ಅಜ್ಜಿಗೆ ಮೊಮ್ಮಗಳ ಪ್ರಶ್ನೆ. ನೆನಪಿನಾಳಕ್ಕೆ ಸೆಳೆಯಿತು ವತ್ಸಲಾ ಅವರನ್ನು ತಮ್ಮ ಪೂರ್ವಜರ ಪೇಶ್ವೆಯರ ಕಾಲಕ್ಕೆ. ಅವರ ’ನಮ್ಮೂರ ಕಥೆ’ಯನ್ನು ಓದಿ.
ಅಜ್ಜಿ ನೀನು ಎಲ್ಲಿಂದ ಬಂದೆ?
ಹೀಗೆ ಕೇಳೀದವಳು ನನ್ನ ಮುದ್ದು ಮೊಮ್ಮಗಳು ಅನಿತಾ. ಅವಳಿಗೆ ಈಗ ಎಲ್ಲ ವಿಚಾರಗಳಲ್ಲೂ ವಿಪರೀತ ಕುತೂಹಲ. ಪ್ರಶ್ನೆಗಳ ಸರಮಾಲೆಯನ್ನೇ ಪೋಣಿಸುತ್ತಾಳೆ. ”ಅಯ್ಯ! ನಾನು ಕನ್ನಂಬಾಡಿ ಅನ್ನು ಹಳ್ಳಿಯಿಂದ ಬಂದೆ. ನಿನಗ್ಯಾಕೆ ಅದೆಲ್ಲ? ನಮ್ಮ ಹಿಂದಿನವರು ನಳದುರ್ಗದಿಂದ ಬಂದರು,” ಅಂತ ಹೇಳಿಅವಳ ಕುತೂಹಲಕ್ಕೆ ತಣ್ಣೀರು ಎರಚಿದೆ. ಆಹಾ! ಒಳ್ಳೆ ಅಜ್ಜಿ ನಾನು! Typical ಹಿರಿಯಳು. ಮಕ್ಕಳು ಪ್ರಶ್ನೆ ಕೇಳಬಾರದು ಅಲ್ವೇ? ಅದು ನಮ್ಮ ಜನಾಂಗದ ಅಭಿಪ್ರಾಯ. ಆದರೆ ಅನಿತಾ ತುಂಬಾ ಚೂಟಿ: ” ಅಜ್ಜಿ ನೀನು ಎಲ್ಲ ವಿಚಾರ ಸರಿಯಾಗಿ ಹೇಳಿದರೆ ಕನ್ನಡ ಕಲಿಯುತ್ತೇನೆ!” ಅಂದಳು. ಸರಿ ಮತ್ತೆ, ಈ ಅಜ್ಜಿಗೆ ಮೈಸೂರುಪಾಕು ಸಿಕ್ಕಿದ್ದಷ್ಟೇ ಖುಷಿ. ಹಾಗಾದರೆ ಗಲಾಟೆ ಮಾಡದೆ ಕೇಳು ಅಂತ ಹೇಳಿದೆ. ಅವಳು ಚಕ್ಕಳ ಮುಕ್ಕಳ ಹಾಕಿಕೊಂಡು ಕುಳಿತಳು.

ನಮ್ಮ ಮನೆಯವರು ”ನಳದುರ್ಗ” ಎಂಬ ಹಳ್ಳಿಯಿಂದ ಬಂದವರು. ಅದು ಹಿಂದಿನ ಕಾಲದಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಪರಿಸರದಲ್ಲಿದೆ. ನಮ್ಮ ಮನೆತನದವರು ಪೇಶ್ವೆಗಳ ಹತ್ತಿರ ಸೈನಿಕರಾಗಿದ್ದರಂತೆ. ಆಂಗ್ಲರು ಮತ್ತು ಮರಾಠರ ಮಧ್ಯೆ ಯುದ್ಧ ನಡೆದಾಗ ನಮ್ಮವರು ಮರಾಠಿಗರ ಕಡೆ ಹೋರಾಡಿದರಂತೆ. ಅವರ ಸೈನ್ಯ ಸೋತು, ನಮ್ಮವರೆಲ್ಲ ಯುದ್ಧದಲ್ಲಿ ತೀರಿಕೊಂಡರಂತೆ. ವಂಶವೇ ನಾಶವಾಯಿತಂತೆ. ದೇವರ ದಯೆಯಿಂದ ಒಬ್ಬೊಂಟಿಗ ಬಸಿರಿ ಹೆಂಗಸು ಉಳಿದಳು. ಅವಳ ಮೇಲೆ ಕನಿಕರ ಪಟ್ಟು ಒಬ್ಬ ಆಂಗ್ಲ ಸೈನ್ಯಾಧಿಕಾರಿ ”ಅಮ್ಮ ನಿನಗೆ ಯಾರು ದಿಕ್ಕು? ಒಬ್ಬೊಂಟಿಗ ಹೆಂಗಸು ಎಲ್ಲಿಗೆ ಹೋಗುತ್ತಿ?” ಅಂದನಂತೆ. ಆ ಬಡಪಾಯಿ ಹೆದರಿ, ನಗುತ್ತಾ, ”ನನಗೆ ಯಾರೂ ಗತಿಯಿಲ್ಲ. ಗರಗೇಶ್ವರಿಂತ ಒಂದು ಸಣ್ಣ ಊರು ಮೈಸೂರಿನ ಹತ್ತಿರ ಇದೆ. ಅಲ್ಲಿ ದೂರದ ನೆಂಟರಿದ್ದಾರೆ,” ಅಂದಳು. ಆ ಮಹಾನುಭಾವ ಈಕೆಯನ್ನು ಕುದುರೆ ಗಾಡಿಯಲ್ಲಿ ಕೂಡಿಸಿ 50 ಚಿನ್ನದ ನಾಣ್ಯಗಳನ್ನು ಕೊಟ್ಟನಂತೆ. ಆಗ ಗರಿಗೇಶ್ವರಿಗೆ ಬಂದು ಭೂಮಿ ಕೊಂಡು ಜೀವನ ನಡೆಸಿದಳಂತೆ. ಅವಳ ಮಗನೇ ನಮ್ಮ ತಾತ. ”ಅಜ್ಜಿ, ಅಜ್ಜಿ, ನಿಮ್ಮ ತಾತ ಎಲ್ಲಿದ್ದಾನೆ?” ಎಂದು ಮಧ್ಯ ಬಾಯಿ ಹಾಕಿದಳು ಅನಿತಾ. ”ನಾನೇ ಅಜ್ಜಿ; ನನಗೆ ತಾತ ಎಲ್ಲಿರುತ್ತಾರೆ, ಹೋಗಿ ದಡ್ಡಿ!” ಅಂತ ಜೋರಾಗಿ ಹೇಳಿದೆ. ”ಹೋಗಲಿ ಬಿಡು ಅಜ್ಜಿ, ಆಮೇಲೆ ಹೇಳು. ನೀನು ಹುಟ್ಟಿದೂರು ಯಾವುದಂತೆ?” ಅಯ್ಯೋ, ಭಗವಂತನೇ! ಈಕೆ ಜಿಗಣಿ ಹಿಡಿದಂತೆ ಹಿಡಿದಿದ್ದಾಳೆ. ಏನು ಮಾಡಲಿ? ನಾನು ಮುಂದೆ ಹೇಳಿದೆ: ”ಹಾಗಾದರೆ ಕೇಳೆ ಹುಡಿಗಿ! ನಮ್ಮ ತಾತ ಗರಿಗೇಶವರಿ ಹಳ್ಳಿಯಿಂದ ಮೈಸೂರಿಗೆ ಬಂದು ನೆಲಸಿದರು. ಅಲ್ಲಿಂದ ನಮ್ಮ ವಂಶದವರು ಕನ್ನಡಿಗರಾದರು. ಸುಮ್ಮಾರು 75 ವರ್ಷಗಳ ಹಿಂದೆ ನಮ್ಮ ತಂದೆಯವರು ಎಂಜಿನಿಯರ ಆಗಿದ್ದರು. ಅವರು ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕೆಳಗೆ ಜೂನಿಯರ ಆಗಿದ್ದರು. ಕನ್ನಂಬಾಡಿಯಲ್ಲಿ ಆಣೆಕಟ್ಟು ಕಟ್ಟಲು ಸಹಾಯ ಮಾಡಿದರು.” ”ಅಜ್ಜಿ, ಕನ್ನಂಬಾಡಿ ಅಂದರೆ ಯಾವ ಊರು? ಊರಿನ ಮಹಾತ್ಮೆ ಏನು?” ಮತ್ತೆ ಅನಿತಾಳ ಪ್ರಶ್ನೆ. ಅವಳ ಕುತೂಹಲಕ್ಕೆ ಕೊನೆಯಿಲ್ಲ! ”ಎಲೈ, ಮುದ್ದು ಮಗಳೇ, ಕೇಳುವಂತವಳಾಗು!”

ಸುಮಾರು 12ನೆಯ ಶತಮಾನದಲ್ಲಿ ಅಲ್ಲಿ ಅತ್ಯಂತ ಸುಂದರವಾದ ವೇಣುಗೋಪಾಲನ ದೇವಸ್ಥಾನ ಇತ್ತು. ಪಕ್ಕದಲ್ಲೇ ಊರಿನ ದೇವರ ”ಕಾಳಮ್ಮ”ನ ಗುಡಿ. ಅದು ಬಹಳ ಫಲವತ್ತಾದ ಭೂಮಿ. ತಾಯಿ ಕಾವೇರಿ ನದಿಯು ತುಂಬಿ ರಭಸವಾಗಿ ಹರಿಯುತ್ತಿದ್ದಳು. ಅದು ಶ್ರೀಮಾನ್ ಕೃಷ್ಣರಾಜ ವಡೆಯರು ಆಳುತ್ತಿದ್ದ ಕಾಲ. 1924ರಲ್ಲಿ ಮೈಸೂರಿನ ಮಹಾರಾಜರು ಆ ನದಿಯ ರಭಸಕ್ಕೆ ತಡೆಹಾಕಿ ಆ ನೀರನ್ನು ಬೆಳೆ ಬೆಳೆಯಲು ಉಪಯೂಗಿಸುವ ಯೋಜನೆ ಹಾಕಿದರು. ಆಗ ಎಂ ವಿ (ಮೋಕ್ಷಗುಂಡಂ ವಿಶ್ವೇಶ್ವರಯ್ಯ) ಚೀಫ್ ಇಂಜನಿಯರ ಆಗಿದ್ದರು. ಅವರು ಮಹಾ ಮೇಧಾವಿ. ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ, ಈ ಮೂರು ನದಿಗಳು ಒಂದಾಗುವ ಸ್ಥಳದಲ್ಲಿ ಆಣೆಕಟ್ಟು ಹಾಕಲು ನಿರ್ಧರಿಸಿದರು. 1930ರಲ್ಲಿ ಕಟ್ಟಲು ಶುರುಮಾಡಿದ ಅದ್ಭುತವಾದ ಆಣೆಕಟ್ಟು 1932ರಲ್ಲಿ ಮುಗಿಯಿತು. ಆಣೆಕಟ್ಟಿನ ಗೋಡೆ 2621ಮೀಟರ ಉದ್ದ ಮತ್ತು 39ಮೀಟರ ಎತ್ತರಕ್ಕಿದೆ. ನೀರು ಉಮಾರು 80 ಅಡಿ ಎತ್ತರಕ್ಕೆ ನಿಲ್ಲುತ್ತದೆ. ಜಲಾಶಯದ ವಿಸ್ತಾರ 130 ಚದುರ ಕಿ.ಮೀ.ಗಳಷ್ಟು. 1930ರ ದಶಕದಲ್ಲಿ ಏಷ್ಯ ಖಂಡದಲ್ಲೇ ಅತ್ಯಂತ ದೊಡ್ಡದಾದ ಆಣೆಕಟ್ಟು KRS (ಕೃಷ್ಣರಾಜ ಸಾಗರ) ಆಗಿತ್ತು. ಅದು ಮೇಧಾವಿ ಎಂ ವಿ ಮತ್ತು ಕೃಷ್ಣರಾಜ ವಡೆಯರುಗಳು ಮೈಸೂರು ದೇಶಕ್ಕೆ ಕೊಟ್ಟ ಉಡುಗರೆ ಎನ್ನುತ್ತಾರೆ. ಕಾವೇರಿಯ ನೀರಿನಿಂದ ರೈತರು ಉದ್ಧಾರವಾದರು. ಅಕ್ಕಿ, ತರಕಾರಿ, ಕುಡಿಯುವ ನೀರು ದೊರಕಿತು. ಎಂಥ

ಮಹತ್ ಕಾರ್ಯ! ”ಅಜ್ಜಿ, ಅಲ್ಲಿ ಬೃಂದಾವನ ಅಂತ ತೋಟ ಇದೆ ಅಲ್ವಾ? ಅದು ಹೇಗೆ ಬಂತು?” ಅನಿತಾನ ಮುಂದಿನ ಪ್ರಶ್ನೆ! ”ಅಮ್ಮ, ಅನಿತಾ ದೇವಿ, ಮಲಗು. ಹೊತ್ತಾಯಿತು. ನಿಮ್ಮಪ್ಪ ಬೈತಾನೆ,” ಅಂತ ಹೇಳಿದೆ. ಈಗಿನ ಕಾಲದಲ್ಲಿ ತಂದೆ ತಾಯಿ ತುಂಬಾ ನಿಯತ್ತು, ನಿಯಮ ಅಲ್ವೆ? ಅವರ ಪ್ರಕಾರವೇ ನಾವೂ ನಡೆದುಕೊಳ್ಳ ಬೇಕು. ಅದಕ್ಕೆ ಅನಿತಾ ಅಜ್ಜಿ, ದೀಪ ಆರಿಸಿ ಬಿಡು, ಆದರೆ ಕತೆ ಹೇಲು, ಅನ್ನಬೇಕೆ ಆ ಕಿಲಾಡಿ? ನಾನು ಮುಂದುವರೆಸಿದೆ: ”ಸರಿ, ಇಸ್ಮಾಯಿಲ್ ಮಿರ್ಝಾ ಸಾಹೇಬರು ಶಾಲಿಮಾರ ಗಾರ್ಡನ್ಸ್ ತರಹ ಕೃಷ್ಣರಾಜ ಸಾಗರದಲ್ಲಿ ಬೃಂದಾವನದ ತೋಟಕ್ಕೆ ತಳಪಾಯ ಹಾಕಿದರು. ಈಗ ತೋಟ 60 ಎಕರೆ ಇದೆ. ನಾನಾ ತರಹದ ಹಣ್ಣುಗಳು, ಸುಗಂಧಭರಿತವಾದ ಪುಷ್ಪಗಳು, ತರಕಾರಿಗಳು ಬೆಳೆಯುತ್ತಾರೆ. ಆ ತೋಟದಲ್ಲಿದ್ದರೆ ವನರಾಶಿಯ ವೈಭವಕ್ಕೆ ಎಣೆಯೇ ಇಲ್ಲ ಎಂದೆನಿಸುತ್ತದೆ.”

”ಅಜ್ಜಿ, ವೇಣುಗೋಪಾಲನ ದೇವಸ್ಥಾನ ಏನಾಯ್ತು?” ಅನಿತಾಳ ಪ್ರಶ್ನೆ ನಾನು ಮುಗಿಸುವದರಲ್ಲೇ. ”ದೇವಸ್ಥಾನ ನೀರಿನಲ್ಲಿ ಮುಳುಗೇ ಹೋಯ್ತು! ಈಗ ಬೇರೆ ದೇವಸ್ಥಾನ ಕಟ್ಟಿದ್ದಾರೆ, ಅಲ್ಲಿ. ಈಗ ಸಂಗೀತ ಹಾಡುವ ನೀರಿನ ಕಾರಂಜಿಗಳಿವೆ.” ”ಅಜ್ಜಿ, ನೀನು ಹುಟ್ಟಿದ್ದು ಅಲ್ಲೇನಾ? ನನ್ನ ಯಾವಾಗ ಅಲ್ಲಿ ಕರಕೊಂಡು ಹೋಗ್ತಿ?” ”ಈಗ ನಿದ್ರಾದೇವಿಯನ್ನು ಸ್ವಾಗತಿಸಿ ಸುಖವಾಗಿ ಮಲಗು, ಮಗಳೇ. ನಿಮ್ಮಜ್ಜಿ ಹುಟ್ಟಿದ ಊರಿಗೆ ಶಾಲೆಯ ರಜದಲ್ಲಿ ಹೋಗೋಣ. ನಿಮ್ಮಜ್ಜಿ ಸುಂದರ ರಮಣೀಯವಾದ ಸ್ಥಳ ಬಿಟ್ಟು ಈ ಚಳಿ ದೇಶದಲ್ಲಿ ಗಡ ಗಡ ನಡುಗುತ್ತಿದ್ದಾಳೆ! ಮಲಗು ಕಂದ.” ”ಕನ್ನಡ ಕಲಿ ಶಾಲೆಗೆ ಹೋಗುತ್ತೀನಿ, ಅಜ್ಜಿ!” ಅಂತ ಹೇಳಿ ಅನಿತಾ ಕನಸಿನ ಲೋಕಕ್ಕೆ ತೆರಳಿದಳು.
(ಇದು ನಿಜವಾಗಿ ನಡೆದ ಘಟನೆ)
-ಡಾ. ವತ್ಸಲಾ ರಾಮಮೂರ್ತಿ