ಇಂದಿನ ’’ಅನಿವಾಸಿ”ಯ ವಿಶೇಷಾಂಕದಲ್ಲಿ ನಾಳೆ ನೂರು ತುಂಬಲಿರುವ ’ಕ್ಯಾಪ್ಟನ್ ಟಾಮ್” ಎಂದೇ ಹೆಸರುವಾಸಿಯಾದ ಒಬ್ಬ ಯೋಧನ ಬಗ್ಗೆ ಡಾ ಮುರಳಿ ಹತ್ವಾರ್ ಅವರು ಬರೆದ ಲೇಖನವನ್ನು ಪ್ರಕಟಿಸುತ್ತಿದ್ದೇವೆ.
ವೈದ್ಯರಾದ ಮುರಳಿ ಹತ್ವಾರ್ ಅವರು”ಅನಿವಾಸಿ’ಗೆ ಚಿರಪರಿಚಿತ ಕವಿ-ಬರಹಗಾರರು. ಸದ್ಯ ಲಂಡನ್ನಿನ
ಮುರಳಿ ಹತ್ವಾರ್
ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದಾರೆ. ಕೋವಿಡ್ ಸೋಂಕಿದ ರೋಗಿಗಳ ಶುಶ್ರೂಷೆಗೆ ಸನ್ನದ್ಧರಾದ ಸಾವಿರಾರು ನ್ಯಾಷನಲ್ ಹೆಲ್ಥ್ ಸರ್ವಿಸ್ ಸೇವಕರಲ್ಲೊಬ್ಬರು. ಇಲ್ಲಿ ತಮ್ಮ ಕೋವಿಡ್ ಡೈರಿಯ ಪುಟವನ್ನೊಂದು ತೆರೆದಿಟ್ಟಿದ್ದಾರೆ. (ಸಂ)
ಜಿಮ್ಮರ್ ಫ್ರೇಮ್. ಮನೆಯ ಹಿಂದಿನ ಮೂವತ್ತಡಿ ಜಾಗ. ೯೯ ವರ್ಷಗಳು ತುಂಬಿ ಈ ಏಪ್ರಿಲ್ ೩೦ಕ್ಕೆ ನೂರಕ್ಕೆ ಕಾಲಿಡಲು ಕಾತರವಾಗಿರುವ, ಬೆನ್ನು ಬಾಗಿರುವ ಹಳೆಯ ದೇಹ. ಆದರೂ, ಕೊರೊನ ಮಾರಿಗೆ ಹೋರಾಡುತ್ತಿರುವ ಆರೋಗ್ಯ ಸೇವಕರಿಗೆ ಏನಾದರೂ ಮಾಡಬೇಕೆಂಬ ಉತ್ಸಾಹದ ಹಂಬಲ. ಹೊರಟೇಬಿಟ್ಟರು ತಮ್ಮ ಜಿಮ್ಮರ್ ಫ್ರೇಮ್ ಹಿಡಿದು ಮನೆಯ ಹಿಂದಿನ ಮೂವತ್ತಡಿಯ ಜಾಗದಲ್ಲಿ, ನೂರು ತುಂಬುವ ಮುನ್ನ ೧೦೦ ಲ್ಯಾಪ್ ನಡೆಯುವ ಛಲದಲ್ಲಿ ಕ್ಯಾಪ್ಟನ್ ಟಾಮ್: ಬೆಂಬಲಿಸುವ ಜನರಿಂದ ಒಂದು ಸಾವಿರ ಪೌಂಡ್ ಹಣ ಕೂಡಿಸಿ ಇಂಗ್ಲೆಂಡಿನ ಆರೋಗ್ಯ ಸೇವೆಯ ಒಂದು ಚಾರಿಟಿಗೆ ಕೊಡುವ ಹಿರಿಯ ಉದ್ದೇಶದಿಂದ.
ಕ್ಯಾಪ್ಟನ್ ಟಾಮ್ ಮೂರ್, ಸಿವಿಲ್ ಇಂಜಿನಿಯರ್ ತರಬೇತಿ ಪಡೆದು, ಎರಡನೇ ಮಹಾಯುದ್ಧದಲ್ಲಿ ಸೈನಿಕರಾಗಿ ಭಾರತ ಮತ್ತು ಬರ್ಮಾದಲ್ಲಿ ಕೆಲಸ ಮಾಡಿದ್ದ ಯೋಧ. ಈಗ ಕುಟುಂಬದೊಡನೆ ವಿಶ್ರಾಂತ ಜೀವನ. ವಯಸ್ಸಿನ ಭಾರಕ್ಕೆ ದೇಹ ಕುಸಿದಿದ್ದರೂ, ಮನಸ್ಸಿನಲ್ಲಿ ಕುಂದದ ಉತ್ಸಾಹ. ಏಪ್ರಿಲ್ ೮ಕ್ಕೆ ಶುರು ಮಾಡಿದರು ತಮ್ಮ ೧೦೦ ಲ್ಯಾಪಿನ ನಡಿಗೆ. ಪ್ರತಿ ದಿನ ಆದಷ್ಟು ಲ್ಯಾಪ್ ಮುಗಿಸಿ ಏಪ್ರಿಲ್ ೩೦ರ ಒಳಗೆ ಗುರಿ ಮುಟ್ಟುವ ಧ್ಯೇಯದಲ್ಲಿ. ಅವರು ೧೦೦೦ ಪೌಂಡ್ ದುಡ್ಡು ಒಟ್ಟು ಮಾಡಲು ಅವರ ಮೊಮ್ಮಕ್ಕಳ ಸಹಾಯದಿಂದ ವೆಬ್ಬಿನಲ್ಲಿ ಹಂಚಿಕೊಂಡಿದ್ದ ಸುದ್ದಿ, ಎಲ್ಲೆಡೆ ವೈರಲ್ಲಾಗಿ ಹಬ್ಬಿ ಒಂದೇ ದಿನಕ್ಕೆ £೭೦೦೦೦ ಸೇರಿದ್ದರಿಂದ, ಅವರು ಒಂದು ಮಿಲಿಯನ್ ಪೌಂಡಿನ ಹೊಸ ಗುರಿಯ ಗೆರೆ ಹಾಕಿದರು.
ಈ ಸಮಯಕ್ಕೆ ಲಂಡನ್ನಿನ ಹೆಚ್ಚಿನ ಆಸ್ಪತ್ರೆಗಳ ಹೆಚ್ಚಿನ ವಾರ್ಡ್ಗಳು ಕೊರೋನ ಪೀಡಿತರಿಂದ ತುಂಬಿಕೊಂಡಿದ್ದವು. ವೈದ್ಯರೂ, ನರ್ಸ್ಗಳೂ ಮುಖಕ್ಕೊಂದು ಮಾಸ್ಕು, ಮೈಮೇಲೊಂದು ಏಪ್ರಾನ್ ಹಾಕಿಕೊಂಡು, ಕೊರೋನಾದ ಆತಂಕವನ್ನ ಅವುಗಳಲ್ಲಿ ಮುಚ್ಚಿಟ್ಟು ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದರು. ಅಂತಹ ಒಂದು ವಾರ್ಡಿನ ಒಂದು ಬೆಡ್ಡಿನ ಮೇಲೆ ಮೂಗಿನಲ್ಲೊಂದು ಆಕ್ಸಿಜೆನ್ ನಳಿಗೆ ಇಟ್ಟುಕೊಂಡು ಮಲಗಿದ್ದು ೯೯ ವರ್ಷದ ಬೆಟ್ಟಿ. ಆಕೆಯದೂ ಧೀರ್ಘ ಜೀವನ. ಹಿಂದೆ ಏನು ಮಾಡಿದ್ದಳು ಎನ್ನುವ ವಿವರಗಳೆಲ್ಲ ಎಲ್ಲ ಆಕೆಯ ನೆನಪಿನ ಜೊತೆಗೆ ಕೆಲವು ವರ್ಷಗಳ ಹಿಂದೆ ಮರೆಯಾಗಿದ್ದವು. ಆಕೆಯನ್ನು ನೋಡಿಕೊಳ್ಳುತ್ತಿದ್ದ ಆಕೆಯ ತಂಗಿಯ ನೆನಪೂ ಸ್ವಲ್ಪ ಮಸುಕೇ. ಕರೋನ ಮುಟ್ಟುವವರೆಗೆ ಬೆಟ್ಟಿ ಜಿಮ್ಮರ್ ಫ್ರೇಮ್ ಹಿಡಿದು ಮನೆಯಲ್ಲಿ ಅಷ್ಟೋ-ಇಷ್ಟೋ ಓಡಾಡಿಕೊಂಡಿದ್ದಾಕೆ
ಆಸ್ಪತ್ರೆಯವರ ಆರೈಕೆಯಲ್ಲಿ ಬೆಟ್ಟಿ ಒಂದಷ್ಟು ಸುಧಾರಿಸಿದರೂ, ಮತ್ತೆ ಮೊದಲಿನ ಚೇತನ ಇರಲಿಲ್ಲ. ಮೂರನೆಯ ದಿನಕ್ಕೆ ಆಕ್ಸಿಜನ್ ನಳಿಗೆಯ ಸಹಾಯವೂ ಆಕೆಗೆ ಬೇಕಾಗಿರಲಿಲ್ಲ. ಆದರೂ ಬೆಡ್ಡಿನಿಂದ ಎದ್ದು ಕುಳಿತುಕೊಳ್ಳುವಷ್ಟು ಬಲ ಮತ್ತೆ ಬರಲಿಲ್ಲ. ಮತ್ತೆ ಒಂದೆರಡು ದಿನಕ್ಕೆ ಊಟ, ನೀರು ಸೇವಿಸುವದೂ ಕಡಿಮೆಯಾಯಿತು. ೯೯ ವರ್ಷಗಳ ಸುದೀರ್ಘ ಜೀವನದ ದೇಹವನ್ನ, ಟ್ಯೂಬುಗಳ ಸರಪಳಿಯಲ್ಲಿ ದಂಡಿಸುವದು ಉಚಿತವಲ್ಲ ಎನ್ನುವ ನಿರ್ಧಾರಕ್ಕೆ ಆಕೆಯ ಆರೈಕೆ ಮಾಡುತ್ತಿದ್ದ ವೈದ್ಯರ, ನರ್ಸ್ಗಳ ತಂಡ ಒಮ್ಮತದ ತೀರ್ಮಾನಕ್ಕೆ ಬಂದು, ಕೊನೆಯ ದಿನಗಳ ಕರುಣೆಯ ಆರೈಕೆಗೆಂದು ಕರುಣಾಶ್ರಯ (ಹಾಸ್ಪಿಸ್) ಒಂದಕ್ಕೆ ಕಳಿಸಿ ಕೊಟ್ಟರು. ೯೯ ವರ್ಷದ ಧೀರ್ಘ ಯಾನದ ಬೆಟ್ಟಿಯ ಜೀವನ ಕೊರೋನಾದ ದೆಸೆಯಿಂದ ನೂರರ ಬಾಗಿಲು ಮುಟ್ಟುವ ಮುನ್ನವೇ ಕೊನೆಯಾಗಲಿದೆ.
ಆದರೆ, ಬೆಟ್ಟಿಯಂತೆ ಸಾವಿರಾರು ಕೊರೋನ ರೋಗಿಗಳಿಗೆ ಆರೈಕೆ ನೀಡುತ್ತಿರುವವರಿಗೆ ಬೆಂಬಲ ನೀಡಲು, ನೂರು ಲ್ಯಾಪ್ಗಳ ಮುಗಿಸುವ ಕ್ಯಾಪ್ಟನ್ ಟಾಮ್ ತಮ್ಮ ಯತ್ನದಲ್ಲಿ ಯಾವುದೇ ತಡೆಯಿಲ್ಲದೆ ಮುಂದುವರಿದಿದ್ದರು. ಅವರ ಹೆಸರು ಮತ್ತು ಪ್ರಯತ್ನ ಇಷ್ಟರಲ್ಲಿ ಜಗತ್ತನ್ನೆಲ್ಲ ಸುತ್ತಿತ್ತು. ಅವರ ಒಂದು ಮಿಲಿಯನ್ ಪೌಂಡಿನ ಗುರಿ ಮೀರಿ ದಾನಿಗಳ ಹಣದ ಗುಡ್ಡ ಬೆಳೆದಿತ್ತು. ಆ ಲೇಖನ ಬರೆಯುವ ಹೊತ್ತಿಗೆ ಅದು 29 ಮಿಲಿಯನ್ ಪೌಂಡ್ ದಾಟಿದೆ.
ಕ್ಯಾಪ್ಟನ್ ಟಾಮ್ ತಮ್ಮ ೧೦೦ ಲ್ಯಾಪ್ ಗಳನ್ನ ಯಶಸ್ವಿಯಾಗಿ ಏಪ್ರಿಲ್ ೧೬ಕ್ಕೆ ಮುಗಿಸಿದ್ದಾರೆ. ತಮಗೆ ಸಿಕ್ಕ ಹೊಸ ಪ್ರಚಾರದಲ್ಲಿ ಸ್ನೇಹ, ಸಹಾಯದ ಜೀವನ ನಡೆಸಿ ಎನ್ನುವ ಅನುಭವದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವೈದ್ಯರು, ನರ್ಸ್ಗಳು ಕೊರೋನ ವಿರುದ್ಧ ಹೋರಾಡುತ್ತಿರುವ ಸೈನಿಕರು ಎಂದು ಹುರಿದುಂಬಿಸುತ್ತಿದ್ದಾರೆ. ಅದಲ್ಲದೆ, ಕೊರೋನ ಯಾವತ್ತೂ ಇರುವ ಮಾರಿಯಲ್ಲ. ಹೋರಾಡಿ, ಜಯಿಸಿ ಬರುವ ಹೊಸ ನಾಳೆಗಳತ್ತ ಮುಖ ಮಾಡೋಣ ಎನ್ನುವ ಗುಣಾತ್ಮಕ ಸಂದೇಶದಲ್ಲಿ, ಎಲ್ಲರಲ್ಲಿ ಆಶಾವಾದದ ಉತ್ಸಾಹವನ್ನು ತುಂಬುತ್ತಿದ್ದಾರೆ.
No 1 Chart topper
ಅವರನ್ನು ಸೇರಿಸಿಕೊಂಡು ಮೈಕೆಲ್ ಬಾಲ್ ಎನ್ನುವ ಹಾಡುಗಾರ ಹಾಡಿದ ‘ಯೂ ವಿಲ್ ನಾಟ್ ವಾಕ್ ಅಲೋನ್’ ಹಾಡು ಈ ವಾರ ಯುಕೆಯ ಚಾರ್ಟ್ ಗಳಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಅವರ ಅದ್ಭುತ ಯಶಸ್ಸಿನ ಒಳಿತನದ ಕಾರ್ಯಕ್ಕೆ ನೈಟ್ ಹುಡ್ ಯಾಕೆ ಕೊಡಬಾರದು ಎಂದು ಹೆಚ್ಚಿನ ಜನ ಒತ್ತಾಯ ಮಾಡುತ್ತಿದ್ದಾರೆ; ಸಿಕ್ಕರೆ ಸಾಮಾನ್ಯರೊಬ್ಬರ ಅಸಾಧಾರಣ ಸಾಧನೆಗೆ ಮತ್ತು ಒಳ್ಳೆಯ ಕೆಲಸಕ್ಕೆ ಕೈಗೂಡಿಸುವ ಜನರನ್ನು ಸನ್ಮಾನಿಸಿದ ಹಾಗೆ.
ಇನ್ನೇನು ನೂರರ ಗೆರೆ ದಾಟಲಿರುವ ನಮ್ಮ ಈ ಹೊಸ ಹೀರೋ ಕ್ಯಾಪ್ಟನ್ ಟಾಮ್, ಇನ್ನೆನ್ನೆಂದಿಗೂ ಇತಿಹಾಸದ ನೆನಪಿನ ಮೈದಾನದಲ್ಲಿ ನಾಟ್ ಔಟೇ!