ್ಲಿ ರಂಗಾಗುವ ನಡುನಡುವೆ
ತಿಳಿನೀರ ಕನ್ನಡಿಯಲ್ಲಿ ಮುಖ ನೋಡಿ

ಮತ್ತೆ ಮತ್ತೆ ನಾಚಿ ಬಿಳುಚುವುದನ್ನ ,

ಹಸಿರುಟ್ಟ ಪೃಥೆಯ ಜೊತೆಗೆ ಕೂತು ನೋಡೋಣ,

ಹಸಿರ ಹುಲ್ಲಿನಲಿ ಪುಟಿಯುವ ಬಿಳಿ ತುಂಬೆಹೂವ ಕಿತ್ತು ಸಿಹಿ ಹೀರುತ್ತಾ,
ಕಾಡ ಹೂಗಳ ಘಮ ಬೆನ್ನಟ್ಟಿ ,ಬರಿಗಾಲಲ್ಲಿ ಕಾಡು ಅಲೆಯೋಣ,
ಗೋಧೂಳಿಯಹೊತ್ತು ಕೆಂಪಾಗಸದ ತಂಪಿನಲಿ
ಕೈ ಕೈ ಹಿಡಿದು ಮನೆಗೆ ಮರಳೋಣ,

ಗೊತ್ತು ನನಗೆ, ಆಗದ ಹೋಗದ ಕನಸುಗಳಿವು
ಎನ್ನುತ್ತಿ ನೀನು..
ದುಡ್ಡು ಕೊಡಬೇಕಿಲ್ಲ, ನನ್ನ ಕಲ್ಪನೆ,

ನನ್ನ ಚಿತ್ರ
ಕನಸೇ ತಾನೇ, ಕಟ್ಟುತ್ತೇನೆ ಬಿಡು, ಸಾವಿರ ಸಾವಿರ ಕನಸ
ನಿನಗೂ ಗೊತ್ತಿಲ್ಲದೆ, ನಿನ್ನ ಸುತ್ತ !!!!!

                                                                      ——–ಅಮಿತಾ ರವಿಕಿರಣ್

 ಸಂಧ್ಯಾ ಸಂದೇಶ

ಬೆಳಗೊಂದು ಬೆರಗು ಬೈಗೊಂದು ಬೆರಗು
ಎರಡರಲ್ಲೂ ಬಣ್ಣಗಳ ಮೆರುಗು
ಬಾನಂಗಳದಲ್ಲಿ ರಂಗಿನ ಚಿತ್ರ ಚಿತ್ತಾರ
ಮೂಡಣ- ಪಡುವಣಗಳ ಪುಣ್ಯವದೆಷ್ಟು ವಿಸ್ತಾರ?
ಚಂಚಲ ಚಿತ್ತಗಳನೊಮ್ಮೆಲೆ ಹಿಡಿದಿಡುವ ಚಮತ್ಕಾರ !
ಬಾನಲ್ಲಿ ನಿಜರೂಪ, ನೀರಮೇಲೆ ತದ್ರೂಪ
ಅಲ್ಲಿ ಸಂಧ್ಯೆಯಾಲಾಪ, ಇಲ್ಲಿ ಅಲೆಗಳ ಮೇಲೆ ಸಲ್ಲಾಪ

ವಿಜ್ಞಾನದ ಕನ್ನಡಕವ ತೆಗೆಯುತ್ತ
ಕವಿಯಾಗಿ ನೀ ತಳೆಯೆ ತದೇಕಚಿತ್ತ
ಮತ್ತೆ ಮತ್ತೆ ಸೆಳೆಯುವುದು ಅನಂತ ಕಾವ್ಯದತ್ತ

ಬದುಕಿನಾನಂದ ಇರುವುದು
ನೀ ಕಾಣುವ ಅನುಭವವದು
ತರ್ಕದ ವಿಜ್ಞಾನವದು ಸಲ್ಲದು
ಸಂಧ್ಯಾರಾಗದ ಸಂದೇಶವೇ ಇದು

                                                                  ——–ವಿಜಯನರಸಿಂಹ

ಮೇಲಾವುದು ಕೆಳಗಾವುದು?

ಇದೇ ಮೇಲು ಇದೇ ಕೆಳಗು
ಎನುವ ಹಠವೇಕೆ?

ಮೇಲಾದುದು ಕೆಳಗಾಗದು
ಎನುವ ಅಹಂಕಾರ ಬೇಕೆ?

ಮೇಲಾದುದು ಕೆಳಗಾಗುವುದು
ಎನುವ ವಿನಯ ಸಾಕೆ?

ಮೇಲು ಕೆಳಗಾಗಲೇ ಬೇಕು
ಎನುವ ದ್ಷೇಷ ಬೇಕೆ?

ಕೆಳಗು ಮೇಲಾಗಲೇ ಬೇಕು

ಎನುವ ಗುರಿ ಬೇಕೆ?

ಮೇಲು ಕೆಳಗಾಗದೇ
ಕೆಳಗು ಮೇಲಾಗುವುದು
ಸಾಧ್ಯವೇ ಇಲ್ಲವೇ?

                                                                                                                          —ಕೇಶವ ಕುಲಕರ್ಣಿ

                             (ಮುಂದಿನ ವಾರ-  ಯುವ ಎಂಜಿನಿಯರೊಬ್ಬನ ಕಥೆ)