‘ಕೃಷ್ಣ’ ಕವನ ಮತ್ತು ಒಂದೆರಡು ನಗೆ ಹನಿ

ಡಾ. ನಂದ ಕುಮಾರ್ ಯುಕೆಯಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರಿಗೆ ಚಿರಪರಿಚಿತರು. ಕಳೆದ ಹಲವಾರು ದಶಕಗಳಿಂದ ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ನಿರ್ದೇಶಕರಾಗಿ, ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ, ವಿಶೇಷವಾಗಿ ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಭಾಷೆಯ ಪ್ರೇಮಿಯಾಗಿ, ಪ್ರತಿನಿಧಿಯಾಗಿ ನಮಗೆ ಪರಿಚಿತರಾಗಿದ್ದಾರೆ. ಅವರು ಮೂಲದಲ್ಲಿ ಸಂಸ್ಕೃತ ವಿದ್ವಾಂಸರೂ ಹೌದು. ಅವರು ಹಲವಾರು ಕನ್ನಡ ಕವನಗಳನ್ನು ರಚಿಸಿದ್ದು ಇಂಡಿಯಾ ವರ್ಸಸ್ ಇಂಗ್ಲೆಂಡ್ ಎಂಬ ಕನ್ನಡ ಚಲನಚಿತ್ರದಲ್ಲಿ ಅವರ ಒಂದು ಪದ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಅವರು ಯುಕೆ ಕನ್ನಡ ಬಳಗದ ಮುಖ್ಯ ಅತಿಥಿಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇಂದು ಅವರ ‘ಕೃಷ್ಣಾ’ ಎಂಬ ಕವನವನ್ನು ಇಲ್ಲಿ ಪ್ರಕಟಿಸಲಾಗಿದೆ. ಇದ್ದೂ ಇರದ, ಕಂಡೂ ಕಾಣದ, ಮೌನದಲ್ಲೂ ಕಿವಿಗೆ ತಟ್ಟುವ, ಕಲ್ಪನೆ ಮತ್ತು ವಾಸ್ತವ ಲೋಕದಲ್ಲಿ ಹರಿದಾಡುವ, ಅಧ್ಯಾತ್ಮ ಮತ್ತು ಲೌಕಿಕ ಆಲೋಚನೆಗಳ ನಡುವೆ ಸುಳಿದಾಡುವ ಮಾಯಾವಿ ಕೃಷ್ಣ ಮತ್ತು ಅವನ ವ್ಯಕ್ತಿತ್ವದ ಬೆರಗನ್ನು, ಮೆರುಗನ್ನು ಅಂದವಾದ ಪದಗಳಿಂದ ಅಲಂಕರಿಸಿ ಈ ಕವನವನ್ನು ರಚಿಸಿದ್ದಾರೆ.  ಅವರ ಈ ‘ಕೃಷ್ಣ’ ಎಂಬ ಚೆಂದದ ಕವನವನ್ನು ಅನಿವಾಸಿಯಲ್ಲಿ ಪ್ರಕಟಿಸುತ್ತಾ ಡಾ.ನಂದಕುಮಾರ್ ಅವರನ್ನು ಸ್ವಾಗತಿಸೋಣ.

ಭಾರತದಲ್ಲಿ ವೈದ್ಯಕೀಯ ವೃತ್ತಿ ಶಿಕ್ಷಣ ಪಡೆದ ವೈದ್ಯರು ಮೊಟ್ಟ ಮೊದಲಿಗೆ ಯುಕೆಗೆ ಕೆಲಸ ಮಾಡಲು ಬಂದಾಗ ಇಲ್ಲಿಯ ವ್ಯವಸ್ಥೆ, ಸಿಬ್ಬಂದಿಗಳು, ರೋಗಿಗಳು, ವೈದ್ಯರು ಇವರ ಒಡನಾಟ, ಸಾಮಾಜಿಕ ವಿಭಿನ್ನತೆಗಳು  ಹಲವಾರು ಸೋಜಿಗಗಳನ್ನು, ಲಘು ಘಳಿಗೆಗಳನ್ನು, ತಿಳಿ ಹಾಸ್ಯ ಪ್ರಸಂಗಗಳನ್ನು ಒದಗಿಸುತ್ತದೆ. ಇಂಥ ಸನ್ನಿವೇಶದಲ್ಲಿ ಬಹುಪಾಲು ವೈದ್ಯರು ಜೋರಾಗಿ ನಕ್ಕು ಅಲ್ಲೇ ಮರೆತರೆ, ಡಾ ಉಮೇಶರಂತಹ ಕೂತುಹಲ ಮತ್ತು ಹಾಸ್ಯ ಪ್ರಜ್ಞೆ ಉಳ್ಳ ವೈದ್ಯರು, ಈ ಪ್ರಸಂಗಗಳನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ದಾಖಲಿಸಿ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಉಮೇಶ್ ಅವರಿಂದ ಮತ್ತೊಮ್ಮೆ ನಗೆಹನಿಗಳು. ಬನ್ನಿ ಆಸ್ವಾದಿಸೋಣ.  
  -ಸಂಪಾದಕ
ಫೋಟೋ ಕೃಪೆ ಗೂಗಲ್
ಕೃಷ್ಣಾ : ಕವನ – ಡಾ.ಮತ್ತೂರ್ ನಂದಕುಮಾರ್ ಅವರ ರಚನೆ


ಜ್ಞಾನಕ್ಕೆ ಮೊಗವುಂಟೆ?
ಮೌನಕ್ಕೆ ನಗೆಯುಂಟೆ?
ಎಲ್ಲ ಮಾಡಿಯೂ ಏನು ಮಾಡದವರುಂಟೆ?
ಮೈಯಲ್ಲ ರೋಮಾಂಚ 
ಎಲ್ಲೆಲ್ಲೂ ಮಧುಮಾಸ
ಕಂಡ ಕಂಡರಿಗೆಲ್ಲ ಕಂಡರಿವನಂತೆ 

ಪ್ರೇಮದಲಿ ಜ್ಞಾನವನು 
ಪೋಣಿಸಿದ ಜಾಣನನು 
ದಿನವೂ ನೋಡಿಯೂ ನೋಡದವರಂತೆ ನಾವು!
ಯುಕ್ತಿಯಲಿ ಭಕ್ತಿಯನು 
ರಕ್ತಿಯಲಿ ವಿರಕ್ತಿಯನು 
ಮುಕ್ತಿಯನು ಕೊಡುವಾತ-ಕೃಷ್ಣ- ನೀನು

ನಿನ್ನ ನಡಿಗೆಯದೊಂದು 
ನಿನ್ನ ಮೆಲುನುಡಿಯೊಂದು 
ಮನಮನದಿ ಹರಿದಾಡಿ ತುಂಬಿತಲ್ಲೋ 
ಕೊಳಲು ಬಾರಿಸು ಎನದೆ 
ಕೇಳುತಿದೆ ಕೊಳಲ ದನಿ 
ಮತ್ತೇನು ಭವ ಮೋಹ ಕಳೆಯಿತಲ್ಲೋ

***
ಇಂಗ್ಲೆಂಡಿನ ಚಂದದ ವೈದ್ಯೆಯರು  - ಇಂಗ್ಲೆಂಡಿನ ಚಂದದ ವೈದ್ಯೆಯರು  - ಉಮೇಶ ನಾಗಲೋತಿಮಠ್ ಅವರ ನಗೆಹನಿಗಳು


ನಾನು ವೈದ್ಯನಾಗಿ ಇಂಗ್ಲೆಂಡಿಗೆ ಬಂದ ಹೊಸತು .  ಆಸ್ಪತ್ರೆಯಲ್ಲಿನ ಆಪರೇಷನ್ ಕೊಠಡಿಗೆ ಹೋಗಿದ್ದೆ . ಅಲ್ಲಿ ಒಂದು ಕಿವಿಯ ಆಪರೇಷನ್ ನಡೆದಿತ್ತು . ನಮ್ಮ ಪ್ರೊಫೆಸರ್ ಅದನ್ನು ಮಾಡುತ್ತಿದ್ದರು . 
ಅಲ್ಲಿಗೆ ಬಂದ ಇಬ್ಬರು ಲಲನೆಯರು ನನ್ನನ್ನು ಕುರಿತು “ ಇದು ಯಾವ ಆಪರೇಷನ್ ?” ಎಂದು ಕೇಳಿದರು .  ನಾನು ಅವರಿಗೆ ಅದು ಕಿವುಡುತನ ಪರಿಹಾರಕ್ಕಾಗಿ ಮಾಡುವ ಆಪರೇಷನ್ ಎಂದು ಹೇಳಿದೆ . 
ಅವರಿಬ್ಬರೂ ಬಹಳ ಅಂದವಾಗಿ ಮೇಕ್ ಅಪ್ ಮಾಡಿಕೊಂಡು ಒಳ್ಳೆಯ ಅಪ್ಸರೆಯರಂತೆ ಕಾಣುತ್ತಿದ್ದರು . ನಮ್ಮ ಕನ್ನಡ ಸಿನಿಮಾ ನಟಿಯರನ್ನು ನಾಚಿಸುವಂತೆ ಕಾಣುತ್ತಿದ್ದರು . ನಾನು ಮನಸ್ಸಿನಲ್ಲೇ ಅಬ್ಬಾ ಇವರು ಎಂತಹ ಸುರ ಸುಂದರಾಂಗಿ ವೈದ್ಯೆಯರು ಎಂದುಕೊಂಡೆ . 

ಆಪರೇಷನ್ ಮುಗಿದು ರೋಗಿಯನ್ನು ಮಂಚ ಸಮೇತ ವಾರ್ಡಿಗೆ ಒಯ್ದರು. ನಂತರ ಈ ಇಬ್ಬರು ಸುರ ಸುಂದರಾಂಗಿಯರು ಬಕೀಟಿನಲ್ಲಿ ಸೋಪು ನೀರು ತಂದು ನೆಲ ಒರೆಸತೊಡಗಿದರು . 😧😧. ಆಗ ನನಗೆ ಗೊತ್ತಾಗಿದ್ದು - ಇವರು ಇಲ್ಲಿನ ಆಸ್ಪತ್ರೆಯ ಆಯಾ ಎಂದು . 
ಭಾರತದ ಆಸ್ಪತ್ರೆಗಳಲ್ಲಿನ ಆಯಾ ಅವರನ್ನು ನೋಡಿದ್ದ ನನಗೆ ಇಲ್ಲಿನ ಆಯಾಗಳು ಇಷ್ಟೊಂದು ಲಲನಾಮಣಿ ಇರುತ್ತಾರೆಂದು ಗೊತ್ತಿರಲಿಲ್ಲ . 
ಮನೆಗೆ ಬಂದು ನನ್ನ ಹೆಂಡತಿಗೆ ನಗುತ್ತ ಈ ವಿಷಯ ತಿಳಿಸಿದಾಗ ಅವಳು “ ನೋಡ್ರಿ ಮತ್ತ , ನೀವು ಡಾಕ್ಟರ್ ಹೆಂಡ್ತಿ ಬಿಟ್ಟ ಬ್ಯಾರೆ ಯಾರನಾರ ಬೆನ್ನ ಹತ್ತಿದರ ನಿಮಗ ಹಿಂತಾವ ಗಂಟ ಬೀಳತಾವ , ಉಷಾರ ಇರ್ರಿ” ಎಂದು ನಗತೊಡಗಿದಳು. 
😄😄😄

 ಜಂಪರ್ ಹಾಕಿದ್ದು 

ನಾನು ಇಂಗ್ಲೆಂಡಿಗೆ ಬಂದ ಹೊಸತು ಭಾರತದಿಂದ ತಂದ ಹೊಸ ಸ್ವೆಟರ್ ಅನ್ನು ಹಾಕಿಕೊಂಡು ಕೆಲಸಕ್ಕೆ ಹೋದೆ. ಒಬ್ಬ ಸಹೋದ್ಯೋಗಿ ನನಗೆ “ ಒಹ್ ನಿ ಹಾಕಿಕೊಂಡಿರುವ ಜಂಪರ್ ಬಹಳ ಚನ್ನಾಗಿ ಕಾಣುತ್ತಿದೆ “ ಎಂದ. 
ನನಗೋ ಗಡಬಡಿ . ಏಕೆಂದರೆ ಭಾರತದಲ್ಲಿ ಜಂಪರ್ ಎಂದರೆ ಹೆಂಗಸರು ತೊಡುವ ಅಂಗಿ . 
ನನಗೆ ನನ್ನ ಬಾಸ್ ಸಹಿತ “ಈ ಜಂಪರ್ ನಿನಗೆ ಚನ್ನಾಗಿ ಕಾಣುತ್ತಿದೆ ” ಎಂದ . 
ನಂತರ ಗೊತ್ತಾಗಿದ್ದು “ ಜಂಪರ್ ಎಂದರೆ ಸ್ವೆಟರ್ ಅಂತಹ ಅಂಗಿ “ಎಂದು . 
ಭಾರತದಲ್ಲಿ ನೀವು ಯಾರಾದರು ಗಂಡಸರಿಗೆ ನೀವು ಜಂಪರ್ ಹಾಕುತ್ತೀರಾ ಎಂದು ಕೇಳಿ ನೋಡಿ 😄
ಬಯ್ಯಿಸಿಕೊಳ್ಳುವುದು ಗ್ಯಾರಂಟೀ .

***