‘ಸಂಕಟ ಬಂದಾಗ ವೆಂಕಟರಮಣ’

ಸಂಕಟ ಬಂದಾಗ ವೆಂಕಟರಮಣ ಎಂಬುದು ಕನ್ನಡದಲ್ಲಿ ಬಹಳೇ ಪ್ರಚಲಿತ ಇರುವ ಗಾದೆ . ನಮ್ಮ ಪೂರ್ವಜರು ಬಹಳ
ಅನುಭವದಿಂದ ಹೇಳಿರುವ ಮಾತು . ನನಗೂ ಸಹ ಯಾಕೋ ಇದರ ಮೇಲೆ ಸ್ವಲ್ಪ ಹರಟೆ ಹೊಡೆಯಬೇಕು ಎಂದು ಅನಿಸಿತು .
ಹರಟೆ ಎಂದ ತಕ್ಷಣ ನಮ್ಮೂರಿನ ಆಲದ ಮರದ ಹರಟೆಯ ಕಟ್ಟೆಯ ನೆನಪು ಬರುತ್ತದೆ . ಸಂಜೆಯಾದರೆ ಊರ ಜನರು ಸೇರಿ
ಹರಟೆ ಹೊಡೆಯುತ್ತಿದ್ದ ಆ ಕಟ್ಟೆ ಇನ್ನೂ ಇದೆ , ಆದರೆ ಈಗ ಹರಟೆ ಹೊಡೆಯುವರಿಲ್ಲ ಬದಲು ಫೋನು ಹಿಡಿದುಕೊಂಡು
ವಿಡಿಯೋ ನೋಡುವ ಪಡ್ಡೆ ಹುಡುಗರು ಇದ್ದಾರೆ . ನಾನೂ ಇಲ್ಲಿ ಕುಳಿತು ಒಂದು ಕಟ್ಟೆ ನೋಡುತ್ತಿದ್ದೆ , ಹರಟೆ ಹೊಡೆಯಲು .
ಅನಿವಾಸಿ ಕಟ್ಟೆ ಸಿಕ್ಕಿತು . ಒಬ್ಬನೇ ಕುಳಿತು ಹರಟೆ ಹೊಡೆದಿದ್ದೇನೆ. ಸಮಯ ಸಿಕ್ಕರೆ ಓದಿ , ಹಾಗೆಯೆ ಒಂದೆರಡು ಸಾಲು
ಅನಿಸಿಕೆಗಳನ್ನು ದಯವಿಟ್ಟು ಗೀಚಿ .


ಸಂಕಟ ಬಂದಾಗ ಸಹಾಯಕ್ಕೆ ಮೊರೆಹೋಗುವುದು ಎಲ್ಲ ಜೀವಿಗಳ ಸಹಜವಾದ ಸ್ವಭಾವ . ಭೂಮಂಡಲದಲ್ಲಿ ತಾನೇ
ಶ್ರೇಷ್ಠನೆಂದು ಬೀಗುವ ಮನುಜ ಇದಕ್ಕೇನು ಹೊರತಾಗಿಲ್ಲ . ಸಂಕಟ ಬಂದಾಗ ಅಥವಾ ಬರಿಸಿಕೊಂಡಾಗ ಹತ್ತು ಹಲವಾರು
ಮಾರ್ಗಗಳ ಅನ್ವೇಷಣೆಯಲ್ಲಿ ತೊಡಗುತ್ತಾನೆ . ಅಡ್ಡದಾರಿ ಹುಡುಕುವದು , ಮೋಸ ಮಾಡುವದು , ಇನ್ನೊಬ್ಬರಿಗೆ
ಅನ್ಯಾಯವೆಸಗುವದು , ಲಂಚ ಕೊಡುವದು ಇವೆಲ್ಲವೂ ಫಲ ನೀಡದಿದ್ದಾಗ ಕೊನೆಯ ಪ್ರಯತ್ನವಾಗಿ ದೇವರಿಗೆ ಮೊರೆ
ಹೋಗುವದು ಸಾಮಾನ್ಯ . ಎಷ್ಟೋ ಜನರಿಗೆ ನಿತ್ಯ ಜೀವನದಲ್ಲಿ ಲಂಚವನ್ನು ಕೊಟ್ಟು, ಪಡೆದು ಅಸಾಧ್ಯವಾದ ಕೆಲಸಗಳನ್ನು
ಸರಾಗವಾಗಿ ಗಿಟ್ಟಿಸಿಕೊಂಡು , ಬಂದ ಸಂಕಟವನ್ನು ಹಾಗೆಯೆ ಪರಿಹರಿಸಿಕೊಂಡ ಅಭ್ಯಾಸ .

ಸಂಕಟದ ಪರಿಸ್ಥಿತಿ ಬಂದಾಗ , ತಮ್ಮ ಮನಸಿನಂತೆ ದೇವರ ಮನಸೂ ಇರಬಹುದೆಂದು ಊಹಿಸಿ , ದೇವರಿಗೂ ಸಹ
ಲಂಚಕೊಡಲು ಮುಂದಾದ ಮಹಾಶಯರಿಗೆ ಏನೂ ಕೊರತೆಯಿಲ್ಲ . ಲಂಚ ಕೊಡುವ ರೀತಿ ಮಾತ್ರ ವಿಭಿನ್ನವಾಗಿರಬಹುದು .
ಇತ್ತೀಚಿಗೆ ನಮ್ಮ ಹಳ್ಳಿಯಲ್ಲಿ ನಡೆದ ಪಂಚಾಯತ ಸದಸ್ಯರ ಚುನಾವಣೆಗೆ ಬಸಪ್ಪ ಶೆಟ್ಟಿ ಸ್ಪರ್ಧಿಸಿದ್ದ . ಅಂಗಡಿಯ ವ್ಯವಹಾರ
ಚನ್ನಾಗಿದ್ದಿದ್ದರಿಂದ ಒಳ್ಳೆಯ ಹಣವನ್ನು ಸಂಪಾದಿಸಿದ್ದ . ಅದೆಷ್ಟೇ ಹಣ ಖರ್ಚಾದರೂ ಚುನಾವಣೆಯನ್ನು ಗೆಲ್ಲಲೇ ಬೇಕೆಂದು
ಶಪಥಪಟ್ಟಿದ್ದ . ಮೊದಲಿನಿಂದಲೂ ದಾಯಾದಿಯಾಗಿದ್ದ ಎದುರು ಮನೆಯ ನಂಜಪ್ಪನಿಗೆ ವಿಷಯ ಗೊತ್ತಾಗಿ ಹೊಟ್ಟೆಯಲ್ಲಿ ಕಸಿವಿಸಿ ಉಂಟಾಗಿ ನಿದ್ರೆಬಾರದಾಗಿತ್ತು. ಹೇಗಾದರೂ ಮಾಡಿ ಶೆಟ್ಟಿಯನ್ನು ಸೋಲಿಸಲೇ ಬೇಕೆಂದು ತಂತ್ರವನ್ನು ಹೂಡತೊಡಗಿದ್ದ .ಆದರೆ ಶೆಟ್ಟಿಯಲ್ಲಿದ್ದಷ್ಟು ಹಣವೂ ಇರಲಿಲ್ಲ ಜನಬಲವೂ ಇರಲಿಲ್ಲ . ಹಗಲೂ ರಾತ್ರಿ ಕೊರಗುತ್ತಿದ್ದ ಅವನಿಗೆ ಕೊನೆಗೊಂದು ದಿನ ಸರಳ ಉಪಾಯ ಹೊಳೆಯಿತು . ತಿರುಪತಿ ತಿಮ್ಮಪ್ಪನಿಗೆ ಮೊರೆ ಹೋದ . ಶೆಟ್ಟಿಯನ್ನು ಚುನಾವಣೆಯಲ್ಲಿ ಸೋಲಿಸಿದರೆ ತಿಮ್ಮಪ್ಪನ
ಹುಂಡಿಗೆ ೫೦೦೧ ರೂಪಾಯಿ ಹಾಕುವದಾಗಿ ಹರಕೆ ಹೊತ್ತ . ವಿಷಯ ಶೆಟ್ಟಿಗೆ ಗೊತ್ತಾಗಿ ಅವನಿಗೂ ಕಸಿವಿಸಿಯಾಗತೊಡಗಿತು .
ಊರ ಜನರಿಗೆ ತಾನು ಎಷ್ಟೊಂದು ಹಣವನ್ನು ಖರ್ಚು ಮಾಡಿದರೂ ತಿಮ್ಮಪ್ಪನ ಕರುಣೆ ನಂಜಪ್ಪನಿಗೆ ಗಿಟ್ಟಿಬಿಟ್ಟರೆ ಏನು ಗತಿ ?
ಎಂದು ದಿನವಿಡೀ ತವಕಾಡತೊಡಗಿದ . ಯಾವುದಕ್ಕೂ ಸ್ವಲ್ಪನೂ ಅಪಾಯವನ್ನು ತೆಗೆದುಕೊಳ್ಳಬಾರದು ಎಂದು ಅವನ
ಸ್ನೇಹಿತರೆಲ್ಲ ಹೇಳತೊಡಗಿದ್ದರು . ನಿದ್ರೆಬಾರದ ರಾತ್ರಿಯಲ್ಲಿ ಒಂದು ನಿರ್ಧಾರ ತೆಗೆದೇಕೊಂಡ . ನಂಜಪ್ಪನಿಗಿಂತ ಎರಡು ಪಟ್ಟು
ಹಣವನ್ನು ಹುಂಡಿಗೆ ಹಾಕುವದಾಗಿ ತಾನೂ ಸಹ ತಿಮ್ಮಪ್ಪನಿಗೊಂದು ಹರಕೆ ಹೊತ್ತೇಬಿಟ್ಟ . ಈಗ ನೀವೇ ಹೇಳಿ ತಿಮ್ಮಪ್ಪ ಏನು
ಮಾಡಬೇಕೆಂದು ? ತಾವೇ ಬರಿಸಿಕೊಂಡ ಇವರ ಸಂಕಟವನ್ನು ಅವನು ಹೇಗೆ ಬಗೆಹರಿಸಬೇಕೆಂದು ? . ಇವರಿಬ್ಬರು ತಮ್ಮ
ವಯಕ್ತಿಕ ಕಿತ್ತಾಟದಲ್ಲಿ ತಿಮ್ಮಪ್ಪನನ್ನು ಇಕ್ಕಟ್ಟಿಗೆ ಸಿಕ್ಕಿಸಿಹಾಕಿದ್ದು ಮಾತ್ರ ನಿಜ .ಎಲ್ಲ ಕಡೆಯಲ್ಲೂ ಇಂಥ ಮಹಾಶಯರಿಗೇನು
ಕೊರತೆಯಿಲ್ಲ ಹಾಗೆಯೆ ದೇವರನಿಗೂ ಸಂಕಟ ತಪ್ಪಿದ್ದಲ್ಲ .
ಹಣವಿದ್ದವರು ದೇವರಿಗೆ ಈ ರೀತಿಯ ಹಣದಾಸೆ ತೋರಿಸಿದರೆ ಇನ್ನು ಹಣವಿಲ್ಲದವರು ಏನು ಮಾಡಬೇಕು ? ಹಾಗೇನೆಂದುಕೊಳ್ಳಬೇಡಿ ! ಏನೂ ಇಲ್ಲದಿದ್ದರೂ ಏನೋ ಒಂದು ವಿಚಾರಿಸಿ ಕೊನೆಗೊಂದು ಮಾರ್ಗವನ್ನು ಕಂಡುಕೊಳ್ಳುವವರಿಗೇನು ಕೊರತೆಯಿಲ್ಲ.

ನಮ್ಮ ‘ಕೆ ಎಂ ಸಿ’ ಯ ಕಾಲೇಜಿನ ಅವರಣದಲ್ಲೊಂದು ಹನುಮಪ್ಪನ ಮಂದಿರವಿತ್ತು . ಪ್ರತಿ ಶನಿವಾರ ಸಾಯಂಕಾಲ ತಪ್ಪದೆ ಕೆಲವು ಹುಡುಗರು ಮತ್ತು ಹುಡುಗಿಯರು ಹನುಮಪ್ಪನನ್ನು ಭಕ್ತಿಯಿಂದ ಪ್ರದಕ್ಷಿಣೆ ಹಾಕುತ್ತಿದ್ದರು . ಅವರು ನಿಜವಾದ ಭಕ್ತರು ಎಂಬುದರಲ್ಲಿ ಸಂಶಯವಿಲ್ಲ . ಆದರೆ ವಾರ್ಷಿಕ ಪರೀಕ್ಷೆಗಳು ಹತ್ತಿರ
ಬರುತ್ತಿದ್ದಂತೆ ಹನುಮಪ್ಪನ ಭಕ್ತರ (?) ಸಂಖ್ಯೆ ತ್ರಿಗುಣಗೊಳ್ಳುತ್ತಿತ್ತು . ಇನ್ನು ಕೆಲವರು ತಾಸುಗಂಟಲೇ ಸಂಚರಿಸಿ ದೂರದಲ್ಲಿದ್ದ ರಾಯರ ಮಂಟಪಕ್ಕೆ ದರ್ಶನಕೊಡುತ್ತಿದ್ದರು . ನಿಜವಾದ ಭಕ್ತರಿಗೆ ಯಾವಾಗಲು ಭಕ್ತಿಯ ಭಾವ ಇದ್ದಿದ್ದು ಬೇರೆ ಸಂಗತಿ ಆದರೆ ,
ವರ್ಷವಿಡೀ ಮಜಾ ಮಾಡಿ , ಸರಿಯಾಗಿ ಓದದೆ , ಕೊನೆಯಲ್ಲಿ ಪರೀಕ್ಷೆಯ ಬಿಸಿ ತಟ್ಟಿದ್ದಾಗ ದೇವರನ್ನು ಪ್ರದಕ್ಷಣೆ ಹಾಕುತ್ತಿದ್ದ
ಇವರಿಗೆ ಏನೆನ್ನಬೇಕು ? ( ಅವರಲ್ಲಿ ನಾನೂ ಒಬ್ಬ ಎಂಬುದು ಬೇರೆ ವಿಷಯ!).
ಇನ್ನು ಪಾಪ , ಹನುಮಪ್ಪ ಏನು ಮಾಡಬೇಕು ಹೇಳಿ ? . ಖಂಡಿತ ಅವನೂ ಸಹ ಗೊಂದಲದಲ್ಲಿ ಬಿದ್ದಿರಬಹುದು . ಈ
ಅವಕಾಶವಾದಿ ‘ ಮೊಸಳೆ ಕಣ್ಣೀರಿನ ‘ ಪ್ರದಕ್ಷಣೆಗಾರರಿಗೆ ಸಹಾಯಮಾಡಬೇಕೆ ? ಅಥವಾ ವರ್ಷವಿಡೀ ಓದಿದ ಶ್ರಮಜೀವಿಗಳಿಗೆ
ಅಸ್ತು ಅನ್ನಬೇಕೆ ?. ಇವರೆಲ್ಲಾ ತಮ್ಮ ನಡುವಳಿಕೆಯಿಂದ , ಸಂಕಟವನ್ನು ತಾವೇ ಬರಿಸಿಕೊಂಡು , ಕೊನೆಯ ಗಳಿಗೆಯಲ್ಲಿ
ಹನುಮಪ್ಪನ ಮೊರೆ ಹೋಗಿ , ಅವನಿಗೂ ಸಂಕಟ ತಂದೊದಗಿದ್ದು ಸುಳ್ಳೇನಲ್ಲ . ತಾಸುಗಂಟಲೆಯ ಸಮಯವನ್ನು ಪ್ರದಕ್ಷಣೆಗಾಗಿ
ಕಳೆಯುವದಕ್ಕಿಂತ , ಅವನನ್ನು ಮನದಲ್ಲೇ ನೆನೆದು , ಅದೇ ಸಮಯವನ್ನು ಓದಿಗಾಗಿ ಉಪಯೋಗಿಸಿದ್ದಿದ್ದರೆ ಹನುಮಪ್ಪ
ಪ್ರಸನ್ನವಾಗಿರುತ್ತಿದ್ದಿದ್ದು ಮಾತ್ರ ಸತ್ಯ .

ಇಂಥವರದೊಂದು ಕಥೆಯಾದರೆ ಬೇರೆಯವರದು ಇನ್ನೊಂದು ಕಥೆ . ನಮ್ಮ ಪಕ್ಕದ ಮನೆಯ ಗೌರಕ್ಕನಿಗೆ ಒಳ್ಳೆಯ ಗಂಡ
ಸಿಕ್ಕು ಅದ್ದೂರಿಯಿಂದ ಮದುವೆ ಆಗಿ ಹೋಯಿತು . ಗೌರಕ್ಕ ನಮ್ಮ ಅಕ್ಕನಿಗಿಂತ ಒಂದು ವರ್ಷ ದೊಡ್ಡವಳು .ಪೂಜೆ ಪುರಸ್ಕಾರ
ಮತ್ತು ಉಪವಾಸಗಳಲ್ಲಿ ತುಂಬಾ ಆಸಕ್ತಿ . ಅವಳ ಭಕ್ತಿಗೆ ಮೆಚ್ಚಿ ದೇವರು ಒಳ್ಳೆಯ ಗಂಡನನ್ನು ದಯಪಾಲಿಸಿದನೆಂಬುವದು ಊರ
ಜನರ ನಂಬಿಕೆ. ಇದನ್ನು ಕಂಡು ನಮ್ಮಕ್ಕನಿಗೆ ಏನಾಯಿತೋ ಕಾಣೆ ( ಬಹುಶಃ, ಮನದಲ್ಲಿ ಸಂಕಟ ಆರಂಭವಾಗಿರಬಹುದು ) .

ಅವಳ ಹಾಗೆ ತನಗೂ ಸಹ ಒಳ್ಳೆಯ ಗಂಡನು ಸಿಗಲೆಂದು ಒಮ್ಮಿಂದೊಮ್ಮಲೆ ಸೋಮಪ್ಪನ ಭಕ್ತೆಯಾಗಿ ಬಿಟ್ಟಳು .ಪ್ರತಿ ಸೋಮವಾರ ಬೆಳಿಗ್ಗೆ ಮನೆಯಲ್ಲಿ ತಾಸುಗಂಟಲೇ ಪೂಜೆ ಪುರಸ್ಕಾರ ನಡೆಯತೊಡಗಿತು . ಬರಿ ಪೂಜೆ ಮಾಡಿದರೆ ಸಾಕಾಗಿತ್ತೇನೋ ಅದರ ಜೊತೆಗೆ ”ಉಪವಾಸವನ್ನು” ಕೂಡ ಸುರು ಹಚ್ಚಿಕೊಂಡಿದ್ದಳು . ಉಪವಾಸ ಎಂದ ಕ್ಷಣ ಸ್ವಲ್ಪ ಹೆಚ್ಚಿಗೇನೇ ಹೇಳಬೇಕೆನಿಸುತ್ತಿದೆ .
ಉಪವಾಸ ಮಾಡುವವರಲ್ಲಿ ಬೇರೆ ಬೇರೆ ವರ್ಗಗಳಿವೆ . ಉಪವಾಸವೆಂದರೆ ಕೆಲವರು ಆಹಾರ ಬಿಡಿ ! ನೀರನ್ನೂ ಸಹ
ಮುಟ್ಟುವದಿಲ್ಲ . ಕೆಲವರಿಗೆ ಉಪವಾಸವೆಂದರೆ ಲಘು ಆಹಾರ ಸೇವನೆ . ಇನ್ನು ಕೆಲವರು ಊಟಕ್ಕಿಂತಲೂ ಹೆಚ್ಚು ಉಪಹಾರ
ತಿಂದು , ಉಪವಾಸವಿದ್ದೆ ಎಂದು ಸಂತೋಷಪಡುವದುಂಟು . ನಮ್ಮ ಅಕ್ಕಳು ಸಹ ಈ ಕೊನೆಯ ಗುಂಪಿಗೆ ಸೇರಿದವಳು .ಅವಳ
ಉಪವಾಸ ಬೆಳಿಗ್ಗೆ ಎಂಟು ಘಂಟೆಗೆ ಪಾವ್ ಕಿಲೋ ನೆನೆಸಿದ ಅವಲಕ್ಕಿಯನ್ನು ತಿಂದು ಪ್ರಾರಂಭವಾಗುತ್ತಿತ್ತು . ಮಧ್ಯಾಹ್ನ
ಕೇವಲ ? ನಾಲ್ಕೈದು ಬಾಳೆ ಹಣ್ಣು , ಒಂದು ಹಿಡಿ ಖರ್ಜುರು ಮತ್ತು ಒಂದು ದೊಡ್ಡ ಗ್ಲಾಸು ಹಾಲು , ಮತ್ತೆ ಸುಮಾರು ಇಳಿಹೊತ್ತಿಗೆ
ಇನ್ನೆರಡು ಬೇರೆ ತರಹದ ಹಣ್ಣುಗಳು . ಪಾಪ !! ಹೆಸರಿಗೆ ಊಟ ಮಾತ್ರ ಇರಲಿಲ್ಲ . ಅವಳಿಗೆ ಸಿಗುತ್ತಿದ್ದ ಈ ವಿಶೇಷ ಸೇವನೆಗಳನ್ನು ನೋಡಿ ನನಗೂ ಆ ಸಣ್ಣ
ವಯಸಿನಲ್ಲಿ ಉಪವಾಸ ಮಾಡಬೇಕೆಂದಿನಿಸಿತ್ತು . ಅವಳ ಉಪವಾಸದ ಫಲವಾಗಿ ಮೈತೂಕ ಹೆಚ್ಚಾಗಿತ್ತೆ ವಿನಃ
ಕಡಿಮೆಯಾಗಿರಲಿಲ್ಲ . ಪಾಪ !! ಇಂಥ ಭಕ್ತರಿಗೆ ದೇವರು ಹೇಗೆ ಸಹಾಯಮಾಡಬೇಕು ? . ಮೈತೂಕ ಇಳಿಸಲು ಕೋರಿ ಇವಳು
ಇನ್ನೊಂದು ಪೂಜೆಯ ಮೊರೆ ಹೋದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಿರಬಹುದು ಸೋಮಪ್ಪ . ಹಾಗು ಹೀಗೂ
ನಮ್ಮಕ್ಕನಿಗೆ ಒಳ್ಳೆಯ ಗಂಡ ಸಿಕ್ಕಿದ್ದ ನಿಜ ಆದರೆ ಅವಳ ಉಪವಾಸದಿಂದ ಅಲ್ಲ ಎಂಬುವುದು ನನ್ನ ನಂಬಿಕೆ .

ಕಳೆದ ವರುಷ ನಮ್ಮ ಹಳ್ಳಿಗೆ ಹೋಗಿದ್ದೆ. ವಿಪರೀತ ಮಳೆ . ನಾನು ಬಂದಿರುವ ವಿಷಯ ತಿಳಿದು ನನ್ನ ‘ ಚಡ್ಡಿ ದೋಸ್ತ ‘ ಕಲ್ಲೇಶಿ
ನನ್ನನ್ನು ಭೇಟಿಯಾಗಲು ಬಂದಿದ್ದ . ಹಳೆಯ ಗೆಳೆತನ ತಾನೆ ? ಸಲುಗೆಯಿಂದ ಮಾತು ಪ್ರಾರಂಭಿಸಿದ್ದೆ . “ಏನ್ ಕಲ್ಲ್ಯಾ ಹ್ಯಾಂಗ್
ಆದಿ ” ಅಂತ ಅಂದಿದ್ದೆ ಸಾಕು , ತನ್ನ ಗೋಳನ್ನು ಸುರು ಮಾಡಿಕೊಂಡುಬಿಡುವುದೆ ?. ” ಏನ್ ಹೇಳುದು ಬಿಡಪ್ಪಾ ಎರಡ
ವರ್ಷದಿಂದ ಬರೇ ಮಳಿ ಹತ್ತಿ , ಬೆಳಿಯೆಲ್ಲ ಹಾಳಾಗಿ ಹೋಗಿ , ಸಾಲಾ ಜಾಸ್ತಿ ಆಗಿ ಬಿಟ್ಟೈತಿ ಅದಕ್ಕ ಈ ಸಾರಿ ಒಂದ್ ಉಪಾಯ
ಮಾಡೀನಿ ” . ನಾನು ಅಂದುಕೊಂಡೆ, ಏನಾದರು ನನ್ನ ಹತ್ತಿರ ಹಣದ ಸಹಾಯ ಕೇಳಲು ಬಂದಿರಬಹುದೆಂದು . “ಅದೇನು
ಉಪಾಯಪ್ಪ ” ಎಂದೆ , ” ಊರ ದೇವಿ ದ್ಯಾಮವ್ವ ಬಾಳ ಸಿಟ್ಟ ಮಾಡಿಕೊಂಡಂಗೈತಿ ಅದಕ್ಕ ಇಷ್ಟೊಂದ್ ಸಂಕಟ , ಅದಕ್ಕ
ಇನ್ನಷ್ಟ್ ಸಾಲ ಅದರೂ ಸರಿ ಈ ಸರಿ ಜಾತ್ರಿಗೆ ಒಂದು ಕುರಿ ಕೊಯ್ಯಬೇಕಂತ ವಿಚಾರ ಮಾಡೀನಿ ” ಎಂದ . “ಅಲ್ಲೋ ಇನ್ನಷ್ಟ
ಸಾಲಾ ಮಾಡಿ , ಅವಳ ಹೆಸರಲ್ಲಿ ಕುರಿ ಕೊಯ್ದು, ನೀನು ಮತ್ತು ನಿಮ್ಮ ಸಂಸಾರಾ ಕುರಿ ತಿಂದರ ದ್ಯಾಮವ್ವ ಮಳಿ ಹ್ಯಾಂಗ್
ನಿಲ್ಲಸತಾಳು ? ” ಎಂದೆ . ” ನಿಮ್ಮಂತ ಓದಿದವರಿಗೆ ಇದೆಲ್ಲ ಗೊತ್ತಾಗುದಿಲ್ಲ ಬಿಡಪ್ಪಾ ” ಎಂದು ಮಾತು ಮುಂದುವರಿಸದೆ
ಹಾಗೆಯೆ ಹೋಗಿಯೇ ಬಿಟ್ಟ . ನನಗಂತೂ ಗೊತ್ತಾಗಲಿಲ್ಲ ಅದು ‘ ದ್ಯಾಮವ್ವನ ತಪ್ಪೋ , ಕಲ್ಲೇಶಿಯ ತಪ್ಪೋ ಅಥವಾ ನನ್ನ
ತಪ್ಪೋ ‘ಎಂದು .
ಹೋಗಲಿ ಬಿಡಿ ಹಾಗೆಯೆ ಹರಟುತ್ತ ಹೋದರೆ ಇದು ಮುಗಿಯುವ ವಿಷಯವಲ್ಲ . ಇದಂತು ನಿಜ , ಇಂಥ ಜನರು , ಇಂಥ ನಂಬಿಕೆ
ನಮ್ನ ದೇಶಕ್ಕೆ ಅಥವಾ ಧರ್ಮಕ್ಕೆ ಮಾತ್ರ ಸೀಮಿತವಲ್ಲ . ಎಲ್ಲ ದೇಶಗಳಲ್ಲೂ , ಪಂಗಡಗಳಲ್ಲೂ ಇದು ಇರುವುದು ಕಟು ಸತ್ಯ .
ಆದರೆ ಪದ್ಧತಿ ಬೇರೆ ಇರಬಹುದು .
” ಸಂಕಟ ಬಂದಾಗ ವೆಂಕಟರಮಣ ” ಅಂತ ಅನ್ನುವದಕ್ಕಿಂತಲೂ –
” ಸಂಕಟ ಬಂದಾಗ ಧೈರ್ಯವೇ ಭೂಷಣ ” ಅಂತ ತಿಳಿದರೆ ಎಷ್ಟೊಂದು ಚನ್ನಾಗಿರುತ್ತಲ್ಲವೆ ?
ಇನ್ನು, ರಾತ್ರಿಯೆಲ್ಲಾ ಪುರಾಣವನ್ನು ಹೇಳಿ ಬೆಳಿಗ್ಗೆ ಬದನೇಕಾಯಿ ತಿನ್ನದೇ ಇರಲಿಕ್ಕೆ ಸಾಧ್ಯವೇ ? ಇದಕ್ಕೆ ನಾನೇನು
ಹೊರತಾಗಿಲ್ಲ . ನಾನೂ ಹತ್ತು ಹಲುವಾರು ಹರಕೆಗಳನ್ನು ಹೊತ್ತಿರುವೆ, ಆದರೆ ಇನ್ನೂ ತೀರಿಸಲು ಆಗಿಲ್ಲ . ನೀವೂ ಏನಾದರು
ಹರಕೆಗಳನ್ನು ಹೊತ್ತಿದ್ದರೆ , ನಿಮ್ನ ಅಭ್ಯಂತರವಿಲ್ಲದಿದ್ದರೆ ನನಗೂ ಸ್ವಲ್ಪ ತಿಳಿಸಿಬಿಡಿ . ನಿಮ್ಮ ಹರಕೆಗಳನ್ನು ನನ್ನಂತೆ ಇನ್ನೂ
ಪೂರೈಸದಿರಲು ಸಾಧ್ಯವಾಗಿಲ್ಲದಿದ್ದರೂ ಪರವಾಗಿಲ್ಲ , ನೀವೇನು ಚಿಂತಿಸದಿರಿ . ಏಕೆಂದರೆ – ಹರಕೆ ತೀರಿಸಲು ಹತ್ತು ವರುಷ
ಇರುತ್ತದೆ ಅಂತ, ನಮ್ಮ ಅಜ್ಜಿ ಹೇಳುತ್ತಿದ್ದಳು .

-ಡಾ . ಶಿವಶಂಕರ ಮೇಟಿ